Tag: mahalakshmi layout

  • ಹಣಕ್ಕೆ ಡಿಗ್ರಿ ಅಂಕಪಟ್ಟಿ ನೀಡುತ್ತಿದ್ದವರು ಸಿಸಿಬಿ ಬಲೆಗೆ ಬಿದ್ರು

    ಹಣಕ್ಕೆ ಡಿಗ್ರಿ ಅಂಕಪಟ್ಟಿ ನೀಡುತ್ತಿದ್ದವರು ಸಿಸಿಬಿ ಬಲೆಗೆ ಬಿದ್ರು

    ಬೆಂಗಳೂರು: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದ ಮಹಾಲಕ್ಷ್ಮಿ ಲೇಔಟ್ ಶ್ರೀ ವೆಂಕಟೇಶ್ವರ ಇನ್‍ಸ್ಟಿಟ್ಯೂಟ್ ಮೇಲೆ ದಾಳಿ ನಡೆಸಿ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.

    ಮಂಗಳವಾರ ಸಂಜೆಯಿಂದ ದಾಳಿ ನಡೆಸಿದ ಸಿಸಿಬಿ ಪೊಲೀಸರು ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ನಕಲಿ ಮಾರ್ಕ್ಸ್ ಕಾರ್ಡ್ ಗಳು ಪತ್ತೆಯಾಗಿವೆ. ಆಂಧ್ರ ಮೂಲದ ಶ್ರೀನಿವಾಸ್ ರೆಡ್ಡಿಗೆ ಸೇರಿದ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಈ ಮಾರ್ಕ್ಸ್ ಕಾರ್ಡ್ ದಂಧೆ ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

    ಹಣ ನೀಡಿದರೆ ಬೇಕಾದ ಡಿಗ್ರಿ ಮಾರ್ಕ್ಸ್ ಕಾರ್ಡ್ ಕೊಡ್ತಿದ್ರು. ಎಗ್ಗಿಲ್ಲದೇ ಮಾರ್ಕ್ಸ್ ಕಾರ್ಡ್ ಮಾರಾಟ ದಂಧೆ ನಡೆಯುತ್ತಿತ್ತು. ಒಂದು ಮಾರ್ಕ್ಸ್ ಕಾರ್ಡಿಗೆ 80 ಸಾವಿರದಿಂದ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದರು. ಅದೂ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಈ ಮಾರ್ಕ್ಸ್ ಕಾರ್ಡ್ ದಂಧೆ ಎಗ್ಗಿಲ್ಲದೆ ನಡೆಯುತಿತ್ತು.

    ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ ಸೇರಿ ಎಲ್ಲಾ ಡಿಗ್ರಿಗಳ ನಕಲಿ ಅಂಕ ಪಟ್ಟಿಯನ್ನು ಇಲ್ಲಿ ಮಾಡಿಕೊಡಲಾಗುತಿತ್ತು. ಒಂದು ವಿಷಯಕ್ಕೆ 15 ಸಾವಿರ ದಿಂದ 3 ಲಕ್ಷದವರೆಗೂ ಚಾರ್ಜ್ ಮಾಡಲಾಗುತಿತ್ತು. ನಾಮಾಕಾವಸ್ಥೆಗೆ ಪರೀಕ್ಷೆ ಬರೆಸುತ್ತಿದ್ದ ಆರೋಪಿಗಳು ಎಕ್ಸಾಮ್ ಅಟೆಂಡ್ ಮಾಡಿ ಬಂದರೆ ಸಾಕು ಇಲ್ಲಿ ಸುಲಭವಾಗಿ ಡಿಗ್ರಿ ಸಿಗುತಿತ್ತು. ಎಲ್.ಎಲ್.ಬಿ ಪದವಿಗಾಗಿ 3 ಲಕ್ಷ ಕೊಟ್ಟರೆ ಸರ್ಟಿಫಿಕೇಟ್ ಮಾಡಿಸಿ ಕೊಡುತ್ತಿದ್ದರು.

    ಈ ಆರೋಪಿಗಳು ಕೊಡುತ್ತಿದ್ದ ಮಾರ್ಕ್ಸ್ ಕಾರ್ಡ್ ಆಂಧ್ರ ಹಾಗೂ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳದ್ದಾಗಿತ್ತು. ಕಾರ್ಲೆಕ್ಸ್ ಟೀಚರ್ ಯುನಿವರ್ಸಿಟಿ, ನಾರ್ತ್ ಈಸ್ಟ್ ಯುನಿವರ್ಸಿಟಿ, ಸ್ವಾಮಿ ವಿವೇಕಾನಂದ ಯುನಿವರ್ಸಿಟಿಗಳ ಮಾರ್ಕ್ಸ್ ಕಾರ್ಡ್ ಗಳನ್ನು ಲಕ್ಷ ಲಕ್ಷ ದುಡ್ಡು ತಗೊಂಡು ಕೊಡಿಸುತ್ತಿದ್ದರು.

    ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ತಂಡಕ್ಕೆ ಸಾವಿರಾರು ನಕಲಿ ಮಾರ್ಕ್ಸ್ ಕಾರ್ಡ್ ಗಳು ಪತ್ತೆಯಾಗಿವೆ. ದಾಳಿ ವೇಳೆ ಇನ್‍ಸ್ಟಿಟ್ಯೂಟ್ ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೀತ್ಸಿ ಮದ್ವೆ ಆಗಿದ್ದ ಪತ್ನಿಯ ಅನುಮಾನಕ್ಕೆ ಬೇಸತ್ತು ಕೊಲೆಗೈದ ಕ್ರಿಕೆಟರ್

    ಪ್ರೀತ್ಸಿ ಮದ್ವೆ ಆಗಿದ್ದ ಪತ್ನಿಯ ಅನುಮಾನಕ್ಕೆ ಬೇಸತ್ತು ಕೊಲೆಗೈದ ಕ್ರಿಕೆಟರ್

    ಬೆಂಗಳೂರು: ಪ್ರೀತಿಸಿ ಮದುವೆ ಆಗಿದ್ದ ಪತ್ನಿಯನ್ನು ಕೊಲೈಗೈದು, ಪ್ರಕರಣದಿಂದ ಪಾರಾಗಲು ಕಥೆ ಕಟ್ಟಿದ್ದ ಪತಿಯೊಬ್ಬನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶ ಮೂಲದ ರಾಕೇಶ್ ಗುಪ್ತಾ ಬಂಧಿತ ಆರೋಪಿ. ರಾಧಾ ಕೊಲೆಯಾದ ಪತ್ನಿ. ಇದೇ ತಿಂಗಳ 17ರಂದು ಆರೋಪಿ ಕೊಲೆ ಮಾಡಿದ್ದ. ಆದರೆ ಪತ್ನಿ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದ.

    ಆರೋಪಿ ರಾಕೇಶ್ ಗುಪ್ತಾ ಹಾಗೂ ರಾಧಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮೂಲತಃ ಉತ್ತರ ಪ್ರದೇಶದ ಗುಪ್ತಾ ಮದುವೆಯ ಬಳಿಕ ಬೆಂಗಳೂರಿಗೆ ಬಂದು ಕೆಲಸ ಮಾಡಿಕೊಂಡು ಮಹಾಲಕ್ಷ್ಮಿ ಲೇಔಟ್ ನಲ್ಲಿ ಪತ್ನಿಯ ಜೊತೆಗೆ ವಾಸವಾಗಿದ್ದ. ಗುಪ್ತಾ ಉತ್ತರ ಕ್ರಿಕೆಟರ್ ಆಗಿದ್ದರಿಂದ ಸ್ಥಳೀಯ ಟೀಮ್‍ಗಳಲ್ಲಿ ಆಟವಾಡಿ ಹಣ ಗಳಿಸುತ್ತಿದ್ದ.

    ಕೆಲ ದಿನಗಳ ಹಿಂದೆ ರಾಕೇಶ್‍ಗೆ ಗಾಯವಾಗಿತ್ತು. ಪರಿಣಾಮ ಆತನಿಗೆ ಕ್ರಿಕೆಟ್ ಆಡುವುದಕ್ಕೆ ಆಗುತ್ತಿರಲಿಲ್ಲ. ಇದರಿಂದಾಗಿ ಸಂಪಾದನೆ ನಿಂತು ಹೋಯಿತು. ಆಗ ಸಂಸಾರದಲ್ಲಿ ಗಲಾಟೆ ಆಗಲು ಆರಂಭವಾಗಿತ್ತು. ಪತಿ ಬೇರೋಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ಅನುಮಾನ ಪತ್ನಿ ರಾಧಾಳಿಗೆ ಕಾಡತೊಡಗಿತ್ತು.

    ಅಡುಗೆ ವಿಚಾರವಾಗಿ ರಾಧಾ ಹಾಗೂ ರಾಕೇಶ್ ನವೆಂಬರ್ 17ರಂದು ಜಗಳ ಮಾಡಿಕೊಂಡಿದ್ದರು. ಅದೇ ದಿನ ರಾತ್ರಿ ಮದ್ಯ ಸೇವಿಸಿದ್ದ ಆರೋಪಿ ಗುಪ್ತಾ, ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮಲಗಿದ್ದ. ಬೆಳಗ್ಗೆ ಎದ್ದು ನೋಡಿದರೆ ಪತ್ನಿ ಶವವಾಗಿ ಬಿದ್ದಿದ್ದಳು. ಆದರೆ ಆರೋಪಿಯು, ಪತ್ನಿ ಮಟ್ಟಿಲಿನಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ನೆರೆಹೊರೆಯವರನ್ನು ನಂಬಿಸಿದ್ದ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ರಾಕೇಶ್ ಅದೇ ಕಥೆಯನ್ನು ಹೇಳಿದ್ದ. ಬಳಿಕ ವಿಚಾರಣೆ ತೀವ್ರಗೊಳಿಸಿದಾಗ ಆರೋಪಿ ಸತ್ಯ ಒಪ್ಪಿಕೊಂಡಿದ್ದಾನೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಪತ್ನಿ ರಾಧಾ ಫೋನ್ ಪಡೆದು ಕಾಲ್, ಮೆಸೇಜ್ ಚೆಕ್ ಮಾಡಿ ಕಿರಿಕಿರಿ ಕೊಡುತ್ತಿದ್ದಳು. ಅಷ್ಟೇ ಅಲ್ಲದೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡುತ್ತಿದ್ದಳು. ಇದರಿಂದಾಗಿ ಮಾನಸಿಕವಾಗಿ ಕುಂದಿದ್ದೆ ಎಂದು ರಾಕೇಶ್ ಬಾಯಿ ಬಿಟ್ಟಿದ್ದಾನೆ. ಕೊಲೆ ಮಾಡಿರುವುದು ಖಚಿತವಾಗುತ್ತಿದ್ದ ಆರೋಪಿ ರಾಖೇಶ್ ಗುಪ್ತಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

  • ಕಪಾಲಿ ಮೋಹನ್ ಮನೆ ಮೇಲೆ ಸಿಸಿಬಿ ದಾಳಿ-20 ಲೀಟರ್ ವಿದೇಶಿ ಮದ್ಯ ವಶ

    ಕಪಾಲಿ ಮೋಹನ್ ಮನೆ ಮೇಲೆ ಸಿಸಿಬಿ ದಾಳಿ-20 ಲೀಟರ್ ವಿದೇಶಿ ಮದ್ಯ ವಶ

    ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‍ನ ಇಸ್ಪೀಟ್ ಅಡ್ಡೆ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಇಂದು ಗ್ಯಾಂಬ್ಲಿಂಗ್ ರೂವಾರಿ, ಮೀಟರ್ ಬಡ್ಡಿ ಆರೋಪ ಇರುವ ಕಪಾಲಿ ಮೋಹನ್ ಅವರ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ವಿದೇಶಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಹಲವು ಚಿತ್ರಗಳಿಗೆ ಫೈನಾನ್ಸ್ ಮಾಡುತ್ತಿದ್ದ ಕಪಾಲಿ ಮೋಹನ್, ಶೀಘ್ರ ಹಣ ಸಂಪಾದನೆಗೆ ಅಕ್ರಮದ ದಾರಿ ಹಿಡಿದಿದ್ದರು ಎಂಬ ಆರೋಪದ ಮೇಲೆ ಸದಾಶಿವನಗರದ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆದರೆ ಈ ವೇಳೆ ಕಪಾಲಿ ಮೋಹನ್ ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭಿಸಿದ್ದು, ಮನೆಯಲ್ಲಿ ದುಬಾರಿ ಬೆಲೆಯ ವಿದೇಶಿ ಮದ್ಯದ ಬಾಟೆಲ್‍ಗಳು ಪತ್ತೆಯಾಗಿವೆ. ಸುಮಾರು 20 ಲೀಟರ್ ನಷ್ಟಿದ್ದ ಅಕ್ರಮ ವಿದೇಶಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಅಂದಹಾಗೇ ಸದ್ಯ ಜಾರಿ ಇರುವ ನಿಯಮದ ಪ್ರಕಾರ 9 ಲೀಟರ್‍ಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಮದ್ಯ ಸಂಗ್ರಹ ಮಾಡಿದ್ದರೆ ಅದು ಅಪರಾಧವಾಗುತ್ತದೆ. ಇದರೊಂದಿಗೆ ನಗರದ ಪ್ಯಾಲೇಸ್ ಗುಟ್ಟಹಳ್ಳಿಯ ಬಾಲಾಜಿ ಫೈನಾನ್ಸ್ ಮೇಲೆಯೂ ಸಿಸಿಬಿ ದಾಳಿ ನಡೆಸಿ ಹಲವು ದಾಖಲೆ ವಶಕ್ಕೆ ಪಡೆದಿರುವುದಾಗಿ ಉತ್ತರ ವಿಭಾಗ ಅಬಕಾರಿ ಡಿಸಿ ಕೆಎಸ್ ಮುರಳಿ ತಿಳಿಸಿದ್ದಾರೆ. ಬಾಲಾಜಿ ಫೈನಾನ್ಸ್ ಕಪಾಲಿ ಮೋಹನ್ ಒಡೆತನದಲ್ಲಿ ಸಂಸ್ಥೆಯಾಗಿದೆ.

    ಉಳಿದಂತೆ ಶನಿವಾರ ನಡೆಸಿದ ಸಿಸಿಬಿ ದಾಳಿಗೆ ಸಂಬಂಧಿಸಿದಂತೆ ಆರ್ ಜಿ ಹೋಟೆಲ್ ಬಿಲ್ಡಿಂಗ್ ಮಾಲೀಕನ ಮೇಲೆ ಸಹ ದೂರು ದಾಖಲು ಮಾಡಲಾಗಿದೆ ಎಂದು ಸಿಸಿಬಿ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಲ್ಲಿ ಮುಂಜಾನೆ ಲಾಂಗು, ಮಚ್ಚುಗಳ ಸದ್ದು- ಕೈ ಕಡಿದು, ತಲೆ ಮೇಲೆ ಕಲ್ಲೆಸೆದು ವ್ಯಕ್ತಿಯ ಬರ್ಬರ ಕೊಲೆ

    ಬೆಂಗ್ಳೂರಲ್ಲಿ ಮುಂಜಾನೆ ಲಾಂಗು, ಮಚ್ಚುಗಳ ಸದ್ದು- ಕೈ ಕಡಿದು, ತಲೆ ಮೇಲೆ ಕಲ್ಲೆಸೆದು ವ್ಯಕ್ತಿಯ ಬರ್ಬರ ಕೊಲೆ

    ಬೆಂಗಳೂರು: ನಗರದಲ್ಲಿ ಇಂದು ಮುಂಜಾನೆ ಮಚ್ಚು, ಲಾಂಗುಗಳು ಸದ್ದು ಮಾಡಿದ್ದು, ದುಷ್ಕರ್ಮಿಗಳು ಅಪರಿಚಿತ ವ್ಯಕ್ತಿಯ ಕೈ ಕಡಿದು, ತಲೆ ಮೇಲೆ ಕಲ್ಲೆಸೆದು ಭೀಕರವಾಗಿ ಕೊಲೆ ಮಾಡಿದ್ದಾರೆ.

    ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಡ್ ರಸ್ತೆ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು. 35 ವರ್ಷದ ವ್ಯಕ್ತಿಯ ದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ.

    ದುಷ್ಕರ್ಮಿಗಳು ಮೊದಲು ಮಣಪ್ಪುರಂ ಗೋಲ್ಡ್ ಲೋನ್ ಸೆಂಟರ್ ಬಳಿ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ. ನಂತರ ಅಲ್ಲಿಂದ ನೂರು ಮೀಟರ್ ಅಟ್ಟಾಡಿಸಿಕೊಂಡು ಹೋಗಿ ಕೃತ್ಯವೆಸಗಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಘಟನಾ ಸ್ಥಳಕ್ಕೆ ಆಗಮಿಸಿ ತುಂಡಾದ ಕೈ ಸಮೇತ ಮೃತ ದೇಹವನ್ನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ.

    ಘಟನೆ ನಡೆದ ಪ್ರದೇಶವಾದ ಮಣಪ್ಪುರಂ ಗೋಲ್ಡ್ ಲೋನ್ ಸೆಂಡರ್ ಸುತ್ತಮುತ್ತ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಗಳನ್ನು ಅಳವಡಿಸಿಲ್ಲ. ಸಿಸಿಟಿವಿ ದೃಶ್ಯ ಲಭ್ಯವಾದರೆ ಕೊಲೆಯಾದ ವ್ಯಕ್ತಿ ಯಾರು, ದುಷ್ಕರ್ಮಿಗಳು ಯಾರು ಎಂದು ಪತ್ತೆ ಹಚ್ಚುವ ಕಾರ್ಯಕ್ಕೆ ಸಹಕಾರಿಯಾಗುತ್ತಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾರ್ಕ್‍ನಲ್ಲಿ ಎಸಿ ಹಾಕಿಸಿದ ಶಾಸಕರು- ಸುಮ್ಮನೆ ಹಣಪೋಲು ಎಂದು ಸ್ಥಳೀಯರ ಆಕ್ರೋಶ

    ಪಾರ್ಕ್‍ನಲ್ಲಿ ಎಸಿ ಹಾಕಿಸಿದ ಶಾಸಕರು- ಸುಮ್ಮನೆ ಹಣಪೋಲು ಎಂದು ಸ್ಥಳೀಯರ ಆಕ್ರೋಶ

    ಬೆಂಗಳೂರು: ಮಳೆ ಬಂದ್ರೆ ಬೆಂಗಳೂರು ತೊಯ್ದು ತೊಪ್ಪೆಯಾಗತ್ತೆ. ಮತ್ತೊಂದು ಕಡೆ ರಸ್ತೆ ಗುಂಡಿ ವಾಹನ ಸವಾರರನ್ನ ಹಿಂಡಿ ಹಿಪ್ಪೆ ಮಾಡತ್ತೆ. ನೈಸರ್ಗಿಕ ಗಾಳಿ ಸಿಗಲಿ ಅಂತ ಪಾರ್ಕ್‍ಗೆ ವೃದ್ಧರು, ಮಹಿಳೆಯರು, ಮಕ್ಕಳು ಪಾರ್ಕ್‍ಗೆ ಬರ್ತಾರೆ. ಆದ್ರೆ ಈ ಪಾರ್ಕ್ ಮಾತ್ರ ಸಿಕ್ಕಾಪಟ್ಟೆ ಹೈಫೈ. ಈ ಪಾರ್ಕ್‍ಗೆ ಬಂದ್ರೆ ಎಸಿ ಗಾಳಿ ಕುಡೀಬೇಕು.

    ಇಂಥದ್ದೊಂದು ಪಾರ್ಕ್ ಇರೋದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ. ಇದನ್ನ ಉಪಮಹಾಪೌರರ ಅನುದಾನದಡಿಯಲ್ಲಿ ಮಾಡಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಪಾರ್ಕ್‍ನಲ್ಲೂ ಎಸಿ ಹಾಕಿಸಿದ್ದಾರೆ.

    ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಮಾಡುವ ಯೋಜನೆಗೆ ಬಿಬಿಎಂಪಿ ಹಾಗೂ ಸರ್ಕಾರದ ಹಣವನ್ನು ಬಳಕೆ ಮಾಡಿ ಹಣ ದೋಚುವ ಸಾಹಸಕ್ಕೆ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಮುಂದಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಕೆಲ ಸ್ಥಳೀಯರು ಮಾತನಾಡಿ, ಬಡಾವಣೆಯಲ್ಲಿ ಎಷ್ಟೆಲ್ಲಾ ಸಮಸ್ಯೆಗಳು ಇವೆ. ಮಳೆ ಬಂತೆಂದರೆ ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದೆ. ಅಲ್ಲದೇ ರಸ್ತೆಗಳೆಲ್ಲ ಹದಗೆಟ್ಟಿದ್ದು, ವಾಹನ ಸವಾರರಿಗೆ ತಲೆ ನೋವಾಗಿದೆ. ಇಂತಹ ಕೆಲಸಗಳಿಗೆ ಅನುದಾನ ಪಡೆದು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಹೈಫೈ ಎಸಿ ಪಾರ್ಕ್ ಯೋಜನೆ ಸಮಂಜಸವಲ್ಲ ಎಂದು ಆರೋಪಿಸಿದ್ದಾರೆ.

    ಸರ್ಕಾರದ ಮತ್ತು ಬಿಬಿಎಂಪಿ ಉಪಮೇಯರ್ ಅನುದಾನವನ್ನ ಒಳ್ಳೆಯ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬೇಕು. ಅವ್ಯವಸ್ಥೆಯ ಬಗ್ಗೆ ಗಮನಹರಿಸದೇ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಸಾರ್ವಜನಿಕ ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಮಾಡಲು ಮುಂದಾಗಿದ್ದಾರೆ. ಜನರಿಗೆ ಹೈಫೈ ಎಸಿ ಪಾರ್ಕ್‍ನ ಅವಶ್ಯಕತೆಯಿಲ್ಲ. ಇದು ಹುಚ್ಚಾಟದ ಆಲೋಚನೆ. ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಆಲೋಚನೆ ಬಿಟ್ಟು ಜನಪರ ಕೆಲಸ ಮಾಡಬೇಕು ಎಂದು ಸ್ಥಳೀಯ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.