Tag: Madikeri Dasara

  • ಸರಳ, ಸುಂದರ ದಸರಾ ಆಚರಣೆಗೆ ಮಂಜಿನ ನಗರಿಯ ದಶದೇವಾಲಯಗಳು ತಯಾರಿ

    ಸರಳ, ಸುಂದರ ದಸರಾ ಆಚರಣೆಗೆ ಮಂಜಿನ ನಗರಿಯ ದಶದೇವಾಲಯಗಳು ತಯಾರಿ

    ಮಡಿಕೇರಿ: ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿದ್ದ ಮಂಜಿನ ನಗರಿ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಕೊರೊನಾ ಸೂತಕದ ಛಾಯೆ ಆವರಿಸಿದೆ. ಸಾಂಪ್ರದಾಯಿಕ ದಸರಾ ಆಚರಣೆಗೆ ಮಡಿಕೇರಿಯಲ್ಲಿ ತಯಾರಿ ನಡೆದಿದ್ದು, ನಗರದ ನಾಲ್ಕು ಶಕ್ತಿ ದೇವತೆಗಳೂ ಸೇರಿದಂತೆ ಮಡಿಕೇರಿಯ ದಶದೇವಾಲಯಗಳಲ್ಲಿ ಇಂದು ರಾತ್ರಿ ನಡೆಯುವ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದೆ.

    ಇದೇ ಮೊದಲ ಬಾರಿಗೆ ಅತ್ಯಂತ ಸರಳವಾಗಿ, ಜನರೇ ಸೇರದ ರೀತಿಯಲ್ಲಿ ನಾಡಹಬ್ಬದ ಆಚರಣೆಯಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಸರಳ ದಸರಾ ಆಚರಿಸುವುದಾಗಿ ದಸರಾ ಸಮಿತಿಯಿಂದ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ದಸರಾ ಸಮಿತಿ ಮನವಿ ಮಾಡಿದೆ.

    ಇನ್ನು ಇಂದು ರಾತ್ರಿ ದಶದೇವಾಲಯಗಳಿಂದ ಅತ್ಯಂತ ಸರಳ ರೀತಿಯಲ್ಲಿ ಪಿಕ್ ಅಪ್ ವಾಹನದಲ್ಲಿ ದೇವರ ಒಂದು ಮೂರ್ತಿಯನ್ನು ಇಟ್ಟು ಕಳಸದೊಂದಿಗೆ ನಗರದ ಬನ್ನಿ ಮಂಟಪಕ್ಕೆ ಮೆರವಣಿಗೆ ಸಾಗಲಿದೆ. ಅಲ್ಲದೇ ಈ ಬಾರಿ ಮಂಟಪಗಳ ಪ್ರದರ್ಶನ ಅಥವಾ ಬಹುಮಾನಗಳ ಸ್ಪರ್ಧೆಗಳು ಇಲ್ಲ. ಒಂದು ದೇವಾಲಯದ ಮಂಟಪದೊಂದಿಗೆ. 20 ಮಂದಿ ಮಾತ್ರ ದೇವಾಲಯದ ಸಮಿತಿ ಸದಸ್ಯರು ತೆರಳಲು ಅವಕಾಶ ಮಾಡಿಕೊಡಲಾಗಿದೆ.

    ದಸರಾ ಹಿನ್ನೆಲೆಯಲ್ಲಿ ಕೊಡಗಿನ ಪ್ರವಾಸಿತಾಣಗಳು ಕೂಡ ಬಂದ್ ಆಗಿದ್ದು, ನಗರದಲ್ಲಿ ಜನ ದಟ್ಟಣೆಯು ಬೆಳಿಗ್ಗೆಯಿಂದ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಜಿಲ್ಲಾಡಳಿತದಿಂದ ಮಾಸ್ಕ್ ದರಿಸುವಿಕೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿರುವ ಬೆನ್ನಲ್ಲೇ ಇದೀಗಾ ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆಯು ಗಣನೀಯವಾಗಿ ಇಳಿಕೆಯಾಗುತ್ತಿದೆ.

  • ಮಡಿಕೇರಿ ದಸರಾ: ನಾಲ್ಕು ಶಕ್ತಿ ದೇವತೆಗಳ ಕರಗಕ್ಕೆ ಚಾಲನೆ

    ಮಡಿಕೇರಿ ದಸರಾ: ನಾಲ್ಕು ಶಕ್ತಿ ದೇವತೆಗಳ ಕರಗಕ್ಕೆ ಚಾಲನೆ

    ಮಡಿಕೇರಿ: ಐತಿಹಾಸಿಕ ಹಿನ್ನೆಲೆಯ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ‘ಕರಗ ಉತ್ಸವ’ಕ್ಕೆ ಮಂಜಿನ ನಗರಿ ಮಡಿಕೇರಿ ನಗರದ ಪಂಪಿನ ಕೆರೆಯ ಬನ್ನಿಮಂಟಪದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಇಂದು ಸಂಜೆ ಚಾಲನೆ ನೀಡಲಾಯಿತು.

    ಮಡಿಕೇರಿ ನಗರ ದಸರಾ ಸಮಿತಿ, ದಶಮಂಟಪ ಸಮಿತಿಯ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು, ಅಧಿಕಾರಿಗಳು ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಸಂಜೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸುವ ಮೂಲಕ ಕರಗ ಮೆರವಣಿಗೆ ಆರಂಭಗೊಂಡಿತು. ಮಡಿಕೇರಿ ನಗರ ನಾಲ್ಕು ಶಕ್ತಿ ದೇವತೆಗಳದ ರಾಜಾಸೀಟು ಬಳಿಯ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿ, ನಗರಸಭೆ ಬಳಿಯ ಶ್ರೀ ದಂಡಿನ ಮಾರಿಯಮ್ಮ, ಪೆನ್ಶನ್ ಲೇನ್‍ನ ಶ್ರೀ ಕೋಟೆ ಮಾರಿಯಮ್ಮ ಕರಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.

    ಮಧ್ಯಾಹ್ನ ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದ ವ್ರತಧಾರಿಗಳು ಹಾಗೂ ದೇವಾಲಯ ಸಮಿತಿಯ ಪ್ರಮುಖರು ಕರಗ ಅಲಂಕಾರಕ್ಕೆ ಅಗತ್ಯವಿರುವ ಫಲ, ಪುಷ್ಪಗಳೊಂದಿಗೆ ಪಂಪಿನ ಕೆರೆಗೆ ತೆರಳಿದರು. ವಿವಿಧ ಪೂಜಾ, ಕೈಂಕರ್ಯಗಳ ಮೂಲಕ ಕರಗಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಲಾಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಗಣ್ಯರು ಪೂಜೆಯಲ್ಲಿ ಭಾಗಿಯಾಗಿದ್ದರು.

    ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳು ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಪೂಜೆ ಸ್ವೀಕರಿಸಿದವು. ಸಂಪ್ರದಾಯದಂತೆ ಪೇಟೆ ಶ್ರೀರಾಮಮಂದಿರಕ್ಕೆ ತೆರಳಿದ ಕರಗಗಳು ಅಲ್ಲಿಯೂ ವಿಶೇಷ ಪೂಜೆ ಸ್ವೀಕರಿಸಿ ನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು. ಕೊರೊನಾ ವೈರಸ್ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ಜಿಲ್ಲಾಡಳಿತ ಸರಳ ದಸರಾಗೆ ಮುಂದಾಗಿದ್ದು, ಕರಗ ಮಹೋತ್ಸವವನ್ನು ಈ ಬಾರಿ ಎರಡು ದಿನಕ್ಕೆ ಸೀಮಿತಗೊಳಿಸಲಾಗಿದೆ.

    ಜಿಲ್ಲಾಡಳಿತದ ನಿರ್ಧಾರಕ್ಕೆ ದಸರಾ ಸಮಿತಿಯವರು ಸಹ ಸಮ್ಮತಿಸಿದ್ದಾರೆ. ಹೀಗಾಗಿ ಪ್ರತಿವರ್ಷ ಕೋಟ್ಯಂತರ ರೂ. ಖರ್ಚು ಮಾಡಿ, ವಿಜೃಂಭಣೆಯಿಂದ ನಡೆಸಲಾಗುತ್ತಿದ್ದ ಮಂಜಿನನಗರಿ ಮಡಿಕೇರಿಯ ದಸರಾ ಈ ಬಾರಿ ನಿರಾಡಂಬರವಾಗಿ ನಡೆಯಲಿದೆ.

  • ಜಲಪ್ರಳಯದ ನಂತ್ರ ಮಡಿಕೇರಿಯಲ್ಲಿ 9 ದಿನ ಸರಳ ದಸರಾ ಆಚರಣೆ

    ಜಲಪ್ರಳಯದ ನಂತ್ರ ಮಡಿಕೇರಿಯಲ್ಲಿ 9 ದಿನ ಸರಳ ದಸರಾ ಆಚರಣೆ

    ಮಡಿಕೇರಿ: ನಾಡಹಬ್ಬ ಐತಿಹಾಸಿಕ ದಸರಾಕ್ಕೆ ಮಡಿಕೇರಿಯಲ್ಲಿ ಚಾಲನೆ ಸಿಕ್ಕಿದೆ. ನಗರದ ನಾಲ್ಕು ಶಕ್ತಿದೇವತೆಯ ಕರಗಗಳು ಸಾಂಪ್ರದಾಯಿಕವಾಗಿ ನಗರ ಪ್ರದಕ್ಷಿಣೆ ಆರಂಭಿಸಿವೆ. ಜಲಪ್ರಳಯ ಹಿನ್ನಲೆ ಇದೇ ಮೊದಲ ಬಾರಿಗೆ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಲಾಗ್ತಿದ್ದು, 10 ದಿನಗಳ ಕಾಲ ಅದ್ಧೂರಿಯಿಂದ ನಡೆಯುತ್ತಿದ್ದ ದಸರಾ ಆಚರಣೆ ಕಾರ್ಯಕ್ರಮಗಳು 2 ದಿನಗಳಿಗೆ ಸೀಮಿತವಾಗಿವೆ. ಅದ್ಧೂರಿ ಇಲ್ಲದಿದ್ರೂ ಸರಳ ಹಾಗೂ ಸಾಂಪ್ರದಾಯಿಕವಾಗಿ ಮಡಿಕೇರಿ ದಸರಾ ಕೊಡಗಿನಲ್ಲಿ ಆಚರಣೆಯಾಗುತ್ತಿದೆ.

    ಕೊಡಗು ಕೇವಲ ಟೂರಿಸ್ಟ್ ಹಾಟ್ ಸ್ಪಾಟ್ ಮಾತ್ರ ಅಲ್ಲ. ಕೊಡಗಿನ ಹಬ್ಬ ಹರಿದಿನ ಹಾಗೂ ಆಚರಣೆಗಳು ವಿಭಿನ್ನವಾಗಿದ್ದು ಎಲ್ಲರ ಗಮನ ಸೆಳೆಯುತ್ತವೆ. ಅದರಲ್ಲೂ ಮಡಿಕೇರಿ ದಸರಾ ಅಂತೂ ಕೊಡಗಿನ ಪಾಲಿಗೆ ಅದ್ಧೂರಿಯ ಹಬ್ಬದಾಚರಣೆ. ಬೃಹತ್ತಾದ ವೇದಿಕೆ, ದಶದಿನಗಳು ಮನಸೂರೆಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು, ದಶಮಂಟಪಗಳ ಶೋಭಾಯಾತ್ರೆ, ಡಿಜೆ ಸೌಂಡ್ಸ್, ಜನಸಾಗರ. ಇದು ಮಡಿಕೇರಿ ದಸರಾದ ಅದ್ಧೂರಿತನಕ್ಕೆ ಸಾಕ್ಷಿಯಾಗಿದ್ದವು.

    ಆದರೆ ಈ ಬಾರಿ ಮಡಿಕೇರಿಯ ಅದ್ಧೂರಿ ದಸರಾ ಆಚರಣೆಗೆ ಬ್ರೇಕ್ ಬಿದ್ದಿದೆ. ಪ್ರಾಕೃತಿಕ ವಿಕೋಪದಿಂದ ಕೊಡಗು ತತ್ತರಿಸಿರೋದರಿಂದ ಸರಳವಾಗಿ ಸಾಂಪ್ರದಾಯಿಕ ದಸರಾ ಆಚರಣೆಗೆ ದಸರಾ ಕಮೀಟಿ ಮುಂದಾಗಿದೆ. ಜಳಪ್ರಳಯದಿಂದ ಇಡೀ ಜಿಲ್ಲೆಯಲ್ಲೇ ಸೂತಕದ ಛಾಯೆ ಆವರಿಸಿದ್ದು, ಜನರು ಸಂಕಷ್ಟದಲ್ಲಿ ಕೈ ತೊಳೆಯುತ್ತಿದ್ದಾರೆ. ಈ ವೇಳೆ ಅದ್ಧೂರಿ ದಸರಾ ಆಚರಣೆ ಮುಂದಾಗದೇ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ದಸರಾ ಸಮಿತಿ ಕಾರ್ಯಧ್ಯಕ್ಷ ಮಹೇಶ್ ಜೈನ್ ತಿಳಿಸಿದ್ದಾರೆ.

    ಮಡಿಕೇರಿ ದಸರಾ ಆಚರಣೆಯ ಕಾರ್ಯಕ್ರಮಗಳನ್ನು 10 ದಿನಗಳ ಬದಲಾಗಿ 2 ದಿನಕ್ಕೆ ಸೀಮಿತಗೊಳಿಸಲಾಗಿದೆ. ಸರ್ಕಾರದಿಂದ 50 ಲಕ್ಷ ಅನುದಾನ ಸಿಕ್ಕಿದ್ದು, ಅದರಲ್ಲೇ ದಸರಾ ಆಚರಣೆ ನಡೆಯುತ್ತಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಪ್ರದಕ್ಷಿಣೆ ನಡೆಸುತ್ತಿವೆ. ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ವಿಜಯದಶಮಿಯ ಪ್ರಮುಖ ಆಕರ್ಷಣೆಯಾಗಿದ್ದ ದಶಮಂಟಪಗಳ ಶೋಭಾಯಾತ್ರೆಯನ್ನು ಸರಳವಾಗಿ ಮಾಡಲು ತಯಾರಿ ನಡೆಯುತ್ತಿದೆ. ಮೈಸೂರು ದಸರಾ ಬಿಟ್ಟರೆ ಮಡಿಕೇರಿ ದಸರಾ ಸೂಪರ್ ಎಂದು ಹೇಳುತ್ತಿದ್ದ ಮಂದಿ ಇದೀಗ ಸರಳ ದಸರಾ ಆಚರಣೆ ಆಗುತ್ತಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಪ್ರಾಕೃತಿಕ ವಿಕೋಪದ ಸೂತಕದ ಛಾಯೆಯಿಂದ ಕೊಡಗು ಜನರು ನಿಧಾನವಾಗಿ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. ಅದ್ಧೂರಿ ಹಾಗೂ ವಿಭಿನ್ನವಾಗಿ ದಸರಾ ಆಚರಿಸುವ ಮೂಲಕ ಗಮನ ಸೆಳೆಯುತ್ತಿದ್ದ ಮಡಿಕೇರಿ ದಸರಾ ಇದೇ ಮೊದಲ ಬಾರಿಗೆ ಸರಳವಾಗಿ ಆಚರಣೆ ಆಗುತ್ತಿರುವುದಿಂದ ಜನಸಾಮಾನ್ಯರಿಗೆ ನಿರಾಸೆ ಉಂಟು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv