Tag: Mahadayi dispute

  • ದೀಪ ಆರುವ ಮುನ್ನ ಪ್ರಖರವಾಗಿ ಉರಿಯುತ್ತೆ, ಶೀಘ್ರ ಬಿಜೆಪಿ ದೀಪ ಆರುತ್ತೆ: ಎಸ್.ಆರ್.ಪಾಟೀಲ್

    ದೀಪ ಆರುವ ಮುನ್ನ ಪ್ರಖರವಾಗಿ ಉರಿಯುತ್ತೆ, ಶೀಘ್ರ ಬಿಜೆಪಿ ದೀಪ ಆರುತ್ತೆ: ಎಸ್.ಆರ್.ಪಾಟೀಲ್

    – ಚಾಣಕ್ಯನ ಸ್ಥಿತಿ ನೋಡಿ ಮರುಕ ಬರ್ತಿದೆ

    ಬಾಗಲಕೋಟೆ: ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತೆ. ಜಾಸ್ತಿ ಉರಿದ ಬಿಜೆಪಿಯ ದೀಪ ಶೀಘ್ರ ಆರುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ದಾಟ್ ಗವರ್ನಮೆಂಟ್ ಡೇಸ್ ಆರ್ ನಂಬರ್’ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ  ವ್ಯಂಗ್ಯವಾಡಿದರು. ಪೌರತ್ವ ತಿದ್ದುಪಡಿ ಮಸೂದೆ ಜಾರಿ ಬಂದ ಮೇಲೆ ಜಾರ್ಖಂಡ್ ಚುನಾವಣೆ ಮೊದಲ ಪರೀಕ್ಷೆ. ಅವರದ್ದೇ ಸರ್ಕಾರ ಇದ್ದರೂ ಬಿಜೆಪಿ ಸೋಲು ಅನುಭವಿಸಿದೆ. ದೇಶದಲ್ಲಿ ಮುಂಬರುವ ಎಲ್ಲಾ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸೋಲು ಖಚಿತ ಎಂದರು.

    ಬಿಜೆಪಿ ಚಾಣಕ್ಯ ಅಮಿತ್ ಶಾ 12 ತಿಂಗಳಲ್ಲಿ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಚಾಣುಕ್ಯನ ಸ್ಥಿತಿ ನೋಡಿ ಮರುಕ ಬರುತ್ತಿದೆ. ಒಬ್ಬ ಮನುಷ್ಯ ಎಲ್ಲ ವ್ಯಕ್ತಿಗಳನ್ನು ಸ್ವಲ್ಪ ಸಮಯದವರೆಗೂ ಮೋಸ ಮಾಡಬಹುದು. ಕೆಲವು ಜನರನ್ನು ಕೊನೆವರೆಗೂ ಮೋಸ ಮಾಡಬಹುದು. ಆದರೆ ಎಲ್ಲ ಜನರನ್ನು ಎಲ್ಲ ಸಮಯದವರೆಗೂ ಮೋಸ ಮಾಡಲು ಆಗಲ್ಲ. ಇದು ಪ್ರಧಾನಿ ಮೋದಿ ಅವರಿಗೆ ಅನ್ವಯಿಸುತ್ತದೆ ಎಂದರು.

    ಪೌರತ್ವ ಕಾಯ್ದೆ ವಿರೋಧದ ವಿಚಾರ ಕಾಂಗ್ರೆಸ್ಸಿಗರು ದೇಶದ್ರೋಹಿಗಳು ಎಂದಿದ್ದ ಡಿಸಿಎಂ ಗೋವಿಂದ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಮಾತು ಕಾರಜೋಳ ವ್ಯಕ್ತಿತ್ವಕ್ಕೆ ಶೋಭೆ ತರುವ ಹೇಳಿಕೆಯಲ್ಲ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷದ ಆರುವರೆ ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪಕ್ಷ ಹುಟ್ಟಿದ್ದೆ 1950ರಲ್ಲಿ. ಕಾರಜೋಳ ತಮ್ಮ ಪಕ್ಷದ ಇತಿಹಾಸ ನೋಡಿಕೊಂಡು ಮಾತನಾಡಲಿ. ಅವರು ಕೂಡಲೇ ಕಾಂಗ್ರೆಸ್ ಪಕ್ಷದ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

    ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕುಡಿಯುವ ನೀರಿನ ಯೋಜನೆಗೆ ಗೋವಾದ ಮಾತು ಕೇಳಿ ಕೇಂದ್ರ ತಡೆಯಾಜ್ಞೆ ನೀಡಿದೆ. ಕೇಂದ್ರದ ನೀತಿ ಮತ್ತಷ್ಟು ನಿರಾಸೆ ಮೂಡಿಸಿದ್ದು, ತಮ್ಮದೇ ಕೇಂದ್ರ ಸರ್ಕಾರದ ಎದುರು ಮಾತನಾಡಲು ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಗಟ್ಸ್ ಇಲ್ಲ. ಬಿಎಸ್‍ವೈ 24 ಗಂಟೆ ಅನ್ನೋದು ಬಾಯಿಪಾಠ ಮಾಡಿದ್ದಾರೆ. ಅವರನ್ನು ಯಾವುದೇ ವಿಚಾರ ಕೇಳಿದರು, 24 ಗಂಟೆಯಲ್ಲಿ ಮಾಡುತ್ತೇನೆ ಎನ್ನುತ್ತಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ತಂದುಕೊಡುವುದಾಗಿ ಹೇಳಿದ್ದರು. ಆದರೆ ಅವರು ಅದನ್ನು 24 ವರ್ಷ ಅಥವಾ ಶತಮಾನ ಎಂದು ತಿಳಿದುಕೊಂಡಿದ್ದಾರೇನೋ? ಎಂದು ವ್ಯಂಕ್ಯವಾಡಿದರು. ಸಚಿವ ಬೊಮ್ಮಾಯಿ ಅವರು ರಕ್ತದಲ್ಲಿ ಬರೆದು ಕೊಟ್ಟಿದ್ದರು. ರಾಜ್ಯ ಬಿಜೆಪಿ ನಾಯಕರಿಗೆ ಕೊನೆ ಪಕ್ಷ ತಡೆಯಾಜ್ಞೆಯನ್ನು ತೆರವು ಮಾಡಲು ಕೂಡ ಆಗಲಿಲ್ಲ ಎಂದು ಟೀಕಿಸಿದರು.

  • ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

    ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

    ಗದಗ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಪ್ರಯುಕ್ತ ಪಕ್ಷದ ಪರ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಇಂದು ಗದಗ ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್ ಪಕ್ಕದ ಜಮೀನಿನಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ರು.

    2007 ರಲ್ಲಿ ಗೋವಾ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಮಹದಾಯಿ ನೀರನ್ನು ಕೊಡುವುದಿಲ್ಲ ಎಂದಿದ್ದರು. ಗೋವಾದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದ್ದು, ಕರ್ನಾಟಕದಲ್ಲಿ ಬಂದು ಸಮಸ್ಯೆ ಸೃಷ್ಟಿ ಮಾಡಿದ್ದಾರೆ. ಮಹದಾಯಿ ಸಮಸ್ಯೆಯನ್ನ ಮುಂದೆ ಹಾಕುವ ಪ್ರವೃತ್ತಿ ನಮ್ಮದಲ್ಲ. ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ ಅಂದ್ರು.

    2007ರಲ್ಲಿ ಸೋನಿಯಾ ಗಾಂಧಿ ಏನು ಹೇಳಿದ್ರು ಅಂತಾ ಸಿಎಂ ಸಿದ್ದರಾಮಯ್ಯರಿಗೆ ಗೊತ್ತಿಲ್ಲ. ಕಾರಣ ಸಿಎಂ ಕಾಂಗ್ರೆಸ್‍ನಲ್ಲಿ ಇರಲಿಲ್ಲ, ಆದ್ರೆ ಯಾವ ದಳದಲ್ಲಿ ಇದ್ರೆಂಬುದು ಅವರಿಗೂ ನೆನಪಿರಲಿಕ್ಕಿಲ್ಲ. ಯಾಕಂದ್ರೆ ಪಕ್ಷ ಬದಲಿಸೋದು ಸಿದ್ದರಾಮಯ್ಯರ ರೂಢಿಯಾಗಿದೆ ಅಂತಾ ವಾಗ್ದಾಳಿ ನಡೆಸಿದ್ರು.

    ಈ ಹಿಂದೆ ಕರ್ನಾಟಕ, ಗೋವಾ ಮತ್ತು ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರಗಳಿದ್ದರೂ, ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಮಹದಾಯಿ ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡು ಅದನ್ನು ಟ್ರಿಬ್ಯೂನಲ್ ಗೆ ಹಾಕಲಾಯಿತು. ಈ ಸಮಸ್ಯೆ ಮುಂದಿನ ನಿಮ್ಮ ಪೀಳಿಗೆಗೂ ಮುಂದುವರೆಯಬಾರದು ಅಂತಾ ನಾನು ಆಶಿಸುತ್ತೇನೆ ಅಂತಾ ತಿಳಿಸಿದ್ರು.

  • ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ

    ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ

    ಬೆಂಗಳೂರು: ಆಗಸ್ಟ್ ನಲ್ಲಿ ಮಹದಾಯಿ ಕುರಿತಂತೆ ನ್ಯಾಯಮಂಡಳಿ ತೀರ್ಪು ಬರಲಿದೆ. ಮಹದಾಯಿ ವಿಚಾರದಲ್ಲಿ ಗೋವಾ ನ್ಯಾಯಾಧಿಕರಣದ ಮುಂದೆ ದೃಢವಾದ ಸಾಕ್ಷ್ಯಾಧಾರಗಳನ್ನ ಒದಗಿಸಿದೆ ಎಂದು ಗೋವಾ ಪರವಾಗಿ ವಾದ ಮಾಡುತ್ತಿರುವ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮಾರಾಮ ನಾಡಕರ್ಣಿ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಡಕರ್ಣಿ, ನ್ಯಾಯಾಧಿಕರಣದಲ್ಲಿ ಕೇಸ್ ಗೋವಾ ಪರವೇ ಗಟ್ಟಿ ಇದೆ. ಗೋವಾ ವಕೀಲರ ತಂಡ ರಾಜ್ಯದ ಹಿತಾಸಕ್ತಿಗಾಗಿ ಹೋರಾಟ ಮಾಡ್ತಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ನಮಗೆ ಮಹದಾಯಿ ನದಿ ಗೋವಾದಲ್ಲಿ ಹರಿಯಬೇಕು ಎಂದು ಹೇಳಿದ್ದಾರೆ.

    ಮಹದಾಯಿ ವಿಚಾರಣೆ ಕೊನೆಯ ಹಂತಕ್ಕೆ ಬಂದಿದೆ. ಎಲ್ಲಾ ಸಾಕ್ಷಿ, ಪುರಾವೆಗಳ ಪರಿಶೀಲನೆ ಮುಗಿದಿದೆ. ಒಂದೆರಡು ಸಾಕ್ಷ್ಯಾಧಾರಗಳ ಪರಿಶೀಲನೆಗೆ ಕರ್ನಾಟಕಕ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಜನವರಿ 15ರೊಳಗೆ ಅವರು ಫೈಲ್ ಮಾಡಬೇಕು. ಇಲ್ಲವಾದಲ್ಲಿ ಫೆಬ್ರವರಿ 6ರಿಂದ ವಾದ ಶುರುವಾಗುತ್ತದೆ. ನಾವು ನಮ್ಮ ಪ್ರತಿವಾದವನ್ನು ಜನವರಿ 15ರೊಳಗೆ ಫೈಲ್ ಮಾಡಬೇಕು. ಫೆಬ್ರವರಿ 6ರಿಂದ ನಾನು ನನ್ನ ವಾದ ಶುರು ಮಾಡುತ್ತೇನೆ. ವಾದ ಪೂರ್ಣಗೊಳಿಸಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುತ್ತೇನೆ. ಫೆಬ್ರವರಿಯಲ್ಲಿ ನಾನು, ಮಾರ್ಚ್‍ನಲ್ಲಿ ಕರ್ನಾಟಕ, ಏಪ್ರಿಲ್‍ನಲ್ಲಿ ಕೆಲವು ದಿನಗಳನ್ನ ಮಹಾರಾಷ್ಟ್ರ ತೆಗೆದುಕೊಳ್ಳುತ್ತದೆ. ಅಗತ್ಯ ಇದ್ದರೆ ಅವರ ವಾದದ ಆಧಾರದ ಮೇಲೆ ನಾನು ಕೆಲವು ದಿನ ಮತ್ತೆ ಸೇರ್ಪಡೆಯಾಗ್ತೀನಿ. ಅಲ್ಲಿಗೆ ಮುಗಿಯುತ್ತದೆ. ಜೂನ್-ಜುಲೈ ವೇಳೆಗೆ ನ್ಯಾಯಾಧಿಕರಣದಿಂದ ತೀರ್ಪು ಬರುತ್ತದೆ. ಆಗಸ್ಟ್ 2018ರ ವೇಳೆಗೆ ನ್ಯಾಯಾಧಿಕರಣದ ಅವಧಿ ಕೂಡ ಮುಕ್ತಾಯವಾಗುತ್ತದೆ. ಅದಕ್ಕೂ ಮುನ್ನ ಅವರು ತೀರ್ಪು ಪ್ರಕಟಿಸಬೇಕು ಎಂದು ನಾಡಕರ್ಣಿ ತಿಳಿಸಿದ್ರು.

    ಯಡಿಯೂರಪ್ಪರನ್ನ ನಂಬಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದಲ್ಲಿ ನ್ಯಾಯಾಧಿಕರಣದ ಮುಂದೆ ನನಗೆ ಕರ್ನಾಟಕ ವಿರೋಧಿ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಕರ್ನಾಟಕ ಹಾಗೂ ಕರ್ನಾಟಕದ ಯಾರನ್ನೂ ನಂಬುವುದಿಲ್ಲ. ಯಾಕಂದ್ರೆ ಟ್ರಿಬ್ಯುನಲ್ ತೀರ್ಪು, ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರವೂ ಕರ್ನಾಟಕ ಸುಗ್ರೀವಾಜ್ಞೆಗಳನ್ನ ತಂದಿರುವ ಇತಿಹಾಸವಿದೆ. ಆದ್ದರಿಂದ ನಾನು ಕರ್ನಾಟಕವನ್ನು ನಂಬಲು ಸಿದ್ಧವಿಲ್ಲ ಎಂದು ಹೇಳಿದ್ರು. ಗೋವಾ ಸಿಎಂ ಮನೋಹರ್ ಪರಿಕ್ಕರ್ ಪತ್ರ ಬರೆದಿದ್ದು ರಾಜಕೀಯ ಪರಿಹಾರಕ್ಕಷ್ಟೇ. ಯಡಿಯೂರಪ್ಪಗೆ ಬರೆದ ಪತ್ರಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಅಂದ್ರು.

    ಕುಡಿಯುವ ನೀರಿನ ಬೇಡಿಕೆಗೆ ಯಾರಿಂದಲೂ ವಿರೋಧ ವ್ಯಕ್ತಪಡಿಸಲು ಸಾಧ್ಯವೇ ಇಲ್ಲ. ಕರ್ನಾಟಕ 7.5 ಟಿಎಂಸಿ ನೀರು ಕೇಳ್ತಿದೆ. ಆದ್ರೆ ಅವರಿಗೆ ನಿರ್ದಿಷ್ಟವಾಗಿ ಎಷ್ಟು ಪ್ರಮಾಣದ ನೀರು ಅಗತ್ಯವಿದೆ? ಎಂಬ ಪ್ರಶ್ನೆಗೆ ಉತ್ತರಿಸಿ, ಜಲಾನಯನ ಪ್ರದೇಶದ ಬಳಕೆಯನ್ನ ಪರಿಗಣಿಸಿದ್ರೆ(ಹುಬ್ಬಳ್ಳಿ ಧಾರವಾಡ ಅಲ್ಲ) ಬೆಳಗಾವಿ, ಖಾನಪುರ, ಹುಬ್ಬಳಿ ಪ್ರದೇಶಕ್ಕೆ ಎಷ್ಟು ಕುಡಿಯುವ ನೀರು ಬೇಕೋ ಅದನ್ನು ಅವರು ತೆಗೆದುಕೊಳ್ಳಲು ಯಾವುದೇ ವಿರೋಧವಿಲ್ಲ. ಅದನ್ನು ನಾವು ಹೇಳಿದ್ದೇವೆ. ನಾವು ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಹೋರಾಟಗಾರರಂತೆ ಹೇಳಲು ಸಾಧ್ಯವಿಲ್ಲ. ಬೆಳಗಾವಿ ಖಾನಾಪುರ ಜನರಿಗೆ 0.1 ಟಿಎಂಸಿ ನೀರು ಬಿಟ್ಟರೆ ಸಾಕು ಎಂದು ಹೇಳಿದ್ರು.

    ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋವಾ ಪರ ವಕೀಲಿ ಮಾಡಬಹುದೇ?: ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ಆಯ್ಕೆಯಾಗುವ ವಕೀಲರು ಖಾಸಗಿ ಮೊಕದ್ದಮೆಗಳ ವಕೀಲಿ ಕೈಗೊಳ್ಳು­ವಂತಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಯ ಮೊಕದ್ದಮೆಗಳ ವಿನಃ ರಾಜ್ಯ ಸರ್ಕಾರಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳ ಪರ ವಕಾಲತ್ತು ಮಾಡಲು ಕೇಂದ್ರದ ಅನುಮತಿ ಪಡೆಯಬೇಕು. ಹೀಗಿರುವಾಗ ಎರಡೂ ರಾಜ್ಯಗಳ ನಡುವೆ ತಟಸ್ಥ ಧೋರಣೆ ಅನುಸರಿಸಬೇಕಾದ ಕೇಂದ್ರ ಸರ್ಕಾರ ಆತ್ಮಾರಾಮ ನಾಡಕರ್ಣಿ ಅವರಿಗೆ ಗೋವಾದ ಪರ ವಾದ ಮಾಡಲು ಅನುಮತಿ ನೀಡಿದ್ದು ಸರಿಯೇ ಎನ್ನುವ ಪ್ರಶ್ನೆ ಈ ಹಿಂದೆ ಎದ್ದಿತ್ತು. ಆದರೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ನೇಮಕಗೊಳ್ಳುವ ಮುನ್ನ ನಾಡಕರ್ಣಿ ಗೋವಾದ ಅಡ್ವೊಕೇಟ್ ಜನರಲ್ ಆಗಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆಪ್ತರು ಕೂಡ ಆಗಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನಾಡಕರ್ಣಿ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್‍ಗಳಲ್ಲಿ ಒಬ್ಬರನ್ನಾಗಿ ನೇಮಕ ಮಾಡಲಾಗಿದೆ.

    ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

  • ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್

    ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್

    ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಹದಾಯಿ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್ ಮಾಡಲು ಕಳಸಾ ಬಂಡೂರಿ ಮಹದಾಯಿ ಹೋರಾಟ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.

    ಕಳಸಾ ಬಂಡೂರಿ ರೈತ ಹಿತರಕ್ಷಣಾ ಸಮಿತಿ ಮುಖಂಡರು ಶುಕ್ರವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಪ್ರತಿಭಟಿಸಿದರು. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಇತ್ಯರ್ಥ ಪಡಿಸುವ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಗಳು ಮಾತು ತಪ್ಪಿವೆ ಎಂದು ಆರೋಪಿಸಿದರು.

    ನಿರೀಕ್ಷೆ ಹುಸಿಯಾದ ಹಿನ್ನೆಲೆಯಲ್ಲಿ ಈ ವೇಳೆ ಮಹದಾಯಿ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಬಣ, ಆಟೋ ಚಾಲಕರ ಸಂಘ, ಎಪಿಎಂಸಿ ವರ್ತಕರು ಬೆಂಬಲ ನೀಡಿದ್ದಾರೆ.

    ಮಹದಾಯಿ ವಿವಾದವನ್ನು ಬಗೆ ಹರಿಸಿಲು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಿ, ವಿವಾದಿತ ರಾಜ್ಯಗಳ ನಡುವೆ ಸಂಧಾನ ಮಾತುಕತೆ ಸಭೆ ನಡೆಸಬೇಕು. ಇದನ್ನು ಬಿಟ್ಟು ಪೊಳ್ಳು ಭರವಸೆ ನೀಡಿ ರೈತರ ಕಣ್ಣಿಗೆ ಮಣ್ಣೆರೆಚುವ ಕ್ರಮವನ್ನು ಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಪ್ರತಿಭಟನಾನಿರತು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇಂದಿನಿಂದ ಮಹದಾಯಿ ನೀರಿನ ಚಿಂತೆಯನ್ನು ಬಿಟ್ಟು ಬಿಡಿ: ಬಿಎಸ್‍ವೈ

    ಇದೇ ವೇಳೆ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು, ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಕಳಸಾ ಬಂಡೂರಿ ಯೋಜನೆಯನ್ನು ಬಳಸಿಕೊಳ್ಳುವದನ್ನು ಬಿಡಬೇಕು. ಬಿಜೆಪಿ ನಾಯಕರಿಗೆ ನಿಜವಾಗಲೂ ಈ ಭಾಗದ ಜನರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಧ್ಯಪ್ರವೇಶ ಮಾಡಲು ಒತ್ತಾಯಿಸಬೇಕು ಎಂದು ಅಗ್ರಹಿಸಿದರು. ಇದನ್ನೂ ಓದಿ: ಮಾತುಕತೆಗಷ್ಟೇ ಒಪ್ಪಿಗೆ, ನಮ್ಮ ಹಕ್ಕುಗಳಿಗೆ ತೊಂದರೆ ಆಗಬಾರದು ಪರಿಕ್ಕರ್ ಬರೆದ ಪತ್ರದಲ್ಲಿ ಏನಿದೆ?

    ಬಂದ್ ಗೆ ಕರೆ ನೀಡಿದ್ದರಿಂದ ಕಳಸಾ ಹೋರಾಟ ತೀವ್ರವಾಗಿರುವ ಗದಗ್, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಹಾವೇರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.

    https://www.youtube.com/watch?v=_JWv-dVmm8E