Tag: mahanagara palike

  • ಪಾಲಿಕೆ ಸದಸ್ಯನಿಂದ ಸ್ನೇಹಿತನಿಗೆ ಜೀವ ಬೆದರಿಕೆ – ಆತ್ಮಹತ್ಯೆಗೆ ಯತ್ನ

    ಪಾಲಿಕೆ ಸದಸ್ಯನಿಂದ ಸ್ನೇಹಿತನಿಗೆ ಜೀವ ಬೆದರಿಕೆ – ಆತ್ಮಹತ್ಯೆಗೆ ಯತ್ನ

    ಬಳ್ಳಾರಿ: ಪಾಲಿಕೆ (Mahanagara Palike) ಸದಸ್ಯನೊಬ್ಬ ಸ್ನೇಹಿತನಿಗೆ ಜೀವ ಬೆದರಿಕೆ ಒಡ್ಡಿದ್ದು ಆತ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಬಳ್ಳಾರಿಯಲ್ಲಿ (Bellary) ನಡೆದಿದೆ.

    ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ಆಸೀಫ್ ಭಾಷಾ ಎಂಬಾತ ಸ್ನೇಹಿತ ಅಹಮದ್ ಹುಸೇನ್‍ಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೇ ಕುಟುಂಬಕ್ಕೂ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾನೆ. ಇದರಿಂದ ಮನನೊಂದು ಹುಸೇನ್ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಪಲಾವ್‍ನಲ್ಲಿ ವಿಷ ಬೆರೆಸಿ ತಂದೆ-ತಾಯಿಯ ಕೊಲೆಗೈದ ಪಾಪಿ ಪುತ್ರ!

    ಆಸೀಫ್ ಹಾಗೂ ಅಹಮದ್ ಹುಸೇನ್ ಅತ್ಮೀಯ ಸ್ನೇಹಿತರು. ಆಸೀಫ್‍ನ ಎಲ್ಲಾ ವ್ಯವಹಾರಗಳನ್ನ ಅಹಮದ್ ಹುಸೇನ್ ನೋಡಿಕೊಳ್ಳುತ್ತಿದ್ದ. ಇದರಿಂದ ಅಹಮದ್ ಹುಸೇನ್ ಮನೆಗೆ ಆಸೀಫ್ ಆಗಾಗಾ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಬಳಿಕ ಹುಸೇನ್‍ನ ಪತ್ನಿಯ ಜೊತೆ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿದೆ ಎಂದು ಆತ ಆರೋಪಿಸಿದ್ದಾನೆ.

    ಈ ವಿಚಾರವನ್ನು ಪ್ರಶ್ನಿಸಿದ್ದಕ್ಕೆ ಆಸೀಫ್ ಪ್ರಾಣ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಆತನ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹುಸೆನ್ ಹೇಳಿದ್ದಾನೆ. ಈ ಸಂಬಂಧ ಕೌಲ್ ಬಜಾರ್ ಪೊಲೀಸ್‌ (Police) ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ನಾಯಿ ಬೊಗಳಿದ್ದಕ್ಕೆ ವೃದ್ಧನಿಗೆ ಚಾಕು ಇರಿತ – ಆರೋಪಿ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಲಿಕೆ ಅಧಿಕಾರಿಗಳು ಅಂಗಡಿ ತೆರವುಗೊಳಿಸಿದ್ದೇ ವ್ಯಕ್ತಿ ಸಾವಿಗೆ ಕಾರಣ: ಸ್ಥಳೀಯರ ಆರೋಪ

    ಪಾಲಿಕೆ ಅಧಿಕಾರಿಗಳು ಅಂಗಡಿ ತೆರವುಗೊಳಿಸಿದ್ದೇ ವ್ಯಕ್ತಿ ಸಾವಿಗೆ ಕಾರಣ: ಸ್ಥಳೀಯರ ಆರೋಪ

    ಶಿವಮೊಗ್ಗ: ಮಹಾನಗರ ಪಾಲಿಕೆ ಅಧಿಕಾರಿಗಳು ಅಂಗಡಿ ತೆರವುಗೊಳಿಸಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ಮಾಡಿದ್ದಾರೆ.

    ಶಿವಮೊಗ್ಗ ವಿನೋಬನಗರದ 60 ಅಡಿ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 4 ಅಂಗಡಿಗಳನ್ನು ಕಳೆದ 19ರಂದು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದರು. ಇದರಿಂದ ಮನನೊಂದ ಇಸ್ತ್ರಿ ಅಂಗಡಿ ನಡೆಸುತ್ತಿದ್ದ ಚಂದ್ರಶೇಖರ್ ಕಳೆದ 2 ದಿನದ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದರು. ಚಂದ್ರಶೇಖರ್ ಸಾವಿಗೆ ಪಾಲಿಕೆ ಸಿಬ್ಬಂದಿಯೇ ನೇರ ಹೊಣೆ. ಹೀಗಾಗಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಇಂದು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಕಳೆದ ಹಲವು ವರ್ಷಗಳಿಂದ ಮಹಾನಗರ ಪಾಲಿಕೆಗೆ ಸೇರಿದ ಜಾಗದಲ್ಲಿ ತರಕಾರಿ ಅಂಗಡಿ, ಟೀ ಕ್ಯಾಂಟೀನ್ ಹಾಗೂ ಇಸ್ತ್ರಿ ಅಂಗಡಿಗಳನ್ನು ಇಟ್ಟುಕೊಂಡು 4 ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಆದರೆ ಮಹಾನಗರ ಪಾಲಿಕೆ ಸಿಬ್ಬಂದಿ ಕಳೆದ 8 ದಿನದ ಹಿಂದೆ ಏಕಾಏಕಿ ಅಂಗಡಿಗಳನ್ನು ತೆರವುಗೊಳಿದ್ದರು. ಕೊರೊನಾ ವೇಳೆ ಜೀವನ ಸಾಗಿಸುವುದೇ ಕಷ್ಟಕರವಾಗಿತ್ತು. ಇಂತಹ ಸಮಯದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದ ಚಂದ್ರಶೇಖರ್ ಅವರಿಗೆ ಅಂಗಡಿ ತೆರವು ಮಾಡಿದ್ದು ಮತ್ತಷ್ಟು ಆತಂಕಕ್ಕೀಡು ಮಾಡಿತ್ತು.

    ಮಹಾನಗರ ಪಾಲಿಕೆ ಅಂಗಡಿ ತೆರವುಗೊಳಿಸಿದ್ದರಿಂದ ಮುಂದೆ ಜೀವನ ನಡೆಸುವುದು ಹೇಗೆ ಎಂಬ ಯೋಚನೆಯಿಂದಾಗಿಯೇ ಚಂದ್ರಶೇಖರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದ್ದರಿಂದ ಮಹಾನಗರ ಪಾಲಿಕೆ ಅಧಿಕಾರಿಗಳು ಚಂದ್ರಶೇಖರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಒಂದು ವೇಳೆ ಪಾಲಿಕೆ ಪರಿಹಾರ ನೀಡದೇ ಹೋದರೆ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆದುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮನೆ ಬಾಗಿಲಿಗೆ ಫುಡ್ ಸಪ್ಲೈ- ಯಾವುದಕ್ಕೆ? ಎಷ್ಟು ಬೆಲೆ?

    ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮನೆ ಬಾಗಿಲಿಗೆ ಫುಡ್ ಸಪ್ಲೈ- ಯಾವುದಕ್ಕೆ? ಎಷ್ಟು ಬೆಲೆ?

    ಶಿವಮೊಗ್ಗ: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿರುವುದರಿಂದ ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಪಾಲಿಕೆ ವತಿಯಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಮಾರ್ಚ್ 27ರಿಂದ ಪ್ಯಾಕ್ಡ್ ಆಹಾರ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ.

    ಗ್ರಾಹಕರು ದೂರವಾಣಿ ಮೂಲಕ ಆರ್ಡರ್ ಮಾಡಿದರೆ ಒಂದು ಗಂಟೆಯ ಒಳಗಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮನೆ ಬಾಗಿಲಿಗೆ ಬರಲಿದೆ. ಈ ಆಹಾರದ ಮೆನು ಹಾಗೂ ಬೆಲೆ ಎಷ್ಟು? ಎನ್ನುವುದರ ಮಾಹಿತಿ ಇಲ್ಲಿದೆ.

    ಬೆಳಗಿನ ಉಪಹಾರ :
    2ಇಡ್ಲಿ-1 ವಡೆ 40 ರೂ.
    ಉಪ್ಪಿಟ್ಟು- 30 ರೂ.
    ಸೆಟ್‍ದೋಸೆ- 50 ರೂ.
    ರೈಸ್‍ಬಾತ್ ವಿತ್ ಚಟ್ನಿ- 50 ರೂ.

    ಮಧ್ಯಾಹ್ನದ ಊಟ:
    ಚಪಾತಿ, ಪಲ್ಯ, ವೈಟ್‍ರೈಸ್, ಸಾಂಬಾರ್, ಪಾಪಡ್, ಮಜ್ಜಿಗೆ- 80 ರೂ.
    ಮಿನಿಮೀಲ್ಸ್- 40 ರೂ.
    ರೈಸ್ ಬಾತ್, ಸಾಗು ಹಾಗೂ ಮೊಸರನ್ನ, ಉಪ್ಪಿನಕಾಯಿ- 60 ರೂ.

    ರಾತ್ರಿ ಊಟ:
    2 ಚಪಾತಿ, ಸಾಗು 50 ರೂ.
    ರೈಸ್ ಬಾತ್, ಸಾಗು ಹಾಗೂ ಮೊಸರನ್ನ, ಉಪ್ಪಿನಕಾಯಿ 60 ರೂ.

    ಬೆಳಗಿನ ಉಪಹಾರದ ಅವಧಿ ಬೆಳಿಗ್ಗೆ 7:30ರಿಂದ 10ರವರೆಗೆ, ಮಧ್ಯಾಹ್ನದ ಊಟ 12:30ರಿಂದ 3ರವರೆಗೆ ಮತ್ತು ರಾತ್ರಿ ಊಟ 7:30ರಿಂದ 8:30ರವರೆಗೆ ಲಭ್ಯವಿರುತ್ತದೆ. ಬಿಲ್‍ನ ಮೊತ್ತವನ್ನು ಪೇಟಿಯಂ, ಗೂಗಲ್‍ಪೇ ಅಥವಾ ನಗದು ರೂಪದಲ್ಲಿ ಸಂದಾಯ ಮಾಡಬಹುದಾಗಿದೆ. ಆರ್ಡರ್ ನೀಡಲು 9972593256 ಅಥವಾ 7829678298 ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ತಿಳಿಸಿದ್ದಾರೆ.

  • ಮಂಗ್ಳೂರು ಮೇಯರ್ ಚುನಾವಣೆಗೆ ಕೊನೆಗೂ ದಿನ ನಿಗದಿ

    ಮಂಗ್ಳೂರು ಮೇಯರ್ ಚುನಾವಣೆಗೆ ಕೊನೆಗೂ ದಿನ ನಿಗದಿ

    – ಪಾಲಿಕೆ ಚುನಾವಣೆಯಾದ 3 ತಿಂಗಳ ಬಳಿಕ ಮೇಯರ್ ಚುನಾವಣೆ

    ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬರೋಬ್ಬರಿ 3 ತಿಂಗಳು ಬೇಕಾಗಿದ್ದು, ಕೊನೆಗೂ ಮೇಯರ್ ಚುನಾವಣೆಗೆ ಸರ್ಕಾರ ದಿನ ನಿಗದಿ ಮಾಡಿದೆ.

    ಕಳೆದ ಮೂರು ತಿಂಗಳ ಹಿಂದೆ ಚುನಾವಣೆ ನಡೆದಿದ್ದ ಮಂಗಳೂರು ಮಹಾ ನಗರ ಪಾಲಿಕೆಯ ಒಟ್ಟು 60 ಸದಸ್ಯ ಬಲದಲ್ಲಿ ಬರೋಬ್ಬರಿ 44 ಸ್ಥಾನ ಪಡೆದ ಬಿಜೆಪಿ ಅಂದೇ ಪಾಲಿಕೆಯ ಗದ್ದುಗೆ ಹಿಡಿಯಬಹುದಿತ್ತು. ಆದರೆ ಮೀಸಲು ನಿಗದಿ ವಿಚಾರದಲ್ಲಿ ಬಿಜೆಪಿ ಒಳಗೆ ತಕರಾರು ಇದ್ದ ಹಿನ್ನೆಲೆಯಲ್ಲಿ ಮೀಸಲಾತಿ ಬದಲಾವಣೆಗೆ ಕೆಲವು ಸದಸ್ಯರು ಪ್ರಯತ್ನಿಸಿದ್ದರು. ಇದೀಗ ಈ ಹಿಂದೆ ನಿಗದಿಯಾದಂತೆ 21ನೇ ಅವಧಿಯ ಮೀಸಲು ಪ್ರಕಾರವೇ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿ ಆದೇಶ ಹೊರಡಿಸಿದೆ.

    ಫೆಬ್ರವರಿ 28ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದರೂ ತಮ್ಮದೇ ಪಕ್ಷಕ್ಕೆ ಸಿಕ್ಕ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು ಮೂರು ತಿಂಗಳ ಕಾಲ ಕಳೆದುಕೊಂಡಿರುವುದು ಮಾತ್ರ ವಿಪರ್ಯಾಸ.

  • 2 ತಿಂಗಳಲ್ಲೇ ತುಮಕೂರು ಮಹಾನಗರ ಪಾಲಿಕೆಯ 9 ಕೋಟಿ ರೂ. ಮಂಗಮಾಯ

    2 ತಿಂಗಳಲ್ಲೇ ತುಮಕೂರು ಮಹಾನಗರ ಪಾಲಿಕೆಯ 9 ಕೋಟಿ ರೂ. ಮಂಗಮಾಯ

    ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಭೂಬಾಲನ್ ಅವರು ವರ್ಗಾವಣೆಯಾಗುವ ಸಮಯದಲ್ಲಿ ಪಾಲಿಕೆಯಲ್ಲಿ ಸುಮಾರು 9 ರಿಂದ 12 ಕೋಟಿ ರೂಪಾಯಿ ಹಣ ಉಳಿದಿತ್ತು. ಆದರೆ ಅವರು ಮತ್ತೆ ವಾಪಸ್ ಬರುವ ವೇಳೆಗೆ ಎಲ್ಲಾ ಹಣ ಮಂಗಮಾಯವಾಗಿದೆ.

    ಇದರಿಂದ ಮಹಾನಗರ ಪಾಲಿಕೆಯಲ್ಲಿ ದಿಕ್ಕುತಪ್ಪಿದ ಆಡಳಿತ ಮತ್ತು ಹಣಕಾಸು ನಿರ್ವಹಣೆಯನ್ನು ಸರಿದಾರಿಗೆ ತರಲು ಆಯುಕ್ತ ಭೂಬಾಲನ್ ಹೆಣಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಲ ಬಿಗಿಹಿಡಿತದಿಂದ ಭೂಬಾಲನ್ ಅವರಿಗೆ ಸುಸೂತ್ರವಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಎರಡನೇ ಬಾರಿಗೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಭೂಬಾಲನ್ ಅವರು ರಾಜಕಾರಣಿಗಳ ಅಸಹಕಾರ ಮನೋಭಾವದಿಂದ ಕೆಲಸ ಮಾಡಲು ಅಷ್ಟೊಂದು ಉತ್ಸುಕತೆ ತೋರುತ್ತಿಲ್ಲ ಎಂಬ ಚರ್ಚೆ ಕೂಡ ಸಾರ್ವಜನಿಕ ವಲಯದಲ್ಲಿ ಜೋರಾಗಿಯೇ ನಡೆಯುತ್ತಿದೆ.

    ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಭೂಬಾಲನ್ ಅವರು ತುಮಕೂರು ಪಾಲಿಕೆಯಿಂದ ವರ್ಗಾವಣೆಗೊಂಡಿದ್ದರು. ಭೂಬಾಲನ್ ಅವರು ವರ್ಗಾವಣೆಯಾಗುವ ಸಮಯದಲ್ಲಿ ಪಾಲಿಕೆಯ ಖಜಾನೆಯಲ್ಲಿ ಸುಮಾರು 12 ಕೋಟಿ ರೂಪಾಯಿ ಇತ್ತು. ಜನರಿಂದ ನೀರು ಹಾಗೂ ಇತರೆ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿ ಇಷ್ಟೊಂದು ಹಣವನ್ನು ಉಳಿಸಿ ಭೂಬಾಲನ್ ವರ್ಗಾವಣೆ ಆಗಿ ಹೋಗಿದ್ದರು.

    ಅತ್ತ ಭೂಬಾಲನ್ ಅವರು ವರ್ಗಾವಣೆ ಗೊಳ್ಳುತ್ತಿದ್ದಂತೆ ಇತ್ತ ಪಾಲಿಕೆ ಆಡಳಿತ ಹಳ್ಳ ಹಿಡಿದಿತ್ತು. ಆಗ ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಇವರು ಬಂದ ಮೇಲೆ ಭೂಬಾಲನ್ ಉಳಿಸಿಹೋಗಿದ್ದ ಸುಮಾರು 9 ರಿಂದ 12 ಕೋಟಿ ರೂಪಾಯಿ ಹಣ ಖಾಲಿಯಾಗಿತ್ತು. ಎರಡು ಮೂರು ತಿಂಗಳಿನಲ್ಲಿಯೇ ಕೋಟ್ಯಂತರ ರೂಪಾಯಿ ಹಣ ಧನದಾಹಿಗಳ ಕೈಗೆ ಸೇರಿತ್ತು.

    ಈಗ ಪಾಲಿಕೆ ಖಜಾನೆ ಖಾಲಿ ಆಗಿದೆ. ಇಷ್ಟೊಂದು ಮೊತ್ತ ಯಾವ ಕೆಲಸಕ್ಕೆ ವೆಚ್ಚವಾಯ್ತು? ಲೆಕ್ಕವನ್ನು ಯಾರಿಗೆ ಕೇಳೋದು ಎಂದು ಜನರಲ್ಲಿ ಪ್ರಶ್ನೆ ಹುಟ್ಟುಕೊಂಡಿದೆ. ತುಮಕೂರು ನಗರಪಾಲಿಕೆಯ ಆಯುಕ್ತರಾಗಿ ಭೂಬಾಲನ್ ಅವರು ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲು ಇದ್ದ ಹುಮ್ಮಸ್ಸು, ಉತ್ಸಾಹ ಸ್ವಲ್ಪ ಕಡಿಮೆಯಾಗಿದೆ. ಆದರೆ ಈಗ ಬಂದಿರುವ ವರ್ತಮಾನವೆಂದರೆ ಇಂಥವರ ನಡುವೆ ಹೇಗೆ ಕೆಲಸ ಮಾಡುವುದು? ಕೆಲಸ ಮಾಡಲು ಮನಸ್ಸೇ ಬರುತ್ತಿಲ್ಲ ಎಂದು ಭೂಬಾಲನ್ ಕೆಲವರಲ್ಲಿ ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ.

  • ಮೈಸೂರು ಮೇಯರ್ ಪಟ್ಟಕೇರಲಿದ್ದಾರೆ ಪ್ರಪ್ರಥಮ ಮುಸ್ಲಿಂ ಮಹಿಳೆ

    ಮೈಸೂರು ಮೇಯರ್ ಪಟ್ಟಕೇರಲಿದ್ದಾರೆ ಪ್ರಪ್ರಥಮ ಮುಸ್ಲಿಂ ಮಹಿಳೆ

    – ತಸ್ಲಿಂ ಮೇಯರ್, ಉಪ ಮೇಯರ್ ಶ್ರೀಧರ್

    ಮೈಸೂರು: ಶನಿವಾರ ಮೈಸೂರು ಮಹಾ ನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಮೇಯರ್ ಆಗಿ ಜೆಡಿಎಸ್‍ನ ತಸ್ಲಿಂ, ಉಪ ಮೇಯರ್ ಆಗಿ ಕಾಂಗ್ರೆಸ್ ನ ಶ್ರೀಧರ್ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

    ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನದ ಎರಡನೇ ಅವಧಿಯ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಯುತ್ತಿದೆ. ಎರಡು ಪಕ್ಷಗಳ ಮೂಲಗಳ ಪ್ರಕಾರ, ಮೇಯರ್ ಸ್ಥಾನ ತಸ್ಲೀಂಗೆ ಹಾಗೂ ಉಪ ಮೇಯರ್ ಸ್ಥಾನ ಶ್ರೀಧರ್‍ಗೆ ಸಿಗುವುದು ಖಚಿತ ಎನ್ನಲಾಗುತ್ತಿದೆ. ಹಿಂದುಳಿದ ‘ಎ’ ವರ್ಗದ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದ್ದು ಜೆಡಿಎಸ್‍ನಲ್ಲಿ ನಾಲ್ವರು ಆಕಾಂಕ್ಷಿಗಳಿದ್ದಾರೆ. ನಮ್ರತಾ ರಮೇಶ್, ತಸ್ಲಿಂ, ನಿರ್ಮಲಾ ಹರೀಶ್, ರೇಶ್ಮಾಭಾನು ರೇಸ್‍ನಲ್ಲಿ ಇದ್ದಾರೆ.

    ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಕಾಂಗ್ರೆಸ್ಸಿನಲ್ಲಿ ನಾಲ್ವರು ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಪ್ರದೀಪ್ ಚಂದ್ರ, ಆರ್ ಶ್ರೀಧರ್, ಸತ್ಯರಾಜು ಹಾಗೂ ಭುವನೇಶ್ವರಿ ಪ್ರಭುಮೂರ್ತಿ ಉಪಮೇಯರ್ ರೇಸ್‍ನಲ್ಲಿದ್ದಾರೆ.

    ಪಾಲಿಕೆಯಲ್ಲಿ 73 ಸದಸ್ಯರು ಮೇಯರ್ ಸ್ಥಾನಕ್ಕೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಜೆಡಿಎಸ್ 18 +ಬಿಎಸ್‍ಪಿ 1, ಕಾಂಗ್ರೆಸ್ 19, ಬಿಜೆಪಿ 21, ಪಕ್ಷೇತರರು 5, ಶಾಸಕರು 4(ಜಿಟಿ ದೇವೇಗೌಡ, ತನ್ವೀರ್ ಸೇಠ್, ಎಲ್ ನಾಗೇಂದ್ರ, ಎಸ್ ಎ ರಾಮದಾಸ್), ವಿಧಾನ ಪರಿಷತ್ ಸದಸ್ಯರು 4 (ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್ ,ಕೆಟಿ ಶ್ರೀಕಂಠೆಗೌಡ, ಹಾಗೂ ಆರ್ ಧರ್ಮಸೇನಾ), ಸಂಸದ 1(ಪ್ರತಾಪ್ ಸಿಂಹ) ಸೇರಿ ಒಟ್ಟು 73 ಸದಸ್ಯರಿದ್ದು, ಬಹುಮತ ಸಾಬೀತು ಪಡಿಸಲು 37 ಸದಸ್ಯರ ಬೆಂಬಲ ಬೇಕಾಗಿದೆ.

    18 ನೇ ವಾರ್ಡಿನ ಬಿಜೆಪಿ ಸದಸ್ಯ ಗುರುವಿನಯ ಸ್ಥಾನ ರದ್ದಾದ ಕಾರಣ ಪಾಲಿಕೆಯಲ್ಲಿ ಬಿಜೆಪಿ ಬಲ 22 ರಿಂದ 21 ಕ್ಕೆ ಕುಸಿದಿದೆ. ಪಾಲಿಕೆಯ 65 ಸ್ಥಾನಗಳ ಪೈಕಿ 64 ಸದಸ್ಯರು ಮಾತ್ರ ಮತ ಚಲಾಯಿಸಲಿದ್ದಾರೆ.

  • ಮೇಯರ್ ಆಯ್ಕೆವರೆಗೂ ಬೆಳಗಾವಿ ಪಾಲಿಕೆಯ ಮೇಲೆ ಡಿಸಿ ಆಡಳಿತ

    ಮೇಯರ್ ಆಯ್ಕೆವರೆಗೂ ಬೆಳಗಾವಿ ಪಾಲಿಕೆಯ ಮೇಲೆ ಡಿಸಿ ಆಡಳಿತ

    ಬೆಳಗಾವಿ: ರಾಜ್ಯದ ಐದು ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಮೇಯರ್ ಹಾಗೂ ಉಪಮೇಯರ್ ಅವರನ್ನು ಆಯ್ಕೆ ಮಾಡುವವರೆಗೆ ಆಯಾ ಜಿಲ್ಲಾಧಿಕಾರಿಗಳನ್ನು ಪಾಲಿಕೆಗೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಬಳ್ಳಾರಿ, ಬೆಳಗಾವಿ, ವಿಜಯಪುರ, ದಾವಣಗೆರೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜ. 6ರಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಆಯಾ ವ್ಯಾಪ್ತಿಯ ಪ್ರಾದೇಶಿಕ ಆಯುಕ್ತರನ್ನು ಆಡಳಿತಾಧಿಕಾರಿಯನ್ನು ನೇಮಕ ಮಾಡುತ್ತಿದ್ದ ಸರ್ಕಾರ ತನ್ನ ಆದೇಶವನ್ನು ಮಾರ್ಪಡಿಸಿದ್ದು, ಇದೀಗ ಜಿಲ್ಲಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವುದರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

    ಬೆಳಗಾವಿ ಪ್ರಾದೇಶಿಕ ವಿಭಾಗದ ಆಯುಕ್ತ ಅಮ್ಲಾನ ಆದಿತ್ಯ ಬಿಸ್ವಾಸ್ ಅವರು ಬೆಳಗಾವಿ ನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಂಡ ಅವಧಿಯಿಂದಲೂ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಪಾಲಿಕೆಯನ್ನು ಸಾರ್ವಜನಿಕರಿಗೆ ಹತ್ತಿರವಾಗುವಂತೆ ಕ್ರಮಕೈಗೊಂಡಿದ್ದಾರೆ. ಅಲ್ಲದೇ ನಗರ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಭೂಮಾಫಿಯಾ ದಂಧೆಕೊರರ ವಿರುದ್ಧ ಸಮರ ಸಾರುವ ಜೊತೆಗೆ ಬಡಾವಣೆಗಳನ್ನು ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜಿಡ್ಡು ಗಟ್ಟಿದ ಪಾಲಿಕೆ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡಿದರು.

    ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನೂರಾರು ಕೋಟಿ ರುಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಮುಂದಿನ ಹಲವು ವರ್ಷಗಳ ಅಭಿವೃದ್ಧಿ ಯೋಜನೆಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ.

  • ಮಹಾನಗರ ಪಾಲಿಕೆ ಉಗ್ರಾಣಕ್ಕೆ ಪಾಲಿಕೆ ಸದಸ್ಯರಿಗೆ ಎಂಟ್ರಿ ಇಲ್ಲ

    ಮಹಾನಗರ ಪಾಲಿಕೆ ಉಗ್ರಾಣಕ್ಕೆ ಪಾಲಿಕೆ ಸದಸ್ಯರಿಗೆ ಎಂಟ್ರಿ ಇಲ್ಲ

    ಮೈಸೂರು: ಜಿಲ್ಲೆಯ ಮಹಾನಗರ ಪಾಲಿಕೆಯ ಉಗ್ರಾಣದ ಪರಿಶೀಲನೆಗೆ ಹೋದ ನಗರಪಾಲಿಕೆ ಸದಸ್ಯರಿಗೆ ಸಿಬ್ಬಂದಿ ತಡೆ ಹಾಕಿದ್ದಾರೆ. ಏಕಾಏಕಿ ಉಗ್ರಾಣಕ್ಕೆ ಹೋದ ಪಾಲಿಕೆ ಸದಸ್ಯರುಗಳನ್ನು ಉಗ್ರಾಣ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ.

    ಸದಸ್ಯರನ್ನು ತಡೆದ ಉಗ್ರಾಣದ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಗರಪಾಲಿಕೆ ಸದಸ್ಯರನ್ನು ಕಳ್ಳರ ರೀತಿ ನೋಡಿ ಅವಮಾನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಉಗ್ರಾಣದ ಸಿಬ್ಬಂದಿ ದೊಡ್ಡಯ್ಯ ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದನ್ನು ಖಂಡಿಸಿ ಉಗ್ರಾಣ ಸಿಬ್ಬಂದಿಯನ್ನು ಪಾಲಿಕೆ ಸದಸ್ಯರು ತರಾಟೆಗೆ ತೆಗೆದುಕೊಂಡರು.

    ಅವಧಿ ಮುಗಿದಿರುವ ಸೊಳ್ಳೆ ಔಷದಿ, ಪೌಡರ್ ಬಳಕೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಉಗ್ರಾಣಕ್ಕೆ ಇಬ್ಬರು ಮಹಿಳಾ ಪಾಲಿಕೆ ಸದಸ್ಯರು ಭೇಟಿ ನೀಡಿದ್ದರು. ನಗರ ಪಾಲಿಕೆ ಸದಸ್ಯರ ಪರಿಸ್ಥಿತಿಯೇ ಹೀಗಾದರೆ ಇನ್ನೂ ಸಾಮಾನ್ಯ ಜನರ ಕಥೆ ಏನು ಎಂದು ನಗರಪಾಲಿಕೆ ಸದಸ್ಯೆ ಡಾ. ಅಶ್ವಿನಿ ಶರತ್ ಹಾಗೂ ಬೇಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ನಗರಪಾಲಿಕೆ ಸದಸ್ಯರನ್ನು ಅವಾಯ್ಡ್ ಮಾಡಲು ಕಾರಣ ಏನು? ಉಗ್ರಾಣದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಸಿಬ್ಬಂದಿಗೆ ಪ್ರಶ್ನಿಸಿದರೆ ನಗರಪಾಲಿಕೆ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತರದೇ ಏಕಾಏಕಿ ಸದಸ್ಯರು ಉಗ್ರಾಣಕ್ಕೆ ಭೇಟಿ ನೀಡಲು ಅವಕಾಶವಿಲ್ಲ ಎಂದು ಉಗ್ರಾಣದ ಅಧಿಕಾರಿಗಳ ಸಮಜಾಯಿಷಿ ನೀಡಿದ್ದಾರೆ.

  • ಸಾಂಸ್ಕೃತಿಕ ನಗರಿಯಲ್ಲಿ ಶುರುವಾಯ್ತು ಒತ್ತುವರಿ ತೆರವು ಕಾರ್ಯಾಚರಣೆ

    ಸಾಂಸ್ಕೃತಿಕ ನಗರಿಯಲ್ಲಿ ಶುರುವಾಯ್ತು ಒತ್ತುವರಿ ತೆರವು ಕಾರ್ಯಾಚರಣೆ

    ಮೈಸೂರು: ಜಿಲ್ಲೆಯ ಮಹಾ ನಗರ ಪಾಲಿಕೆ ಅಧಿಕಾರಿಗಳು ದಿಢೀರನೆ ನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

    ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡ ಬಗ್ಗೆ ಹಲವು ದೂರುಗಳು ಮಹಾ ನಗರ ಪಾಲಿಕೆಗೆ ಬಂದಿವೆ. ಈ ದೂರುಗಳ ಆಧಾರದ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅಕ್ರಮ ಅಂಗಡಿಗಳ ತೆರವು ಶುರು ಮಾಡಿದ್ದಾರೆ. ಅಕ್ರಮವಾಗಿ ತಲೆ ಎತ್ತಿದ್ದ ಫುಟ್‍ಪಾತ್ ಮಳಿಗೆಗಳ ತೆರವು ಕಾರ್ಯಾಚರಣೆ ಇಂದಿನಿಂದ ಶುರುವಾಗಿದೆ.

    ವಿಜಯನಗರದಲ್ಲಿ ಈ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮೈಸೂರು ಮಹಾ ನಗರ ಪಾಲಿಕೆಯ ವಲಯ ಕಚೇರಿ 5ರ ಅಧಿಕಾರಿಗಳು ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಇದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದರು. ಹೆಲ್ತ್ ಇನ್ಸ್​ಪೆಕ್ಟರ್ ಶೃತಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಈ ಮಧ್ಯೆ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಂಗಡಿ ಮಾಲೀಕರ ಅಸಮಾಧಾನ ವ್ಯಕ್ತಪಡಿಸಿದರು.

  • ಹಂದಿ ಮಾಲೀಕರಿಗೆ ಶಾಕ್ ಕೊಡಲು ಮುಂದಾದ ಪಾಲಿಕೆ..!

    ಹಂದಿ ಮಾಲೀಕರಿಗೆ ಶಾಕ್ ಕೊಡಲು ಮುಂದಾದ ಪಾಲಿಕೆ..!

    ದಾವಣಗೆರೆ: ಜಿಲ್ಲೆಯನ್ನು ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ನಾಲ್ಕೂವರೆ ವರ್ಷವಾದ್ರೂ ಇಲ್ಲಿ ಸ್ಮಾರ್ಟ್ ಎಂಬ ಪದಕ್ಕೆ ಅರ್ಥವಿಲ್ಲದಂತಾಗಿದೆ. ಸ್ಮಾರ್ಟ್ ಸಿಟಿ ಬದಲಾಗಿ ಕೊಂಪೆಯಾಗಿ ಸಿಟಿಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಡಿವಾಣ ಹಾಕಲು ಮಹಾನಗರ ಪಾಲಿಕೆ ಆಪರೇಷನ್ ವರಾಹ ಆರಂಭಿಸಿದ್ದು, ಹಂದಿ ಮಾಲೀಕರಿಗೆ ಶಾಕ್ ಕೊಡಲು ಮುಂದಾಗಿದೆ.

    ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಟ್ಟು ನಾಲ್ಕೂವರೆ ವರ್ಷ ಕಳೆದ್ರೂ ನಗರದಲ್ಲಿ ಹಂದಿಗಳು ತುಂಬಿ ತುಳುಕುತ್ತಿವೆ. ಅಷ್ಟೇ ಅಲ್ಲದೆ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರಿಂದ ಮಹಾನಗರ ಪಾಲಿಕೆ ಆಯುಕ್ತರು ಹಂದಿಗಳನ್ನು ಹಿಡಿದು ಸ್ಥಳಾಂತರಿಸುವಂತೆ ಮಾಲೀಕರಿಗೆ ಆರೇಳು ಬಾರಿ ನೋಟಿಸ್ ನೀಡಿದ್ರು. ಆದ್ರೆ, ಮಾಲೀಕರು ತಲೆಕೆಡಿಸಿಕೊಳ್ಳದೇ ಇದ್ದಾಗ ಹಂದಿ ಸೆರೆ ಕಾರ್ಯಾಚರಣೆ ಆರಂಭಿಸಿದ್ದಾರೆ. ತಮಿಳುನಾಡಿನ ತಂಡ ಈಗಾಗಲೇ ಹಂದಿ ಹಿಡಿದು ಸ್ಥಳಾಂತರ ಮಾಡ್ತಿದೆ ಅಂತ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ತಿಳಿಸಿದ್ದಾರೆ.

    ಹಂದಿ ಮಾಲೀಕರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳು ಹಂದಿಗಳನ್ನ ಮಾರಿ ಹಣ ಲೂಟಿ ಹೊಡೀತಿದ್ದಾರೆ ಅಂತಾ ಪರಿಸರ ಪ್ರೇಮಿಯಾಗಿರುವ ಗಿರೀಶ್ ಎಸ್ ದೇವರಮನಿ ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಉದ್ದೇಶದಿಂದ ಆಪರೇಷನ್ ವರಾಹ ಜೋರಾಗಿ ನಡೀತಿದ್ದು, ಭಯದಿಂದಿದ್ದ ಓಡಾಡುತ್ತಿದ್ದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv