Tag: Mahendra Singh Dhoni

  • ಬ್ರ್ಯಾಂಡ್ ಮೌಲ್ಯ: ಕೊಹ್ಲಿಯೇ ನಂಬರ್ 1

    ಬ್ರ್ಯಾಂಡ್ ಮೌಲ್ಯ: ಕೊಹ್ಲಿಯೇ ನಂಬರ್ 1

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 2020ರ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಮೂಲಕ ಬರೋಬ್ಬರಿ 1735 ಕೋಟಿ ರೂ. ಬ್ರ್ಯಾಂಡ್ ಮೌಲ್ಯದ ಒಡೆಯನಾಗಿ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

    ಕಳೆದ ನಾಲ್ಕುವರ್ಷಗಳಿಂದ ಭಾರತದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂಬರ್ ಸ್ಥಾನದಲ್ಲಿರುವ ಕೊಹ್ಲಿ ಆಫ್ ದಿ ಫೀಲ್ಡ್ ನಲ್ಲೂ ಕಿಂಗ್ ಆಗಿ ಮೆರೆದಾಡುತ್ತಿದ್ದಾರೆ.

    ಕೊಹ್ಲಿ ಜೊತೆ ಭಾರತ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ 866 ಕೋಟಿ ಮತ್ತು ರಣವೀರ್ ಸಿಂಗ್ 750 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಸಂಪಾದಿಸಿಕೊಂಡು ಭಾರತದ ಶ್ರೀಮಂತ ಸೆಲೆಬ್ರಿಟಿಗಳಾಗಿ ಕಾಣಿಸಿಕೊಂಡಿದ್ದಾರೆ.

    ಕೊರೊನಾದಿಂದಾಗಿ ಎಲ್ಲಾ ಸೆಬ್ರಿಟಿಗಳ ಬ್ರ್ಯಾಂಡ್ ಮೌಲ್ಯ ಕುಸಿತ ಕಂಡರೆ, ಕೊಹ್ಲಿಯ ಬ್ರ್ಯಾಂಡ್ ಮೌಲ್ಯದಲ್ಲಿ ಯಾವುದೇ ರೀತಿಯ ದೊಡ್ಡ ಬದಲಾವಣೆಗಳಾಗದೆ ಹಾಗೆ ಉಳಿದುಕೊಂಡಿದೆ ಎಂದು ಬ್ರ್ಯಾಂಡ್ ಮೌಲ್ಯಮಾಪನ ಮಾಡಿರುವ ಡಫ್ ಮತ್ತು ಪೆಲ್ಪ್ಸ್ ಸಂಸ್ಥೆ ತಿಳಿಸಿದೆ. ಕೊಹ್ಲಿ 30 ಕ್ಕಿಂತಲೂ ಅಧಿಕ ಬ್ರ್ಯಾಂಡ್ ಕಂಪನಿಗಳ ಜೊತೆ ಕಾಣಿಸಿಕೊಂಡು ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.


    ಶ್ರೀಮಂತ ಪಟ್ಟಿಯಲ್ಲಿರುವ ಹತ್ತು ಪ್ರಮುಖ ಸೆಲೆಬ್ರಿಟಿಗಳ ಲೀಸ್ಟ್‍ನಲ್ಲಿ ಕೊಹ್ಲಿ ಒಬ್ಬರೆ ಕ್ರೀಡಾ ಕ್ಷೇತ್ರದ ಪ್ರತಿನಿಧಿಯಾಗಿದ್ದು ಇನ್ನುಳಿದ ಎಲ್ಲ ಸ್ಥಾನಗಳು ಚಲನಚಿತ್ರದ ತಾರೆಯರ ಪಾಲಾಗಿದೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 36 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ 11 ನೇ ಸ್ಥಾನ ಪಡೆದುಕೊಂಡಿದ್ದಾರೆ.

  • ಇನ್ನೂ ಯಾರೂ ಸರಗಟ್ಟಿಲ್ಲ ಮಾಹಿಯ 5 ವಿಶ್ವ ದಾಖಲೆ

    ಇನ್ನೂ ಯಾರೂ ಸರಗಟ್ಟಿಲ್ಲ ಮಾಹಿಯ 5 ವಿಶ್ವ ದಾಖಲೆ

    ನವದೆಹಲಿ: ಭಾರತದ ಕ್ರಿಕೆಟ್ ಮಾಂತ್ರಿಕ, ದಂತ ಕಥೆ ಎಂದೆಲ್ಲ ಮೆಚ್ಚುಗೆಗೆ ಪಾತ್ರವಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ 5 ವಿಶ್ವ ದಾಖಲೆಗಳನ್ನು ಇನ್ನೂ ಯಾರೂ ಸರಗಟ್ಟಿಲ್ಲ.

    ಇದೀಗ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಅವರು ಗುಡ್ ಬೈ ಹೇಳಿದ್ದು, ಅಭಿಮಾನಿಗಳಲ್ಲಿ ಭಾರೀ ನಿರಾಸೆಯನ್ನುಂಟು ಮಾಡಿದೆ. ಟೆಸ್ಟ್ ಕ್ರಿಕೆಟ್‍ಗೆ ಧೋನಿ 2014ರಲ್ಲಿ ನಿವೃತ್ತಿ ಘೋಷಿಸಿದ ಧೋನಿ ಶನಿವಾರ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಆದರೆ ಐಪಿಎಲ್‍ಬಲ್ಲಿ ಧೋನಿ ಆಟವಾಡುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ.

    1. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ
    ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ನಡೆದ ಟಿ-20 ವಿಶ್ವಕಪ್‍ನ ಆರಂಭಿಕ ಪಂದ್ಯದಲ್ಲೇ ಗೆಲುವು ಸಾಧಿಸುವ ಮೂಲಕ ಗೆಲುವಿನ ಖಾತೆಯನ್ನು ತೆರೆಯಿತು. ಇದಾದ ಬಳಿಕ 2011ರ ಏಕದಿನ ವಿಶ್ವಕಪ್ 2013ರ ಐಸಿಸಿ ಚಾಂಪಿಯನ್ಸ್ ಟ್ರೋಪಿಯಲ್ಲಿ ಸಹ ಗೆಲವು ಸಾಧಿಸಿದೆ.

    2. ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳ ನಾಯಕ
    ಮಾಹಿ ಒಟ್ಟು 332 ಅಂತರಾಷ್ಟ್ರೀಯ ಪಂದ್ಯಗಳ ನಾಯಕತ್ವ ವಹಿಸಿದ್ದು, 200 ಏಕದಿನ, 60 ಟೆಸ್ಟ್ ಹಾಗೂ 72 ಟಿ 20 ಪಂದ್ಯಗಳಲ್ಲಿ ತಮ್ಮ ನಾಯಕತ್ವದ ಜಾಣತನ ತೋರಿಸಿದ್ದಾರೆ. ಇದು ಸಹ ವಿಶ್ವ ದಾಖಲೆಯಾಗಿದೆ. ಈವರೆಗೆ ಇದನ್ನು ಯಾರೂ ಸರಗಟ್ಟಿಲ್ಲ. ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ 324 ಅಂತರಾಷ್ಟ್ರೀಯ ಪಂದ್ಯಗಳಿಗೆ ನಾಯಕರಾಗಿದ್ದರು. ಅಲ್ಲದೆ ಧೋನಿ ಮೂರು ಮಾದರಿಯ ಮಧ್ಯಗಳ ಪೈಕಿ ಎಲ್ಲದರಲ್ಲೂ 50 ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

    3. ಹೆಚ್ಚು ಏಕದಿನ ಪಂದ್ಯಗಳಲ್ಲಿ ನಾಟ್‍ಔಟ್
    ಮಾಹಿ 84 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ನಾಟ್‍ಔಟ್ ಆಗಿ ಉಳಿದುಕೊಂಡಿದ್ದಾರೆ. ಇದು ಸಹ ಮತ್ತೊಂದು ವಿಶ್ವ ದಾಖಲೆಯಾಗಿದೆ. ಇದರಲ್ಲಿ ಎರಡನೇ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಆಲ್‍ರೌಂಡರ್ ಶಾನ್ ಪೊಲಾಕ್ ಪಡೆದಿದ್ದು, 72 ಬಾರಿ ಔಟಾಗದೇ ಉಳಿದಿದ್ದಾರೆ.

    4. ಹೆಚ್ಚು ಸ್ಟಂಪಿಂಗ್
    ಧೋನಿ ಎಂದರೆ ಸ್ಟಂಪಿಂಗ್‍ನಲ್ಲಿ ಎಕ್ಸ್‍ಪರ್ಟ್. ಮಿಂಚಿನ ವೇಗದಲ್ಲಿ ಬಾಲ್ ಅನ್ನು ಸ್ಟಂಪ್‍ಗೆ ತಾಗಿಸುತ್ತಾರೆ. ಒಟ್ಟು 350 ಪಂದ್ಯಗಳಲ್ಲಿ ಧೋನಿ ಹೆಸರಲ್ಲಿ 123 ಆಟಗಾರರು ಸ್ಟಂಪ್ ಮಾಡಿದ್ದಾರೆ. 100 ಅಂತರಾಷ್ಟ್ರೀಯ ಸ್ಟಂಪಿಂಗ್‍ಗಳನ್ನು ಮಾಡಿದ ಏಕೈಕ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಮಾಹಿಯದ್ದು. ಒಟ್ಟು ಸ್ಟಂಪಿಂಗ್‍ನಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ ಹಾಗೂ ಆಸ್ಟ್ರೇಲಿಯಾದ ಆಡಮ್ ಗಿಲ್‍ಕ್ರಿಸ್ಟ್ ಧೋನಿ ನಂತರದ ಸ್ಥಾನವನ್ನು ಪಡೆದಿದ್ದಾರೆ.

    5. ನಾಯಕನಾಗಿ ಫೈನಲ್ ಗೆಲುವು
    ಧೋನಿ 6 ಅಂತರಾಷ್ಟ್ರೀಯ ಫೈನಲ್ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದು, ಇದರಲ್ಲಿ ಭಾರತ ನಾಲ್ಕು ಬಾರಿ ಜಯಗಳಿಸಿದೆ. ಈ ಮೂಲಕ ಧೋನಿ ಅಂತರಾಷ್ಟ್ರೀಯ ಏಕದಿನ ಪಂದ್ಯಗಳ ಯಶಸ್ಸಿನ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ತಂಡದ ನಾಯಕನಾಗಿ ಧೋನಿ ಒಟ್ಟು 110 ಏಕದಿನ ಪಂದ್ಯಗಳಲ್ಲಿ ತಂಡವನ್ನು ಜಯದತ್ತ ಕೊಂಡೊಯ್ದಿದ್ದಾರೆ. ಇದರಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದು, ರಿಕ್ಕಿ ಪಾಂಟಿಂಗ್ 165 ಏಕದಿನ ಪಂದ್ಯಗಳಲ್ಲಿ ತಂಡವನ್ನು ಜಯಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

  • 2011ರ ವಿಶ್ವಕಪ್ ಫೈನಲ್ -ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ಯಾಕೆ?

    2011ರ ವಿಶ್ವಕಪ್ ಫೈನಲ್ -ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ಯಾಕೆ?

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕೂಲ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಕೂಲ್ ನಾಯಕ ಧೋನಿಯನ್ನು ಹಿಂಬಾಲಿಸುವ ಮೂಲಕ ಸುರೇಶ್ ರೈನಾ ಅಭಿಮಾನಿಗಳಿಗೆ ಶಾಕ್ ನೀಡಿದ್ರು. 2011ರ ವಿಶ್ವಕಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಯಾಕೆ ಎಂಬುದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡಲ್ಕೂರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

    ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸುವ ಮೂಲಕ ಎರಡನೇ ಬಾರಿ ಏಕದಿನ ವಿಶ್ವಕಪ್ ಗೆದ್ದಿತ್ತು. ಅಂದಿನ ನಾಯಕ ಎಂ.ಎಸ್.ಧೋನಿ ಅಜೇಯ 91 ರನ್, ಅದರಲ್ಲೂ ವಿಶೇಷವಾಗಿ ಫಿನಿಶಿಂಗ್ ಶಾಟ್ ಸಿಕ್ಸರ್ ಅನ್ನು ಸಿಡಿಸಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದ್ದರು. ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಉತ್ತಮ ಆಲ್‍ರೌಂಡರ್ ಪ್ರದರ್ಶನ ನೀಡುತ್ತಲೇ ಬಂದಿದ್ದರೂ ಧೋನಿ ಯುವರಾಜ್ ಸಿಂಗ್ ಅವರಿಗಿಂತ ಹೆಚ್ಚು ಕೀರ್ತಿಯನ್ನು ಪಡೆದಿದ್ದು ಯಾಕೆ ಎಂಬುದರ ಬಗ್ಗೆ ಈ ಹಿಂದೆ ಹಲವು ಬಾರಿ ಚರ್ಚೆಗಳು ನಡೆದಿವೆ.

    ಈ ಎಲ್ಲಾ ಪ್ರಶ್ನೆಗಳಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮಾಧ್ಯಮವೊಂದರ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಸಚಿನ್, ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಕ್ವಾರ್ಟರ್ ಫೈನಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಅವರು 5ನೇ ಕ್ರಮಾಂಕ, ನಾಯಕ ಧೋನಿ 6ನೇ ಕ್ರಮಾಂಕ ಮತ್ತು ಸುರೇಶ್ ರೈನಾ 7ನೇ ಕ್ರಮಾಂಕದಲ್ಲಿ ಬ್ಯಾಂಟಿಗ್ ಮಾಡಿದ್ದರು ಎಂದು ತಿಳಿಸಿದ್ದರು.

    ಟೀಂ ಇಂಡಿಯಾ ವೇಗದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಫೈನಲ್ ಪಂದ್ಯದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ವಿರೇಂದ್ರ ಸೆಹ್ವಾಗ್ ಉಪುಲ್ ತರಂಗ ಅವರ ಅದ್ಭುತ ಕ್ಯಾಚ್ ಪಡೆದಿದ್ದರು. ಈ ಮೂಲಕ ನಾವು ಶ್ರೀಲಂಕಾವನ್ನು 274 ರನ್‍ಗಳಿಗೆ ಕಟ್ಟಿ ಹಾಕಿದ್ದೆವು. ಆದರೆ ಏಕಾಂಗಿ ಹೋರಾಟ ನಡೆಸಿದ್ದ ಮಹೇಲಾ ಜಯವರ್ಧನೆ 103 ರನ್ ಚಚ್ಚಿದ್ದರು ಎಂದು ನೆನಪು ಮಾಡಿಕೊಂಡಿದ್ದರು.

    ಕ್ವಾರ್ಟರ್-ಫೈನಲ್ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನನ್ನ ಮತ್ತು ವೀರು ಜೊತೆಯಾಟದ ನಂತರ ನಾನು ಡ್ರೆಸ್ಸಿಂಗ್ ಕೋಣೆಗೆ ಮರಳಿದೆ. ಆಗ ಫಿಸಿಯೋ ಟೇಬಲ್‍ನಲ್ಲಿ ಮಲಗಿದೆ. ವೀರು ನನ್ನ ಪಕ್ಕದಲ್ಲಿದ್ದರು. ಆಸೀಸ್ ವಿರುದ್ಧ ಗೆಲವು ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಾಗ ಸಂತೋಷ ಇಮ್ಮಡಿಯಾಗಿತ್ತು. ಆಗ ನೀವು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಿ ಎಲ್ಲೂ ಹೋಗಬೇಡಿ ಅಂತ ಸೆಹ್ವಾಗ್ ಅವರಿಗೆ ನಾನು ಹೇಳಿದ್ದೆ ಎಂದು ಸಚಿನ್ ನೆನಪನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದರು.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೌತಮ್ ಮತ್ತು ವಿರಾಟ್ ಉತ್ತಮ ಜೊತೆಯಾಟ ನಡೆದಿತ್ತು. ಎದುರಾಳಿ ತಂಡಕ್ಕಿಂತ ಕೆಲವು ಹೆಜ್ಜೆ ಮುಂದಿಡಲು ನಾವು ಬಯಸಿದ್ದೇವೆ. ಈ ವೇಳೆ ನಾನು ವೀರೂಗೆ, `ಎಡಗೈ ಬ್ಯಾಟ್ಸ್‍ಮನ್ ಗೌತಮ್ ವಿಕೆಟ್ ಒಪ್ಪಿಸಿ ಹೊರ ಬಂದರೆ ಎಡಗೈ ಬ್ಯಾಟ್ಸ್‍ಮನ್ ಯುವಿ ಒಳಗೆ ಹೋಗಬೇಕು. ಒಂದು ವೇಳೆ ಬಲಗೈ ಬ್ಯಾಟ್ಸ್‍ಮನ್ ವಿರಾಟ್ ಹೊರಬಂದರೆ ಬಲಗೈ ಬ್ಯಾಟ್ಸ್‍ಮನ್ ಧೋನಿ ಬ್ಯಾಟಿಂಗ್‍ಗೆ ಇಳಿಯಬೇಕು’ ಎಂದು ಸಲಹೆ ನೀಡಿದ್ದೆ. ಹೀಗಾಗಿ ವಿರಾಟ್ ವಿಕೆಟ್ ಒಪ್ಪಿಸಿ ಹೊರ ಬಂದಿದ್ದರಿಂದ ಯುವಿಯನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಡ್ರಾಫ್ಟ್ ಮಾಡಲಾಯಿತು. ಏಕೆಂದರೆ ಬಲಗೈ, ಎಡಗೈ ಬ್ಯಾಟಿಂಗ್ ಸಂಯೋಜನೆ ಇರುವುದು ಮುಖ್ಯವಾಗಿತ್ತು. ಯುವಿ ಪ್ರಚಂಡ ರೂಪದಲ್ಲಿದ್ದರು. ಆದರೆ ಶ್ರೀಲಂಕಾದಲ್ಲಿ ಇಬ್ಬರು ಆಫ್ ಸ್ಪಿನ್ನರ್‍ಗಳು ಇದ್ದರು. ಆದ್ದರಿಂದ ಕಾರ್ಯತಂತ್ರದಲ್ಲಿ ಬದಲಾವಣೆ ಇರುತ್ತದೆ ಎಂದು ನಾನು ಭಾವಿಸಿದ್ದೆ ಎಂದು ಸಚಿನ್ ತಂತ್ರಗಾರಿಕೆ ರಿವೀಲ್ ಮಾಡಿದ್ದರು.

    ಈ ತಂತ್ರವನ್ನು ಅನುಸರಿಸುವಂತೆ ಸಲಹೆ ನೀಡಲು ಗ್ಯಾಲರಿ ಹೊರಗೆ ಕುಳಿತಿದ್ದ ಎಂ.ಎಸ್.ಧೋನಿ ಕಡೆಗೆ ತಿರುಗಿ ನೋಡಿದೆ. ಆಗ ಧೋನಿ ನನ್ನ ಬಳಿಗೆ ಬಂದಾಗ ವೀರು, ಕೋಚ್ ಗ್ಯಾರಿ ಕಸ್ಟರ್ನ್ ಹಾಗೂ ನಾನು ಅದರ ಬಗ್ಗೆ ಮಾತನಾಡಿದ್ದೆವು. ಗ್ಯಾರಿ ಸಹ ಒಪ್ಪಿದ್ದರು. ಆಗ ಮೈದಾನಕ್ಕಿಳಿಯಲು ಧೋನಿ ಸಿದ್ಧರಾದರು ಎಂದು ತಿಳಿಸಿದ್ದರು.

  • ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಧೋನಿ ವಿದಾಯ

    ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಧೋನಿ ವಿದಾಯ

    ನವದೆಹಲಿ: ಭಾರತಕ್ಕೆ ಟಿ 20 ವಿಶ್ವಕಪ್, ವಿಶ್ವಕಪ್ , ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.

    ಈ ಮೂಲಕ 15 ವರ್ಷಗಳ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜರ್ನಿಗೆ ವಿದಾಯ ಹೇಳಿದಂತಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕೀಪರ್ ಆಗಿ ತಮ್ಮ ಮಿಂಚಿನ ಕೈಚಳಕದ ಮೂಲಕವೇ ಕ್ರಿಕೆಟ್ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡುತ್ತಿದ್ದರು.

    38 ವರ್ಷದ ಎಂ.ಎಸ್.ಧೋನಿ 2019ರ ವಿಶ್ವ ಕಪ್‍ನ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲನುಭವಿಸಿದ ಪಂದ್ಯದಲ್ಲಿ ಕೊನೇಯದಾಗಿ ಆಟವಾಡಿದ್ದರು. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಧೋನಿ ಈ ವರೆಗೆ 350 ಏಕದಿನ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ.

    350 ಏಕದಿನ ಪಂದ್ಯಗಳಲ್ಲಿ ಧೋನಿ 10,773 ರನ್‍ಗಳನ್ನು ಕಲೆ ಹಾಕಿದ್ದಾರೆ. 10 ಶತಗಳನ್ನು ಬಾರಿಸಿದ್ದಾರೆ. ಅಲ್ಲದೆ, 73 ಅರ್ಧ ಶತಕ ಹೊಡೆದಿದ್ದಾರೆ. ಅಲ್ಲದೆ 98 ಟಿ-20 ಪಂದ್ಯಗಳಲ್ಲಿ 1,617 ರನ್‍ಗಳನ್ನು ಗಳಿಸಿದ್ದು, ಎರಡು ಅರ್ಧ ಶತಕ ಬಾರಿಸಿದ್ದಾರೆ.

     

    View this post on Instagram

     

    Thanks a lot for ur love and support throughout.from 1929 hrs consider me as Retired

    A post shared by M S Dhoni (@mahi7781) on

    ಜನವರಿ 2019ರಂದು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದ ಧೋನಿ, ಏಕದಿನ ಪಂದ್ಯದ ಇತಿಹಾಸದಲ್ಲೇ 10 ಸಾವಿರ ರನ್ ಗಳಿಸಿದವರ ಪೈಕಿ 12ನೇ ಸ್ಥಾನದಲ್ಲಿದ್ದರು. ಅಲ್ಲದೆ ಏಕದಿನ ಪಂದ್ಯದಲ್ಲಿ 10 ಸಾವಿರ ರನ್ ಗಳಿಸಿದ ಭಾರತೀಯರ ಪೈಕಿ 5ನೇ ಸ್ಥಾನ ಪಡೆದಿದ್ದರು.

    ಧೋನಿಯವರ ನಾಯಕತ್ವದಲ್ಲಿ ಭಾರತಕ್ಕೆ ಮೂರು ಟ್ರೋಫಿ ಬಂದಿದ್ದು, 2011ರ ಏಕದಿನ ವಿಶ್ವಕಪ್, 2007ರ ಟಿ-20 ವಿಶ್ವಕಪ್ ಹಾಗೂ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ತಂದುಕೊಟ್ಟಿದ್ದಾರೆ.

    ಅಭಿಮಾನಿಗಳಿಗೆ ಮತ್ತೊಂದು ಸಂತಸ ವಿಚಾರವೆಂದರೆ ಐಪಿಎಲ್‍ನಲ್ಲಿ ಧೋನಿ ಆಟವಾಡಲಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಧೋನಿ, ನಿಮ್ಮ ಪ್ರೀತಿ, ಬೆಂಬಲಕ್ಕೆ ತುಂಬು ಹೃದಯದ ಧನ್ಯವಾದಗಳು. ನಾನು ನಿವೃತ್ತಿಯಾಗಿದ್ದೇನೆಂದು ಪರಿಗಣಿಸಿ ಎಂದು ಬರೆದುಕೊಂಡಿದ್ದಾರೆ.

  • ನಮ್ಮಿಬ್ಬರ ಎಲ್ಲ ಸಮಸ್ಯೆಗಳಿಗೆ ಧೋನಿಯೇ ಪರಿಹಾರ: ಚಹಲ್

    ನಮ್ಮಿಬ್ಬರ ಎಲ್ಲ ಸಮಸ್ಯೆಗಳಿಗೆ ಧೋನಿಯೇ ಪರಿಹಾರ: ಚಹಲ್

    – ಧೋನಿ ಬಗ್ಗೆ ಚಹಲ್ ಮನದಾಳದ ಮಾತು

    ನವದೆಹಲಿ: ನನ್ನ ಮತ್ತು ಕುಲ್ದೀಪ್ ಯಾದವ್ ಸಮಸ್ಯೆಗಳಿಗೆ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬಳಿ ಪರಿಹಾರ ಸಿಗುತ್ತೆ ಎಂದು ಸ್ಪಿನ್ನರ್ ಯುಜುವೇಂದ್ರ ಚಹಲ್ ಹೇಳಿದ್ದಾರೆ.

    ರಾಷ್ಟ್ರೀಯ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಚಹಲ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಧೋನಿ ನಮ್ಮ ಪ್ರಾಬ್ಲಂ ಸಾಲ್ವರ್. ಹಲವು ಬಾರಿ ಮೈದಾನದಲ್ಲಿ ಧೋನಿ ನಮ್ಮ ಸಮಸ್ಯೆಯನ್ನ ಪರಿಹರಿಸಿದ್ದಾರೆ. ಇಂತಹ ಘಟನೆಗಳು ಹಲವು ಬಾರಿ ನಡೆದಿವೆ. ಪಂದ್ಯದ ವೇಳೆ ಧೋನಿ ನೀಡುವ ಸಲಹೆಗಳಿಂದಲೇ ವಿಕೆಟ್ ಪಡೆದಿದ್ದೇನೆ. ಯಾರಿಗೆ, ಯಾವಾಗ, ಹೇಗೆ ಬೌಲಿಂಗ್ ಮಾಡಬೇಕೆಂಬುದರ ಕುರಿತು ಧೋನಿ ನೀಡುವ ಸಲಹೆಗಳು ತಂಡದ ಗೆಲುವಿಗೆ ಕಾರಣವಾಗಿರುತ್ತೆ ಎಂದಿದ್ದಾರೆ.

    ಭಾರತ ಮಹೇಂದ್ರ ಸಿಂಗ್ ಧೋನಿ ಎಂಬ ಅದ್ಭುತ ಕ್ರೀಡಾಪಟುವನ್ನು ನೀಡಿದೆ. ಪಂದ್ಯದ ವೇಳೆ ನನಗೆ ಮತ್ತು ಕುಲ್ದೀಪ್ ಗೆ ಸಲಹೆ ನೀಡುತ್ತಿರುತ್ತಾರೆ. ಬ್ಯಾಟ್ಸಮನ್ ಗಳು ನಮ್ಮ ಬೌಲಿಂಗ್ ನಲ್ಲಿ ಸಿಕ್ಸ್ ಮತ್ತು ಫೋರ್ ಬಾರಿಸುತ್ತಿದ್ರೆ, ನಮ್ಮ ಬಳಿ ಬಂದು ಹೆಗಲ ಮೇಲೆ ಕೈ ಇಟ್ಟು, ಗೂಗ್ಲಿ ಎಸೆ, ಈತನಿಗೆ ಆಡಲು ಆಗಲ್ಲ ಅಂತಾ ಹೇಳ್ತಾರೆ. ಧೋನಿ ಸಲಹೆಯಂತೆ ಗೂಗ್ಲಿ ಎಸೆದಾಗ ನಾನು ವಿಕೆಟ್ ಪಡೆದಿದ್ದೇನೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.

    ಸೌಥ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಸಲಹೆಯಂತೆ ಬೌಲಿಂಗ್ ಮಾಡಿದ್ದರಿಂದ 5 ವಿಕೆಟ್ ಪಡೆಯಲು ಸಾಧ್ಯವಾಯ್ತು. ಜೆಪಿ ಡುಮಿನಿ ಬಹಳ ಸಮಯದವರೆಗೆ ಕ್ರಿಸ್ ನಲ್ಲಿದ್ದರು. ಅವರ ವಿಕೆಟ್ ಪಡೆಯಬೇಕೆಂದು ಕಾಯುತ್ತಿದ್ದೆ. ಆ ವೇಳೆ ಧೋನಿ, ನೇರವಾಗಿ ಸ್ಟಂಪ್ ಗುರಿಯಾಗಿಸಿ ಬಾಲ್ ಎಸೆಯಲು ಹೇಳಿದ್ರು. ಅವರ ಮಾತು ಕೇಳಿ ಸ್ಟಂಪ್‍ಗೆ ಬಾಲ್ ಎಸೆದಾಗ ಡುಮಿನಿ ಎಲ್‍ಬಿಡಬ್ಲ್ಯೂ ಆಗಿ ಔಟಾದರು ಎಂದು ಹೇಳಿದರು.

  • ಬರ್ತ್ ಡೇ ಸಂಭ್ರಮದಲ್ಲಿ ಧೋನಿ- 40 ಆದ್ರೂ ಫಿಟ್ ಆಗಿರೋ ‘ಎಂಎಸ್‍ಡಿ’ ಸೀಕ್ರೆಟ್ ಇಲ್ಲಿದೆ

    ಬರ್ತ್ ಡೇ ಸಂಭ್ರಮದಲ್ಲಿ ಧೋನಿ- 40 ಆದ್ರೂ ಫಿಟ್ ಆಗಿರೋ ‘ಎಂಎಸ್‍ಡಿ’ ಸೀಕ್ರೆಟ್ ಇಲ್ಲಿದೆ

    ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಯಸ್ಸು 40 ಆದ್ರೂ ಧೋನಿ ಯಾವ ಯುವಕರಿಗೆ ತಾವೇನು ಕಡಿಮೆ ಇಲ್ಲ ಅನ್ನೋದನ್ನ ಕ್ರೀಡಾಂಗಣದಲ್ಲಿ ಪ್ರೂವ್ ಮಾಡುತ್ತಿರುತ್ತಾರೆ. ಒಮ್ಮೆ ಧೋನಿಯ ಚಿರತೆ ಓಟ ಕಂಡು ಸಹ ಆಟಗಾರರು ಶಾಕ್ ಆಗಿದ್ದರು.

    ಧೋನಿ ತಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ದೇಹ ದಂಡನೆ, ನಿಯಮಿತ ಆಹಾರ ಹೀಗೆ ಹಲವು ವಿಧಾನಗಳನ್ನು ಧೋನಿ ಅಳವಡಿಸಿಕೊಂಡಿದ್ದಾರೆ. ಇಂದು ಧೋನಿ ಹುಟ್ಟುಹಬ್ಬದ ಹಿನ್ನೆಲೆ ಹೆಲ್ತ್ ಸೀಕ್ರೆಟ್ ಇಲ್ಲಿದೆ.

    ಸದೃಢ ದೇಹಕ್ಕಾಗಿ ಧೋನಿ ತಮ್ಮ ಕೆಲ ಸಮಯವನ್ನು ಜಿಮ್ ನಲ್ಲಿ ಕಳೆಯುತ್ತಾರೆ. ಈ ಹಿಂದೆ ಒಂದು ಸಂದರ್ಶನದಲ್ಲಿ ತಾವು ಒನ್ ಲೆಗ್ ಡೆಡ್ ಲಿಫ್ಟ್, ರಿವರ್ಸ್ ಲಂಗ್ಸ್, ಲ್ಯಾಟರಲ್ ಪುಲ್ ಡೌನ್, ವಿ ಗ್ರೂಪ್ ಪುಲ್ ಡೌನ್, ಡಬಲ್ ಲಂಗ್ಸ್, ಡಬಲ್ ಚೆಸ್ಟ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕೇವಲ ಜಿಮ್ ನಲ್ಲಿ ದೇಹ ದಂಡಿಸದೇ ಕ್ರೀಡಾಂಗಣದಲ್ಲಿಯೂ ಧೋನಿ ಕಾಣಿಸಿಕೊಳ್ಳುತ್ತಾರೆ. ಕ್ರಿಕೆಟ್ ಜೊತೆಗೆ ಫುಟ್ಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್ ಆಟಗಳನ್ನು ಧೋನಿ ಆಡುತ್ತಾರೆ.

    ಡಯಟ್ ಫುಡ್: ಪ್ರತಿದಿನ ಬೆಳಗ್ಗೆ ಬ್ರೆಡ್ ಅಥವಾ ಪರೋಟಾ ಜೊತೆ ಒಂದು ಗ್ಲಾಸ್ ಹಾಲು ಕುಡಿಯಲು ಧೋನಿ ಇಷ್ಟಪಡುತ್ತಾರೆ. ದೇಹ ದಂಡನೆ ಬಳಿಕ ಪ್ರೋಟಿನ್‍ನಿಂದ ಕೂಡಿದ ಜ್ಯೂಸ್ ಕುಡಿಯುತ್ತಾರೆ. ಇನ್ನೂ ಊಟಕ್ಕೆ ದಾಲ್, ಚಿಕನ್, ಹಸಿರು ತರಕಾರಿಯಿಂದ ಮಾಡಿದ ರೊಟ್ಟಿ ಮತ್ತು ಸಲಾಡ್ ಸೇವಿಸುತ್ತಾರೆ.

    ದೇಹದಂಡನೆ ಮತ್ತು ಆಹಾರ ಶೈಲಿಯೊಂದಿಗೆ ನಿದ್ದೆಗೂ ಪ್ರಮುಖ ಆದ್ಯತೆ ನೀಡುತ್ತಾರೆ. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ರೆ ವ್ಯಕ್ತಿ ಬೆಳಗ್ಗೆ ಆ್ಯಕ್ಟಿವ್ ಇರಲು ಸಾಧ್ಯ. ಹಾಗಾಗಿ ಧೋನಿ ರಾತ್ರಿ ನಿದ್ದೆ ಹೆಚ್ಚು ಮಹತ್ವ ಕೊಡುತ್ತಾರೆ. ಈ ಹಿಂದೆ ಹಲವು ಬಾರಿ ಫ್ಲೈಟ್ ತಡವಾಗಿದ್ದಕ್ಕೆ ವಿಮಾನ ನಿಲ್ದಾಣದ ಆವರಣದಲ್ಲಿಯೇ ಧೋನಿ ವಿಶ್ರಾಂತಿ ತೆಗೆದುಕೊಂಡಿದ್ದರು.

  • ವಿಶ್ವಕಪ್ ಬಳಿಕ ಧೋನಿ ನಿವೃತ್ತಿ?

    ವಿಶ್ವಕಪ್ ಬಳಿಕ ಧೋನಿ ನಿವೃತ್ತಿ?

    ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಪಂದ್ಯಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಈ ಸಮಯದಲ್ಲಿ ಏನು ಹೇಳಲು ಸಾಧ್ಯವಿಲ್ಲ. ವಿಶ್ವಕಪ್ ನಲ್ಲಿ ಆಡುವ ಪಂದ್ಯಗಳೇ ಧೋನಿಯವರ ಕೊನೆಯ ಪಂದ್ಯಗಳು ಆಗಬಹುದು. ಈ ಹಿಂದೆ ಮೂರು ಮಾದರಿಯ ಕ್ರಿಕೆಟ್ ನಾಯಕತ್ವದಿಂದ ದಿಢೀರ್ ಆಗಿ ಕೆಳಗೆ ಇಳಿದಿದ್ದರು. ಹೀಗಾಗಿ ನಮಗೆ ಧೋನಿ ಅವರ ನಡೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಿಶ್ವಕಪ್ ಪಂದ್ಯಗಳಲ್ಲಿ ಧೋನಿ ಅವರ ನಿಧಾನಗತಿ ಬ್ಯಾಟಿಂಗ್ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿತ್ತು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಧೋನಿ 52 ಎಸೆತಗಳಲ್ಲಿ ಕೇವಲ 28 ರನ್ ಕಲೆ ಹಾಕಿದ್ದರು. ನಿಧಾನಗತಿಯ ಬ್ಯಾಟಿಂಗ್ ಗೆ ಅಭಿಮಾನಿಗಳಲ್ಲದೇ ಸಚಿನ್ ತೆಂಡೂಲ್ಕರ್ ಸಹ ಬೇಸರ ವ್ಯಕ್ತಪಡಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಕೊನೆಯ ಓವರ್ ಗಳಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗದ ಧೋನಿ ಕೇವಲ ಸಿಂಗಲ್ ರನ್ ಕಲೆ ಹಾಕುತ್ತಿದ್ದಾಗ ಕಮೆಂಟರಿಯಲ್ಲಿಯೇ ಸೌರವ್ ಗಂಗೂಲಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.

    2019ರ ವಿಶ್ವಕಪ್‍ನಲ್ಲಿ ಧೋನಿ ಸಾಧನೆ
    ದಕ್ಷಿಣ ಆಫ್ರಿಕಾ- 34 ರನ್ ಮತ್ತು 1 ಸ್ಟಂಪಿಂಗ್
    ಆಸ್ಟ್ರೇಲಿಯಾ: 27 ರನ್ ಮತ್ತು 1 ಕ್ಯಾಚ್
    ಪಾಕಿಸ್ತಾನ: 1 ರನ್
    ಅಫಘಾನಿಸ್ತಾನ: 27 ರನ್ ಮತ್ತು ಒಂದು ಸ್ಟಂಪಿಂಗ್
    ವೆಸ್ಟ್ ಇಂಡೀಸ್: 56* ರನ್ ಮತ್ತು 1 ಸ್ಟಂಪಿಂಗ್
    ಇಂಗ್ಲೆಂಡ್: 46* ರನ್

  • ತವರಿನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಚಾಲಕನಾದ ಧೋನಿ – ಭರ್ಜರಿ ಔತಣಕೂಟ

    ತವರಿನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಚಾಲಕನಾದ ಧೋನಿ – ಭರ್ಜರಿ ಔತಣಕೂಟ

    ರಾಂಚಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯ ಆಡಲು ಟೀಂ ಇಂಡಿಯಾ ರಾಂಚಿಗೆ ಬಂದಿಳಿದಿದ್ದು, ತವರು ನೆಲಕ್ಕೆ ಆಗಮಿಸಿರುವ ಟೀಂ ಇಂಡಿಯಾ ಆಟಗಾರರ ಕಾರನ್ನು ಸ್ವತಃ ಧೋನಿಯೇ ಡ್ರೈವ್ ಮಾಡಿದ್ದಾರೆ.

    ಧೋನಿ ಕಾರು ಡ್ರೈವ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಂಚಿ ವಿಮಾನ ನಿಲ್ದಾಣದಿಂದ ಆಟಗಾರರು ತಂಗುವ ಹೋಟೆಲ್ ವರೆಗೂ ಧೋನಿ ಡ್ರೈವ್ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಧೋನಿ ಪತ್ನಿ ಸಾಕ್ಷಿ ಧೋನಿ ಟೀಂ ಇಂಡಿಯಾ ಆಟಗಾರರಿಗೆ ಔತಣಕೂಟವನ್ನು ಆಯೋಜಿಸಿದ್ದು, ಧೋನಿಯ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ತಂಡದ ಬಹುತೇಕ ಸದಸ್ಯರು ಭಾಗವಹಿಸಿದ್ದರು. ಈ ಕುರಿತು ಸ್ಪಿನ್ ಬೌಲರ್ ಯಜುವೇಂದ್ರ ಚಹಲ್ ಫೋಟೋ ಟ್ವೀಟ್ ಮಾಡಿ ಧೋನಿ ಹಾಗೂ ಸಾಕ್ಷಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    https://www.instagram.com/p/BuqatYHnER2/?utm_source=ig_embed&utm_campaign=embed_video_watch_again

    ಬುಧವಾರ ರಾಂಚಿಗೆ ಬಂದಿಳಿದ ಧೋನಿ ಸೇರಿದಂತೆ ಟೀಂ ಇಂಡಿಯಾ ಆಟಗಾರರಿಗೆ ಭರ್ಜರಿ ಸ್ವಾಗತ ನೀಡಲಾಗಿತ್ತು. 37 ವರ್ಷದ ಧೋನಿ ಸರಣಿಯ ಮೊದಲ ಪಂದ್ಯದಲ್ಲಿ ತಂಡ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಿ ಗೆಲುವಿಗೆ ಕಾರಣರಾಗಿದ್ದರು. ಆದರೆ 2ನೇ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗುವ ಮೂಲಕ 9 ವರ್ಷಗಳ ಬಳಿಕ ಗೋಲ್ಡನ್ ಡಕೌಟ್ ಆಗಿದ್ದರು.

    ಸದ್ಯ ಧೋನಿ ಟೀಂ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದು, 216 ಸಿಕ್ಸರ್ ಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ಹೈದರಾಬಾದ್ ಹಾಗೂ ನಾಗ್ಪುರ ಏಕದಿನ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟೀ ಇಂಡಿಯಾ ಶುಕ್ರವಾರ ನಡೆಯಲಿರುವ 3ನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತೀ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾದ್ರು ಧೋನಿ

    ಅತೀ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾದ್ರು ಧೋನಿ

    ರಾಂಚಿ: ಕ್ರಿಕೆಟ್ ಜಗತ್ತಿನಲ್ಲಿ ಒಂದಿಲ್ಲೊಂದು ಸಾಧನೆ ಮಾಡುತ್ತಾ ಮುಂದುವರಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

    ಹೌದು, ಮಹೇಂದ್ರ ಸಿಂಗ್ ಧೋನಿಯವರು ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಆದರೆ ಅದು ಕ್ರಿಕೆಟ್ ನಲ್ಲಿ ಅಲ್ಲ. ಧೋನಿಯವರು 2017-18ರ ಆದಾಯ ತೆರಿಗೆ ಮೌಲ್ಯಮಾಪನ ವರ್ಷದಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ಜಾರ್ಖಂಡ್ ರಾಜ್ಯದಲ್ಲಿಯೇ ವೈಯಕ್ತಿಕವಾಗಿ ಅತೀ ಹೆಚ್ಚು ತೆರಿಗೆ ಪಾವತಿ ಮಾಡಿದ ತೆರಿಗೆದಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

    ಪ್ರಸಕ್ತ ವರ್ಷ ಧೋನಿಯವರು ಬರೋಬ್ಬರಿ 12.17 ಕೋಟಿ ರೂಪಾಯಿಯನ್ನು ತೆರಿಗೆ ಪಾವತಿ ಮಾಡಿದ್ದಾರೆ. ಕ್ರಿಕೆಟ್ ಹಾಗೂ ಜಾಹೀರಾತುಗಳಿಂದ ಸಾಕಷ್ಟು ಆದಾಯ ಹೊಂದಿರುವ ಅವರು ಅತೀ ಹೆಚ್ಚು ತೆರಿಗೆ ಪಾವತಿಸುವ ಮೂಲಕ ದೇಶಾದ್ಯಂತ ಭಾರೀ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಧೋನಿಯ ಒಂದು ದಿನದ ಜಾಹೀರಾತು ಸಂಭಾವನೆ ಎಷ್ಟು?

    ಧೋನಿಯವರು 2016-17ರ ಸಾಲಿನಲ್ಲಿ 10.93 ಕೋಟಿ ರೂಪಾಯಿಯನ್ನು ಪಾವತಿಸಿದ್ದರು. ಆದರೆ ಈ ಬಾರಿ 12.17 ಕೋಟಿ ರೂಪಾಯಿ ಪಾವತಿಸುವ ಮೂಲಕ ಕಳೆದ ಬಾರಿಗಿಂತ 1.24 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಧೋನಿ ಆದಾಯ ಎಷ್ಟಿದೆ?

  • ಒಂದೇ ಪಂದ್ಯದಲ್ಲಿ ನಾಲ್ಕು ದಾಖಲೆಗಳನ್ನು ನಿರ್ಮಿಸಿದ ಧೋನಿ!

    ಲಂಡನ್: ಭಾನುವಾರ ನಡೆದ ಇಂಗ್ಲೆಂಡ್ ತಂಡದ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು 4 ದಾಖಲೆಗಳನ್ನು ಬರೆದು ಇತಿಹಾಸ ನಿರ್ಮಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ 6 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಟಿ-20ಯ ಒಂದೇ ಪಂದ್ಯದಲ್ಲಿಯೇ 6 ಮಂದಿಯನ್ನು ಔಟ್ ಮಾಡಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ 5 ಕ್ಯಾಚ್ ಹಿಡಿದ ಮೊದಲ ಕೀಪರ್ ಎನ್ನುವ ದಾಖಲೆಯನ್ನು ಧೋನಿ ನಿರ್ಮಿಸಿದರು.

    ಇದಲ್ಲದೇ ಅಂತರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 50 ಕ್ಯಾಚ್ ಹಿಡಿದ ಮೊದಲ ಕೀಪರ್ ಹಾಗೂ ಟಿ-20ಯಲ್ಲಿ 150 ಕ್ಯಾಚ್ ಪೂರೈಸಿದ ವಿಶ್ವದ ಮೊದಲನೇ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಒಂದೇ ಟಿ-20 ಪಂದ್ಯದಲ್ಲಿ ನಾಲ್ಕು ದಾಖಲೆಗಳನ್ನು ನಿರ್ಮಿಸುವ ಮೂಲಕ ಧೋನಿ ಇತಿಹಾಸ ನಿರ್ಮಿಸಿದ್ದಾರೆ.