Tag: Maharashtra Election

  • ಈ ಮೋದಿ ಇರೋವರೆಗೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಗುಡುಗಿದ ಪ್ರಧಾನಿ

    ಈ ಮೋದಿ ಇರೋವರೆಗೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಗುಡುಗಿದ ಪ್ರಧಾನಿ

    ಮುಂಬೈ (ನಾಸಿಕ್‌): ಈ ಮೋದಿ ಇದೋವರೆಗೂ ಈ ದೇಶದಲ್ಲಿ ಕಾಂಗ್ರೆಸ್‌ ಯಾವುದೇ ಪಿತೂರಿ ಮಾಡಲು ಸಾಧ್ಯವಿಲ್ಲ. ಅಂಬೇಡ್ಕರ್‌ ಸಂವಿಧಾನ ಮಾತ್ರ ಈ ದೇಶದಲ್ಲಿ ನಡೆಯುತ್ತದೆ. ಯಾವುದೇ ಶಕ್ತಿಯು 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

    ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಸಿಕ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಣಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಪಿತೂರಿಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: Articles 370 Row | ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನ ಮಾರಾಮಾರಿ

    ಕಾಂಗ್ರೆಸ್‌ ಪಕ್ಷವು ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ವಿಧಾನಸಭೆಯಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಈಗಾಗಲೇ ಅಂಗೀಕರಿಸಲಾಗಿದೆ. ಮಹರಾಷ್ಟ್ರದ ಜನತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ ಪಿತೂರಿಗಳನ್ನು ಅರ್ಥಮಾಡಿಕೊಳ್ಳಬೇಕು. 370ನೇ ವಿಧಿಯ ಮೇಲಿನ ನಿರ್ಣಯವನ್ನು ಈ ದೇಶ ಒಪ್ಪಿಕೊಳ್ಳುವುದಿಲ್ಲ. ಮೋದಿ ಇದುವವರೆಗೂ ಕಾಶ್ಮೀರದಲ್ಲಿ ಕಾಂಗ್ರೆಸ್‌ ಯಾವುದೇ ಪಿತೂರಿ ಮಾಡಲು ಸಾಧ್ಯವಾಗುವುದಿಲ್ಲ. ಅಂಬೇಡ್ಕರ್‌ ಅವರ ಸಂವಿಧಾನ ಮಾತ್ರ ಈ ದೇಶದಲ್ಲಿ ನಡೆಯುತ್ತದೆ. ಯಾವುದೇ ಶಕ್ತಿಯು 370ನೇ ವಿಧಿ ಮರಳಿ ತರಲು ಸಾಧ್ಯವಿಲ್ಲ ಎಂದು ಗುಡುಗಿದರು.

    ರಾಹುಲ್‌ ಗಾಂಧಿಗೆ ಮೋದಿ ಸವಾಲ್‌:
    ವೀರ ಸಾವರ್ಕರ್‌ರನ್ನ ಹಾಡಿ ಹೊಗಳಿದರು. ಇದೇ ವೇಳೆ ಸಾವರ್ಕರ್‌, ಬಾಳಾಸಾಹೇಬ್‌ ಠಾಕ್ರೆ ಅವರನ್ನ ಹೊಗಳುವಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಸವಾಲ್‌ ಹಾಕಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ.. ರಕ್ಷಣೆ ಮಾಡಿ – ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ

    ಕಾಂಗ್ರೆಸ್‌ನವರು ಮೊದಲಿನಿಂದಲೂ ಸಾವರ್ಕರ್‌ ಅವರನ್ನ ನಿಂದಿಸುತ್ತಿದ್ದಾರೆ. ಆದ್ರೆ ಎಂವಿಎ ಈ ಚುನಾವಣೆಯಲ್ಲಿ ಗೆಲ್ಲಬೇಕಾದ್ರೆ ಸಾವರ್ಕರ್‌ ನಿಂದಿಸೋದನ್ನ ನಿಲ್ಲಿಸುವಂತೆ ಕಾಂಗ್ರೆಸ್‌ನ ʻಯುವರಾಜʼನಿಗೆ ಹೇಳಿದೆ. ಆದ್ರೆ ಕಾಂಗ್ರೆಸ್‌ ಎಂದಿಗೂ ಸಾವರ್ಕರ್‌ ಹಾಗೂ ಶಿವಸೇನೆ ಸಂಸ್ಥಾಪಕರನ್ನು ಹೊಗಳುವುದಿಲ್ಲ. ಅವರಿಗೆ ನೈತಿಕತೆಯಿದ್ದರೆ ಸಾವರ್ಕರ್‌ ಅವರ ತ್ಯಾಗ ಸಮರ್ಪಣೆಯನ್ನು ಪ್ರಸಂಶಿಸುವಂತೆ ಸವಾಲು ಹಾಕುತ್ತೇನೆ ಎಂದಿದ್ದಾರೆ.

    ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಾವರ್ಕರ್ ಅವರು ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದವರು. ಆದ್ರೆ ಕಾಂಗ್ರೆಸ್‌ ಅವರ ತ್ಯಾಗವನ್ನ ಕಡೆಗಣಿಸುತ್ತಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಅವರ ಪಾತ್ರವನ್ನು ಟೀಕಿಸುತ್ತಿದೆ. ತಮ್ಮ ಹೆಸರು ಗಾಂಧಿ, ಸಾವರ್ಕರ್ ಅಲ್ಲ. ಹಾಗಾಗಿ ಯಾರ ಬಳಿಯೂ ʻಯುವರಾಜʼ ಕ್ಷಮೆ ಕೇಳುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ವಯನಾಡಿನಲ್ಲಿ ಸ್ಪರ್ಧೆ – ಪಿಣರಾಯಿ ವಿಜಯನ್‌

    ಜಾತಿಗಳ ನಡುವೆ ಸಂಘರ್ಷ ತಂದಿದ್ದು ಕಾಂಗ್ರೆಸ್:
    ಮುಂದುವರಿದು, ಮಹಾಯುತಿ ಒಕ್ಕೂಟದ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡಲಿದೆ. ಮಹಾ ವಿಕಾಸ್ ಆಘಾಡಿಯ ಡ್ರೈವರ್ ಯಾರು ಎನ್ನುವುದು ಆ ಒಕ್ಕೂಟದ ನಾಯಕರಿಗೇ ಸ್ಪಷ್ಟತೆಯಿಲ್ಲ. ಹೀಗಿದ್ದಾಗ, ಅವರಿಗೆ ಅಧಿಕಾರ ಕೊಟ್ಟರೆ ಸುಭದ್ರ ಸರ್ಕಾರವನ್ನು ನೀಡಬಲ್ಲರೇ? ಜಾತಿಜಾತಿಗಳ ನಡುವೆ ಸಂಘರ್ಷವನ್ನು ಕಾಂಗ್ರೆಸ್ ತಂದಿತು. ಇದರಿಂದ ದೇಶ ಇಬ್ಬಾಗವಾಯಿತು. ಈಗ ಪರಿಶಿಷ್ಟ ಜಾತಿ, ಪಂಗಡ ಮತ್ತುಇತರ ಹಿಂದುಳಿದ ವರ್ಗಗಳ ನಡುವೆ ತಂದಿಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದು, ಸಾಮಾನ್ಯವಾಗಿ ಕಾಂಗ್ರೆಸ್ ಅನುಸರಿಸುತ್ತಿರುವ ನೀತಿ ಎಂದು ಕಿಡಿ ಕಾರಿದ್ದಾರೆ.

    288 ಕ್ಷೇತ್ರಗಳ ವಿಧಾನಸಭೆಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದ್ದು, ನ.23ಕ್ಕೆ ಫಲಿತಾಂಶ ಹೊರಬೀಳಲಿದೆ.

  • ಮಹಾರಾಷ್ಟ್ರ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲ್ಲ – ಮಹಾ ವಿಕಾಸ್‌ ಅಘಾಡಿ ಒಕ್ಕೂಟಕ್ಕೆ ಬೆಂಬಲ

    ಮಹಾರಾಷ್ಟ್ರ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲ್ಲ – ಮಹಾ ವಿಕಾಸ್‌ ಅಘಾಡಿ ಒಕ್ಕೂಟಕ್ಕೆ ಬೆಂಬಲ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಸ್ಪರ್ಧಿಸುವುದಿಲ್ಲ. ಮಹಾ ವಿಕಾಸ್‌ ಅಘಾಡಿ (MVA) ಒಕ್ಕೂಟದ ಪರ ಪ್ರಚಾರ ನಡೆಸಲಿದೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್‌ ತಿಳಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಎಂವಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಆಮ್ ಆದ್ಮಿ ಪಕ್ಷವು ಮಹಾರಾಷ್ಟ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

    ಮಹಾರಾಷ್ಟ್ರದಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಚಾರ ಮಾಡುತ್ತಿರುವ ಬಗ್ಗೆ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ-ಎಸ್‌ಪಿ ಪಕ್ಷವನ್ನು ಸಂಪರ್ಕಿಸಿವೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಹೇಮಂತ್ ಸೋರೆನ್ ಅವರ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪರ ಪ್ರಚಾರ ಮಾಡಲು ಅರವಿಂದ್ ಕೇಜ್ರಿವಾಲ್ ಕೂಡ ಸಿದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಎಂವಿಎ ಒಕ್ಕೂಟವು ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ), ಶರದ್ ಪವಾರ್ ಅವರ ಎನ್‌ಸಿಪಿ-ಎಸ್‌ಪಿ ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿದೆ.

    ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಸ್ಥಾನಗಳಿದ್ದು, ನ.20 ರಂದು ಮತದಾನ ನಡೆಯಲಿದೆ. ಜಾರ್ಖಂಡ್‌ನಲ್ಲಿ ನ.13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಎರಡೂ ರಾಜ್ಯಗಳ ಮತ ಎಣಿಕೆ ನವೆಂಬರ್ 23 ರಂದು ನಡೆಯಲಿದೆ.

    ಎಎಪಿ ಮತ್ತು ಎಂವಿಎ ಘಟಕಗಳು ಬಿಜೆಪಿಯನ್ನು ಎದುರಿಸಲು 2024 ರ ಲೋಕಸಭಾ ಚುನಾವಣೆಯ ಮೊದಲು ರಚಿಸಲಾದ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (ಭಾರತ) ಭಾಗವಾಗಿದೆ.

  • ಕುಣಿಯಲಾಗದೆ, ನೆಲ ಡೊಂಕು ಎನ್ನುತ್ತಿದ್ದಾರೆ- ಸಿದ್ದರಾಮಯ್ಯಗೆ ಸಚಿವ ನಾಗೇಶ್ ಟಾಂಗ್

    ಕುಣಿಯಲಾಗದೆ, ನೆಲ ಡೊಂಕು ಎನ್ನುತ್ತಿದ್ದಾರೆ- ಸಿದ್ದರಾಮಯ್ಯಗೆ ಸಚಿವ ನಾಗೇಶ್ ಟಾಂಗ್

    ಕೋಲಾರ: ಕುಣಿಯಲಾಗವರಿಗೆ ನೆಲ ಡೊಂಕು ಎನ್ನುವ ರೀತಿ ಇವಿಎಂ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಟಾಂಗ್ ನೀಡಿದ್ದಾರೆ.

    ಕೋಲಾರದ ಅಲ್ ಅಮೀನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ವಿಶ್ವಪ್ರಸಿದ್ಧರಾಗಿದ್ದಾರೆ. ಹೀಗಾಗಿ ದೇಶಾದ್ಯಂತ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಅಲ್ಲದೆ ಮೋದಿಯವರಿಗೆ ಯಾವುದೇ ಆಸೆ ಆಮಿಷಗಳಿಲ್ಲ, ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಶಿಸ್ತಿನಿಂದ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ಆರೋಪ ಸರಿಯಲ್ಲ ಎಂದರು.

    ಪ್ರಧಾನಿ ಮೋದಿ ಅವರಿಗೆ ಯಾವುದೇ ವೈಯಕ್ತಿಕ ಆಸೆಗಳಿಲ್ಲ. ಅವರು ಸೋಲಿಲ್ಲದ ಸರದಾರರಾಗಿದ್ದು, ಮೂರು ಹೊತ್ತು ಊಟ ಹಾಗೂ ದೇಶದ ಬಗ್ಗೆ ಮಾತ್ರ ಗಮನಹರಿಸುವಂತಹ ಪರೋಪಕಾರಿಯಾಗಿದ್ದಾರೆ ಎಂದು ಪ್ರಧಾನಿಯನ್ನು ಹಾಡಿ ಹೊಗಳಿದರು.

    ಪ್ರವಾಹ ಪೀಡಿತ ಪ್ರದೇಶಗಳಿಗೆ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಲಾಗಿದ್ದು, ಅವರು ಆಯಾ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಜೊತೆಗೆ ಶೀಘ್ರ ಪರಿಹಾರಕ್ಕಾಗಿ ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹೀಗಾಗಿ ಬಿಜೆಪಿ ನೆರೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ ಎಂದರು.

  • ಮೋದಿ ಯಾವಾಗ ಏನು ಮಾತಾಡ್ತಾರೆ ಅಂತಾನೆ ಗೊತ್ತಾಗಲ್ಲ: ಖರ್ಗೆ

    ಮೋದಿ ಯಾವಾಗ ಏನು ಮಾತಾಡ್ತಾರೆ ಅಂತಾನೆ ಗೊತ್ತಾಗಲ್ಲ: ಖರ್ಗೆ

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಯಾವಾಗ ಏನು ಮಾತನಾಡುತ್ತಾರೆ ಎಂದು ಗೊತ್ತಾಗುವುದೇ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಪಾಕಿಸ್ತಾನಕ್ಕೆ ನೀರು ಬಿಡುವುದಿಲ್ಲ ಎನ್ನುತ್ತಾರೆ. ಇದರ ಅಗತ್ಯವಿತ್ತೇ, ಪ್ರಧಾನಿ ಮೋದಿಗೆ ಯಾವಾಗ ಏನು ಮಾತನಾಡಬೇಕೆಂಬುದೇ ಗೊತ್ತಿಲ್ಲ. ಇದನ್ನೆಲ್ಲ ಜನ ಗಮನಿಸುತ್ತಾರೆ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹರಿಹಾಯ್ದರು.

    ಸಾವರ್ಕರ್ ಗೆ ಭಾರತ ರತ್ನ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆ ಇರುವುದರಿಂದ ಈಗ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಚುನಾವಣೆ ಮುಗಿದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಜಾರಿಕೊಂಡರು.

    ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇಂದು ಬಹಿರಂಗ ಪ್ರಚಾರ ಅಂತ್ಯವಾಗಿದೆ. ಮಹಾರಾಷ್ಟ್ರದಲ್ಲಿ ಒಳ್ಳೆಯ ಸ್ಥಿತಿ ಇದೆ, ನಾನು ಸಾಧ್ಯವಾದಷ್ಟು ಪ್ರಮುಖ ಸ್ಥಳದಲ್ಲಿ ಪ್ರಚಾರ ಮಾಡಿದ್ದೇನೆ. ರೈತರು ಸೇರಿದಂತೆ ಜನರು ಮಹಾರಾಷ್ಟ್ರ ಸರ್ಕಾರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಮುಂಬೈ ಸುತ್ತಮುತ್ತ ಹಾಗೂ ಮಹಾರಾಷ್ಟ್ರದಲ್ಲಿ 2,200 ಉದ್ಯಮಗಳು ಮುಚ್ಚಿಹೋಗಿವೆ ಹೀಗಾಗಿ ಜನ ಈ ಬಾರಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದರು.

    ಎನ್‍ಸಿಪಿ, ಕಾಂಗ್ರೆಸ್, ಸಿಪಿಎಂ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಹೆಚ್ಚಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಎಲ್ಲವನ್ನೂ ತೋರಿಸುತ್ತಾರೆ. ಅನೇಕ ಉದ್ಯೋಗಪತಿಗಳು ಚಾನೆಲ್‍ಗಳನ್ನು ನಡೆಸುತ್ತಿದ್ದಾರೆ. ಅಪ್ರತ್ಯಕ್ಷವಾಗಿ ಕೆಲವು ಮಾಧ್ಯಮಗಳನ್ನು ಬಿಜೆಪಿಯವರು ಕಂಟ್ರೋಲ್‍ನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.

    ಪ್ರಧಾನಿ ಚುನಾವಣೆಗಾಗಿ ಹತ್ತಾರು ದಿವಸಗಳ ಕಾಲಹರಣ ಮಾಡಿದ್ದಾರೆ. ರಾಜ್ಯದಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಹೇಳಲು ಯಾವುದೇ ವಿಷಯ ಇಲ್ಲ. ಐದು ವರ್ಷಗಳಲ್ಲಿ ಫಡ್ನವಿಸ್ ಸರ್ಕಾರ ಏನು ಮಾಡಿದೆ ಎಂಬದರ ಕುರಿತು ಉತ್ತರಿಸುತ್ತಿಲ್ಲ. 370 ರದ್ದು ಮಾಡಿದ್ದೇವೆ. ಅದನ್ನು ಮಾಡಿದ್ದೇವೆ, ಇದನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ವಿಷಯದ ಮೇಲೆ ಅವರು ಚುನಾವಣೆ ಮಾಡುತ್ತಾರೆ, ರಾಜ್ಯದಲ್ಲಿ ಏನು ಮಾಡಿದ್ದಾರೆ ಎಂಬುದರ ಕುರಿತು ಹೇಳಲ್ಲ ಎಂದು ಕಿಡಿಕಾರಿದರು.

    ಮಹದಾಯಿ ವಿಚಾರವನ್ನು ನಾವು ಹಿಂದೆ ಅಧಿಕಾರದಲ್ಲಿದ್ದಾಗಲೂ ಚರ್ಚೆ ಮಾಡಿದ್ದೇವೆ. ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತದೆ. 8 ಟಿಎಂಸಿ ನೀರು ಕೇಳಿದ್ದೇವೆ, ಗೋವಾದವರು ಗಮನ ಹರಿಸುತ್ತಿಲ್ಲ. ಆ ಭಾಗದ ಜನರ ಸಮಸ್ಯೆಯಷ್ಟೇ ಅಲ್ಲ ಇದು ಇಡೀ ರಾಜ್ಯದ ಸಮಸ್ಯೆ. ಇದು ನಮ್ಮ ರಾಜ್ಯದ ಸಮಸ್ಯೆ ಎಂದು ಪರಿಗಣಿಸಿ ಎಲ್ಲರೂ ಪಕ್ಷಾತೀತವಾಗಿ ಸೇರಿ ಇದನ್ನು ಬಗೆಹರಿಸಬೇಕು ಎಂದರು.

  • ಮಹಾ ಚುನಾವಣೆಯಲ್ಲಿ ಮೈತ್ರಿಯಾದ್ರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಶಿವಸೇನೆ ನೇರ ಸ್ಪರ್ಧೆ

    ಮಹಾ ಚುನಾವಣೆಯಲ್ಲಿ ಮೈತ್ರಿಯಾದ್ರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಶಿವಸೇನೆ ನೇರ ಸ್ಪರ್ಧೆ

    – ಫಡ್ನಾವಿಸ್, ಉದ್ಧವ್ ಠಾಕ್ರೆ ಪ್ರಚಾರ
    – ದೇಶದ ಗಮನ ಸೆಳೆದಿದೆ ಸಿಂಧೂದುರ್ಗ ಜಿಲ್ಲೆಯ ಕ್ಷೇತ್ರ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ಆದರೆ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ, ಶಿವಸೇನೆ ನೇರ ಹಣಾಹಣಿ ಎದುರಿಸುವಂತಾಗಿದೆ.

    ಸೋಮವಾರ ಮಹಾರಾಷ್ಟ್ರ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದ್ದು, ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಅಭ್ಯರ್ಥಿಗಳು ಎದುರಾಳಿಗಳಾಗಿದ್ದಾರೆ. ಸಿಂಧೂದುರ್ಗ ಜಿಲ್ಲೆಯ ಕಂಕವ್ಲಿ ಕ್ಷೇತ್ರದಲ್ಲಿ ಬಿಜೆಪಿಯ ನಿತೀಶ್ ರಾಣೆ ಹಾಗೂ ಶಿವ ಸೇನೆಯ ಸತೀಶ್ ಸಾವಂತ್ ಪರಸ್ಪರ ಎದುರಾಳಿಯಾಗಿದ್ದಾರೆ.

    2014ರಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಜಯಗಳಿಸಿದ್ದ ರಾಣೆ, ನಂತರ ಅವರ ತಂದೆಯಾದಿಯಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ಹೀಗಾಗಿ ಬಿಜೆಪಿ ಇವರಿಗೆ ಟಿಕೆಟ್ ನೀಡಲೇಬೇಕೆಂಬ ಒತ್ತಡದಲ್ಲಿ ಸಿಲುಕಿತು. ಇತ್ತ ಶಿವಸೇನೆಯ ಸಾವಂತ್ ಸಹ ತಮ್ಮ ಹಠವನ್ನು ಬಿಡಲಿಲ್ಲ. ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಾವಂತ್ ನಿರ್ಧರಿಸಿದ್ದರು. ಅಲ್ಲದೆ ನಾಮಪತ್ರವನ್ನು ಸಹ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ಶಿವಸೇನೆಯಿಂದ ಸಾವಂತ್ ಅವರನ್ನು ಮನವೊಲಿಸಲು ಸಾಧ್ಯವಾಗದ ಕಾರಣ ಪಕ್ಷದಿಂದಲೇ ಟಿಕೆಟ್ ನೀಡಲಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

    ನಿತೀಶ್ ರಾಣೆ ಹಾಗೂ ಅವರ ತಂದೆ, ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಈ ತಿಂಗಳ ಆರಂಭದಲ್ಲಿ ಬಿಜೆಪಿ ಸೇರಿದ್ದರು. ವಿಶೇಷ ಏನೆಂದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಇಬ್ಬರೂ ಸಹ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಇಲ್ಲಿ ಪ್ರಚಾರ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕಂಕವ್ಲಿ ಕ್ಷೇತ್ರ ಇದೀಗ ಮಹಾರಾಷ್ಟ್ರದಲ್ಲಿ ಭಾರೀ ಕುತೂಹಲದ ಕಣವಾಗಿ ಮಾರ್ಪಟ್ಟಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಮತ್ತೆ ಅಧಿಕಾರಕ್ಕೆ ಬರಲಿದೆ. ಆದರೆ ಕಂಕವ್ಲಿಯಲ್ಲಿ ಬಿಜೆಪಿಯ ನಿತೀಶ್ ರಾಣೆ ಶೇ.70 ಮತಗಳನ್ನು ಪಡೆದು ಜಯಗಳಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ನಾರಾಯಣ್ ರಾಣೆ ಹಾಗೂ ಅವರ ಕುಟುಂಬ ಬಿಜೆಪಿ ಸೇರ್ಪಡೆಯಾಗಿದ್ದಕ್ಕೆ ತುಂಬಾ ಸಂತಸವಾಗಿದೆ. ಕೊಂಕಣ ಸಮಸ್ಯೆ ಬಂದಾಗಲೆಲ್ಲ ನಿತೀಶ್ ರಾಣೆ ತುಂಬಾ ಆಕ್ರಮಣಕಾರಿಯಾಗುತ್ತಿದ್ದರು. ಅವರಿಗೆ ತಂದೆ ನಾರಾಯಣ್ ತರಬೇತಿ ನೀಡಿದ್ದಾರೆ. ಆದರೆ ಈಗ ಅವರು ನಮ್ಮ ಶಾಲೆಗೆ ಬರಬೇಕಿದೆ. ಅವರ ಆಕ್ರಮಣಶೀಲತೆಯನ್ನು ನಾವು ಕಡಿಮೆ ಮಾಡುವುದಿಲ್ಲ. ಬದಲಿಗೆ ಸ್ವನಿಯಂತ್ರಣ ಹಾಕಿಕೊಳ್ಳುವ ಕುರಿತು ಅವರಿಗೆ ಕಲಿಸಿಕೊಡುತ್ತೇವೆ ಎಂದು ಹೇಳಿದ್ದರು.

    ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸಹ ಇಲ್ಲಿ ಪ್ರಚಾರ ಮಾಡಿದ್ದು, ನಿತೀಶ್ ರಾಣೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಠಾಕ್ರೆ, ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ ಈ ಕ್ಷೇತ್ರಕ್ಕೆ ನಾನು ಬಂದಿದ್ದೇನೆ. ಏಕೆಂದರೆ ಇಲ್ಲಿ ಶಿವಸೇನೆ ಅಭ್ಯರ್ಥಿ ಗೆಲ್ಲಬೇಕಿದೆ. ಇದರರ್ಥ ಶಿವಸೇನೆ ಹಾಗೂ ಬಿಜೆಪಿ ಮತ್ತೆ ಹೋರಾಡುತ್ತಿದೆ ಎಂದಲ್ಲ. ಅಲ್ಲದೆ ಮುಖ್ಯಮಂತ್ರಿ ಹಾಗೂ ನಾನು ವಾದ ಮಾಡುತ್ತಿದ್ದೇವೆ ಎಂದೂ ಅಲ್ಲ, ಮುಖ್ಯಮಂತ್ರಿ ಹಾಗೂ ನಾನು ಉತ್ತಮ ಸ್ನೇಹಿತರು. ಬಿಜೆಪಿಯೊಂದಿಗೆ ಗಟ್ಟಿಯಾದ ಮೈತ್ರಿ ಹೊಂದಿದ್ದೇವೆ. ಬಿಜೆಪಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ನಾವು ಅವರ ಪರವಾಗಿಯೇ ಪ್ರಚಾರ ಮಾಡುತ್ತಿದ್ದೆವು. ನಾವು ಈ ಹಿಂದೆ ತಪ್ಪು ಮಾಡಿದ್ದೇವೆ, ಅದೇ ತಪ್ಪನ್ನು ನನ್ನ ಸ್ನೇಹಿತರು ಮಾಡಬಾರದು. ಹೀಗಾಗಿ ಶಿವಸೇನೆ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

    ಅಲ್ಲದೆ 2004-05ರಲ್ಲಿ ಅವರು ಶಿವಸೇನೆಯನ್ನು ಬಿಡಲಿಲ್ಲ. ನಾವೇ ಅವರನ್ನು ಪಕ್ಷದಿಂದ ಹೊರಹಾಕಿದ್ದೇವೆ ಎಂದು ನಾರಾಯಣ ರಾಣೆ ವಿರುದ್ಧ ಠಾಕ್ರೆ ಆರೋಪಿಸಿದ್ದರು.

    ಮಹಾರಾಷ್ಟ್ರದ ಚುನಾವಣೆ ರಂಗೇರಿದೆ. ಅದರ ಮಧ್ಯೆಯೇ ಕಂಕವ್ಲಿ ಕ್ಷೇತ್ರ ಸಹ ಇನ್ನೂ ರಂಗೇರಿದ್ದು, ಮೈತ್ರಿಯನ್ನು ಲೆಕ್ಕಿಸದೆ ಕೇವಲ ಈ ಕ್ಷೇತ್ರಕ್ಕಾಗಿ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

  • ಬಿಜೆಪಿಗೆ ವೋಟ್ ಹಾಕಿದ್ರೆ ನಿಮಗೆ ಕರ್ನಾಟಕದ ನೀರು – ಮಹಾರಾಷ್ಟ್ರದ ಜನತೆಗೆ ಬಿಎಸ್‍ವೈ ಮಾತು

    ಬಿಜೆಪಿಗೆ ವೋಟ್ ಹಾಕಿದ್ರೆ ನಿಮಗೆ ಕರ್ನಾಟಕದ ನೀರು – ಮಹಾರಾಷ್ಟ್ರದ ಜನತೆಗೆ ಬಿಎಸ್‍ವೈ ಮಾತು

    ಬೆಂಗಳೂರು: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ಗಡಿ ಭಾಗಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬುಧವಾರ ಜತ್ ತಾಲೂಕಿನಲ್ಲಿ ಮಹಾರಾಷ್ಟ್ರಕ್ಕೆ ಕರ್ನಾಟಕದ ನೀರು ಹರಿಸುವುದಾಗಿ ಸಿಎಂ ಯಡಿಯೂರಪ್ಪ ಮಾತು ನೀಡಿರುವ ವಿಡಿಯೋ ಕ್ಲಿಪ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬಿಎಸ್‍ವೈ ಹೇಳಿದ್ದೇನು?
    ಜತ್ ತಾಲೂಕಿನ ಹೆಚ್ಚು ಜನರು ಕನ್ನಡ ಭಾಷಿಕರು. ಕೃಷಿ ಮತ್ತು ಕುಡಿಯುವ ನೀರಿನ ಅಭಾವ ತೀವ್ರವಾಗಿರುವಂತದ್ದು. ಇವತ್ತು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ತಲುಪಿದೆ. ಈ ಗ್ರಾಮದಿಂದ 8-10 ಕಿಮೀ ದೂರದಲ್ಲಿ ಹರಿಯುತ್ತಿರುವ ಬೋರಾ ನದಿಗೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಹರಿಸುವುದರಿಂದ 30-40 ಗ್ರಾಮಗಳಿಗೆ 1 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಅನುಕೂಲ ಆಗುತ್ತೆ ಅನ್ನೋದನ್ನು ಕೇಳಿದ್ದೇವೆ.

    ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಹಾರಾಷ್ಟ್ರ ಸಿಎಂ ಘಡ್ನವೀಸ್ ಜೊತೆಗೂ ಚರ್ಚೆ ಮಾಡುತ್ತೇನೆ. ಮಹಾರಾಷ್ಟ್ರ ಬೇರೆ, ಕರ್ನಾಟಕ ಬೇರೆಯಲ್ಲ. ನೀರಿಲ್ಲದಿದ್ದರೆ ಬದುಕಲು ಆಗಲ್ಲ. ರೈತರ ಹೊಲಕ್ಕೆ ನೀರು ಬೇಕು, ರೈತರ ಬೆಳೆದಂತಹ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ರೈತರ ಉತ್ಪನ್ನ 2 ಪಟ್ಟು ಹೆಚ್ಚಾಗಬೇಕು ಅಂತಾ ಪ್ರಧಾನಿ ಮೋದಿ ಅಪೇಕ್ಷೆ ಇದೆ. ಇದನ್ನು ಪೂರೈಸಲು ನಮ್ಮ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಿಮಗೆ ಯಾವ ರೀತಿ ಅನುಕೂಲ ಮಾಡಕ್ಕೆ ಸಾಧ್ಯ ಇದೆಯೋ, ಚರ್ಚೆ ಮಾಡಿ ಸಹಕಾರ ಕೊಡುತ್ತೇನೆ. ಯಡಿಯೂರಪ್ಪ ಬಂದಿದ್ದಕ್ಕೆ, ಇಲ್ಲಿ ಮಾತನಾಡಿದ್ದಕ್ಕೆ ಹಿಂದಿನ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಡಬೇಕು ಎಂದು ಮತದಾರರಲ್ಲಿ ಸಿಎಂ ಮನವಿ ಮಾಡಿಕೊಂಡಿದ್ದಾರೆ.

    ಇದೇ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ವಿಜಯಪುರ ಜಿಲ್ಲೆಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ರಾಜ್ಯದಲ್ಲಿಯ ಜನರು ಭೀಕರ ಬರಗಾಲದಿಂದ ತತ್ತರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಹಾರಾಷ್ಟ್ರದ ಜನತೆಗೆ ನೀರು ಹರಿಸುವ ಮಾತುಗಳನ್ನಾಡುವುದು ಎಷ್ಟು ಸರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಕಳಸಾ-ಬಂಡೂರಿ ಯೋಜನೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕಾಗಿ ಅಧಿವೇಶನ ಮೊಟಕು?

    ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕಾಗಿ ಅಧಿವೇಶನ ಮೊಟಕು?

    – ಸುದ್ದಿಗೋಷ್ಠಿ ನಡೆಸಿ ಖಂಡ್ರೆ, ಉಗ್ರಪ್ಪ ಆರೋಪ
    – ಈಗಾಗಲೇ ಮಹಾರಾಷ್ಟ್ರ ಚುನಾವಣೆಯಲ್ಲಿ ಡಿಸಿಎಂಗಳು ಭಾಗಿ

    ಬೆಂಗಳೂರು: ಮಹಾರಾಷ್ಟ್ರದ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಬಿಜೆಪಿ ವಿಧಾನಸಭಾ ವಿಶೇಷ ಅಧಿವೇಶನದ ಸಮಯವನ್ನು 3 ದಿನಗಳಿಗೆ ಮೊಟಕುಗೊಳಿಸಿದೆ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಟೀಕೆ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ವಿ ಎಸ್ ಉಗ್ರಪ್ಪ ಅವರು, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರ ನೆರೆ ಪೀಡಿತ ಜಿಲ್ಲೆಗಳಿಗೆ ಅಲ್ಪ ಪರಿಹಾರ ಘೋಷಣೆಗೆ ಮಾಡಿದೆ. ನಮ್ಮ ರಾಜ್ಯದ ಜನ ಎರಡನೇ ದರ್ಜೆಯ ಜನರಾ? ರಾಜ್ಯ ಸರ್ಕಾರ 70 ದಿನಗಳಾದರೂ ಕೇವಲ ಹತ್ತು ಸಾವಿರ ರೂ. ಗಳನ್ನು ಮಾತ್ರ ಪರಿಹಾರವಾಗಿ ನೀಡಿದೆ. ಪ್ರತೀ ತಿಂಗಳು ಐದು ಸಾವಿರ ಮನೆ ಬಾಡಿಗೆ ಕೊಡುತ್ತೇವೆ ಎಂದು ಹೇಳಿದ್ದ ಸರ್ಕಾರ ಅದನ್ನು ನೀಡಿಲ್ಲ. ಆದರೆ ಬಿಜೆಪಿಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮಹಾರಾಷ್ಟ್ರಕ್ಕೆ ಹೋಗಲು ಸದನ ಮೊಟಕುಗೊಳಿಸಿದರು ಎಂದು ಆರೋಪಿಸಿದರು.

    ಈಗಾಗಲೇ ಇಬ್ಬರು ಡಿಸಿಎಂಗಳಾದ ಲಕ್ಷ್ಮಣ್ ಸವದಿ, ಅಶ್ವಥ್ ನಾರಾಯಣ ಅವರು ಮಹಾರಾಷ್ಟ್ರ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ನಾಳೆಯಿಂದ 2 ದಿನಗಳ ಕಾಲ ಸಿಎಂ ಬಿಎಸ್‍ವೈ ಅವರು ಕೂಡ ಪ್ರಚಾರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

    ಅಧಿವೇಶನ ಮೊಟಕುಗೊಳಿಸಿರುವ ಕುರಿತು ಸದನದಲ್ಲಿ ಸ್ಪಷ್ಟನೆ ನೀಡಿದ್ದ ಸಿಎಂ ಬಿಎಸ್‍ವೈ ಅವರು, ರಾಜ್ಯದಲ್ಲಿ ಉಂಟಾಗಿರುವ ನೆರೆಯಿಂದ ಶಾಸಕರು ಕ್ಷೇತ್ರಗಳಲ್ಲಿರುವುದು ಅಗತ್ಯವಾಗಿದ್ದು, ಪ್ರವಾಹ ಪರಿಹಾವನ್ನು ಜನರಿಗೆ ತಲುಪಿಸಲು ಶಾಸಕರು, ಸಚಿವರು ಆಯಾ ಕ್ಷೇತ್ರಗಳಲ್ಲಿ ಇರಬೇಕಾದ ಹಿನ್ನೆಲೆಯಲ್ಲಿ ಸದನ ಮೊಟಕುಗೊಳಿಸಿದ್ದಾಗಿ ಸ್ಪಷ್ಟನೆ ನೀಡಿದ್ದರು.

    ಸದ್ಯ ಸಿಎಂ ಬಿಎಸ್‍ವೈ ಸೇರಿದಂತೆ ಕರ್ನಾಟಕ 8 ಸಚಿವರು ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರ ಚುನಾವಣೆಯಲ್ಲಿ ಭಾಗಿಯಾಗಲು ಸೂಚನೆ ನೀಡಿದೆ. ಆ ಮೂಲಕ ಗಡಿ ಪ್ರದೇಶದಲ್ಲಿರುವ ಕ್ಷೇತ್ರಗಳ ಕನ್ನಡಿಗರನ್ನು ಪಕ್ಷದ ಕಡೆ ಸೆಳೆಯುವ ತಂತ್ರವನ್ನು ಮಾಡಿದ್ದಾರೆ. ಆದರೆ ಪರಿಹಾರ ಕಾರ್ಯದಲ್ಲಿ ನಿರತರಾಗಬೇಕಿದ್ದ ನಾಯಕರು ಮಹಾರಾಷ್ಟ್ರದ ಚುನಾವಣೆಯಲ್ಲಿ ಬ್ಯುಸಿಯಾಗಿರುವುದು ವಿಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ.

  • ಬಿಜೆಪಿ ಕಾರ್ಪೋರೇಟರ್ ಸೇರಿ ಐವರ ಕೊಲೆ

    ಬಿಜೆಪಿ ಕಾರ್ಪೋರೇಟರ್ ಸೇರಿ ಐವರ ಕೊಲೆ

    – ಮನೆಯಲ್ಲಿದ್ದ 8 ಮಂದಿಗೆ ಗಾಯ

    ಮುಂಬೈ: ಬಿಜೆಪಿ ಕಾರ್ಪೋರೇಟರ್ ಸೇರಿದಂತೆ ಐವರನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಭುಸ್ವಾಲ್ ನಗರದಲ್ಲಿ ನಡೆದಿದೆ. ಐವರಲ್ಲಿ ಕಾರ್ಪೋರೇಟರ್ ಕುಟುಂಬದ ಮೂವರು ಕೊಲೆಯಾಗಿದ್ದು, ಎಂಟು ಜನ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಚಾಕು ಸಹಿತ ನುಗ್ಗಿದ ಮೂವರು ಕೊಲೆಗೈದು ಪರಾರಿಯಾಗಿದ್ದಾರೆ. ಘಟನೆ ನಡೆದ ಗಂಟೆಯೊಳಗೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಬಿಜೆಪಿ ಕಾರ್ಪೋರೇಟರ್ ರವೀಂದ್ರ  ಖಾರಟ್ ಒಳಗೊಂಡಂತೆ ಇಬ್ಬರು ಮಕ್ಕಳು ಮತ್ತು ಹಿರಿಯ ಸೋದರ ಸುನಿಲ್ (55) ಹಾಗೂ ಓರ್ವ ಗೆಳೆಯ ಕೊಲೆಯಾದ ನತದೃಷ್ಟರು. ಇನ್ನು ಮನೆಯಲ್ಲಿದ್ದ ಎಂಟು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಾರ್ಪೋರೇಟರ್ ಪತ್ನಿ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಒಟ್ಟು ಐವರು ಸಾವನ್ನಪ್ಪಿದ್ದು, ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಸಂಶಯದ ಮೇಲೆ ಈಗಾಗಲೇ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸುಳಿವು ಸಿಕ್ಕಿದ್ದು, ಬಂಧಿತರು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಎಂಬುವುದು ಸದ್ಯಕ್ಕೆ ತಿಳಿದು ಬಂದಿದೆ. ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ದ್ವೇಷದಿಂದಲೇ ಕೊಲೆಗಳು ನಡೆದಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿವೆ ಎಂದು ಜಲಗಾಂವ್ ಡಿವೈಎಸ್‍ಪಿ ತಿಳಿಸಿದ್ದಾರೆ.

  • 5 ವರ್ಷದಲ್ಲಿ ಮಹಾರಾಷ್ಟ್ರ ಸಿಎಂ ಆಸ್ತಿ ಶೇ.100ರಷ್ಟು ಏರಿಕೆ

    5 ವರ್ಷದಲ್ಲಿ ಮಹಾರಾಷ್ಟ್ರ ಸಿಎಂ ಆಸ್ತಿ ಶೇ.100ರಷ್ಟು ಏರಿಕೆ

    ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಸ್ತಿ ಐದು ವರ್ಷದಲ್ಲಿ ಶೇ.100ರಷ್ಟು ಏರಿಕೆ ಆಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲಾತಿಗಳಿಂದ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಸ್ಥಿರ ಮತ್ತು ಚರ ಆಸ್ತಿಯ ಮೌಲ್ಯವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.

    ನಾಗಪುರ ನೈಋತ್ಯ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿರುವ ಫಡ್ನವೀಸ್ ನಾಮಪತ್ರ ಸಲ್ಲಿಸಿದ್ದಾರೆ. 2014ರ ಚುನಾವಣೆ ಸಂದರ್ಭದಲ್ಲಿ ಆಸ್ತಿಯ ಮೌಲ್ಯವನ್ನು ತುಲನೆ ಮಾಡಿದಾಗ ಸದ್ಯದ ಆಸ್ತಿ ಐದು ವರ್ಷದ ಅಂತರದಲ್ಲಿ ಶೇ.100ರಷ್ಟು ಏರಿಕೆಯಾಗಿದೆ.

    ಮಾರುಕಟ್ಟೆಯಲ್ಲಿಯ ಬೆಲೆ ಏರಿಕೆಯಿಂದಾಗಿ ಸಹಜವಾಗಿ ಮುಖ್ಯಮಂತ್ರಿಗಳ ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಮುಂಬೈ ನಗರದ ಆಸ್ತಿಯ ಮೌಲ್ಯದಲ್ಲಾದ ಏರಿಕೆ ಕಾರಣದಿಂದ ಈ ಬೆಳವಣಿಗೆಯಾಗಿದೆ. 2014ರಲ್ಲಿಯ 1.18 ಕೋಟಿ ರೂ. ಮೌಲ್ಯದ ಆಸ್ತಿಯ ಮೌಲ್ಯ ಇಂದು 3.78 ಕೋಟಿ ರೂ.ಆಗಿದೆ. ಇದೇ ರೀತಿ ಸಿಎಂ ಪತ್ನಿ ಅಮೃತಾರ ಆಸ್ತಿ 2014ರಲ್ಲಿದ್ದ 42.60 ಲಕ್ಷ ಏರಿಕೆ ಕಂಡು 99.3 ಲಕ್ಷದಷ್ಟು ಆಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಸ್ಪಷ್ಟಪಡಿಸಿದೆ.

    ಕ್ಯಾಶ್ ಇನ್ ಹ್ಯಾಂಡ್:
    2014ರಲ್ಲಿ ಫಡ್ನವೀಸ್ ಅವರ ಕೈಯಲ್ಲಿ 50 ಸಾವಿರ ರೂ. ನಗದು ಹೊಂದಿದ್ದರು. 2019ರಲ್ಲಿ 17,500 ರೂ. ನಗದು ಹೊಂದಿದ್ದಾರೆ. ಪತ್ನಿ ಅಮೃತಾರ ಬಳಿ 2014ರಲ್ಲಿ 12,500 ನಗದು ಇತ್ತು. 2019ರಲ್ಲಿ ನಗದು 20 ಸಾವಿರ ರೂ.ಗಳಿವೆ. ಫಡ್ನವಿಸ್ ಬ್ಯಾಂಕ್ ಖಾತೆಯಲ್ಲಿದ್ದ 1,19,630 ರೂ. 2019ರ ವೇಳೆಗೆ 8,29,665 ರೂ.ಗೆ ಏರಿಕೆ ಕಂಡಿದೆ. ಸಿಎಂ ಆದ ಬಳಿಕ ಫಡ್ನವೀಸ್ ಸಂಬಳ ಮತ್ತು ಭತ್ಯೆಯಿಂದಾಗಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

    ಇದೇ ರೀತಿ ಫಡ್ನವೀಸ್ ಅವರ ಪತ್ನಿ ಅಮೃತಾರ ಖಾತೆಯಲ್ಲಿದ್ದ ಮೊತ್ತ 1,00,881 ರೂ.ನಿಂದ 3,37,025 ರೂ.ಗಳಿಗೆ ಏರಿಕೆ ಆಗಿದೆ. ಇದಲ್ಲದೇ ಅಮೃತಾ ವೈಯಕ್ತಿಕವಾಗಿ ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿದ್ದು, ಆ ಆಸ್ತಿಯ ಮೌಲ್ಯ 1.66 ಕೋಟಿ ಯಿಂದ 2.33 ಕೋಟಿ ರೂ. ಏರಿಕೆಯಾಗಿದೆ. ಅಮೃತಾ ಮುಂಬೈನ ಎಕ್ಸಿಸ್ ಬ್ಯಾಂಕ್ ಉಪಾಧ್ಯಕ್ಷೆ ಮತ್ತು ಪಶ್ಚಿಮ ಭಾರತದ ಕಾರ್ಪೋರೇಟ್ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  • ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಬಿರುಕು

    ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಬಿರುಕು

    ಮುಂಬೈ: ಶಿವಸೇನೆ ಮತ್ತು ಬಿಜೆಪಿ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಶಿವಸೇನಾ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಏಕಾಂಗಿಯಾಗಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಶಿವಸೇನೆ ಹಿಂದೇಟು ಹಾಕುತ್ತಿದೆ. ಚುನಾವಣೆ ಪೂರ್ವ ಮೈತ್ರಿ ಎರಡೂ ಪಕ್ಷಗಳಿಗೆ ಒಳ್ಳೆಯದಲ್ಲ ಎಂಬ ಲೆಕ್ಕಾಚಾರಗಳು ನಡೆದಿವೆ ಎನ್ನಲಾಗಿದೆ.

    ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡರೆ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಶಿವಸೇನೆಗೆ 106 ಸೀಟ್ ನೀಡಲು ಬಿಜೆಪಿ ಮುಂದಾಗಿದೆ. ಉಳಿದ 182 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ ಸಂದೇಶವನ್ನು ಶಿವಸೇನೆಗೆ ರವಾನಿಸಿದೆ. ಮೈತ್ರಿಯಾದ್ರೆ ನಮಗೆ 140 ಕ್ಷೇತ್ರಗಳು ಬೇಕೆಂದು ಶಿವಸೇನೆ ತಿಳಿಸಿದೆ. ಹೀಗಾಗಿ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಹಗ್ಗ-ಜಗ್ಗಾಟ ಆರಂಭಗೊಂಡಿದೆ.

    ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಶಿವಸೇನೆ ಮೈತ್ರಿಯಿಂದ ಹೊರ ಬರುವ ಕುರಿತು ಚರ್ಚೆ ನಡೆಸುತ್ತಿದೆ. ಇತ್ತ ಎನ್‍ಡಿಎ ಜೊತೆಗಿನ ಮೈತ್ರಿಯೊಂದಿಗೆ ಚುನಾವಣೆ ಗೆದ್ದರೆ ಮುಖ್ಯಮಂತ್ರಿ ಸ್ಥಾನ ತಮಗೆ ನೀಡಬೇಕೆಂಬ ಶಿವಸೇನೆ ನಾಯಕರು ಷರತ್ತು ವಿಧಿಸಿದ್ದಾರಂತೆ. ಆದ್ರೆ ಬಿಜೆಪಿ ಕನಿಷ್ಠ 160 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸು ಸಿದ್ಧತೆಯಲ್ಲಿದೆ ಎಂದು ವರದಿಗಳು ಪ್ರಕಟಗೊಂಡಿವೆ.

    2014ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಫಲಿತಾಂಶದ ಬಳಿಕ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. 2014ರ ಚುನಾವಣೆಯಲ್ಲಿ ಬಿಜೆಪಿ 122 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಇತ್ತ ಶಿವಸೇನೆ 63, ಎನ್‍ಸಿಪಿ 41 ಮತ್ತು ಕಾಂಗ್ರೆಸ್ 42 ಕ್ಷೇತ್ರಗಳಲ್ಲಿ ಗೆಲವು ಕಂಡಿತ್ತು.