Tag: Mahadayi protest

  • ಮಹದಾಯಿ ಹೋರಾಟಗಾರರಿಂದ ಹುಬ್ಬಳ್ಳಿಯಲ್ಲಿ ‘ಮೋದಿ ಗೋ ಬ್ಯಾಕ್’ ಪ್ರತಿಭಟನೆ

    ಮಹದಾಯಿ ಹೋರಾಟಗಾರರಿಂದ ಹುಬ್ಬಳ್ಳಿಯಲ್ಲಿ ‘ಮೋದಿ ಗೋ ಬ್ಯಾಕ್’ ಪ್ರತಿಭಟನೆ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಹದಾಯಿ ಹೋರಾಟಗಾರರು ಪ್ರತಿಭಟನೆ ಆರಂಭಿಸಿದ್ದು, ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೋದಿ ಗೋ ಬ್ಯಾಕ್ ಎಂದು ಮಹದಾಯಿ ಹೋರಾಟಗಾರರು ಘೋಷನೆ ಕೂಗುತ್ತಿದ್ದಾರೆ. ಅಷ್ಟೇ ಅಲ್ಲದೆ ಮೋದಿ ರ‍್ಯಾಲಿಗೆ ಕಪ್ಪು ಪಟ್ಟಿ ಪ್ರದರ್ಶಿಸಲು ತೆರಳುತ್ತಿದ್ದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದನ್ನು ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

    ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಮಧ್ಯೆ ಉಂಟಾಗಿರುವ ಮಹದಾಯಿ ನದಿ ನೀರು ಹಂಚಿಕೆಯ ಸಮಸ್ಯೆಯ ಇತ್ಯರ್ಥಕ್ಕೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದರು. ಆದರೆ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದು ಮಹದಾಯಿ ಹೋರಾಟಗಾರರ ಕೋಪಕ್ಕೆ ಕಾರಣವಾಗಿದೆ.

    ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ಆಪರೇಷನ್ ಕಮಲವನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆದಿದ್ದರು. ನಗರದ ಅಂಬೇಡ್ಕರ್ ಸರ್ಕಲ್ ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರ್ಕಾರ ಬೀಳಿಸಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿರುವ ಆಡಿಯೋವನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಬೇಕು. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದ ಮೇಲೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈತರು ಬೆಳೆದ ಅನ್ನವನ್ನೇ ನಾವು, ನೀವು ತಿನ್ನೋದು, ಹೋರಾಟಕ್ಕೆ ಬನ್ನಿ: ರೈಗೆ ಪ್ರಥಮ್ ಮನವಿ

    ರೈತರು ಬೆಳೆದ ಅನ್ನವನ್ನೇ ನಾವು, ನೀವು ತಿನ್ನೋದು, ಹೋರಾಟಕ್ಕೆ ಬನ್ನಿ: ರೈಗೆ ಪ್ರಥಮ್ ಮನವಿ

    ಬೆಂಗಳೂರು: ನಿಮ್ಮಪ್ಪ, ನಮ್ಮಪ್ಪ ಎಲ್ಲಾ ತಿನ್ನೋದು ಇದೇ ರೈತರು ಬೆಳೆದ ಅನ್ನವನ್ನ. ನೀವು ಮಹದಾಯಿ ಹೋರಾಟದ ನೇತೃತ್ವ ವಹಿಸಿಕೊಳ್ಳಿ. ಇದು ನನ್ನ ಮನವಿ ಎಂದು ನಟ ನಿರ್ದೇಶಕ ಪ್ರಥಮ್, ನಟ ಪ್ರಕಾಶ್ ರೈ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಮಹದಾಯಿ ರೈತರ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿದ ಪ್ರಥಮ್, ನನ್ನದು ಪಕ್ಷಾತೀತವಾದ ಹೋರಾಟ, ರೈತರ ಪರವಾದ ಹೋರಾಟವಾಗಿದೆ. ರೈತರು ನ್ಯಾಯ ಕೇಳುವುದು ಅವರ ಹಕ್ಕು, ನೀರು ಕೇಳುವುದು ಅವರ ಜವಾಬ್ದಾರಿ. ಆದರೆ ಮುಗ್ಧ ರೈತರ ಪ್ರತಿಭಟನೆಗೆ ರಾಜಕೀಯ ಬಣ್ಣ ಹಚ್ಚಿದ್ದಾರೆ. ಅದು ಸ್ವಲ್ಪ ಬೇಸರವಾಗಿದೆ ಎಂದು ಹೇಳಿದ್ರು.

    ಸಾಮಾಜಿಕ ವಿಚಾರದಲ್ಲಿ ನೀವು ಬೆಳಕು ಚೆಲ್ಲಿದ್ದೀರಿ. ಗೌರಿ ಲಂಕೇಶ್ ಪ್ರಕರಣದಲ್ಲೂ ಬೆಳಕು ಚೆಲ್ಲಿದ್ದೀರಿ. ನಾವು, ನೀವು, ನಮ್ಮಪ್ಪ ತಿನ್ನೋದು ರೈತರು ಬೆಳೆದ ಅನ್ನವನ್ನು. ಈ ಸಂದರ್ಭದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ನೀವು ಬಂದು ನಾಯಕತ್ವ ವಹಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

    ನಾನು ಅವರ ಖಾಸಗಿ ವಿಚಾರ ಮಾತನಾಡುತ್ತಿಲ್ಲ. ಅವರ ಹೇಳಿಕೆಯನ್ನು ವಿರೋಧಿಸುತ್ತೇನೆ ಅಷ್ಟೇ. ನಾನು ಕಾಂಗ್ರೆಸ್-ಬಿಜೆಪಿಯ ಪರ ಅಲ್ಲ, ನಾನು ರೈತ ಪರ. ರಾಜ್ಯದಲ್ಲಿ ಎಲ್ಲರೂ ಪಕ್ಷವನ್ನು ಮರೆತು ಒಟ್ಟೂಗೂಡಿ ಸಮಸ್ಯೆಯನ್ನು ಪರಿಹರಿಸಿ ಎಂದು ಪ್ರಥಮ್ ಹೇಳಿದ್ರು.

    ಸಿನಿಮಾ ನಟರು ರೈತರ ಬೆಂಬಲಕ್ಕೆ ಬಂದಿಲ್ಲ ಎಂಬ ವಿಚಾರಕ್ಕೆ, ದರ್ಶನ್ ಕರುಕ್ಷೇತ್ರ ಸಿನಿಮಾದಲ್ಲಿ, ಸುದೀಪ್ ದಿ ವಿಲನ್ ಮತ್ತು ಬಿಗ್‍ಬಾಸ್ ನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಾಹಿತಿ ಕೊಡದೇ ತಕ್ಷಣ ಬರಬೇಕು ಎಂದರೆ ಸಾಧ್ಯವಿಲ್ಲ. ಆದರೆ ಎಲ್ಲರೂ ರೈತರ ಪರ ಇದ್ದಾರೆ. ಶಿವಣ್ಣ ಟಗರು ಆಡಿಯೋ ರಿಲೀಸ್ ಮಾಡಲು ಬಳ್ಳಾರಿಯಲ್ಲಿ ಬ್ಯುಸಿ ಇದ್ದರು. ಆದರೂ ಇಡೀ ಇಂಡಸ್ಟ್ರೀಯನ್ನೇ ಉತ್ತರ ಕನ್ನಡಕ್ಕೆ ಕರೆದುಕೊಂಡು ಹೋಗಿದ್ರು. ಶಿವಣ್ಣ ನಾನು ಯಾರ ಪರನೂ ಅಲ್ಲ. ರೈತರ ಪರ, ರೈತರ ನೀರಿನ ಪರ ಅಂತಾ ಹೇಳಿದ್ದಾರೆ ಎಂದು ಪ್ರಥಮ್ ಹೇಳಿದರು.

  • ಕಳಸಾ ಬಂಡೂರಿ ಹೋರಾಟಕ್ಕೆ 2 ವರ್ಷ: ಅಮರಣಾಂತ ಉಪವಾಸಕ್ಕೆ ಕುಳಿತ್ರು ರೈತರು

    ಕಳಸಾ ಬಂಡೂರಿ ಹೋರಾಟಕ್ಕೆ 2 ವರ್ಷ: ಅಮರಣಾಂತ ಉಪವಾಸಕ್ಕೆ ಕುಳಿತ್ರು ರೈತರು

    ಗದಗ: ಕಳಸಾ ಬಂಡೂರಿ, ಮಹದಾಯಿ ಹೋರಾಟ ಬರೋಬ್ಬರಿ ಎರಡು ವರ್ಷ ಪೂರೈಸಿದೆ. ಆದರೂ ಉತ್ತರ ಕರ್ನಾಟಕ ಭಾಗಕ್ಕೆ ನೀರು ಸಿಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮಹದಾಯಿ ಹೋರಾಟಗಾರರು ಮಾಡು ಇಲ್ಲವೇ ಮಡಿ ಎನ್ನುವ ತೀರ್ಮಾನವನ್ನು ತೆಗೆದುಕೊಂಡು ಅಮರಣಾಂತ ಉಪವಾಸಕ್ಕೆ ಧುಮುಕಿದ್ದಾರೆ.

    ಹೌದು. ಭಾನುವಾರ ನರಗುಂದ ಪಟ್ಟಣದ ಬಾಬಾಸಾಹೇಬ್ ವೃತ್ತದಿಂದ ಹೋರಾಟ ವೇದಿಕೆಯವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ವ್ಯಕ್ತಿಯೊಬ್ಬರು ಮಹಾತ್ಮಗಾಂಧಿ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ನಂತರ ಹೋರಾಟ ವೇದಿಕೆಯಲ್ಲಿ ಜಮಾವಣೆಗೊಂಡ ಸಾವಿರಾರು ರೈತರು ರೈತಗೀತೆಗೆ ಹಸಿರು ಶಾಲು ಬೀಸುವ ಮೂಲಕ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.

    ಸುತ್ತಲಿನ ಸಾವಿರಾರು ಗ್ರಾಮಸ್ಥರು ಆಗಮಿಸಿ ಸಮಾವೇಶವನ್ನು ಬೆಂಬಲಿಸಿದರು. ನಾಡಿನ ಹಲವು ಸಂಘಟನೆ, ಹೋರಾಟಗಾರರು ಪಾಲ್ಗೊಂಡಿದ್ದರು. ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ಆಗುವವರೆಗೂ ಉಪವಾಸ ಸತ್ಯಾಗ್ರಹಕ್ಕೆ ನಿರ್ಣಯ ಮಂಡಿಸಲಾಯಿತು. ಇನ್ನು ಉಪವಾಸದಿಂದ ಸಾವನ್ನಪ್ಪಿದ್ರೆ ಮಹದಾಯಿ ತೀರದಲ್ಲಿ ಅಂತ್ಯಕ್ರಿಯೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯ ನೆರೆದ ಸಾವಿರಾರು ರೈತರಲ್ಲಿ ಮತ್ತಷ್ಟು ಆಕ್ರೋಶದ ಕಿಡಿ ಹೊತ್ತಿಸಿತು.

    ಉತ್ತರ ಕರ್ನಾಟಕದ 4 ಜಿಲ್ಲೆ 11 ತಾಲೂಕಿಗೆ ವರವಾಗಬೇಕಿದ್ದ ಯೋಜನೆ ನೆನೆಗುದಿಗೆ ಬಿದ್ದು ಹಲವು ದಶಕವಾಯಿತು. ಎರಡು ವರ್ಷದ ಈ ಹೋರಾಟದಲ್ಲಿ ನೇತೃತ್ವ ವಹಿಸಿದ ವಿರೇಶ್ ಸೊಬರದಮಠ ಸನ್ಯಾಸ ಧೀಕ್ಷೆ ಸ್ವೀಕರಿಸುವ ಮೂಲಕ ಸರ್ಕಾರಗಳ ವಿರುದ್ಧ ಸಾತ್ವಿಕ ಆಕ್ರೋಶ ಹೊರಹಾಕಿದ್ರು. ಇದೀಗ ಮತ್ತೆ ಮಾಡು ಇಲ್ಲವೇ ಮಡಿ ಹೋರಾಟದ ಮೂಲಕ ಸೊಬರದಮಠ ಸರ್ಕಾರಗಳ ವಿರುದ್ಧ ಕಣಕಹಳೆ ಮೊಳಗಿಸಿದ್ದಾರೆ.

    ಈ ವೇಳೆ ಶಾಸಕ ಪುಟ್ಟಣ್ಣಯ್ಯ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕಿಡಿಕಾರಿದರು. ಏಳು ವರ್ಷದ ನರಗುಂದದ ಬಾಲಕಿ ಶ್ರೇಯಾ ಹಾದಿಮನಿ ಹೋರಾಟ ವೇದಿಕೆಯಲ್ಲಿ ಕಣ್ಣೀರಿಟ್ಟಳು. ಹೋರಾಟ ವೇದಿಕೆಯಲ್ಲಿ ದುಃಖಿತಳಾದ ಶ್ರೇಯಾಗೆ ಹೋರಾಟಗಾರರು ಸಂತೈಸಿದರು. ನರಗುಂದ ಹೋರಾಟದಲ್ಲಿ ಮಹದಾಯಿ, ಕಳಸಾ ಬಂಡೂರಿ ಯೋಜನೆಗಾಗಿ ಸರ್ಕಾರಗಳ ವಿರುದ್ಧ ಬಾಲಕಿ ವಾಗ್ದಾಳಿ ನಡೆಸಿದಳು.

     

     

  • 5 ಏಟು ತಿಂದಿದ್ರೆ 500, 14 ಏಟು ತಿಂದವನಿಗೆ 1400 ರೂ: ಲಾಠಿ ಏಟು ತಿಂದಿದ್ದ ಯಮನೂರ ಗ್ರಾಮಸ್ಥರಿಗೆ ಸರ್ಕಾರದ ಪರಿಹಾರ

    5 ಏಟು ತಿಂದಿದ್ರೆ 500, 14 ಏಟು ತಿಂದವನಿಗೆ 1400 ರೂ: ಲಾಠಿ ಏಟು ತಿಂದಿದ್ದ ಯಮನೂರ ಗ್ರಾಮಸ್ಥರಿಗೆ ಸರ್ಕಾರದ ಪರಿಹಾರ

    ಧಾರವಾಡ: ಕಳೆದ ವರ್ಷ ಜುಲೈನಲ್ಲಿ ಕಳಸಾ ಬಂಡೂರಿ ಯೋಜನೆಗಾಗಿ ಬೀದಿಗಿಳಿದಿದ್ದ ರೈತರ ಮೇಲೆ ಪೊಲೀಸರು ಅಮಾನವೀಯವಾಗಿ ಲಾಠಿ ಬೀಸಿದ್ರು. ಧಾರವಾಡದ ನವಲಗುಂದದ ಯಮನೂರ ಗ್ರಾಮಸ್ಥರ ಮೇಲೆ ಯಮನಂತೆ ಎರಗಿದ್ದ ಪೊಲೀಸರು ಮಹಿಳೆಯರು, ಮಕ್ಕಳು ಎನ್ನದೇ ಲಾಠಿ ಬೀಸಿದ್ರು. ಈಗ ಲಾಠಿ ಏಟು ತಿಂದ ರೈತರಿಗೆ ಸರ್ಕಾರ ಪರಿಹಾರವೇನೋ ಕೊಟ್ಟಿದೆ. ಆದರೆ ಇಲ್ಲಿಯ ಜನರು ತಿಂದ ಲಾಠಿ ಏಟಿಗೆ ಸರ್ಕಾರ 100 ರೂಪಾಯಿ ಬೆಲೆ ಕಟ್ಟಿದೆಯೇ ಎಂಬ ಅನುಮಾನ ಮೂಡಿದೆ

    ಕಳೆದ ವರ್ಷ ಜುಲೈನಲ್ಲಿ ಕಳಸಾ ಬಂಡೂರಿ ನಾಲಾ ಜೋಡಣೆಗೆ ಆಗ್ರಹಿಸಿ ಧಾರವಾಡ ಜಿಲ್ಲೆಯಲ್ಲಿ ನಡೆದ ಹೋರಾಟದ ವೇಳೆ, ಪೊಲೀಸರು ನವಲಗುಂದ ತಾಲೂಕಿನ ಯಮನೂರ ಗ್ರಾಮಸ್ಥರ ಮೇಲೆ ನಡೆಸಿದ ದೌರ್ಜನ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಘಟನೆಯಲ್ಲಿ ಗ್ರಾಮದ ಎಷ್ಟೋ ಜನರು ಲಾಠಿ ಏಟಿನಿಂದ ಬಳಲಿ ಹೋಗಿದ್ದರು. ಮಹದಾಯಿ ನೀರಿಗಾಗಿ ನಡೆದಿದ್ದ ಈ ಹೋರಾಟದ ವೇಳೆ ಮಹಿಳೆಯರು, ವೃದ್ಧರು ಎನ್ನದೇ ಪೊಲೀಸರು ಲಾಠಿಯಿಂದ ಬಡಿದಿದ್ದರು. ಘಟನೆ ನಂತರ ಎಷ್ಟೋ ಜನಾ ಏಳೊಕೂ ಆಗದೇ ಮನೆಯಲ್ಲೇ ಚಿಕಿತ್ಸೆ ಮಾಡಿಸಿದ್ದರು. ಅದಕ್ಕೆ ಸರ್ಕಾರ ಈಗ ಬೆಲೆ ಕಟ್ಟಿದೆ. ಗ್ರಾಮದಲ್ಲಿ 165 ಜನರಿಗೆ ಲಾಠಿ ಏಟು ಬಿದ್ದಿತ್ತು. ಅವರಿಗೆ ಸರ್ಕಾರ 500, 1 ಸಾವಿರ, 2 ಸಾವಿರ ಹಾಗೂ 3 ಸಾವಿರ ರೂ. ಪರಿಹಾರ ನೀಡಿದೆ. ಇನ್ನು ಪ್ರತಿ ಏಟಿಗೆ ನೂರು ರೂಪಾಯಿಯಂತೆ ಬೆಲೆ ಕಟ್ಟಿರುವ ಸರ್ಕಾರ, 5 ಏಟು ತಿಂದವನಿಗೆ 500 ರೂಪಾಯಿ ಹಾಗೂ 14 ಏಟು ತಿಂದವನಿಗೆ 1400 ರೂಪಾಯಿ ಚೆಕ್ ನೀಡಿದೆ.

    ಗ್ರಾಮದ ಇಬ್ಬರಿಗೆ ಮಾತ್ರ 10 ಸಾವಿರ ರೂ. ಹಾಗೂ ಓರ್ವ ವೃದ್ಧರಿಗೆ 25 ಸಾವಿರ ರೂ. ಪರಿಹಾರ ನೀಡಿದ್ದು ಬಿಟ್ಟರೆ ಉಳಿದವರಿಗೆಲ್ಲಾ ಬಿಡಿಗಾಸಿನ ಚೆಕ್ ನೀಡಿದೆ. ಶಿವಾನಂದ ಎಂಬವರ ಮನೆಯೊಂದರಲ್ಲೇ 3 ಜನರಿಗೆ ಲಾಠಿ ಏಟು ಕೊಟ್ಟಿದ್ದರು. ಅದರಲ್ಲಿ ಶಿವಪ್ಪ ಚುಳುಕಿ ಹಾಗೂ ಅವರ ತಂದೆ ಜೈಲು ಸೇರಿದ್ದರು. ಆದರೆ ಜೈಲಿನಿಂದ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದ್ದೇ 30 ರಿಂದ 40 ಸಾವಿರ ರೂ. ಬಿಲ್ ಆಗಿದೆ. ಆದರೆ ಅವರ ಮನೆಗೆ 2700 ರೂ. ಚೆಕ್ ಮಾತ್ರ ಬಂದಿದೆ. ಹೀಗಾಗಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸುವ ಗ್ರಾಮಸ್ಥರು, ಪೊಲೀಸರ ಲಾಠಿ ಏಟು ಇನ್ನೂ ಮಾಸಿಲ್ಲ ಅಂತಾರೆ.

    ಸರ್ಕಾರ ನ್ಯಾಯಯುತವಾಗಿ ಪರಿಹಾರ ನೀಡಬೇಕಿತ್ತು. ಅದನ್ನ ಬಿಟ್ಟು ಲಾಠಿ ಏಟಿಗೆ ಬೆಲೆ ಕಟ್ಟಿದೆ ಎಂಬುದು ಇಲ್ಲಿನ ಜನರ ಆಕ್ರೋಶವಾಗಿದೆ. ಇನ್ನು ಕೆಲವರು ಜೈಲಿಗೆ ಹೋದ ಕಾರಣ ಅವರ ಹೊಲದಲ್ಲಿದ್ದ ಬೆಳೆ ಕೂಡ ನಾಶವಾಗಿತ್ತು. ಅದು ಕೂಡ ರೈತರಿಗೆ ನಷ್ಟ ಉಂಟು ಮಾಡಿತ್ತು.