Tag: Mahadevaswamy

  • ಪರಿಶಿಷ್ಟರ ಮೀಸಲಾತಿ ನಾಶಕ್ಕೆ ಸಚಿವ ಈಶ್ವರಪ್ಪ ಹುನ್ನಾರ: ಎನ್.ಮಹದೇವ ಸ್ವಾಮಿ ಆರೋಪ

    ಪರಿಶಿಷ್ಟರ ಮೀಸಲಾತಿ ನಾಶಕ್ಕೆ ಸಚಿವ ಈಶ್ವರಪ್ಪ ಹುನ್ನಾರ: ಎನ್.ಮಹದೇವ ಸ್ವಾಮಿ ಆರೋಪ

    ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರ್ಪಡೆ ಹೋರಾಟಕ್ಕೆ ನೇತೃತ್ವ ವಹಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಪಾರದರ್ಶಕ ಕಾಯ್ದೆ ಮೂಲಕ 50ಲಕ್ಷ ರೂ.ವರೆಗಿನ ಸರಕಾರಿ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಕಲ್ಪಿಸಿರುವ ಮೀಸಲಾತಿಯ ನಾಶಕ್ಕೆ ಹುನ್ನಾರ ನಡೆಸಿದ್ದಾರೆ ಎಂದು ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಎನ್.ಮಹದೇವಸ್ವಾಮಿ ಆರೋಪಿಸಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ 2 ಕೋಟಿ ರೂ.ಗಳ ವರೆಗಿನ ಕಾಮಗಾರಿಗಳನ್ನು ನೇರವಾಗಿ ‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್'(ಕೆಆರ್‌ಐಡಿಎಲ್‌) ನೀಡುವ ಉದ್ದೇಶದಿಂದಲೇ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ಟೀಕಿಸಿದರು.

    ಅಕ್ರಮಗಳನ್ನು ತಡೆಗಟ್ಟುವುದು, ಕಾಮಗಾರಿ ಗುಣಮಟ್ಟ ಕಾಪಾಡುವುದು ಹಾಗೂ ಸರಕಾರಕ್ಕೆ ಆಗುವ ನಷ್ಟವನ್ನು ತಪ್ಪಿಸಿ, ಗುತ್ತಿಗೆದಾರರ ಮಧ್ಯೆ ಸ್ಪರ್ಧೆ ಏರ್ಪಡುವಂತೆ ಮಾಡಲು ಪಾರದರ್ಶಕ ಕಾಯ್ದೆಯನ್ನು ರೂಪಿಸಲಾಗಿದೆ. ಆದರೆ, ಇದೀಗ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದ್ದು, ‘4-ಜಿ’ ವಿನಾಯಿತಿ ನೀಡುವ ಮೂಲಕ ಸರಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಲಾಗುತ್ತಿದೆ’ ಎಂದು ಅವರು ಆಕ್ಷೇಪಿಸಿದರು.

    ರಾಜ್ಯದ ಗುತ್ತಿಗೆದಾರರಿಗೆ ಅನ್ಯಾಯ: ಪಾರದರ್ಶಕ ಕಾಯ್ದೆ ಇರುವ ಕಾರಣದಿಂದ ಎಸ್ಸಿ-ಎಸ್ಟಿ ಗುತ್ತಿಗೆದಾರರು ಕೆಲಸ ನಿರ್ವಹಿಸುತ್ತಿದ್ದಾರೆ. ಇದೀಗ ಎಲ್ಲ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡುವ ಮೂಲಕ ರಾಜ್ಯ ಸರಕಾರ ಆಂಧ್ರ ಮೂಲದ ಗುತ್ತಿಗೆದಾರರ ಉದ್ಧಾರ ಮಾಡಲು ಸಣ್ಣ-ಪುಟ್ಟ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮಹದೇವಸ್ವಾಮಿ ದೂರಿದರು.

    ಲೈಸನ್ಸ್ ಹಿಂದಿರುಗಿಸುವ ಹೋರಾಟ: ಸರಕಾರದಿಂದ ಪರವಾನಿಗೆ(ಲೈಸನ್ಸ್) ಪಡೆದು ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುವ ಮೂಲಕ ರಾಜ್ಯದ ಅಭಿವೃದ್ಧಿ ಜೊತೆಗೆ ನಾವು ಬದುಕುತ್ತಿದ್ದೇವೆ. ಆದರೆ, ಎಲ್ಲ ಕಾಮಗಾರಿಗಳನ್ನು ಕೆಆರ್‍ಐಡಿಎಲ್‍ಗೆ ನೀಡಲು ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತಂದರೆ ಪರವಾನಿಗೆ ಪಡೆದ ನಮಗೆ ಕೆಲಸವೇ ಇರುವುದಿಲ್ಲ. ಆದುದರಿಂದ ರಾಜ್ಯ ಸರಕಾರ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ಮಾಡುವ ತೀರ್ಮಾನವನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಎಸ್ಸಿ-ಎಸ್ಟಿ ಗುತ್ತಿಗೆದಾರರು ಲೈಸನ್ಸ್ ಹಿಂದಿರುಗಿಸುವ ಮೂಲಕ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಹದೇವಸ್ವಾಮಿ ಎಚ್ಚರಿಕೆ ನೀಡಿದರು.

    ಈ ಹಿಂದೆ ರಾಜ್ಯ ಸರಕಾರ ಆಯವ್ಯಯದಲ್ಲಿ ಘೋಷಿಸಿರುವಂತೆ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ 50ಲಕ್ಷ ರೂ.ವರೆಗಿನ ಮೀಸಲಾತಿ ಮಿತಿಯನ್ನು 1 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಬೇಕು. ಜೊತೆಗೆ ಪಾರದರ್ಶಕ ಕಾಯ್ದೆ ತಿದ್ದುಪಡಿ ತೀರ್ಮಾನವನ್ನು ಕೂಡಲೇ ಕೈಬಿಡದಿದ್ದರೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ತಿಳಿಸಿದರು.

    ಸಂಘದ ಪದಾಧಿಕಾರಿಗಳಾದ ನಾಗೇಶ್, ಟಿ.ಆರ್.ಎಸ್. ಕುಮಾರ್, ಮನೋಜ್ ಕುಮಾರ್, ಶಾಂತಕುಮಾರ್ ಹಾಗೂ ಆನಂದ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • ಸುಳ್ವಾಡಿ ಕೇಸ್ – ಅಂಬಿಕಾ ಬಳಿಕ ಪೊಲೀಸರ ಮುಂದೆ ವಿಷಸ್ವಾಮಿ ನಾಟಕ!

    ಸುಳ್ವಾಡಿ ಕೇಸ್ – ಅಂಬಿಕಾ ಬಳಿಕ ಪೊಲೀಸರ ಮುಂದೆ ವಿಷಸ್ವಾಮಿ ನಾಟಕ!

    ಚಾಮರಾಜನಗರ: ಸುಳ್ವಾಡಿ ದೇವಾಲಯದ ವಿಷಪ್ರಸಾದ ಸೇವನೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಂಚನಾಮೆ ಮಾಡಲು ಬಂದ ವೇಳೆ ಅಂಬಿಕಾ ಹೈಡ್ರಾಮಾ ಸೃಷ್ಟಿಸಿದ್ದು, ಇತ್ತ ರಾಮಪುರ ಪೊಲೀಸ್ ಠಾಣೆಯಲ್ಲಿರುವ ಇಮ್ಮಡಿ ಮಹದೇವಸ್ವಾಮಿ ಕೂಡ ನನಗೆ ಎದೆ ನೋವು ಎಂದು ನಾಟಕವಾಡಿ ಹೈಡ್ರಾಮ ಮಾಡಿದ್ದಾನೆ.

    ಇಂದು ಪ್ರಕರಣದ ಪ್ರಮುಖ ಆರೋಪಿಗಳಾದ ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯ ಮೂವರನ್ನು ಕರೆದುಕೊಂಡು ಪೊಲೀಸರು ಸ್ಥಳ ಮಹಜರು ಮಾಡಲು ಹೋಗಿದ್ದರು. ಈ ವೇಳೆ ಅಂಬಿಕಾ ಪೊಲೀಸರ ಮೇಲೆ ಆರೋಪ ಮಾಡಿ ಡ್ರಾಮಾ ಮಾಡಿದ್ದಳು. ಇದರ ಬೆನ್ನಲ್ಲೇ ಪೊಲೀಸ್ ಕಸ್ಟಡಿಯಲ್ಲಿರುವ ಮಹದೇವಸ್ವಾಮಿ ಠಾಣೆಯಲ್ಲೇ ಅನಾರೋಗ್ಯದ ನಾಟಕ ಮಾಡಿದ್ದಾನೆ.

    ಆರೋಪಿಯ ಹೇಳಿಕೆ ಮೇರೆಗೆ ಪೊಲೀಸರು ಕೂಡಲೇ ವೈದ್ಯರನ್ನು ಕರೆಸಿ ತಪಾಸಣೆ ನಡೆಸಿದ್ದು, ವೈದ್ಯರು ತಪಾಸಣೆ ನಡೆಸಿದ ನಂತರ ಸ್ವಾಮೀಜಿಗೆ ಏನು ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ವೈದ್ಯರ ಹೇಳಿಕೆ ಪಡೆದಿರುವ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದು, ನಿಮಗೆ ಅನಾರೋಗ್ಯದ ಸಮಸ್ಯೆ ಉಂಟಾದರೆ ಠಾಣೆಯ ಮುಂಭಾಗದಲ್ಲೇ ಅಂಬುಲೆನ್ಸ್ ಇದೆ. ನೀವು ವಿಚಾರಣೆಗೆ ಸಹಕಾರ ನೀಡಿ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

    ಮಠದಿಂದ ಗೇಟ್ ಪಾಸ್?
    6 ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಸಾಲೂರು ಮಠದ ಹಿರಿಯ ಸ್ವಾಮೀಜಿಗಳು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಮಹದೇವಸ್ವಾಮಿಗೂ ನಮ್ಮ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

    ಡಿಸೆಂಬರ್ 14 ರಂದು ಸುಳ್ವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ವಿಷಪೂರಿತ ಪ್ರಸಾದ ತಿಂದು 15 ಮಂದಿ ಸಾವನ್ನಪಪಿದ್ದಾರೆ. ಇನ್ನು ಹಲವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದೇವಸ್ಥಾನಕ್ಕೆ ಶ್ರೀ ಇಮ್ಮಡಿ ಮಹದೇವ ಸ್ವಾಮೀಜಿಗಳು ತಮ್ಮ ವೈಯಕ್ತಿಕ ನೆಲೆಯಲ್ಲಿ ಟ್ರಸ್ಟ್‍ನ ಅಧ್ಯಕ್ಷರಾಗಿದ್ದರು. ಆದರೆ ಶ್ರೀ ಸಾಲೂರು ಮಠಕ್ಕೂ ಈ ಟ್ರಸ್ಟ್‍ಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಪೊಲೀಸರು ಇಮ್ಮಡಿ ಮಹದೇವ ಸ್ವಾಮಿ ಹಾಗೂ ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಗೋಪುರ ವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಟ್ರಸ್ಟಿನ ಕೆಲವರ ವಿರುದ್ಧ ತಮ್ಮ ಮೇಲುಗೈ ಸಾಧಿಸಲು ಪ್ರಸಾದಕ್ಕೆ ವಿಷ ಬೆರಿಸಿದ್ದರು ಎಂಬುದನ್ನ ಒಪ್ಪಿಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಭಕ್ತಾಧಿಗಳಿಗೂ ಮಠವೂ ಎಲ್ಲ ನೆರವು ನೀಡಲಿದೆ. ದುರಂತದಲ್ಲಿ ಜೀವನೋಪಾಯವಿಲ್ಲದೆ ಅನಾಥರಾಗಿರುವವರಿಗೆ, ವೃದ್ಧರಿಗೆ ಮಠವು ಆಶ್ರಯ ನೀಡುತ್ತದೆ. ಅಲ್ಲದೆ ದುರಂತದಲ್ಲಿ ತೊಂದರೆಗೊಳಗಾದ ಎಲ್ಲಾ ಮಕ್ಕಳ ಶಿಕ್ಷಣದ ಉಸ್ತುವಾರಿಯನ್ನ ಶ್ರೀ ಮಠ ನೋಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv