ಕಾರವಾರ: ರಾಜ್ಯ ಸರ್ಕಾರ ಮತ್ತಷ್ಟು ಲಾಕ್‍ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ದೇವಸ್ಥಾನಗಳಿಗೆ ಭಕ್ತರಿಗೆ ಪ್ರವೇಶಕ್ಕೆ ಅನುಮತಿ ನೀಡಿದೆ. ಆದರೆ ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ನಾಳೆ ಭಕ್ತರಿಗೆ ಯಾವುದೇ ದರ್ಶನಕ್ಕೆ ಅವಕಾಶವಿಲ್ಲ ಎಂದು ಎಸಿ ಅಜಿತ್ ಎಂ. ಪಬ್ಲಿಕ್ ಟಿ.ವಿಗೆ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ನಿಯಮದಂತೆ ದೇವಸ್ಥಾನದಲ್ಲಿ ನಿತ್ಯದ ಪೂಜೆ ಸಲ್ಲಿಸಲು ಇಬ್ಬರು ಅರ್ಚಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು ಆತ್ಮಲಿಂಗ ದರ್ಶನಕ್ಕೆ ಅವಕಾಶ ವನ್ನು ನಿರ್ಬಂಧಿಸಲಾಗಿದೆ.

ಜುಲೈ 5 ರ ವರೆಗೂ ಭಕ್ತರಿಗೆ ಆತ್ಮಲಿಂಗ ದರ್ಶನ ನಿರ್ಬಂಧವಿದ್ದು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರತಿ ತಲುಪಿದ ನಂತರ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಉಳಿದಂತೆ ದೇವಸ್ಥಾನದ ಹೊರಭಾಗದಿಂದ ದೇವರ ದರ್ಶನ ಹಾಗೂ ಶ್ರಾದ್ಧ ಕಾರ್ಯಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಶಾಸಕರು ಸೂಚಿಸುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು: ಜೆ.ಸಿ ಮಾಧುಸ್ವಾಮಿ
ಇಂದು ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಲಾಕ್ ಡೌನ್ ಮತ್ತಷ್ಟು ಸಡಿಲಗೊಳಿಸಿ ಘೋಷಣೆ ಮಾಡಿದರು. ಸರ್ಕಾರಿ, ಖಾಸಗಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು, ಮಾಲ್ ಗಳಿಗೆ ಅನುಮತಿ, ಮೇಟ್ರೋ, ಕಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ ಎಂದರು.

ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
















