Tag: mahadayi river

  • ದರ್ಶನ್‌, ಮುಡಾ ವಿಚಾರ ಬಿಡ್ರಪ್ಪ, ಮಹದಾಯಿ ವಿಚಾರ ಮಾತನಾಡಿ – ಡಿಕೆಶಿ

    ದರ್ಶನ್‌, ಮುಡಾ ವಿಚಾರ ಬಿಡ್ರಪ್ಪ, ಮಹದಾಯಿ ವಿಚಾರ ಮಾತನಾಡಿ – ಡಿಕೆಶಿ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಪ್ರಕರಣ ಡೈವರ್ಟ್ ಮಾಡಲು ರೇಣುಕಾಸ್ವಾಮಿ ಹತ್ಯೆ ಫೋಟೋ ರಿಲೀಸ್ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.

    ಬೆಂಗಳೂರಲ್ಲಿ (Bengaluru) ಮಾತನಾಡಿದ ಅವರು, ದರ್ಶನ್ (Darshan), ಮೂಡಾ ವಿಚಾರ ಬಿಡ್ರಪ್ಪ. ಮಹಾದಾಯಿ (Mahadayi Project) ವಿಚಾರದಲ್ಲಿ ಏನಾಗಿದೆ ಮಾತನಾಡಿ, ಮೊದಲು ಭದ್ರಾ ಮೇಲ್ದಂಡೆ ದುಡ್ಡು ಕೊಡಿಸ್ರಪ್ಪ. 5,300 ಕೋಟಿ ಬರಬೇಕಾದುದ್ದನ್ನ ಕೊಡಿಸಿ. ಪ್ರಹ್ಲಾದ್ ಜೋಶಿಯವರಿಂದ ಕೊಡಿಸಿ. ಆಮೇಲೆ ಅವರ ಮಾತಿನ ಬಗ್ಗೆ ಉತ್ತರ ಕೊಡೋಣ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿಲ್ಲ. ಕೇಂದ್ರದಿಂದ 5,300 ಕೋಟಿ ಹಣ ಬಂದಿಲ್ಲ. ಕೇಂದ್ರಕ್ಕೆ ಹೋಗುವ ಬಗ್ಗೆ ಚರ್ಚೆ ಮಾಡ್ತೇವೆ. ಸಿಎಂ ಜೊತೆ ಮೊದಲು ಚರ್ಚೆ ಮಾಡ್ತೇವೆ. ನಂತರ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಹೇಳ್ತೇವೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ!

    ಇದೇ ವೇಳೆ ಎತ್ತಿನಹೊಳೆ ನೀರು ಕೊಟ್ಟರೆ ಡಿಕೆಶಿಗೆ ಭಗೀರಥ ಎನ್ನುತ್ತೇವೆ ಎಂಬ ಡಾ.ಕೆ.ಸುಧಾಕರ್ ಸವಾಲನ್ನ ಸ್ವೀಕರಿಸುತ್ತೇನೆ ಅಂತ ಡಿಸಿಎಂ ಡಿಕೆಶಿ ಹೇಳಿದ್ದಾರೆ. ಸುಧಾಕರ್ ಸವಾಲನ್ನ ಸ್ವೀಕರಿಸುತ್ತೇನೆ. ನಿನ್ನೆ ಎತ್ತಿನಹೊಳೆ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ಎಲ್ಲರೂ ನಮಗೆ ಸಹಕಾರ ಕೊಟ್ಟಿದ್ದಾರೆ. ರಾಜಕೀಯವಾಗಿ ಟೀಕೆ ಮಾಡಬಹುದು. ಆದರೆ ನಾವು ನಮ್ಮ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಒಳ್ಳೆಯ ಮಳೆ ಬಿದ್ದಿದೆ ಬೆಳೆ ಆಗ್ತಿದೆ. ಎಲ್ಲಾ ವಿಘ್ನಗಳು ನಿವಾರಣೆಯಾಗಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಹಬ್ಬ

    ಇನ್ನೂ ಬಯಲು ಸೀಮೆಯಲ್ಲಿ ಕೆರೆಗಳು ತುಂಬಿಲ್ಲ. ಎತ್ತಿನಹೊಳೆ ಯೋಜನೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಚಿಕ್ಕಬಳ್ಳಾಪುರ ಸಂಸದರು ಸವಾಲ್ ಹಾಕಿದ್ದಾರೆ. ಅವರ ಸವಾಲ್ ಅನ್ನು ನಾನು ಸ್ವೀಕರಿಸುತ್ತೇನೆ. ಹಿಂದೆ ಶರಾವತಿ ಸುಟ್ಟುಹೋಗಿತ್ತು. ಅದನ್ನ ನಾವು ಸರಿಮಾಡಿದ್ದೇವೆ. ತುಂಗಭದ್ರಾ ಗೇಟ್ ಕೊಚ್ಚಿ ಹೋಗಿತ್ತು. ಅದನ್ನ ಸರಿಪಡಿಸಿದ್ದೆವು, ಈಗ ನೀರು ತುಂಬಿದೆ. ಎಲ್ಲವೂ ಸರಿಯೋಗ್ತಿದೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ: ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

    ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ 2,000 ಅಡಿಗೆ ನೀರು ಹೋಗಿದೆ. ಎತ್ತಿನಹೊಳೆಗಾಗಿ ಎಲ್ಲರೂ ಹೋರಾಟ ಮಾಡಿದ್ದರು. ಸುಧಾಕರ್ ಸೇರಿ ಎಲ್ಲರೂ ಹೋರಾಟ ಮಾಡಿದ್ದರು. ಮೊಯ್ಲಿ, ಮುನಿಯಪ್ಪನವರು ಫೈಟ್ ಮಾಡಿದ್ದರು. ತುಮಕೂರು, ದೊಡ್ಡಬಳ್ಳಾಪುರಗಳಲ್ಲೂ ಪ್ರಾಬ್ಲಂ ಇದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ. ನಾನು ವಾಪಸ್ ಬಂದ ನಂತರ ಅದನ್ನ ಬಗೆಹರಿಸುತ್ತೇನೆ ಮಾಡ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶೋತ್ಸವದ ದಿನ ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆ ಮೂಂದೂಡಿಕೆ!

  • ಮೇಕೆದಾಟು, ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ: ಸಿಎಂ ಬೊಮ್ಮಾಯಿ

    ಮೇಕೆದಾಟು, ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ: ಸಿಎಂ ಬೊಮ್ಮಾಯಿ

    ಬೆಂಗಳೂರು: ಮೇಕೆದಾಟು, ಮಹಾದಾಯಿ ಯೋಜನೆ ಪ್ರಾರಂಭಿಸಿ ಪೂರ್ಣಗೊಳಿಸಬೇಕಿದೆ. ಕಾನೂನಿನ ಚೌಕಟ್ಟಿನಲ್ಲಿ ಪರಾವನಿಗೆ ಪಡೆದು ಯೋಜನೆ ಆರಂಭಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    75ನೇ ಸ್ವಾತಂತ್ರ್ಯ ದಿನದಂದು ಮಾಣಿಕ್ ಷಾ ಪೆರೆಡ್ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಿದರು. ನಂತರ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೇಕೆದಾಟು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಆಗಿದ್ದು, ಶೀಘ್ರದಲ್ಲೇ ಕೇಂದ್ರದ ಜೊತೆ ಅನುಮತಿ ಪಡೆದ ಯೋಜನೆ ಆರಂಭಿಸುತ್ತೇವೆ ಎಂದು ತಿಳಿಸಿದರು.

    ಸಿಎಂ ಭಾಷಣದ ಮುಖ್ಯಾಂಶಗಳು:
    ಮೊದಲಿಗೆ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಭಾರತ ಯಶಸ್ವಿ ಪ್ರಜಾಪ್ರಭುತ್ವ ದೇಶವಾಗಿದೆ. ಪ್ರಜಾಪ್ರಭುತ್ವ ಬಹಳ ಆಳವಾಗಿ ನೆಲೆಯೂರಿದೆ ಡಾ.ಬಿ.ಆರ್ ಅಂಬೇಡ್ಕರ್ ಅವರ ದೂರದೃಷ್ಟಿ, ಸಮಾನತೆ ಹಾಗೂ ಸಂವಿಧಾನ ನಮಗೆ ಭಗವದ್ಗೀತೆಯಾಗಿದೆ.

    ಇಂದು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜನ್ಮ ದಿನವಾಗಿದ್ದು, ರಾಜ್ಯ ಸರ್ಕಾರದಿಂದ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆಯನ್ನು ಆಚರಿಸಲು ನಿರ್ಧಾರಿಸಲಾಗಿದೆ. ಸಂಗೊಳ್ಳಿ ರಾಯಣ್ಣನವರ ಬಲಿದಾನ ಮಹತ್ವವಾದದ್ದು, ಅವರನ್ನು ಯಾವಾಗಲೂ ನೆನಪಿಸಿಕೊಳ್ಳಬೇಕು ಎನ್ನುತ್ತಾ ಸ್ವಾತಂತ್ರ್ಯ ಸೇನಾನಿಗಳು ಮನೆ, ಮಠ ಕಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ಸೇನಾನಿಗಳಿಗೆ ನನ್ನ ನಮನಗಳು.

    ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ವಿವಿಧ ವಲಯಗಳಿಗೆ 7,422 ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 24 ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಬೆಡ್ 4 ಸಾವಿರಕ್ಕೂ ಹೆಚ್ಚು ವೆಂಟಿಲೇಟರ್ ಒದಗಿಸಲಾಗಿದೆ. ಇದುವರೆಗೆ ರಾಜ್ಯದಲ್ಲಿ 3.5 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಮೂರನೇ ಅಲೆ ಎದುರಿಸಲು ತಜ್ಞರ ಕಾರ್ಯಪಡೆಯ ಸಲಹೆ ಅನ್ವಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಯಡಿಯೂರಪ್ಪಗೆ ಈ ವೇದಿಕೆ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಕೋವಿಡ್ ನಿಯಂತ್ರಣಕ್ಕೆ ಅವರು ಕೈಗೊಂಡ ಕ್ರಮಗಳೇ ಇಂದು ಕೋವಿಡ್ ನಿಯಂತ್ರಣಕ್ಕೆ ಬರಲು ಪ್ರಮುಖ ಕಾರಣವಾಗಿದೆ. ಎರಡನೇ ಅಲೆ ನಿಯಂತ್ರಣದಲ್ಲಿದ್ದರೂ ಮೂರನೇ ಅಲೆಯ ಭೀತಿಯಲ್ಲಿದ್ದೇವೆ. ಸರ್ಕಾರ ಬಂದ ಕೂಡಲೇ ಕೋವಿಡ್‍ಗೆ ಹೆಚ್ಚಿನ ಮಹತ್ವ ಕೈಗೊಂಡಿದ್ದೇವೆ. ಕೇರಳ, ಮಹಾರಾಷ್ಟ ಗಡಿ ಜಿಲ್ಲೆಗಳನ್ನ ರಕ್ಷಿಸಬೇಕಿದೆ. ಈ ಬಗ್ಗೆ ನಾನೇ ಖುದ್ದು ತೆರಳಿ ಮೇಲ್ವಿಚಾರಣೆ ಮಾಡಿದ್ದೇನೆ. ಇದಕ್ಕೆ ಜನರು ಸಹ ಸಹಕಾರ ನೀಡಬೇಕು ಹಾಗೂ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು.

    ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ರಮಿಸಿದ ಅಭಿವೃದ್ಧಿ ಪಥದಲ್ಲಿಯೇ ಮುಂದುವರೆಯುವ ಸಂಕಲ್ಪ ಮಾಡಿದ್ದೇನೆ. ಇವತ್ತಿನಿಂದಲೇ ನವ ಕರ್ನಾಟಕ ನಿರ್ಮಾಣ ಕಾರ್ಯ ಆರಂಭ ಎಂದು ಘೋಷಣೆ ಮಾಡುತ್ತೇನೆ. ಹೊಸತಂತ್ರಜ್ಞಾನ, ಮಾನವಸಂಪನ್ಮೂಲ, ಕೃಷಿ, ಉತ್ಪಾದನ ಕೇಂದ್ರದಲ್ಲಿ ವೈಜ್ಞಾನಿಕ ಅಭಿವೃದ್ಧಿ ಸಾಗಿಸಲು ಪಣ ತೊಟ್ಟಿದ್ದೇನೆ. ರೈತರ ಬದುಕಿನಲ್ಲಿ ಕ್ರಾಂತಿ ತರುವ ಕೆಲಸ, ರೈತರ ಕೇಂದ್ರೀಕೃತವಾದ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡುತ್ತೇನೆ.

    ಪ್ರವಾಹ ಸಂತಸ್ತರಿಗೆ ತಕ್ಷಣದ ಪರಿಹಾರ 10,000 ರೂ, ಅಲ್ಪ ಹಾನಿಯಾದ ಮನೆಗಳಿಗೆ 50 ಸಾವಿರ, ಭಾಗಶಃ ಹಾನಿಯಾದ ಮನೆಗಳಿಗೆ 3ಲಕ್ಷ ರೂ, ಪೂರ್ಣ ಹಾನಿ ಪ್ರಕೆಣಗಳಿಗೆ 5 ಲಕ್ಷ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ತಾಲೂಕು, ಸಬ್‍ರಿಜಿಸ್ಟರ್ ಆಫೀಸ್ ಗೆ ಜನ ಓಡಾಡುವುದನ್ನ ನಿಲ್ಲಿಸಬೇಕು. ಇದನ್ನೂ ಓದಿ:ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ: ಶ್ರೀರಾಮುಲು

    ಸರ್ಕಾರ ಬಂದ ಕೂಡಲೇ ಪ್ರವಾಹ ಬಂತು. ಅದಕ್ಕೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. ರೈತರ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಟ್ಟಿದ್ದೇವೆ. ಕರ್ನಾಟಕ ಕೈಗಾರಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಹಲವು ಕಾರ್ಖನೆಗಳು ಬಂದು ಬುನಾದಿ ಹಾಕಿದವು. ಕರಾವಳಿಯ ಬ್ಯಾಂಕಿಂಗ್ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದೆ. ಕೈಗಾರಿಕೆಗೆ ಹೊಸ ನೀತಿ ಮಾಡಿದ್ದೇವೆ. ಅಲ್ಲದೇ ಕರ್ನಾಟಕ ಪೊಲೀಸ್ ಇಡೀ ದೇಶದಲ್ಲೇ ನಂಬರ್ 1 ಆಗಿದೆ. ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಯಶಸ್ವಿಯಾಗಿಸಿದೆ.

    ಅಮೃತ ಗ್ರಾಮ ಪಂಚಾಯ್ತಿ ಯೋಜನೆ ಘೋಷಿಸಿದ್ದು, 750 ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೊಳಿಸಲಿದ್ದು, ಆಯ್ದ 75 ನಗರಗಳಲ್ಲಿ 75 ಕೋಟಿ ವೆಚ್ಚದಲ್ಲಿ ಅಮೃತ ನಿರ್ಮಲ ನಗರ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಮಹಿಳೆಯರಿಗೆ ಪ್ರೋತ್ಸಹ ನೀಡಲು ಅಮೃತ ಪ್ರೋತ್ಸಾಹ ಕಿರು ಉದ್ಯಮವನ್ನು ಆರಂಭಿಸಲಾಗುತ್ತದೆ. ಇದನ್ನೂ ಓದಿ:54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ

  • ಕಳಸಾ ಬಂಡೂರಿ ವಿಚಾರದಲ್ಲಿ ಗೊಂದಲ ಬೇಡ : ಶಂಕರ ಪಾಟೀಲ್ ಮುನೇನಕೊಪ್ಪ

    ಕಳಸಾ ಬಂಡೂರಿ ವಿಚಾರದಲ್ಲಿ ಗೊಂದಲ ಬೇಡ : ಶಂಕರ ಪಾಟೀಲ್ ಮುನೇನಕೊಪ್ಪ

    – ಮಹದಾಯಿ ಹೋರಾಟದಿಂದ ಇಂದು ಅಧಿಕಾರದಲ್ಲಿದ್ದೇವೆ

    ಹುಬ್ಬಳ್ಳಿ: ಮಹಾದಾಯಿ ಹೋರಾಟದಲ್ಲಿ ನಾವೆಲ್ಲಾ ಪಾಲ್ಗೊಂಡಿದ್ದೇವೆ. ನಾನು ಸಹ ಕಳಸಾ ಬಂಡೂರಿ ಹೋರಾಟದಿಂದಲೇ ಬಂದವನು. ಮಹದಾಯಿ ಹೋರಾಟದಲ್ಲಿ ನಾವೆಲ್ಲಾ ಪಾಲ್ಗೊಂಡಿದ್ದಕ್ಕೆ ಇಂದು ಅಧಿಕಾರದಲ್ಲಿದ್ದೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.

    ನೂತನ ಸಚಿವರಾದ ಮೇಲೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಶಂಕರಪಾಟೀಲ್ ಮುನೇನಕೊಪ್ಪ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಕಳಸಾ ಬಂಡೂರಿ ವಿಚಾರದಲ್ಲಿ ಗೊಂದಲದ ಹೇಳಿಕೆ ಬೇಡವೆಂದು ತಿಳಿಸಿದ್ದಾರೆ.

    ಮಹಾದಾಯಿ ಹೋರಾಟ ವಿಚಾರದಲ್ಲಿ ಈಗಾಗಲೇ ಟ್ರಿಮಿನಲ್ ಆದೇಶ ಆಗಿದೆ. 4 ಟಿಎಂಸಿ ಕುಡಿಯುವ ನೀರಿನ ಆದೇಶ ದೊರೆತಿದೆ. ಸಣ್ಣ ಪುಟ್ಟ ತೊಡಕುಗಳನ್ನು ಬಗೆಹರಿಸಿ ಯೋಜನೆಯನ್ನು ಜಾರಿ ಮಾಡುತ್ತೇವೆ. ಈ ವಿಚಾರದಲ್ಲಿ ಮೂರು ರಾಜ್ಯಗಳ ಸಹಕಾರ ಅಗತ್ಯವಾಗಿದೆ. ಗೊಂದಲಗಳು ಆಗಬಾರದು 330 ಹಳ್ಳಿಗಳಿಗೂ ನೀರು ಕೊಡುವ ಯೋಜನೆ ಮಾಡುತ್ತಿದ್ದೇವೆ. ಹೀಗಾಗಿ ಕಳಸಾ ಬಂಡೂರಿ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡುವುದು ಬೇಡವೆಂದು ಮನವಿ ಮಾಡಿದರು. ಅಲ್ಲದೇ ಇನ್ನೂ 60 ದಿನಗಳಲ್ಲಿ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದಾರೆ.

    ಪಕ್ಷ ಬಹು ದೊಡ್ಡ ಜವಾಬ್ದಾರಿಯಿಂದ ನನಗೆ ಸ್ಥಾನ ಕೊಟ್ಟಿದೆ. ಹೀಗಾಗಿ ಮುಖ್ಯ ಮಂತ್ರಿಗಳು ಯಾವ ಸ್ಥಾನ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಎಲ್ಲರೂ ಬಿಟ್ಟಿರುವ ಖಾತೆ ಕೊಟ್ಟರೂ ಓಕೆ: ಮುರುಗೇಶ್ ನಿರಾಣಿ

  • ಮಹದಾಯಿ, ಗಡಿ ವಿವಾದ- ಸುಪ್ರೀಂ ಕೋರ್ಟ್ ಆದೇಶ, ಮಹಾಜನ್ ವರದಿಗೆ ಬದ್ಧ: ಈಶ್ವರಪ್ಪ

    ಮಹದಾಯಿ, ಗಡಿ ವಿವಾದ- ಸುಪ್ರೀಂ ಕೋರ್ಟ್ ಆದೇಶ, ಮಹಾಜನ್ ವರದಿಗೆ ಬದ್ಧ: ಈಶ್ವರಪ್ಪ

    ಕಾರವಾರ: ಮಹಾದಾಯಿ ವಿಚಾರದಲ್ಲಿ ಗೋವಾ, ಮಹಾರಾಷ್ಟ್ರದವರು ಅವರ ಪಾಪ್ಯುಲಾರಿಟಿಗೆ ಈ ರೀತಿ ಹೇಳಿಕೆ ನೀಡುತ್ತಾರೆ. ಮಹಾರಾಷ್ಟ್ರ, ಗೋವಾ ಒಂದೊಂದು ಹೇಳಿಕೆ ಕೊಡುತ್ತವೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ, ಸುಪ್ರೀಂ ಕೋರ್ಟ್ ತೀರ್ಪಿಗೆ ನಾವು ಬದ್ಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದ ಗಡಿ ವಿಚಾರದಲ್ಲೂ ಮಹಾಜನ್ ವರದಿಗೆ ನಾವು ಬದ್ಧರಾಗಿದ್ದೇವೆ. ಯಾರೋ ಒಬ್ಬರು ಹೇಳಿಕೆ ಕೊಟ್ಟರು ಅಂದರೆ ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ, ತಲೆ ಕೆಡಿಸಿಕೊಳ್ಳುವುದಿಲ್ಲ, ಏನು ತೀರ್ಮಾನ ಆಗಿದೆ ಅದರಂತೆ ನಾವು ನೆಡೆದುಕೊಳ್ಳುತ್ತೇವೆ ಎಂದರು.

    ಮುಖ್ಯಮಂತ್ರಿ ಬದಲಾಬಣೆ ಕುರಿತು ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರೋ ಒಬ್ಬರ ಹೇಳಿಕೆಗೆ ಮಹತ್ವ ಇಲ್ಲ. ಯತ್ನಾಳ್ ಹೇಳಿಕೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರ ಸಮಾದಾನಕ್ಕೆ ಹೇಳಿಕೆ ಕೊಡುತಿದ್ದಾರೆ. ಪಕ್ಷದ ಮಿತಿ ಮೀರಿ ಹೇಳಿಕೆ ಕೊಡುತ್ತಿರುವುದನ್ನು ಪಕ್ಷ ಯಾವತ್ತೂ ಕ್ಷಮಿಸಲ್ಲ. ಕೇಂದ್ರದ ಶಿಸ್ತು ಸಮಿತಿಗೆ ಇವರ ಬಗ್ಗೆ ದೂರು ಸಲ್ಲಿಸಿದ್ದೇವೆ ಕ್ರಮ ತೆಗೆದುಕೊಳ್ಳುತ್ತಾರೆ. ಸಚಿವ ಸ್ಥಾನ ಗೊಂದಲ ಶಮನವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವರ ಜೊತೆ ಚರ್ಚೆ ಮಾಡಿ ಎಲ್ಲ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.

    ಪಂಚಮಸಾಲಿ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅಪೇಕ್ಷೆ ಪಡುವುದು ತಪ್ಪಲ್ಲ, ಕ್ಯಾಬಿನೆಟ್ ನಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ವಾಲ್ಮೀಕಿ ಸಮಾಜಕ್ಕೆ ಶೇ.3ರಿಂದ ಶೇ.7.5ರ ವರೆಗೆ ಮೀಸಲು ಬೇಡಿಕೆ ಇದೆ. ಕುರುಬ ಸಮಾಜವನ್ನು ಎಸ್.ಟಿ ಗೆ ಸೇರಿಸಬೇಕೆಂಬ ಬೇಡಿಕೆ ಇದೆ. ಪಂಚಮಸಾಲಿ 2ಎ ಗೆ ಸೇರಿಸುವ ಬೇಡಿಕೆ ಇದೆ. ಯಾವುದು ಸಿಂಧು ಯಾವುದು ಅಸಿಂಧು ಎಂಬುದನ್ನು ರಾಜ್ಯ, ಕೇಂದ್ರ ಸರ್ಕಾರ ಕುಳಿತು ತೀರ್ಮಾನ ಮಾಡುತ್ತವೆ. ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಮುಂದಿನ ತಿಂಗಳು 9ರಂದು ಮುಖ್ಯಮಂತ್ರಿ ನೇತ್ರತ್ವದಲ್ಲಿ ಎಲ್ಲ ಇಲಾಖೆಗಳ ಸಭೆ ಕರೆಯಲಾಗಿದೆ ಎಂದರು.

  • ಕರ್ನಾಟಕದ ವಿರುದ್ಧ ಸುಪ್ರೀಂನಲ್ಲಿ ಗೋವಾದಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

    ಕರ್ನಾಟಕದ ವಿರುದ್ಧ ಸುಪ್ರೀಂನಲ್ಲಿ ಗೋವಾದಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

    – ಅಕ್ರಮವಾಗಿ ಕರ್ನಾಟಕ ಮಹದಾಯಿ ನದಿ ತಿರುಗಿಸುತ್ತಿದೆ

    ಪಣಜಿ: ಕರ್ನಾಟಕ ಮಹದಾಯಿ ನೀರು ತಿರುಗಿಸುತ್ತಿದೆ ಎಂದು ಆರೋಪಿಸಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಇಂದು ಸುಪ್ರೀಂ ಕೋರ್ಟ್‍ನಲ್ಲಿ ಅಕ್ರಮವಾಗಿ ಮಹದಾಯಿ ನೀರು ತಿರುಗಿಸುವ ವಿಚಾರವಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ನಾವು ನಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಮಹದಾಯಿ ವಿಚಾರವಾಗಿ ಗೋವಾ ಸಿಎಂ ವಿರುದ್ಧ ಕಿಡಿ ಕಾರಿದ್ದ ವಿಪಕ್ಷಗಳು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ್ದ ಗೋವಾ ಸಿಎಂ ಹಿಂದಿನ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಮಹದಾಯಿ ನದಿ ನೀರು ತಿರುವಿಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಅವಕಾಶ ನೀಡಿತ್ತೆಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಸಾಕ್ಷ್ಯಾಧಾರಗಳ ಮೂಲಕ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.

    ಕರ್ನಾಟಕ ಮತ್ತು ಗೋವಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳಿಗೆ ಮಹದಾಯಿ ನದಿ ವಿಚಾರವೇ ದೊಡ್ಡ ವಿಷಯ. ಸದ್ಯ ಎರಡು ಕಡೆ ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳಿದ್ದಾರೆ. ಕೇಂದ್ರದಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದೆ. ಹೀಗಾಗಿ ಬಿಜೆಪಿ ಹೇಗೆ ಈ ವಿಚಾರವನ್ನು ಇತ್ಯರ್ಥ ಮಾಡುತ್ತದೆ ಎಂಬ ಕುತೂಹಲ ಮೂಡಿದೆ.

    ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿದ್ದ ಐ ತೀರ್ಪಿಗೆ ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸಿತ್ತು. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ನದಿ ಕಣಿವೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಮತ್ತು ಜಲ ವಿದ್ಯುತ್ ಯೋಜನೆಗಳ ಕಾಮಗಾರಿ ಆರಂಭಿಸಬಹುದೆಂದು ಕೇಂದ್ರ ಸರ್ಕಾರ ತಿಳಿಸಿತ್ತು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

    ಸುದೀರ್ಘ ವಿಚಾರಣೆ ನಡೆಸಿದ್ದ ಮಹದಾಯಿ ನ್ಯಾಯಾಧಿಕರಣ 2018ರ ಅಗಸ್ಟ್ 14 ರಂದು ತನ್ನ ಐತೀರ್ಪು ಪ್ರಕಟಿಸಿತ್ತು. ಕರ್ನಾಟಕದ ಪಾಲಿಗೆ ಮಹದಾಯಿ ನದಿಯಿಂದ 13.5 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಇದರಲ್ಲಿ ಮಹದಾಯಿ ನದಿಯಿಂದ ಮಲಪ್ರಭೆಗೆ ಕುಡಿಯುವ ನೀರಿಗಾಗಿ 4 ಟಿಎಂಸಿ ನೀರು ಹರಿಸಲು ಒಪ್ಪಿಗೆ ಸೂಚಿಸಿತ್ತು. ಮಹದಾಯಿ ನದಿಯಿಂದ ಕರ್ನಾಟಕಕ್ಕೆ 12 ಟಿಎಂಸಿ ನೀಡಿದ್ದ ನ್ಯಾಯಾಧಿಕರಣ ಬಂಡೂರ ಯೋಜನೆಗೆ ಒಟ್ಟು 2.18 ಟಿಎಂಸಿ, ಕಳಸಾ ಯೋಜನೆಗೆ 1.72 ಟಿಎಂಸಿ, ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ, ಮಹದಾಯಿ ನದಿ ಕಣಿವೆಯಲ್ಲಿ ಬಳಸಲು 1.5 ಟಿಎಂಸಿ ನೀರು ಹಂಚಿಕೆ ಮಾಡಿತ್ತು.

    ಐತೀರ್ಪು ಎಂದರೇನು?
    ನ್ಯಾಯಾಲಯಗಳು ಪ್ರಕಟಿಸುವ ಅಂತಿಮ ಆದೇಶಕ್ಕೆ ತೀರ್ಪು(Verdict) ಎಂದರೆ ನ್ಯಾಯಾಧಿಕರಣಗಳು ನೀಡುವ ಅಂತಿಮ ಆದೇಶಕ್ಕೆ ಐತೀರ್ಪು(Award) ಎಂದು ಕರೆಯಲಾಗುತ್ತದೆ.

  • ಜಲಸಂಪನ್ಮೂಲ ಖಾತೆ ಸಚಿವರಿದ್ದೂ, ಜಲ ವಿವಾದಗಳನ್ನ ನಿಭಾಯಿಸುವ ಹೊಣೆ ಬೊಮ್ಮಾಯಿ ಹೆಗಲಿಗೆ ಹಾಕಿದ್ರಾ ಸಿಎಂ?

    ಜಲಸಂಪನ್ಮೂಲ ಖಾತೆ ಸಚಿವರಿದ್ದೂ, ಜಲ ವಿವಾದಗಳನ್ನ ನಿಭಾಯಿಸುವ ಹೊಣೆ ಬೊಮ್ಮಾಯಿ ಹೆಗಲಿಗೆ ಹಾಕಿದ್ರಾ ಸಿಎಂ?

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಜಲ ವಿವಾದಗಳನ್ನು ನಿಭಾಯಿಸುವ ಜವಾಬ್ದಾರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಿದ್ರಾ? ಇಂಥದ್ದೊಂದು ಪ್ರಶ್ನೆ ಈಗ ಸರ್ಕಾರದ ಮಟ್ಟದಲ್ಲಿ ಎದ್ದಿದೆ.

    ಮಹದಾಯಿ ಕುರಿತ ನ್ಯಾಯಾಧೀಕರಣದ ತೀರ್ಪಿನ ಮೇಲೆ ಕೇಂದ್ರ ಸರ್ಕಾರ ಇನ್ನೂ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಈ ಕುರಿತು ಸಿಎಂ ಯಡಿಯೂರಪ್ಪ ಅವರು ಇಂದು ತಮ್ಮ ಧವಳಗಿರಿ ನಿವಾಸದಲ್ಲಿ ನಡೆಸಿದ ಸಭೆಯೇ ಈ ಪ್ರಶ್ನೆ ಎದ್ದೇಳಲು ಕಾರಣವಾಗಿದೆ. ಇಷ್ಟು ದಿನ ಜಲಸಂಪನ್ಮೂಲ ಇಲಾಖೆಗೆ ಪ್ರತ್ಯೇಕ ಸಚಿವರು ಇರಲಿಲ್ಲ. ಆದರೆ ಈಗ ಗೋಕಾಕ್ ಶಾಸಕರಾಗಿರುವ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಇಲಾಖೆಯನ್ನು ಅಧಿಕೃತವಾಗಿ ವಹಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಇಲಾಖೆಯ ಹೊಣೆ ಹೊತ್ತುಕೊಂಡ ಬಳಿಕ ಮಹದಾಯಿ ತೀರ್ಪಿನ ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.

    ಕಳೆದ ಗುರುವಾರ ಸುಪ್ರೀಂಕೋರ್ಟ್ ನಿಂದ ಈ ಕುರಿತು ಮಧ್ಯಂತರ ಆದೇಶ ಬಂದ ಹಿನ್ನೆಲೆಯಲ್ಲಿ ಇವತ್ತು ಸಿಎಂ ಸಭೆ ನಡೆಸಿದರು. ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಹಾಗೂ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು. ಆದರೆ ಬೆಳಗಾವಿಯಲ್ಲಿರುವ ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್ ಜಾರಕಿಹೊಳಿ ಸಭೆಗೆ ಆಗಮಿಸಿರಲಿಲ್ಲ.

    ಹಾಲಿ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ ಬದಲು ಗೃಹ ಸಚಿವ ಬೊಮ್ಮಾಯಿ ಜೊತೆ ಮಹದಾಯಿ ವಿಚಾರವನ್ನು ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿರುವುದು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಮಹದಾಯಿ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವಗಿಂತಲೂ ಬಸವರಾಜ್ ಬೊಮ್ಮಾಯಿ ಅವರಿಗೆ ಹೆಚ್ಚು ಆದ್ಯತೆ ಕೊಟ್ರಾ ಸಿಎಂ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

    ಸಿಎಂ ಯಡಿಯೂರಪ್ಪ ಅವರು ಕೆಲ ತಿಂಗಳ ಹಿಂದೆಯೂ ಮಹಾರಾಷ್ಟ್ರಕ್ಕೆ ಹೋಗಿದ್ದಾಗಲೂ ಬಸವರಾಜ್ ಬೊಮ್ಮಾಯಿ ಅವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿದ್ದರು. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ್ದಾಗಲೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಿಎಂ ಜತೆಯೆ ಇದ್ದರು. ಆ ನಂತರ ಮಹದಾಯಿ ಕುರಿತು ಏನೇ ಸಮಸ್ಯೆಗಳು ಉಂಟಾದಾಗ ಅದನ್ನು ಬೊಮ್ಮಾಯಿ ಮಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ಹೇಳುತ್ತಿದ್ದರು. ಇದೀಗ ಕೇಂದ್ರದ ಗೆಜೆಟ್ ನೊಟಿಫಿಕೇಶನ್ ಹೊರಡಿಸುವ ಬಗ್ಗೆಯೂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಸಿಎಂ ಚರ್ಚಿಸಿದ್ದಾರೆ. ಹೀಗಾಗಿ ಜಲವಿವಾದಗಳನ್ನು ನಿಭಾಯಿಸಲು ನೀರಾವರಿ ಕ್ಷೇತ್ರದ ಆಳ-ಅಗಲಗಳನ್ನು ಅರ್ಥ ಮಾಡಿಕೊಂಡಿರುವ, ಜಲ ವಿವಾದಗಳ ಕುರಿತು ಪರಿಣಿತರಾಗಿರುವ ಬಸವರಾಜ್ ಬೊಮ್ಮಾಯಿ ಅವರೇ ಸೂಕ್ತ ಅನ್ನುವ ತೀರ್ಮಾನಕ್ಕೆ ಸಿಎಂ ಯಡಿಯೂರಪ್ಪ ಬಂದ್ರಾ ಎನ್ನುವ ಪ್ರಶ್ನೆ ಎದ್ದಿದೆ.

    ಸಭೆಯಲ್ಲಿ ಏನು ಚರ್ಚೆಯಾಯ್ತು?
    ಮಹದಾಯಿ ನೀರು ಹಂಚಿಕೆ ಬಗ್ಗೆ ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ವಿಚಾರವಾಗಿ ಸಿಎಂ ಸಭೆಯಲ್ಲಿ ಚರ್ಚಿಸಲಾಯ್ತು. ಕಳೆದ ವಾರ ಕೇಂದ್ರದ ಗೆಜೆಟ್ ನೋಟಿಫಿಕೇಷನ್‍ಗೆ ಸುಪ್ರೀಂಕೋರ್ಟ್ ಸಮ್ಮತ ಕೊಟ್ಟಿತ್ತು. ಆದರೆ ಈ ನಿಟ್ಟಿನಲ್ಲಿ ಕೇಂದ್ರದಿಂದ ಪ್ರಕ್ರಿಯೆ ನಡೆಯುತ್ತಿರುವ ಸುಳಿವು ಇನ್ನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಸಂಬಂಧ ಕೇಂದ್ರದ ಮೇಲೆ ಒತ್ತಾಯ ಹಾಕುವ ಬಗ್ಗೆ ಸಿಎಂ – ಬೊಮ್ಮಾಯಿ ಚರ್ಚೆ ನಡೆಸಿದರು ಎನ್ನಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು, ಸಾಧ್ಯವಾದರೆ ಮುಂದಿನ ವಾರ ದೆಹಲಿಗೆ ಒಂದು ನಿಯೋಗ ಕೊಂಡೊಯ್ದು ಕೇಂದ್ರದ ಜತೆ ಮಾತುಕತೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯ್ತು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ಪ್ರಕರಣ ವಿಚಾರಣಾ ಹಂತದಲ್ಲಿದೆ ಮಹದಾಯಿ ನೋಟಿಫಿಕೇಷನ್ ಅಸಾಧ್ಯ- ಜಲ ಶಕ್ತಿ ಇಲಾಖೆ

    ಪ್ರಕರಣ ವಿಚಾರಣಾ ಹಂತದಲ್ಲಿದೆ ಮಹದಾಯಿ ನೋಟಿಫಿಕೇಷನ್ ಅಸಾಧ್ಯ- ಜಲ ಶಕ್ತಿ ಇಲಾಖೆ

    ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಪ್ರಕರಣ ನ್ಯಾಯಲಯದ ವ್ಯಾಪ್ತಿಯಲ್ಲಿದೆ. ಹೀಗಾಗಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಜಲ ಶಕ್ತಿ ಇಲಾಖೆ ಸ್ಪಷ್ಟನೆ ನೀಡಿದೆ.

    ರಾಜ್ಯಸಭಾ ಕಾಂಗ್ರೆಸ್ ಸಂಸದ ಬಿ.ಕೆ ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿರುವ ಜಲ ಸಂಪನ್ಮೂಲ ಇಲಾಖೆ ರಾಜ್ಯ ಖಾತೆ ಸಚಿವ ರತನ್ ಲಾಲಾ ಖಟಾರಿಯಾ, ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಮಹದಾಯಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2010ರ ನವೆಂಬರ್‍ನಲ್ಲಿ ನ್ಯಾಯಾಧೀಕರಣ ಸ್ಥಾಪಿಸಲಾಗಿತ್ತು. ವಿಚಾರಣೆ ಬಳಿಕ 2018ರ ಆಗಸ್ಟ್ 14ರಂದು ತೀರ್ಪು ನೀಡಿತ್ತು. ಆದರೆ ನ್ಯಾಯಾಧೀಕರಣ ನೀಡಿದ್ದ ತೀರ್ಪು ಪ್ರಶ್ನಿಸಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳು ಪರಿಶೀಲನಾ ಅರ್ಜಿ ಸಲ್ಲಿಸಿವೆ. ಈ ಬಗ್ಗೆ ಯಾವುದೇ ಅಂತಿಮ ತಿರ್ಮಾಣ ಹೊರ ಬಂದಿಲ್ಲ. ವಿಚಾರಣೆ ಹಂತದಲ್ಲಿರುವ ಕಾರಣ ನೋಟಿಫಿಕೆಷನ್ ಅಸಾಧ್ಯ ಎಂದು ಸಚಿವರು ತಿಳಿಸಿದ್ದಾರೆ.

    ಮಹದಾಯಿ ನದಿ ನೀರು ಹಂಚಿಕೆ ಪ್ರಕರಣ ತೀರ್ಪು ಬಂದರೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿರಲಿಲ್ಲ. ಈ ಹಿನ್ನೆಲೆ ರಾಜ್ಯದಲ್ಲಿ ಹಲವು ಪ್ರತಿಭಟನೆಗಳು ನಡೆದಿದ್ದವು. ಹಲವು ರೈತ ನಿಯೋಗಗಳು ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ನೋಟಿಫಿಕೇಷನ್ ವಿಳಂಬಕ್ಕೆ ಸ್ಪಷ್ಟನೆ ಕೋರಿ ಸಂಸದ ಬಿ.ಕೆ ಹರಿಪ್ರಸಾದ್ ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಿದ್ದರು.

  • ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಬಾರಿಯೂ ನೆರೆ ರಾಜ್ಯಗಳು ಖ್ಯಾತೆಯನ್ನು ತೆರೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿಗೆ ತಮಿಳುನಾಡು ಕಿರಿಕ್ ಮಾಡುತ್ತಿದ್ದರೆ, ಇತ್ತ ಬೆಳಗಾವಿ ಹುಟ್ಟುವ ಮಹದಾಯಿ ನದಿಗೆ ಗೋವಾ ಕ್ಯಾತೆ ತೆಗೆಯುತ್ತಿದೆ. ಮಹದಾಯಿ ನದಿಯ ತಿರುವು ಯೋಜನೆಯಿಂದ ಗೋವಾಕ್ಕೆ ಮತ್ತು ಪರಿಸರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಅಧ್ಯಯನಗಳು ವರದಿ ನೀಡಿದರೂ ಗೋವಾ ಸರ್ಕಾರ ಮಾತ್ರ ತನ್ನ ಮೊಂಡುವಾದವನ್ನು ಮುಂದುವರೆಸಿಕೊಂಡೆ ಬಂದಿದೆ. ಆದರೆ ಉತ್ತರ ಕರ್ನಾಟಕದ ಜನ ಕುಡಿಯುವ ನೀರಿಗಾಗಿ ತತ್ತರಿಸಿ ಹೋಗಿದ್ದು, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಈಗ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಮಹದಾಯಿ ಯೋಜನೆ ಎಂದರೆ ಏನು? ವಿವಾದ ಯಾಕೆ ಆರಂಭವಾಯಿತು ಮತ್ತು ಪ್ರಸ್ತುತ ಯೋಜನೆ ಸ್ಥಿತಿಗತಿ ಏನು ಎಂಬುದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಮಲಪ್ರಭಾ ನದಿ ಸಂಜೀವಿನಿ ಯಾಕೆ?
    ಕಳಸಾ-ಬಂಡೂರಿ ನಾಲಾ ಜೋಡಣೆ ಅಥವಾ ಮಹದಾಯಿ ತಿರುವು ಹೆಸರಿನಿಂದ ಕರೆದುಕೊಳ್ಳುವ ಯೋಜನೆ ಕರ್ನಾಟಕ ಸರ್ಕಾರದ ಒಂದು ಮಹಾತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಗಳನ್ನು ತಿಳಿದುಕೊಳ್ಳುವ ಮೊದಲು ಬೆಳಗಾವಿ, ಗದಗ್, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಯ ಸಂಜೀವಿನಿ ಎಂದೇ ಕರೆಯಿಸಿಕೊಳ್ಳುವ ಮಲಪ್ರಭಾ ನದಿಯ ಬಗ್ಗೆ ನೀವು ತಿಳಿದುಕೊಳ್ಳಬೇಕು. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದ ಮಾವೋಲಿ ಪ್ರದೇಶದಲ್ಲಿ ಹುಟ್ಟುವ ಮಲಪ್ರಭಾ ನದಿ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಈ ರೀತಿಯಾಗಿ ಹರಿದು ಬರುವ ನದಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಎಂಬಲ್ಲಿ ರೇಣುಕಾಸಾಗರ ಹೆಸರಿನಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. 1962 ರಲ್ಲಿ ಆರಂಭಿಸಿ, 1972 ರಲ್ಲಿ ಪೂರ್ಣಗೊಂಡ ಈ ಜಲಾಶಯದಲ್ಲಿ 37 ಟಿಎಂಸಿ ನೀರು ಸಂಗ್ರಹವಾಗುತಿತ್ತು. ಈ ಜಲಾಶಯದಲ್ಲಿ ಸಂಗ್ರಹವಾದ ನೀರು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕೆಲ ತಾಲೂಕಿನ ಗ್ರಾಮಗಳಿಗೆ ಸಿಗುತಿತ್ತು. ಆದರೆ ಮಳೆ ಕಡಿಮೆಯಾಗುತ್ತಿದ್ದಂತೆ ಈ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಯಿತು. ಹೀಗಾಗಿ ನವಿಲು ತೀರ್ಥ ಜಲಾಶಯದ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಿದ್ದವಾದ ಯೋಜನೆಯೇ ಮಹದಾಯಿ ತಿರುವು ಯೋಜನೆ.

    ಏನಿದು ಮಹದಾಯಿ ಯೋಜನೆ?
    ನವಿಲು ತೀರ್ಥ ಜಲಾಶಯ ನಿರ್ಮಾಣ ಮಾಡುವ ಮೊದಲೇ ಈ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಆಗಬಹುದು ಎನ್ನುವ ಮುಂದಾಲೋಚನೆ ಸರ್ಕಾರಕ್ಕಿತ್ತು. ಹೀಗಾಗಿ ಈ ಪ್ರದೇಶಗಳ ನದಿಗಳನ್ನು ಮೊದಲು ಜೋಡಿಸಿ, ನಂತರ ಅವುಗಳನ್ನು ಮಲಪ್ರಭೆಗೆ ಜೋಡಿಸಿ, ಕಟ್ಟಲು ಉದ್ದೇಶಿಸಿರುವ ಡ್ಯಾಂಗೆ ಮತ್ತಷ್ಟು ನೀರು ಸಂಗ್ರಹಿಸಲು ಯೋಜನೆ ರೂಪುಗೊಂಡಿತ್ತು. ಮಹದಾಯಿ ಕಣಿವೆಗೆ ಎಲ್ಲ ಉಪ ನದಿಗಳು ಸೇರುವ ಕಾರಣ ಈ ಯೋಜನೆಗೆ ‘ಮಹಾದಾಯಿ ಕಣಿವೆ ತಿರುವು ಯೋಜನೆ’ ಎಂದು ನಾಮಕರಣ ಮಾಡಲಾಯಿತು.

    ಮಹದಾಯಿ ನದಿಯ ಪಾತ್ರ ಏನು?
    ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ದೇವಗಾವುಡು ಗ್ರಾಮದ ಬಳಿ ಹುಟ್ಟುತ್ತದೆ. ಈ ಮಹದಾಯಿ ನದಿ ಕರ್ನಾಟಕದಲ್ಲಿ 35 ಕಿ.ಮೀ. ಹರಿದು ‘ಸುರಗ’ ಪ್ರದೇಶದಲ್ಲಿ ಗೋವಾ ರಾಜ್ಯ ಪ್ರವೇಶಿಸುತ್ತದೆ. ಗೋವಾದಲ್ಲಿ ‘ಮಾಂಡೋವಿ’ ಹೆಸರಿನಲ್ಲಿ ಕರೆಯುವ ನದಿ ಅಲ್ಲಿ ಸುಮಾರು 45 ಕಿ.ಮೀ. ಹರಿಯುತ್ತದೆ. ಮಹದಾಯಿ ನದಿ ಹಳತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹಾದಾಯಿ ನದಿ ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.

    ಮಹದಾಯಿ ನದಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಪಾಲು?
    ಮಹದಾಯಿ ನದಿ 2032 ಚ.ಕಿ.ಮೀ ಜಲನಯನ ಪ್ರದೇಶ ಹೊಂದಿದ್ದು ಕರ್ನಾಟಕದಲ್ಲಿ 375 ಚ.ಕಿ.ಮೀ, ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀ, ಗೋವಾದಲ್ಲಿ 1580 ಚ.ಕೀ.ಮೀ ಪ್ರದೇಶವನ್ನು ಹೊಂದಿದೆ.

    ಕಾಲುವೆ ಜೋಡಣೆ ಹೇಗೆ?
    ಗದಗ್, ಧಾರವಾಡ, ಬೆಳಗಾವಿ ಜನರ ನೀರಿನ ಸಮಸ್ಯೆ ಪರಿಹಾರಿಸಲು ಸರ್ಕಾರ ಕಳಸಾ ಹಾಗೂ ಬಂಡೂರಿ ಎಂಬ ಎರಡು ಹೊಸ ಯೋಜನೆಗಳನ್ನು ಆರಂಭಿಸಲು ಮುಂದಾಯಿತು. ಇದಕ್ಕಾಗಿ ಕಳಸಾ ಯೋಜನೆಯಲ್ಲಿ ಮೊದಲು ಕಳಸಾ ನದಿಗೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ ಮಾಡುವುದು, ಇನ್ನೊಂದು ಹಳತಾರಾ ನದಿಗೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವ ಉದ್ದೇಶದೊಂದಿಗೆ ಈ ಕಾಮಗಾರಿ ಆರಂಭವಾಯಿತು. ಬಂಡೂರಿ ಯೋಜನೆಯಲ್ಲಿ ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು 5.15 ಕಿ.ಮೀ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವ ಯೋಜನೆಯನ್ನು ಸರ್ಕಾರ ರೂಪಿಸಿತು.

    ಯೋಜನೆ ಆರಂಭಗೊಂಡು ಅರ್ಧದಲ್ಲಿ ನಿಂತ ಕಥೆ:
    ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾದ ಹಿನ್ನೆಲೆಯಲ್ಲಿ 1978ರಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರದಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ವೇಳೆ ಎಸ್.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಮಾತುಕತೆ ಫಲಪ್ರದವಾಗಿ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು. 2000ದಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆಯೂ ಅನುಮತಿ ನೀಡಿತು. ಬಂಡೂರಿ ನಾಲಾ ಯೋಜನೆಗೆ 49.20 ಕೋಟಿ ರೂ. ಕಳಸಾ ನಾಲಾ ಯೋಜನೆಗೆ 44.78 ಕೋಟಿ ರೂ. ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿತು. 2002ರ ಏ.30ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ವಾಜಪೇಯಿ ನೃತೃತ್ವದ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು. ಆದರೆ 2002ರ ಮೇನಲ್ಲಿ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ಎತ್ತಿದ ಪರಿಣಾಮ ಈ ಯೋಜನೆ ಈಗ ಅರ್ಧದಲ್ಲೇ ನಿಂತಿದೆ.

    ಕಾಮಗಾರಿಗೆ ತಡೆ ನೀಡುತ್ತಿರುವ ಗೋವಾದ ವಾದವೇನು?
    ಮೊದಲನೆಯದಾಗಿ ಮಹದಾಯಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶ. ಹೀಗಾಗಿ ಈ ಕಣಿವೆಯಲ್ಲಿ ಹರಿಯುವ ನೀರನ್ನು ವರ್ಗಾಯಿಸಬಾರದು. ಎರಡನೇಯದಾಗಿ ಮಹದಾಯಿ ನದಿಯನ್ನು ತಿರುವು ಮಾಡಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಮೂರನೇಯದಾಗಿ ಈ ನೀರಿನಲ್ಲಿ ವಾಸ ಮಾಡುತ್ತಿರುವ ಸಿಗಡಿ ಮೀನು ನಮಗೆ ಅಮೂಲ್ಯವಾಗಿದೆ. ಸಿಹಿ ನೀರಿನಲ್ಲಿ ಮಾತ್ರ ಬದುಕಬಲ್ಲ ಈ ಮೀನು ಗೋವಾಕ್ಕೆ ಬರುವ ಪ್ರವಾಸಿಗರಿಗೆ ಅಚ್ಚುಮೆಚ್ಚು. ಒಂದು ವೇಳೆ ನೀರಿನ ಸಮಸ್ಯೆಯಾಗಿ ಮೀನು ಉತ್ಪಾದನೆ ಕಡಿಮೆಯಾದರೆ ಪ್ರವಾಸೋದ್ಯಮದ ಮೇಲೆ ನೇರ ಹೊಡೆತ ಬೀಳುತ್ತದೆ. ಹೀಗಾಗಿ ಮಹಾದಾಯಿ ನದಿಯ ನೀರು ತನ್ನ ರಾಜ್ಯದ ಮೂಲಕವೇ ಹಾದು ಹೋಗಬೇಕೆಂಬ ವಾದವನ್ನು ಮುಂದಿಟ್ಟುಕೊಂಡು ಬಂದಿದೆ.

    ಮಹಾರಾಷ್ಟ್ರದ ಕಿರಿಕ್ ಏನು?
    ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀನಷ್ಟು ದೂರದವರೆಗೆ ಮಹದಾಯಿ ನದಿ ಹರಿಯುತ್ತದೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ತಡೆಗೋಡೆಗಳನ್ನ ನಿರ್ಮಿಸಬಾರದೆಂಬ ಕೇಂದ್ರ ಜಲ ಮಂಡಳಿ ಆದೇಶ ನೀಡಿದ್ದರೂ ಮಹಾರಾಷ್ಟ್ರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಒಟ್ಟು 9 ಬ್ಯಾರೇಜ್ ನಿರ್ಮಿಸಿ, ಅದಕ್ಕೆ ತಿಲಹರಿ ಜಲಾಶಯ ಎಂದು ಹೆಸರಿಟ್ಟಿತು. ಈ ಪೈಕಿ 7 ಬ್ಯಾರೇಜ್ ನೀರು, ಕರ್ನಾಟಕದ ಅರಣ್ಯ ಪ್ರದೇಶವನ್ನ ಹಾಳು ಮಾಡಿತು. ಒಂದು ವೇಳೆ ಮಹದಾಯಿ ನದಿ ತಿರುವುಗೊಂಡರೆ ನಮ್ಮ ರಾಜ್ಯದ ಜನರಿಗೆ ಸಮಸ್ಯೆ ಆಗುತ್ತದೆ ಎನ್ನುವ ವಾದವನ್ನು ಮಂಡಿಸಿದೆ.

    ಕರ್ನಾಟಕದ ವಾದ ಏನು?
    ನಾವು ಈ ಯೋಜನೆಯನ್ನು ವಿದ್ಯುತ್ ಅಥವಾ ಇನ್ಯಾವುದೇ ಯೋಜನೆಗಾಗಿ ಆರಂಭಿಸಿಲ್ಲ. ಕುಡಿಯುವ ನೀರಿಗಾಗಿ ನಾವು ಈ ಯೋಜನೆಯನ್ನು ಆರಂಭಿಸಿದ್ದೇವೆ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಬೇಕೆಂದು ಅಂತಾರಾಷ್ಟ್ರೀಯ ಜಲ ನೀತಿ ಹೇಳಿದೆ. ಅಷ್ಟೇ ಅಲ್ಲದೇ ಈ ಯೋಜನೆ ಆರಂಭಗೊಂಡರೂ ಗೋವಾ ರಾಜ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಹೀಗಾಗಿ ನಮ್ಮ ಯೋಜನೆ ನ್ಯಾಯಸಮ್ಮತವಾಗಿದೆ ಎಂದು ವಾದವನ್ನು ನ್ಯಾಯಾಲಯಕ್ಕೆ ತಿಳಿಸಿತ್ತು.

    ಯೋಜನೆಯಿಂದ ಪರಿಸರದ ಮೇಲೆ ಹಾನಿ ಆಗುತ್ತಾ?
    ಗೋವಾ ಸರ್ಕಾರ ಈ ಯೋಜನೆ ಆರಂಭಗೊಂಡರೆ ಪರಿಸರ ಹಾಳಾಗುತ್ತದೆ ಎನ್ನುವ ವಾದ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಈ ಯೋಜನೆಯ ಬಗ್ಗೆ ಅಧ್ಯಯನ ನಡೆಸಬೇಕೆಂದು ಕೇಳಿಕೊಂಡಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಸಲಹೆಯಂತೆ ‘ನೀರಿ’ ಸಂಸ್ಥೆ 1997ರಲ್ಲಿ ಅಧ್ಯಯನ ನಡೆಸಿತು. ತನ್ನ ವರದಿಯಲ್ಲಿ ನೀರಿ, ಈ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ಮುಂಗಾರು ನಂತರದ ನದಿಯ ನೀರಿನ ಹರಿವಿನಲ್ಲೂ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ತಿಳಿಸಿದೆ. ನೀರಿ ಅಲ್ಲದೇ ಕೇಂದ್ರ ಜಲ ಆಯೋಗದ ಅಧ್ಯಯನದಲ್ಲಿ 200 ಟಿಎಂಸಿ ನೀರು ಯಾವುದೇ ನೆರೆ ರಾಜ್ಯಗಳು ಬಳಸದೇ ಅನುಪಯುಕ್ತವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ ಎಂದು ತಿಳಿಸಿತ್ತು. ಅಧ್ಯಯನಗಳು ವರದಿ ನೀಡಿದರೂ ಗೋವಾ ಈಗಲೂ ತನ್ನ ಮೊಂಡುವಾದವನ್ನು ಮುಂದುವರೆಸಿಕೊಂಡೆ ಬಂದಿದೆ.

    ನ್ಯಾಯಾಧಿಕರಣ ರಚಿಸಲು ಗೋವಾ ಪಟ್ಟು:
    ಈ ವಿಚಾರ ಇತ್ಯರ್ಥ ಆಗಬೇಕಾದರೆ ಅದು ನ್ಯಾಯಾಧಿಕರಣದಿಂದ ಮಾತ್ರ. ಹೀಗಾಗಿ ನ್ಯಾಯಾಧಿಕರಣ ರಚಿಸಿ ಎಂದು 2002ರಲ್ಲಿ ಕೇಂದ್ರ ಸರ್ಕಾರವನ್ನು ಗೋವಾ ಕೇಳಿಕೊಂಡಿತು. 2006ರಲ್ಲಿ ಕರ್ನಾಟಕ ಆರಂಭಿಸಿರುವ ಕಳಸಾ ಬಂಡೂರಿ ಯೋಜನೆಗೆ ತಡೆ ನೀಡಿ ಮತ್ತು ನ್ಯಾಯಾಧಿಕರಣವನ್ನು ರಚಿಸುವುಂತೆ ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಮಾಡಿಕೊಂಡಿತು. 2006ರಲ್ಲಿ ಕೇಂದ್ರದ ಪರಿಸರ ಮಂತ್ರಾಲಯ, ಈ ಯೋಜನೆಯನ್ನು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ 1956ರ ಅಂತರ್ ರಾಜ್ಯ ಜಲ ವಿವಾದ ಕಾಯ್ದೆಯ ಮೆರೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕರ್ನಾಟಕ ಸರ್ಕಾರಕ್ಕೆ ತಿಳಿಸಿತು. 2010 ಜೂನ್‍ನಲ್ಲಿ ಕರ್ನಾಟಕ, 2010ರ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ನ್ಯಾಯಾಧಿಕರಣ ರಚಿಸುವಂತೆ ಮನವಿ ಮಾಡಿತು. ಅಂತಿಮವಾಗಿ ಕೇಂದ್ರ ಸರ್ಕಾರ ನವೆಂಬರ್ 16 ರಂದು 2010ರಂದು ‘ಮಹದಾಯಿ ಜಲ ವಿವಾದ ನ್ಯಾಯಧಿಕರಣ’ವನ್ನು ರಚಿಸಿದ್ದು, ಈಗ ಈ ಯೋಜನೆ ವಿವಾದ ನ್ಯಾಯಾಧಿಕರಣದ ಅಂಗಳದಲ್ಲಿದೆ. ಮೂರು ರಾಜ್ಯ ಸರ್ಕಾರಗಳು ನ್ಯಾಯಾಧಿಕರಣ ನೀಡುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ ಎನ್ನುವ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿವೆ.

    ಪ್ರಸ್ತುತ ಈ ಕಾಮಗಾರಿಗಳ ಸ್ಥಿತಿ ಗತಿ ಹೇಗಿದೆ?
    ಗೋವಾ ಸರ್ಕಾರ ಕಿರಿಕಿರಿ ಮತ್ತು ನಮ್ಮ ರಾಜ್ಯ ಸರ್ಕಾರಗಳ ರಾಜಕೀಯದಿಂದಾಗಿ ಈ ಯೋಜನೆ ಆರಂಭವಾಗಲೇ ಇಲ್ಲ. ಆದರೆ 2006ರಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀರಾವರಿ ಮಂತ್ರಿಯಾಗಿದ್ದ ಕೆ.ಎಸ್.ಈಶ್ವರಪ್ಪ ಕಳಸಾ ನಾಲಾ ಯೋಜನೆಗೆ ಚಾಲನೆ ನೀಡಿದರು. ಕುಂಟುತ್ತಾ, ತೆವಳುತ್ತಾ ಕಾಮಗಾರಿ ಆರಂಭವಾಯಿತು. ಈ ಯೋಜನೆಯಲ್ಲಿ ತಾತ್ಕಾಲಿಕ ಬಂಡ್ ನಿರ್ಮಾಣ ಅಗತ್ಯವಾಗಿತ್ತು. ಈ ತಾತ್ಕಾಲಿಕ ಬಂಡ್ ನಿರ್ಮಾಣಕ್ಕೆ ಕೇಂದ್ರ ಜಲ ಮಂಡಳಿ ಒಪ್ಪಿಗೆ ನೀಡಿತು. ಆದರೆ ಸುಮ್ಮನೇ ಕೂರದ ಗೋವಾ ರಾಜ್ಯ ಇದನ್ನ ವಿರೋಧಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿ, ಅಲ್ಲಿಂದ ತಡೆಯಾಜ್ಞೆಗೆ ಪ್ರಯತ್ನಿಸಿತು. ಆಗ ಸುಪ್ರೀಂಕೋರ್ಟ್ 6 ತಿಂಗಳ ಕಾಲಾವಧಿಯಲ್ಲಿ ಈ ಬಗ್ಗೆ ದಾಖಲೆಗಳನ್ನು ತಂದು ತೋರಿಸುವಂತೆ ಸೂಚಿಸಿತು. ಹೀಗೆ ಮೂರು ಬಾರಿ ವಿನಾಕಾರಣ ಕ್ಯಾತೆ ತೆಗೆದ ಗೋವಾ ಸರ್ಕಾರ ಒಂದೂವರೆ ವರ್ಷ ಹಾಳು ಮಾಡಿತು. ಮೂರು ಬಾರಿ 6 ತಿಂಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್, ಕೊನೆಗೆ ಛೀಮಾರಿ ಹಾಕಿ ಕೊನೆಗೆ ಗೋವಾದ ಅರ್ಜಿಯನ್ನು ವಜಾಗೊಳಿಸಿತು. ಆಗಲೇ ರಾಜ್ಯ ಸರಕಾರ ಈ ಕಾಮಗಾರಿ ಬಗ್ಗೆ ಗಂಭೀರವಾಗಿ ಚಿಂತಿಸಿ, ಶೀಘ್ರವಾಗಿ ಪೂರ್ಣಗೊಳಿಸಲು ಯೋಚಿಸಬಹುದಿತ್ತು. ಆದರೆ ರಾಜಕಾರಣದಿಂದಾಗಿ ಗುತ್ತಿಗೆದಾರರನ್ನು ಬದಲಾಯಿಸುವುದು ಮತ್ತೆ ಬೇರೆಯವರಿಗೆ ನೀಡಿದ ಕಾರಣ ಕಾಮಗಾರಿ ವಿಳಂಬವಾಯಿತು. ಪ್ರಸ್ತುತ ಕಳಸಾ ನಾಲದ 5.5 ಕಿ.ಮೀ ಉದ್ದದ ಕಾಮಗಾರಿಯಲ್ಲಿ ಶೇ.95 ಭಾಗ ಪೂರ್ಣಗೊಂಡಿದೆ. ಬಂಡೂರಿ ನಾಲಾ ಯೋಜನೆಯ ಕಾಮಗಾರಿಗೆ ಚಾಲನೆಯೇ ಸಿಕ್ಕಿಲ್ಲ.

    ಪ್ರಸ್ತುತ ಕೇಂದ್ರ ಸರ್ಕಾರದ ನಿಲುವು ಏನಿದೆ?
    ಪ್ರಧಾನಿ ಮಧ್ಯಸ್ಥಿಕೆ ವಹಿಸಿದ್ದಲ್ಲಿ ಸಮಸ್ಯೆ ಪರಿಹಾರವಾಗಬಹುದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗ 2015 ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು. ಈ ವೇಳೆ ಪ್ರಧಾನಿ, “ಪ್ರಸ್ತುತ ವಿವಾದ ನ್ಯಾಯಾಧಿಕರಣದ ಮುಂದೆ ಇದೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ರಾಜ್ಯದ ಮೂವರು ಮುಖ್ಯಮಂತ್ರಿಗಳು ಸೇರಿ ಮೊದಲು ಮಾತನಾಡಿಕೊಂಡು ಬನ್ನಿ. ಅಷ್ಟೇ ಅಲ್ಲದೇ ಈ ರಾಜ್ಯಗಳ ವಿರೋಧ ಪಕ್ಷಗಳನ್ನು ಮನವೊಲಿಸಿ” ಎಂಬುದಾಗಿ ನಿಯೋಗಕ್ಕೆ ಸೂಚಿಸಿದ್ದಾರೆ ಎಂದು ಕರ್ನಾಟಕದ ಬಿಜೆಪಿ ನಾಯಕರು ತಿಳಿಸಿದ್ದರು.

    2017ರ ಡಿಸೆಂಬರ್ ನಲ್ಲಿ ಏನಾಯ್ತು?
    2018 ವಿಧಾನಸಭೆ ಚುನಾವಣೆ ನಡೆಯುವ ಕಾರಣ ಮಹದಾಯಿ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ರಾಜ್ಯದ ಬಿಜೆಪಿ ನಾಯಕರು ದೆಹಲಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜೊತೆ ಸಂಧಾನ ಸಭೆ ನಡೆಸಿದರು. ಈ ಸಂಧಾನ ಸಭೆಯ ಬಳಿಕ ಮಾನವೀಯತೆ ದೃಷ್ಟಿಯಿಂದ ನೀರು ಬಿಡಲು ಒಪ್ಪಿಗೆ ನೀಡುತ್ತೇನೆ ಎಂದು ಪರಿಕ್ಕರ್ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಬಿಎಸ್‍ವೈ ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಓದಿದರು. ಆದರೆ ಮಹದಾಯಿ ಹೋರಾಟಗಾರರು ಈ ರೀತಿಯ ಪತ್ರ ಬರೆಯುದರಿಂದ ವಿವಾದ ಪರಿಹಾರವಾಗುವುದಿಲ್ಲ. ಕೂಡಲೇ ವಿವಾದವನ್ನು ಪರಿಹರಿಸುವಂತೆ ಆಗ್ರಹಿಸಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪ್ರತಿಭಟಿಸಿದರು. ಅಷ್ಟೇ ಅಲ್ಲದೇ ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿದರು.

    ಬಿಜೆಪಿ ಆರೋಪ ಏನು?
    ಗೋವಾದಲ್ಲಿರುವ ಬಿಜೆಪಿ ಮಹದಾಯಿ ನೀರನ್ನು ಹರಿಸಲು ಒಪ್ಪಿಗೆ ನೀಡಿದೆ. ಆದರೆ ಅಲ್ಲಿನ ಕಾಂಗ್ರೆಸ್ ಒಪ್ಪಿಗೆ ನೀಡಿಲ್ಲ. 2007ರಲ್ಲಿ ಚುನಾವಣಾ ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ವಿರುದ್ಧ ಪ್ರತಿಭಟಿಸುವ ಬದಲು ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿ. ನಾವು ನೀರು ತರಲು ಸಿದ್ಧರಿದ್ದೇವೆ ಎಂದು ಹೇಳಿದ್ದರು. ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ 6 ತಿಂಗಳ ಒಳಗಡೆ ಈ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದರು.

    ಕಾಂಗ್ರೆಸ್ ಆರೋಪ ಏನು?
    ಈಗ ಕೇಂದ್ರದಲ್ಲಿ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ರಾಜ್ಯದ ಬಿಜೆಪಿ ನಾಯಕರು ಮನಸ್ಸು ಮಾಡಿದರೆ ನೀರು ತರುವುದು ಸುಲಭ. ಪ್ರಧಾನಿ ಮೋದಿಗೆ ಒತ್ತಡ ಹಾಕಿದರೆ ಮಹದಾಯಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಮೋದಿ ಮಹದಾಯಿ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸುತ್ತಿದೆ. ಅಷ್ಟೇ ಅಲ್ಲದೇ ಗೋವಾದ  ಸರ್ಕಾರಕ್ಕೆ ನಾವು ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.

    –  ಜಾವೇದ್ ಅಧೋನಿ,  ಅಶ್ವಥ್ ಸಂಪಾಜೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=Pen28gCcuho


  • ಇಂದಿನಿಂದ ಮಹದಾಯಿ ಅಂತಿಮ ವಿಚಾರಣೆ- ಆಗಸ್ಟ್ ನೊಳಗೆ ತೀರ್ಪು ಹೊರಬರುವ ಸಾಧ್ಯತೆ

    ಇಂದಿನಿಂದ ಮಹದಾಯಿ ಅಂತಿಮ ವಿಚಾರಣೆ- ಆಗಸ್ಟ್ ನೊಳಗೆ ತೀರ್ಪು ಹೊರಬರುವ ಸಾಧ್ಯತೆ

    ಬೆಂಗಳೂರು: ಗೋವಾ ಮತ್ತು ಕರ್ನಾಟಕದ ನಡುವೆ ಕಗ್ಗಂಟಾಗಿ ಉಳಿದಿರುವ ಮಹಾದಾಯಿ ನದಿ ನೀರು ಹಂಚಿಕೆ ವಿವಾದದ ಅಂತಿಮ ವಿಚಾರಣೆ ಇಂದಿನಿಂದ ನಡೆಯಲಿದೆ.

    ದೆಹಲಿಯಲ್ಲಿರುವ ಮಹದಾಯಿ ನ್ಯಾಯಾಧಿಕರಣದಲ್ಲಿ ಇಂದಿನಿಂದ ಅಂತಿಮ ವಿಚಾರಣೆ ಶುರುವಾಗಲಿದೆ. ಸುಮಾರು 2 ತಿಂಗಳು ಕಾಲ ಅಂತಿಮ ಹಂತದ ವಿಚಾರಣೆ ನಡೆಯಲಿದ್ದು, ಗೋವಾ ಸರ್ಕಾರ ರಾಜ್ಯದ ಮೇಲೆ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಮೊದಲಿಗೆ ವಿಚಾರಣೆಗೆ ಬರಲಿದೆ. ಬಳಿಕ ಮೂಲ ಅರ್ಜಿಯನ್ನು ವಿಚಾರಣೆಗೆ ಕೈಗೊತ್ತಿಕೊಳ್ಳುವ ಸಾಧ್ಯತೆ ಇದೆ.

    ಕರ್ನಾಟಕದ ಪರವಾಗಿ ವಾದ ಮಂಡಿಸಬೇಕಿದ್ದ ವಕೀಲ ಫಾಲಿ ಎಸ್. ನಾರಿಮನ್ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಚಾರಣೆಗೆ ಗೈರಾಗಲಿದ್ದಾರೆ. ಅವರ ಬದಲಿಗೆ ಹೊಸ ವಕೀಲರಾದ ಇಂದಿರಾ ಜೈಸಿಂಗ್ ಹಾಗೂ ಅಶೋಕ ದೇಸಾಯ್ ನೀರಿನ ಹಂಚಿಕೆಯ ಕುರಿತು ವಾದ ಮಂಡಿಸಲಿದ್ದಾರೆ.

    ಆಗಸ್ಟ್ 20ರಂದು ನ್ಯಾಯಾಧಿಕರಣಕ್ಕೆ ಐದು ವರ್ಷ ತುಂಬಲಿದ್ದು ನ್ಯಾಯಧೀಕರಣದ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ನೊಳಗೆ ನ್ಯಾಯಾಧಿಕರಣದಿಂದ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

     

  • ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎಂದು ಹೇಳಿ ನೋಡೋಣ: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

    ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎಂದು ಹೇಳಿ ನೋಡೋಣ: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

    ಬೆಂಗಳೂರು: ಈ ಹಿಂದೆ ಮಹದಾಯಿ ನದಿ ನೀರನ್ನು ತಿರುವಲು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎನ್ನಿ ನೋಡೋಣ ಎಂದು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯನವರನ್ನು ಮೈಸೂರಿನ ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿಎಂ ಸಿದ್ದರಾಮಯ್ಯನವರು ಡಿಸೆಂಬರ್ 24 ರಂದು, ಯಡಿಯೂರಪ್ಪನವರಿಗೆ ಜನತೆಯ ಬಗ್ಗೆ ಕಾಳಜಿ ಇದ್ದರೆ ಕುಡಿಯುವ ನೀರಿನ ಉದ್ದೇಶಕ್ಕೆ 7.56 ಟಿ.ಎಂ.ಸಿ ನೀರು ಕೊಡಲು ನಾವು ಒಪ್ಪಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಂದ ಅಫಿಡವಿಟ್ ಬರೆಸಿ ಮಹದಾಯಿ ನ್ಯಾಯಮಂಡಳಿಗೆ ಸಲ್ಲಿಸಲಿ. ಅದನ್ನು ಬಿಟ್ಟು ಯಡಿಯೂರಪ್ಪ ಅವರು ಜನತೆಯ ಮುಂದೆ ಬೇಜವಾಬ್ದಾರಿಯ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಗೆ ಪ್ರತಿಯಾಗಿ ಪ್ರತಾಪ್ ಸಿಂಹ, ನಿಮಗೆ ಕನ್ನಡಿಗರ ಬಗ್ಗೆ ಕಾಳಜಿಯಿದ್ದರೆ, ಗೋವಾ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯನ್ನು ಖಂಡಿಸಿ ಹಾಗೂ ಎಂದು ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎನ್ನಿ ನೋಡೋಣ ಎಂದು ಖಾರವಾಗಿ ಪ್ರಶ್ನಿಸಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಮೋದಿ, ಸೋನಿಯಾ ಗಾಂಧಿ ಹೇಳಿದ್ದು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

    ಈ ಪ್ರಶ್ನೆಯ ಜೊತೆ ಪ್ರತಾಪ್ ಸಿಂಹ 4 ಪ್ರಶ್ನೆಗಳಿರುವ ಫೋಟೋಗಳನ್ನು ಹಾಕಿ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.

    1. 2007ರ ಗೋವಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಒಂದು ಹನಿ ನೀರನ್ನು ಕೊಡುವುದಿಲ್ಲ ಎಂದಿದ್ದ ಕಾಂಗ್ರೆಸ್ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ನಿಮ್ಮವರಲ್ಲವೇ?

    2. ಮಾತುಕತೆಯಲ್ಲಿ ಬಗೆಹರಿಸದೇ 2009ರಲ್ಲಿ ಮಹದಾಯಿ ವಿವಾದವನ್ನು ನ್ಯಾಯಾಧಿಕರಣದ ಮುಖಾಂತರ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದು ಯಾರು?

    3. ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 100 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ 5.5 ಕಿ.ಮೀ ಮಹದಾಯಿ ಮತ್ತು ಮಲಪ್ರಭಾ ಜೋಡಣಾ ಕಾಲುವೆಗೆ 2014-15 ರಲ್ಲಿ ತಡೆಗೋಡೆ ನಿರ್ಮಿಸಿದ್ದು ಯಾರು?

    4. ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ನೀವು ಹೇಳಿದಂತೆ ಗೋವಾ ಕಾಂಗ್ರೆಸ್ ನಾಯಕರನ್ನು ಒಪ್ಪಿಸುತ್ತೇವೆಂದು ನುಡಿದಂತೆ ನಡೆಯುತ್ತಿಲ್ಲ ಏಕೆ?

    ಸೋನಿಯಾ ಗಾಂಧಿ ಹೇಳಿದ್ದು ಏನು?
    2007ರ ಗೋವಾ ಚುನಾವಣಾ ಪ್ರಚಾರದ ವೇಳೆ ಮಾರ್ಗೋ ದಲ್ಲಿ ಭಾಷಣ ಮಾಡಿದ ಸೋನಿಯಾ ಗಾಂಧಿ, ಯಾವುದೇ ಕಾರಣಕ್ಕೂ ಮಹದಾಯಿ ನದಿ ತಿರುವಲು ಬಿಡುವುದಿಲ್ಲ. ಗೋವಾ ಕಾಂಗ್ರೆಸ್ ಮೇಲೆ ನೀವು ನಂಬಿಕೆ ಇಡಿ ಎಂದು ಅವರು ಆಶ್ವಾಸನೆ ನೀಡಿದ್ದರು.  ಇದನ್ನೂ ಓದಿ: ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 188 ಸೇರಿಸಿ ಪೇಚಿಗೆ ಸಿಲುಕಿದ ಖಾಕಿಗಳು!