Tag: Mahishasura

  • ಮಹಿಷಾಸುರನ ಸಂಹಾರಕ್ಕೆ ಧರೆಗಿಳಿದ ದುರ್ಗೆ ಅಸುರನಿಗೆ ಒದ್ದ ಪುಣ್ಯಕ್ಷೇತ್ರ ʻವದ್ದಳ್ಳಿʼ

    ಮಹಿಷಾಸುರನ ಸಂಹಾರಕ್ಕೆ ಧರೆಗಿಳಿದ ದುರ್ಗೆ ಅಸುರನಿಗೆ ಒದ್ದ ಪುಣ್ಯಕ್ಷೇತ್ರ ʻವದ್ದಳ್ಳಿʼ

    ಹಿಷಾಸುರನ (Mahishasura) ಸಂಹಾರಕ್ಕೆ ಅವತರಿಸಿದ ದುರ್ಗಾದೇವಿ, ಅವನ ಜೊತೆ ಯುದ್ಧ ಮಾಡುತ್ತಾ ಭೂಲೋಕದ ತುಂಬೆಲ್ಲ ಅಟ್ಟಾಡಿಸುತ್ತಾಳೆ. ಹೀಗೆ ಅಟ್ಟಾಡಿಸುತ್ತಾ ರಾಕ್ಷಸನಿಗೆ ಒದ್ದು ಮಲೆನಾಡಿನ ಒಂದು ಭಾಗದಲ್ಲಿ ನೆಲೆಯೂ ಆಗುತ್ತಾಳೆ. ಮಹಿಷಾಸುರನಿಗೆ ಒದ್ದ ಆ ಜಾಗ ಇಂದಿಗೂ ʻವದ್ದಳ್ಳಿʼ ಕ್ಷೇತ್ರವೆಂದೆ ಕರೆಯಲ್ಪಡುತ್ತದೆ. ಆ ಪುಣ್ಯ ಭೂಮಿಯ ಬಗ್ಗೆ ಹಾಗೂ ದೇವಾಲಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

    ಮಹಿಷಾಸುರ ಬ್ರಹ್ಮ ದೇವನಿಂದ ವರ ಪಡೆದು ಭೂಮಿ, ಸ್ವರ್ಗ ಮತ್ತು ಪಾತಾಳಲೋಕವನ್ನು ತನ್ನ ವಶಕ್ಕೆ ಪಡೆದು ದೇವಾನು ದೇವತೆಗಳನ್ನೇ ಭಯಭೀತರಾಗುವಂತೆ ಮಾಡಿದ್ದ. ತನ್ನ ದರ್ಪದಿಂದ ಮಹಿಷಾಸುರ ಭೂಮಿಯನ್ನು ವಶಪಡಿಸಿಕೊಂಡ ನಂತರ ಭೂಮಿಯ ಸುತ್ತೆಲ್ಲಾ ಬರೀ ಕತ್ತಲೆಯೇ ಮನೆ ಮಾಡಿತ್ತು. ಆತನ ಅಟ್ಟಹಾಸವನ್ನು ತಡೆಯಲಾಗದೆ ದೇವತೆಗಳು, ಋಷಿ ಮುನಿಗಳು ಒಗ್ಗೂಡಿ ದುರ್ಗಾ ದೇವಿಯನ್ನು ಸ್ಮರಿಸಿ ಮಹಿಷಾಸುರನಿಂದ ಆಗುತ್ತಿದ್ದ ತೊಂದರೆಗಳಿಂದ ಪಾರು ಮಾಡುವಂತೆ ಬೇಡಿಕೊಳ್ಳುತ್ತಾರೆ.

    ದೇವತೆಗಳು ಹಾಗೂ ಋಷಿಗಳ ಮನವಿಗೆ ದುರ್ಗಾದೇವಿ ಒಲಿದು ಭೂಲೋಕ ಹಾಗೂ ದೇವತೆಗಳ ರಕ್ಷಣೆಗೆ ಭೂಲೋಕಕ್ಕೆ ಬಂದು ಮಹಿಷಾಸುರನ ವಿರುದ್ಧ ಯುದ್ಧ ಆರಂಭಿಸುತ್ತಾಳೆ. ಹೀಗೆ ಯುದ್ದ ಮಾಡುತ್ತಾ ಮಹಿಷಾಸುರನನ್ನು ಅಟ್ಟಾಡಿಸಿಕೊಂಡು ಬಂದು ಮಲೆನಾಡಿನ ತಪ್ಪಲಿನಲ್ಲಿ ರಾಕ್ಷಸನಿಗೆ ಒದೆಯುತ್ತಾಳೆ. ಈ ಜಾಗ ʻವದ್ದಳ್ಳಿʼ ಎಂದು ಹೆಸರಾಗುತ್ತದೆ. ಮುಂದೆ ದುರ್ಗಾಂಬಾ ದೇವಿಯನ್ನು (Varadahalli Durgamba Temple) ಭಗವಾನ್ ವ್ಯಾಸಮಹರ್ಷಿಗಳು ಇಲ್ಲಿ ಪ್ರತಿಷ್ಠಾಪಿಸುತ್ತಾರೆ. ಈ ಮಂದಿರದಲ್ಲಿ ದೇವಿಯ ವಿಗ್ರಹ ಮಹಿಷಾಸುರನಿಗೆ ಒದೆಯುವ ಭಂಗಿಯಲ್ಲಿಯೇ ಇದೆ. ದೇವಿಯ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ಕೆತ್ತಲ್ಪಟ್ಟಿದೆ. ಹಾಗಾಗಿ ಇಲ್ಲಿ ವಿಷ್ಣು ಶಕ್ತಿಯೂ ಅಡಕವಾಗಿದೆ ಎನ್ನಲಾಗುತ್ತದೆ.

    ಇಲ್ಲಿಯ ಮಣ್ಣಿನ ಕಣಕಣವೂ ದೈವೀಶಕ್ತಿಯ ಆವಿರ್ಭಾವವೇ ತುಂಬಿದೆ. ಶಕ್ತಿರೂಪಿಣಿಯಾಗಿ ಇಲ್ಲಿ ಭಕ್ತಾರ ಅನುಗ್ರಹಿಸುತ್ತಾಳೆ. ದೇವಾಲಯದ ಆವರಣ ಪ್ರವೇಶಿಸುತ್ತಿದಂತೆಯೇ ಎಡ ಭಾಗದ ಚಂದ್ರ ಸಾಲೆಯಲ್ಲಿ ಶ್ರೀಧರರ ಭಾವಚಿತ್ರವಿರುವ ಸಿಂಹಾಸನವೊಂದು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಶ್ರೀಧರರು ತಮ್ಮ ಜೀವಮಾನದಲ್ಲಿ ಹೆಚ್ಚಿನ ಪ್ರವಚನವನ್ನು ಇದೇ ಕಟ್ಟೆಯಲ್ಲಿ ಕುಳಿತು ಮಾಡಿದ್ದರಂತೆ. ಉತ್ಸವಕಟ್ಟೆ ಅಥವ ಶ್ರೀಧರ ಪ್ರವಚನ ಕಟ್ಟೆ ಎಂದೂ ಇದನ್ನು ಸ್ಥಳೀಯರು ಕರೆಯುತ್ತಾರೆ.

    ದುಷ್ಟ ರಾಕ್ಷಸ ಮಹಿಷಾಸುರನನ್ನು ದುರ್ಗಾ ದೇವಿ ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ವಿಜಯದಶಮಿಯಂದು ತನ್ನ ತ್ರಿಶೂಲದಿಂದ ಸಂಹಾರ ಮಾಡುತ್ತಾಳೆ. ಅಂದಿನಿಂದ ದುರ್ಗಾ ದೇವಿಯನ್ನು ಈ ಸ್ಥಳದಲ್ಲಿ ಚಾಮುಂಡೇಶ್ವರಿ ಎಂದು ಪೂಜಿಸಲಾಗುತ್ತಿದೆ.

    (ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ ಇದೆ. ಈ ಸ್ಥಳಕ್ಕೆ ವದ್ದಳ್ಳಿ, ವರದಹಳ್ಳಿ ಅಥವ ವರದಪುರ ಎಂಬುದಾಗಿಯೂ ಕರೆಯುತ್ತಾರೆ.)

  • Navratri 2025 Day 6: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ಕಾತ್ಯಾಯಿನಿ ದೇವಿ

    Navratri 2025 Day 6: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ಕಾತ್ಯಾಯಿನಿ ದೇವಿ

    ವರಾತ್ರಿಯ ಆರನೇ ದಿನವನ್ನು ಕಾತ್ಯಾಯಿನಿ ದೇವಿ (Katyayani Devi) ಎಂದು ಕರೆಯಲ್ಪಡುವ ದುರ್ಗಾ ದೇವಿಯ ಉಗ್ರ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ, ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರಮರ್ಧಿನಿಯನ್ನು ಷಷ್ಠಿಯಂದು ಅಂದರೆ ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ಪೂಜಿಸಲ್ಪಡುವ ಕಾತ್ಯಾಯಿನಿ ದೇವಿ, ಮಹಿಷಾಸುರನನ್ನು ಕೊಂದವಳು, ದೇವತೆಗಳನ್ನು ರಾಕ್ಷಸರ ಸೆರೆಯಿಂದ ಬಿಡಿಸಿದವಳು. ಈಕೆ ಮಹಿಷಾಸುರ ಮರ್ಧಿನಿ, ಸುಜನರಕ್ಷಕಿ. ಈ ದಿನ ತಾಯಿಯನ್ನು ಪೂಜಿಸುವವರಿಗೆ ಆಯುರಾರೋಗ್ಯ ಭಾಗ್ಯ ಸದಾ ಇರುತ್ತದೆ ಇರುತ್ತದೆ.

    ಕಾತ್ಯಾಯಿನಿ ದೇವಿಯನ್ನು ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಈಕೆ. ಈ ತಾಯಿ ಮಹಿಷಾಸುರನನ್ನು ಕೊಂದಳು, ನಂತರ ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಂದಳು. ಅಷ್ಟೇ ಅಲ್ಲ, ರಾಕ್ಷಸರು ಸೆರೆಯಲ್ಲಿ ಇಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಮೂಲಕ ಬಿಡುಗಡೆ ಹೊಂದಿದವು.

    ಮಹರ್ಷಿ ಕಾತ್ಯಾಯನರು ದೇವಿ ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದರು. ಪರಿಣಾಮವಾಗಿ ಅವರು ದೇವಿಯನ್ನು ತಮ್ಮ ಮಗಳಾಗಿ ಪಡೆದರು. ದೇವಿಯು ಮಹರ್ಷಿ ಕಾತ್ಯಾಯನರ ಆಶ್ರಮದಲ್ಲಿ ಜನಿಸಿದಳು. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ದೇವಿಯು ಜನಿಸುವ ಮುನ್ನ ಮಹಿಷಾಸುರನೆಂಬ (Mahishasura) ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದರು. ಅಶ್ವಿನಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು. ಇದರ ನಂತರ ಕಾತ್ಯಾಯನ ಋಷಿ ತಾಯಿಯನ್ನು ಮೂರು ದಿನಗಳ ಕಾಲ ಪೂಜಿಸಿದರು. ಇದರ ನಂತರ, ದಶಮಿಯ ದಿನದಂದು, ಮಹಿಷಾಸುರನನ್ನು ಕಾತ್ಯಾಯಿನಿ ಕೊಂದಳು. ಶುಂಭ ಮತ್ತು ನಿಶುಂಭರೂ ಸ್ವರ್ಗದ ಮೇಲೆ ದಾಳಿ ನಡೆಸಿ ಹಾಳುಮಾಡಿದ್ದರು. ಇಂದ್ರನ ಸಿಂಹಾಸನವನ್ನೂ ಸಹ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲ ನವಗ್ರಹಗಳನ್ನೂ ಒತ್ತೆಯಾಳಾಗಿರಿಸಿಕೊಂಡಿದ್ದರು. ರಾಕ್ಷಸರು ಬೆಂಕಿ ಮತ್ತು ಗಾಳಿಯ ಶಕ್ತಿಯನ್ನು ಕೂಡ ವಶಪಡಿಸಿಕೊಂಡರು. ಇದರಿಂದ ನೊಂದ ಎಲ್ಲಾ ದೇವತೆಗಳು ದೇವಿಯಿದ್ದ ಆಶ್ರಯಕ್ಕೆ ಹೋದರು ಮತ್ತು ಅವರನ್ನು ಅಸುರರ ದೌರ್ಜನ್ಯದಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದರು. ತಾಯಿ ಈ ಅಸುರರನ್ನು ಕೊಂದು ಎಲ್ಲರನ್ನೂ ಅವರ ಭಯದಿಂದ ಮುಕ್ತಗೊಳಿಸಿದಳು.

    ದುರ್ಗಾ ದೇವಿಯ ಆರನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಅಧಿದೇವತೆ, ಆಕೆಯನ್ನು ಯುದ್ಧದ ದೇವತೆ ಎಂದೂ ಕರೆಯುತ್ತಾರೆ. ತಾಯಿಯ ರೂಪವು ಚಿನ್ನದಂತೆ ಪ್ರಕಾಶಮಾನವಾಗಿದೆ ಮತ್ತು ಅತ್ಯಂತ ದೈವಿಕವಾಗಿದೆ. ತಾಯಿಗೆ ನಾಲ್ಕು ತೋಳುಗಳಿವೆ, ಆಕೆ ತನ್ನ ನಾಲ್ಕು ಕೈಗಳಲ್ಲಿ ಒಂದು ಕೈಯಲ್ಲಿ ಕಮಲದ ಹೂವನ್ನು, ಮತ್ತೊಂದರಲ್ಲಿ ಖಡ್ಗವನ್ನು ಮತ್ತು ಇನ್ನೆರೆಡು ಕೈಗಳಲ್ಲಿ ಭಕ್ತರಿಗೆ ಆಶೀರ್ವಾದವನ್ನು ಕೊಡುವ ಮುದ್ರೆಯನ್ನು ಹೊಂದಿದ್ದು, ಸಿಂಹಾಸನರೂಢಳಾಗಿದ್ದಾಳೆ. ಶಾಸ್ತ್ರಗಳ ಪ್ರಕಾರ ತಾಯಿಯನ್ನು ಸರಿಯಾಗಿ ಪೂಜಿಸಿ ಕೆಲವು ವಿಶೇಷ ಉಪಾಯಗಳನ್ನು ಮಾಡುವುದರಿಂದ ಹೆಣ್ಣು ಮಕ್ಕಳ ವಿವಾಹವು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಮತ್ತು ಸೂಕ್ತ ವರ ದೊರೆಯುತ್ತಾನೆ ಎನ್ನುವ ನಂಬಿಕೆಯಿದೆ.

    ಕಾತ್ಯಾಯಿನಿಯು ಗುರು ಗ್ರಹವನ್ನು ಆಳುತ್ತಾಳೆ. ಗುರುಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುವುದು.

    ಕಾತ್ಯಾಯಿನಿ ದೇವಿ ಕಥೆ:
    ದೇವಿಯ ಆರನೇ ರೂಪವಾದ ತಾಯಿ ಕಾತ್ಯಾಯಿನಿಯನ್ನು ಶ್ರೀ ರಾಮ ಮತ್ತು ಶ್ರೀ ಕೃಷ್ಣ ಇಬ್ಬರೂ ಪೂಜಿಸುತ್ತಿದ್ದರು. ಕಾತ್ಯಾಯಿನಿ ದೇವಿಯ ಕಥೆ ಭಾಗವತ, ಮಾರ್ಕಂಡೇಯ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖವಾಗಿದೆ. ದೇವಿ ದುರ್ಗೆಯ ಪರಮ ಭಕ್ತನಾದ ಮಹರ್ಷಿ ಕಾತ್ಯಾಯನ ದಂಪತಿಗೆ ಮಕ್ಕಳಿರಲಿಲ್ಲ. ಅವರು ದೇವಿಯನ್ನು ಕುರಿತು ತಪಸ್ಸು ಕೈಗೊಂಡಾಗ ಆಕೆ ಪ್ರತ್ಯಕ್ಷವಾಗಿ ತಾನು ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸುವುದಾಗಿ ಆಶೀರ್ವಾದ ಮಾಡಿದಳು ಎಂದು ಪುರಾಣದ ಕಥೆ ಹೇಳುತ್ತದೆ.

    ತಾಯಿ ಕಾತ್ಯಾಯಿನಿ ದೇವಿಯ ಅವತಾರದ ಉದ್ದೇಶವು ಮಹಿಷಾಸುರನನ್ನು ಸಂಹಾರ ಮಾಡುವುದಾಗಿತ್ತು. ಋಷಿಮುನಿಗಳು ಪೂಜಿಸಿದ ನಂತರ ಅವತಾರ ಎತ್ತಿದ ತಾಯಿ ಕಾತ್ಯಾಯನಿಯು ಅಶ್ವಿನಿ ಮಾಸದ ಶುಕ್ಲ ನವಮಿ ತಿಥಿಯಲ್ಲಿ ಮಹಿಷನೊಂದಿಗೆ ಯುದ್ಧ ಮಾಡಿ ಸಂಹಾರ ಮಾಡಿದಳು. ದಶಮಿ ದಿನದಂದು ದೇವಿಯು ಜೇನುತುಪ್ಪ ತುಂಬಿದ ವೀಳ್ಯದ ಎಲೆಯನ್ನು ಸೇವಿಸಿ ನಂತರ ಮಹಿಷನನ್ನು ಕೊಂದಳು ಎಂದು ಪುರಾಣದ ಕಥೆಗಳು ಹೇಳುತ್ತವೆ. ಇದಾದ ನಂತರ ತಾಯಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು.

    ಧಾರ್ಮಿಕ ಪುರಾಣಗಳ ಪ್ರಕಾರ, ಕಾತ್ಯಾಯಿನಿಯು ದೇವತೆಗಳ ಸಂಯೋಜಿತ ಶಕ್ತಿಗಳಿಂದ ಪ್ರಕಟವಾದವಳು. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯಿನಿ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು.

    ಹಿಂದೂ ಧರ್ಮದಲ್ಲಿ, ಮಹಿಷಾಸುರನು ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರಾಕ್ಷಸನಾಗಿದ್ದನು, ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕೆಟ್ಟ ಕಾರ್ಯಕ್ಕಾಗಿ ಬಳಸಿದನು. ಅವನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು ಮತ್ತು ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧವನ್ನು ‘ಕೆಟ್ಟದರ ಮೇಲೆ ಒಳ್ಳೆಯದರ ವಿಜಯ’ ಎಂದು ಗುರುತಿಸಲಾಗಿದೆ.

    ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚಕ್ರವನ್ನು, ಅಗ್ನಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಒಂದು ಗುಡುಗು, ಬ್ರಹ್ಮದೇವನು ನೀರಿನ ಕಲಶದೊಂದಿಗೆ ರುದ್ರಾಕ್ಷಿಯನ್ನು ನೀಡಿದರು. ಈ ಆಯುಧಗಳ ಸಹಾಯದಿಂದ ದೇವಿ ಕಾತ್ಯಾಯಿನಿ ಮಹಿಷಾಸುರನ ವಧೆ ಮಾಡಿದಳು ಎಂದು ಪುರಾಣ ಕಥೆಗಳು ಹೇಳುತ್ತವೆ.

  • ತಾಳ್ಮೆಯ ಕಟ್ಟೆ ಒಡೆದರೆ ಇಲ್ಲಿ ಎಲ್ಲರೂ ‘ಮಹಿಷಾಸುರ’ರೆ

    ತಾಳ್ಮೆಯ ಕಟ್ಟೆ ಒಡೆದರೆ ಇಲ್ಲಿ ಎಲ್ಲರೂ ‘ಮಹಿಷಾಸುರ’ರೆ

    ಚಿತ್ರ: ‘ಮಹಿಷಾಸುರ’.
    ನಿರ್ದೇಶಕ: ಉದಯ್ ಪ್ರಸನ್ನ.
    ನಿರ್ಮಾಪಕ: ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ ಚಂದ್ರಯ್ಯ.
    ಛಾಯಾಗ್ರಹಣ: ಕೃಷ್ಣ.
    ಸಂಗೀತ: ಸುನೀಲ್ ಕೌಶಿ, ಸಾಯಿ ಕಿರಣ್.
    ತಾರಾಬಳಗ: ಸುದರ್ಶನ್, ರಾಜ್ ಮಂಜು, ಬಿಂಧುಶ್ರೀ, ರಘು ಪಾಂಡೇಶ್, ರಾಕ್​ಲೈನ್, ಸುಧಾಕರ್, ಇತರರು.

    ‘ಮಹಿಷಾಸುರ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ನವ ನಿರ್ದೇಶಕ ಉದಯ್ ಪ್ರಸನ್ನ ನಿರ್ದೇಶನದಲ್ಲಿ ಮೂಡಿ ಬಂದ ‘ಮಹಿಷಾಸುರ’ ಚಿತ್ರ ಟೀಸರ್, ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕ ಪ್ರಭುಗಳಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

    ಸಮಾಜದಲ್ಲಿ ದುರುಳರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಜನರು ಹೇಗೆ ದಂಗೆ ಏಳುತ್ತಾರೆ ಎನ್ನುವುದು ‘ಮಹಿಷಾಸುರ’ ಚಿತ್ರದ ಒನ್​ಲೈನ್​ ಸ್ಟೋರಿ. ಇಡೀ ಸಿನಿಮಾ ಮೆಳೆಕೋಟೆ ಎಂಬ ಹಳ್ಳಿಯಲ್ಲಿ ಚಿತ್ರಣಗೊಂಡಿದ್ದು, ರಾಜಕರಣಿಗಳ ದಬ್ಬಾಳಿಕೆ, ದೌರ್ಜನ್ಯದಿಂದ ಸೋತು ಹೋದ ಇಲ್ಲಿನ ಜನರು ಯಾವ ರೀತಿ ಮೇಲ್ವರ್ಗದ ಮೇಲೆ ಸವಾರಿ ಮಾಡಿ ತಮ್ಮ ಸೇಡು ತೀರಿಸಿಕೊಳ್ಳುತ್ತಾರೆ ಎನ್ನೋದನ್ನ ನೈಜವಾಗಿ ತೆರೆ ಮೇಲೆ ತರಲಾಗಿದೆ. ದಬ್ಬಾಳಿಕೆಯನ್ನು ಜನರು ಎಷ್ಟೇ ತಾಳ್ಮೆಯಿಂದ ಸಹಿಸಿಕೊಂಡ್ರು ಸಹನೆ ಕಟ್ಟೆ ಒಡೆದಾಗ ಹೇಗೆ ಮಹಿಷಾಸುರನ ರೂಪ ತಾಳುತ್ತಾರೆ. ಇಡೀ ಹಳ್ಳಿ ಯಾವ ರೀತಿ ರಣರಂಗವಾಗಿ ಮಾರ್ಪಾಡಾಗುತ್ತೆ ಅನ್ನೋದನ್ನ ತುಂಬಾ ಪರಿಣಾಮಕಾರಿಯಾಗಿ ನಿರ್ದೇಶಕರು ಹೇಳ ಹೊರಟಿದ್ದಾರೆ.

     

    ತ್ರಿಕೋನ ಪ್ರೇಮಕಥೆಯ ಜೊತೆ ಜೊತೆಗೆ ಕಥೆಯನ್ನು ಕಟ್ಟಿಕೊಂಡು ಹೋದ ಪರಿ ಪ್ರೇಕ್ಷಕರನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಪ್ಲಸ್‌ ಪಾಯಿಂಟ್ ಕಲಾವಿದರು, ನಿರ್ದೇಶಕರು ನವ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಂಡಿರೋದ್ರಿಂದ ತೆರೆ ಮೇಲೆ ನೈಜ ಅಭಿನಯ ಕಾಣಬಹುದಾಗಿದೆ. ನಾಯಕಿ ಬಿಂಧುಶ್ರೀ ಕಾವೇರಿ ಪಾತ್ರದಲ್ಲಿ ನಟಿಸಿದ್ದು, ಮುಗ್ಧ ಹೆಣ್ಣು ಮಗಳ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ.

    ರಾಜಕರಣಿಗಳ ಪಾತ್ರದಲ್ಲಿ ರಘು ಪಾಂಡೇಶ್, ರಾಕ್​​ಲೈನ್​ ಸುಧಾಕರ್​ ಪಾತ್ರ ಗಮನ ಸೆಳೆಯುತ್ತದೆ. ನಾಯಕ ನಟರಾದ ರಾಜ್​​ ಮಂಜು ಹಾಗೂ ಸುದರ್ಶನ್ ಮೊದಲ ಸಿನಿಮಾವಾದರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಛಾಯಾಗ್ರಹಕ ಕೃಷ್ಣ ಅವರ ಕೆಲಸವನ್ನು ಇಲ್ಲಿ ಶ್ಲಾಘಿಸಲೇಬೇಕು. ನಿರ್ದೇಶಕರ ಮನದಲ್ಲಿನ ಚಿತ್ರಣವನ್ನು ಹಾಗೆಯೇ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ ಕೃಷ್ಣ. ಸುನೀಲ್ ಕೌಶಿ, ಸಾಯಿ ಕಿರಣ್ ಸಂಗೀತ ‘ಮಹಿಷಾಸುರ’ ಚಿತ್ರಕ್ಕೆ ಮೆರಗು ನೀಡಿದೆ.

    ಉದಯ್ ಪ್ರಸನ್ನ ಅವರಿಗಿದು ಮೊದಲ ಸಿನಿಮಾದರೂ ಹಲವು ವರ್ಷಗಳ ಅನುಭವ ನಿರ್ದೇಶನದಲ್ಲಿ ಇರುವುದರಿಂದ ತಮ್ಮ ನಿರ್ದೇಶನದ ಶಕ್ತಿ, ಪ್ರತಿಭೆಯನ್ನು ಈ ಸಿನಿಮಾದಲ್ಲಿ ಸಾಬೀತು ಮಾಡಿದ್ದಾರೆ. ಒಟ್ಟಾರೆಯಾಗಿ ಒಂದೊಳ್ಳೆ ಅನುಭವ, ಸಂದೇಶದ ಜೊತೆಗೆ ಪ್ರೇಕ್ಷಕರಿಗೆ ಮನೋರಂಜನೆ ನೀಡುವಲ್ಲಿ ಮಹಿಷಾಸುರ ಚಿತ್ರ ಯಶಸ್ವಿಯಾಗಿದೆ ಅಂದ್ರೆ ತಪ್ಪಾಗೋದಿಲ್ಲ.

    ರೇಟಿಂಗ್: 3.5 / 5

  • ‘ಮಹಿಷಾಸುರ’ ಜನವರಿ 8ಕ್ಕೆ ತೆರೆಗೆ- ನಿರ್ದೇಶಕನಾಗಿ ಉದಯ್ ಪ್ರಸನ್ನ ಮೊದಲ ಹೆಜ್ಜೆ

    ‘ಮಹಿಷಾಸುರ’ ಜನವರಿ 8ಕ್ಕೆ ತೆರೆಗೆ- ನಿರ್ದೇಶಕನಾಗಿ ಉದಯ್ ಪ್ರಸನ್ನ ಮೊದಲ ಹೆಜ್ಜೆ

    ‘ಮಹಿಷಾಸುರ’ ಸ್ಯಾಂಡಲ್‍ವುಡ್‍ನಲ್ಲಿ ರಿಲೀಸ್ ಗೆ ರೆಡಿಯಾಗಿ ನಿಂತಿರೋ ಸಿನಿಮಾ. ನೈಜ ಘಟನೆ ಆಧಾರಿತ ಈ ಚಿತ್ರದ ಟ್ರೈಲರ್ ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬಂದಿದ್ದು, ಜನವರಿ 8ರಂದು ಮಹಿಷಾಸುರ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ದೊಡ್ಡಬಳ್ಳಾಪುರದ ಮೆಳೆಕೋಟೆಯಲ್ಲಿ ಹಲವು ವರ್ಷಗಳ ಹಿಂದೆ ನಡೆದ ನೈಜ ಘಟನೆ ‘ಮಹಿಷಾಸುರ’ ಚಿತ್ರಕ್ಕೆ ಸ್ಪೂರ್ತಿ. ಉದಯ್ ಪ್ರಸನ್ನ ಈ ಚಿತ್ರದ ಸೂತ್ರದಾರ. ತಾವೇ ಕಥೆ ಬರೆದು ನಿರ್ದೇಶಕನಾಗಿ ಮೊದಲ ಹೆಜ್ಜೆಯನ್ನು ಚಿತ್ರರಂಗದಲ್ಲಿ ಇಟ್ಟಿದ್ದಾರೆ ಉದಯ್ ಪ್ರಸನ್ನ. ರಿಯಲ್ ಸ್ಟಾರ್ ಉಪೇಂದ್ರ, ಪ್ರೇಮ್ ಇವರ ನಿರ್ದೇಶನ ಜೀವನಕ್ಕೆ ಸ್ಪೂರ್ತಿ. ನಟನಾಗಬೇಕೆಂದು ಗಾಂಧಿ ನಗರಕ್ಕೆ ಬಂದ ಉದಯ್ ಪ್ರಸನ್ನ ಈಗ ಡೈರೆಕಟ್ಟರ್ ಕ್ಯಾಪ್ ತೊಟ್ಟಿದ್ದಾರೆ.

    ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟ ಇವರು ಸಂಜಯ್ ಕುಲಕರ್ಣಿ, ಸಲೀಂ ರಾಜು, ಹೇಮಂತ್ ಹೆಗ್ಡೆ ಸೇರಿದಂತೆ ಹಲವು ನಿರ್ದೇಶಕರ ಜೊತೆ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ತಮ್ಮ ಮೊದಲ ಕನಸಿನ ಹೆಜ್ಜೆ ‘ಮಹಿಷಾಸುರ’ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದು, ಪ್ರೇಕ್ಷಕರು ಖಂಡಿತ ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದಾರೆ.

    ಮೇಲ್ವರ್ಗದವರಿಂದ ಕೆಳವರ್ಗದವರ ಮೇಲೆ ನಡೆಯುವ ದಬ್ಬಾಳಿಕೆ ಹಾಗೂ ಸತ್ಯಾಸತ್ಯತೆ ಹೊರಬಿದ್ದಾಗ ಆಗುವ ಪರಿಣಾಮಗಳನ್ನು ಚಿತ್ರದಲ್ಲಿ ರಿಯಾಲಿಸ್ಟಿಕ್ ಆಗಿ ಕಟ್ಟಿಕೊಡಲಾಗಿದ್ದು, ಸಮಾಜಕ್ಕೆ ಒಂದು ಸೂಕ್ತ ಸಂದೇಶವನ್ನು ‘ಮಹಿಷಾಸುರ’ ಸಿನಿಮಾ ನೀಡಲಿದೆ ಎನ್ನುತ್ತಾರೆ ನಿರ್ದೇಶಕ ಉದಯ್ ಪ್ರಸನ್ನ. ರಿಯಾಲಿಸ್ಟಿಕ್ ಆಗಿ ಮೂಡಿ ಬಂದಿರೋ ಈ ಚಿತ್ರದಲ್ಲಿ ನವ ಕಲಾವಿದರೇ ಹೆಚ್ಚಾಗಿ ಅಭಿನಯಿಸಿರೋದು ವಿಶೇಷ. ಚಿತ್ರದಲ್ಲಿ ಟ್ರಯಂಗಲ್ ಲವ್ ಸ್ಟೋರಿ ಇರಲಿದ್ದು, ಸುದರ್ಶನ್, ರಾಜ್ ಮಂಜು ಇಬ್ಬರು ನಾಯಕ ನಟರಾಗಿ ನಟಿಸಿದ್ದು, ನಾಯಕಿಯಾಗಿ ಬಿಂದು ಅಭಿನಯಿಸಿದ್ದಾರೆ.

    ಚಿತ್ರಕ್ಕೆ ಸುನಿಲ್ ಕೌಶಿ, ಸಾಯಿ ಕಿರಣ್ ಸಂಗೀತ ನಿರ್ದೇಶನವಿದ್ದು, ಕೃಷ್ಣ ಅವರ ಛಾಯಾಗ್ರಹಣವಿದೆ. ಮೆಳೆಕೋಟೆ ಟೂರಿಂಗ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್ ಮತ್ತು ಪ್ರೇಮಾ ಚಂದ್ರಯ್ಯ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜನವರಿ 8ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಸಿನಿರಸಿಕರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ‘ಮಹಿಷಾಸುರ’ ಚಿತ್ರತಂಡ.

  • ನೈಜ ಘಟನೆಯಾಧಾರಿತ ಚಿತ್ರ ‘ಮಹಿಷಾಸುರ’ ಟ್ರೈಲರ್ ರಿಲೀಸ್

    ನೈಜ ಘಟನೆಯಾಧಾರಿತ ಚಿತ್ರ ‘ಮಹಿಷಾಸುರ’ ಟ್ರೈಲರ್ ರಿಲೀಸ್

    ವ ನಿರ್ದೇಶಕ ಉದಯ್ ಪ್ರಸನ್ನ ನಿರ್ದೇಶನದ ‘ಮಹಿಷಾಸುರ’ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಪಂಚಿಂಗ್ ಡೈಲಾಗ್, ಆಕ್ಷನ್ ಸೀನ್ ಗಳು ಟ್ರೈಲರ್ ಹೈಲೈಟ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ತ್ರಿಕೋನ ಪ್ರೇಮಕಥೆಯನ್ನು ಒಳಗೊಂಡಿರುವ ‘ಮಹಿಷಾಸುರ’ ಚಿತ್ರಕ್ಕೆ ನೈಜ ಘಟನೆ ಪ್ರೇರಣೆಯಾಗಿದ್ದು, ನೈಜ ಘಟನೆ ಆಧರಿಸಿಯೇ ಕಥೆ ಹೆಣೆದಿದ್ದಾರೆ ನಿರ್ದೇಶಕ ಉದಯ್ ಪ್ರಸನ್ನ.

    ನಿರ್ದೇಶಕನಾಗಿ ಸ್ಯಾಂಡಲ್‍ವುಡ್‍ನಲ್ಲಿ ಉದಯ್ ಪ್ರಸನ್ನ ಅವರ ಮೊದಲ ಹೆಜ್ಜೆ ಇದಾಗಿದ್ದು, ಹಲವು ನಿರ್ದೇಶಕರ ಜೊತೆ ಸಿನಿಮಾಗಳಲ್ಲಿ ದುಡಿದ ಅನುಭವ ಇವರ ಬೆನ್ನಿಗಿದೆ. ಚಿತ್ರದಲ್ಲಿ ಸುದರ್ಶನ್ ಹಾಗೂ ರಾಜ್ ಮಂಜು ನಾಯಕರಾಗಿ ನಟಿಸಿದ್ದು, ಬಿಂದು ನಾಯಕಿಯಾಗಿ ನಟಿಸಿದ್ದಾರೆ. ಒಂದು ಹೆಣ್ಣಿಗೋಸ್ಕರ ಸ್ನೇಹಿತರಿಬ್ಬರು ಹೇಗೆ ಅಸುರ ರೂಪ ತಾಳುತ್ತಾರೆ ಎಂಬುದನ್ನು ಹೇಳುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಹೇಳ ಹೊರಟಿದ್ದಾರೆ.

    ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಬಹುತೇಕ ಸಿನಿಮಾವನ್ನು ದೊಡ್ಡಬಳ್ಳಾಪುರ ಬಳಿಯ ಮೇಲುಕೋಟೆ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ. ಮಂಡ್ಯ, ಮೈಸೂರು, ರಾಮನಗರಗಳಲ್ಲೂ ‘ಮಹಿಷಾಸುರ’ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಚಿತ್ರಕ್ಕೆ ಸುನಿಲ್ ಕೌಶಿ ಸಂಗೀತ ನಿರ್ದೇಶನ, ಕೃಷ್ಣ ಅವರ ಛಾಯಾಗ್ರಹಣವಿದೆ. ಮೇಲುಕೋಟೆ ಟೂರಿಂಗ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್ ಮತ್ತು ಪ್ರೇಮಾ ಚಂದ್ರಯ್ಯ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಆಡಿಯೋ ಎಲ್ಲರ ಮೆಚ್ಚುಗೆ ಗಳಿಸಿತ್ತು. ಇದೀಗ ಚಿತ್ರದ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದೆ. ಜನವರಿ ಮೊದಲ ವಾರದಲ್ಲಿ ‘ಮಹಿಷಾಸುರ’ ಚಿತ್ರವನ್ನು ಪ್ರೇಕ್ಷಕರೆದುರು ತರುವ ಯೋಜನೆಯಲ್ಲಿ ಚಿತ್ರತಂಡವಿದ್ದು ಈ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ನೀಡಲಿದೆ.

  • ಮಹಿಷಾ ದಸರಾ ಆಚರಿಸಿದವರಿಗೆ 10 ಪ್ರಶ್ನೆ- ಸರಿ ಉತ್ತರ ನೀಡಿದವರಿಗೆ ನಗದು ಬಹುಮಾನ!

    ಮಹಿಷಾ ದಸರಾ ಆಚರಿಸಿದವರಿಗೆ 10 ಪ್ರಶ್ನೆ- ಸರಿ ಉತ್ತರ ನೀಡಿದವರಿಗೆ ನಗದು ಬಹುಮಾನ!

    ಬೆಂಗಳೂರು: ಮಹಿಷಾಸುರ ರಾಕ್ಷಸನಲ್ಲ, ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು ಎಂದು ಹೇಳಿ ಮಹಿಷಾ ದಸರಾ ಆಚರಣೆ ಮಾಡಿದ ಚಿಂತಕರಿಗೆ ದಸರಾವನ್ನು ಆಚರಣೆ ಮಾಡುವ ಮಂದಿ ಸಾಮಾಜಿಕ ಜಾಲತಾಣದಲ್ಲಿ ರಸಪ್ರಶ್ನೆಯನ್ನು ಕೇಳಿದ್ದಾರೆ. ಸಂಪೂರ್ಣ ನಂಬಲರ್ಹ ಐತಿಹಾಸಿಕ ದಾಖಲೆಗಳೊಂದಿಗೆ ಸರಿಯುತ್ತರ ಕೊಟ್ಟವರಿಗೆ ಮಾತ್ರ ಘೋಷಿತ 501 ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

    ಬಿಜೆಪಿಯ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ 10 ಪ್ರಶ್ನೆಗಳಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿ, ಚಾಮುಂಡಿ ದಸರಾಗೆ ಸೆಡ್ಡು ಹೊಡೆದು ಮಹಿಷಾ ದಸರಾ ಆಚರಣೆ ಮಾಡಿದ ಚಿಂತಕರಿಗೆ ದಸರಾ ಉತ್ಸವ ಆಚರಿಸುವ ಪಾಮರರು ಕೇಳಿದ ಪ್ರಶ್ನೆ ಎಂದು ಬರೆದುಕೊಂಡಿದ್ದಾರೆ.

    ಪ್ರಶ್ನೆ 1. ಮಹಿಷಾಸುರನು ಹುಟ್ಟಿದ ವರ್ಷ ಯಾವುದು?
    ಪ್ರಶ್ನೆ 2. ಮಹಿಷಾಸುರ ಪಟ್ಟಾಭಿಷೇಕ ಯಾವ ವರ್ಷದಲ್ಲಿ ನಡೆಯಿತು? ಅಂದು ಆ ಸಮಾರಂಭದಲ್ಲಿ ಯಾವ ಯಾವ ರಾಜ್ಯದ ದೊರೆಗಳು/ಪ್ರತಿನಿಧಿಗಳು ಪಾಲ್ಗೊಂಡಿದ್ದರು?
    ಪ್ರಶ್ನೆ 3. ಮಹಿಷಾಸುರನ ರಾಜ್ಯ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿತ್ತು?

    ಪ್ರಶ್ನೆ 4. ಮಹಿಷಾಸುರನ ಪತ್ನಿಯ ಹೆಸರೇನು? ಆಕೆ ಯಾರ/ಯಾವ ರಾಜನ ಮಗಳಾಗಿದ್ದಳು?
    ಪ್ರಶ್ನೆ 5. ಮಹಿಷಾಸುರನಿಗೆ ಎಷ್ಟು ಮಕ್ಕಳು? ಆ ಮಕ್ಕಳ ಹೆಸರೇನು?
    ಪ್ರಶ್ನೆ 6. ಮಹಿಷಾಸುರನ ಅರಮನೆ ಈಗಿನ ಯಾವ ಸ್ಥಳದಲ್ಲಿತ್ತು?

    ಪ್ರಶ್ನೆ 7. ಮಹಿಷಾಸುರನು ಯಾವ ಯಾವ ಯುದ್ಧಗಳನ್ನು ಗೆದ್ದಿದ್ದನು ಮತ್ತು ಯಾವ ಯಾವ ಯುದ್ಧಗಳಲ್ಲಿ ಸೋತಿದ್ದನು?
    ಪ್ರಶ್ನೆ 8. ಮಹಿಷಾಸುರನ ಮೃತನಾಗಿದ್ದು ಯಾವ ವರ್ಷದಲ್ಲಿ? ಅವನ ನಂತರ ಆತನ ಉತ್ತರಾಧಿಕಾರಿಯಾಗಿ ಯಾರು ರಾಜ್ಯಭಾರವನ್ನು ವಹಿಸಿಕೊಂಡರು?
    ಪ್ರಶ್ನೆ 9. ಬೌದ್ಧ ರಾಜ ಮಹಿಷಾಸುರನನ್ನು ತಮ್ಮ ಪೂರ್ವಜರೆಂದು ಹೇಳಿಕೊಳ್ಳುವ ಇಂದಿನ ಮೂಲ ನಿವಾಸಿಗಳು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದು ಯಾವ ಸಂದರ್ಭದಲ್ಲಿ ಮತ್ತು ಏಕೆ?
    ಪ್ರಶ್ನೆ 10. ಕರ್ನಾಟಕದಲ್ಲಿ ಮಹಿಷಾಸುರನು ಆಳಿದ ಕುರುಹಾಗಿ ಇರುವ ಕನಿಷ್ಠ ಹತ್ತು ಐತಿಹಾಸಿಕ ಸ್ಥಳಗಳನ್ನು ಹೆಸರಿಸಿ.

    ಕೆಲ ದಿನಗಳ ಹಿಂದೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಕೆ.ಎಸ್ ಭಗವಾನ್, ಮಹಿಷಾಸುರ ರಾಕ್ಷಸನಲ್ಲ, ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇ ಮೈಸೂರಿಗೆ ಏಕೆ ಇಡುತ್ತಿದ್ದರು? ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು. ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ ಎಂದು ಭಾವಿಸಬೇಕು. ಆದರೆ ಪುರೋಹಿತಶಾಹಿಗಳ ಮಾತು ಕೇಳಿ 1950ರಲ್ಲಿ ಜಯಚಾಮರಾಜ ಒಡೆಯರ್ ಅವರು ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ನಿರ್ಮಾಣ ಮಾಡಿಸಿದರು ಎಂದು ಆರೋಪಿಸಿದ್ದರು.

    ಈ ಕೂಡಲೇ ಆ ವಿಗ್ರಹವನ್ನು ತೆಗೆದು ಬೌದ್ದ ಭಿಕ್ಕು ರೂಪದ ಮಹಿಷಾಸುರನ ವಿಗ್ರಹ ಸ್ಥಾಪನೆ ಮಾಡಬೇಕು. ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಒಂದು ವೇಳೆ ಸರ್ಕಾರ ಈ ಕ್ರಮಕ್ಕೆ ಮುಂದಾಗದಿದ್ದರೆ, ಕಾನೂನು ಹೋರಾಟ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪ್ರಾಚೀನ ಅಸುರ ರಾಷ್ಟ್ರ ಎನ್ನುವ ಪುಸ್ತಕದಲ್ಲೂ ಮಹಿಷಾಸುರನ ಬಗ್ಗೆ ಉಲ್ಲೇಖವಿದೆ. ನಿಜವಾದ ರಾಕ್ಷಸರು ಪುರೋಹಿತಶಾಹಿಗಳೇ ಹೊರತು ಮಹಿಷಾಸುರನಲ್ಲ ಎಂದು ಕಿಡಿಕಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಕ್ಷಸ ರೂಪದ ಮಹಿಷಾಸುರ ವಿಗ್ರಹ ಕೆಡವಿ ಹಾಕಿ – ವಿಚಾರವಾದಿ ಭಗವಾನ್

    ರಾಕ್ಷಸ ರೂಪದ ಮಹಿಷಾಸುರ ವಿಗ್ರಹ ಕೆಡವಿ ಹಾಕಿ – ವಿಚಾರವಾದಿ ಭಗವಾನ್

    ಮೈಸೂರು: ಚಾಮುಂಡಿ ಬೆಟ್ಟದ ಮೇಲಿರುವ ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ಕೆಡವಿ ಹಾಕಿ, ಬೌದ್ಧ ಭಿಕ್ಕು ಮಹಿಷಾಸುರ ರೂಪದ ವಿಗ್ರಹ ನಿರ್ಮಿಸುವಂತೆ ಪ್ರೊ.ಕೆ.ಎಸ್ ಭಗವಾನ್ ಆಗ್ರಹಿಸಿದ್ದಾರೆ.

    ನಗರದಲ್ಲಿ ನಡೆದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಷಾಸುರ ರಾಕ್ಷಸನಲ್ಲ, ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇ ಮೈಸೂರಿಗೆ ಏಕೆ ಇಡುತ್ತಿದ್ದರು? ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು. ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ ಎಂದು ಭಾವಿಸಬೇಕು. ಆದರೆ ಪುರೋಹಿತಶಾಹಿಗಳ ಮಾತು ಕೇಳಿ 1950ರಲ್ಲಿ ಜಯಚಾಮರಾಜ ಒಡೆಯರ್ ಅವರು ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ನಿರ್ಮಾಣ ಮಾಡಿಸಿದರು ಎಂದು ಆರೋಪಿಸಿದರು.

    ಈ ಕೂಡಲೇ ಆ ವಿಗ್ರಹವನ್ನು ತೆಗೆದು ಬೌದ್ದ ಭಿಕ್ಕು ರೂಪದ ಮಹಿಷಾಸುರನ ವಿಗ್ರಹ ಸ್ಥಾಪನೆ ಮಾಡಬೇಕು. ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಒಂದು ವೇಳೆ ಸರ್ಕಾರ ಈ ಕ್ರಮಕ್ಕೆ ಮುಂದಾಗದಿದ್ದರೆ, ಕಾನೂನು ಹೋರಾಟ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪ್ರಾಚೀನ ಅಸುರ ರಾಷ್ಟ್ರ ಎನ್ನುವ ಪುಸ್ತಕದಲ್ಲೂ ಮಹಿಷಾಸುರನ ಬಗ್ಗೆ ಉಲ್ಲೇಖವಿದೆ. ನಿಜವಾದ ರಾಕ್ಷಸರು ಪುರೋಹಿತಶಾಹಿಗಳೇ ಹೊರತು ಮಹಿಷಾಸುರನಲ್ಲ ಎಂದು ಕಿಡಿಕಾರಿದರು.

    ಇದೇ ವೇಳೆ ಈ ತಿಂಗಳ 7 ರಂದು ಮಹಿಷಾ ದಸರಾ ಆಚರಣೆ ಮಾಡುತ್ತಿದ್ದು, ಎಲ್ಲರೂ ಭಾಗವಹಿಸಬೇಕು ಎಂದು ಪ್ರೊ.ಕೆ.ಎಸ್.ಭಗವಾನ್ ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ವಿಶ್ವವಿದ್ಯಾಲಯಕ್ಕೆ ಮಹಿಷಾಸುರನ ಹೆಸರಿಡಬೇಕು- ಪ್ರಾಧ್ಯಾಪಕರ ಒತ್ತಾಯ

    ಮೈಸೂರು ವಿಶ್ವವಿದ್ಯಾಲಯಕ್ಕೆ ಮಹಿಷಾಸುರನ ಹೆಸರಿಡಬೇಕು- ಪ್ರಾಧ್ಯಾಪಕರ ಒತ್ತಾಯ

    ಮೈಸೂರು: ಮೈಸೂರು ವಿಶ್ವವಿದ್ಯಾಲಯಕ್ಕೆ ಮಹಿಷಾಸುರನ ಹೆಸರು ಇಡಬೇಕು. ಮಹಿಷಾಸುರನ ಹೆಸರನ್ನು ಅಜರಾಮರವಾಗಿಸಲು ಮೈಸೂರು ವಿವಿಗೆ ಮರುನಾಮಕರಣ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮಹೇಶ್ಚಂದ್ರಗುರು ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪದ ವೃತ್ತದಲ್ಲಿ ಮಹಿಷಾಸುರನ ಬೃಹತ್ ಪ್ರತಿಮೆ ನಿರ್ಮಿಸಬೇಕು. ರಾಜ್ಯ ಸರ್ಕಾರ ಮಹಿಷ ಹಬ್ಬಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮಹೇಶ್ಚಂದ್ರಗುರು ಆಗ್ರಹಿಸಿದರು.

    ಇಂದು ದಲಿತ ಸಂಘಟನೆಗಳು, ಪ್ರಗತಿಪರ ಒಕ್ಕೂಟ ಮೈಸೂರಿನಲ್ಲಿ ಮಹಿಷಾ ದಸರಾ ಮೆರವಣಿಗೆಯನ್ನು ಆಯೋಜನೆ ಮಾಡಿತ್ತು. ಬೆಳ್ಳಿ ರಥದಲ್ಲಿ ಮಹಿಷಾಸುರನ ಭಾವಚಿತ್ರವಿಟ್ಟು ಮೈಸೂರಿನ ಪುರಭವನದಿಂದ ಚಾಮುಂಡಿಬೆಟ್ಟದ ಮೇಲಿನ ಮಹಿಷಾಸುರನ ಪ್ರತಿಮೆವರೆಗೂ ಮೆರವಣಿಗೆ ಮಾಡಲಾಯಿತು. ಚಾಮುಂಡಿ ದಸರಾಕ್ಕಿಂತಾ ಮಹಿಷಾ ದಸರಾ ಮುಖ್ಯ ಎಂದು ಸಾರುವ ಉದ್ದೇಶದಿಂದ ಈ ಮೆರವಣಿಗೆಯನ್ನು ಕೈಗೊಳ್ಳಲಾಗಿದೆ. ಸಾಹಿತಿ ಕೆ.ಎಸ್. ಭಗವಾನ್, ಮಹೇಶ್ಚಂದ್ರಗುರು ಸೇರಿ ಹಲವರು ಭಾಗಿಯಾಗಿದ್ದಾರೆ.

  • ರಂಗಸ್ಥಳದಲ್ಲೇ ಕುಸಿದು ಇಹಲೋಕ ತ್ಯಜಿಸಿದ ಗೇರುಕಟ್ಟೆ ಗಂಗಯ್ಯಶೆಟ್ಟಿ

    ರಂಗಸ್ಥಳದಲ್ಲೇ ಕುಸಿದು ಇಹಲೋಕ ತ್ಯಜಿಸಿದ ಗೇರುಕಟ್ಟೆ ಗಂಗಯ್ಯಶೆಟ್ಟಿ

    ಮಂಗಳೂರು: ಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವಾಗ ವೇದಿಕೆಯಲ್ಲೇ ಕುಸಿದು ಮೃತಪಟ್ಟಿದ್ದಾರೆ.

    ಬುಧವಾರ ರಾತ್ರಿ ಎಕ್ಕಾರಿನ ದುರ್ಗಾನಗರದಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗ ಆಯೋಜನೆಗೊಂಡಿತ್ತು. ಗಂಗಯ್ಯ ಶೆಟ್ಟರು ಅರುಣಾಸುರ ಪಾತ್ರ ನಿರ್ವಹಿಸುತ್ತಿದ್ದರು. ಮುಂಜಾನೆ ದುಂಭಿಯನ್ನು ಕೊಲ್ಲಲು ಬಂಡೆಯನ್ನು ಒಡೆಯುವ ಸನ್ನಿವೇಶ ಬಂದಾಗ ಶೆಟ್ಟರು ವೇದಿಕೆಯಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

    ಕಟೀಲು ಮೇಳವೊಂದರಲ್ಲೇ ಸುದೀರ್ಘ 47 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಮೂರನೇ ಮೇಳದ ಮ್ಯಾನೇಜರ್ ಆಗಿದ್ದರು. ದೇವಿ ಮಹಾತ್ಮೆಯಲ್ಲಿನ ಮಹಿಷಾಸುರ ಪಾತ್ರ ಗಂಗಯ್ಯ ಶೆಟ್ಟರಿಗೆ ಅಪಾರವಾದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

     

    15 ವರ್ಷಗಳ ಹಿಂದೆ ಹೃದಯಾಘಾತಕ್ಕೊಳಗಾದ ಬಳಿಕ ವೈದ್ಯರ ಸಲಹೆಯಂತೆ ಅವರು ಮಹಿಷಾಸುರನ ಪಾತ್ರವನ್ನು ಮಾಡುತ್ತಿರಲಿಲ್ಲ. ಅರುಣಾಸುರ, ರಕ್ತಬೀಜ, ರುದ್ರಭೀಮ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ಅಪರೂಪಕ್ಕೊಮ್ಮೆ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ಎಂಟು ವರ್ಷಗಳ ಹಿಂದೆ ಯಕ್ಷಮಿತ್ರರು, ದುಬೈ ಇವರ ವತಿಯಿಂದ ದುಬೈಯಲ್ಲಿ ಜರಗಿದ್ದ ಪ್ರದರ್ಶನದಲ್ಲಿ ಮಹಿಷಾಸುರ ಪಾತ್ರ ಮಾಡಿದ್ದರು.

    ಅರುಣಾಸುರನ ಪಾತ್ರದಲ್ಲಿ ಅದ್ಭುತ ನಿರ್ವಹಣೆ ನೀಡಿದ್ದರು. ಕೊನೆಯ ಎರಡು ಪದ್ಯಗಳಲ್ಲಿ ವಿಶೇಷವಾಗಿ ಅಭಿನಯ ನೀಡಿದ್ದರು ಎಂದು ಎಂದು ಪ್ರೇಕ್ಷಕರು ಹಾಗೂ ಮೇಳದ ಕಲಾವಿದರು ತಿಳಿಸಿದ್ದಾರೆ.

    ಧರ್ಮಪತ್ನಿ, ಸುಪುತ್ರರಾದ ಶಶಿಕಾಂತ, ಮುಕೇಶ್ ಹಾಗೂ ಶ್ರೀನಿಧಿ, ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಗಂಗಯ್ಯ ಶೆಟ್ಟರ ನಿಧನಕ್ಕೆ ಯಕ್ಷಗಾನ ಅಭಿಮಾನಿಗಳು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.

    ರಂಗಸ್ಥಳದಲ್ಲೇ ನಿಧನರಾದ ಕಲಾವಿದರು: ಈ ಹಿಂದೆ ಇದೇ ರೀತಿಯಲ್ಲಿ ಮೇರು ಶಿರಿಯಾರ ಮಂಜು ನಾಯ್ಕ, ಕೆರೆಮನೆ ಶಂಭುಹೆಗಡೆ, ದಾಮೋದರ ಮಂಡೆಚ್ಚ, ಚಿಪ್ಪಾರು ಕೃಷ್ಣಯ್ಯ ಬಳ್ಳಾಲ್, ಅರುವ ನಾರಾಯಣ ಶೆಟ್ಟಿ, ಅಶೋಕ ಕೊಲೆಕಾಡಿ ಅವರಂತಹ ದಿಗ್ಗಜ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದ ವೇಳೆ ರಂಗದಲ್ಲೇ ಮೃತಪಟ್ಟಿದ್ದರು.

    ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಲನಾ ಭಟ್ ಅವರು ಗಂಗಯ್ಯ ಶೆಟ್ಟರನ್ನು ಈ ರೀತಿಯಾಗಿ ನೆನಪುಮಾಡಿಕೊಳ್ಳುತ್ತಾರೆ

    ಕೊನೆಗೂ ಪಾತ್ರವನ್ನು ಬಿಟ್ಟು ಕೊಡದ ಶೆಟ್ಟರು.
    ಬಂಡೆಗಲ್ಲಿಗೆ ಅರುಣಾಸುರ ಖಡ್ಗದಿಂದ ಬಡಿದಾಗ ಬಂಡೆಯೊಡೆದು ಚಿಮ್ಮುವ ವಜ್ರದುಂಬಿ, ಮತ್ತೆ ಸಭೆಯಲ್ಲಿ ಅರುಣಾಸುರ ಓಡುವ ಸನ್ನಿವೇಶ. ಕಲ್ಲಿಗೆ ಹೊಡೆದು ಭ್ರಾಮರಿಯನ್ನು ಸಾಕ್ಷಾತ್ಕರಿಸಿದ ಶೆಟ್ಟರ ಅರುಣ ಕುಸಿದು ಬಿದ್ದಿದ್ದ. ರಂಗದಲ್ಲಿ ರಾರಾಜಿಸಿದ್ದ ಖಳಪಾತ್ರಗಳ ದೊರೆ ತನ್ನ ಕೊನೆಯ ಪಾತ್ರವನ್ನೂ ಬಿಟ್ಟುಕೊಡದೆ ಮುಗಿಸಿಯೇ ಹೋಗಿದ್ದ. ಕನ್ನಡದ ಚಿತ್ರರಂಗಕ್ಕೆ ಖಳನಾಯಕ ವಜ್ರಮುನಿಯಾದರೆ ನನ್ನ ಮಟ್ಟಿಗೆ ಪೌರಾಣಿಕ ಪ್ರಸಂಗಗಳ ಯಕ್ಷಗಾನದ ಖಳನಾಯಕ ಗಂಗಯ್ಯ ಶೆಟ್ಟರು.

    ಚಿಕ್ಕಂದಿನಲ್ಲಿ ನಮ್ಮ ಊರಿಗೆ ಕಟೀಲು ಮೇಳ ಬಂದಿದ್ದಾಗ ಗಂಗಯ್ಯ ಶೆಟ್ಟರನ್ನು ಮೊದಲು ನೋಡಿದ ನೆನಪು, ನಾಟಕೀಯ ವೇಷಗಳಲ್ಲಿ ದೃಢಕಾಯರಾದ ಶೆಟ್ಟರು ಭೀಮಕಾಯರಾಗುತ್ತಿದ್ದರು, ಅವರ ವೇಷವನ್ನು ಚೌಕಿಯಲ್ಲಿ ಹತ್ತಿರದಿಂದ ನೋಡುವ ಸೊಗಸೇ ಬೇರೆ. ಬಣ್ಣಗಳನ್ನು ಅದ್ಭುತವಾಗಿ ಬಳಸಿ ಖಳಪಾತ್ರದ ಛಾಯೆ ಮುಖದಲ್ಲಿ ಎದ್ದು ಕಾಣುವಂತೆ ಬರೆಯುತ್ತಿದ್ದರು. ಶೆಟ್ಟರು ವೇಷಧರಿಸಿದ ಬಳಿಕ ನಡೆಯುತ್ತಿದ್ದ ಶೈಲಿಯೂ ಆಕರ್ಶಕ. ಹಿರಣ್ಯಕಶ್ಯಪನ ಪಾತ್ರ ಶೆಟ್ಟರ ಅದ್ಭುತ ಪಾತ್ರಗಳಲ್ಲೊಂದು, ಅದನ್ನು ನೋಡಿದ ನೆನಪಿದೆ. ಪ್ರಹ್ಲಾದನ ಮೇಲೆ ಒಮ್ಮೆ ಉಕ್ಕುವ ಮಮತೆ, ಮತ್ತೆ ಅರೆಕ್ಷಣದಲ್ಲಿ ಹುಟ್ಟಿಕೊಳ್ಳುವ ಹರಿದ್ವೇಷವನ್ನು ಅವರು ತೋರಿಸುತ್ತಿದ್ದ ಪರಿ ಅನನ್ಯ, ಅದನ್ನು ಇನ್ನು ಕಾಣುವುದಕ್ಕಿಲ್ಲ.

    ಇಂದು ಬೆಳಗ್ಗೆ ವಾಟ್ಸಾಪ್ ತೆರೆದು ನೋಡಿದಾಗ ಕಂಡದ್ದು ಮಹಾನ್ ಕಲಾವಿದನ ಕೊನೆಯ ವೇಷದ ಸುದ್ದಿ, ಕ್ಷಣಮಾತ್ರ ಕಣ್ಣು ಮಂಜಾಯ್ತು. ಛೇ ಇನ್ನವರ ವೇಷ ನೋಡುವ ಭಾಗ್ಯ ಇಲ್ಲವಲ್ಲ ಅನ್ನಿಸಿತು. ಗಂಗಯ್ಯ ಶೆಟ್ಟರ ರುದ್ರಭೀಮನ ವಿಡಿಯೋ ಸಿಡಿ ನಾನು ಹೈಸ್ಕೂಲ್ ಮುಗಿಸುವ ಸಂದರ್ಭದಲ್ಲಿ ಹೊರಬಂದಿತ್ತು, ಅದನ್ನು ಎಷ್ಟು ಬಾರಿ ನೋಡಿದ್ದೇನೋ ನನಗೇ ಗೊತ್ತಿಲ್ಲ. ನಮ್ಮ ಕಾಲದ ರುದ್ರಭೀಮ ಎಂದರೆ ಗಂಗಯ್ಯ ಶೆಟ್ಟರದ್ದು ಎನ್ನುವ ಭಾವನೆ ಇವತ್ತಿಗೂ ಜೀವಂತವಾಗಿದೆ.

    ಅನೇಕ ಕ್ಯಾಸೆಟ್ ಗಳಲ್ಲಿ ಅವರ ಧ್ವನಿಯನ್ನಾಲಿಸಿದ್ದೇನೆ. ಚಂದಗೋಪ, ವಿದ್ಯುನ್ಮಾಲಿ,ಅರುಣಾಸುರ, ಬಣ್ಣದವೇಷ ಇತ್ಯಾದಿ ವೇಷಗಳನ್ನು ನೋಡಿದ್ದೇನೆ. ನೇರವಾಗಿ ಅವರ ವೇಷ ನೋಡಿದ್ದಕ್ಕಿಂತ ಹೆಚ್ಚು ಸಿಡಿಗಳಲ್ಲೇ ನೋಡಿದ್ದು,ಅನುಭವಿಸಿದ್ದು ಹೆಚ್ಚು. ಪಾತ್ರಗಳ ಮನೋಧರ್ಮವನ್ನರಿತುಕೊಂಡು ಸ್ವಭಾವ ಮತ್ತು ಭಾವನೆಯನ್ನು ವ್ಯಕ್ತಪಡಿಸಿ ಅದ್ಭುತವಾದ ವಾತಾವರಣ ಸೃಷ್ಟಿಸುತ್ತಿದ್ದ ವಿರಳ ಕಲಾವಿದರವರು. ಅವರ ವೇಷ ರಂಗದಲ್ಲಿ ಇದ್ದಷ್ಟು ಹೊತ್ತು ಪಾತ್ರವೇ ಆಗಿರುತ್ತಿತ್ತು ಹೊರತು ಗಂಗಯ್ಯ ಶೆಟ್ಟರು ಎಂದೂ ಕಾಣಿಸುತ್ತಿರಲಿಲ್ಲ. ಪರಂಪರೆಯ ಬಣ್ಣದವೇಷದ ಹಳೆ ತಲೆಮಾರಿನ ಕೊಂಡಿಯೊಂದು ಕಳಚಿದೆ. ಅಗಲಿದ ದಿವ್ಯಾತ್ಮಕ್ಕೆ ದೇವಿ ಭ್ರಾಮರಿ ಚಿರಶಾಂತಿಯನ್ನು ಕರುಣಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ.

    ಇಲ್ಲಿ ಗಂಗಯ್ಯ ಶೆಟ್ಟಿಯವರು ವೇದಿಕೆಯಲ್ಲಿ ಕುಸಿದು ಬೀಳುತ್ತಿರುವ ವಿಡಿಯೋ ಮತ್ತು ಈ ಹಿಂದೆ ಅವರ ನಿರ್ವಹಿಸಿದ ರುದ್ರಭೀಮ ಪಾತ್ರದ ವಿಡಿಯೋವನ್ನು ನೀಡಲಾಗಿದೆ.

    https://www.youtube.com/watch?v=RRAkNKSejyw


    ವಿಡಿಯೋ ಕೃಪೆ. ಕೆಆರ್ ಕೆ ಭಟ್