Tag: Mahendra Kumar

  • ಕೊಪ್ಪದಲ್ಲಿ ಮಹೇಂದ್ರ ಕುಮಾರ್ ಅಂತ್ಯಕ್ರಿಯೆ

    ಕೊಪ್ಪದಲ್ಲಿ ಮಹೇಂದ್ರ ಕುಮಾರ್ ಅಂತ್ಯಕ್ರಿಯೆ

    ಚಿಕ್ಕಮಗಳೂರು: ಬಜರಂಗದಳದ ಮಾಜಿ ರಾಜ್ಯ ಸಂಚಾಲಕ, ಪ್ರಗತಿಪರ ಚಿಂತಕ, ವಾಗ್ಮಿ ಮಹೇಂದ್ರ ಕುಮಾರ್ ಅವರ ಅಂತ್ಯಸಂಸ್ಕಾರವು ಅವರ ಸ್ವಗ್ರಾಮ ಕೊಪ್ಪ ತಾಲೂಕಿನ ಕೂಗುಗೊಳ್ಳಿಯಲ್ಲಿ ನೆರವೇರಿತು.

    47 ವರ್ಷದ ಮಹೇಂದ್ರ ಕುಮಾರ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಾಸವಿದ್ದರು. ಮಹೇಂದ್ರ ಕುಮಾರ್ ಅವರಿಗೆ ಶುಕ್ರವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದರು. ಜಿಲ್ಲೆಯ ಬಜರಂಗದಳಕ್ಕೆ ಮಹೇಂದ್ರ ಕುಮಾರ್ ಅವರೇ ಭದ್ರಬುನಾದಿ ಹಾಕಿ ಕೊಟ್ಟವರು.

    ಮಹೇಂದ್ರ ಅವರ ಪಾರ್ಥಿವ ಶರೀರವನ್ನ ಶನಿವಾರ ಸಂಜೆ 7:30ಕ್ಕೆ ಅಂಬುಲೆನ್ಸ್ ಮೂಲಕ ಸ್ವಗ್ರಾಮ ಕೊಪ್ಪ ತಾಲೂಕಿನ ಕೂಸುಗೊಳ್ಳಿಯ ಸಹೋದರ ಸತೀಶ್ ಮನೆಗೆ ತರಲಾಯಿತು. ಸ್ನೇಹಿತರು ಕುಟುಂಬಸ್ಥರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಸಿತ್ತು. ಮನೆ ಸಮೀಪದ ತೋಟದಲ್ಲಿ ಅಂತಿಮ ವಿಧಿ-ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

    ಮಹೇಂದ್ರ ಕುಮಾರ್ ಅವರ ಪಾರ್ಥಿವ ಶರೀರ ಜಿಲ್ಲೆಗೆ ಬರುತ್ತಿದ್ದಂತೆ ಪ್ರತಿ ಊರುಗಳಲ್ಲೂ ಅವರ ಅಭಿಮಾನಿಗಳು ದರ್ಶನ ಪಡೆದು ಕಂಬನಿ ಮಿಡಿದರು. ಸಚಿವ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಶೃಂಗೇರಿ ಶಾಸಕ ಟಿ.ಡಿರಾಜೇಗೌಡ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ನೂರಾರು ಜನ ಅಂತಿಮ ದರ್ಶನ ಪಡೆದರು.

    ವಾಕ್ ಚತುರರಾಗಿದ್ದ ಮಹೇಂದ್ರ ಕುಮಾರ್, ಕಿರಿಯ ವಯಸ್ಸಲ್ಲೇ ಅಪಾರ ಜ್ಞಾನ ಹೊಂದಿ ಹೋರಾಟದ ಹಾದಿ ತುಳಿದಿದ್ದರು. ದಕ್ಷಿಣ ಕನ್ನಡದಲ್ಲಿ ಆಳವಾಗಿ ಬೇರೂರಿದ್ದ ಬಜರಂಗದಳವನ್ನ ತಮ್ಮ ಮಾತು ಹಾಗೂ ಸಂಘಟನಾ ಚಾತುರ್ಯದಿಂದ ಜಿಲ್ಲೆಯಲ್ಲೂ ಭದ್ರಬುನಾದಿ ಹಾಕಿ ಬೆಳೆಸಿದ್ದರು. ಕೊಪ್ಪದಲ್ಲಿ ಆರಂಭಗೊಂಡ ಬಜರಂಗದಳ ಶಾಖೆ ಇಡೀ ಜಿಲ್ಲೆ ವ್ಯಾಪಿಸಿತ್ತು. ಬಜರಂಗದಳ ಸಂಚಾಲಕ, ಜಿಲ್ಲಾ ಸಂಚಾಲಕ, ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, ದತ್ತಪೀಠ ಚಲೋ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. 2008ರಲ್ಲಿ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಚರ್ಚ್ ದಾಳಿ ಹಿನ್ನೆಲೆ ಮಹೇಂದ್ರ ಕುಮಾರ್ 42 ದಿನ ಬಂಧನಕೊಳಗಾಗಿದ್ದರು.

    2000ರಲ್ಲಿ ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ ಭಾಗದಲ್ಲಿ ತಲೆ ಎತ್ತುತ್ತಿದ್ದ ನಕ್ಸಲ್ ಚಳುವಳಿ ಬಗ್ಗೆ ಮೊದಲು ಧ್ವನಿ ಎತ್ತಿದ್ದು ಇದೇ ಮಹೇಂದ್ರ ಕುಮಾರ್. 2002ರಲ್ಲಿ ಶೃಂಗೇರಿಯಲ್ಲಿ ಎಡ ಪಂಥೀಯರು ಆಯೋಜಿಸಿದ್ದ ಮೇಧಾ ಪಾಟ್ಕರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೋಮುವಾದಿ ಎಂಬ ನಕ್ಸಲ್ ನಂಟಿರುವ ಪುಸ್ತಕವನ್ನು ಹಂಚಲಾಗುತ್ತಿದೆ ಎಂದು ಮಹೇಂದ್ರ ಕುಮಾರ್ ನೇತೃತ್ವದಲ್ಲಿ ಪ್ರತಿಭಟಿಸಲು ಮುಂದಾದಾಗ ಶೃಂಗೇರಿಯಲ್ಲಿ ಗಲಾಟೆ ಕೂಟ ನಡೆದಿತ್ತು. ಬಜರಂಗದಳದಿಂದ ಹಿಂದೆ ಸರಿದ ಮೇಲೆ ಜೆಡಿಎಸ್ ಸೇರಿದ್ದರು. ಜೆಡಿಎಸ್‍ನಿಂದಲೂ ದೂರವಾದ ಬಳಿಕ ಯೂಟ್ಯೂಬ್ ಚಾನೆಲ್ ಆರಂಭಿಸಿ, ಪ್ರಗತಿಪರ ಚಿಂತನೆಯತ್ತ ತಮ್ಮನ್ನ ತೊಡಗಿಸಿಕೊಂಡಿದ್ದರು. ಇದೀಗ ಅವರ ನಿಧನದಿಂದ ಅವರ ಅಪಾರ ಅಭಿಮಾನಿ ಬಳಗಕ್ಕೂ ತುಂಬಲಾರದ ನಷ್ಟ ಸಂಭವಿಸಿದೆ.

  • ಜನಪರ ಹೋರಾಟಗಾರ ಮಹೇಂದ್ರ ಕುಮಾರ್ ನಿಧನ

    ಜನಪರ ಹೋರಾಟಗಾರ ಮಹೇಂದ್ರ ಕುಮಾರ್ ನಿಧನ

    – ಸಿಎಂ ಯಡಿಯೂರಪ್ಪ ಸಂತಾಪ

    ಬೆಂಗಳೂರು: ಖ್ಯಾತ ಸಾಮಾಜಿಕ ಕಾರ್ಯಕರ್ತ, ಪ್ರಖರ ವಾಗ್ಮಿ ಮಹೇಂದ್ರ ಕುಮಾರ್ (47) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಇಂದು ಬೆಳಗಿನ ಜಾವ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮಹೇಂದ್ರ ಕುಮಾರ್ ಮೃತಪಟ್ಟಿದ್ದಾರೆ. ಮಹೇಂದ್ರ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಇವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    ಮಹೇಂದ್ರ ಕುಮಾರ್ ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾಗಿದ್ದು, ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಇವರು ಭಜರಂಗದಳ ಸಂಘಟನೆ ಮಾಜಿ ರಾಜ್ಯ ಸಂಚಾಲಕರಾಗಿದ್ದರು. ಸಂಘಟನೆಯಿಂದ ಹೊರ ಬಂದ ಬಳಿಕ ಸಾಮಾಜಿಕ ಮತ್ತು ಜಾಗೃತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

    ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ಸಿಎಎ, ಎನ್‍ಸಿಆರ್ ಕಾಯ್ದೆ ವಿರುದ್ಧವೂ ಹಲವು ಪ್ರತಿಭಟನಾ ಸಮಾವೇಶಗಳಲ್ಲಿ ಪಾಲ್ಕೊಂಡಿದ್ದರು. ಇವರು ತಮ್ಮ ದಿಟ್ಟ ಮಾತುಗಳಿಂದಲೇ ರಾಜ್ಯದಾದ್ಯಂತ ಅಪಾರ ಜನರ ಮನ್ನಣೆ ಪಡೆದುಕೊಂಡಿದ್ದರು.

    ಸಿಎಂ ಯಡಿಯೂರಪ್ಪ ಅವರು ಮಹೇಂದ್ರ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ. ಬಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

  • ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ರೇಪ್ ಮಾಡಿದ್ರೆ ಸಂಘ ಪರಿವಾರಕ್ಕೆ ಖುಷಿ: ಮಹೇಂದ್ರ ಕುಮಾರ್

    ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ರೇಪ್ ಮಾಡಿದ್ರೆ ಸಂಘ ಪರಿವಾರಕ್ಕೆ ಖುಷಿ: ಮಹೇಂದ್ರ ಕುಮಾರ್

    – ಸಾವಿನಲ್ಲಿಯೂ ಲಾಭ ಪಡೆಯುವ ಪ್ರವೃತ್ತಿ ಸಲ್ಲದು

    ಮಂಗಳೂರು: ಮುಸ್ಲಿಂ ಹುಡುಗನಿಂದ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರವಾದರೆ ಸಂಘ ಪರಿವಾರಕ್ಕೆ ಆಗುವಷ್ಟು ಖುಷಿ ಯಾರಿಗೂ ಆಗಲ್ಲ ಎಂದು ಬಜರಂಗದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿದ್ದಾರೆ.

    ಜನನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಸ್ಲಿಂ ಯುವಕರಿಂದ ಆಗುವ ತಪ್ಪನ್ನು ಎತ್ತಿಹಿಡಿದು ಅದರಿಂದ ಲಾಭ ಪಡೆಯುತ್ತದೆ. ದಯವಿಟ್ಟು ಜಾಗರುಕರಾಗಿ. ಸಂಘಕ್ಕೆ ಯಾವುದೇ ದೇಣಿಗೆ, ಭೂಮಿ ನೀಡಬೇಡಿ. ನಮ್ಮ ಸುತ್ತ ಅಪಾಯಕಾರಿ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ದೂರಿದರು.

    ಆರ್‌ಎಸ್‌ಎಸ್, ವಿಎಚ್‍ಪಿ, ಬಜರಂಗದಳ ಹಿಂದೂ ಸಮಾಜದ ಸಂಘಟನೆಗಳೇ ಹೊರತು ಅವು ಹಿಂದೂ ಸಮಾಜವಲ್ಲ. ಮುಸ್ಲಿಮರನ್ನು ಧರ್ಮದ ಕಾರಣಕ್ಕಾಗಿ ದ್ವೇಷ ಮಾಡುವುದಾದರೆ ಅದು ನಿಜವಾದ ದೇಶದ್ರೋಹ. ಸಂಘಪರಿವಾರದಲ್ಲಿರುವ ಜಾತಿ ಅಸ್ಪೃಶ್ಯತೆಯಿಂದಾಗಿ ಸಂಘ ಸಿದ್ಧಾಂತದಿಂದ ದೂರ ಉಳಿಯಲು ಕಾರಣ ಎಂದು ತಿಳಿಸಿದರು.

    ಸಂಘದ ಸದಸ್ಯರು ದಲಿತ ಪರ ಮಾತನಾಡಿದರೆ ಸಂಘದ ವಿರೋಧಿಗಳೇ? ಈ ರೀತಿಯ ಪ್ರಶ್ನೆಗಳು ಅನೇಕರಿಗೆ ಕಾಡುತ್ತಿವೆ. ಆದರೂ ಯುವಕರು ಈ ಸಂಘ ಪರಿವಾರಕ್ಕೆ ಸೇರುತ್ತಿದ್ದಾರೆ. ಅಲ್ಲಿ ಸಿದ್ಧಾಂತದ ಹೆಸರಿನಲ್ಲಿ ಮದ್ಯವನ್ನು ಕೊಡುತ್ತಾರೆಯೇ ಹೊರತು ಔಷಧಿಯನ್ನಲ್ಲ ಎಂದು ದೂರಿದರು.

    ಶಿವಮೊಗ್ಗದಲ್ಲಿ ಗೋಕುಲ್ ಎಂಬ ಯುವಕನೊಬ್ಬ ಮುಸ್ಲಿಂ ಯುವಕರಿಂದ ಕೊಲೆಯಾಗಿದ್ದ. ಸಂಘ ಪರಿವಾರದಲ್ಲಿಯೇ ಬೆಳೆದಿದ್ದ ಗೋಕುಲ್ ಮನೆಯವರಿಗೆ ಸಾಂತ್ವಾನ ಹೇಳಲು ನಾನು ಅವರ ಮನೆಗೆ ಹೋಗಿದ್ದೆ. ಈ ವೇಳೆ ನನ್ನ ಜೊತೆಗೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಕೂಡ ಬಂದಿದ್ದರು. ಅಷ್ಟೇ ಅಲ್ಲದೆ ಇಬ್ಬರು ಸಂಘದ ಪರಿವಾರದ ನಾಯಕರು ಆಗಮಿಸಿದ್ದರು. ಗೋಕುಲ್ ಕುಟುಂಬಸ್ಥರ ಜೊತೆಗೆ ಮಾತನಾಡಿ ಬಳಿಕ ತಮ್ಮಲ್ಲಿಯೇ ಮಾತನಾಡಿಕೊಂಡ ನಾಯಕರು, ಭೂಮಿ ಫಲವತ್ತಾಗಿದೆ, ಉಳಿಮೆ ಮಾಡಿದರೆ ಉತ್ತಮ ಬೆಳೆಯನ್ನು ತೆಗೆಯಬಹುದು ಅಂತಾ ಹೇಳಿಕೊಂಡರು ಎಂದರು ಮಹೇಂದ್ರ ಕುಮಾರ್ ಹೇಳಿದರು.

    ಸಂಘ ಪರಿವಾರದವರು ಸಾವಿನಲ್ಲಿಯೂ ಲಭ ಪಡೆಯುವ ಯೋಚನೆಯನ್ನು ಮಾಡುತ್ತಿದ್ದಾರೆ. ಯುವಕರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ದೂರಿದ ಅವರು, ಸಂಘ ಪರಿವಾರಕ್ಕೆ ಬಿಜೆಪಿಯನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ. ದೇಶದ ಮೂಲೆ ಮೂಲೆಯ ಕಾರ್ಯಕರ್ತರ ಫಲವನ್ನು ನಾಯಕರು ಬಿಜೆಪಿಗೆ ಎರೆಯುತ್ತಿದ್ದಾರೆ. ಆದರೆ ಬಿಜೆಪಿ ಬತ್ತಳಿಕೆಯಲ್ಲಿ ಎಲ್ಲವೂ ಖಾಲಿಯಾದಾಗ ಅಯೋಧ್ಯೆ ವಿಚಾರ ಮುನ್ನೆಲೆಗೆ ಬರುತ್ತದೆ ಎಂದು ಕಿಡಿಕಾರಿದರು.

    https://www.youtube.com/watch?v=uQXYSAVoCbs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv