Tag: Maharashtra Assembly Election 2019

  • ಶಾ ಒಪ್ಪುತ್ತಿಲ್ಲ, ಶಿವಸೇನೆ ಹಠ ಬಿಡ್ತಿಲ್ಲ-ಏಕಾಂಗಿಯಾದ ದೇವೇಂದ್ರ ಫಡ್ನವೀಸ್

    ಶಾ ಒಪ್ಪುತ್ತಿಲ್ಲ, ಶಿವಸೇನೆ ಹಠ ಬಿಡ್ತಿಲ್ಲ-ಏಕಾಂಗಿಯಾದ ದೇವೇಂದ್ರ ಫಡ್ನವೀಸ್

    ಮುಂಬೈ: ನಾನೇ ಮುಂದಿನ ಐದು ವರ್ಷದ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿರುವ ಹಂಗಾಮಿ ಸಿಎಂ ದೇವೇಂದ್ರ ಫಡ್ನವೀಸ್ ಏಕಾಂಗಿಯಾಗಿದ್ದಾರೆ. ಕೇಂದ್ರದಿಂದ ಯಾವುದೇ ಸೂಚನೆ ಸಿಗುತ್ತಿಲ್ಲ. ಶಿವಸೇನೆ ತನ್ನ ಹಠವನ್ನು ಬಿಡುತ್ತಿಲ್ಲ. ಇಬ್ಬರ ಹಗ್ಗಜಗ್ಗದಾಟದಲ್ಲಿ ದೇವೇಂದ್ರ ಫಡ್ನವೀಸ್ ಏಕಾಂಗಿಯಾಗಿದ್ದಾರೆ ಎಂಬ ಚರ್ಚೆಗಳು ಮಹಾರಾಷ್ಟ್ರ  ರಾಜಕಾರಣದಲ್ಲಿ ಕೇಳಿ ಬರುತ್ತಿವೆ.

    ಚುನಾವಣೆ ಬಳಿಕ ನಾನೇ ಎರಡನೇ ಬಾರಿ ಸಿಎಂ ಆಗಲಿದ್ದೇನೆ. ಮುಂದಿನ ಐದು ವರ್ಷ ಸಹ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತೇನೆ. ಮೈತ್ರಿ ಮಾಡಿಕೊಳ್ಳುವಾಗ ಶಿವಸೇನೆ ಎಲ್ಲಿಯೂ ಸಿಎಂ ಸ್ಥಾನದ ಬಗ್ಗೆ ಮಾತನಾಡಿರಲಿಲ್ಲ. ಅಲ್ಲದೇ 50:50 ಫಾರ್ಮುಲಾ ಸಹ ಮುಂದಿಟ್ಟಿರಲಿಲ್ಲ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದರು. ಇದನ್ನೂ ಓದಿ: ನಮ್ಮ ಬಳಿ ಮ್ಯಾಜಿಕ್ ನಂಬರ್ ಇದೆ: ಶಿವಸೇನೆ

    ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಮೈತ್ರಿ ಮಾಡಿಕೊಳ್ಳುವಾಗ 50:50 ಫಾರ್ಮುಲಾದಂತೆ ಎರಡೂವರೆ ವರ್ಷದಂತೆ ಎರಡು ಪಕ್ಷದ ನಾಯಕರು ಸಿಎಂ ಆಗಬೇಕೆಂದು ಒಪ್ಪಿಕೊಳ್ಳಲಾಗಿತ್ತು ಎಂದು ಹೇಳುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸರ್ಕಾರ ರಚನೆಯ ಬಗ್ಗೆ ಯಾವ ಸಂದೇಶವನ್ನು ದೇವೇಂದ್ರ ಫಡ್ನವೀಸ್ ಅವರಿಗೆ ಕಳುಹಿಸಿಲ್ಲ ಎನ್ನಲಾಗಿದೆ. ಇತ್ತ ಶಿವಸೇನೆ ನಿಮ್ಮ ನಿರ್ಧಾರವನ್ನು ತಿಳಿಸಬೇಕೆಂದು ದೇವೇಂದ್ರ ಫಡ್ನವೀಸ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸಿಎಂ ಸ್ಥಾನ ನಮಗೆ ಬರೆದಿಟ್ಟುಕೊಳ್ಳಿ – ಬಿಜೆಪಿ ಇಲ್ಲದೇ ಸರ್ಕಾರ ರಚನೆಗೆ ಶಿವಸೇನೆ ಪ್ಲಾನ್

    ಈ ನಡುವೆ ಬಿಜೆಪಿಯ ಮುಖಂಡ ಸುಧೀರ್ ಮುಂಗಂಟಿವೀರ್, ನವೆಂಬರ್ 8ರೊಳಗೆ ಸರ್ಕಾರ ರಚನೆ ಆಗದಿದ್ದರೆ, ಮಹಾರಾಷ್ಟ್ರದಲ್ಲಿ ರಾಷ್ಟ್ಟಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದರು. ಬಿಜೆಪಿಯ ಈ ಹೇಳಿಕೆಗೆ ಕೆಂಡಾಮಂಡಲಗೊಂಡ ಶಿವಸೇನೆ ತನ್ನ ಸಾಮ್ನಾ ಪತ್ರಿಕೆಯಲ್ಲಿ, ರಾಷ್ಟ್ರಪತಿಗಳು ನಿಮ್ಮ ಜೇಬಿನಲ್ಲಿದ್ದರಾ? ಶೀರ್ಷಿಕೆ ಅಡಿಯಲ್ಲಿ ಸುದ್ದಿಯನ್ನು ಪ್ರಕಟಿಸಿ ತಿರುಗೇಟು ನೀಡಿತ್ತು. ಇದನ್ನೂ ಓದಿ: ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರಾ? ಬಿಜೆಪಿ ಹೇಳಿಕೆಗೆ ಶಿವಸೇನೆ ಕೆಂಡಾಮಂಡಲ

    ಶಿವಸೇನೆ ಮಾತ್ರ ಎನ್‌ಸಿಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸುತ್ತಾ ಬಂದಿದೆ. ಎನ್‌ಸಿಪಿಯ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದ ಶಿವಸೇನೆಯ ಮುಖಂಡ ಸಂಜಯ್ ರಾವತ್, ಬಿಜೆಪಿಯೇತರ ಸರ್ಕಾರ ರಚನೆ ಬಗ್ಗೆ ಮಾತನಾಡಿದ್ದರು. ಹೊಸ ಸಮೀಕರಣ (ಶಿವಸೇನೆ+ಕಾಂಗ್ರೆಸ್+ಎನ್‌ಸಿಪಿ=ಸರ್ಕಾರ) ಒಪ್ಪಿಕೊಂಡರೆ ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಬಹುದು ಎಂದು ಸಂಜಯ್ ರಾವತ್ ತಿಳಿಸಿದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು. ಇದನ್ನೂ ಓದಿ: 50-50 ಫಾರ್ಮುಲಾಗೆ ಶಿವಸೇನೆ ಆಗ್ರಹ- ಜೆಡಿಎಸ್ ಅಸ್ತ್ರ ಪ್ರಯೋಗಿಸಿದ ಉದ್ಧವ್ ಠಾಕ್ರೆ

    ಎನ್‌ಸಿಪಿ ಬಿಜೆಪಿ ಜೊತೆ ಹೋಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಶರದ್ ಪವಾರ್, ಜನಾದೇಶದ ಪ್ರಕಾರ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ. ಆದರೆ ಯಾರೊಂದಿಗೆ ನಾವು ಮೈತ್ರಿ ಮಾಡಿಕೊಳ್ಳಲ್ಲ ಎಂದು ಹೇಳಿದ್ದರು. ಇಂದು ಸಂಜಯ್ ರಾವತ್, ಈಗಾಗಲೇ ನಮಗೆ 170 ಶಾಸಕರ ಬೆಂಬಲ ಸಿಕ್ಕಿದೆ. ಶೀಘ್ರದಲ್ಲಿಯೇ ಈ ಸಂಖ್ಯೆ 175 ಆಗಲಿದೆ ಎಂದಿದ್ದಾರೆ.ಇದನ್ನೂ ಓದಿ: ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ

  • ನಮ್ಮ ಬಳಿ ಮ್ಯಾಜಿಕ್ ನಂಬರ್ ಇದೆ: ಶಿವಸೇನೆ

    ನಮ್ಮ ಬಳಿ ಮ್ಯಾಜಿಕ್ ನಂಬರ್ ಇದೆ: ಶಿವಸೇನೆ

    ಮುಂಬೈ: ಸರ್ಕಾರ ರಚಿಸಲು ನಮ್ಮ ಬಳಿ ಬಹುಮತವಿದೆ ಎಂದು ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

    288 ಕ್ಷೇತ್ರಗಳ ಪೈಕಿ ನಮಗೆ 170 ಶಾಸಕರ ಬೆಂಬಲ ದೊರೆತಿದೆ. ನಾವು ಸ್ವತಂತ್ರವಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬಹುದು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿ ಜೊತೆಯಲ್ಲಿ 50:50 ಫಾರ್ಮುಲಾದಂತೆ ಸರ್ಕಾರ ರಚಿಸಿಬೇಕಿದೆ ಎಂದು ಹೇಳುವ ಮೂಲಕ ಕಮಲ ನಾಯಕರಿಗೆ ಸಂದೇಶವನ್ನು ಸಂಜಯ್ ರಾವತ್ ರವಾನಿಸಿದ್ದಾರೆ. ಇದನ್ನೂ ಓದಿ: ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ

    ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಅಕ್ಟೋಬರ್ 24ರಂದು ಬಂದಿದ್ದರೂ, ಇದುವರೆಗೂ ಸರ್ಕಾರ ರಚನೆಯಾಗಿಲ್ಲ. ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಗೆ ಬಹುಮತ ಸಿಕ್ಕರೂ ಸರ್ಕಾರ ರಚನೆ ಕಗ್ಗಂಟಾಗಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರುವಂತೆ ಜನಾದೇಶ ಬಂದಿದೆ. ವಿಪಕ್ಷದಲ್ಲಿಯೇ ಕುಳಿತುಕೊಳ್ಳುತ್ತೇವೆಯೇ ಹೊರತು ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಸಂಜಯ್ ರಾವತ್, ನಮಗೆ 170 ಶಾಸಕರ ಬೆಂಬಲವಿದೆ ಎಂಬ ಹೇಳಿಕೆ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಸಿಎಂ ಸ್ಥಾನ ನಮಗೆ ಬರೆದಿಟ್ಟುಕೊಳ್ಳಿ – ಬಿಜೆಪಿ ಇಲ್ಲದೇ ಸರ್ಕಾರ ರಚನೆಗೆ ಶಿವಸೇನೆ ಪ್ಲಾನ್

    2014ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಶಿವಸೇನೆ 63 ಮತ್ತು ಬಿಜೆಪಿ 122 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ನಂತರ ಎರಡೂ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗಿತ್ತು. ಇದನ್ನೂ ಓದಿ: ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರಾ? ಬಿಜೆಪಿ ಹೇಳಿಕೆಗೆ ಶಿವಸೇನೆ ಕೆಂಡಾಮಂಡಲ

    2019ರಲ್ಲಿ ಬಿಜೆಪಿ ಚುನಾವಣೆ ಪೂರ್ವದಲ್ಲಿಯೇ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಇತ್ತ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ರಚನೆ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು. ಬಿಜೆಪಿ 105, ಶಿವಸೇನೆ, 56, ಎನ್‌ಸಿಪಿ 54, ಕಾಂಗ್ರೆಸ್ 44 ಮತ್ತು ಇತರರು 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಇದನ್ನೂ ಓದಿ: 50-50 ಫಾರ್ಮುಲಾಗೆ ಶಿವಸೇನೆ ಆಗ್ರಹ- ಜೆಡಿಎಸ್ ಅಸ್ತ್ರ ಪ್ರಯೋಗಿಸಿದ ಉದ್ಧವ್ ಠಾಕ್ರೆ

  • ಸಾವರ್ಕರ್‌ಗೆ ಭಾರತರತ್ನ – ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಭರವಸೆ

    ಸಾವರ್ಕರ್‌ಗೆ ಭಾರತರತ್ನ – ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಭರವಸೆ

    – ಸಂಕಲ್ಪಪತ್ರ ಹೆಸರಿನ ಪ್ರಾಣಳಿಕೆ ಬಿಡುಗಡೆ
    – 5 ವರ್ಷದಲ್ಲಿ 1 ಕೋಟಿ ಉದ್ಯೋಗ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಈ ಬಾರಿ ಮತ್ತೆ ಅಧಿಕಾರಕ್ಕೆ ಏರಿದರೆ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಭಾರತರತ್ನವನ್ನು ಮರಣೋತ್ತರವಾಗಿ ನೀಡಲಾಗುವುದು ಎಂದು ಭರವಸೆ ನೀಡಿದೆ.

    ಬಿಜೆಪಿ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದೆ.

    ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದರು. 44 ಪುಟಗಳ ಸಂಕಲ್ಪ ಪತ್ರದ ಮೂಲಕ ಮತದಾರರಿಗೆ ಅನೇಕ ಭರವಸೆಗಳನ್ನು ಬಿಜೆಪಿ ನೀಡಲಾಗಿದೆ. ಸಾವರ್ಕರ್ ಅವರಿಗೆ ಭಾರತರತ್ನ ನೀಡಬೇಕು ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ.

    ಸಾವರ್ಕರ್ ಯಾರು?
    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಜನಿಸಿದ್ದ ಸಾವರ್ಕರ್ ಹಿಂದೂ ಮಹಾಸಭಾವನ್ನು ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಭಾರತ ಪಾಕಿಸ್ತಾನ ವಿಭಜನೆ ಮಾಡಲು ಒಪ್ಪಿಗೆ ನೀಡಿದ್ದಕ್ಕೆ ಗಾಂಧೀಜಿ ಅವರನ್ನು ಕಟುವಾಗಿ ವಿರೋಧಿಸಿದ್ದರು. ನಾಥೂರಾಮ್ ಗೂಡ್ಸೆ ಹಿಂದೂ ಮಹಾಸಭಾದ ಸದಸ್ಯನಾಗಿದ್ದ ಮತ್ತು ಗಾಂಧೀಜಿ ಹತ್ಯೆಯ ಮಾಸ್ಟರ್ ಮೈಂಡ್ ಸಾವರ್ಕರ್ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ಅಡಿ ಸರ್ಕಾರ ಬಂಧಿಸಿದ್ದರೂ ಗಾಂಧೀಜಿ ಹತ್ಯೆಯಲ್ಲಿ ಭಾಗಿಯಾದ ಬಗ್ಗೆ ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆಗೊಳಿಸಿತ್ತು.

    ಸಂಕಲ್ಪ ಪತ್ರದಲ್ಲಿ ಏನಿದೆ?
    ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸಲಾಗುತ್ತದೆ. ಕೃಷಿಯಲ್ಲಿ ಬಳಸುವ ವಿದ್ಯುತ್ ಸೌರಶಕ್ತಿಯನ್ನು ಆಧರಿಸಿರುತ್ತದೆ ಮತ್ತು ರೈತರಿಗೆ 12 ಗಂಟೆಗಳಿಗಿಂತ ಹೆಚ್ಚಿನ ವಿದ್ಯುತ್ ಒದಗಿಸಲಾಗುವುದು. 2022ರ ವೇಳೆಗೆ 5 ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಹೂಡಿಕೆ ಮಾಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ.

    ಗೋದಾವರಿ ಕಣಿವೆಯಿಂದ ಪಶ್ಚಿಮದಿಂದ ಹರಿಯುವ ನದಿಗಳ ನೀರನ್ನು ನಿಲ್ಲಿಸಿ ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರದ ಬರ ಪೀಡಿತ ಭಾಗಕ್ಕೆ ಸಾಗಿಸಲಾಗುತ್ತದೆ. ಈ ಮೂಲಕ ಮುಂಬರುವ 5 ವರ್ಷಗಳಲ್ಲಿ ಮಹಾರಾಷ್ಟ್ರವನ್ನು ಬರಗಾಲದಿಂದ ಮುಕ್ತಗೊಳಿಸುತ್ತೇವೆ. ಮೂಲ ಸೌಕರ್ಯಗಳಿಗಾಗಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು.

    ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಒಟ್ಟು 30 ಸಾವಿರ ಕಿಲೋ ಮೀಟರ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಅಷ್ಟೇ ಅಲ್ಲದೆ ಸಮಾಜ ಸುಧಾರಕ ಜ್ಯೋತಿ ರಾವ್ ಫುಲೆ, ಪತ್ನಿ ಸಾವಿತ್ರಿಭಾಯಿ ಫುಲೆ ಹಾಗೂ ವಿಡಿ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ.