Tag: Mahatma Gandhi

  • ಗಾಂಧಿಯನ್ನು ಕೊಂದ ಮತಾಂಧ ಗೋಡ್ಸೆ ಬಿಜೆಪಿಯವರ ಆರಾಧ್ಯ ದೈವ: ಸಿದ್ದರಾಮಯ್ಯ

    ಗಾಂಧಿಯನ್ನು ಕೊಂದ ಮತಾಂಧ ಗೋಡ್ಸೆ ಬಿಜೆಪಿಯವರ ಆರಾಧ್ಯ ದೈವ: ಸಿದ್ದರಾಮಯ್ಯ

    – ಸಂವಿಧಾನ ಕೋಮುವಾದಿಗಳ ಕೈಯಲ್ಲಿ ಇದೆ

    ಚಿಕ್ಕೋಡಿ: ಮಹಾತ್ಮ ಗಾಂಧಿಯವರನ್ನು ಕೊಂದವರು ಮತಾಂಧರು. ಅಂತಹ ಮತಾಂಧ ಗೋಡ್ಸೆ ಬಿಜೆಪಿ ಹಾಗೂ ಆರ್.ಎಸ್.ಎಸ್‍ನ ಆರಾಧ್ಯ ದೈವ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಎನ್‍ಎಸ್ ಹರಡೇಕರ ಸೇವಾದಳ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ ಒಡೆದು, ಕೋಮು ಗಲಭೆ ಮಾಡಿಸುವುದೇ ಬಿಜೆಪಿ ಪಕ್ಷದ ಕೆಲಸವಾಗಿದೆ ಎಂದು ಗುಡುಗಿದರು.

    ಸದ್ಯ ಸಂವಿಧಾನ ಕೋಮುವಾದಿಗಳ ಕೈಯಲ್ಲಿ ಇದೆ. ಅದನ್ನು ರಕ್ಷಣೆ ಮಾಡುವ ಕೆಲಸ ಆಗಬೇಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಕೆಡವಿ ಸಂವಿಧಾನ ಸುಟ್ಟು ಹಾಕಬೇಕು ಎಂದವರು ಇಂದು ಬಿಜೆಪಿ ರಾಷ್ಟ್ರೀಯ ಯೂತ್‍ನ ಅಧ್ಯಕ್ಷರಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದರು.

    ಯಡಿಯೂರಪ್ಪನ ಮೊಮ್ಮಗ ಆರ್.ಟಿ.ಜಿ.ಎಸ್ ಮೂಲಕ ಲಂಚ ಪಡೆದರು ಅವರು ಮಾತ್ರ ರಾಜೀನಾಮೆ ಕೊಡುತ್ತಿಲ್ಲ. ಪ್ರೊವ್ ಮಾಡಿ ರಾಜೀನಾಮೆ ಕೊಡುತ್ತೇನೆ ಅಂತಾರೆ. ಪ್ರೂವ್ ಮಾಡಲು ತನಿಖೆ ನಡೆಸುವವರು ಯಾರು? ಮೊದಲು ತನಿಖೆಯಾಗಲಿ ಅವರ ಮೇಲಿರುವ ಆರೋಪ ಸಾಬೀತಾಗದೇ ಇದ್ದಲ್ಲಿ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಸಿಎಂ ಅವರಿಗೆ ಸವಾಲು ಎಸೆದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವುಕುಮಾರ್ ಮಾತನಾಡಿ, ಸೊನೀಯಾ ಗಾಂಧಿ ಆದೇಶದಂತೆ ರೈತ ವಿರೋಧಿ ಮಸೂದೆಗಳ ವಿರುದ್ಧ ರಾಜ್ಯಾದ್ಯಂತ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು ಎಂದರು. ಸಮಾರಂಭದಲ್ಲಿ ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಮರೆಯಾಗಿತ್ತು. ಸಮಾರಂಭದ ಬಳಿಕ ಡಿಕೆಶಿ ಜೊತೆಗೆ ಸೆಲ್ಫಿಗಾಗಿ ಕೈ ಕಾರ್ಯಕರ್ತರು ಮುಗಿಬಿದ್ದರು.

  • ಮಹಾತ್ಮಾ ಗಾಂಧಿ, ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮದಿನ – ಮೋದಿ, ಕೋವಿಂದ್ ನಮನ

    ಮಹಾತ್ಮಾ ಗಾಂಧಿ, ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮದಿನ – ಮೋದಿ, ಕೋವಿಂದ್ ನಮನ

    ನವದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 151ನೇ ಜನ್ಮದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಗೆ ಹೂವಿನ ಗೌರವ ಸಲ್ಲಿಸಿದ್ದಾರೆ.

    ರಾಜ್‍ಘಾಟ್‍ಗೆ ತೆರಳಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರು ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ. ರಾಷ್ಟ್ರಪಿತ ಗಾಂಧೀಜಿ ಅವರ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೋದಿ, “ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಆಲೋಚನೆಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಸಮೃದ್ಧ ಮತ್ತು ಸಹಾನುಭೂತಿಯುಳ್ಳ ಭಾರತವನ್ನು ರಚಿಸಲು ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡಲಿ” ಎಂದು ಮೋದಿ ಹೇಳಿದ್ದಾರೆ.

    ರಾಷ್ಟ್ರಪಿತ ಗಾಂಧಿಯವರ ಸತ್ಯ, ಅಹಿಂಸೆ ಮತ್ತು ಪ್ರೀತಿಯ ಸಂದೇಶವು ಸಮಾಜದಲ್ಲಿ ಸಾಮರಸ್ಯವನ್ನು ತುಂಬುತ್ತದೆ. ವಿಶ್ವದ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತದೆ. ಅವರು ಮಾನವೀಯತೆಯ ಪ್ರತೀಕವಾಗಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.

    ಇಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 116ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹೀಗಾಗಿ ವಿಜಯ್ ಘಾಟ್‍ಗೆ ಹೋಗಿ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು.

    https://twitter.com/narendramodi/status/1311843987532050437

    ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರು ಸ್ಥಿರ ಮತ್ತು ಅತ್ಯಂತ ದೃಢ ನಿಲುವಿನ ವ್ಯಕ್ತಿಯಾಗಿದ್ದರು. ಸರಳತೆಯನ್ನು ನಿರೂಪಿಸಿದ್ದರು. ಅಲ್ಲದೇ ರಾಷ್ಟ್ರದ ಕಲ್ಯಾಣಕ್ಕಾಗಿ ಬದುಕಿದ್ದರು. ಅಷ್ಟೇ ಅಲ್ಲದೇ ಅವರು ಭಾರತಕ್ಕಾಗಿ ಮಾಡಿದ ಎಲ್ಲದಕ್ಕೂ ಆಳವಾದ ಕೃತಜ್ಞತೆಗಳೊಂದಿಗೆ ಅವರ ಜಯಂತಿಯಲ್ಲಿ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ” ಎಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಗೆ ಶುಭಾಶಯ ಕೋರಿದ್ದಾರೆ.

  • ಭಾರತದ ಜೊತೆ ಕ್ಷಮೆ ಕೇಳಿದ ಅಮೆರಿಕ

    ಭಾರತದ ಜೊತೆ ಕ್ಷಮೆ ಕೇಳಿದ ಅಮೆರಿಕ

    ವಾಷಿಂಗ್ಟನ್: ಪ್ರತಿಭಟನೆಯ ವೇಳೆ ಮಹಾತ್ಮ ಗಾಂಧೀಜಿ ಪ್ರತಿಮೆಯ ಭಗ್ನವಾಗಿದ್ದಕ್ಕೆ ಅಮೆರಿಕ ಕ್ಷಮೆ ಕೇಳಿದೆ.

    ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ಕಪ್ಪು ವರ್ಣಿಯರು ಅಮೆರಿಕದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಿಡಿಗೇಡಿಗಳು ವಾಷಿಂಗ್ಟನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿದ್ದ ಗಾಂಧೀಜಿ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ.

    ಪ್ರತಿಮೆ ಭಗ್ನಗೊಂಡ ವಿಚಾರ ತಿಳಿಯುತ್ತಿದ್ದಂತೆ ಅಮೆರಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಅಮೆರಿಕದ ರಾಯಭಾರಿ ಕೆನ್ ಜಸ್ಟರ್, ಬಹಳ ಬೇಸರವಾಗುತ್ತಿದೆ. ವಾಷಿಂಗ್ಟನ್ ನಗರದಲ್ಲಿ ಗಾಂಧಿ ಪ್ರತಿಮೆ ಭಗ್ನವಾಗಿದ್ದಕ್ಕೆ ನಾವು ಕ್ಷಮೆ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.

    ಪ್ರತಿಭಟನೆ ಯಾಕೆ?
    ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬ ನಕಲಿ ನೋಟು ಚಲಾವಣೆಯ ಆರೋಪಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದ. ಕುತ್ತಿಗೆ ಮೇಲೆ ಮೊಣಕಾಲನ್ನು ಇರಿಸಿ ಹತ್ಯೆ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ಕ್ರೂರತ್ವಕ್ಕೆ ಆಫ್ರಿಕನ್ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಬಲಿಯಾಗಿದ್ದನ್ನು ಖಂಡಿಸಿ ಅಲ್ಲಿನ ಜನ ದಂಗೆ ಎದ್ದಿದ್ದಾರೆ. ಕಳೆದ ವಾರದಿಂದ ಅಮೆರಿಕದ ವಿವಿಧ ನಗರಗಳಲ್ಲಿ ಜಸ್ಟೀಸ್ ಫಾರ್ ಫ್ಲಾಯ್ಡ್, ಐ ಕಾಂಟ್ ಬ್ರೀತ್ ಹೆಸರಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ.

    ಅನೇಕ ಕಡೆ ಪೊಲೀಸ್ ವಾಹನಗಳು, ರೆಸ್ಟೋರೆಂಟ್‍ಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಆಶ್ರುವಾಯು, ರಬ್ಬರ್ ಬುಲೆಟ್ ಪ್ರಯೋಗಿಸಿದ್ದಾರೆ. ಆದರೆ ಇದನ್ನು ಜನ ಲೆಕ್ಕಿಸುತ್ತಿಲ್ಲ. ಫ್ಲಾಯ್ಡ್ ಹತ್ಯೆ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಿದೆ. ಪೊಲೀಸರು ಸಾರ್ವಜನಿಕರಲ್ಲಿ ಕ್ಷಮೆ ಕೇಳಿದರೂ ಆಕ್ರೋಶ ಮಾತ್ರ ನಿಂತಿಲ್ಲ.

    ಮುಂಜಾಗ್ರತಾ ಕ್ರಮವಾಗಿ ಹಲವು ನಗರಗಳಲ್ಲಿ ಕರ್ಫ್ಯೂ  ವಿಧಿಸಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ನ್ಯಾಷನಲ್ ಗಾರ್ಡ್ಸ್ ಗಳನ್ನು ಬಳಸಲಾಗುತ್ತಿದೆ.

  • ಅಮೆರಿಕದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳು

    ಅಮೆರಿಕದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳು

    ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗಿನ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಕೆಲ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ ವಿರೂಪಗೊಳಿಸಿದ್ದಾರೆ.

    ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವವರೇ ಈ ಕೃತ್ಯ ಎಸೆಗಿದ್ದಾರೆ ಎನ್ನಲಾಗಿದೆ. ಅಮೆರಿಕದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.

    ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ (45) ಅಮೆರಿಕದ ಮಿನ್ನೆಪೊಲಿಸ್‍ನಲ್ಲಿ ಮೇ 25ರಂದು ಒಂದು ಅಂಗಡಿಯಲ್ಲಿ 20 ಡಾಲರ್ ನೀಡಿ ಸಿಗರೇಟ್ ಖರೀದಿಸಿದ್ದ. ಅಂಗಡಿಯವರು ಆ ನೋಟು ನಕಲಿ ಎಂದು ಗೊತ್ತಾಗಿ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಬಂದಾಗ ಫ್ಲಾಯ್ಡ್ ಇನ್ನೂ ಅಂಗಡಿಯ ಹೊರಗೆ ಆತನ ಕಾರಿನಲ್ಲಿ ಕುಳಿತಿದ್ದ. ಪೊಲೀಸರು ಬಂದವರೇ ಅನಾಮತ್ತಾಗಿ ಆತನನ್ನು ಹಿಡಿದು ಹೊರಗೆಳೆದು, ತಮ್ಮ ಕಾರಿನ ಬಳಿ ಎಳೆದುಕೊಂಡು ಹೋದರು. ಇದನ್ನು ಜಾರ್ಜ್ ಫ್ಲಾಯ್ಡ್ ಪ್ರತಿಭಟಿಸಿದಾಗ ಓರ್ವ ಪೊಲೀಸ್ ಆತನನ್ನು ನೆಲಕ್ಕೆ ಒತ್ತಿಹಿಡಿದು, ಕುತ್ತಿಗೆಯ ಮೇಲೆ ತಮ್ಮ ಮೊಣಕಾಲೂರಿ ನಿಂತಿದ್ದ. ಸುಮಾರು ಎಂಟು ನಿಮಿಷ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದ ಪರಿಣಾಮ ಜಾರ್ಜ್ ಫ್ಲಾಯ್ಡ್ ಸ್ಥಳದಲ್ಲೇ ಸಾವನ್ನಪ್ಪಿದ್ದ.

    ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ಅಮೆರಿಕ ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಬೃಹತ್ ಪ್ರತಿಭಟನೆಗಳು ಸ್ಫೋಟಗೊಂಡಿವೆ. ಪ್ರತಿಭಟನಾಕಾರರು ಪ್ಯಾರಿಸ್, ಸಿಡ್ನಿ, ಅರ್ಜೆಂಟೀನಾ, ಬ್ರೆಜಿಲ್, ಕೆನಡಾ ಮತ್ತು ನ್ಯೂಜಿಲೆಂಡ್‍ಗಳಲ್ಲಿ ಬೀದಿಗಿಳಿದಿದ್ದಾರೆ.

  • ಕಟೀಲ್ ಮಾತುಕತೆ ವಿಫಲ – ಕ್ಷಮೆ ಕೇಳಲು ಒಪ್ಪದ ಅನಂತ್‍ಕುಮಾರ್?

    ಕಟೀಲ್ ಮಾತುಕತೆ ವಿಫಲ – ಕ್ಷಮೆ ಕೇಳಲು ಒಪ್ಪದ ಅನಂತ್‍ಕುಮಾರ್?

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ, ಸಂಸದ ಅನಂತ್‍ಕುಮಾರ್ ಹೆಗ್ಡೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್- ಸಂಸದೀಯ ಸಭೆಗೆ ನಿಷೇಧ

    ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ದೆಹಲಿಯ ಲೋಧಿ ಎಸ್ಟೇಟ್‍ನಲ್ಲಿರುವ ಹೆಗ್ಡೆ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೆರಳಿದ್ದು, ಕ್ಷಮೆ ಕೇಳುವಂತೆ ಮನವೋಲಿಸಲು ಪ್ರಯತ್ನಿಸಿದರು. ಸುಮಾರು ಅರ್ಧ ಗಂಟೆಯ ಸಂಧಾನದ ಬಳಿಕವೂ ಹೆಗ್ಡೆ ಕ್ಷಮೆ ಕೇಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಟೀಲ್ ನಿವಾಸದಿಂದ ವಾಪಸ್ಸಾಗಿದ್ದಾರೆ.

    ವಿವಾದಾತ್ಮಕ ಹೇಳಿಕೆಯಿಂದ ಹೈಕಮಾಂಡ್ ಗರಂ ಆಗಿದೆ, ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವಂತೆ ಕಟೀಲ್ ಸೂಚಿಸಿದರು ಎನ್ನಲಾಗಿದೆ. ಆದರೆ ಹೆಗ್ಡೆ ಮಾತ್ರ ಹೈಕಮಾಂಡ್ ನೀಡಿದ ಶೋಕಾಸ್ ನೋಟಿಸ್‍ಗೆ ಉತ್ತರ ನೀಡಿದ್ದೇನೆ. ನಾನು ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ ಎಂದಿದ್ದಾರಂತೆ.

    ಸಭೆ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಎಂದಿನಂತೆ ಭೇಟಿ ಮಾಡಿ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜಕೀಯ ಸ್ನೇಹಿತನಾಗಿ ಹೆಗ್ಡೆ ನಿವಾಸಕ್ಕೆ ಬಂದಿದ್ದೇನೆ. ಗಾಂಧಿಜೀ ಬಗ್ಗೆ ನೀಡಿದ ಹೇಳಿಕೆ ಬಗ್ಗೆಯೂ ಚರ್ಚೆ ಮಾಡಿದೆ. ಈ ಬಗ್ಗೆ ಹೈಕಮಾಂಡ್‍ಗೆ ಅನಂತ ಕುಮಾರ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ಎಲ್ಲವನ್ನು ನೋಡಿಕೊಳ್ಳುತ್ತೆ ಎಂದರು. ಕ್ಷಮೆ ಕೇಳುವ ಪ್ರಶ್ನೆಗೆ ನಳಿನ್ ಕುಮಾರ್ ಕಟೀಲ್ ಉತ್ತರಿಸಲು ನಿರಾಕರಿಸಿದರು.

  • ಗೋಕರ್ಣದಲ್ಲಿದೆ ಗಾಂಧೀಜಿ ಚಿತಾ ಭಸ್ಮದ ಪಾತ್ರೆ!

    ಗೋಕರ್ಣದಲ್ಲಿದೆ ಗಾಂಧೀಜಿ ಚಿತಾ ಭಸ್ಮದ ಪಾತ್ರೆ!

    – ಪಾತ್ರೆಯ ಹಿಂದಿದೆ ಮನ ಕಲಕುವ ಕಥೆ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಗೂ ಗಾಂಧೀಜಿ ಅವರಿಗೂ ಒಂದು ಅವಿನಾಭಾವ ಸಂಬಂಧವಿದೆ. ಕರ್ನಾಟಕದಲ್ಲಿ ಉಪ್ಪಿನ ಸತ್ಯಗ್ರಹ ನಡೆದಿದ್ದು ಇದೇ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ.

    ಸ್ವತಂತ್ರ ಪೂರ್ವದಿಂದ ಹಿಡಿದು ಇಂದಿನವರೆಗೂ ಗಾಂಧಿಜೀಯವರನ್ನು ಪ್ರೀತಿಸುವವರು, ಅನುಸರಿಸುವವರು ಹೆಚ್ಚು. 30 ಜನವರಿ 1948 ರಲ್ಲಿ ಗಾಂಧಿ ಹತ್ಯೆಯಾಯಿತು. ಅಂದು ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಗಾಂಧೀಜಿಯವರ ಶವಸಂಸ್ಕಾರದ ನಂತರ ಅವರ ಅಸ್ಥಿಯನ್ನು ದೇಶದ ನಾನಾ ನದಿಗಳು ಹಾಗೂ ಪುಣ್ಯ ಕ್ಷೇತ್ರದಲ್ಲಿ ಅಸ್ತಿ ವಿಸರ್ಜನೆ ಮಾಡಲಾಯಿತು.

    ಕರ್ನಾಟಕದಲ್ಲಿ ಸಹ ಅಸ್ತಿಯನ್ನು ವಿಸರ್ಜಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಗೋಕರ್ಣಕ್ಕೆ ಅವರ ಅಸ್ಥಿಯ ಒಂದು ಭಾಗವನ್ನು ತಾಮ್ರದ ಪಾತ್ರೆಯಲ್ಲಿ ಇರಿಸಿ ಅವರು ಉಪಯೋಗಿಸಿದ್ದ ಕಾದಿಯ ನೂಲನ್ನು ಸುತ್ತಿ ಅಸ್ತಿ ವಿಸರ್ಜನೆಗೆ ಕಳುಹಿಸಲಾಯಿತು. ಅಂದು ಸಾವಿರಾರು ಗಾಂಧೀಜಿ ಅಭಿಮಾನಿಗಳು ಅಸ್ತಿ ವಿಸರ್ಜನೆಯಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಅವರ ಅಸ್ತಿ ತಂದಿದ್ದ ತಾಮ್ರದ ಪಾತ್ರೆಯನ್ನು ಅಭಿಮಾನಿಗಳು ತಮಗೆ ನೀಡುವಂತೆ ಕೇಳಿಕೊಂಡರು. ಈ ಸಂದರ್ಭದಲ್ಲಿ ಅವರನ್ನು ಅನುಸರಿಸುತ್ತಿದ್ದ ಶಿವ ನರಸಿಂಹ ಬೈಲ್ಕೆರೆ ರವರು ಹರಾಜಿನಲ್ಲಿ ಪಾತ್ರೆಯನ್ನು ಪಡೆದುಕೊಂಡು ತಮ್ಮ ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದರು.

    ಗಾಂಧಿ ಹೆಸರಿನಲ್ಲಿ ತಾವು ತಿನ್ನುವ ಊಟದ ತುತ್ತಲ್ಲಿ ಒಂದು ಪಾಲು ಮೀಸಲಿಡುತಿದ್ದ ಶಿವ ನರಸಿಂಹ ಬೈಲ್ಕೆರೆ ರವರು ಅವರ ಹೆಸರಲ್ಲಿ ಅಷ್ಟೋತ್ತರ ರಚಿಸಿದ್ದರು. ಕುಮಟಾ ತಾಲೂಕಿನ ಗೋಕರ್ಣದ ಶಿವ ನರಸಿಂಹ ರವರು ಅರ್ಚಕರಾಗಿದ್ದು, ಗಾಂಧೀಜಿಯವರ ಕಟ್ಟಾ ಅಭಿಮಾನಿಯಾಗಿದ್ದರು. ಮಡಿವಂತಿಕೆಯ ಅಂದಿನ ದಿನಗಳಲ್ಲೇ ದಲಿತರ ಪರವಾಗಿ ಧ್ವನಿ ಎತ್ತುವ ಜೊತೆಗೆ ಸ್ವತಂತ್ರ ಹೋರಾಟದಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ನಿಷ್ಠೆಗೆ ಹಾಗೂ ಸ್ವಾತಂತ್ರದ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದಕ್ಕಾಗಿ ಇಂದಿರಾಗಾಂಧಿ ಸರ್ಕಾರ ಅವರಿಗೆ ತಾಮ್ರ ಪತ್ರ ನೀಡಿ ಗೌರವಿಸಿತ್ತು.

    ಶಿವ ನರಸಿಂಹ ಬೈಲ್ಕೆರೆ ರವರು ಗತಿಸಿ ಮೂವತ್ತು ವರ್ಷಗಳು ಸಂದಿದೆ. ಅವರ ಮಗ ರಾಜೀವ್ ಬೈಲ್ಕೆರೆ ರವರು ಗಾಂಧೀಜಿಯವರ ಚಿತಾ ಭಸ್ಮ ತಂದಿದ್ದ ತಾಮ್ರದ ಪಾತ್ರೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ವೇದಿಕ್ ಮ್ಯೂಸಿಯಮ್ ಎಂಬ ಚಿಕ್ಕ ವಸ್ತು ಸಂಗ್ರಹಾಲಯವನ್ನು ತಮ್ಮ ಮನೆಯಲ್ಲೇ ನಿರ್ಮಿಸಿಕೊಂಡಿದ್ದು ಸ್ವಾತಂತ್ರ ಪೂರ್ವದ ಹಾಗೂ ನಂತರದ ಹಲವು ವಸ್ತುಗಳು, ಗ್ರಂಥಗಳು ಇವರ ಸಂಗ್ರಹದಲ್ಲಿದೆ.

  • ಗೋಡ್ಸೆ, ಮೋದಿ ಇಬ್ಬರೂ ಒಂದೇ ಸಿದ್ಧಾಂತ ನಂಬ್ತಾರೆ: ರಾಹುಲ್ ಗಾಂಧಿ

    ಗೋಡ್ಸೆ, ಮೋದಿ ಇಬ್ಬರೂ ಒಂದೇ ಸಿದ್ಧಾಂತ ನಂಬ್ತಾರೆ: ರಾಹುಲ್ ಗಾಂಧಿ

    ತಿರುವನಂತಪುರಂ: ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಒಂದೇ ಸಿದ್ಧಾಂತವನ್ನು ನಂಬುವವರು ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ಕೇರಳದ ವಯನಾಡ್ ಜಿಲ್ಲೆಯಲ್ಲಿ ಇಂದು ನಡೆದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈ ವಿಚಾರ ನಿಮಗೆ ತಿಳಿದಿದೆಯೋ? ಇಲ್ಲವೋ? ನನಗೆ ಗೊತ್ತಿಲ್ಲ. ಆದರೆ, ಗೋಡ್ಸೆ ಮಹಾತ್ಮ ಗಾಂಧಿಯ ಮೇಲೆ ಗುಂಡುಹಾರಿಸಿದ್ದಾಗ ಆತ ತನ್ನ ಕಣ್ಣನ್ನು ಮುಚ್ಚಿದ್ದ. ಏಕೆಂದರೆ ಆತನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದು ತಿಳಿದಿತ್ತು. ಗೋಡ್ಸೆ ಮತ್ತು ಮೋದಿ ಇಬ್ಬರದ್ದೂ ಒಂದೇ ಸಿದ್ಧಾಂತ. ಆದರೆ, ನಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಮೋದಿಗಿಲ್ಲವಷ್ಟೆ ಎಂದು ಪ್ರಧಾನಿ ವಿರುದ್ಧ ಮಾತಿನ ಚಾಟಿ ಬೀಸಿದರು.

    ಭಾರತೀಯರೇ ನಾವು ಭಾರತಿಯರು ಎಂದು ಸಾಬೀತುಪಡಿಸಬೇಕಾದ ಸ್ಥಿತಿ ಬಂದಿದೆ. ಯಾರು ಭಾರತೀಯರು ಎಂದು ಗುರುತಿಸಲು ನರೇಂದ್ರ ಮೋದಿ ಯಾರು? ನನ್ನ ಪೌರತ್ವವನ್ನು ಪ್ರಶ್ನಿಸಿವ ಹಕ್ಕು ಮೋದಿಗೆ ಯಾರು ಕೊಟ್ಟಿದ್ದು? ನಾನು ಭಾರತೀಯನೆಂದು ನನಗೆ ಗೊತ್ತು. ನಾನು ಯಾರಿಗೂ ಅದನ್ನ ಸಾಬೀತುಪಡಿಸುವ ಅಗತ್ಯವಿಲ್ಲ. ಹಾಗೆಯೇ ಇಲ್ಲಿರುವ 140 ಕೋಟಿ ಜನರಿಗೂ ಕೂಡ ಭಾರತೀಯರು ಎಂದು ನಿರೂಪಿಸುವ ಅಗತ್ಯವಿಲ್ಲ ಎಂದು ರಾಹುಲ್ ಕಿಡಿಕಾರಿದರು.

    ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಯನಾಡ್‍ನಲ್ಲಿ ಕಾಂಗ್ರೆಸ್ ನಾಯಕರು ಇಂದು ಬೃಹತ್ ಸಾಮೂಹಿಕ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ವಯನಾಡ್‍ನ ಎಸ್‍ಕೆಎಂಜೆ ಪ್ರೌಢ ಶಾಲೆಯಿಂದ ಆರಂಭವಾದ ಮೆರವಣಿಗೆ ಎರಡು ಕಿಲೋ ಮೀಟರ್ ವರೆಗೆ ನಡೆಯಿತು.

  • ಗಾಂಧೀಜಿ ಮಾತು ಹೇಳಿ ಪತಿಗೆ ಧೈರ್ಯ ತುಂಬಿದ ವಾರ್ನರ್ ಪತ್ನಿ

    ಗಾಂಧೀಜಿ ಮಾತು ಹೇಳಿ ಪತಿಗೆ ಧೈರ್ಯ ತುಂಬಿದ ವಾರ್ನರ್ ಪತ್ನಿ

    -ಶಕ್ತಿ ಅದಮ್ಯ ಆತ್ಮವಿಶ್ವಾಸದಿಂದ ಹೊಮ್ಮುತ್ತೆ
    – ಪಾಕ್ ವಿರುದ್ಧ ಆಸೀಸ್‍ಗೆ ಭರ್ಜರಿ ಗೆಲವು

    ಅಡಿಲೇಡ್: ಮಹಾತ್ಮ ಗಾಂಧೀಜಿ ಮಾತನನ್ನು ಹೇಳಿ ಕ್ಯಾಂಡಿಸ್ ವಾರ್ನರ್, ಪತಿ ಡೇವಿಡ್ ವಾರ್ನರ್ ಅವರಿಗೆ ಧೈರ್ಯ ತುಂಬಿದ್ದಾರೆ.

    ಟ್ವೀಟ್ ಮಾಡಿರುವ ಕ್ಯಾಂಡಿಸ್ ವಾರ್ನರ್, ಶಕ್ತಿ ದೈಹಿಕ ಬಲದಿಂದ ಹೊರ ಹೊಮ್ಮುವುದಿಲ್ಲ. ಅದು ಅದಮ್ಯ ಆತ್ಮವಿಶ್ವಾಸದಿಂದ ಹೊರ ಬರುತ್ತದೆ ಎಂಬ ಮಹಾತ್ಮ ಗಾಂಧೀಜಿ ಕೋಟ್ ಅನ್ನು ಬಳಸಿದ್ದಾರೆ. ಜೊತೆಗೆ ಇನ್ನೊಬ್ಬರು ನಿನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎನ್ನುವುದು ಮುಖ್ಯವೇ ಅಲ್ಲ. ನಿನ್ನ ಬಗ್ಗೆ ನೀನು ಹೊಂದಿರುವ ವಿಶ್ವಾಸವೇ ಅತಿ ಮುಖ್ಯ ಎಂದು ಕ್ಯಾಂಡಿಸ್ ವಾರ್ನರ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ‘ಬಾಲ್ ಟ್ಯಾಂಪರಿಂಗ್’ ಗುಟ್ಟು ಬಿಚ್ಚಿಟ್ಟಿದ್ದ ವಾರ್ನರ್

    ಪಾಕಿಸ್ತಾನನ ವಿರುದ್ಧ ನಡೆದ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಒಂದು ಇನ್ನಿಂಗ್ಸ್ ಹಾಗೂ 48 ರನ್‍ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ 335 ರನ್ ಸಿಡಿಸಿ ಡೇವಿಡ್ ವಾರ್ನರ್ ಪಾತ್ರರಾಗಿದ್ದಾರೆ.

    ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಔಟಾಗದೆ 335 ರನ್( 418 ಎಸೆತ, 39 ಬೌಂಡರಿ, 1 ಸಿಕ್ಸರ್), ಲಬುಶೇನ್ 162 ರನ್(238 ಎಸೆತ, 22 ಬೌಂಡರಿ) ಸಹಾಯದಿಂದ ಮೂರು ವಿಕೆಟ್ ನಷ್ಟಕ್ಕೆ 589 ರನ್ ಸಿಡಿಸಿ 127 ಓವರ್ ನಲ್ಲಿ ಡಿಕ್ಲೇರ್ ಘೋಷಿಸಿತು. ಈ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಪಾಕ್ ತಂಡ ವಿಫಲವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಪಾಕ್ 94.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 302 ಗಳಿಸಿ, ಫಾಲೋಆನ್‍ಗೆ ತುತ್ತಾಗಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡವು 82 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತ್ತು. ಈ ಮೂಲಕ ಆಸ್ಟ್ರೇಲಿಯಾ ತಂಡವು ಇನ್ನಿಂಗ್ಸ್ ಹಾಗೂ 48 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಸೆಹ್ವಾಗ್ ನೀಡಿದ್ದ ಸಲಹೆ ನೆರವಾಯ್ತು- ತ್ರಿಶತಕ ವೀರ ವಾರ್ನರ್

    ಆಸೀಸ್ ಟೀಂ ನಾಯಕ ಟಿಮ್ ಪೈನ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸುವ ಸಮಯದಲ್ಲಿ, ತಂಡವು 127 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 589ರನ್ ಗಳಿಸಿತ್ತು. ಡೇವಿಡ್ ವಾರ್ನರ್ 418 ಎಸೆತಗಳನ್ನು ಎದುರಿಸಿದ್ದ ವಾರ್ನರ್ 39 ಬೌಂಡರಿ ಹಾಗೂ ಸಿಕ್ಸ್ ನೆರವಿನಿಂದ 335 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದರಿಂದಾಗಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಲಾರಾ ಅವರ ದಾಖಲೆಯನ್ನು ಹಿಂದಿಕ್ಕುವ ಅವಕಾಶದಿಂದ ವಾರ್ನರ್ ವಂಚಿತರಾದರು. ಬ್ರಿಯಾನ್‌ ಲಾರಾ ಏಪ್ರಿಲ್ 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಆಂಟಿಗುವಾದಲ್ಲಿ ನಡೆದ ಟೆಸ್ಟ್ ನಲ್ಲಿ 582 ಎಸೆತಗಳನ್ನು ಎದುರಿಸಿ ಅಜೇಯ 400 ರನ್ ಗಳಿಸಿದ್ದರು.

  • ಗಾಂಧಿ ದೇಶದ ಮಗ – ವಿವಾದಕ್ಕೀಡಾದ ಸಾಧ್ವಿ ಪ್ರಜ್ಞಾ ಸಿಂಗ್

    ಗಾಂಧಿ ದೇಶದ ಮಗ – ವಿವಾದಕ್ಕೀಡಾದ ಸಾಧ್ವಿ ಪ್ರಜ್ಞಾ ಸಿಂಗ್

    ಭೋಪಾಲ್: ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮಹಾತ್ಮ ಗಾಂಧೀಜಿಯವರು ದೇಶದ ಮಗ ಎಂದು ಹೇಳಿಕೆ ನೀಡುವ ಮೂಲಕ ಸಾಧ್ವಿ ಅವರು ವಿವಾದಕ್ಕೀಡಾಗಿದ್ದಾರೆ.

    ಇಂದು ಭೋಪಾಲ್‍ನ ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರನ್ನು ದೇಶದ ಮಗ. ಅವರು ಮಾಡಿರುವ ಒಳ್ಳೆಯ ಕೆಲಸವನ್ನು ನಾನು ಮೆಚ್ಚುತ್ತೇನೆ. ಅವರು ರಾಷ್ಟ್ರಕ್ಕಾಗಿ ಮಾಡಿರುವ ಒಳ್ಳೆಯ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ. ನಾನು ಕೂಡ ಗಾಂಧೀಜಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತೇನೆ. ಅವರ ಒಳ್ಳೆಯ ಕೆಲಸವನ್ನು ನಾವು ಕೂಡ ಹೊಗಳುತ್ತೇವೆ. ಅವರು ಮಾಡಿದ ಕೆಲಸವನ್ನು ನಾವೂ ಅನುಸರಿಸುತ್ತೇವೆ ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆ. ಇದನ್ನು ಓದಿ: ಗೋಡ್ಸೆಯಿಂದ ಗಾಂಧೀಜಿ ದೇಹ ಹತ್ಯೆ, ಪ್ರಜ್ಞಾಸಿಂಗ್‍ರಿಂದ ಆತ್ಮದ ಕೊಲೆ: ಕೈಲಾಶ್ ಸತ್ಯಾರ್ಥಿ

    ಮಹಾತ್ಮ ಗಾಂಧೀಜಿ ಅವರು 150ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿಯಿಂದ ರಾಷ್ಟ್ರವ್ಯಾಪಿ ಗಾಂಧಿ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆಯಲ್ಲಿ ಬಿಜೆಪಿಯ ಹಲವಾರು ನಾಯಕರು ಭಾಗವಹಿಸಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ ಗಾಂಧೀಜಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಬಾಲಿವುಡ್ ಸ್ಟಾರ್ ಗಳ ಜೊತೆ ಸಂವಾದ ನಡೆಸಿದ್ದಾರೆ. ಆದರೆ ಸಾಧ್ವಿ ಪ್ರಜ್ಞಾ ಮಾತ್ರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.

    ಇದೇ ವೇಳೆ ಸಾಧ್ವಿ ಪ್ರಜ್ಞಾ ಅವರನ್ನು ನೀವು ಯಾಕೆ ಮಹಾತ್ಮ ಗಾಂಧೀಜಿ ಅವರ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿಲ್ಲ ಎಂದು ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಾಧ್ವಿ ಪ್ರಜ್ಞಾ ನಾನು ಗಾಂಧಿಯನ್ನು ಮೆಚ್ಚುತ್ತೇನೆ ಅವರ ಒಳ್ಳೆಯ ಕೆಲಸವನ್ನು ಪ್ರಶಂಸೆ ಮಾಡುತ್ತೇನೆ. ಆದರೆ ನೀವು ಕೇಳಿದ ಎಲ್ಲ ಪ್ರಶ್ನೆಗಳಿಗೂ ವಿವರಣೆ ನೀಡುವ ಅಗತ್ಯ ನನಗಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ಗೋಡ್ಸೆ ಒಬ್ಬರನ್ನು ಕೊಂದ್ರೆ ರಾಜೀವ್ ಕೊಂದಿದ್ದು 17 ಸಾವಿರ – ಕ್ಷಮೆ ಕೇಳಿದ ಕಟೀಲ್

    2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ ಸಾಧ್ವಿ ಪ್ರಜ್ಞಾ ಇದಕ್ಕೂ ಮುನ್ನ ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈ ವಿಚಾರವಾಗಿ ಬಿಜೆಪಿ ಸಾಧ್ವಿ ಪ್ರಜ್ಞಾಗೆ ಶೋಕಾಸ್ ನೋಟಿಸ್ ಕೂಡ ನೀಡಿತ್ತು.

  • ಸಿದ್ದರಾಮಯ್ಯ ಸಾವರ್ಕರ್ ಕಾಲಿನ ಧೂಳಿಗೂ ಸಮವಲ್ಲ- ಸುನೀಲ್ ಕುಮಾರ್

    ಸಿದ್ದರಾಮಯ್ಯ ಸಾವರ್ಕರ್ ಕಾಲಿನ ಧೂಳಿಗೂ ಸಮವಲ್ಲ- ಸುನೀಲ್ ಕುಮಾರ್

    ಉಡುಪಿ: ಸಾವರ್ಕರ್ ಬ್ರಿಟಿಷರ ವಿರುದ್ಧ ಹೋರಾಡಿದವರು. ಸಿದ್ದರಾಮಯ್ಯ ಸಾವರ್ಕರ್ ಅವರ ಪಾದದ ಧೂಳಿಗೂ ಸಮವಲ್ಲ ಎಂದು ಬಿಜೆಪಿ ನಾಯಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

    ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದ್ದ ಸಾವರ್ಕರ್ ಗೆ ಕೇಂದ್ರ ಸರ್ಕಾರ ಭಾರತ ರತ್ನ ಕೊಡಲು ಮುಂದಾಗಿದೆ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅಗೌರವದ ಮಾತನಾಡಿದ್ದಾರೆ. ಇವರು ಸಾವರ್ಕರ್ ನ ಕಾಲಿನ ಧೂಳಿಗೂ ಸಮವಲ್ಲ ಎಂದರು.

    ದೇಶಾಭಿಮಾನಿಗಳಿಗೆ ಗೌರವ ಕೊಡುವ ಗುಣ ಕಾಂಗ್ರೆಸ್ ಅವರ ರಕ್ತದಲ್ಲೇ ಇಲ್ಲ. ನೂರಾರು ಹೋರಾಟಗಾರರಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಲೇ ಬಂದಿದೆ. ಸಿದ್ದರಾಮಯ್ಯ ಇತಿಹಾಸ ತಿಳಿಯದ ಉಡಾಫೆ ಮಾತನಾಡುವ ವ್ಯಕ್ತಿ. ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ. ವೀರ ಸಾವರ್ಕರ್ ಬಲಿದಾನ ಯುವ ಪೀಳಿಗೆಗೆ ಮಾರ್ಗದರ್ಶಕ. ಸಿದ್ದರಾಮಯ್ಯನವರು ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು. ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ವಿಧಾನಸಭೆಯ ಮುಖ್ಯ ಸಚೇತಕ ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.