Tag: Mahipal Lomror

  • ಕೊಹ್ಲಿ, ಕಾರ್ತಿಕ್‌, ಮಹಿಪಾಲ್‌ ಸ್ಫೋಟಕ ಆಟ – ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ

    ಕೊಹ್ಲಿ, ಕಾರ್ತಿಕ್‌, ಮಹಿಪಾಲ್‌ ಸ್ಫೋಟಕ ಆಟ – ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ

    ಬೆಂಗಳೂರು: ವಿರಾಟ್‌ ಕೊಹ್ಲಿ (Virat kohli) ಸ್ಫೋಟಕ ಅರ್ಧಶತಕ ಮತ್ತು ಕೊನೆಯಲ್ಲಿ ಕಾರ್ತಿಕ್‌ (Dinesh Karthik), ಮಹಿಪಾಲ್‌ (Mahipal Lomror) ಅವರ ಸಿಕ್ಸರ್‌ ಬೌಂಡರಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಗೆಲ್ಲಲು 177 ರನ್‌ಗಳ ಕಠಿಣ ಗುರಿಯನ್ನು ಪಡೆದ ಆರ್‌ಸಿಬಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 178 ರನ್‌ ಹೊಡೆದು ಮೊದಲ ಜಯ ದಾಖಲಿಸಿತು.

    ಕೊನೆಯ 30 ಎಸೆತಗಳಲ್ಲಿ 59 ರನ್‌ ಬೇಕಿತ್ತು. 16ನೇ ಓವರ್‌ನಲ್ಲಿ 12 ರನ್‌ ಬಂದರೂ ಕೊಹ್ಲಿ 77 ರನ್‌(49 ಎಸೆತ, 11 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದ ಕಾರಣ ಪಂದ್ಯ ರೋಚಕ ತಿರುವು ಪಡೆದುಕೊಂಡಿತ್ತು. 16.2 ನೇ ಓವರ್‌ನಲ್ಲಿ ಅನುಜ್‌ ರಾವತ್‌ ಎಲ್‌ಬಿ ಔಟಾಗಿದ್ದರಿಂದ ಪಂದ್ಯ ಪಂಜಾಬ್‌ ಕಡೆಗೆ ವಾಲಿತ್ತು. ಇದನ್ನೂ ಓದಿ: ಭಾರತದಲ್ಲೇ ಐಪಿಎಲ್‌ – ಪೂರ್ಣ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಮ್ಯಾಚ್‌?

    ಈ ವೇಳೆ ಜೊತೆಯಾದ ಕಾರ್ತಿಕ್‌ ಮತ್ತು ಇಂಪ್ಯಾಕ್ಟ್‌ ಪ್ಲೇಯರ್‌ ಮಹಿಪಾಲ್‌ ಮುರಿಯದ 7ನೇ ವಿಕೆಟಿಗೆ ಕೇವಲ 18 ಎಸೆತಗಳಲ್ಲಿ 48 ರನ್‌ ಜೊತೆಯಾಟವಾಡಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು.  ವಿಕೆಟ್‌ ಪತನವಾಗುತ್ತಿದ್ದರೂ ಕ್ರೀಸ್‌ನಲ್ಲಿ ನಿಂತು ಸ್ಫೋಟಕ ಅರ್ಧಶತಕ ಸಿಡಿಸಿದ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು.

    17ನೇ ಓವರ್‌ನಲ್ಲಿ 11 ರನ್‌ ಬಂದರೆ 18ನೇ ಓವರ್‌ನಲ್ಲಿ 13 ರನ್‌ ಬಂತು. 19ನೇ ಓವರ್‌ನಲ್ಲಿ ಕಾರ್ತಿಕ್‌ ಬೌಂಡರಿ, ಸಿಕ್ಸ್‌ ಸಿಡಿಸಿದ ಪರಿಣಾಮ 13 ರನ್‌ ಬಂತು. ಕೊನೆಯ 6 ಎಸೆತದಲ್ಲಿ 10 ರನ್‌ ಬೇಕಿತ್ತು. ಅರ್ಶ್‌ದೀಪ್‌ ಸಿಂಗ್‌ ಎಸೆದ ಮೊದಲ ಎಸೆತವನ್ನು ಕಾರ್ತಿಕ್‌ ಸಿಕ್ಸರ್‌ಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಬೌಂಡರಿಗೆ ಸಿಡಿಸಿ ತವರು ನೆಲದಲ್ಲಿ ಆರ್‌ಸಿಬಿಗೆ ಜಯ ತಂದುಕೊಟ್ಟರು.

    ಕಾರ್ತಿಕ್‌ ಔಟಾಗದೇ 28 ರನ್‌(10 ಎಸೆತ, 3 ಬೌಂಡರಿ, 2 ಸಿಕ್ಸರ್‌), ಮಹಿಪಾಲ್‌ ಔಟಾಗದೇ 17 ರನ್‌ (8 ಎಸೆತ, 2 ಬೌಂಡರಿ, 1 ಸಿಕ್ಸರ್‌) ರನ್‌ ಹೊಡೆದರು.

    ಆರ್‌ಸಿಬಿ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು. ನಾಯಕ ಡುಪ್ಲೆಸಿಸ್‌ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬೆನ್ನಲ್ಲೇ ಕ್ಯಾಮರೂನ್‌ ಗ್ರೀನ್‌ 3 ರನ್‌ ಗಳಿಸಿ ಔಟಾದರು. ನಂತರ ಬಂದ ರಜತ್‌ ಪಾಟಿದರ್‌ 18 ರನ್‌ ( 18 ಎಸೆತ, 1 ಬೌಂಡರಿ) ಹೊಡೆದು ಬೌಲ್ಡ್‌ ಆದರು. ಬೆನ್ನಲ್ಲೇ ಮ್ಯಕ್ಸ್‌ವೆಲ್‌ 3 ರನ್‌ ಗಳಿಸಿ ಹರ್‌ಪ್ರೀತ್‌ ಬ್ರಾರ್‌ಗೆ ಬೌಲ್ಡ್‌ ಆದರು.

    ಟಾಸ್‌ ಸೋತು ಮೊದಲ ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ಗೆ ನಾಯಕ ಶಿಖರ್‌ ಧವನ್‌ ಬಲ ತುಂಬಿ 45 ರನ್‌ (37 ಎಸೆತ, 4 ಬೌಂಡರಿ) ಹೊಡೆದು ಔಟಾದರು. ನಂತರ ಪ್ರಭಾಸಿಮ್ರಾನ್ ಸಿಂಗ್ 25 ರನ್‌, ಲಿವಿಂಗ್‌ ಸ್ಟೋನ್‌ 17 ರನ್‌, ಸ್ಯಾಮ್‌ ಕರ್ರನ್‌ 23 ರನ್‌ ರನ್‌ ಹೊಡೆದರು. ಕೊನೆಯಲ್ಲಿ ಶಶಾಂಕ್‌ ಸಿಂಗ್‌ 21 ರನ್‌ ( 8 ಎಸೆತ, 1 ಬೌಂಡರಿ, 2 ಸಿಕ್ಸರ್‌) ಜಿತೇಶ್‌ ಶರ್ಮಾ 27 ರನ್‌ (20 ಎಸೆತ, 1 ಬೌಂಡರಿ, 2 ಸಿಕ್ಸರ್‌) ಹೊಡೆದರು. ಅಂತಿಮವಾಗಿ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿತು.

    ಸಿರಾಜ್‌ 2 ಮತ್ತು ಮ್ಯಾಕ್ಸ್‌ವೆಲ್‌ ತಲಾ ಎರಡು ವಿಕೆಟ್‌ ಪಡೆದರೆ ಯಶ್‌ ದಯಾಳ್‌, ಅಲ್ಜಾರಿ ಜೋಸೆಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ನವದೆಹಲಿ: ಫಿಲ್ ಸಾಲ್ಟ್ ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (DelhiCapitals) ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (RCB) 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತು. 182 ರನ್‌ ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 16.4 ಓವರ್‌ಗಳಲ್ಲೇ 187ರನ್‌ ಸಿಡಿಸಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಇದನ್ನೂ ಓದಿ: IPLನಲ್ಲಿ 7 ಸಾವಿರ ರನ್‌ ಸಿಡಿಸಿ ದಾಖಲೆ ಬರೆದ ರನ್‌ ಮಿಷಿನ್‌ ಕೊಹ್ಲಿ

    ಗೆಲುವಿಗೆ 182 ರನ್‌ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ಶುರು ಮಾಡಿತು.‌ ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ (Phil Salt) ಆರ್‌ಸಿಬಿ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ದಂಡಿಸಿದರು. ಇದರಿಂದ ಆರ್‌ಸಿಬಿ ನೀಡಿದ ಬೃಹತ್‌ ಮೊತ್ತದ ಗುರಿಯನ್ನು ಡೆಲ್ಲಿ ನಿರಾಯಾಸವಾಗಿ ತಲುಪಿತು. ಡೇವಿಡ್‌ ವಾರ್ನರ್‌ (David Warner) 22 ರನ್‌ (14 ಎಸೆತ, 3 ಬೌಂಡರಿ, 1 ಸಿಕ್ಸರ್)‌, ಮಿಚೆಲ್‌ ಮಾರ್ಷ್‌ (Mitchell Marsh) 26 ರನ್‌ (17 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರು.

    ಆರ್‌ಸಿಬಿ ಬೌಲರ್‌ಗಳನ್ನ ಚೆಂಡಾಡಿದ ಫಿಲ್ ಸಾಲ್ಟ್ 45 ಎಸೆತಗಳಲ್ಲಿ ಸ್ಫೋಟಕ 87 ರನ್‌ (8 ಬೌಂಡರಿ, 6 ಸಿಕ್ಸರ್‌) ಚಚ್ಚಿದರು. ಕೊನೆಯಲ್ಲಿ ರಿಲೀ ರೋಸೌವ್ 22 ಎಸೆತಗಳಲ್ಲಿ 35 ರನ್‌ (3 ಸಿಕ್ಸರ್‌, 1 ಬೌಂಡರಿ), ಅಕ್ಷರ್‌ ಪಟೇಲ್‌ 3 ಎಸೆತಗಳಲ್ಲಿ 8 ರನ್‌ ಗಳಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಜೋಶ್ ಹ್ಯಾಜಲ್ವುಡ್, ಕರ್ಣ್ ಶರ್ಮಾ ಹಾಗೂ ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಮಕಾಡೆ ಮಲಗಿದ ಮುಂಬೈ, ಚೆನ್ನೈಗೆ 6 ವಿಕೆಟ್‌ಗಳ ಜಯ – CSK ಪ್ಲೆ ಆಫ್‌ಗೆ ಇನ್ನೆರಡೇ ಹೆಜ್ಜೆ ಬಾಕಿ

    ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು. 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 182 ರನ್‌ಗಳ ಗುರಿಯನ್ನು ನೀಡಿತು.

    ಆರ್‌ಸಿಬಿ ಪರ ಆರಂಭಿಕರಾಗಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಹಾಗೂ ವಿರಾಟ್ ಕೊಹ್ಲಿ (Virat Kohli) ಕಣಕ್ಕಿಳಿದರು. ಡುಪ್ಲೆಸಿಸ್ 32 ಎಸೆತಗಳಲ್ಲಿ 45 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 46 ಎಸೆತಗಳಲ್ಲಿ 55 ರನ್ ಬಾರಿಸಿದರು. ಇನ್ನುಳಿದಂತೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಗೋಲ್ಡನ್ ಡಕ್ಔಟ್ ಆದರೆ, ದಿನೇಶ್ ಕಾರ್ತಿಕ್ 9 ಎಸೆತಗಳಲ್ಲಿ 11 ರನ್ ಗಳಿಸಿ ಮತ್ತೆ ಪರದಾಡಿದರು. ಇದರಿಂದ ಆರ್‌ಸಿಬಿ 150ರನ್‌ಗಳ ಗಡಿ ದಾಟುವುದು ಕಷ್ಟವಾಗಿತ್ತು.

    ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೊಮ್ರೊರ್ (Mahipal Lomror) ಈ ಬಾರಿಯ ಇದೇ ಮೊದಲ ಬಾರಿಗೆ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಆಸರೆಯಾಗುವಂತಹ ಇನ್ನಿಂಗ್ಸ್ ಆಡಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೊಮ್ರೊರ್ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 54 ರನ್ ಗಳಿಸಿದರು. ಅನುಜ್ ರಾವತ್ 3 ಎಸೆತಗಳಲ್ಲಿ ಅಜೇಯ 8 ರನ್ ಗಳಿಸಿದರು.

    ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಮಾರ್ಷ್ ಎರಡು ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಹಾಗೂ ಮುಕೇಶ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.