ನವದೆಹಲಿ: ಮಹಾತ್ಮ ಗಾಂಧಿ ಅವರನ್ನು ಅವಮಾನಿಸಿದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್‍ರನ್ನು ನಾನು ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ನ್ಯೂಸ್ 24 ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೋದಿ, ಸಾಧ್ವಿ ಪ್ರಜ್ಞಾಸಿಂಗ್ ಅವರು ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳಿದ್ದಾರೆ. ಈ ಮೂಲಕ ಬಾಪು ಅವರನ್ನು ಅವಮಾನಿಸಿದ್ದಾರೆ. ಅವರ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಭೋಪಾಲ್‍ನಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಅವರು, ನಾಥೂರಾಮ್ ಗೋಡ್ಸೆ ದೇಶಭಕ್ತರು. ಅವರು ದೇಶಭಕ್ತರಾಗಿಯೇ ಜನರ ಮನದಲ್ಲಿ ಇರುತ್ತಾರೆ. ಗೋಡ್ಸೆ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಅಂತವರಿಗೆ ಈ ಚುನಾವಣೆ ಮೂಲಕ ಉತ್ತರ ನೀಡಲಾಗುತ್ತದೆ ಎಂದು ನಟ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದರು.
ಸಾಧ್ವಿ ಪ್ರಜ್ಞಾಸಿಂಗ್ ಅವರ ಬೆನ್ನಲ್ಲೇ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹಾಗೂ ನಳಿನ್ ಕುಮಾರ್ ಕಟೀಲ್ ಗೋಡ್ಸೆ ದೇಶಭಕ್ತಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದರು. ಇತ್ತ ಮಧ್ಯಪ್ರದೇಶದ ಬಿಜೆಪಿ ವಕ್ತಾರ ಅನಿಲ್ ಸೌಮಿತ್ರ ಅವರು, ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ ಎಂದು ಹೇಳಿದ್ದಾರೆ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಭಾರತವು ಸನಾತನ ದೇಶವಾಗಿದೆ. ಭಾರತದಿಂದ ಪಾಕಿಸ್ತಾನ ನಿರ್ಮಾಣವಾಗಿದೆ. ಹೀಗಾಗಿ ಮಹಾತ್ಮ ಗಾಂಧಿ ಪಾಕಿಸ್ತಾನಕ್ಕೆ ಪಿತಾಮಹರೆ ಹೊರತು ಭಾರತಕ್ಕಲ್ಲ ಎಂದು ಹೇಳಿದ್ದಾರೆ.
ತಮ್ಮ ಹೇಳಿಕೆಯ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅನಿಲ್ ಸೌಮಿತ್ರ ಅವರು, ಭಾರತದಿಂದ ಜವಾಹರಲಾಲ್ ನೆಹರು ಹಾಗೂ ಪಾಕಿಸ್ತಾನದಿಂದ ಮೊಹ್ಮದ್ ಅಲಿ ಜಿನ್ನಾ ಸೇರಿ ಎರಡು ರಾಷ್ಟ್ರಗಳನ್ನು ನಿರ್ಮಾಣ ಮಾಡಿದರು. ದೇಶ ವಿಭಜನೆ ಮಹಾತ್ಮ ಗಾಂಧಿ ಮುಂದೆಯೇ ಆಗಿದೆ. ಹೀಗಾಗಿ ಗಾಂಧೀಜಿ ಪಾಕಿಸ್ತಾನಕ್ಕೆ ಪಿತಾಮಹರು ಎಂದು ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿ ಪ್ರಜ್ಞಾಸಿಂಗ್ ಸಿಂಗ್ ಠಾಕೂರ್ ಹಾಗೂ ಸಂಸದರಾದ ಅನಂತ್ ಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲ್ ಅವರು ಗೋಡ್ಸೆ ಕುರಿತ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದು, ರಾಷ್ಟ್ರಮಟ್ಟದಲ್ಲಿ ಬಿಜೆಪಿ ಭಾರೀ ಟೀಕೆಗಳನ್ನು ಎದುರಿಸಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಮುಖಂಡರ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರೆ.

10 ದಿನಗಳ ಒಳಗೆ ನಾಯಕರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು. ಪಕ್ಷದ ಅಂತರಿಕವಾಗಿ ಶಿಸ್ತು ಸಮಿತಿ ಎದುರಿಸಬೇಕಾಗುತ್ತದೆ ಎಂದು ಅಮಿತ್ ಶಾ ಸೂಚಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪ್ರಮುಖವಾಗಿ ಟಾರ್ಗೆಟ್ ಮಾಡಿದ್ದ ರಾಜೀವ್ ಗಾಂಧಿ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್, ಗೋಡ್ಸೆಗೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದರು. ಇತ್ತ ಸಂಸದ ಅನಂತ್‍ಕುಮಾರ್ ಹೆಗ್ಡೆ ಅವರು ಟ್ವಿಟ್ಟರ್ ಖಾತೆಯಲ್ಲಿ 7 ವರ್ಷದ ಬಳಿಕ ಇಂದಿನ ತಲೆಮಾರಿನ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿರುವುದು ಸಂತೋಷ ತಂದಿದೆ. ನಾಥುರಾಂ ಗೋಡ್ಸೆ ಈ ಚರ್ಚೆ ನೋಡಿ ಸಂತೋಷ ಪಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
