Tag: Mahakala

  • ಮಹಾಕಾಲನೇ ಸಾವಿನಿಂದ ಆತನನ್ನು ರಕ್ಷಿಸಿದ್ದಾನೆ: ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ತಾಯಿ

    ಮಹಾಕಾಲನೇ ಸಾವಿನಿಂದ ಆತನನ್ನು ರಕ್ಷಿಸಿದ್ದಾನೆ: ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ತಾಯಿ

    ಲಕ್ನೋ: ಆ ಮಹಾಕಾಲನೇ ಆತನನ್ನು ಸಾವಿನಿಂದ ರಕ್ಷಿಸಿದ್ದಾನೆ ಎಂದು ಇಂದು ಬೆಳಗ್ಗೆ ಮಧ್ಯ ಪ್ರದೇಶದಲ್ಲಿ ಅರೆಸ್ಟ್ ಆದ ರೌಡಿ ಶೀಟರ್ ವಿಕಾಸ್ ದುಬೆ ತಾಯಿ ಸರ್ಲಾ ದೇವಿ ಅವರು ಹೇಳಿದ್ದಾರೆ.

    ಜುಲೈ 2ರ ಮಧ್ಯರಾತ್ರಿ ತನ್ನನ್ನು ಅರೆಸ್ಟ್ ಮಾಡಲು ಬಂದ ಪೊಲೀಸರನ್ನು ವಿಕಾಸ್ ದುಬೆ ಮತ್ತು ಅವನ ಸಹಚರರು ಗುಂಡಿದಾಳಿ ಮಾಡಿ ಅಮಾನುಷವಾಗಿ ಕೊಂದು ಹಾಕಿದ್ದರು. ಈ ಘಟನೆಯಲ್ಲಿ ಎಂಟು ಮಂದಿ ಅಮಾಯಾಕ ಪೊಲೀಸರು ಸಾವನ್ನಪ್ಪಿದ್ದರು. ಇದಾದ ಬಳಿಕ ಎಸ್ಕೇಪ್ ಆಗಿದ್ದ ವಿಕಾಸ್ ದುಬೆ ಇಂದು ಮಧ್ಯ ಪ್ರದೇಶದ ಉಜ್ಜೈನಿಯ ಮಹಾಕಾಲ ದೇವಸ್ಥಾನದಲ್ಲಿ ಸೆರೆಸಿಕ್ಕಿದ್ದಾನೆ.

    ಈಗ ಈ ವಿಚಾರದ ಬಗ್ಗೆ ಮಾತನಾಡಿರುವ ವಿಕಾಸ್ ದುಬೆ ತಾಯಿ ಸರ್ಲಾ ದೇವಿ, ನಾನು ಆತ ಅರೆಸ್ಟ್ ಆದ ಎಂದು ಟಿವಿಯಲ್ಲಿ ನೋಡಿ ತಿಳಿದುಕೊಂಡೆ. ಆ ಮಹಾಕಾಲನೇ ಸಾವಿನಿಂದ ಆತನನ್ನು ರಕ್ಷಿಸಿದ್ದಾನೆ. ಆತ ಪ್ರತಿ ವರ್ಷ ಮಹಾಕಾಲನ ದರ್ಶನಕ್ಕೆ ಹೋಗುತ್ತಿದ್ದ. ಜೊತೆಗೆ ಆತ ಬಿಜೆಪಿ ಪಕ್ಷದಲ್ಲಿ ಇರಲಿಲ್ಲ ಎಸ್‍ಪಿ ಪಕ್ಷದಲ್ಲಿದ್ದ. ಈಗ ಸೆರೆ ಸಿಕ್ಕಿರುವ ವಿಕಾಸ್ ದುಬೆ ಮೇಲೆ ಸರ್ಕಾರ ಕಾನೂನಿನ ಅಡಿಯಲ್ಲಿ ಯಾವ ಶಿಕ್ಷೆ ಬೇಕಾದರು ಕೊಡಲಿ ಎಂದು ಹೇಳಿದ್ದಾರೆ.

    ಈ ಹಿಂದೆ ಮಗನ ಕ್ರೂರ ಕೃತ್ಯದ ಬಗ್ಗೆ ಮಾತನಾಡಿದ್ದ ಸರ್ಲಾ ದೇವಿ, ಆತ ಅಮಾಯಾಕ ಪೊಲೀಸರನ್ನು ಕೊಲೆ ಮಾಡಿದ್ದು ತಪ್ಪು. ಆತನೇ ಬಂದು ಪೊಲೀಸರಿಗೆ ಶರಣಾಗಬೇಕು. ಇಲ್ಲವಾದಲ್ಲಿ ಪೊಲೀಸರು ಅವನನ್ನು ಎನ್‍ಕೌಂಟರ್ ಮಾಡಲಿ. ನಾನು ಆತನ ಜೊತೆ ಮಾತನಾಡಿ ನಾಲ್ಕು ತಿಂಗಳಾಯ್ತು. ನಮ್ಮ ಕುಟುಂಬವೇ ತಲೆ ತಗ್ಗಿಸುವಂತ ಕೆಲಸ ಮಾಡಿದ್ದಾನೆ. ಆತ ರಾಜಕೀಯಕ್ಕೆ ಬಂದ ನಂತರ ಈ ರೀತಿಯ ಕೆಟ್ಟ ಬುದ್ಧಿ ಕಲಿತುಕೊಂಡ ಎಂದು ಹೇಳಿದ್ದರು.

    ಪೊಲೀಸರನ್ನು ಕೊಂದು ತಲೆ ಮರೆಸಿಕೊಂಡಿದ್ದ ವಿಕಾಸ್ ದುಬೆಯನ್ನು ಒಂದು ವಾರದ ನಂತರ ಇಂದು ಬೆಳಗ್ಗೆ ಮಧ್ಯ ಪ್ರದೇಶದ ಉಜ್ಜೈನ್ ನಲ್ಲಿರುವ ಮಹಾಕಾಲ ದೇವಸ್ಥಾನದಲ್ಲಿ ಬಂಧಿಸಲಾಗಿದೆ. ದೇವಸ್ಥಾನದ ಭದ್ರತಾ ಸಿಬ್ಬಂದಿ ದುಬೆಯನ್ನು ಗುರುತಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದುಬೆ ದೇವಸ್ಥಾನದಿಂದ ಹೊರ ಬರೋಷ್ಟರಲ್ಲಿ ಬಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.