Tag: mahabaleshwar temple

  • ಗೋಕರ್ಣದಲ್ಲಿ ಪೂಜೆ, ದಕ್ಷಿಣೆ ಕಾಸಿಗಾಗಿ ಜಗಳ – ಕೊನೆಗೂ ಭಕ್ತರಿಗೆ ಅವಕಾಶ, ಅರ್ಚಕರಿಗೆ ಶಾಕ್‌

    ಗೋಕರ್ಣದಲ್ಲಿ ಪೂಜೆ, ದಕ್ಷಿಣೆ ಕಾಸಿಗಾಗಿ ಜಗಳ – ಕೊನೆಗೂ ಭಕ್ತರಿಗೆ ಅವಕಾಶ, ಅರ್ಚಕರಿಗೆ ಶಾಕ್‌

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಪೂಜೆ ಹಕ್ಕಿಗಾಗಿ ಹಾಗೂ ದಕ್ಷಿಣೆ ಕಾಸಿಗಾಗಿ ಅರ್ಚಕರ ನಡುವೆ ಎದ್ದಿದ್ದ ವಿವಾದಕ್ಕೆ ಇದೀಗ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು ಭಕ್ತರಿಗೆ ಮಹಾಬಲೇಶ್ವರನ ದರ್ಶನಕ್ಕೆ ಆಡಳಿತ ಸಮಿತಿ ಅವಕಾಶ ಕಲ್ಪಿಸಿದೆ. ವಿವಾದ ಎಬ್ಬಿಸಿದ ಅರ್ಚಕರಿಗೆ ಆಡಳಿತ ಉಸ್ತುವಾರಿ ಸಮಿತಿ ಶಾಕ್ ನೀಡಿದೆ.

    ಸುಪ್ರೀಂ ಕೋರ್ಟ್‌ ಆದೇಶದಂತೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ರಾಮಚಂದ್ರಾಪುರ ಮಠದ ಆಡಳಿತದಿಂದ ಆಡಳಿತ ಉಸ್ತುವಾರಿ ಸಮಿತಿ ಸುಪರ್ದಿಗೆ ಬಂದ ನಂತರ ಉಪಾದೀವಂತ ಹಾಗೂ ಅನುವಂಶೀಯ ಅರ್ಚಕರ ನಡುವೆ ಗರ್ಭಗುಡಿಯಲ್ಲಿರುವ ಆತ್ಮಲಿಂಗ ಪೀಠದಲ್ಲಿ ಆಸೀನರಾಗುವ ಮತ್ತು ನಂದಿಗೃಹದಲ್ಲಿನ ಪ್ರಸಾದ ವಿತರಣೆ, ದಕ್ಷಿಣೆ ಕಾಸಿನ ಹಕ್ಕಿಗಾಗಿ ಸಂಘರ್ಷ ಏರ್ಪಟ್ಟಿದ್ದರಿಂದ ಭಕ್ತರಿಗೆ ದೇವರ ಪೂಜೆ ಹಾಗೂ ಆತ್ಮಲಿಂಗ ಸ್ಪರ್ಶಕ್ಕೆ ನಿರ್ಬಂಧ ಹೇರಲಾಗಿತ್ತು.

    ಈಗ ಉಸ್ತುವಾರಿ ಸಮಿತಿ ನಿರ್ಧಾರ ಪ್ರಕಟಿಸಿದ್ದು ಭಕ್ತರಿಗೆ ಆತ್ಮಲಿಂಗ ಸ್ಪರ್ಶ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ತಮ್ಮ ಹಕ್ಕಿಗಾಗಿ ಗದ್ದಲ ಎಬ್ಬಿಸಿದ್ದ ಉಪಾದೀವಂತ ಹಾಗೂ ಅನುವಂಶೀಯ ಅರ್ಚಕರಿಗೆ ಭಕ್ತರನ್ನು ಕರೆತಂದು ಪೂಜೆ ಮಾಡಲು ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ – ಗೊಂದಲಕ್ಕೆ ತೆರೆ ಎಳೆದ ಬೊಮ್ಮಾಯಿ 

    ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೇಗುಲ ನಿರ್ವಹಣಾ ಸಮಿತಿ ಅಧ್ಯಕ್ಷ ಬಿ.ಎನ್. ಶ್ರೀಕೃಷ್ಣ ರವರ ಅಧ್ಯಕ್ಷತೆಯಲ್ಲಿರುವ ಉಸ್ತುವಾರಿ ಸಮಿತಿಯು ಅರ್ಚಕರ ಹಕ್ಕಿನ ಬಗ್ಗೆ ತೀರ್ಮಾನ ಮಾಡುವ ಸಮಿತಿ ಅಲ್ಲ. ದಿನ ನಿತ್ಯದ ಕಾರ್ಯಗಳಿಗೆ ಆಡಳಿತ ಮಾಡುವ ನಿರ್ವಹಣಾ ಸಮಿತಿಯಾಗಿದೆ. ಅನುವಂಶೀಯ ಹಾಗೂ ಉಪದೀವಂತ ಅರ್ಚಕರು ಕೋರ್ಟ್‌ ಆದೇಶ ತಂದರೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುವುದು. ಯಾರಿಗೂ ವೈಯುಕ್ತಿಕವಾಗಿ ಪೂಜೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎರಡೂ ಗುಂಪಿನ ಅರ್ಚಕರಿಗೆ ಶಾಕ್ ನೀಡಿದೆ. ಈ ಕುರಿತು ಸಮಿತಿಯ ಸದಸ್ಯರಾಗಿರುವ ಜಿಲ್ಲಾಧಿಕಾರಿ ಮುಲೈ ಮುಗಿಲನ್‌ವರು ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ಕಳೆದ ತಿಂಗಳು ದೇಗುಲ ನಿರ್ವಹಣಾ ಸಮಿತಿಯು ಉಪಾದೀವಂತ ಹಾಗೂ ಅನುವಂಶೀಯ ಅರ್ಚಕರ ಪ್ರತ್ಯೇಕ ಎರಡು ಸಭೆಯನ್ನು ಮಾಡಿ ಅಹವಾಲನ್ನು ಸ್ವೀಕರಿಸಿತ್ತು. ಆದರೆ ಯಾವುದೇ ನಿರ್ಧಾರಕ್ಕೆ ಸಮಿತಿ ಬಂದಿರಲಿಲ್ಲ. ಆದರೇ ಇದೀಗ ಸಮಿತಿಯ ಸದಸ್ಯರಾಗಿರುವ ಜಿಲ್ಲಾಧಿಕಾರಿಗೆ ಆಡಳಿತದ ಕುರಿತು ತೀರ್ಮಾನ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದೆ.

    ಇದರಂತೆ ಭಕ್ತರಿಗೆ ಇದೀಗ ಮಹಾಬಲೇಶ್ವರನ ದರ್ಶನ, ಸ್ಪರ್ಶ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಸಮಿತಿ ನಿರ್ಧಾರದಂತೆ ಸಂಪ್ರದಾಯದಂತೆ ಸಮಿತಿಯಿಂದ ನೇಮಕವಾದ ಅರ್ಚಕರು ದಿನನಿತ್ಯದ ಕಾರ್ಯ ಮಾಡಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ.

  • ಭಕ್ತರಿಗಿಲ್ಲ ಪೂಜೆ, ಪ್ರಸಾದ – ಮತ್ತೆ  ಭುಗಿಲೆದ್ದ ಮಹಾಬಲೇಶ್ವರನ ಮೇಲಿನ ಹಕ್ಕು ವಿವಾದ

    ಭಕ್ತರಿಗಿಲ್ಲ ಪೂಜೆ, ಪ್ರಸಾದ – ಮತ್ತೆ ಭುಗಿಲೆದ್ದ ಮಹಾಬಲೇಶ್ವರನ ಮೇಲಿನ ಹಕ್ಕು ವಿವಾದ

    -ಹೊರ ಊರಿನ ಭಕ್ತರಿಗೆ ಆತ್ಮಲಿಂಗ ಸ್ಪರ್ಶ, ಪ್ರಸಾದಕ್ಕೆ ನಿರ್ಬಂಧ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ವಿವಾದ ಮತ್ತೆ ತಾರಕಕ್ಕೆ ಏರಿದೆ.

    ಮಹಾಬಲೇಶ್ವರ ಮಂದಿರದ ಗರ್ಭಗುಡಿಯಲ್ಲಿರುವ ಆತ್ಮಲಿಂಗ ಪೀಠದಲ್ಲಿ ಆಸೀನರಾಗುವ ಮತ್ತು ನಂದಿಗೃಹದಲ್ಲಿನ ಪ್ರಸಾದ ವಿತರಣೆ ವಿಚಾರದಲ್ಲಿ ಉಪಾಧಿವಂತರ ಎರಡು ಬಣಗಳ ನಡುವೆ ವಿವಾದ ಏರ್ಪಟ್ಟಿದೆ. ಹೀಗಾಗಿ ಸೆಪ್ಟೆಂಬರ್ 27ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಪ ವಿಭಾಗಾಧಿಕಾರಿ ಸೂಚಿಸಿದ್ದಾರೆ. ಇದನ್ನೂ ಓದಿ: ಹೆಮ್ಮೆಯಿಂದ ಬದುಕಿದ್ದು, ಅವಮಾನದಿಂದ ಬದುಕಲು ಸಾಧ್ಯವಾಗ್ತಿಲ್ಲ: ಗಿರಿ ಡೆತ್‍ನೋಟ್

    ಈ ಸಂಬಂಧ ದೇವಸ್ಥಾನದ ಉಸ್ತುವಾರಿ ಸಮಿತಿ ಕಾರ್ಯದರ್ಶಿಯಾಗಿರುವ ಉಪ ವಿಭಾಗಾಧಿಕಾರಿ ರಾಹುಲ ಪಾಂಡೆಯವರು ಉಭಯ ಬಣಗಳ ಪ್ರತ್ಯೇಕ ಸಭೆ ನಡೆಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಉಪವಿಭಾಗಾಧಿಕಾರಿ ರಾಹುಲ ಪಾಂಡೆ, ಜಿಲ್ಲೆಯ ಎಲ್ಲ ದೇಗುಲಗಳಲ್ಲಿ ಭಕ್ತರಿಗೆ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಆದರೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಎರಡು ಬಣಗಳ ನಡುವಿನ ವಿವಾದದ ಕಾರಣ ಭಕ್ತರಿಗೆ ಅವಕಾಶ ಸಿಗುತ್ತಿಲ್ಲ ಎಂದಿದ್ದಾರೆ.

    mahabaleshwar temple

    ದೇಗುಲ ನಿರ್ವಹಣಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 27ರಂದು ಸಮಿತಿಯ ಸಭೆ ನಡೆಯಲಿದೆ. ಎರಡು ಬಣಗಳ ನಡುವಿನ ವಿವಾದ, ಭಕ್ತರಿಗೆ ಪೂಜೆ ಹಾಗೂ ಸೇವೆಗೆ ವ್ಯವಸ್ಥೆ ವಿಷಯವನ್ನು ಸಭೆಯಲ್ಲಿ ಮಂಡಿಸಲಾಗುವುದು. ಸಭೆಯ ನಿರ್ಣಯದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಇದನ್ನೂ ಓದಿ: MSc ಓದಿ ಕಸ ಗುಡಿಸುತ್ತಿದ್ದ ಮಹಿಳೆಗೆ ಸರ್ಕಾರಿ ಕೆಲಸ ಕೊಟ್ಟ ಸಚಿವರು

    mahabaleshwar temple

    ಸದ್ಯ ಭಕ್ತರು ಹೊರಭಾಗದಿಂದ ಮಾತ್ರ ದೇವರ ದರ್ಶನಕ್ಕೆ ಅವಕಾಶ ಇದ್ದು, ಸ್ಥಳೀಯರು ವೈಯಕ್ತಿಕ ಪೂಜೆ ಸಲ್ಲಿಸಬಹುದಾಗಿದೆ. ಇದರಂತೆ ಸ್ಥಳೀಯರಿಗೆ ಬೆಳಗ್ಗೆ 6 ರಿಂದ 11 ಹಾಗೂ ಅಪರಾಹ್ನ 5 ರಿಂದ ರಾತ್ರಿ 7 ರವರೆಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಉಪಾದೀವಂತ ಪಂಗಡದ ಗುದ್ದಾಟದಿಂದಾಗಿ ಹೊರಭಾಗದಿಂದ ಬರುವ ಭಕ್ತರಿಗೆ ಆತ್ಮಲಿಂಗ ಸ್ಪರ್ಶ ಪೂಜೆ, ಪ್ರಸಾದಗಳಿಗೆ ಅವಕಾಶ ಮಾಡಿಕೊಡಲಾಗಿಲ್ಲ. ಇನ್ನೂ ದೇವಸ್ಥಾನದಲ್ಲಿ ಅಹಿತಕರ ಘಟನೆ ನಡೆಯದಂತೆ ಪೂಲೀಸರ ನಿಯೋಜನೆ ಮಾಡಲಾಗಿದೆ.

  • ಪಿತೃಪಕ್ಷ ಆಚರಣೆಗೆ ಕೊರೊನಾ ಅಡ್ಡಿ- ಮುಕ್ತಿ ಕ್ಷೇತ್ರ ಗೋಕರ್ಣ ಬಣ ಬಣ

    ಪಿತೃಪಕ್ಷ ಆಚರಣೆಗೆ ಕೊರೊನಾ ಅಡ್ಡಿ- ಮುಕ್ತಿ ಕ್ಷೇತ್ರ ಗೋಕರ್ಣ ಬಣ ಬಣ

    ಕಾರವಾರ: ಕೊರೊನಾ ಮಹಾಮಾರಿಯಿಂದ ಈ ಬಾರಿ ಪಿತೃಕಾರ್ಯ ಮಾಡಿಸಲು ಗೋಕರ್ಣ ಕ್ಷೇತ್ರಕ್ಕೆ ಬರುವವರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ.

    ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರವು ಮಹಾಬಲೇಶ್ವರನ ಆತ್ಮಲಿಂಗದ ಮೂಲಕ ವಿಶ್ವ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪಿತೃ ಕಾರ್ಯಗಳನ್ನು ನಡೆಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಆಸ್ತಿಕರದ್ದು. ಹೀಗಾಗಿಯೇ ಈ ಕ್ಷೇತ್ರಕ್ಕೆ ಮುಕ್ತಿ ಕ್ಷೇತ್ರವೆಂಬ ಹೆಸರು ಇದೆ. ಇಲ್ಲಿ ಅಸ್ತಿ ವಿಸರ್ಜನೆಗೆ ಅರಬ್ಬಿ ಸಮುದ್ರ, ಪಿಂಡದಾನ ಅರ್ಘ್ಯಕ್ಕೆ ಪಿತೃಸ್ಥಾಲೇಶ್ವರ, ತಾಮ್ರಪರ್ಣಿ ಕೆರೆ ಇದ್ದು ಪಿತೃಕಾರ್ಯಕ್ಕಾಗಿ ವಿಶೇಷ ಸ್ಥಾನಗಳಿವೆ.

    ಪ್ರತಿ ವರ್ಷ ಭಾದ್ರಪದ ಕೃಷ್ಣ ಪ್ರತಿಪದೆಯಿಂದ ಅಮವಾಸ್ಯೆಯವರೆಗೆ ಬಹುಳ ಪಕ್ಷವನ್ನು ಸಮಸ್ತ ಪಿತೃಗಳಿಗೆ ಸಮರ್ಪಿಸಲಾಗುತ್ತದೆ. ಈ ಬಾರಿ ಸೆಪ್ಟೆಬರ್‌ 3 ರಿಂದ ಸೆಪ್ಟೆಂಬರ್‌ 17ರ ವರೆಗೆ ಪಿತೃಪಕ್ಷವಿದೆ. ಪ್ರತಿ ವರ್ಷ ಪಿತೃಪಕ್ಷದಂದ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರನ ಸನ್ನಿಧಿಗೆ ರಾಜ್ಯ ಮತ್ತು ಹೊರ ರಾಜ್ಯದಿಂದ ಲಕ್ಷ ಲಕ್ಷ ಜನ ಬರುವ ಮೂಲಕ ತಮ್ಮ ಕುಟುಂಬದವರ ಪಿತೃಕಾರ್ಯ ನೆರವೇರಿಸುತಿದ್ದರು.

    ನಿರ್ಬಂಧ ಮುಂದುವರಿಕೆ:
    ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರನ ಆತ್ಮ ಲಿಂಗ ಸ್ಪರ್ಶ ಪೂಜೆಗೆ ಆಡಳಿತ ಮಂಡಳಿ ನಿರ್ಬಂಧ ವಿಧಿಸಿದೆ.

    ಆತ್ಮಲಿಂಗ ಸ್ಪರ್ಶಿಸಿ ಪೂಜೆ ಮಾಡುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿದ್ದು ಈ ಹಿನ್ನೆಲೆಯಲ್ಲಿ ಇಲ್ಲಿನ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ ಸ್ಥಳೀಯರಿಗೆ ಮಾತ್ರ ದೇವಸ್ಥಾನದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ಪ್ರವಾಸಿಗರಿಗೂ ಅವಕಾಶ ಕಲ್ಪಿಸಿದ್ದು ನಂದಿ ಮಂಟಪದವರೆಗೆ ಮಾತ್ರ ತೆರಳಿ ದೇವರ ದರ್ಶನ ಮಾಡಬಹುದಾಗಿದೆ.

    ರಸ್ತೆಗಳು ಬಿಕೋ:
    ಗೋಕರ್ಣದಲ್ಲಿ ಪಿತ್ರಪಕ್ಷದ ಸಂದರ್ಭದಲ್ಲಿ ರಾಜ್ಯ, ಹೊರರಾಜ್ಯದಿಂದ ಬರುವ ಸಾವಿರಾರು ಭಕ್ತರು ಇಲ್ಲಿ ಮಹಾಲಯ ಆಚರಿಸುತ್ತಿದ್ದರು. ಈ ಮೂಲಕ ಮೂಲಕ ತಮ್ಮ ಪಿತೃವಿಗೆ ಶಾಶ್ವತ ಸ್ವರ್ಗ ಸಿಗುವ ಹಾಗೂ ಆತ್ಮ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿಂದ ಪೂಜಾಕಾರ್ಯ ಹಾಗೂ ಅಸ್ತಿ ವಿಸರ್ಜನೆ ಮಾಡುತಿದ್ದರು. ಈ ಬಾರಿ ಪಿತೃಕಾರ್ಯ ಮಾಡಿಸುವವರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದ್ದು ಸುತ್ತಮುತ್ತಲ ಜಿಲ್ಲೆಯವರು ಮಾತ್ರ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಆದರೆ ಹೊರ ರಾಜ್ಯವಾದ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶದಿಂದ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದ್ದು ಕೊರೊನಾ ಭಯ ಕ್ಷೇತ್ರಕ್ಕೆ ಬರುವವರ ಸಂಖ್ಯೆಯನ್ನು ತಗ್ಗಿಸಿದೆ‌. ಹೀಗಾಗಿ ಸದಾ ಜನಜಂಗುಳಿಯಿಂದ ಗಿಜಿಗುಡುತಿದ್ದ ಗೋಕರ್ಣ ಈಗ ಬಿಕೋ ಎನ್ನುತಿದ್ದು ಬೆರಳೆಣಿಕೆಯ ಭಕ್ತರು ಮಾತ್ರ ಕ್ಷೇತ್ರ ದರ್ಶನ ಮಾಡಿ ಪಿತೃಕಾರ್ಯ ನಡೆಸುತ್ತಿದ್ದಾರೆ.

  • ಗೋಕರ್ಣ ದೇಗುಲದ ಆಡಳಿತ ನಡೆಸ್ತಿದ್ದ ರಾಮಚಂದ್ರಾಪುರ ಮಠಕ್ಕೆ ಹೈಕೋರ್ಟ್ ನಿಂದ ಬ್ರೇಕ್

    ಗೋಕರ್ಣ ದೇಗುಲದ ಆಡಳಿತ ನಡೆಸ್ತಿದ್ದ ರಾಮಚಂದ್ರಾಪುರ ಮಠಕ್ಕೆ ಹೈಕೋರ್ಟ್ ನಿಂದ ಬ್ರೇಕ್

    ಬೆಂಗಳೂರು: ಕಳೆದ 10 ವರ್ಷಗಳಿಂದ ಗೋಕರ್ಣ ದೇಗುಲದ ಆಡಳಿತ ನಡೆಸುತ್ತಿದ್ದ ರಾಮಚಂದ್ರಾಪುರ ಮಠಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಸೆಪ್ಟೆಂಬರ್ 10ರಿಂದ ಉಸ್ತುವಾರಿ ಸಮಿತಿ ಅಸ್ಥಿತ್ವಕ್ಕೆ ಬರಬೇಕು ಅಂತಾ ಆದೇಶ ಹೊರಡಿಸಿದೆ.

    ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಅರವಿಂದ್ ಕುಮಾರ್ ಅವರ ಜಂಟಿ ಪೀಠವು, ಸರ್ಕಾರದ ದೇಗುಲ ಹಸ್ತಾಂತರದ ಆದೇಶವನ್ನು ರದ್ದು ಮಾಡಿದ್ದು, ದೇಗುಲದ ಸ್ಥಿರಾಸ್ಥಿ ಚರಾಸ್ಥಿ ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲಾ ಆಸ್ತಿಯ ವಿವರವನ್ನು 2 ವಾರದೊಳಗೆ ಹೈಕೋರ್ಟ್ ಗೆ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    2008ರ ಆಗಸ್ಟ್ 12ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಗೋಕರ್ಣದ ಐತಿಹಾಸಿಕ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾಲಚಂದರ್ ದೀಕ್ಷಿತ್ ಮತ್ತು ನರಹರಿ ಕೃಷ್ಣ ಹೆಗ್ಡೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನು ಓದಿ: ಗೋಕರ್ಣ ದೇವಸ್ಥಾನ ವಿವಾದ: ಪೂಜಾ ಕಾರ್ಯಕ್ಕಾಗಿ 2 ಗುಂಪಿನ ಅರ್ಚಕರ ನಡುವೆ ವಾಗ್ವಾದ

    ಮಹಾಬಲೇಶ್ವರ ದೇವಾಲಯವನ್ನು ಮುಜರಾಯಿ ಇಲಾಖೆಯ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಜಂಟಿ ಪೀಠವು ರದ್ದುಗೊಳಿಸಿದೆ. ಆದರೆ ಇತ್ತ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ರಾಮಚಂದ್ರಾಪುರ ಮಠದ ವಕೀಲರು ಕೋರಿಕೆ ವ್ಯಕ್ತಪಡಿಸಿದ್ದು, ಅದಕ್ಕೆ ಅರ್ಜಿದಾರರ ಪರ ವಕೀಲರಿಂದ ವಿರೋಧ ವ್ಯಕ್ತವಾಗಿದೆ.

    ಕಾರವಾರ ವರದಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡಿದ ಹಿನ್ನಲೆಯಲ್ಲಿ ದೇವಸ್ಥಾನದ ಮುಂದೆ ಗೋಕರ್ಣ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಹಾಗೂ ಸ್ಥಳೀಯರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

    ಬಿ.ಎಸ್.ಯಡಿಯೂರಪ್ಪ ಸರ್ಕಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ರಾಮಚಂದ್ರಾಪುರ ಮಠಕ್ಕೆ ದೇವಸ್ಥಾನದ ಆಡಳಿತನ್ನು ಹಸ್ತಾಂತರಿಸಿತ್ತು. ಮಠದಿಂದ ಮುಜರಾಯಿ ಇಲಾಖೆಗೆ ಪುನಃ ಹಸ್ತಾಂತರಿಸಲು ಆದೇಶ ಬಂದಿದ್ದು ಸಂತಸ ತಂದಿದೆ. ಮಠದವರು ಅಪೀಲ್ ಹೋಗುವುದಾಗಿ ಹೇಳುತ್ತಿದ್ದಾರೆ. ಅವರು ಮುಂದೆ ಅಪೀಲ್ ಹೋದಲ್ಲಿ ನಾವು ಕೂಡ ಹೋರಾಟ ಮಾಡುತ್ತೇವೆ ಎಂದು ಬಾಲಚಂದ್ರ ದೀಕ್ಷಿತ್ ಪಬ್ಲಿಕ್ ಟಿ.ವಿಗೆ ಪ್ರತಿಕ್ರಿಯೆ ನೀಡಿದ್ದಾರೆ.