Tag: Mahadai

  • ಹುಬ್ಬಳ್ಳಿಯಲ್ಲಿ ನಡೆಯಿತು ಸರ್ವ ಪಕ್ಷಗಳ ನಾಯಕರ ಸಭೆ

    ಹುಬ್ಬಳ್ಳಿಯಲ್ಲಿ ನಡೆಯಿತು ಸರ್ವ ಪಕ್ಷಗಳ ನಾಯಕರ ಸಭೆ

    -ಸರ್ವ ಪಕ್ಷಗಳ ನಿರ್ಧಾರ ಪ್ರಕಟ

    ಧಾರವಾಡ/ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಬಗ್ಗೆ ಹುಬ್ಬಳ್ಳಿಯಲ್ಲಿಂದು ಮಹತ್ವದ ಸರ್ವ ಪಕ್ಷದ ಸಭೆಯನ್ನು ಮೂರು ಪಕ್ಷಗಳ ಜನಪ್ರತಿನಿಧಿಗಳು ನಡೆಸಿದ್ದು, ಪಕ್ಷಾತೀತವಾಗಿ ಯೋಜನೆ ಬಗ್ಗೆ ಕೆಲಸ ಮಾಡಲಾಗುವುದು ಸಭೆಯಲ್ಲಿ ಸರ್ವಸಮ್ಮತ ತೀರ್ಮಾನಕ್ಕೆ ಬರಲಾಗಿದೆ.

    ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ ಸಭೆ ನಡೆಯಿತು. ಒಂದು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಸಿದ ನಾಯಕರು ಹಲವು ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.

    ಸಭೆ ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ, ಮಹದಾಯಿ ವಿಚಾರವಾಗಿ ಮುಂದಿನ ಕ್ರಮದ ಬಗ್ಗೆ ಸಂಪೂರ್ಣ ಚರ್ಚಿಸಲಾಗಿದ್ದು, ಸಂಬಂಧಪಟ್ಟ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇನ್ನೂ ಮಹದಾಯಿ ವಿಚಾರವಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಇದೊಂದು ಉತ್ತಮ ಹೆಜ್ಜೆ ಆಗಿದ್ದು, ಬಹಳ ಶಾಂತ ರೀತಿಯಲ್ಲಿ ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

    ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಮಹದಾಯಿ ವಿಚಾರವಾಗಿ ಈ ಸಭೆ ಮೊದಲ ದಿಟ್ಟ ಹೆಜ್ಜೆಯಾಗಿದ್ದು, ಮಹದಾಯಿ ಸಮಸ್ಯೆಯ ಪರಿಹಾರಕ್ಕೆ ತಾರ್ತಿಕ ಅಂತ್ಯ ಹಾಕಲು ಈ ಸಭೆ ಮಹತ್ವವನ್ನು ಪಡೆದಿದೆ ಎಂದರು.

    ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಮಹದಾಯಿ ಯೋಜನೆ ವಿಚಾರವಾಗಿ ಕರೆದಿರುವ ಜನಪ್ರತಿನಿಧಿಗಳ ಸಭೆಯಲ್ಲಿ ಸರ್ವಪಕ್ಷಗಳ ಜನಪ್ರತಿನಿಧಿಗಳು ಭಾಗಿಯಾಗಿದ್ದು, ಪಕ್ಷಾತೀತವಾಗಿ ಕೆಲಸ ಮಾಡಲು ಈ ಸಭೆ ಸಹಾಯಕಾರಿ ಆಗಿದೆ. ಸಿದ್ದರಾಮಯ್ಯನವರು ಕೂಡಾ ಸಭೆಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಎಲ್ಲ ಶಾಸಕರು ಮಹದಾಯಿ ವಿಚಾರವಾಗಿ ಕಾನೂನು ತಜ್ಞರ ಜೊತೆಗೆ ಚರ್ಚಿಸಿ ಅಂತಿಮ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಪಕ್ಷಾತೀತವಾಗಿ ಯಾವುದೇ ದೋಷಾರೋಪಣೆ ಮಾಡದೇ, ಪಕ್ಷಗತ ರಾಜನೀತಿ ಬಿಟ್ಟು ಒಟ್ಟಿಗೆ ಸೇರಿರುವುದು ಒಳ್ಳೆಯ ವಿಚಾರ ಎಂದರು.

    ಸಭೆಯಲ್ಲಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಪ್ರಸಾದ್ ಅಬ್ಬಯ್ಯ, ಆನಂದ್ ಮಾಮನಿ, ಎಂಎಲ್ ಸಿ ಶ್ರೀನಿವಾಸ್ ಮಾನೆ, ಪ್ರದೀಪ್ ಶೆಟ್ಟರ್, ಮಾಜಿ ಶಾಸಕ ಕೋನರೆಡ್ಡಿ, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಉಪಸ್ಥಿತರಿದ್ದರು.

  • ಪ್ರಧಾನಿಗೆ ಒತ್ತಡ ಹೇರದಿದ್ದರೆ ಸಂಸದರು ರಾಜೀನಾಮೆ ನೀಡಲಿ – ರೈತ ಮಹಿಳೆ ಜಯಶ್ರೀ

    ಪ್ರಧಾನಿಗೆ ಒತ್ತಡ ಹೇರದಿದ್ದರೆ ಸಂಸದರು ರಾಜೀನಾಮೆ ನೀಡಲಿ – ರೈತ ಮಹಿಳೆ ಜಯಶ್ರೀ

    – ರಾಜ್ಯಕ್ಕಾಗಮಿಸಿದರೂ ನೆರೆ ಬಗ್ಗೆ ತುಟಿ ಬಿಚ್ಚಿಲ್ಲ

    ಬೆಳಗಾವಿ: ನೆರೆಯಿಂದ ಉತ್ತರ ಕರ್ನಾಟಕ ತತ್ತರಿಸಿದರೂ ಪರಿಹಾರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚುತ್ತಿಲ್ಲ. ಈ ಕುರಿತು ಪ್ರಧಾನಿಗೆ ಒತ್ತಡ ಹೇರಲು ಆಗದಿದ್ದರೆ ರಾಜ್ಯದ 25 ಸಂಸದರು ರಾಜೀನಾಮೆ ನೀಡಿ ಹೊರಬರಬೇಕು ಎಂದು ರೈತ ಮಹಿಳೆ ಜಯಶ್ರೀ ಗುರೆನ್ನವರ ಆಗ್ರಹಿಸಿದ್ದಾರೆ.

    ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದ ನಂತರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಎರಡು ಸಲ ಭೇಟಿ ನೀಡಿದ್ದಾರೆ. ಪರಿಹಾರ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗೆ 50 ಸಾವಿರ ಕೋಟಿ ರೂ., ನೀಡುವಂತೆ ಸಾರ್ವಜನಿಕ ಸಭೆಯಲ್ಲಿ ಸಿಎಂ ಕೋರಿದ್ದರು. ಆದರೂ ಪ್ರಧಾನಿ ಪರಿಹಾರ ಹಾಗೂ ವಿಶೇಷ ಅನುದಾನದ ಬಗ್ಗೆ ತುಟಿ ಬಿಚ್ಚಲಿಲ್ಲ. ಬಿಜೆಪಿಯ 25 ಸಂಸದರು ಗೆದ್ದು ದೆಹಲಿಗೆ ಹೋದರೂ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ಎಲ್ಲ ಸಂಸದರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜ.13ರಂದು ಬೆಂಗಳೂರಿನಲ್ಲಿ ಎಲ್ಲ ರೈತ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ. ಮಹದಾಯಿ ಯೋಜನೆ ಜಾರಿ, ತೊಗರಿ ಸೇರಿದಂತೆ ಎಲ್ಲ ಬೆಳೆಗಳಿಗೆ ಬೆಂಬಲ ಬೆಳೆ, ಕಬ್ಬಿನ ಬಾಕಿ ಬಿಲ್ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

  • ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ನರಗುಂದ ಬಂದ್

    ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ನರಗುಂದ ಬಂದ್

    ಗದಗ: ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ಆಗ್ರಹಿಸಿ ಇಂದು ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು.

    ರೈತಸೇನೆ ರೈತರ ನಿರಂತರ ಹೋರಾಟಕ್ಕೆ ಇಂದಿಗೆ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ರೈತ ಮುಖಂಡ ವೀರೇಶ ಸೊಬರದಮಠ ನೇತೃತ್ವದಲ್ಲಿ ಬಂದ್‍ಗೆ ಕರೆ ನೀಡಲಾಗಿತ್ತು. ಅಗಸ್ಟ್ 14, 2018 ರಂದು ಮಹದಾಯಿಗಾಗಿ ನ್ಯಾಯಾಧೀಕರಣದಿಂದ ರಾಜ್ಯಕ್ಕೆ 13.5 ಟಿಎಂಸಿ ನೀರು ಬಿಡುವಂತೆ ಆದೇಶ ನೀಡಲಾಗಿತ್ತು. ನ್ಯಾಯಾಧೀಕರಣ ತೀರ್ಪು ನೀಡಿ ವರ್ಷಗಳೇ ಕಳೆದರೂ ಯೋಜನೆ ಕಾರ್ಯ ರೂಪಕ್ಕೆ ಬಾರದ ಹಿನ್ನೆಲೆ ನರಗುಂದ ಬಂದ್ ಮಾಡುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಮಹದಾಯಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯವನ್ನು ವಿರೋಧಿಸಿ ರೈತ ಮುಖಂಡರು ಹೋರಾಟ ನಡೆಸಿದರು.

    ತಾಲೂಕಿನ ಚಿಕ್ಕನರಗುಂದ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸಹ ರಸ್ತೆಗೆ ಮುಳ್ಳಿನ ಬೇಲಿಹಾಕಿ ರಸ್ತೆಮಧ್ಯೆ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿದರು.

    ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಯ 11 ತಾಲೂಕಿನ ನೂರಾರು ರೈತರು ಹೋರಾಟ ನಡೆಸುವ ಮೂಲಕ ಎಚ್ಚರಿಕೆ ನೀಡಿದರು. ಬಂದ್ ಹಿನ್ನೆಲೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

  • ಗೋವಾ ಅಧಿಕಾರಿಗಳಿಂದ ಮತ್ತೆ ಮಹದಾಯಿ ವಿವಾದಿತ ಸ್ಥಳಕ್ಕೆ ಭೇಟಿ!

    ಗೋವಾ ಅಧಿಕಾರಿಗಳಿಂದ ಮತ್ತೆ ಮಹದಾಯಿ ವಿವಾದಿತ ಸ್ಥಳಕ್ಕೆ ಭೇಟಿ!

    ಬೆಳಗಾವಿ: ಈ ತಿಂಗಳಲ್ಲೇ ನ್ಯಾಯಾಧೀಕರಣದ ತೀರ್ಪು ಬರುವ ಮೊದಲೇ ಮಹದಾಯಿ ವಿವಾದಿತ ಸ್ಥಳಕ್ಕೆ ಗೋವಾ ಅಧಿಕಾರಿಗಳು ಮತ್ತೆ ಭೇಟಿ ನೀಡುವ ಉದ್ಧಟತನ ತೋರಿದ್ದಾರೆ.

    ಗೋವಾ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ದಿನೇಶ್ ಮಹಾಲೆ ಸೇರಿ 8 ಜನರ ತಂಡ ಅನುಮತಿಯಿಲ್ಲದೆ ಕಳಸಾ ಬಂಡೂರಿ ಕಾಮಗಾರಿ ಸ್ಥಳಕ್ಕೆ ಬುಧವಾರ ಆಗಮಿಸಿತ್ತು. ಖಾನಾಪೂರದ ಜಾಂಬೋಟಿ ಔಟ್‍ಪೋಸ್ಟ್ ಬಳಿ ಪೊಲೀಸರು ವಿಚಾರಿಸಿದಾಗ ಮೊದಲಿಗೆ ದೇವಸ್ಥಾನಕ್ಕೆ ಹೋಗ್ತಿದ್ದೇವೆ ಅಂತ ಹೇಳಿದ್ದಾರೆ. ಮತ್ತಷ್ಟು ವಿಚಾರಣೆಗೆ ಮುಂದಾದಾಗ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

    ಔಟ್‍ಪೋಸ್ಟ್ ನಲ್ಲಿ ಭೇಟಿ ಬಗ್ಗೆ ಲಿಖಿತ ಹೇಳಿಕೆ ನೀಡುವಾಗ ಗೋವಾ ಸರ್ಕಾರದ ಅಣತಿಯಂತೆ ಬಂದಿರುವುದಾಗಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಅಲ್ಲದೆ, ವಾಪಸ್ ಗೋವಾಗೆ ತೆರಳಿ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಅಂತ ಆರೋಪಿಸಿದ್ದಾರೆ.

    ಇದೇ ಜನವರಿ 13ಕ್ಕೆ ಸಹ ಕಳಸಾ-ಬಂಡೂರಿ ಕಾಮಗಾರಿಯ ಕಣಕುಂಬಿಗೂ ಗೋವಾ ಅಧಿಕಾರಿಗಳು ಭೇಟಿ ನೀಡಿದ್ದರು. ಬಳಿಕ, ಗೋವಾ ಅಧಿಕಾರಿಗಳು, ನೀರಾವರಿ ಸಚಿವರು ಧಿಮಾಕಿನ ಹೇಳಿಕೆಗಳನ್ನ ನೀಡಿದ್ದರು.

  • ಮಹದಾಯಿ ರೈತರಿಂದ ದೆಹಲಿಯಲ್ಲಿ ಗಡ್ಕರಿ ಭೇಟಿ

    ಮಹದಾಯಿ ರೈತರಿಂದ ದೆಹಲಿಯಲ್ಲಿ ಗಡ್ಕರಿ ಭೇಟಿ

    ನವದೆಹಲಿ: ಮಹದಾಯಿ ವಿಚಾರವಾಗಿ ಇಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನ ರಾಜ್ಯ ರೈತರ ನಿಯೋಗ ಭೇಟಿ ಮಾಡಿತು.

    ಮಹದಾಯಿ ವ್ಯಾಪ್ತಿಯ ಮೂರು ಜಿಲ್ಲೆಯ 23 ಮಂದಿ ರೈತರ ನಿಯೋಗ ನವದೆಹಲಿಯ ಸಾರಿಗೆ ಭವನದಲ್ಲಿ ಸಚಿವರನ್ನ ಭೇಟಿಯಾದ್ರು. ಭೇಟಿ ವೇಳೆ ಮಹಾದಾಯಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು ಜೊತೆಗೆ ನ್ಯಾಯಾಧೀಕರಣದಲ್ಲಿರುವ ವ್ಯಾಜ್ಯದ ತೀರ್ಪು ಶೀಘ್ರ ನೀಡುವಂತೆ ಮನವಿ ಮಾಡಿದರು.

    ಮನವಿ ಸ್ವೀಕರಿಸಿದ ನಿತಿನ್ ಗಡ್ಕರಿ ನ್ಯಾಯಾಧೀಕರಣದಲ್ಲಿ ವಿವಾದ ತೀರ್ಪಿನ ಹಂತದಲ್ಲಿದೆ. ಈ ವೇಳೆ ಮಧ್ಯ ಪ್ರವೇಶ ಸಾಧ್ಯವಿಲ್ಲ. ಜುಲೈಯೊಳಗೆ ಮಹದಾಯಿ ತೀರ್ಪು ಬರಲಿದೆ. ಒಂದು ವೇಳೆ ಬಾರದಿದ್ದಲ್ಲಿ ಆಗಸ್ಟ್ ಒಂದರ ಬಳಿಕ ಮತ್ತೊಮ್ಮೆ ಭೇಟಿಯಾಗುವಂತೆ ರಾಜ್ಯ ರೈತ ನಿಯೋಗಕ್ಕೆ ಸೂಚಿಸಿದ್ದಾರೆ.

    ರೈತ ನಿಯೋಗದ ನೇತೃತ್ವ ವಹಿಸಿದ್ದ ಸಹ್ಯಾದ್ರಿ ಜಲಜನ ಸೊಸೈಟಿ ಮಹದಾಯಿ ಸಣ್ಣ ನೀರಾವರಿ ಯೋಜನೆ ಕುರಿತಾದ ಪ್ಲಾನ್ ಸಿದ್ಧಪಡಿಸಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಸಲ್ಲಿಸಿತು. ಪ್ಲಾನ್ ಸ್ವೀಕರಿಸಿದ ನಿತಿನ್ ಗಡ್ಕರಿ ತೀರ್ಪಿನ ಬಳಿಕ ಪರಿಶೀಲಿಸುವ ಭರವಸೆ ನೀಡಿದರು.ಇದನ್ನೂ ಓದಿ:ಕಳಸಾ ಬಂಡೂರಿ ವಿವಾದ – ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್

  • ಮಹದಾಯಿಗಾಗಿ ಒಂದಾಗಿದೆ ಉತ್ತರ ಕರ್ನಾಟಕ ಜನತೆ- ಹುಬ್ಬಳ್ಳಿ, ಧಾರವಾಡ ಸಂಪೂರ್ಣ ಬಂದ್

    ಮಹದಾಯಿಗಾಗಿ ಒಂದಾಗಿದೆ ಉತ್ತರ ಕರ್ನಾಟಕ ಜನತೆ- ಹುಬ್ಬಳ್ಳಿ, ಧಾರವಾಡ ಸಂಪೂರ್ಣ ಬಂದ್

    ಧಾರವಾಡ: ಮಹದಾಯಿಗಾಗಿ ಉತ್ತರ ಕರ್ನಾಟಕದ ಜನತೆ ಒಂದಾಗಿದ್ದು, ಹುಬ್ಬಳ್ಳಿ, ಧಾರವಾಡ, ಗದಗ ಸಂಪೂರ್ಣ ಬಂದ್ ಆಗಿದೆ. ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಬಸ್ ಸಂಚಾರ ಸಂಪೂರ್ಣ ರದ್ದಾಗಿದೆ. ಕೇಂದ್ರ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು, ಜನಸಾಮನ್ಯರು ಬಸ್‍ಗಳಿಲ್ಲದೆ ಪರದಾಡುತ್ತಿದ್ದಾರೆ.

    ಹುಬ್ಬಳ್ಳಿಯಲ್ಲಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಪ್ರತಿಭಟನಾಕಾರರು ಭಜನೆ ಮಾಡುತ್ತಾ ನಗರದಲ್ಲೆಡೆ ಸಂಚರಿಸುತ್ತಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಕಲ್ಲು ತೂರಾಟ ಸಹ ನಡೆದಿದೆ ಎಂದು ತಿಳಿದು ಬಂದಿದೆ.

    ಧಾರವಾಡದ ಅಳ್ನಾವರ್ ಹೋಟೆಲ್ ಬಳಿ ಧಾರವಾಡ-ಗೋವಾ ರಸ್ತೆ ಬಂದ್ ಮಾಡಲಾಗಿದೆ. ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾ ಅಧ್ಯಕ್ಷ ಗಿರೀಶ್ ಪೂಜಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಿಂದ ಗೋವಾದತ್ತ ತೆರಳುತ್ತಿರುವ ವಾಹನಗಳನ್ನು ತಡೆದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಕರ್ನಾಟಕ ಬಂದ್‍ಗೆ ಯಾರ ಬೆಂಬಲ ಇದೆ, ಯಾರ ಬೆಂಬಲ ಇಲ್ಲ- ಇಲ್ಲಿದೆ ಸಂಪೂರ್ಣ ಮಾಹಿತಿ

    ಕರ್ನಾಟಕ ಬಂದ್‍ಗೆ ಯಾರ ಬೆಂಬಲ ಇದೆ, ಯಾರ ಬೆಂಬಲ ಇಲ್ಲ- ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ, ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿರುವ ಬಂದ್ ರಾಜಕೀಯ ತಿರುವು ಪಡೆದುಕೊಂಡಿದೆ. ಬಂದ್‍ಗೆ ಕೆಲವು ಸಂಘಟನೆಗಳು ಬೆಂಬಲ ನೀಡಿದ್ರೆ, ಮತ್ತೆ ಕೆಲವರು ಬಂದ್‍ಗೆ ಬೆಂಬಲ ಘೋಷಿಸಿಲ್ಲ.

    ಕಾಂಗ್ರೆಸ್ ಪ್ರಾಯೋಜಿತ ಬಂದ್ ಅಂತ ಬಿಜೆಪಿ ಆರೋಪ ಮಾಡುತ್ತಿದೆ. ಆದ್ರೆ ಇದಕ್ಕೆ ಸೊಪ್ಪು ಹಾಕದ ವಾಟಾಳ್ ನಾಗರಾಜ್, ಬಿಜೆಪಿ ಹೇಳಿದಕ್ಕೆಲ್ಲ ತಲೆಕೆಡಿಸಿಕೊಡಲ್ಲ ಬಂದ್ ನಡೆಸೇ ನಡೆಸುತ್ತೇನೆ ಅಂತಾ ಹೇಳಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರು ಬಂದ್‍ಗೆ ಬೆಂಬಲ ಸೂಚಿಸಿಲ್ಲ. ಕರವೇ ಮತ್ತೊಂದು ಬಣದ ಪ್ರವೀಣ್ ಶೆಟ್ಟಿ ಫೆಬ್ರವರಿ ನಾಲ್ಕರಂದು ಬೆಂಗಳೂರು ಬಂದ್‍ಗೆ ಬೆಂಬಲ ನೀಡಲ್ಲ ಮತ್ತು ಬಂದ್ ಪದೇ ಪದೇ ನಡೆಸೋದು ಸರಿಯಲ್ಲ. ನಾವು ವಾಟಾಳ್ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಅಷ್ಟೇ ಅಂತ ಹೇಳಿದ್ದಾರೆ.

    ಬಂದ್‍ಗೆ ಯಾರ ಬೆಂಬಲ ಇದೆ?
    ಸದ್ಯದ ಮಟ್ಟಿಗೆ ಕನ್ನಡ ಚಿತ್ರೋದ್ಯಮ ಬೆಂಬಲ ಕೊಟ್ಟಿದ್ದು, ಚಿತ್ರೀಕರಣ ಹಾಗೂ ಚಿತ್ರಪ್ರದರ್ಶನ ರದ್ದಾಗಲಿದೆ. ಕೆಲ ಆಟೋ ಸಂಘಟನೆ, ಎಪಿಎಂಸಿ ನೌಕರರ ಸಂಘ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಬೆಂಬಲ ಕೊಟ್ಟಿದೆ. ಸರ್ಕಾರ ಬಂದ್‍ಗೆ ಬೆಂಬಲ ನೀಡೋದ್ರಿಂದ ಸಾರಿಗೆ ಸಂಸ್ಥೆಯೂ ಬೆಂಬಲ ನೀಡುವ ಸಾಧ್ಯತೆಗಳಿವೆ. ಮಕ್ಕಳ ಹಿತದೃಷ್ಟಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ನಾಳೆ ನಡೆಯಲಿರುವ ಬಂದ್ ಗೆ ಕನ್ನಡ ಚಿತ್ರೋದ್ಯಮದ ಸಂಪೂರ್ಣ ಸಹಕಾರ ಇರುತ್ತೆ. ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣವನ್ನು ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಗೆ ವರೆಗೆ ಬಂದ್ ಮಾಡಲಿದ್ದೇವೆ. ಆದರೆ ಈ ಬಂದ್ ನಲ್ಲಿ ಚಲನಚಿತ್ರ ಕಲಾವಿದರು ಪಾಲ್ಗೊಳ್ಳುವುದಿಲ್ಲ. ಆದರೆ ಸಹಕರಿಸಿ ಬೆಂಬಲ ನೀಡುತ್ತಿದ್ದೇವೆ. ಸಂಜೆ ವೇಳೆಗೆ ಕರ್ನಾಟಕ ಬಂದ್ ಯಶಸ್ವಿಯಾಗೋದರ ಬಗ್ಗೆ ಸ್ಪಷ್ಟ ಚಿತ್ರಣ ಸಾಧ್ಯತೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ತಿಳಿಸಿದ್ದಾರೆ.

    ಯಾರು ಬೆಂಬಲ ಘೋಷಿಸಿಲ್ಲ?
    ಟ್ಯಾಕ್ಸಿ ಮಾಲೀಕರ ಸಂಘ, ಹೊಟೇಲ್ ಮಾಲೀಕರ ಸಂಘ, ಕೆಲ ಆಟೋ ಸಂಘಟನೆ, ವರ್ತಕರು ಇನ್ನೂ ಕೂಡ ಬೆಂಬಲ ಘೋಷಿಸಿಲ್ಲ. ಮೆಟ್ರೋ ಸಂಚಾರದಲ್ಲೂ ಯಾವುದೇ ವ್ಯತ್ಯಯ ಇಲ್ಲ. ಮೆಟ್ರೋ ರೈಲು ಎಂದಿನಂತೆ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ಓಡಲಿದೆ ಎಂದು ಮೆಟ್ರೋ ಅಧಿಕಾರಿಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಓಲಾ ಮತ್ತು ಊಬರ್ ಎಂದಿನಂತೆ ಸಂಚಾರ ನಡೆಸಲಿವೆ.

    ನಾಳೆ ನಡೆಯೋ ಬಂದ್ ಗೆ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕ ಸಂಘಟನೆಗಳಿಂದ ಬೆಂಬಲ ನೀಡುತ್ತಿಲ್ಲ. ಎಂದಿನಂತೆ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಬಸ್‍ಗಳು ಸಂಚಾರ ಮಾಡಲಿವೆ. ಕೆಎಸ್‍ಆರ್‍ಟಿಸಿ ಆನ್‍ಲೈನ್ ಬುಕಿಂಗ್ ಗೆ ಯಾವುದೇ ಸಮಸ್ಯೆಯಿಲ್ಲ. ಎಲ್ಲಾ ಬಸ್ ಗಳು ಸಂಚಾರ ನಡೆಸಲಿವೆ ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ದೊರೆಕಿದೆ.

  • ಮಹದಾಯಿಗಾಗಿ ಸುಳ್ಳು ಸಾಕ್ಷಿ ಹೇಳಲು ಕರ್ನಾಟಕದಿಂದ 50 ಸಾವಿರ ರೂ. ಲಂಚ: ಗೋವಾ ಸಚಿವ

    ಮಹದಾಯಿಗಾಗಿ ಸುಳ್ಳು ಸಾಕ್ಷಿ ಹೇಳಲು ಕರ್ನಾಟಕದಿಂದ 50 ಸಾವಿರ ರೂ. ಲಂಚ: ಗೋವಾ ಸಚಿವ

    ಬೆಂಗಳೂರು: ಕನ್ನಡಿಗರನ್ನು ಹರಾಮಿಗಳು ಎಂದಿದ್ದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ. ಕರ್ನಾಟಕದ ವಿರುದ್ಧ ಸುಳ್ಳು ಸಾಕ್ಷಿಯ ಆರೋಪ ಮಾಡಿದ್ದಾರೆ.

    ಈ ಕುರಿತು ರಾಷ್ಟ್ರೀಯ ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಮಹದಾಯಿ ಬಗ್ಗೆ ಸುಳ್ಳು ಸಾಕ್ಷಿ ಹೇಳಲು ಕರ್ನಾಟಕ ಸರ್ಕಾರ ಸಾಕ್ಷಿಗಳಿಗೆ 50 ಸಾವಿರ ಲಂಚ ನೀಡುತ್ತಿದೆ. ಗೋವಾ ಸರ್ಕಾರ ಮಾತ್ರ ಸಾಕ್ಷಿಗಳಿಗೆ ನಯಾಪೈಸೆ ಕೊಟ್ಟಿಲ್ಲ ಎಂದು ಮತ್ತೆ ತಮ್ಮ ಬಾಯಿ ಹರಿಬಿಟ್ಟಿದ್ದಾರೆ.

    ಮಹದಾಯಿ ಸಮಸ್ಯೆಯ ನ್ಯಾಯಾಧೀಕರಣದ ವಿಚಾರಣೆ ಫೆಬ್ರವರಿ 6 ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಪಾಲ್ಯೇಕರ್ ಮತ್ತೊಮ್ಮೆ ಕರ್ನಾಟಕ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

    ಕೆಲವೇ ದಿನಗಳ ಹಿಂದೆ ಕಣಕುಂಬಿಗೆ ಭೇಟಿ ನೀಡಿದ್ದ ಪಾಲ್ಯೇಕರ್, ಕರ್ನಾಟಕ ಸರ್ಕಾರ ನ್ಯಾಯಾಧೀಕರಣ ಆದೇಶ ವಿರುದ್ಧವಾಗಿ ಡ್ಯಾಂ ನಿರ್ಮಾಣ ಕಾರ್ಯ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಕುರಿತು ಪಣಜಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪಾಲ್ಯೇಕರ್ ಕರ್ನಾಟಕದವರು ಹರಾಮಿಗಳು ಎಂದು ಹೇಳಿಕೆ ಕೊಟ್ಟಿದ್ದರು. ನಂತರ ಕನ್ನಡಿಗರ ಆಕ್ರೋಶಕ್ಕೆ ಒಳಗಾದ ಕಾರಣ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಅವರು, ನ್ಯಾಯಾಧೀಕರಣದ ನಿಯಮಗಳ ಆನ್ವಯ ಮಹದಾಯಿ ನೀರಾವರಿ ಕಮಿಟಿ ಕನಿಷ್ಟ ವಾರಕ್ಕೆ ಒಮ್ಮೆಯಾದರು ವಿವಾದಿತ ಸ್ಥಳಕ್ಕೆ ಭೇಟಿ ನೀಡಬಹುದು. ಅಲ್ಲದೇ ಆ ಪ್ರದೇಶದಲ್ಲಿ ನಡೆಯುವ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳನ್ನು ಪರಿಗಣಿಸಬಹುದು. ಅಗತ್ಯ ವೇಳೆ ಸ್ಥಳಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಬಗ್ಗೆ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿ ನೀಡಬಹುದು ಎಂಬ ನಿಯಮಗಳ ಪಟ್ಟಿಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

    ಈ ಕುರಿತ ಸರಣಿ ಟ್ವೀಟ್‍ಗಳಲ್ಲಿ ಕರ್ನಾಟಕ ಸಚಿವರು ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿ ಅಭಿವೃದ್ಧಿ ಮಾಡಿಲ್ಲ ಎನ್ನುತ್ತಾರೆ. ಆದರೆ ಈ ಕುರಿತು ವಿಡಿಯೋ ಸಮೇತ ಸಾಕ್ಷ್ಯವನ್ನು ನ್ಯಾಯಾಲಯದಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

     

    ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಟ್ವೀಟ್ ಗೆ ರಾಜ್ಯ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಟ್ವಿಟ್ಟರ್ ಮೂಲಕವೇ ತಿರುಗೇಟು ನೀಡಿದ್ದಾರೆ. ನಮ್ಮ ನಾಡ ರಕ್ಷಣೆಯ ಪಾಠ ನಿಮ್ಮಿಂದ ಕಲಿಯಬೇಕಿಲ್ಲ. ನೀವು ಅಲ್ಲ, ನಿಮ್ಮಂತ ಸಾವಿರ ಜನರು ಬಂದರು ನಮನ್ನು ಬಗ್ಗಿಸಲು ಸಾಧ್ಯವಿಲ್ಲ. ಮಹಾದಾಯಿ ಭಿಕ್ಷೆ ಅಲ್ಲ, ಅದು ನಮ್ಮ ಹಕ್ಕು ಎಂದು ಟಾಂಗ್ ನೀಡಿದ್ದಾರೆ.

     

     

  • ರಾಜ್ಯದ ಜನತೆಗೆ ಸಾಲು ಸಾಲು ರಜೆಯ ಭಾಗ್ಯವನ್ನು ಕೊಟ್ಟ ವಾಟಾಳ್ ನಾಗರಾಜ್

    ರಾಜ್ಯದ ಜನತೆಗೆ ಸಾಲು ಸಾಲು ರಜೆಯ ಭಾಗ್ಯವನ್ನು ಕೊಟ್ಟ ವಾಟಾಳ್ ನಾಗರಾಜ್

    ಬೆಂಗಳೂರು: ಅನ್ನ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಇನ್ನಿತರ ಭಾಗ್ಯಗಳನ್ನು ನೀವು ಕೇಳಿರಬಹುದು. ಆದರೆ ಈಗ ವಾಟಾಳ್ ನಾಗರಾಜ್ ಅವರು ರಾಜ್ಯದ ಜನತೆಗೆ ರಜೆಯ ಭಾಗ್ಯವನ್ನು ಕೊಟ್ಟಿದ್ದಾರೆ. ಮಹದಾಯಿ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಜನವರಿ 27 ರಂದು ಕರೆ ನೀಡಿದ್ದ ಬಂದ್ ದಿನಾಂಕ ದಿಢೀರ್ ಬದಲಾಗಿದ್ದು ಜನವರಿ 25 ರಂದು ನಡೆಸಲು ಮುಂದಾಗಿವೆ.

    ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್ ಪ್ರಧಾನಿ ಮೋದಿ ಅವರು ಜನವರಿ 28 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹದಾಯಿ ವಿಚಾರದಲ್ಲಿ ಅವರ ಮೌನವನ್ನು ಖಂಡಿಸಿ ಮತ್ತಿ ಶೀಘ್ರ ವಿವಾದ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮೋದಿ ಭೇಟಿಯ ಮುನ್ನ ದಿನವಾದ ಜ.27 ರಂದು ಬಂದ್ ನಡೆಸುತ್ತಿರುವುದಾಗಿ ಹೇಳಿದ್ದರು.  ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಈ ಸುದ್ದಿಗೋಷ್ಠಿ ನಡೆದು ಒಂದು ದಿನ ಕಳೆಯುವಷ್ಟರಲ್ಲಿ ಗುರುವಾರ ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್ ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಬಂದ್ ದಿನಾಂಕವನ್ನು ಬದಲಾವಣೆ ಮಾಡಿದ್ದು, ಇದೇ 25 ರಂದು ಕರೆ ನೀಡಿರುವುದಾಗಿ ತಿಳಿಸಿದ್ದಾರೆ.

    ಸಾಲು ಸಾಲು ರಜೆಗಳು: ಜನವರಿ 26 ಶುಕ್ರವಾರ ಗಣರಾಜ್ಯೋತ್ಸವ, 27 ನಾಲ್ಕನೇಯ ಶನಿವಾರ ಆಗಿರುವ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಶನಿವಾರ ಖಾಸಗಿ ಕಂಪೆನಿಗಳಿಗೂ ರಜೆ ಇರುತ್ತದೆ. ಇನ್ನು ಭಾನುವಾರ ಹೇಗೂ ವಾರದ ರಜೆ. ಈ ಮಧ್ಯೆ ಈಗ 25ಕ್ಕೆ ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಲಾಗಿದೆ. ಗುರುವಾರ ನಡೆಯಲಿರುವ ಬಂದ್ ಬೆಂಬಲ ನೀಡದ ಜನರಿಗೆ ಒಟ್ಟಿನಲ್ಲಿ ದೀರ್ಘ ರಜೆ ಸಿಗಲಿದೆ. ಹೀಗಾಗಿ ಜನವರಿ 25ರಂದು ನಡೆಯುವ ಬಂದ್ ಗೆ ಜನ ಹೇಗೆ ಬೆಂಬಲ ನೀಡುತ್ತಾರೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಇದನ್ನೂ ಓದಿ: ಕರ್ನಾಟಕದ ಜನರೇ ಮತ್ತೊಂದು ಬಂದ್‍ಗೆ ರೆಡಿಯಾಗಿ

    ಗೋವಾ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್, ಪರಿಕ್ಕರ್ ಒಬ್ಬ ನಾಲಾಯಕ್. ಅವರು ಗ್ರಾಮ ಪಂಚಾಯತ್ ಸದಸ್ಯರಾಗಲು ಆರ್ಹರಲ್ಲ. ಅವರೊಬ್ಬ ಬೇಜವಾಬ್ದಾರಿ ಮುಖ್ಯಮಂತ್ರಿಯಾಗಿದ್ದು, ಮಹದಾಯಿ ವಿಚಾರದಲ್ಲಿ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕಿತ್ತು. ಗೋವಾ ಸಿಎಂ ಯಡಿಯೂರಪ್ಪಗೆ ಪತ್ರ ಬರೆದದ್ದು ತಪ್ಪು. ಗೋವಾ ಸಿಎಂ ಯಾವ ಆಧಾರದದಲ್ಲಿ ಪತ್ರ ಬರೆದಿದ್ದಾರೆ ಎನ್ನುವುದಕ್ಕೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

    ಈ ವೇಳೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್ ಅವರು, ಕರ್ನಾಟಕ ಬಂದ್ ಗೆ ಚಿತ್ರರಂಗ ಕೂಡ ಸಂಪೂರ್ಣ ಬೆಂಬಲ ನೀಡಲಿದೆ. ಅಂದು ಯಾವುದೇ ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣ ಸೇರಿದಂತೆ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಇರುವುದಿಲ್ಲ. ಪ್ರಧಾನಿ ಮೋದಿ ಕರ್ನಾಟಕದ ಕುಡಿಯೋ ನೀರಿನ ಬಗ್ಗೆ ಮೌನವಾಗಿದ್ದಾರೆ. ಕರ್ನಾಟಕದ ಜನರು ಮೋದಿಯವರ ಗುಲಾಮರಲ್ಲ. ಮಹದಾಯಿ ಯೋಜನೆಯನ್ನು ಮೋದಿಯವರು ಕಡೆಗಣಿಸಿದ್ದಾರೆ. ಹೀಗಾಗಿ ಮೋದಿ ರಾಜ್ಯಕ್ಕೆ ಬರುವ ದಿನ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ತೀವ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜನವರಿ 31ರ ಒಳಗಡೆ ಮಹದಾಯಿ ವಿವಾದ ಇತ್ಯರ್ಥಗೊಳಿಸಿ: ರಾಜಕೀಯ ಪಕ್ಷಗಳಿಗೆ ಡೆಡ್‍ಲೈನ್

    ಬಿಜೆಪಿಯ 75 ದಿನಗಳ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ನವೆಂಬರ್ 2ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಚಾಲನೆ ನೀಡಿದ್ದರು. ಯಾತ್ರೆಯ ಸಮಾರೋಪ ಸಮಾರಂಭ ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಇದನ್ನೂ ಓದಿ:  ಮಹದಾಯಿ ನದಿ ಮೇಲೆ 3 ರಾಜ್ಯದ ಹಕ್ಕಿದೆ, ಬೇರೆ ನದಿಪಾತ್ರಕ್ಕೆ ನೀರು ಹರಿಸಲು ಸಾಧ್ಯವಿಲ್ಲ: ಮನೋಹರ್ ಪರಿಕ್ಕರ್


     
  • ದಕ್ಷ, ಪ್ರಾಮಾಣಿಕ ಸರ್ಕಾರ ನೀಡುತ್ತೆನೆಂದು ರಕ್ತದಲ್ಲಿ ಬರೆದುಕೊಡ್ತೇನೆ: ಬಿಎಸ್‍ವೈ

    ದಕ್ಷ, ಪ್ರಾಮಾಣಿಕ ಸರ್ಕಾರ ನೀಡುತ್ತೆನೆಂದು ರಕ್ತದಲ್ಲಿ ಬರೆದುಕೊಡ್ತೇನೆ: ಬಿಎಸ್‍ವೈ

    ಧಾರವಾಡ: ಮುಂದಿನ ಚುನಾವಣೆಯಲ್ಲಿ ನಮ್ಮನ್ನ ಗೆಲ್ಲಿಸಿ ಆಡಳಿತಕ್ಕೆ ತಂದರೆ. ದಕ್ಷ ಹಾಗೂ ಪ್ರಾಮಾಣಿಕ ಸರ್ಕಾರ ನೀಡುತ್ತೇನೆ. ಇದನ್ನ ರಕ್ತದಲ್ಲಿ ಬರೆದುಕೊಡ್ತೆನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು.

    ಧಾರವಾಡ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಣ್ಣಿದ್ದರೂ ಕುರುಡರಂತೆ ಮಾಡುತ್ತಿದೆ. ಮಹದಾಯಿ ನದಿ ಜೋಡಣೆಗಾಗಿ 15 ದಿನಗಳಲ್ಲಿ ಗೋವಾ ಹಾಗೂ ಪ್ರಧಾನಿ ಮೋದಿಗೆ ಭೇಟಿ ಮಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡುತ್ತೇವೆ. ಪರಿವರ್ತನ ಯಾತ್ರೆಯ ಮೊದಲೇ ಈ ಸಮಸ್ಯೆಯನ್ನು ಇತ್ಯರ್ಥ ಮಾಡಿ ಈ ಭಾಗಕ್ಕೆ ಬರುತ್ತೇನೆಂದು. ಇನ್ನು ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದ ಮಹದಾಯಿ ಸಮಸ್ಯೆ ಆಗಿದೆ. ಸದ್ಯ ಟ್ರಿಬ್ಯುನಲ್‍ನಲ್ಲಿ ಸಿಕ್ಕಿಕೊಳ್ಳಲು ಹಿಂದಿನ ಸರ್ಕಾರಗಳೇ ಕಾರಣ ಎಂದು ಕಿಡಿಕಾರಿದರು. ಹೋರಾಟಗಾರರು ತಮ್ಮ ಮಹದಾಯಿ ಹೋರಾಟ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಪ್ರಧಾನ ಮಂತ್ರಿ ಫಸಲ ವಿಮಾ ಯೋಜನೆ ತಂದಿದೆ. ಆದರೆ ರಾಜ್ಯ ಸರ್ಕಾರದ ತಪ್ಪಿನಿಂದ ರೈತರಿಗೆ ತೊಂದರೆಯಾಗುತ್ತಿದೆ. ಯಡಿಯೂರಪ್ಪನವರು ಗುಡುಗಿದ ನಂತರ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದೆ. ಹಿಂದೆ ಯಡಿಯೂರಪ್ಪ ಡಿಸಿಎಂ ಹಾಗೂ ನಾನು ಸಿಎಂ ಇದ್ದಾಗ ಕೂಡಾ ಸಾಲ ಮನ್ನಾ ಮಾಡಿದ್ದೇವೆ. ಸರ್ಕಾರ ಇವತ್ತು ಷರತ್ತುಗಳನ್ನ ಹಾಕಿ ಸಾಲ ಮನ್ನಾ ಮಾಡುತ್ತಿದೆ. ಆದರೆ ರೈತರಿಗೆ ಇದೂವರೆಗೆ ಅಕೌಂಟಿಗೆ ಹಣನೇ ಬಂದಿಲ್ಲ ಎಂದು ಗುಡುಗಿದರು.

    ಯುಪಿಯ ಆದಿತ್ಯನಾಥ ಸರ್ಕಾರ ರೈತರ 1 ಲಕ್ಷ ಸಾಲ ಮನ್ನಾ ಮಾಡಿದೆ. ಅವರು ಮಾಡಿದ ಸಾಲ ಮನ್ನಾ ಆರ್ಡರ್ ಕಾಪಿ ತಂದು ನೋಡಿ. ಅವರು ರಾಷ್ಟ್ರೀಕೃತ ಬ್ಯಾಂಕಿನ ಸಾಲ ಕೂಡಾ ಮನ್ನಾ ಮಾಡಿದ್ದಾರೆ. ನಿಮ್ಮಂತೆ ಕೇಂದ್ರದ ಕಡೆ ಅವರು ಬೊಟ್ಟು ಮಾಡಿಲ್ಲ ಎಂದು ಶೆಟ್ಟರ್ ಹೇಳಿದರು.