Tag: Mahakumbh 2025

  • ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

    ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

    ಮುಂಬೈ: ಮಹಾ ಕುಂಭಮೇಳದ ವೈರಲ್ ಬೆಡಗಿ ಮೊನಾಲಿಸಾ ಭೋಂಸ್ಲೆ (Monalisa Bhosle) ಅವರ ಬಗ್ಗೆ ಮಾನಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿ ʻದಿ ಡೈರಿ ಆಫ್ ಮಣಿಪುರʼ ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ನೀಡಿದ ದೂರು ಆಧರಿಸಿ ಯೂಟ್ಯೂಬ್ ಚಾನಲ್ ಮಾಲೀಕ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸನೋಜ್ ಮಿಶ್ರಾ (Sanoj Mishra) ನೀಡಿದ ದೂರು ಆಧರಿಸಿ ಮುಂಬೈನ ಉಪನಗರದಲ್ಲಿರುವ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

    ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದ ವೇಳೆ ಮೊನಾಲಿಸಾ ಭೋಂಸ್ಲೆ ಅವರು ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದಾರೆ. ಅವರ ಫೋಟೊ ಮತ್ತು ವಿಡಿಯೋಗಳು ಈಗಲೂ ವ್ಯಾಪಕವಾಗಿ ಹರಿದಾಡುತ್ತಿವೆ. ಸೋಶಿಯಲ್‌ ಮೀಡಿಯಾದಲ್ಲಿ ಮೊನಾಲಿಸಾ ಟ್ರೆಂಡ್‌ ಅದ ಬೆನ್ನಲ್ಲೇ ʻದಿ ಡೈರಿ ಆಫ್ ಮಣಿಪುರʼ (The Diary of Manipur) ಸಿನಿಮಾ ನಿರ್ಮಿಸುವುದಾಗಿ ಮಿಶ್ರಾ ಘೋಷಿಸಿದ್ದರು.

    ʻಮಿಶ್ರಾ ನಿರ್ದೇಶಿಸಿದ ಯಾವುದೇ ಸಿನಿಮಾಗಳು ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ. ಹಾಗಾಗಿ ಮಿಶ್ರಾ ಅವರು 16 ವರ್ಷದ ಮೊನಾಲಿಸಾ ಅವರ ವೃತ್ತಿಜೀವನವನ್ನು ಹಾಳು ಮಾಡಲು ಮುಂದಾಗಿದ್ದಾರೆʼ ಎಂದು ದೂರಿನಲ್ಲಿ ಹೆಸರಿಸಲಾದ ಐವರು ಆರೋಪಿಸಿದ್ದರು. ಹೀಗಾಗಿ ಯೂಟ್ಯೂಬ್ ಚಾನಲ್ ಮಾಲೀಕ ಸೇರಿದಂತೆ ಐವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ನನಗೆ ಘನತೆಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಮಿಶ್ರಾ ಪ್ರತಿದೂರು ದಾಖಲಿಸಿದ್ದಾರೆ ಎಂಬುದಾಗಿ ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಿಶ್ರಾ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • Mahakumbh 2025 | ಕಾಲ್ತುಳಿತಕ್ಕೆ ಬಲಿಯಾದವರ ಮೃತದೇಹ ಬೆಳಗಾವಿಗೆ – ಕುಟುಂಬಸ್ಥರಲ್ಲಿ ಆಕ್ರಂದನ

    Mahakumbh 2025 | ಕಾಲ್ತುಳಿತಕ್ಕೆ ಬಲಿಯಾದವರ ಮೃತದೇಹ ಬೆಳಗಾವಿಗೆ – ಕುಟುಂಬಸ್ಥರಲ್ಲಿ ಆಕ್ರಂದನ

    ಬೆಳಗಾವಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ (Mahakumbh Mela stampede) ಸಿಕ್ಕಿ ಮೃತಪಟ್ಟ ಕನ್ನಡಿಗರ ಮೃತದೇಹಗಳನ್ನು ರಾಜ್ಯಕ್ಕೆ ತರುವ ಪ್ರಕ್ರಿಯೆ ನಡೆದಿದೆ. ಈಗಾಗಲೇ ಮಹಾದೇವಿ, ಅರುಣ್ ಕೋಪರ್ಡೆ ಮೃತದೇಹಗಳನ್ನು ಬೆಳಗಾವಿಗೆ (Belagavi) ತರಲಾಗಿದ್ದು, ಮೃತರ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ.

    ಇನ್ನೂ ಜ್ಯೋತಿ, ಮೇಘ ಮೃತದೇಹಗಳನ್ನು ಹೊತ್ತ ವಿಮಾನ ಪಣಜಿಗೆ ಬಂದಿದೆ. 2 ಮೃತದೇಹಗಳನ್ನು ಮಧ್ಯರಾತ್ರಿ ಹೊತ್ತಿಗೆ ರಸ್ತೆ ಮಾರ್ಗವಾಗಿ ಬೆಳಗಾವಿಗೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಹೊಸ ಮಸೂದೆ – ಇನ್ನೆರಡು ದಿನದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಪ್ಲ್ಯಾನ್‌

    ಕಾಲ್ತುಳಿದಲ್ಲಿ ಮೃತಪಟ್ಟ ಬೆಳಗಾವಿಯ ಅರುಣ್ ಕೋಪರ್ಡೆ, ಮಹಾದೇವಿ ಬಾವನೂರ ಮೃತದೇಹಗಳನ್ನು ಇಂದು ದೆಹಲಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಜಿಲ್ಲಾಡಳಿತಕ್ಕೆ ಮೃತದೇಹಗಳನ್ನು ಹಸ್ತಾಂತರಿಸಿದ ನಂತರ ಅಂತಿಮ ನಮನ ಸಲ್ಲಿಸಲಾಯಿತು. ಸಂಸದ ಜಗದೀಶ್ ಶೆಟ್ಟರ್, ಶಾಸಕ ಅಭಯ್ ಪಾಟೀಲ್, ಆಸೀಫ್ ಸೇಠ್, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸಹ ಅಂತಿಮ ನಮನ ಸಲ್ಲಿಸಿದರು. ಅನೇಕ ಬಿಜೆಪಿ ಕಾರ್ಯಕರ್ತರು ಪಾರ್ಥೀವ ಶರೀರಕ್ಕೆ ಮಾಲಾರ್ಪಣೆ ಮಾಡಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗಣ್ಯರು ಅಂತಿಮ ನಮನ ಸಲ್ಲಿಸಿದ ಬಳಿಕ ಮೃತದೇಹವನ್ನು ಬಿಮ್ಸ್‌ ಆಸ್ಪತ್ರೆಗೆ ರವಾನಿಸಲಾಯಿತು. ಸದ್ಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಇದನ್ನೂ ಓದಿ: ಮುಡಾ ಹಗರಣದಲ್ಲಿ ಅಕ್ರಮ ಹಣದ ವರ್ಗಾವಣೆಯಾಗಿದೆ – ಇಡಿಯಿಂದ ಸಬ್ ರಿಜಿಸ್ಟ್ರಾರ್‌ಗಳಿಗೆ 104 ಪುಟಗಳ ಪತ್ರ

  • ಮಹಾ ಕುಂಭಮೇಳದಲ್ಲಿ ಬರೋಬ್ಬರಿ 10 ಕೋಟಿ ಭಕ್ತರಿಂದ ಪುಣ್ಯಸ್ನಾನ

    ಮಹಾ ಕುಂಭಮೇಳದಲ್ಲಿ ಬರೋಬ್ಬರಿ 10 ಕೋಟಿ ಭಕ್ತರಿಂದ ಪುಣ್ಯಸ್ನಾನ

    ಪ್ರಯಾಗ್‌ರಾಜ್‌: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Mahakumbh 2025) 11ನೇ ದಿನವೂ ಭಕ್ತಸಾಗರ ತುಂಬಿ ತುಳುಕಿದೆ.

    ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ (Holy Pilgrims) ಮಾಡಿದವರ ಸಂಖ್ಯೆ ಇದೀಗ 10 ಕೋಟಿ ಮೈಲುಗಲ್ಲು ದಾಟಿದೆ. ಜನವರಿ 13ರಂದು ಪ್ರಾರಂಭವಾದ ಮಹಾ ಕುಂಭಮೇಳವು ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಮೈಲುಗಲ್ಲು ತಲುಪಿದೆ ಎಂದು ಉತ್ತರ ಪ್ರದೇಶದ ಸರ್ಕಾರ ಇಂದು (ಜ.23) ತಿಳಿಸಿದೆ. ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್‌ ಅಲಿಗೆ ಹೇಳಿದ್ದೇನು?

    ಜನವರಿ 13ರಂದು ಶಾಹಿ ಸ್ನಾನದ ಮೂಲಕ ಉದ್ಘಾಟನೆಯಾದ ಕುಂಭಮೇಳದಲ್ಲಿ ವಿವಿಧ ಬಗೆಯ ಪುಣ್ಯಸ್ನಾನದಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಹಾಗೆಯೇ ಜ.15ರಂದು ಮಕರ ಸಂಕ್ರಾಂತಿ ಸ್ನಾನ ನಡೆಯಿತು. ಮುಂದೆ ಜನವರಿ 29 ರಂದು ಮೌನಿ ಅಮಾವಾಸ್ಯೆ ಸ್ನಾನ, ಫೆಬ್ರವರಿ 3ರಂದು ವಸಂತ ಪಂಚಮಿ ಸ್ನಾನ, ಫೆಬ್ರವರಿ 12 ರಂದು ಮಾಘಿ ಪೂರ್ಣಿಮಾ ಸ್ನಾನ, ಫೆಬ್ರವರಿ 26ರಂದು ಮಹಾ ಶಿವರಾತ್ರಿ ಸ್ನಾನ ನೆರವೇರಲಿದೆ. ಸದ್ಯ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

    45 ಕೋಟಿ ಜನ ಭಾಗಿಯಾಗುವ ನಿರೀಕ್ಷೆ:
    45 ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ಬರೋಬ್ಬರಿ 45 ಕೋಟಿ ಜನ ಬಂದು ಹೋಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಗಂಗಾ, ಯಮುನ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ʻಸಂಗಮನಗರಿʼ ಎಂಬ ನಗರವನ್ನೇ ಸೃಷ್ಟಿಸಿದೆ. ಇದನ್ನೂ ಓದಿ: ಯುಪಿ ಕಾಲುವೆಯೊಂದರಲ್ಲಿ ವ್ಯಕ್ತಿಯ ಶವ ಪತ್ತೆ – ಆತ್ಮಹತ್ಯೆಗೆ ಒಳ್ಳೆಯ ಜಾಗ ಯಾವ್ದು ಅಂತ ಸರ್ಚ್‌ ಮಾಡಿದ್ದ ಭೂಪ!

    12 ಗಂಟೆ ವೇಳೆಗೆ 30 ಲಕ್ಷ ಜನರಿಂದ ಪುಣ್ಯಸ್ನಾನ:
    ಗುರುವಾರ (ಇಂದು) ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಲ್ಪವಾಸಿಗಳು ಹಾಗೂ ಇತರ ಭಕ್ತರು ಸೇರಿದಂತೆ ಸುಮಾರು 30 ಲಕ್ಷ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ದಿನದ ಅಂತ್ಯಕ್ಕೆ ಇದರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದೂ ಉತ್ತರ ಪ್ರದೇಶ ಸರ್ಕಾರ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

  • ಮಹಾ ಕುಂಭಮೇಳದಲ್ಲಿ ಆರೂವರೆ ಕೋಟಿ ಭಕ್ತರ ಪುಣ್ಯಸ್ನಾನ

    ಮಹಾ ಕುಂಭಮೇಳದಲ್ಲಿ ಆರೂವರೆ ಕೋಟಿ ಭಕ್ತರ ಪುಣ್ಯಸ್ನಾನ

    ಪ್ರಯಾಗ್‌ರಾಜ್‌: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ ತೀರದಲ್ಲಿ ಮಹಾ ಕುಂಭಮೇಳದ (Mahakumbh 2025) ಮೂರನೇ ದಿನವೂ ಭಕ್ತಸಾಗರ (Devotees) ತುಂಬಿ ತುಳುಕಿದೆ.

    ಈವರೆಗೂ ಆರೂವರೆ ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ (Holy bath) ಮಾಡಿದ್ದಾರೆ. ಮೊದಲ ದಿನ 1.75 ಕೋಟಿ ಮಂದಿ, 2ನೇ ದಿನ 3.50 ಕೋಟಿ ಮಂದಿ, ಮೂರನೇ ದಿನವಾದ ಇಂದು ಕೂಡ 1 ಕೋಟಿಗೂ ಹೆಚ್ಚು ಮಂದಿ ಕೊರೆವ ಚಳಿ ಲೆಕ್ಕಿಸದೇ ಅಮೃತ ಸ್ನಾನದಲ್ಲಿ ತೊಡಗಿದ್ದು ಕಂಡುಬಂತು.

    ಮಹಾಕುಂಭಮೇಳದಲ್ಲಿ ಪಾಲ್ಗೊಂಡಿರುವ ವಿದೇಶಿ ಭಕ್ತೆಯೊಬ್ಬರು, ಮಡಿಲಲ್ಲಿ ಗಣೇಶನ ವಿಗ್ರಹವನ್ನು ಹೊಂದಿರುವ ಫೋಟೋ ವೈರಲ್ ಆಗಿದೆ. ಬ್ಯೂಟಿ ಆಫ್ ಸನಾತನ್, ಜೈ ಗಣೇಶ್ ಎಂಬ ಕಾಮೆಂಟ್‌ಗಳು ಹೊರಹೊಮ್ಮಿದೆ. ಇನ್ನೂ 2ನೇ ದಿನ ಅಸ್ವಸ್ಥಗೊಂಡಿದ್ದ ಸ್ಟೀವ್ ಜಾಬ್ಸ್ ಪತ್ನಿ ಕಮಲಾ ಚೇತರಿಸಿಕೊಂಡಿದ್ದು, ಗಂಗೆಯಲ್ಲಿ ಮಿಂದೆದ್ದಿದ್ದಾರೆ ಎಂದು ಯುಪಿ ಆಡಳಿತ ತಿಳಿಸಿದೆ.

  • ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

    ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

    ಪ್ರಯಾಗ್‌ರಾಜ್‌: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಕುಂಭಮೇಳಕ್ಕೆ ಆಗಮಿಸಿರುವ ಆ್ಯಪಲ್ ಸಹ ಸಂಸ್ಥಾಪಕ (Steve Jobs) ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ (Laurene Powell Jobs) ಅವರು ತನ್ನ ಗುರು ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರಿಂದ ಗೋತ್ರ ಸ್ವೀಕರಿಸಿದ್ದಾರೆ. ಈ ಮೂಲಕ ಹೊಸ ಗುರುತು ಪಡೆದುಕೊಂಡಿದ್ದಾರೆ.

    ಪ್ರಯಾಗ್‌ರಾಜ್‌ಗೆ ಕಾಲಿಟ್ಟ ಬಳಿಕ ಮೊದಲು ತಮ್ಮ ಗುರುಗಳಾದ ನಿರಂಜನಿ ಅಖಾಡ ಕೈಲಾಶಾನಂದ ಗಿರಿ ಜಿ ಮಹಾರಾಜ್ (Guru Niranjani Akhada Peethadheeshwar Swami Kailashanand Giri) ಅವರನ್ನ ಭೇಟಿಯಾಗಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಈ ಕುರಿತು ಪ್ರತಿಕ್ರಿಯಿಸಿದ ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಮಹಾರಾಜ್ ಅವರು, ಲಾರೆನ್ ಪೊವೆಲ್ ಅವರಿಗೆ ಗೋತ್ರದ ಪ್ರಕಾರ ಕಮಲಾ ಎಂಬ ಹೆಸರು ಕೊಟ್ಟಿದ್ದೇನೆ. ಲಾರೆನ್ ಅವರು ನಮಗೆ ಮಗಳಿದ್ದಂತೆ. ಆಕೆ ಭಾರತಕ್ಕೆ ಎರಡನೇ ಬಾರಿ ಬರುತ್ತಿದ್ದಾರೆ. ಕುಂಭಮೇಳಕ್ಕೆ (Mahakumbh 2025) ಎಲ್ಲರಿಗೂ ಸ್ವಾಗತ ಎಂದು ಹೇಳಿದ್ದಾರೆ.

    ಕಮಲಾ ಸನಾತನ ಧರ್ಮದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಜನವರಿ 29ರ ವರೆಗೆ ಹಿಂದೂ ಆಚರಣೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಂಭಮೇಳಕ್ಕೆ ಬರುವ ಮುನ್ನ ಪೊವೆಲ್‌ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳ ವೈಭವ – ಇಂಚಿಂಚಿಗೂ ಹದ್ದಿನ ಕಣ್ಣು, 2,700 ಎಐ ಕ್ಯಾಮೆರಾ ಕಣ್ಗಾವಲು

    ಭಾರತೀಯ ಉಡುಪನ್ನು ಧರಿಸಿ ಬಂದಿದ್ದ ಲಾರೆನ್, ವಿಶ್ವನಾಥ ದೇವಾಲಯದಲ್ಲಿ ಗರ್ಭಗುಡಿಯ ಹೊರಗಿನಿಂದ ಪ್ರಾರ್ಥನೆ ಸಲ್ಲಿಸಿದರು. ಭಾರತೀಯ ಸಂಪ್ರದಾಯದಂತೆ, ಕಾಶಿ ವಿಶ್ವನಾಥದಲ್ಲಿ, ಬೇರೆ ಯಾವುದೇ ಸಮುದಾಯದವರು ಶಿವಲಿಂಗವನ್ನು ಮುಟ್ಟುವಂತಿಲ್ಲ. ಅದಕ್ಕಾಗಿಯೇ ಶಿವಲಿಂಗವನ್ನು ಹೊರಗಿನಿಂದ ನೋಡುವ ವ್ಯವಸ್ಥೆ ಮಾಡಲಾಗಿತ್ತು.

  • ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    – ಸಂಪೂರ್ಣ ಪರಿಸರ ಸ್ನೇಹಿ ಕುಂಭಮೇಳ, ಒಂದು ದೇಶ-ಒಂದು ಚುನಾವಣೆ ಉಪನ್ಯಾಸ

    ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳಗಳಲ್ಲಿ ಒಂದಾದ ಮಹಾ ಕುಂಭಮೇಳ (MahaKumbh 2025) ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಇಂದಿನಿಂದ ಆರಂಭವಾಗಿದೆ. ಬರೋಬ್ಬರಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಅಧ್ಯಾತ್ಮ ವಿಸ್ಮಯವೇ ಜರುಗಲಿದೆ. ಈ ಧಾರ್ಮಿಕ ಮೇಳದಲ್ಲಿ ಕೋಟಿಗಟ್ಟಲೇ ಸಾಧು-ಸಂತರು ನಾಗಸಾಧುಗಳು, ಅಘೋರಿಗಳು, ಭಕ್ತರು (Devotees) ಆಗಮಿಸುವುದು ಇಲ್ಲಿನ ವಿಶೇಷ.

    ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಈ ಬಾರಿ ಅತೀ ವಿಶೇಷವಾಗಿದೆ. ಏಕೆಂದರೆ ಪ್ರಯಾಗ್‌ ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದರೆ, ಸಮೀಪದಲ್ಲೇ ಇರುವ ಅಯೋಧ್ಯೆಯಲ್ಲಿ ಮೊದಲ ವಾರ್ಷಿಕೋತ್ಸವ ಸಂಭ್ರಮ ನಡೆಯುತ್ತಿದೆ. ಭಾರತ ಅಷ್ಟೇ ಅಲ್ಲದೇ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಇಲ್ಲಿ ಸ್ನಾನ ಮಾಡಿದ್ರೆ, ಪಾಪನಾಶ, ಮೋಕ್ಷ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಈಗಾಗಲೇ ಕಳೆದ 2 ದಿನಗಳಲ್ಲಿ 85 ಲಕ್ಷ ಮಂದಿ ಸ್ನಾನ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ಬಾರಿ ಕುಂಭಮೇಳ ಅತ್ಯಂತ ವಿಶೇಷವಾಗಿದೆ. ಅಲ್ಲದೇ ಈ ಕುಂಭಮೇಳದಲ್ಲಿ ಏನೇನು ವಿಶೇಷತೆಗಳಿವೆ ಎಂಬುದನ್ನು ತಿಳಿಯಬೇಕಾದ್ರೆ ಮುಂದೆ ಓದಿ…

    ಇಂದಿನಿಂದ ಕುಂಭಮೇಳ ಆರಂಭ
    ಈ ಹಿಂದೆ 2013ರಲ್ಲಿ ಮಹಾ ಕುಂಭಮೇಳ ನಡೆದಿತ್ತು. ಇದೀಗ 2025ರ ಜ.13ರಿಂದ ಆರಂಭವಾಗಿದೆ. ಫೆ.26ರ ಶಿವರಾತ್ರಿ ದಿನದಂದು ಈ ಕುಂಭಮೇಳ ಸಂಪನ್ನಗೊಳ್ಳಲಿದೆ. ಜ.14ರಂದು ಮಕರ ಸಂಕ್ರಾಂತಿ, ವಸಂತ, ಪಂಚಮಿ, ಹೀಗೆ 5 ಬಾರಿ ಪುಣ್ಯಸ್ನಾನ ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ನಡೆಯಲಿದೆ.

    ಸಂಪೂರ್ಣ ಪರಿಸರ ಸ್ನೇಹಿ ಕುಂಭಮೇಳ
    ಈ ಬಾರಿಯ ಮಹಾಕುಂಭಮೇಳದಲ್ಲಿ ಒಂದೇ ಒಂದು ಪ್ಲಾಸ್ಟಿಕ್‌ ಬಳಸದೇ ಸಂಪೂರ್ಣ ಪರಿಸರ ಸ್ನೇಹಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ. ಸ್ವಚ್ಛತೆ ಮತ್ತು ಶುದ್ಧತೆ ಕಾಪಾಡುವುದಕ್ಕಾಗಿ ಬರೋಬ್ಬರಿ 1,500 ಪೌರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಸರಾಗವಾಗಿ ಸಾಗಲು 50ಕ್ಕೂ ಹೆಚ್ಚು ತಾತ್ಕಾಲಿಕ ಬ್ರಿಡ್ಜ್‌ಗಳನ್ನ ನಿರ್ಮಿಸಲಾಗಿದೆ. ಅಲ್ಲದೇ 1.5 ಲಕ್ಷ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಏಕಕಾಲಕ್ಕೆ ಸಾವಿರಾರು ಜನರು ತಂಗಲು ಅನುಕೂಲವಾಗುವಂತೆ ಅಲ್ಲಲ್ಲಿ ಟೆಂಟ್‌ಗಳನ್ನ ನಿರ್ಮಿಸಿರುವುದು ವಿಶೇಷ.

    ಒಂದು ದೇಶ-ಒಂದು ಚುನಾವಣೆ ಉಪನ್ಯಾಸ
    ಕುಂಭಮೇಳ ನಡೆಯುವ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹರಿದ್ವಾರ ಮೂಲದ ಸಂಘಟನೆಯೊಂದು ʻಒಂದು ದೇಶ ಒಂದು ಚುನಾವಣೆ’ ಸೇರಿ ಒಟ್ಟು 7 ವಿಷಯಗಳ ಬಗ್ಗೆ ಉಪನ್ಯಾಸ ಆಯೋಜಿಸಿದೆ. ಜ. 12ರಂದು ಉಪನ್ಯಾಸ ಆರಂಭಗೊಂಡಿದ್ದು, ಮೊದಲ ದಿನ ಸ್ವಾಮಿ ವಿವೇಕಾನಂದರ ಬಗ್ಗೆ ಉಪನ್ಯಾಸ ನೀಡಲಾಗಿದೆ. ʻಒಂದು ದೇಶ ಒಂದು ಚುನಾವಣೆ’ ವಿಷಯದ ಬಗ್ಗೆ ಜ.18ರಂದು ಉಪನ್ಯಾಸ ನಿಗದಿಯಾಗಿದೆ. ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಒಟ್ಟು ಏಳು ಉಪನ್ಯಾಸಗಳ ಸರಣಿ ನಡೆಯಲಿವೆ. ಜನವರಿ 18ರಂದು ಒಂದು ‘ದೇಶ ಒಂದು ಚುನಾವಣೆ- ವಿಕಸಿತ ಭಾರತದ ವೇಳೆಯಲ್ಲಿ ಆರ್ಥಿಕ, ರಾಜಕೀಯ ಸುಧಾರಣೆ’ ಎನ್ನುವ ವಿಷಯದ ಬಗ್ಗೆ ಭಾಷಣ ನಡೆಯಲಿದೆ. ಈ ವಿಷಯದ ಬಗ್ಗೆ ಮಾತನಾಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಕುಂಭಮೇಳ ನಡೆಯುವ ಸ್ಥಳಕ್ಕೆ ಬಂದು ಭಾಷಣ ಮಾಡಲಿದ್ದಾರೆ. ಇದರೊಂದಿಗೆ ಜಾಗತಿಕ ಭಯೋತ್ಪಾದನೆ, ಭಾರತದ ಸಮಗ್ರತೆ ಮತ್ತು ಸವಾಲುಗಳು, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ, ಸಾಮಾಜಿಕ ಮಾಧ್ಯಮದಲ್ಲಿ ಗೌಪ್ಯತೆ ಮತ್ತು ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಇರಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

    15 ಲಕ್ಷಕ್ಕೂ ಹೆಚ್ಚು ವಿದೇಶಿಯರು ಭಾಗಿ ನಿರೀಕ್ಷೆ
    ಮಹಾಕುಂಭ ಮೇಳದಲ್ಲಿ 15 ಲಕ್ಷಕ್ಕೂ ಹೆಚ್ಚು ವಿದೇಶಿಯರು ಭಾಗವಹಿಸುವ ನೀರಿಕ್ಷೆ ಇದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ಭಾನುವಾರ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವಾಲಯವು ಆಯುರ್ವೇದ ಚಿಕಿತ್ಸೆ, ಯೋಗ ಮತ್ತು ಪಂಚಕರ್ಮದಂತಹ ಸೌಲಭ್ಯಗಳನ್ನು ಒದಗಿಸಲು ಟೆಂಟ್‌ಗಳನ್ನು ಸ್ಥಾಪಿಸಿದೆ.

    ಸಂಗಮ ನಗರಿ ಸೃಷ್ಟಿ
    45 ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ಬರೋಬ್ಬರಿ 45 ಕೋಟಿ ಜನ ಬಂದು ಹೋಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಗಂಗೆ, ಯಮುನೆ, ಸರಸ್ವತ ನದಿಗಳ ತ್ರಿವೇಣಿ ಸಂಗಮದಲ್ಲಿ ʻಸಂಗಮನಗರಿʼ ಎಂಬ ನಗರವನ್ನೇ ಸೃಷ್ಟಿಸಿದೆ.

    ಸಂಗಮದಲ್ಲಿ ಶಾಹಿಸ್ನಾನ
    ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ)
    ಜನವರಿ 15 – ಮಕರ ಸಂಕ್ರಾಂತಿ ಸ್ನಾನ
    ಜನವರಿ 29 – ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 12 – ಮಾಘಿ ಪೂರ್ಣಿಮಾ ಸ್ನಾನ
    ಫೆಬ್ರವರಿ 26 – ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)

    ಕುಂಭ ದಿನಾಂಕವನ್ನು ಹೇಗೆ ನಿರ್ಧರಿಸಲಾಗುತ್ತದೆ?
    ಕುಂಭಮೇಳದ ಸ್ಥಳ ಮತ್ತು ದಿನಾಂಕವನ್ನು ನಿರ್ಧರಿಸಲು, ಜ್ಯೋತಿಷಿಗಳು ಮತ್ತು ವಿವಿಧ ಅಖಾರಗಳ (ಪಂಗಡಗಳ ಗುಂಪುಗಳು) ನಾಯಕರು ಭೇಟಿಯಾಗಿ ಗುರು ಮತ್ತು ಸೂರ್ಯನ ಸ್ಥಾನಗಳನ್ನು ಪರಿಶೀಲಿಸುತ್ತಾರೆ. ಗುರು ಮತ್ತು ಸೂರ್ಯ ಇಬ್ಬರೂ ಹಿಂದೂ ಜ್ಯೋತಿಷ್ಯದಲ್ಲಿ ಪ್ರಮುಖ ಗ್ರಹಗಳಾಗಿವೆ ಮತ್ತು ಕುಂಭಮೇಳದ ಸಮಯ ಮತ್ತು ಸ್ಥಳವನ್ನು ಅವುಗಳ ಸ್ಥಾನಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.