ಗ್ವಾಲಿಯರ್: ಅಖಿಲ ಭಾರತೀಯ ಹಿಂದೂ ಮಹಾಸಭಾ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ನಾಥೂರಾಮ್ ಗೋಡ್ಸೆ ಮೂರ್ತಿಯನ್ನು ತೆಗೆದು ಹಾಕುವಂತೆ ಗ್ವಾಲಿಯರ್ ನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಗೋಡ್ಸೆ ಮೂರ್ತಿ ಸ್ಥಾಪನೆಗೆ ರಾಜ್ಯದ ಹಲವು ಸಂಘಟನೆಗಳು ಮತ್ತು ಕಾಂಗ್ರೆಸ್ ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಮೂರ್ತಿಯನ್ನು ತೆರವುಗೊಳಿಸುವಂತೆ ಡಿಸಿ ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದನ್ವಯ ಸ್ಥಳೀಯ ಪೊಲೀಸರು ಗೋಡ್ಸೆ ಮೂರ್ತಿಯನ್ನು ವಶಕ್ಕೆ ಪಡೆದುಕೊಂಡು, ಕೋಣೆಯನ್ನು ಸೀಜ್ ಮಾಡಿದ್ದಾರೆ. ಇದಕ್ಕೆ ಬಲ ಪಂಥೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಿಂದೂ ಮಹಾಸಭಾ ಕಚೇರಿಯಲ್ಲಿ ಬಲಪಂಥಿಯ ನಾಯಕರ ನೇತೃತ್ವದಲ್ಲಿ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿತ್ತು. ಈ ಹಿಂದೆ ಗೋಡ್ಸೆ ಹೆಸರಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದ ಹಿಂದೂ ಮಹಾಸಭಾ ಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಕಚೇರಿಯಲ್ಲಿ ಮೂರ್ತಿ ಸ್ಥಾಪನೆ ಬಳಿಕ ನಾಯಕರು ನವೆಂಬರ್ 15ರಂದು ನಾಥೂರಾಮ್ ಗೋಡ್ಸೆ ಪುಣ್ಯಸ್ಮರಣೆಯನ್ನು ಆಚರಣೆ ಮಾಡಿದ್ದರು.
ನವೆಂಬರ್ 9ರಂದು ಗೋಡ್ಸೆ ದೇವಾಲಯ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ನಿರಾಕರಣೆಯಾದ ನಂತರ ಕಚೇರಿಯಲ್ಲಿ 32 ಇಂಚು ಎತ್ತರದ ಮೂರ್ತಿಯನ್ನ ರಾಷ್ಟ್ರೀಯ ಹಿಂದೂ ಮಹಾಸಭಾದ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಸ್ಥಾಪನೆ ಮಾಡಿದ್ದರು. ಈ ಮೂಲಕ ಗೋಡ್ಸೆಗೆ ದೇವಸ್ಥಾನ ನಿರ್ಮಿಸಿದಂತೆ ಆಗಿದೆ ಎಂದು ಹೇಳಿದ್ದರು.

ನಾವು ನಮ್ಮ ಸ್ವಂತ ಜಾಗದಲ್ಲೇ ದೇವಸ್ಥಾನ ನಿರ್ಮಿಸಿರೋದ್ರಿಂದ ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವಂತಿಲ್ಲ. ಇದು ಮಹಾಸಭಾದ ಸ್ವಂತ ಆಸ್ತಿ ಎಂದು ಭಾರದ್ವಾಜ್ ಹೇಳಿದ್ದರು.
ನಾಥೂರಾಮ್ ಗೋಡ್ಸೆ ದೇವಸ್ಥಾನ ಕಟ್ಟಿದರೆ ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಅವರಿಗೆ ಅಗೌರವ ತೋರಿಸದಂತಾಗುತ್ತದೆ. ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವ ಎಲ್ಲ ನಾಯಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಕೊಳ್ಳಬೇಕು ಎಂದು ಮಧ್ಯಪ್ರದೇಶದ ವಿಪಕ್ಷ ನಾಯಕ ಅಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಪೂಜಿಯನ್ನು ಕೊಲೆ ಮಾಡಿದ ವ್ಯಕ್ತಿಯ ದೇವಸ್ಥಾನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಗಾಂಧೀಜಿ ಹೆಸರಲ್ಲಿ ಉಪವಾಸ ಮಾಡುವ ನಾಟಕವನ್ನು ಬಿಡಬೇಕು. ಇದೊಂದು ನಾಚಿಕೆಗೇಡಿನ ಕೆಲಸ. ಇದನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾತ್ಮ ಗಾಂಧೀಜಿಯ ಪರಂಪರೆಗೆ ತಾವೊಬ್ಬರೇ ಮಾಲೀಕರು ಎಂಬಂತೆ ಕಾಂಗ್ರೆಸ್ ವರ್ತಿಸೋದನ್ನ ಬಿಡಬೇಕು. ಮಹಾತ್ಮಾ ಗಾಂಧೀಜಿಯ ಪರಂಪರೆ ಇಡೀ ದೇಶದ ಪರಂಪರೆ, ಯಾರದರೂ ಕಾನೂನು ಮತ್ತು ಸಂವಿಧಾನವನ್ನು ಉಲ್ಲಂಘಿಸಿದರೆ ಅಂತಹ ಚಟುವಟಿಕೆಗಳು ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ರಾಜ್ಯ ಬಿಜೆಪಿ ವಕ್ತಾರ ರಜನಿಶ್ ಜೈನ್ ತಿಳಿಸಿದ್ದಾರೆ.
https://twitter.com/JM_Scindia/status/930740615704223745