Tag: Maina

  • ʻಮೈನಾʼ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಚಿತ್ರತಾರೆ ಭವ್ಯಾ

    ʻಮೈನಾʼ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಚಿತ್ರತಾರೆ ಭವ್ಯಾ

    ದಯ ಟಿವಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ʻಮೈನಾʼ (Maina) ಧಾರಾವಾಹಿಯಲ್ಲಿ (Serial) 90ರ ದಶಕದ ಬಹುಬೇಡಿಕೆಯ ನಾಯಕಿ, ಚಿತ್ರತಾರೆ ಭವ್ಯಾ (Bhavya) ನಟಿಸುತ್ತಿದ್ದಾರೆ. ಪ್ರೇಮಪರ್ವ, ಪ್ರಳಯಾಂತಕ, ನೀ ಬರೆದ ಕಾದಂಬರಿ, ಕೃಷ್ಣ ನೀ ಬೇಗನೆ ಬಾರೋ, ಕರುಣಾಮಯಿ, ಹೃದಯಗೀತೆ, ಮತ್ತೆ ಹಾಡಿತು ಕೋಗಿಲೆ, ಹೃದಯ ಹಾಡಿತು‌, ಸಾಂಗ್ಲಿಯಾನ ಇತ್ಯಾದಿ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ವಿಷ್ಣುವರ್ಧನ್‌, ಶಂಕರನಾಗ್‌, ಅಂಬರೀಶ್‌, ರವಿಚಂದ್ರನ್ ಮತ್ತಿತರ ದಿಗ್ಗಜ ಕಲಾವಿದರ ಜೊತೆ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಭವ್ಯಾ, ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಇದೇ ಮೊದಲು.

    ಭವ್ಯಾ ಅವರದು ʻಮೈನಾʼ ಧಾರಾವಾಹಿಯಲ್ಲಿ ಮಹಿಳಾ ಹಾಸ್ಟೆಲ್‌ ಮುಖ್ಯಸ್ಥೆ ಅರುಂಧತಿಯ ಪಾತ್ರ. ಕಟ್ಟುನಿಟ್ಟಾದರೂ ತಾಯಿ ಹೃದಯಿ. ಊರು ಬಿಟ್ಟು ಪರವೂರಿಗೆ ಬಂದಿರುವ ಹೆಣ್ಣುಮಕ್ಕಳೇ ಹೆಚ್ಚಿರುವ ಜಾಗದಲ್ಲಿ ಎಲ್ಲರನ್ನೂ ನಿಯಂತ್ರಿಸುತ್ತ ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತ ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಅಪರೂಪದ ಪಾತ್ರ. ಮೈನಾ ಜೀವನದಲ್ಲಿ ಹಠಾತ್ತನೆ ಬರುವ ಅನಿರೀಕ್ಷಿತ ತಿರುವು ಕಂಗೆಡಿಸಿದಾಗ ಅವಳಿಗೆ ಆಸರೆಯಾಗಿ ನಿಲ್ಲುತ್ತಾಳೆ ಅರುಂಧತಿ. ಹಾಗೆಯೇ ಇವರ ಮಹಿಳಾ ಹಾಸ್ಟೆಲ್‌ನಲ್ಲಿರುವ ಇತರ ನಾಲ್ಕು ಹೆಣ್ಣುಮಕ್ಕಳೂ ʻಮೈನಾʼ ಧಾರಾವಾಹಿಯ ಮಹತ್ವದ ಪಾತ್ರಗಳಾಗಿ ಬರುತ್ತಾರೆ.

     

    ಮಹಿಳಾ ಹಾಸ್ಟೆಲ್‌ ಈ ಧಾರಾವಾಹಿಯಲ್ಲಿ ಒಂದು ಬಹುಮುಖ್ಯ ಅಂಗವೇ ಆಗಿದೆ.  ʻಮೈನಾʼ ಧಾರಾವಾಹಿ ಪ್ರತಿದಿನ(ಸೋಮವಾರದಿಂದ ಭಾನುವಾರ) ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

  • ಕಿರುತೆರೆ ಲೋಕದಲ್ಲಿ ಮತ್ತೊಂದು ಹೊಸ ಧಾರಾವಾಹಿ: ಕಿರಿಮಗಳ ಹಿರಿ ಜವಾಬ್ದಾರಿ ಕಥೆ ಮೈನಾ

    ಕಿರುತೆರೆ ಲೋಕದಲ್ಲಿ ಮತ್ತೊಂದು ಹೊಸ ಧಾರಾವಾಹಿ: ಕಿರಿಮಗಳ ಹಿರಿ ಜವಾಬ್ದಾರಿ ಕಥೆ ಮೈನಾ

    ದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ. ಹೊಸ ಧಾರಾವಾಹಿ (Serial) ʼಮೈನಾʼ (Maina) ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಫೆಬ್ರುವರಿ 19 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ʻಮೈನಾʼ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

    ಮೈಲಾರಕೋಟೆ ಮೈನಾ ಮನೆಗೆ ಕಿರಿಮಗಳು. ಊರಲ್ಲಿ ಅಲೆಮಾರಿ, ಪರರಿಗೆ ಉಪಕಾರಿ. ಚಿಕ್ಕ ಪೆಟ್ಟಿಗೆ ಅಂಗಡಿ ನಡೆಸುತ್ತಿರುವ ನೀತಿವಂತ ಅಪ್ಪ ಮುತ್ತಣ್ಣ, ಅವರಿವರ ಹೊಲದಲ್ಲಿ ಕೂಲಿ ಮಾಡಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿರುವ ಅಮ್ಮ, ಸೀತೆಯಂಥ ಅಕ್ಕ ರಾಧೆ, ಕಾಲೇಜಿಗೆ ಹೋಗುತ್ತಿರುವ ಅಣ್ಣ.. ಮೈನಾಳ ಪುಟ್ಟ ಗೂಡಲ್ಲಿ ದುಡ್ಡಿಗೆ ಕೊರತೆ; ಪ್ರೀತಿ ವಾತ್ಸಲ್ಯಕ್ಕಲ್ಲ.

    ಅಕ್ಕ ರಾಧೆಗೆ ಮದುವೆ ವಯಸ್ಸು ಮೀರುತ್ತಿದೆ; ಸಂಬಂಧ ಕೂಡಿ ಬರುತ್ತಿಲ್ಲ. ಒಂದೊಂದು ಸಲವೂ ಒಂದೊಂದು ಕಾರಣಕ್ಕೆ ಮದುವೆ ಮುರಿದುಹೋಗುತ್ತಿದೆ. ಕೆಲವೊಂದು ಸಂಬಂಧ ಮುರಿಯಲು ಮೈನಾ ನೆಪವಾಗುತ್ತಾಳೆ. ಕಟ್ಟಕಡೆಯದಾಗಿ, ಜವಾಬ್ದಾರಿ ಹೊರಬೇಕಾದ ಅಣ್ಣನೇ ಕೈ ಕೊಟ್ಟು ಹೋದಾಗ ಕಿರಿಮಗಳಾದ ಮೈನಾ ಅಕ್ಕನ ಮದುವೆಯ ಹಿರಿಯ ಜವಾಬ್ದಾರಿ ಹೊತ್ತು ಪಟ್ಟಣಕ್ಕೆ ಹೊರಡುತ್ತಾಳೆ. ಅಲ್ಲಿಂದ ಅವಳ ಪ್ರಯಾಣ ಅನೂಹ್ಯ ತಿರುವುಗಳನ್ನು ಪಡೆದುಕೊಳ್ಳುತ್ತದೆ.

    ಮೈನಾ ಪಾತ್ರದಲ್ಲಿ ಜನಪ್ರಿಯ ಕಲಾವಿದೆ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ.  ನಾಗಾಭರಣ (Nagabharana), ಅಪೂರ್ವ, ಅಂಜಲಿ, ಮಾನಸಿ ಜೋಶಿ, ಸಚಿನ್, ಸಿದ್ದಾರ್ಥ್, ಪ್ರಭಂಜನ, ಸಾಗರ್, ಹರ್ಷಾರ್ಜುನ್, ಯಶಸ್ವಿನಿ, ಆಶಾ, ಅನುಷಾ, ಕು.ತಿಶ್ಯ, ಮಾ.ಅರುಣ್, ಮಾ.ರಣವೀರ್ ಮುಂತಾದವರ ತಾರಾಗಣವಿದೆ. ಚಿತ್ರತಾರೆ ಭವ್ಯ ಅಪರೂಪದ ವಿಶಿಷ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಧಾರಾವಾಹಿಯ ನಿರ್ದೇಶಕರು ಸಂತೋಷ್ ಗೌಡ ಹಾಸನ,  ಛಾಯಾಗ್ರಹಣ ಜಗದೀಶ್ ವಾಲಿ ಹಾಗೂ ದಯಾಕರ್, ಸಂಗೀತ ಮಣಿಕಾಂತ ಕದ್ರಿ, ಸಾಹಿತ್ಯ ಕೆ. ಕಲ್ಯಾಣ್, ಸಂಕಲನ ಪ್ರಕಾಶ ಕಾರಿಂಜ ಅವರದ್ದು.

     

    ಆನಂದ್ ಆಡಿಯೋ ಕಂಪನಿಯ ಸಹಸಂಸ್ಥೆ ʻಕೋಮಲ್ ಎಂಟರ್ಪ್ರೈಸಸ್ʼ ಬ್ಯಾನರ್ ಅಡಿ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ. ಮಹಿಳೆಯರ ಆತ್ಮಬಲದ ಪ್ರತೀಕವಾಗಿ ʻಮೈನಾʼ ಮೂಡಿಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಉದಯ ಟಿವಿ ಕಾರ್ಯಕ್ರಮ ಮುಖ್ಯಸ್ಥರು. ʻಮೈನಾʼ ಧಾರಾವಾಹಿ ಫೆಬ್ರುವರಿ 19 ರಿಂದ ಪ್ರತಿದಿನ (ಸೋಮವಾರದಿಂದ ಭಾನುವಾರ) ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.