Tag: mahesh joshi

  • ಮಹೇಶ್ ಜೋಶಿಗೆ ರಾಜ್ಯ ಸಚಿವ ಸ್ಥಾನಮಾನ ಸವಲತ್ತು ಹಿಂಪಡೆದ ಸರ್ಕಾರ

    ಮಹೇಶ್ ಜೋಶಿಗೆ ರಾಜ್ಯ ಸಚಿವ ಸ್ಥಾನಮಾನ ಸವಲತ್ತು ಹಿಂಪಡೆದ ಸರ್ಕಾರ

    – ಪಟ್ಟಭದ್ರ ಹಿತಾಸಕ್ತಿ ಎಂದ ಕಸಾಪ ಅಧ್ಯಕ್ಷ

    ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahithya Parishath) ಅಧ್ಯಕ್ಷ ಮಹೇಶ್ ಜೋಶಿಯವರಿಗೆ  (Mahesh Joshi) ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಸವಲತ್ತನ್ನು ಸರ್ಕಾರ ಹಿಂಪಡೆದಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಚಿವ ದರ್ಜೆ ಸ್ಥಾನಮಾನವನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದರ ಹಿಂದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ಸಚಿವ ದರ್ಜೆ ಸ್ಥಾನ ಮಾನ ನೀಡಿದ ಮೇಲೆ ಎಲ್ಲಿಯೂ ಅದರ ಗೌರವಕ್ಕೆ ಚ್ಯುತಿ ಬಾರದ ಹಾಗೆ, ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳದ ಹಾಗೆ ಕಾರ್ಯ ನಿರ್ವಹಿಸಿದ್ದೇನೆ ಎಂದಿದ್ದಾರೆ.

    ದುರದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರದ ಮೇಲೆ ಒತ್ತಡವನ್ನು ತರುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಬಂದಾಗಲೇ ಸಿಎಂ ಗಮನಕ್ಕೆ ತಂದಿದ್ದೆ ಎಂದು ಅವರು ತಿಳಿಸಿದ್ದಾರೆ.

    ಪಿತೂರಿ ಮಾಡಿದವರ ಬಗ್ಗೆ ಅವರು ಪತ್ರದಲ್ಲಿ ಬರೆದಿದ್ದಾರೆ. ಇದು ಪರಿಷತ್ತಿಗೆ ನೀಡಿದ ಸವಲತ್ತಾಗಿದೆ. ಮಹೇಶ್ ಜೋಶಿಗೆ ಅಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  • ಮಂಡ್ಯದಲ್ಲಿ ನುಡಿ ಜಾತ್ರೆ – ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ

    ಮಂಡ್ಯದಲ್ಲಿ ನುಡಿ ಜಾತ್ರೆ – ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ

    ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಗರಿ ಮಂಡ್ಯದಲ್ಲಿ (Mandya) ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ಶುಕ್ರವಾರ (ಡಿ.20) ಚಾಲನೆ ಸಿಗಲಿದೆ. ಈ ಹಿನ್ನೆಲೆ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನದ (Dinner) ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ಉಪಾಹಾರ ಹಾಗೂ ಊಟ ನೀಡಲು 140 ಕೌಂಟರ್‌ಗಳನ್ನು ತೆರೆಯಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಒಂದೇ ಮೆನುವನ್ನು ಈಗಾಗಲೇ ಸಿದ್ಧ ಮಾಡಲಾಗಿದೆ. ನೂರಾರು ಬಾಣಸಿಗರು (Chefs) ಹಾಗೂ ಸಾವಿರಾರು ಸಹಾಯಕರಿಂದ ಖಾದ್ಯಗಳು ತಯಾರಿಯಾಗುತ್ತಿವೆ. ಇದನ್ನೂ ಓದಿ:  87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ – ʻನುಡಿ ಜಾತ್ರೆಯ ಸ್ವರ ಯಾತ್ರೆʼ

    ಈಗಾಗಲೇ ಸಿಹಿ ತಿನಿಸು ತಯಾರಿಕೆ ಕಾರ್ಯ ಆರಂಭವಾಗಿದ್ದು ಹೋಳಿಗೆ, ಮೈಸೂರು ಪಾಕ್  (Mysuru Pak), ಬರ್ಫಿ, ಲಾಡುಗಳನ್ನು ಬಾಣಸಿಗರು ತಯಾರು ಮಾಡಿದ್ದಾರೆ. ಇದನ್ನೂ ಓದಿ: ಸಕ್ಕರೆನಾಡು ಮಂಡ್ಯ ಕೇಸರಿಮಯ – ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

    ಶುಕ್ರವಾರದಿಂದ ಮೆನು ಪ್ರಕಾರ ಊಟ ರೆಡಿಯಾಗಲಿದ್ದು, ಮಂಡ್ಯ ಶೈಲಿಯಲ್ಲಿ ಈ ಬಾರಿ ಊಟ ಇರಲಿದೆ. ಜೊತೆಗೆ ರಾಜ್ಯದ ಪ್ರಮುಖ ಊಟದ ಮೆನು ಸಹ ಇರಲಿದೆ. ಮೂರು ದಿನವೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.

  • ಕೊಲೆ ಆರೋಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ತೆರವು – ರಾಜ್ಯಾಧ್ಯಕ್ಷ ಆದೇಶ

    ಕೊಲೆ ಆರೋಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ತೆರವು – ರಾಜ್ಯಾಧ್ಯಕ್ಷ ಆದೇಶ

    ಮಂಡ್ಯ: ಕೊಲೆ ಆರೋಪಿಯಾಗಿದ್ದ ಕುಮಾರ್ ಎಂಬ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಸಾಪ ಅಧ್ಯಕ್ಷನನ್ನಾಗಿ ಮಾಡಿದ್ದ ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ಇದೀಗ ಅಧ್ಯಕ್ಷ ಸ್ಥಾನದಿಂದ ತೆರವು ಮಾಡಿ ಆದೇಶ ಹೊರಡಿಸಿದೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ (Mahesh Joshi) ಆದೇಶ ಹೊರಡಿಸಿದ್ದಾರೆ.

    ಈ ಬಾರಿ ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆ ಸಿದ್ಧತೆಗೆ ಜಿಲ್ಲೆಯ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಮ್ಮ ಆಪ್ತನಾದ ಎಂ.ಬಿ ಕುಮಾರ್‌ ಅವರನ್ನು ಆಯ್ಕೆ ಮಾಡುವಂತೆ ಶಿಪಾರಸ್ಸು ಮಾಡಿದ್ದರು. ಇದನ್ನೂ ಓದಿ: ಶಿರೂರು ಗುಡ್ದ ಕುಸಿತ ದುರಂತ: ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ, ಲಾರಿ ಪತ್ತೆ

    ಅದರಂತೆ ಕುಮಾರ್‌ನನ್ನು ಶ್ರೀರಂಗಪಟ್ಟಣದ ಅಧ್ಯಕ್ಷನನ್ನಾಗಿಯೂ‌ ಕಸಾಪ ನೇಮಕ ಮಾಡಿತ್ತು. ಕುಮಾರ್ 2015ರಲ್ಲಿ ನಡೆದ ಕೊಲೆ‌ ಪ್ರಕರಣವೊಂದರಲ್ಲಿ 30ನೇ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗೆ ಇದ್ದಾನೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ಸೆ.19ರಂದು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

    ಯಾವುದೇ ಕ್ರಿಮಿನಲ್ ಹಿನ್ನೆಲೆ ಉಳ್ಳ ವ್ಯಕ್ತಿಗೆ ಕಸಾಪದಲ್ಲಿ ಯಾವ ಹುದ್ದೆಗಳನ್ನು ನೀಡಬಾರದು ಎಂದು ಬೈಲಾದಲ್ಲಿ ಇದೆ. ಹೀಗಿದ್ದರೂ ಕೊಲೆ ಆರೋಪಿಯಾಗಿರುವ ಕುಮಾರ್‌ಗೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಶಿಫಾರಸ್ಸಿಗೆ ಮಣಿದು ಅಧ್ಯಕ್ಷ ಸ್ಥಾನ ಕೊಡಲಾಗಿದೆ ಎಂದು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಇದನ್ನೂ ಓದಿ: ಗಂಭೀರ ಆರೋಪಗಳಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸಂತೋಷ್‌ ಹೆಗ್ಡೆ

    ವರದಿಯ ಬೆನ್ನಲ್ಲೇ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಈ ಬಗ್ಗೆ ಪೂರ್ವಪರ ವಿಚಾರ ಮಾಡಿ ಎಂ.ಬಿ ಕುಮಾರ್‌ನನ್ನು ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಕಸಾಪ ತಾಲೂಕು ಅಧ್ಯಕ್ಷರಾಗಿ ಸಿದ್ದಲಿಂಗಯ್ಯ ಎಂಬುವವರನ್ನು ಆಯ್ಕೆ ಮಾಡಲಾಗಿದೆ.

  • ರಾಜ್ ಕುಮಾರ್ ಗುಣಗಾನ ಮಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ

    ರಾಜ್ ಕುಮಾರ್ ಗುಣಗಾನ ಮಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ

    ಡಾ.ರಾಜ್ ಕುಮಾರ್ (Raj Kumar) ಅವರು ಕನ್ನಡ ಸಂಸ್ಕೃತಿಯ ಪ್ರತೀಕದಂತಿದ್ದರು. ಕನ್ನಡಕ್ಕೊಬ್ಬನೇ ರಾಜ್ ಕುಮಾರ್  ಎನ್ನಿಸಿದ ಅವರು ತಮ್ಮ ಅಭಿನಯ ಮತ್ತು ಬದುಕಿನ ರೀತಿಯಿಂದ ಮಾದರಿ ಎನ್ನಿಸಿ ಕೊಂಡಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು. ಅವರು ಇಂದು  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಡಾ.ರಾಜ್ ಕುಮಾರ್ ಅವರ 95ನೆಯ ಹುಟ್ಟು ಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಂತ್ರಾಲಯ ಮಹತ್ಮೆ’ಯಲ್ಲಿನ ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ರಾಯರೇ ಮಾಡಿಸಿದ್ದರು ಎನ್ನುವ ರಾಜ್ ಕುಮಾರ್ ಅವರ ನಂಬಿಕೆಯನ್ನು ಪ್ರಸ್ತಾಪಿಸಿದ ನಾಡೋಜ ಡಾ.ಮಹೇಶ ಜೋಶಿಯವರು ವಿಜ್ಞಾನ ಕೊನೆಗೊಳ್ಳುವಲ್ಲಿ ಅಧ್ಯಾತ್ಮ ಆರಂಭವಾಗುತ್ತದೆ ಎಂದರು. ಸಂತ ಶ್ರೇಷ್ಟರಾದ ಕನಕದಾಸ, ಪುರಂದರ ದಾಸ, ಸರ್ವಜ್ಞ,  ತುಕಾರಂ, ಕಬೀರ ಮೊದಲಾದವರ ಪಾತ್ರಗಳಿಗೆ ಜೀವ ತುಂಬಿದ ಹಾಗೆ ಇಮ್ಮಡಿ ಪುಲಕೇಶಿ, ಮಯೂರ, ಶ್ರೀಕೃಷ್ಣದೇವರಾಯ ಮೊದಲಾದ ಕನ್ನಡ ನಾಡಿನ ವೀರರನ್ನು ಬೆಳ್ಳಿತೆರೆಯ ಮೂಲಕ ಜೀವಂತವಾಗಿಸಿದರು, ರಾಮ, ಕೃಷ್ಣ, ನಾರದ ಮೊದಲಾದ ಪುರಾಣ ಪಾತ್ರಗಳನ್ನೂ ಅಭಿನಯಿಸಿದರು, ಬಾಂಡ್ ನಿಂದ ಭಕ್ತನವರೆಗೆ, ಚಮ್ಮಾರನಿಂದ ಚಕ್ರವರ್ತಿಯವರೆಗೆ ಎಲ್ಲಾ ಮಾದರಿಯ ಪಾತ್ರಗಳನ್ನು ಮಾಡಿ ರಾಜ್ ಕುಮಾರ್ ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿ (Mahesh Joshi)  ವಿವರಿಸಿದರು.

    ಐವತ್ತಕ್ಕೂ ಹೆಚ್ಚು ಸಂದರ್ಭಗಳಲ್ಲಿ ರಾಜ್ ಕುಮಾರ್ ಅವರ  ಒಡನಾಟ ತಮಗೆ ದೊರಕಿದ್ದನ್ನ ಸ್ಮರಿಸಿ ಕೊಂಡ ಅವರು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ  ಸ್ವೀಕಾರ ಸಂದರ್ಭದಲ್ಲಿ ನಾಲ್ಕು ದಿನ ದೊರಕಿದ ನಿಕಟ ಒಡನಾಟದ ಅನುಭವವನ್ನು ನೆನಪು ಮಾಡಿ ಕೊಂಡು ರಾಜ್ ಕುಮಾರ್ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇತ್ತು. ಹಠ ಯೋಗವನ್ನೂ ಅವರು ಸಾಧಿಸಿದ್ದರು. ಅವರ ಯೋಗ ಗುರುಗಳಾದ ನಾಯ್ಕರ್ ಅವರ ಗುರುಗಳ ಮೇಲೆ ಶಿಶುನಾಳ ಶರೀಫರ ಪ್ರಭಾವವಿತ್ತು ಎಂದು ನಾಡೋಜ ಡಾ.ಮಹೇಶ ಜೋಶಿಯವರು ನೆನಪು ಮಾಡಿಕೊಂಡರು.

    ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ ಸರಳತೆಯನ್ನು ಮೌಲ್ಯವಾಗಿ ಮಾಡಿದ ರಾಜ್ ಕುಮಾರ್ ಚಲನಚಿತ್ರಕ್ಕೆ ಸೀಮಿತವಾಗದೆ ನಮ್ಮ ಕಾಲದ ಸಾಂಸ್ಕೃತಿಕ ರೂಪಕವಾಗಿ ಬೆಳೆದಿದ್ದು ದೊಡ್ಡ ಕೌತಕವೇ ಸರಿ, ಎಲ್ಲಾ ತಲೆಮಾರಿನವರೂ ತಮ್ಮ ಪಾಲಿನ ಆದರ್ಶವನ್ನು ರಾಜ್ ಕುಮಾರ್ ಎನ್ನುವ ಕನ್ನಡಿಯಲ್ಲಿ ಕಂಡರು. ಅವರ ಶೈಲಿಯಲ್ಲಿ ‘ಅಮ್ಮ’ ಎಂದು ಕರೆಸಿ ಕೊಳ್ಳಲು ಎಷ್ಟೋ ಮಹಿಳೆಯರು ಇಂದಿಗೂ ಹಂಬಲಿಸುತ್ತಾರೆ. ಅಣ್ಣ-ತಮ್ಮಂದಿರು ಹೇಗಿರ ಬೇಕು? ಗಂಡ-ಹೆಂಡತಿ ಒಡನಾಟ ಹೇಗಿರ ಬೇಕು? ತಂದೆ-ಮಕ್ಕಳ ಸಂಬಂಧದ ಸ್ವರೂಪ ಯಾವುದೂ ಎಲ್ಲಾ ಪ್ರಶ್ನೆಗಳಿಗೂ  ಅವರ ಚಿತ್ರದಲ್ಲಿ ಉತ್ತರವಿದೆ. ‘ಕನ್ನಡದ ಜನ ನನ್ನನ್ನು ರಾಜನನ್ನಾಗಿ ನೋಡಿದ್ದಾರೆ, ಮಂತ್ರಿ ಸ್ಥಾನ ಏಕೆ ಬೇಕು’ ಎಂದು ರಾಜಕೀಯದಿಂದ ದೂರವಿದ್ದ ರಾಜ್ ಕುಮಾರ್ ತಮ್ಮ ಚಿತ್ರಗಳಲ್ಲಿ ಇಂದಿಗೂ ರಾಜಕಾರಣಿ ಪಾತ್ರವಿರಲಿ ಜಮೀನ್ದಾರ, ಊರ ಗೌಡರ ಪಾತ್ರಗಳನ್ನು ಮಾಡಲಿಲ್ಲ ಮೇಯರ್ ಮುತ್ತಣ್ಣ ಚಿತ್ರದಲ್ಲಿ ಅವರು ಮೇಯರ್ ಆದರೂ ಅದಕ್ಕೆ ಸಂಬಂಧಿಸಿದ ಸನ್ನಿವೇಶಗಳಿಲ್ಲ ಎಂದು ವಿಶ್ಲೇಷಿಸಿದರು. ತಾವೊಮ್ಮೆ ಅವರನ್ನು ‘ನೀವು ನಿರ್ವಹಿಸಲು ಬಯಸಿ ಸಿಕ್ಕದೆ ಹೋದ ಪಾತ್ರ ಯಾವುದು?’ ಎಂದಾಗ ‘ಬಸ್ ಕಂಡೆಕ್ಟರ್’ಎಂದು ಹೇಳಿದ್ದನ್ನು ನೆನಪು ಮಾಡಿಕೊಂಡ ಶ್ರೀಧರ ಮೂರ್ತಿ ರಾಜ್ ಕುಮಾರ್ ಎಲ್ಲಾ ವೃತ್ತಿಗಳಿಗೂ ಘನತೆ ತಂದು ಕೊಟ್ಟ ಮಹಾನ್ ಕಲಾವಿದರು ಎಂದು ಹೇಳಿ ಅವರ ಜೊತೆಗಿನ ಒಡನಾಟದ ಅನೇಕ ಘಟನೆಗಳನ್ನು ನೆನಪು ಮಾಡಿಕೊಂಡರು.

    ಕನ್ನಡ ಹೋರಾಟ ಗಾರ ರಾ.ನಂ.ಚಂದ್ರಶೇಖರ್ ಮಾತನಾಡಿ ಗೋಕಾಕ್ ಚಳುವಳಿ ಸಂದರ್ಭದಲ್ಲಿ ಕನ್ನಡಿಗರಿಗೆ ದೊಡ್ಡ ಭರವಸೆಯಾಗಿ ಬಂದವರು ಡಾ.ರಾಜ್ ಕುಮಾರ್, ಅವರು ಯಾವತ್ತೇ ಹೋರಾಟಕ್ಕೆ ಇಳಿದರೂ ಸರ್ಕಾರ ನಡುಗುತ್ತಿತ್ತು ಎಂದು ಹೇಳಿ ಎಂ.ವಿ.ಸೀಯವರ ಅಂತಿಮ ದರ್ಶನ ಪಡೆಯಲು ನಾರು ಮಡಿ ಉಟ್ಟು ಬಂದಿದ್ದ ರಾಜ್ ಕುಮಾರ್ ನಮ್ಮ ನಡುವಿನ ಸಂತ.. ಲೌಕಿಕದಲ್ಲಿ ಇದ್ದೂ ಅವರು ಅಲೌಕಿಕದ ನಡೆಯನ್ನು ಸಾಧಿಸಿದ್ದರು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ,ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಪಟೇಲ್ ಪಾಂಡು, ಹಿರಿಯ ಪತ್ರಕರ್ತ ಪ್ರಶಾಂತ್ ಹೆಬ್ಬಾರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಭಾಗವಹಿಸಿದ್ದರು.

  • ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆಗೆ ಕಸಾಪ ಮುಂದಾಗಿಲ್ಲ: ಮಹೇಶ್‌ ಜೋಶಿ ಸ್ಪಷ್ಟನೆ

    ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆಗೆ ಕಸಾಪ ಮುಂದಾಗಿಲ್ಲ: ಮಹೇಶ್‌ ಜೋಶಿ ಸ್ಪಷ್ಟನೆ

    ಬೆಂಗಳೂರು: ಪಂಪ ಮಹಾಕವಿ (Pampa Mahakavi) ರಸ್ತೆಯ ಹೆಸರು ಬದಲಾವಣೆಗೆ ಮುಂದಾಗಿಲ್ಲ. ಕೆಲವು ಪೂರ್ವಾಗ್ರಹ ಪೀಡಿತರು, ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆಯನ್ನು ಸಹಿಸಲಾಗದೆ, ಇಂತಹ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ(Mahesh Joshi) ಕಿಡಿಕಾರಿದ್ದಾರೆ.

    ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಎದುರಿನ ಪಂಪ ಮಹಾಕವಿ ಮಾರ್ಗವನ್ನು ಕನ್ನಡಮಯ ಮಾಡಬೇಕು ಹಾಗೂ ಆಕರ್ಷಣೀಯವನ್ನಾಗಿಸಲು, ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಮನವಿಯನ್ನು ಮಾತ್ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕನ್ನಡ ಸಾಹಿತ್ಯ ಪರಿಷತ್‌ ನೀಡಿದೆ ಎಂದು ಮಹೇಶ್‌ ಜೋಶಿ ಸ್ಪಷ್ಟನೆ ನೀಡಿದ್ದಾರೆ

    ಈ ವಿಚಾರಕ್ಕೆ ಎದ್ದ ಗೊಂದಲಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ.

    ಹೇಳಿಕೆಯಲ್ಲಿ ಏನಿದೆ?
    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಮನವಿಯ ಕುರಿತು ಸ್ಪಷ್ಟ ಮಾಹಿತಿಯಿಲ್ಲದೆ, ಕೆಲವು ಮಾಧ್ಯಮಗಳಲ್ಲಿ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಎದುರಿಗೆ ಇರುವ ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ ಎನ್ನುವ ವರದಿಗಳು ಬಿತ್ತರವಾಗುತ್ತಿವೆ. ವಾಸ್ತವದಲ್ಲಿ ಈ ವಿಷಯದ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಪ್ರಕಟಣೆಯಾಗಲಿ, ಮಾಧ್ಯಮ ಹೇಳಿಕೆಗಳನ್ನಾಗಲಿ ಬಿಡುಗಡೆ ಮಾಡಿರುವುದಿಲ್ಲ. ಕೆಲವರು ದುರುದ್ದೇಶದಿಂದ ಹಾಗೂ ಉದ್ಧೇಶಪೂರ್ವಕವಾಗಿಯೇ ತಪ್ಪು ಗ್ರಹಿಕೆಯಿಂದ ಇಂತಹ ವರದಿಗಳು ಬಿತ್ತರಿಸುತ್ತಿದ್ದಾರೆ.

    ಪಂಪ ಮಹಾಕವಿಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಅಪಾರವಾದ ಗೌರವ ಹೊಂದಿದ್ದು, ಪರಿಷತ್ತಿನ ಕೇಂದ್ರ ಕಚೇರಿ ಇದೇ ರಸ್ತೆಯಲ್ಲಿ ಇರುವುದರಿಂದ, ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮೆಪಡುತ್ತೇವೆ. ಕಳೆದ ಕೆಲವು ದಿನಗಳ ಹಿಂದೆ, ಮಿಂಟೋ ಆಸ್ಪತ್ರೆ ವೃತ್ತದಿಂದ ಮಕ್ಕಳಕೂಟ ವೃತ್ತದವರೆಗಿನ ರಸ್ತೆಯನ್ನು ʻಕನ್ನಡಮಯʼಗೊಳಿಸಬೇಕು, ಕನ್ನಡ ಸಾಹಿತ್ಯ ಪರಂಪರೆ ಬಿಂಬಿಸುವ ಭೂದೃಶ್ಯ(ಲ್ಯಾಂಡ್ಸ್ಕೇಪ್) ಸಿದ್ಧಪಡಿಸಬೇಕು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಮಾರ್ಗವನ್ನು ಅಭಿವೃದ್ಧಿಪಡಿಸಿ ʻಕನ್ನಡಮಯ ವಾತಾವರಣʼ ನಿರ್ಮಾಣ ಮಾಡಬೇಕೆಂಬ ವಿನಂತಿಯನ್ನು, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮಹಾನಗರ ಪಾಲಿಕೆಗೆ ಪತ್ರ ಸಲ್ಲಿಸಲಾಗಿತ್ತು.

    ಇದೇ ಸಂದರ್ಭದಲ್ಲಿ ಕೆಲವು ಪರಿಷತ್ತಿನ ಅಭಿಮಾನಿಗಳು ಹಾಗೂ ಕನ್ನಡ ಪ್ರೇಮಿಗಳು, ಪಂಪ ಮಹಾಕವಿ ಹೆಸರಿನೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರನ್ನು ಸೇರಿಸಿ ʻಪಂಪ ಮಹಾಕವಿ – ಕನ್ನಡ ಸಾಹಿತ್ಯ ಪರಿಷತ್ತು ರಸ್ತೆʼ ಎಂದು ಅಥವಾ ಆದಿಕವಿ ಪಂಪನಿಗೆ ನಾಡಿನ ಮೊದಲ ಗುರು ʻನಾಡೋಜʼಎಂಬ ಹೆಗ್ಗಳಿಕೆ ಇರುವುದರಿಂದ, ʻನಾಡೋಜ ಪಂಪ ಮಹಾಕವಿ-ಕನ್ನಡ ಸಾಹಿತ್ಯ ಪರಿಷತ್ತು ರಸ್ತೆʼ ಎಂದು ನಾಮಕರಣಕ್ಕೆ ಸಲಹೆ ಕೊಟ್ಟಿರುತ್ತಾರೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಇದರ ಬಗ್ಗೆ ಕೇವಲ ಸಲಹೆ, ಸೂಚನೆಗಳನ್ನು ಆಲಿಸಲಾಗಿದೆಯೇ ಹೊರತು, ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ ಟೀಂ ಪ್ರಕಟ – ಬುಮ್ರಾ ಇನ್‌, ಜಡೇಜಾ ಔಟ್‌

    ಕೇಂದ್ರದ ವ್ಯಾಪ್ತಿಯಲ್ಲಿ ಬರುವ ದೂರದರ್ಶನವನ್ನು ಕನ್ನಡಮಯ ಮಾಡುವುದರೊಂದಿಗೆ ʻಸಮೀಪ ದರ್ಶನʼವನ್ನಾಗಿಸಿದ್ದು, ಜನರು ನೆನೆಸಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಹ ʻಜನಸಾಮಾನ್ಯರ ಪರಿಷತ್ತುʼ ಮಾಡುವುದಕ್ಕಾಗಿ ನಾಡು ನುಡಿ, ಸಂಸ್ಕೃತಿ ವಿಚಾರದಲ್ಲಿ ಅಪಾರವಾದ ಕಾಳಜಿಯೊಂದಿಗೆ ಕೆಲಸ ಮಾಡುವಲ್ಲಿ ಹೊಸತನವನ್ನು ತರುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಪೂರ್ವಾಗ್ರಹ ಪೀಡಿತರು, ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆಯನ್ನು ಸಹಿಸಲಾಗದೆ, ಇಂತಹ ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಿದ್ದಾರೆ. ವಿಕೃತ ಮನಸ್ಸನ್ನು ಹೊಂದಿ, ವಿವಾದ ಸೃಷ್ಟಿಸುವ ಮೂಲಕವೇ, ಪ್ರಚಾರದಲ್ಲಿ ಇರಬೇಕೆಂದು, ದುರದ್ದೇಶ ಹೊಂದಿದವರು ಯಾವಾಗಲೂ ಸಕ್ರಿಯವಾಗಿರುವುದು ದುರಂತ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

    ಕನ್ನಡ-ಕನ್ನಡಿಗ-ಕರ್ನಾಟಕಕ್ಕಾಗಿ ದುಡಿಯುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಹಕರಿಸುವ ಬದಲು, ವಾಸ್ತವವನ್ನು ಅರಿಯದೆ ತಮ್ಮ ಬುದ್ಧಿಗೆ ತಕ್ಕ ವಿಚಾರವನ್ನು ರೂಪಿಸಿಕೊಂಡು, ರಾಜಕೀಯ ಲೇಪ ಮಾಡಿ ಕೊಡುತ್ತಿರುವ ಹೇಳಿಕೆಗಳು ಆಕ್ಷೇಪಾರ್ಹವಾಗಿದೆ. ಕನ್ನಡ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಹತ್ತಾರು ಕನಸುಗಳನ್ನು ಹೊತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಯಾರೇ ಸೂಕ್ತ ಸಲಹೆಗಳನ್ನು ನೀಡಿದರೂ ಮುಕ್ತವಾಗಿ, ಸ್ವೀಕರಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆಯಾಗಿದೆ. ಯಾವುದೇ ಪರಿಣಾಮಕಾರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುಲು ಪರಿಷತ್ತಿಗೆ ಒಂದು ಕಾನೂನು ಚೌಕಟ್ಟು ಇರುತ್ತದೆ. ʻಕಾರ್ಯಕಾರಿ ಸಮಿತಿʼ ಎನ್ನುವ ಮಹತ್ವದ ವ್ಯವಸ್ಥೆ ಇರುತ್ತದೆ. ಅದರಲ್ಲಿಯೇ ಎಲ್ಲಾ ನಿರ್ಣಯಗಳು ಕೈಗೊಳ್ಳಲಾಗುತ್ತದೆಯೇ ಹೊರತು, ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ, ಎನ್ನುವ ಕಾನೂನಾತ್ಮಕ ತಿಳುವಳಿಕೆಯನ್ನು ಸುಳ್ಳು ಸುದ್ಧಿ ಹಬ್ಬಿಸುತ್ತಿರುವುದನ್ನು ಮೊದಲು ಅರಿತುಕೊಳ್ಳಬೇಕು. ಯಾವುದೇ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸುವಾಗ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸೂಕ್ತ ಚರ್ಚೆಯ ನಂತರವೇ, ನಿರ್ಣಯ ಕೈಗೊಳ್ಳಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ತಿದ್ದುಪಡಿ ತರುವಾಗ, ವಿದ್ಯಾರ್ಹತೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದು, ಎಲ್ಲರ ಒಪ್ಪಿಗೆಯ ಮೇರೆಗೆ ನಿಬಂಧನೆ ತಿದ್ದುಪಡಿ ಮಾಡಿರುವುದನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಜ್ಞಾಪಿಸುತ್ತಾ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕನ್ನಡಿಗರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊದಲ ಬಾರಿಗೆ ಕಸಪಾ ಅಧ್ಯಕ್ಷರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ

    ಮೊದಲ ಬಾರಿಗೆ ಕಸಪಾ ಅಧ್ಯಕ್ಷರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ

    ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿದೆ.

    ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಯಾವುದೇ ಸರ್ಕಾರ ಸಚಿವರ ಸ್ಥಾನಮಾನವನ್ನು ನೀಡಿರಲಿಲ್ಲ. ಇದೇ ಮೊಟ್ಟಮೊದಲ ಬಾರಿಗೆ ಸರ್ಕಾರ ಕಸಪಾ ಅಧ್ಯಕ್ಷರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿದೆ.

    ಸಚಿವರ ದರ್ಜೆ ಸ್ಥಾನಮಾನ ನೀಡಿದ ಸಿಎಂ ಬೊಮ್ಮಾಯಿ ಅವರಿಗೆ ಸಮಗ್ರ ಕನ್ನಡಿಗರ ಪರವಾಗಿ ಗೌರವ ಕಾರ್ಯದರ್ಶಿ ನೇ. ಭ. ರಾಮಲಿಂಗಶೆಟ್ಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಹೇಳಿಕೆಯಲ್ಲಿ ಏನಿದೆ?
    ಬಸವರಾಜ ಬೊಮ್ಮಾಯಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆ-ಗರಿಮೆ, ಇತಿಹಾಸವನ್ನು ಮನಗಂಡು, ನಾಡು-ನುಡಿಗೆ ಪರಿಷತ್ತು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಪರಿಗಣಿಸಿ ಹಾಗೂ ಪರಿಷತ್ತಿನ ಚುನಾವಣೆ ಇತಿಹಾಸದಲ್ಲಿ ದಾಖಲೆಯನ್ನು ಸೃಷ್ಟಿಸಿದ ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಗುರಿಯನ್ನಿಟ್ಟುಕೊಂಡು, ಅನೇಕ ಕ್ರಾಂತಿಕಾರಿ ಬದಲಾವಣೆಯ ಮುಖೇನ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಕಾರ್ಯವೈಖರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಕ್ಷಣದಿಂದ ಇಂದಿನಿಂದ ಜಾರಿಗೆ ಬರುವಂತೆ ರಾಜ್ಯ ಸಚಿವರ ದರ್ಜೆಗೆ ಸಮನಾದ ಸ್ಥಾನಮಾನವನ್ನು ನೀಡಿ ಗೌರವಿಸಿರುವುದು ಅತ್ಯಂತ ಸಂತಸದಾಯಕ ವಿಷಯವಾಗಿದೆ. ಇದನ್ನೂ ಓದಿ: ರಸ್ತೆಬದಿ ಕಟ್ಟಡ ಅಂಕುಶಕ್ಕೆ ನಿಯಮ: ಸಚಿವ ಸಿ.ಸಿ.ಪಾಟೀಲ್

    ಕನ್ನಡ ಸಾಹಿತ್ಯ ಪರಿಷತ್ತಿಗೆ ಕನಿಷ್ಠ ಒಂದು ಕೋಟಿ ಸದಸ್ಯತ್ವದ ಗುರಿಯನ್ನು ಹೊಂದಿದ್ದು, ಜನಸಾಮಾನ್ಯರು ಪರಿಷತ್ತಿನ ಸದಸ್ಯರಾಗಬೇಕೆಂಬ ಸದುದ್ದೇಶದಿಂದ ಹಾಗೂ ಗ್ರಾಮಮಟ್ಟಕೆ ಪರಿಷತ್ತನ್ನು ಕೊಂಡೊಯ್ಯಬೇಕೆಂಬ ದೃಷ್ಟಿಯಿಂದ ಸದಸ್ಯತ್ವ ಶುಲ್ಕವನ್ನು 250 ರೂ. ಗಳಿಗೆ ಇಳಿಸಿ ಆನ್‌ಲೈನ್‌ನಲ್ಲೇ ನೋಂದಾಯಿಸಲು ಅತ್ಯಾಧುನಿಕ ತಂತ್ರಜ್ಞಾನದ ಆ್ಯಪ್ ಅನ್ನು ಪರಿಷತ್ತಿಗೆ ಅಳವಡಿಸಿಕೊಂಡಿರುವ, ವಿಶ್ವಾದ್ಯಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಂಡಿರುವ ಹಾಗೂ ಕನ್ನಡ ಶಾಲೆಗಳ ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ಸರ್ಕಾರ ನೀಡಿರುವ ರಾಜ್ಯ ಸಚಿವರ ದರ್ಜೆ ಸ್ಥಾನಮಾನದಿಂದಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕನ್ನಡದ ಕೆಲಸಗಳನ್ನು ಮಾಡಲು ಶಕ್ತಿ ಬಂದಂತಾಗಿದೆ.

    ಸರ್ಕಾರ ರಾಜ್ಯ ಸಚಿವರ ದರ್ಜೆ ಸ್ಥಾನಮಾನದ ಗೌರವ ನೀಡಿರುವುದು ಸಾಹಿತ್ಯ ಪರಿಷತ್ತಿನ ಎಲ್ಲ ಸದಸ್ಯರಿಗೆ ಸಲ್ಲಿಸಿರುವ ಸನ್ಮಾನವಾಗಿದೆ. ಈ ಮೂಲಕ ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಸರ್ಕಾರ ಇಟ್ಟಿರುವ ಭರವಸೆ, ವಿಶ್ವಾಸವನ್ನು ಕಾಪಾಡಿಕೊಂಡು ಹೋಗುವ ಹಾಗೂ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಂಡು ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ಹಿತರಕ್ಷಣೆ ಮತ್ತು ಅಭಿವೃದ್ಧಿಗೆ ಕಟಿಬದ್ಧನಾಗಿರುತ್ತೇನೆ ಎಂಬ ಭಾವನೆಯನ್ನು ಈ ಸುಸದಂರ್ಭದಲ್ಲಿ ಡಾ. ಮಹೇಶ ಜೋಶಿ ಅವರು ವ್ಯಕ್ತಪಡಿಸಿರುತ್ತಾರೆ.

    ಕನ್ನಡಿಗರ ಒತ್ತಾಸೆಯಂತೆ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಘನ ಸಂಸ್ಥೆಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡುವ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಪರಿಷತ್ತಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸದಸ್ಯರಾದಿಯಾಗಿ, ಜಿಲ್ಲಾ, ತಾಲ್ಲೂಕು, ಗಡಿರಾಜ್ಯ, ಹೋಬಳಿ ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರ ಹಾಗೂ ಸಮಗ್ರ ಕನ್ನಡಿಗರ ಪರವಾಗಿ ಪರಿಷತ್ತು ಧನ್ಯವಾದಗಳನ್ನು ಸಲ್ಲಿಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಮದ್ಯ ಕುಡಿಸಿ ರೇಪ್ – ರಾಜಸ್ಥಾನ ಸಚಿವರ ಪುತ್ರನ ವಿರುದ್ಧ FIR

    ಮದ್ಯ ಕುಡಿಸಿ ರೇಪ್ – ರಾಜಸ್ಥಾನ ಸಚಿವರ ಪುತ್ರನ ವಿರುದ್ಧ FIR

    ಜೈಪುರ: ರಾಜಸ್ಥಾನ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಎಫ್‌ಐಆರ್‌ ದಾಖಲಾಗಿದೆ.

    ಕಳೆದ ವರ್ಷ ಜೈಪುರ ಮತ್ತು ದೆಹಲಿಯಲ್ಲಿ 23 ವರ್ಷದ ಯುವತಿಯ ಮೇಲೆ ರೋಹಿತ್ ಜೋಶಿ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೈಪುರ ಮೂಲದ ಯುವತಿಯ ಮೇಲೆ 2021ರ ಜನವರಿ 8 ರಿಂದ ಏಪ್ರಿಲ್ 17ರ ನಡುವೆ ಈ ವರ್ಷದಲ್ಲಿ ಅನೇಕ ಬಾರಿ ರೋಹಿತ್ ಜೋಶಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದ್ದು, ಈ ಕುರಿತಂತೆ ದೆಹಲಿ ಪೊಲೀಸರು ರೋಹಿತ್ ಜೋಶಿ ವಿರುದ್ಧ ಜೀರೋ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

    ಈ ಸಂಬಂಧ ಮೇ 8ರಂದು ಉತ್ತರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 376(ಅತ್ಯಾಚಾರ), 328(ಅಪರಾಧ ಮಾಡುವ ಉದ್ದೇಶದಿಂದ ನೋವುಂಟು ಮಾಡುವುದು, ಇತ್ಯಾದಿ), 312(ಗರ್ಭಪಾತಕ್ಕೆ ಕಾರಣ), 366(ಅಪಹರಣ, ಮಹಿಳೆಯನ್ನು ಅಪಹರಣ ಮಾಡುವುದು ಅಥವಾ ಮದುವೆಗೆ ಒತ್ತಾಯಿಸುವುದು ಇತ್ಯಾದಿ), 377(ಅಸ್ವಾಭಾವಿಕ ಅಪರಾಧಗಳು) ಮತ್ತು 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಕಳೆದ ವರ್ಷ ಫೇಸ್‍ಬುಕ್ ಮೂಲಕ ರೋಹಿತ್ ಜೋಶಿ ಅವರ ಪರಿಚಯವಾಗಿತ್ತು. ಇಬ್ಬರೂ ಜೈಪುರದಲ್ಲಿ ಭೇಟಿಯಾದ್ದೆವು ಮತ್ತು 2021ರ ಜನವರಿ 8 ರಂದು ರಾಜಸ್ಥಾನದ ಸವಾಯಿ ಮಾಧೋಪುರಕ್ಕೆ ನನ್ನನ್ನು ಆಹ್ವಾನಿಸಿದ್ದರು. ನಮ್ಮ ಮೊದಲ ಭೇಟಿಯ ಸಮಯದಲ್ಲಿ ಆತ ಹೆಚ್ಚಿಗೆ ಮದ್ಯ ಕುಡಿದು ಅದರ ಲಾಭ ಪಡೆದ ಮರುದಿನ ಬೆಳಗ್ಗೆ ನಾನು ಎದ್ದಾಗ ಬೆತ್ತಲೆ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸಿದ. ಇದರಿಂದ ನಾನು ಆತಂಕಗೊಂಡು ಅಳಲು ಪ್ರಾರಂಭಿಸಿದೆ ಎಂದು ಯುವತಿ ತಿಳಿಸಿದ್ದಾಳೆ. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು- ಶಾಲೆಯ ಮೇಲೆ ರಷ್ಯಾ ಬಾಂಬ್ ದಾಳಿ, 60 ಮಂದಿ ಸಾವು

    ಮತ್ತೊಮ್ಮೆ ಭೇಟಿಯಾದ ವೇಳೆ ರೋಹಿತ್ ಜೋಶಿ ದೆಹಲಿಯಲ್ಲಿ ನನ್ನ ಮೇಲೆ ದೌರ್ಜನ್ಯವೆಸಗಿದ್ದ. ರೋಹಿತ್ ನಾವಿಬ್ಬರೂ ಪತಿ, ಪತ್ನಿ ಎಂದು ಹೋಟೆಲ್‍ನಲ್ಲಿ ನೋಂದಾಯಿಸಿ ಉಳಿಯುವಂತೆ ಮಾಡಿದ. ನಂತರ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆದರೆ ನಂತರ ಆತ ಕುಡಿದು ನನ್ನನ್ನು ಬೈದ, ಹೊಡೆದ. ನನ್ನ ಅಶ್ಲೀಲ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಯುವತಿ ಆರೋಪಿಸಿದ್ದಾಳೆ.

    2021ರ ಆಗಸ್ಟ್ 11 ರಂದು, ನಾನು ಗರ್ಭಿಣಿಯಾಗಿದ್ದೇನೆ ಎಂದು ಗೊತ್ತಾಯಿತು, ನನಗೆ ಅವನು ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ. ಆದರೆ ನಾನು ತೆಗೆದುಕೊಳ್ಳಲಿಲ್ಲ ಎಂದು ತಿಳಿಸಿದ್ದಾಳೆ.

  • ಕೊರೊನಾ ಮಾರ್ಗಸೂಚಿ ಹೋದ ಮೇಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತೇವೆ: ಜೋಶಿ

    ಕೊರೊನಾ ಮಾರ್ಗಸೂಚಿ ಹೋದ ಮೇಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತೇವೆ: ಜೋಶಿ

    ಹಾವೇರಿ: ಕೊರೊನಾ ಮಾರ್ಗಸೂಚಿಗಳು ಹೋದ ಮೇಲೆ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದರು.

    ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಮಾತನಾಡಿದ ಅವರು, ಸಮ್ಮೇಳನ ನಡೆಸೋ ಸಂಬಂಧ ಈಗಾಗಲೇ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಸಿಎಂ ಮತ್ತು ನಾನು ಹಾವೇರಿ ಜಿಲ್ಲೆಯವರೇ. ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸೋಕೆ ನನಗೂ ಸಾವಿರಪಟ್ಟು ಆಸಕ್ತಿ ಇದೆ ಎಂದು ಹೇಳಿದರು.

    ಎಲ್ಲರನ್ನೂ ಒಗ್ಗೂಡಿಸಿಕೊಂಡು ಐತಿಹಾಸಿಕ ಸಮ್ಮೇಳನ ಮಾಡಲಾಗುವುದು. ಜಿ.ಎಸ್.ಶಿವರುದ್ರಪ್ಪ ನಂತರ ರಾಷ್ಟ್ರಕವಿಗಳ ಆಯ್ಕೆಯಾಗಿಲ್ಲ. ಇಷ್ಟೊತ್ತಿಗಾಗಲೆ ರಾಷ್ಟ್ರಕವಿಗಳ ಆಯ್ಕೆ ಆಗಬೇಕಿತ್ತು. ಚೆಂಬಳಕಿನ ಕವಿ ಡಾ.ಚನ್ನವೀರ ಕಣವಿ ಅವರು ರಾಷ್ಟ್ರಕವಿ ಆಗಬೇಕು. ಅವರ ಆರೋಗ್ಯ ಸರಿ ಇದ್ದಾಗಲೆ ಕೊಡಬೇಕಿತ್ತು. ಈಗ ಕೊನೆ ಗಳಿಗೆಯಲ್ಲಿ ಅವರಿಗೆ ದೊಡ್ಡ ಗೌರವ ಕೊಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ:  ಬಿಜೆಪಿಯನ್ನ ಬಿಡಿ, ನಿಮ್ಮ ಮನೆಯಲ್ಲಿ ಎಷ್ಟು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ: HDKಗೆ ಅಶ್ವಥ್ ಟಾಂಗ್

    ಹಿಜಾಬ್ ವರ್ಸಸ್ ಕೇಸರಿ ಪ್ರಕರಣವು ಕೋರ್ಟ್‍ನಲ್ಲಿದೆ. ಕೋರ್ಟ್ ಹೇಳಿದ್ದನ್ನ ಎಲ್ಲರೂ ಪಾಲಿಸಲೇಬೇಕು. ಕೋರ್ಟ್ ತೀರ್ಪಿಗೆ ವಿರೋಧ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

  • ಚಂಪಾ ನಿಧನ ನಾಡಿಗೆ ತುಂಬಲಾರದ ನಷ್ಟ: ನಾಡೋಜ ಡಾ. ಮಹೇಶ್‌ ಜೋಶಿ

    ಚಂಪಾ ನಿಧನ ನಾಡಿಗೆ ತುಂಬಲಾರದ ನಷ್ಟ: ನಾಡೋಜ ಡಾ. ಮಹೇಶ್‌ ಜೋಶಿ

    ಬೆಂಗಳೂರು: ನಾಡಿನ ಹಿರಿಯ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದ ಪ್ರೊ. ಚಂದ್ರಶೇಖರ್‌ ಪಾಟೀಲ್ ಅವರ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್‌ ಜೋಶಿ ಹೇಳಿಕೆ ಬಿಡುಗಡೆ ಮಾಡಿ ಸಂತಾಪ ಸೂಚಿಸಿದ್ದಾರೆ.

    ಹೇಳಿಕೆಯಲ್ಲಿ ಏನಿದೆ?:
    ಪ್ರಾಧ್ಯಾಪಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಚಂದ್ರಶೇಖರ್‌ ಪಾಟೀಲ್ ಅವರು ಚಂಪಾ ಎಂದೇ ಪ್ರಸಿದ್ಧರಾಗಿದ್ದರು. ಅವರು ಸಂಕ್ರಮಣ ಪತ್ರಿಕೆಯ ಸಂಪಾದಕರಾಗಿ, ಅಂಕಣಕಾರರಾಗಿ, ಲೇಖಕರಾಗಿ ಬಂಡಾಯ, ನವೋದಯ ಸಾಹಿತ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಅನೇಕ ಕನ್ನಡಪರ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಚಂಪಾ ಅವರು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

    ಗೋಕಾಕ ಚಳವಳಿ ಮುಂತಾದ ಅನೇಕ ಜನಪರ ಚಳವಳಿಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಚಂಪಾ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸವನ್ನೂ ಸಹ ಅನುಭವಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಚಂಪಾ ಅವರು ಪುಸ್ತಕ ಸಂತೆಯನ್ನು ಏರ್ಪಡಿಸಿ ಸಣ್ಣ ಪ್ರಮಾಣದ ಪ್ರಕಾಶಕರನ್ನು ಉತ್ತೇಜಿಸುವ ಕೆಲಸ ಮಾಡಿದ್ದರು. ಗಡಿನಾಡ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಅಧ್ಯಕ್ಷರ ಪುಸ್ತಕ ನಿಧಿಯನ್ನು ಪ್ರಾರಂಭಿಸಿ ನೆರವಾಗಿದ್ದರು. ಇದನ್ನೂ ಓದಿ: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್‌ ನಿಧನ

    ಇವರ ಸಾಹಿತ್ಯ ಕೃಷಿಗೆ, ನಾಡು-ನುಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಆಳ್ವಾಸ್ ನುಡಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ಸಂದಿವೆ. ಮೈಸೂರಿನಲ್ಲಿ ಜರುಗಿದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನೀಡಿ ಪರಿಷತ್ತು ಗೌರವಿಸಿತ್ತು. ಇದನ್ನೂ ಓದಿ: ಇಂದಿನಿಂದ ಬೂಸ್ಟರ್ ಡೋಸ್ – ಯಾರು ಪಡೆಯಬಹುದು? ಅರ್ಹತೆ ಏನು?

    ಕನ್ನಡ ಕನ್ನಡ ರ‍್ರಿ ನಮ್ಮ ಸಂಗಡ ಎಂದು ಎಲ್ಲರನ್ನೂ ಕನ್ನಡದ ಕಾಯಕದಲ್ಲಿ ಒಳಗೊಳ್ಳುವಂತೆ ಪ್ರೇರೆಪಿಸುತ್ತಿದ್ದ ಪ್ರೊ. ಚಂಪಾ ಅವರ ನಿಧನದಿಂದಾಗಿ ನಾಡಿಗೆ ಅಪಾರ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಚಂಪಾ ಅವರ ಕುಟುಂಬಕ್ಕೆ, ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.