Tag: Madikeri Dasara

  • ದಸರಾ ದಶಮಂಟಪಗಳ ಶೋಭಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ – 62 ಮಂದಿ ವಿರುದ್ಧ ಕೇಸ್‌

    ದಸರಾ ದಶಮಂಟಪಗಳ ಶೋಭಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ – 62 ಮಂದಿ ವಿರುದ್ಧ ಕೇಸ್‌

    ಮಡಿಕೇರಿ: ಮಡಿಕೇರಿ ದಸರಾಕ್ಕೆ (Madikeri Dasara) ವಿದ್ಯುಕ್ತವಾಗಿ ತೆರೆ ಬಿದ್ದು ನಾಲ್ಕು 5 ದಿನ ಕಳೆದರು ಇಂದಿನ ದಸರಾದ ದಶಮಂಟಪಗಳ ಸಮಿತಿಯ ಸದಸ್ಯರು ಗೊಂದಲಕ್ಕೆ ಸಿಲುಕಿದ್ದಾರೆ. ನ್ಯಾಯಾಲಯದ ಆದೇಶವನ್ನ ಸಮಿತಿಯ ಸದಸ್ಯರು ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸರೇ ಸ್ವಯಂ ಪ್ರೇರಿತವಾಗಿ ಸಮಿತಿಯ ಸುಮಾರು 62 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ದಶಮಂಟಪಗಳ ಸಮಿತಿಯ ಸದಸ್ಯರು ಪೊಲೀಸ್ (Madikeri Police) ಇಲಾಖೆಯ ವಿರುದ್ಧ ಆಕ್ರೋಶ ಹೋರ ಹಾಕುತ್ತಿದ್ದಾರೆ‌.

    ಐತಿಹಾಸಿಕ ಮಡಿಕೇರಿ ದಸರಾಕ್ಕೆ ವರ್ಣರಂಜಿತವಾಗಿ ತೆರೆ ಬಿದ್ದಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ರಾಜ್ಯದ ನಾನಾ ಭಾಗಗಳಿಂದ ಮಡಿಕೇರಿ ದಸರಾಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರು ದಶ ದೇವಾಲಯಗಳಿಂದ ಸಿದ್ಧ ಪಡಿಸುವ ಪೌರಾಣಿಕ ಕಥಾ ಸಾರಾಂಶ ನೋಡಲು ಆಗಮಿಸುತ್ತಾರೆ. ಅಲ್ಲದೇ ಡಿಜೆ‌ ಸೌಂಡ್‌ಗೆ ಹೆಜ್ಜೆ ಹಾಕಿ ಖುಷಿ ಪಡುತ್ತಾರೆ. ಆದರೆ ಈ ಬಾರಿ ಮಡಿಕೇರಿ ದಸರಾಕ್ಕೆ ಡಿಜೆ ಬಳಸಬಾರದು ಎಂದು ಪೊಲೀಸ್ ಇಲಾಖೆ ಮೊದಲೇ ಸೂಚಿಸಿತ್ತು. ಅದರಂತೆ ದಶಮಂಟಪ ಸಮಿತಿ ಸದಸ್ಯರೂ ಕೂಡ ನಡೆದುಕೊಂಡಿದ್ದರು. ಆದರೆ ದೇವಾಲಯಗಳ ಪೌರಾಣಿಕ ಕಥಾ ಸಾರಾಂಶ ಪ್ರಸ್ತುತ ಪಡಿಸುವ ವೇಳೆಯಲ್ಲಿ ಧ್ವನಿವರ್ಧಕದ ಶದ್ಧ ಸ್ವಲ್ಪ ಜಾಸ್ತಿ ಮಾಡಬೇಕಾಗುತ್ತದೆ ಎಂದು ಕೇಳಿಕೊಂಡಿದ್ದರು. ಆದಾಗ್ಯೂ ದಸರಾ ಮುಗಿದ ಬಳಿಕ ದೇವಾಲಯ ಸಮಿತಿ ಸದಸ್ಯರಿಗೆ ಪೊಲೀಸರು ಶಾಕ್ ನೀಡಿದ್ದಾರೆ.

    ರಾತ್ರಿ 10 ಗಂಟೆ ನಂತರ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ಧ್ವನಿವರ್ಧಕ ಬಳಸಬಾರದೆಂಬ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅ.2 ರಂದು ದಶಮಂಟಪ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಸಲಾಗಿದೆ ಎಂದು ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮಡಿಕೇರಿ ನಗರದ ಪೇಟೆ ಶ್ರೀರಾಮಮಂದಿರ, ದೇಚೂರು ಶ್ರೀರಾಮ ಮಂದಿರ. ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕೋದಂಡ ರಾಮ ದೇವಾಲಯ ಮಂಟಪ ಸಮಿತಿಗಳ ತಲಾ 6 ಮಂದಿ, ಕರವಲೆ ಭಗವತಿ, ಕೋಟೆ ಮಾರಿಯಮ್ಮ ಮಂಟಪ ಸಮಿತಿಗಳ ತಲಾ 7 ಮಂದಿ, ಕೋಟೆ ಗಣಪತಿಯ 8 ಮಂದಿ ಚೌಡೇಶ್ವರಿ ಹಾಗೂ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಮಂಟಪ ಸಮಿತಿಯ ತಲಾ 5 ಮಂದಿ ವಿರುದ್ಧ ಸೆಕ್ಷನ್ 37, 109, ಅಡಿ ಪ್ರಕರಣಗಳು ದಾಖಲಾಗಿವೆ.

    ಇದರಿಂದ ಸಮಿತಿ ಸದಸ್ಯರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರಕರಣ ರದ್ದುಗೊಳಿಸದಿದ್ದರೆ, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಬೇಕಾಗುತ್ತದೆ. ಪ್ರತಿಭಟನೆ ಕೂಡ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ಪುರಾಣಗಳ ಕಥೆ ಹೇಳುವ ದಶಮಂಟಪಗಳೇ ಮಡಿಕೇರಿ ದಸರಾದ ಆಕರ್ಷಣೆ

    ಪುರಾಣಗಳ ಕಥೆ ಹೇಳುವ ದಶಮಂಟಪಗಳೇ ಮಡಿಕೇರಿ ದಸರಾದ ಆಕರ್ಷಣೆ

    ತಿಹಾಸಿಕ ಮಡಿಕೇರಿ ದಸರಾಕ್ಕೆ ಮೈನವಿರೇಳಿಸೋ ದಶಮಂಟಪಗಳ ಶೋಭಾಯಾತ್ರೆಯೇ ಆಕರ್ಷಣೆ. ದಶಮಂಟಪಗಳ ಯಾತ್ರೆ ಜನರ ಮನಸೂರೆಗೊಳ್ಳುತ್ತದೆ. ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆಯುವ ಚಿತ್ರ ಪ್ರದರ್ಶನ ಜನರನ್ನ ದೈವಲೋಕಕ್ಕೇ ಕರೆದೊಯ್ಯುವಂತೆ ಭಾಸವಾಗುತ್ತದೆ. ದುಷ್ಟ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆಯುವ ದಶಮಂಟಪ ಪ್ರದರ್ಶನ ದೇವಾನು ದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆಳುತ್ತಾರೆ.

    ಆ ದಿನ ರಾತ್ರಿ ಮಡಿಕೇರಿ ನಗರದ ಯಾವುದೇ ರಸ್ತೆಗಳಲ್ಲಿ ನೋಡಿದ್ರೂ ಜನಸಾಗರವೇ ಇರುತ್ತದೆ. ಕಣ್ಣು ಕೋರೈಸೋ ವಿದ್ಯುತ್ ದೀಪಾಲಂಕಾರ, ಹುಚ್ಚೆದ್ದು ಕುಣಿಯುವ ಜನರು, ಅಬ್ಬರದಿಂದ ಪ್ರದರ್ಶನಗೊಳ್ಳುವ ಸ್ಥಬ್ಧ ಚಿತ್ರಗಳು, ಇದು ಮಡಿಕೇರಿ ದಸರಾದ ಕೊನೆಯದಿನದ ಶೋಭಾಯಾತ್ರೆಯ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ.

    ಇನ್ನೇನು ದಸರಾ ಮುಗಿಯುವ ಹಂತಕ್ಕೆ ಬಂದಿದ್ದು, ದಶಮಂಟಪಗಳ ದರ್ಶನ ಮೈನವಿರೇಳಿಸುವಂತಿರುತ್ತದೆ‌. ದೇವಾನು ದೇವತೆಗಳ ಲೀಲೆಗಳನ್ನ ಬಿಂಬಿಸೋ ಕಥಾ ಪ್ರಸಂಗಗಳ ಸಂಯೋಜನೆ ಎಲ್ಲರ ಗಮನಸೆಳೆಯುತ್ತಿದೆ. ಎದೆ ನಡುಗಿಸೋ ಶಬ್ದ, ಅದಕ್ಕೆ ತಕ್ಕಂತೆ ಬೆಳಕು, ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸೋ ದೇವರ ಮೂರ್ತಿಗಳು ನೆರೆದಿದ್ದ ಜನರನ್ನ ಒಮ್ಮೆ ದೇವಲೋಕವೇ ಧರೆಗಿಳಿದಂತಿದೆ.

    ಸಹಸ್ರಾರು ಸಂಖ್ಯೆಯ ಭಕ್ತರು ಹಲವೆಡೆ ಮಂಟಪ ದರ್ಶನ ಮಾಡಿ ಭಾವಪರವಶರಾಗುತ್ತಿದ್ದಾರೆ. ಒಂದೊಂದು ಮಂಟಪಗಳೂ ಒಂದು ಪುರಾಣಕಥೆಗಳನ್ನ ಸಾರುತ್ತಿವೆ.

    ‘ಹಗಲು ಮೈಸೂರು ದಸರಾದ ವೈಭವ ನೋಡು, ರಾತ್ರಿ ಮಂಜಿನ ನಗರಿ ಮಡಿಕೇರಿ ದಸರಾದ ಸೊಬಗು ನೋಡು’ ಎಂಬ ಮಾತಿನಂತೆ ಮಡಿಕೇರಿ ದಸರಾ, ರಾತ್ರಿ 12 ಗಂಟೆಗೆ ಶುರುವಾದ್ರೆ ದಶಮಂಟಪಗಳ ಉತ್ಸವ ಬೆಳಿಗ್ಗೆ 5 ಗಂಟೆವರೆಗೂ ನಡೆಯುತ್ತದೆ. ರಾಜ್ಯದ ವಿವಿಧೆಡೆಗಳಿಗೆ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬೀಳುತ್ತಾರೆ‌‌. ರಾತ್ರಿಯಿಡೀ ಮಂಜಿನ ನಗರಿಯ ರಸ್ತೆಗಳಲ್ಲಿ ಜನಪ್ರವಾಹವೇ ಹರಿಯುತ್ತದೆ. ದೇವಾನು ದೇವತೆಗಳ ಶಕ್ತಿ ಲೀಲೆಗಳನ್ನು ಕಣ್ತುಂಬಿ ಕೊಂಡ ಜನತೆ ಖುಷಿಯ ಅಲೆಯಲ್ಲಿ ತೇಲುತ್ತಾರೆ.

    ಪುರಾಣ ಹಾಗು ಪೌರಾಣಿಕ ಕಥಾವಸ್ತುಗಳನ್ನು ನಿರೂಪಿಸಿ ನೀಡಿದ ಪ್ರದರ್ಶನ ಕಣ್ಣಿಗೆಕಟ್ಟುವಂತೆ ದೇವಾನು ದೇವತೆಗಳ ಶಕ್ತಿ, ಚಮತ್ಕಾರ, ಪವಾಡಗಳನ್ನು ವಿವರಿಸುತ್ತದೆ. ಒಂದೆಡೆ ದಶಮಂಟಪಗಳ ಮೆರವಣಿಗೆ ನಿಧಾನಗತಿಯಲ್ಲಿ ಸಾಗುತ್ತಿದ್ದರೆ, ಜನರು ಅಲ್ಲಲ್ಲಿ ನಿಂತು ಕುಣಿದು ಕುಪ್ಪಳಿಸುತ್ತಾ ಎಂಜಾಯ್ ಮಾಡುತ್ತಾರೆ. ವರ್ಷಕ್ಕೊಮ್ಮೆ ಆಗಮಿಸೋ ನವರಾತ್ರಿ ಉತ್ಸವವನ್ನು ರಾತ್ರಿಯಿಡೀ ಕಣ್ತುಂಬಿಕೊಂಡು ಸಂತಸದ ಅಲೆಯಲ್ಲಿ ತೇಲುತ್ತಾರೆ.

    ಒಟ್ನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ತೆರೆಬೀಳುತ್ತಿದ್ದಂತೆ ಶುರುವಾಗೋ ಮಂಜಿನ ನಗರಿ ದಸರಾ ಅಬ್ಬರ ಸಹಸ್ರಾರು ಜನರ ಸಂಭಮ ಉಲ್ಲಾಸಕ್ಕೆ ಕಾರಣವಾಗುತ್ತೆ, ವಿವಿಧ ಜಿಲ್ಲೆಗಳಿಂದ ಬರೋ ಸಹಸ್ರಾರು ಪ್ರವಾಸಿಗರು, ಸಾಗರೋಪಾದಿಯಲ್ಲಿ ನೆರೆದು ವೈಭವದ ದಶಮಂಟಪಗಳನ್ನು ವೀಕ್ಷಿಸುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿ, ಎರಡೆರಡು ಟ್ರ್ಯಾಕ್ಟರ್ ಗಳನ್ನು ಬಳಸಿ ಸಿದ್ಧಪಡಿಸಿದ ಟ್ಯಾಬ್ಲೋಗಳ ಪ್ರದರ್ಶನ ಮಾತ್ರ ಇಲ್ಲಿಗೆ ಆಗಮಿಸೋ ಪ್ರವಾಸಿಗರನ್ನ ಒಮ್ಮೆ ದೇವಲೋಕ ಸಂಚಾರಮಾಡಿಸೋದ್ರಲ್ಲಿ ಅಚ್ಚರಿಯಿಲ್ಲ.

    ಬನ್ನಿ ಮಡಿಕೇರಿ ದಸರಾ ಕಣ್ತುಂಬಿಕೊಳ್ಳಿ….

  • ಭಕ್ತಿ-ಸಂಪ್ರದಾಯಗಳ ಸಂಗಮ ಮಡಿಕೇರಿ ದಸರಾ ರೂಢಿಗೆ ಬಂದಿದ್ದು ಹೇಗೆ?

    ಭಕ್ತಿ-ಸಂಪ್ರದಾಯಗಳ ಸಂಗಮ ಮಡಿಕೇರಿ ದಸರಾ ರೂಢಿಗೆ ಬಂದಿದ್ದು ಹೇಗೆ?

    ಮೈಸೂರಿನಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ನಡೆಯುವಂತೆ ಕೊಡಗಿನ ಮಡಿಕೇರಿ ದಸರಾ ಆಚರಣೆಯೂ ಅಷ್ಟೇ ಪ್ರಸಿದ್ಧಿ. ಮೈಸೂರು ದಸರಾ ಬೆಳಗ್ಗೆ ಆರಂಭವಾಗಿ ಸಂಜೆ ಸೂರ್ಯಾಸ್ತದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಇತರ ಹಿನ್ನೆಲೆ ಕೂಡ ಅಷ್ಟೇ ವಿಸ್ಮಯ ಮತ್ತು ಕೌತುಕವಾಗಿದೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ರೂಢಿಗೆ ಬಂದಿದ್ದು ಹೇಗೆ?
    ನೂರಾರು ವರ್ಷಗಳ ಹಿಂದೆ ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆ ಮಾಡುತ್ತಿದ್ದರು. ಕೊಡಗನ್ನು ಆಳಿದ ದೊಡ್ಡವೀರರಾಜೇಂದ್ರ ಮಹಾರಾಜರು ಸಹಾ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿ ಉತ್ಸವ ಆಚರಿಸುತ್ತಿದ್ದರು ಎಂಬುದಕ್ಕೆ ಅನೇಕ ಉಲ್ಲೇಖಗಳಿವೆ.

    Madikeri 2 1

    ಇನ್ನು ಜನಪದ ಉಲ್ಲೇಖದ ಪ್ರಕಾರ, ಸುಮಾರು‌ 300 ವರ್ಷಗಳ ಹಿಂದೆ ಮಡಿಕೇರಿಯ ಸುತ್ತಮುತ್ತ ಭಾರೀ ಸಾಂಕ್ರಾಮಿಕ ರೋಗ ತಲೆದೋರಿ ನೂರಾರು ಮಂದಿ ಸಾವನ್ನಪ್ಪಿದ್ದರಂತೆ, ಆಗ ಊರಿನ ಜನರೆಲ್ಲಾ ಸೇರಿ ತಮ್ಮ ಊರಿನ ಶಕ್ತಿದೇವತೆಗಳ ಮೊರೆ ಹೋದರಂತೆ. ಊರ ಜನರ ಮೊರೆ ಆಲಿಸಿದ ಶಕ್ತಿದೇವತೆಗಳು ರೋಗ ದೂರ ಮಾಡಿದವಂತೆ. ಅಂದಿನಿಂದ ಪ್ರತಿವರ್ಷವೂ ನವರಾತ್ರಿಯ 9 ದಿನಗಳ ಕಾಲ ಈ ಶಕ್ತಿದೇವತೆಗಳ ಕರಗ ಉತ್ಸವ ಆಚರಿಸಲಾಗುತ್ತದೆ. ಆ 9 ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಿ ಭಕ್ತರಿಗೆ ದೇವತೆಗಳು ಆಶೀರ್ವಾದ ಮಾಡುತ್ತವೆ ಅನ್ನೋದು ನಂಬಿಕೆ. ಅದಕ್ಕಾಗಿ ಇಲ್ಲಿ ಪ್ರತಿವರ್ಷವೂ ವಿಜಯದಶಮಿಯ ಮುನ್ನಾ ದಿನ ಶಕ್ತಿದೇವತೆಗಳ ಆರಾಧನೆ ಮಾಡಲಾಗುತ್ತದೆ.

    Madikeri 1

    ಪೌರಾಣಿಕ ಹಿನ್ನೆಲೆಯೂ ಉಂಟು
    ಪೌರಾಣಿಕ ಹಿನ್ನೆಲೆಯ ಪ್ರಕಾರ, ಈ ಹಿಂದೆ ಪಾರ್ವತೀ ದೇವಿ ದುಷ್ಟ ಸಂಹಾರ ಮಾಡಲು ಹೊರಡುವ ಮುನ್ನ ಮಹಾವಿಷ್ಣುವನ್ನ ಭೇಟಿ ಮಾಡಿದಳಂತೆ. ಆಗ ಮಹಾವಿಷ್ಣು ತನ್ನ ಆಯುಧಗಳಾದ ಶಂಖ, ಚಕ್ರ, ಗಧೆ ಮತ್ತು ಪದ್ಮಗಳನ್ನು ಪಾರ್ವತಿದೇವಿಗೆ ಕೊಟ್ಟು ಕಳುಹಿಸಿದನಂತೆ. ಆಗ ಪಾರ್ವತೀ ದೇವಿ ವಿವಿಧ ದೇವತೆಗಳ ರೂಪ ತಾಳಿ, ಅದೇ ಆಯುಧಗಳಿಂದ ಆ ರಾಕ್ಷಸರನ್ನು ಸಂಹರಿಸಿದಳಂತೆ. ಹಾಗಾಗಿ ಅಂದಿನಿಂದ ಪ್ರತೀವರ್ಷವೂ ಆ ಊರಿನ ನಾಲ್ಕು ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿ, ಕುಂದುರುಮೊಟ್ಟೆ ಚೌಟಿಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮನ ಕರಗದ ಉತ್ಸವಗಳನ್ನು ಅಚರಿಸುವ ಪದ್ದತಿ ಆರಂಭವಾಯಿತು ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ.

  • ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ

    ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ

    – ಪ್ರಮುಖ ಬೀದಿಗಳಲ್ಲಿ ಶಕ್ತಿ ದೇವತೆಗಳ ಮೆರವಣಿಗೆ; ಕರಗ ವೈಭವ
    – ಸಂಗೀತ ಕಾರ್ಯಕ್ರಮಕ್ಕೆ ರಘು ದೀಕ್ಷಿತ್‌ಗೆ ಆಹ್ವಾನ; ಮಂತರ್ ಗೌಡ

    ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾಕ್ಕೆ (Madikeri Dasara) ಇಂದಿನಿಂದ ಚಾಲನೆ ಸಿಕ್ಕಿದೆ. 9 ದಿನಗಳ ದಸರಾ ಉತ್ಸವ ಇಂದು ಕರಗ ಹೊರುವ ಮೂಲಕ ಪ್ರಾರಂಭಗೊಂಡಿದೆ. ನಗರದ ನಾಲ್ಕು ಶಕ್ತಿ ದೇವತೆಗಳಿಗೆ ಪೂಜೆ ನೆರವೇರಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ 1 ವಾರ ನಗರದಲ್ಲಿ ವೈವಿದ್ಯಮಯ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ.

    ಎಲ್ಲೆಡೆ ಈಗ ನಾಡ ಹಬ್ಬ ದಸರಾ ಸಂಭ್ರಮ ಶುರುವಾಗಿದೆ, ಜಗತ್‌ಪ್ರಸಿದ್ಧ ಮೈಸೂರು ದಸರಾ ಜೊತೆಗೆ ಮಡಿಕೇರಿ ದಸರಾಕ್ಕೂ ವಿದ್ಯುಕ್ತ ಚಾಲನೆ ಸಿಕ್ಕಿದೆ. 300 ವರ್ಷಗಳ ಇತಿಹಾಸ ಹೊಂದಿರೋ ಮಂಜಿನ ನಗರಿ ಮಡಿಕೇರಿ ದಸರಾ ಇಂದು ನಗರದ ನಾಲ್ಕು ಶಕ್ತಿದೇವತೆಗಳ ಕರಗಾಕ್ಕೆ ಪೂಜೆ ಸಲ್ಲಿಸೋ ಮೂಲಕ ಚಾಲನೆ ಲಭಿಸಿದೆ. ನಗರದ ಪಂಪಿನ ಕೆರೆಬಳಿಯಲ್ಲಿ ನಾಲ್ಕೂ ಕರಗಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಕೊಡಗು ಉಸ್ತುವಾರಿ ಸಚಿವ ಬೋಸರಾಜು, ಮಡಿಕೇರಿ ಶಾಸಕ ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟರಾಜಾ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಕರಗ ಹೊರೋ ಮೂಲಕ ದಸರಾ ಪ್ರಾರಂಭಗೊಂಡಿದ್ದು ನಾಳೆಯಿಂದ ವೈವಿದ್ಯಮಯ ಕಾರ್ಯಕ್ರಮಗಳು ಕಲಾಸಕ್ತರ ಮನತಣಿಸಲು ರೆಡಿಯಾಗಿವೆ.

    ಇಂದು ಸಂಜೆ ಕರಗಗಳಿಗೆ ಪೂಜೆಸಲ್ಲಿಸಿದ ದಸರಾ ಸಮಿತಿ ಸದಸ್ಯರು ದಸರಾ ಯಶಸ್ಸಿಗೆ ದೇವರಿಗೆ ಮೊರೆಯಿಟ್ಟಿದ್ದಾರೆ. ನಗರದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿಮ್ಮ ದೇವಾಲಯಗಳ ಕರಗಗಳನ್ನು ಹೊತ್ತ ವೃತದಾರಿಗಳು ನವರಾತ್ರಿಯ ಒಂಬತ್ತು ದಿನಗಳು ನಗರದ ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ. ಶತಮಾನಗಳ ಹಿಂದೆ ಬರಗಾಲದಿಂದ ಮಡಿಕೇರಿಯಲ್ಲಿ ಬೀಕರ ಕಾಲರಾ, ಆವರಿಸಿದ್ದ ಸಂದರ್ಭ ನಗರದ ದೇವತೆಗಳನ್ನು ಕರಗದ ಮೂಲಕ ನಗರದ ಪ್ರದಕ್ಷಿಣೆ ಮಾಡಿ ಪೂಜೆಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ವರ್ಷಕ್ಕೆ ಒಂದು ಬಾರಿ ದಸರಾ ಸಂದರ್ಭದಲ್ಲಿ ಕರಗ ಉತ್ಸವ ನಡೆಸಲಾಗುತ್ತೆ. ಮಡಿಕೇರಿಯ ಶಕ್ತಿದೇವತೆಗಳೆಂದು ಕರೆಸಿಕೊಳ್ಳೋ ನಾಲ್ಕೂ ದೇವಿಯರನ್ನು ಆರಾಧಿಸಿ ಜನರು ಪೂಜಿಸುತ್ತಾರೆ. ನಗರದಲ್ಲಿ ಕರಗ ಸಂಚರಿಸೋ ವೇಳೆ ಪ್ರತಿ ಮನೆಮುಂದೆಯೂ ಬಣ್ಣ ಬಣ್ಣದ ಚಿತ್ತಾರದ ರಂಗೋಲಿಬಿಡಿಸಿ ದೇವರನ್ನ ಸ್ವಾಗತಿಸಲಾಗುತ್ತೆ, ನಾಡಿಗೆ ಶುಭವಾಗಲಿ ಎಂದು ಹಾರೈಸಿ ಪೂಜೆ ಸಲ್ಲಿಸಲಾಗುತ್ತೆ.

    ಸಚಿವ ಭೋಸರಾಜು ಹೇಳಿದ್ದೇನು?
    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ, ನಗರದ ಶಕ್ತಿ ದೇವತೆಗಳಿಗೆ ವಿಶೇಷ ಪ್ರಾರ್ಥನೆಯೊಂದಿಗೆ ದಸರಾಕ್ಕೆ ಚಾಲನೆ ನೀಡಲಾಗಿದೆ. ಭಕ್ತಿಭಾವದಿಂದ ಕರಗ ಉತ್ಸವದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಸಚಿವರು ತಿಳಿಸಿದರು.

    ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸರ್ಕಾರ ಮಡಿಕೇರಿ ದಸರಾ ಉತ್ಸವಕ್ಕೆ 1.50 ಕೋಟಿ ರೂ. ಬಿಡುಗಡೆಗೆ ಆದೇಶ ಮಾಡಿದ್ದು, ಈ ಬಾರಿ ಸಂಗೀತ ಕಾರ್ಯಕ್ರಮಕ್ಕೆ ರಘು ದೀಕ್ಷಿತ್ ಅವರನ್ನು ಆಹ್ವಾನಿಸಲಾಗುವುದು ಎಂದರು.

    ನಗರಸಭೆ ಅಧ್ಯಕ್ಷ ಪಿ.ಕಲಾವತಿ, ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಉಪ ವಿಭಾಗೀಯ ಅಧಿಕಾರಿ ನಿತಿನ್ ಚಕ್ಕಿ, ಡಿವೈಎಸ್ಪಿ ಸೂರಜ್, ಪೌರಾಯುಕ್ತರಾದ ಎಚ್.ಆರ್ ರಮೇಶ್, ತಹಶೀಲ್ದಾ‌ರ್‌ ಶ್ರೀಧರ, ನಗರ ದಸರಾ ಸಮಿತಿ ಅಧ್ಯಕ್ಷ ಬಿ.ಕೆ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ವಿವಿಧ ಉಪ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಭಕ್ತರ ಜಯಘೋಷದೊಂದಿಗೆ ಶಕ್ತಿದೇವತೆಗಳ ಮೆರವಣಿಗೆ
    ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಶಕ್ತಿ ದೇವತೆಗಳಾದ ಶ್ರೀ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ, ಶ್ರೀ ದಂಡಿನ ಮರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಲಯಗಳ ಕರಗಗಳಿಗೆ ಪುಷ್ಪಾಲಂಕೃತವಾಗಿ ಭಕ್ತರ ಜಯಘೋಷದೊಂದಿಗೆ ಮರೆವಣಿಗೆ ಆರಂಭಿಸಿದವು. ಪೂಜೆ ಸಲ್ಲಿಕೆ ಬಳಿಕ ನಾಲ್ಕು ಶಕ್ತಿ ದೇವತೆಗಳ ಕರಗಗಳು ಮೆರವಣಿಗೆ ಹೊರಟವು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

  • ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಬಂದಿದ್ದು ಹೇಗೆ?

    ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಬಂದಿದ್ದು ಹೇಗೆ?

    – ಕರ್ನಾಟಕದಲ್ಲಿ ದಸರಾ ವೈಭವ

    ಸರಾ ಎಂದೊಡನೆ ಥಟ್ಟನೆ ನೆನಪಾಗುವುದು ಸಾಂಸ್ಕೃತಿಕ ನಗರಿ ಮೈಸೂರು (Mysuru Dasara). ಆದರೆ, ಈ ಸಾಂಸ್ಕೃತಿಕ ಉತ್ಸವದ ಬೇರುಗಳು ಒಂದೊಂದು ಕಡೆಗೆ ಕವಲೊಡೆದು ನಿಂತಿದೆ. ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದಾಗ ದಸರಾದ ಮೂಲ ವಿಜಯನಗರ ಸಾಮ್ರಾಜ್ಯದಲ್ಲಿದೆ. ರಾಜ ಕೃಷ್ಣದೇವರಾಯ ಅವರ ಕಾಲದಲ್ಲಿ ವೈಭವದಿಂದ ಈ ಹಬ್ಬ ಆಚರಿಸಲಾಗುತ್ತಿತ್ತು. ಅದು ಅಲ್ಲಿಂದ ನೇರವಾಗಿ ಮೈಸೂರಿಗೆ ಬಳುವಳಿಯಾಗಿ ಬಂದಿಲ್ಲ. ಇಲ್ಲೂ ಒಂದು ಇತಿಹಾಸವಿದೆ. ಹಳೆ ಮೈಸೂರು ಭಾಗದ ಪಟ್ಟಣವೊಂದರಲ್ಲಿ ದಸರಾವನ್ನು ಮೊದಲು ಆಚರಿಸಲಾಯಿತು. ಅದುವೇ ಈಗಿನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna Dasara). ನಂತರ ಇದರ ಪ್ರಭಾವ ಎಲ್ಲೆಡೆ ಹಬ್ಬಿತು. ಹಲವು ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ದಸರಾ ಆಚರಣೆ ಪ್ರಾರಂಭಗೊಂಡವು. ಅದು ಪರಂಪರಾಗತವಾಗಿ ಮುಂದುವರಿದುಕೊಂಡು ಬಂದವು.

    ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭ
    ಕರ್ನಾಟಕದಲ್ಲಿ ದಸರಾ ಆಚರಣೆಗಳು ವಾಸ್ತವವಾಗಿ 1610 ರಲ್ಲಿ ಪ್ರಾರಂಭವಾಯಿತು. ರಾಜ ರಾಜ ಒಡೆಯರ್ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣ ಎಂಬ ಸಣ್ಣ ಪಟ್ಟಣದಲ್ಲಿ ಇದು ಆರಂಭಗೊಂಡಿತು ಎಂದು ಇತಿಹಾಸ ಹೇಳುತ್ತದೆ. ಆಗ ಶ್ರೀರಂಗಪಟ್ಟಣವು ಒಡೆಯರ್ ರಾಜವಂಶದ ರಾಜಧಾನಿಯಾಗಿತ್ತು. ಮುಂದಿನ ಶತಮಾನದ ವರೆಗೆ ಹಾಗೆಯೇ ಮುಂದುವರಿದಿತ್ತು. ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

    ಮೈಸೂರಿಗೆ ರಾಜಧಾನಿ ಸ್ಥಳಾಂತರ
    17 ನೇ ಶತಮಾನದ ಅಂತ್ಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರಾಜಧಾನಿಯನ್ನು ಮೈಸೂರಿಗೆ ಸ್ಥಳಾಂತರಿಸಿದರು. ಅದರೊಂದಿಗೆ, ಅದ್ಧೂರಿ ದಸರಾ ಆಚರಣೆಗಳು ಸಹ ಮೈಸೂರಿಗೆ ಸ್ಥಳಾಂತರಗೊಂಡವು. ಒಂಬತ್ತು ದಿನಗಳ ಉತ್ಸವದ ಸಮಯದಲ್ಲಿ ಸ್ಥಳೀಯ ಜನರು (ಶ್ರೀರಂಗಪಟ್ಟಣ) ಸರಳ ಆಚರಣೆಗಳನ್ನು ಮಾತ್ರ ಕೈಬಿಡದೇ ಮುಂದುವರೆಸಿದರು. ಆದರೆ, 2009 ರಲ್ಲಿ ಸ್ಥಳೀಯರ ಭಾರಿ ಬೇಡಿಕೆಯಿಂದಾಗಿ ಜಂಬೂ ಸವಾರಿ ಸೇರಿದಂತೆ ಮೂರು ದಿನಗಳ ದಸರಾ ಆಚರಣೆಯನ್ನು ಶ್ರೀರಂಗಪಟ್ಟಣದಲ್ಲಿ ನಡೆಸಲಾಯಿತು. ಆ ಪರಂಪರೆ ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಆದ್ದರಿಂದಲೇ ಮೈಸೂರು ದಸರಾ ಸಂದರ್ಭದಲ್ಲೇ ಶ್ರೀರಂಗಪಟ್ಟಣದಲ್ಲೂ ದಸರಾ ನಡೆಯಲಿದೆ.

    ಮಂಗಳೂರು ದಸರಾ: ಬಾರಿ ಚಂದ
    ಮಂಗಳೂರಿನಲ್ಲಿ ದಸರಾವನ್ನು ಆಡುಮಾತಿನಲ್ಲಿ ಮಾರ್ನಾಮಿ ಎಂದು ಕರೆಯಲಾಗುತ್ತದೆ. ಕರಾವಳಿ ನಗರದಲ್ಲಿ ಈ ಹಬ್ಬವು ಮಂಗಳಾದೇವಿ, ಕುದ್ರೋಳಿ ಗೋಕರ್ಣನಾಥೇಶ್ವರ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳ ಸುತ್ತ ಸುತ್ತುತ್ತದೆ. ಸರ್ವಜನಿಕ ಶಾರದಾ ಪೂಜಾ ಮಹೋತ್ಸವ (ಸಾರ್ವಜನಿಕ ಆಚರಣೆ) ಮತ್ತೊಂದು ಪ್ರಮುಖ ಅಂಶವಾಗಿದೆ. ಎಲ್ಲಾ ದೇವಾಲಯಗಳು ಶಾರದಾ ದೇವಿಯ ಅಲಂಕೃತ ವಿಗ್ರಹಗಳನ್ನು ತಯಾರಿಸುತ್ತವೆ. ದೈನಂದಿನ ಪೂಜೆಗಳ ನಂತರ ಭವ್ಯ ಮೆರವಣಿಗೆಗಳನ್ನು ನಡೆಸುತ್ತವೆ. ಒಂಬತ್ತು ದಿನಗಳು ಸಾವಿರಾರು ಭಕ್ತರು ಸಾಕ್ಷಿಯಾಗುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳಿಂದ ತುಂಬಿರುತ್ತವೆ. ಹುಲಿ ವೇಷ ಅಥವಾ ಹುಲಿ ನೃತ್ಯವು ಉತ್ಸವಕ್ಕೆ ಭೂಷಣದಂತಿರುತ್ತದೆ. ವಿವಿಧ ಕಲಾ ಪ್ರಕಾರಗಳು, ನೃತ್ಯ, ಸಂಗೀತ ಮತ್ತು ಸಾಂಪ್ರದಾಯಿಕ ರಥಗಳನ್ನು ಒಳಗೊಂಡಿರುವ ಭವ್ಯವಾದ ಟ್ಯಾಬ್ಲೋಗಳ ಮೆರವಣಿಗೆಯೂ ಇರುತ್ತದೆ. ಇದನ್ನೂ ಓದಿ: ದಸರಾ ಉದ್ಘಾಟಕಿ ಬಾನು ಮುಷ್ತಾಕ್‌ಗೆ ಹೈಕೋರ್ಟ್ ಸಿಗ್ನಲ್ – ವಾದ, ಪ್ರತಿವಾದ ಹೇಗಿತ್ತು?

    ಮೈಸೂರು ದಸರಾ: ಎಷ್ಟೊಂದು ಸುಂದರ
    ದಸರ ಆಚರಣೆಯನ್ನು ಮೂಲತಃ ವಿಜಯನಗರ ರಾಜರು ಆಚರಿಸುತ್ತಿದ್ದರು. ನಂತರ ಇದನ್ನು ಮಹಾನವಮಿ ಎಂದು ಕರೆಯಲಾಯಿತು. ಸಾಮ್ರಾಜ್ಯದ ಪತನದ ನಂತರ, ಮೈಸೂರಿನ ಒಡೆಯರ್, ಮುಖ್ಯವಾಗಿ ರಾಜ ಒಡೆಯರ್ ಈ ಸಂಪ್ರದಾಯವನ್ನು ಮುಂದುವರೆಸಿದರು. 10 ದಿನಗಳ ಉತ್ಸವದ ಸಮಯದಲ್ಲಿ ಅವರು ರಾಜ ನಗರದಲ್ಲಿ ಆಚರಣೆಗಳಿಗೆ ಹೊಸ ಪರಂಪರೆಯನ್ನು ಸೇರಿಸಿದರು. ಅದರ ಪ್ರತಿಬಿಂಬ ಎಂಬಂತೆ ರಾಜಮನೆತನ, ಸ್ಮಾರಕಗಳು, ಪ್ರಮುಖ ಸರ್ಕಾರಿ ಕಟ್ಟಡಗಳು ಮತ್ತು ನಗರದ ಪ್ರಮುಖ ಪ್ರದೇಶಗಳು ಈಗ ಬೆಳಗುತ್ತಿವೆ. ಮೈಸೂರಿನ ಹಳೆಯ-ಪ್ರಪಂಚದ ಮೋಡಿಯನ್ನು ಪ್ರತಿಬಿಂಬಿಸುವ ದರ್ಬಾರ್‌ಗಳು ಆತಿಥೇಯ ಕವಿ ಸಭೆಗಳು, ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮತ್ತು ಚಲನಚಿತ್ರೋತ್ಸವಗಳು ಎಲ್ಲವೂ ಮೇಳೈಸಿವೆ. ವಿಜಯದಶಮಿ ದಿನದಂದು ಉತ್ಸವಗಳು ಪ್ರಸಿದ್ಧ ಜಂಬೂ ಸವಾರಿಯೊಂದಿಗೆ ವಿಜೃಂಭಣೆಯಿಂದ ಕೊನೆಗೊಳ್ಳುತ್ತವೆ. ಇದು ಅರಮನೆಯಿಂದ ಪ್ರಾರಂಭವಾಗಿ ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಅಲಂಕರಿಸಿದ ಆನೆಯ ಮೇಲೆ ಚಿನ್ನದಂಬಾರಿ ಮೇಲೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತುಕೊಂಡು ಹೋಗುವುದು ಪ್ರಮುಖ ಆಕರ್ಷಣೆಯಾಗಿದೆ. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಎಲ್ಲಾ ಉತ್ಸವಗಳ ಮುಕ್ತಾಯವನ್ನು ಸೂಚಿಸುತ್ತದೆ.

    ಮಡಿಕೇರಿ ದಸರಾ: ಮಾರಿಯಮ್ಮ ಸರ್ವೋಚ್ಚ ಆಳ್ವಿಕೆ ನಡೆಸುವ ಸ್ಥಳ
    ರಾಜ ದೊಡ್ಡವೀರ ರಾಜೇಂದ್ರ ಮೈಸೂರಿನ ಪ್ರತಿರೂಪಗಳಂತೆಯೇ ಆಯುಧ ಪೂಜೆ ಮತ್ತು ದೇವಿ ಪೂಜೆಯನ್ನು ಮಾಡಿ ನವರಾತ್ರಿಯನ್ನು ಆಚರಿಸುತ್ತಿದ್ದನೆಂದು ಹೇಳಲಾಗುತ್ತದೆ. ಬೆಟ್ಟದ ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವವು ಮಾರಿಯಮ್ಮ ದೇವತೆಗೆ ಸಮರ್ಪಿತವಾಗಿದೆ. ಕೊಡಗಿನಲ್ಲಿ ದೇವಿ ಹೆಸರಿನಲ್ಲಿ ನಾಲ್ಕು ದೇವಾಲಯಗಳಿವೆ. ಮಾರಿಯಮ್ಮನ ನೃತ್ಯವು ವಿಶಿಷ್ಟವಾದ ಧಾರ್ಮಿಕ ಜಾನಪದ ನೃತ್ಯ (ಕರಗ)ವನ್ನು ಹೊಂದಿದೆ. ಇಲ್ಲಿ ಹಬ್ಬವು ಭಕ್ತರಿಗೆ ಸಂಬಂಧಿಸಿದೆ. ಆದ್ದರಿಂದ ಇದನ್ನು ಜನೋತ್ಸವ ಎಂದೂ ಕರೆಯುತ್ತಾರೆ. ಈ ಪ್ರದೇಶದ ಪ್ರತಿಯೊಂದು ದೇವಾಲಯವು ‘ಮಂಟಪ’ ಅಥವಾ ಟ್ಯಾಬ್ಲೋಗಳಿಗೆ ತನ್ನದೇ ಆದ ಥೀಮ್ ಅನ್ನು ಹೊಂದಿದೆ.

    ಶಿವಮೊಗ್ಗ ದಸರಾ: ಒಂದು ಮಿನಿ ಮೈಸೂರು ದಸರಾ
    ಶಿವಮೊಗ್ಗದ ಆಚರಣೆಗಳು ಇತ್ತೀಚಿನದ್ದಾಗಿದ್ದು ಮೈಸೂರು ದಸರಾ ಮಾದರಿಯಲ್ಲಿವೆ. ಹಬ್ಬಗಳ ಕೇಂದ್ರವಾಗಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಶಿವಮೊಗ್ಗವು ನವರಾತ್ರಿಯ ಸಮಯದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಮೇಳಗಳು ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತದೆ. ಇತ್ತೀಚೆಗೆ, ಈ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಚಲನಚಿತ್ರ ತಾರೆಯರು ಮತ್ತು ಗಾಯಕರು ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಜಂಬೂಸವಾರಿ ಕೂಡ ಇಲ್ಲಿ ನಡೆಯುವ ಉತ್ಸವಗಳ ಭಾಗವಾಗಿದೆ. ಈ ಪ್ರದೇಶದ ಸುತ್ತಮುತ್ತಲಿನ ದೇವಾಲಯಗಳು ಸಹ ಉತ್ಸವಗಳಲ್ಲಿ ಭಾಗವಹಿಸುತ್ತವೆ. ಶಿವಮೊಗ್ಗದಲ್ಲಿ ನಡೆಯುವ ದಸರಾ ಆಚರಣೆಗಳು ಬರಹಗಾರರು, ಕವಿಗಳು, ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಇತರ ಕಲಾವಿದರ ಸಂಗಮಕ್ಕೆ ಕಾರಣವಾಗುತ್ತವೆ.

  • ಮಡಿಕೇರಿ ದಸರಾ – ದಶ ದೇವಾಲಯಗಳಲ್ಲಿ ಯದುವೀರ್ ಒಡೆಯರ್ ವಿಶೇಷ ಪೂಜೆ

    ಮಡಿಕೇರಿ ದಸರಾ – ದಶ ದೇವಾಲಯಗಳಲ್ಲಿ ಯದುವೀರ್ ಒಡೆಯರ್ ವಿಶೇಷ ಪೂಜೆ

    ಮಡಿಕೇರಿ: ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುವ ದಸರಾದಂತೆಯೇ ಕೊಡಗಿನ ಮಡಿಕೇರಿಯ ದಸರಾ (Madikeri Dasara) ಆಚರಣೆಯೂ ಅಷ್ಟೇ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ (Mysuru Dasara) ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹೀಗಾಗಿ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಮಡಿಕೇರಿಯತ್ತ ಹೆಜ್ಜೆ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಯದುವೀರ್ ಒಡೆಯರ್  (Yaduveer Wadiyar) ದಸರಾ ಮಂಟಪಗಳು ಹೊರಡುವ ದಶ ದೇವಾಲಯಗಳಿಗೆ ತೆರಳಿ ದಸರಾ ಯಶಸ್ವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

    ನಾಡ ಹಬ್ಬ ಮೈಸೂರು ದಸರಾಗೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಹಬ್ಬದ ಸಂಭ್ರಮ ಕಳೆಗಟ್ಟಿದೆ. ಅಲ್ಲದೇ ಮೈಸೂರು ದಸರಾ ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಇತ್ತ ಮಂಜಿನ ನಗರಿ ಮಡಿಕೇರಿಯ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಇಂತಹ ಅದ್ಧೂರಿಯಾದ ಮಡಿಕೇರಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್ ಇದೇ ಮೊದಲ ಬಾರಿಗೆ ಮಡಿಕೇರಿ ನಗರದ ದಶ ದೇವಾಲಯಗಳಿಗೆ ತೆರಳಿ ಮಡಿಕೇರಿ ದಸರಾ ಉತ್ಸವಕ್ಕೆ ವಿಶೇಷ ಪೂಜೆ ಪ್ರಾರ್ಥನೆ ನೇರವೇರಿಸಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ ಕೇಸ್;‌ ಬೋಯಿಂಗ್‌, ಹನಿವೆಲ್‌ ವಿರುದ್ಧ ಮೃತರ ಕುಟುಂಬಗಳಿಂದ ಮೊಕದ್ದಮೆ

    ಇಂದು ಬೆಳಗ್ಗೆಯಿಂದಲ್ಲೇ ಮಡಿಕೇರಿ ನಗರದ ಶ್ರೀ ಕೋಟೆ ಗಣಪತಿ ದೇವಾಲಯ, ದೇಚೂರು ಶ್ರೀರಾಮ ಮಂದಿರ, ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳದ ಚೌಟಿ ಮರಿಯಮ್ಮ, ದಂಡಿನ ಮರಿಯಮ್ಮ, ಕಂಚಿ ಕಾಮಾಕ್ಷಿ ದೇವಾಲಯ, ಕೋಟೆ ಮರಿಯಮ್ಮ ದೇವಾಲಯ ಸೇರಿದಂತೆ ದಶ ದೇವಾಲಯಗಳಿಗೆ ದಸರಾ ಸಮಿತಿಯ ಸದಸ್ಯರೊಂದಿಗೆ ಸೇರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಇದೇ ಸಂದರ್ಭ ಮಾತಾನಾಡಿದ ಯದುವೀರ್, ಮೈಸೂರು ದಸರಾ ಸಮಯದಲ್ಲಿ ಅರಮನೆಯಲ್ಲಿ ಕೆಲ ಧಾರ್ಮಿಕ ವಿಧಿವಿಧಾನಗಳನ್ನು ಮಾಡುವ ಸಂದರ್ಭದಲ್ಲಿ ಅರಮನೆಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಡಿಕೇರಿ ದಸರಾ ಯಶಸ್ವಿಯಾಗಿ ನಡೆಯಬೇಕು ಎಂದು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲೂ ಬಿಹಾರ ಮಾಡೆಲ್‌ – ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಿದ್ಧತೆ

    ಸಾಂಸ್ಕೃತಿಕ ನಗರಿ ಮೈಸೂರು ದಸರಾಕ್ಕೆ ತನ್ನದೆ ಆದ ಹಿನ್ನೆಲೆ ಇರುವ ಹಾಗೆ ಇತ್ತ ಮಂಜಿನ ನಗರಿ ಮಡಿಕೇರಿ ದಸರಾಕ್ಕೂ ಐತಿಹಾಸಿಕ ಹಿನ್ನೆಲೆ ಇದೆ. ನೂರಾರು ವರ್ಷಗಳ ಹಿಂದೆ ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆ ಮಾಡುತ್ತಿದ್ದರು. ಕೊಡಗನ್ನು ಆಳಿದ ದೊಡ್ಡವೀರರಾಜೇಂದ್ರ ಮಹಾರಾಜರು ಸಹ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿ ಉತ್ಸವ ಆಚರಿಸುತ್ತಿದ್ದರು ಎಂಬದಕ್ಕೆ ಅನೇಕ ಉಲ್ಲೇಖಗಳಿವೆ. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ದಂಧೆ – 2.62 ಲಕ್ಷ ಮೌಲ್ಯದ ಅಕ್ಕಿ ಜಪ್ತಿ, ಓರ್ವ ಅರೆಸ್ಟ್

    300 ವರ್ಷಗಳ ಇತಿಹಾಸ ಇರುವ ಮಡಿಕೇರಿ ದಸರಾಕ್ಕೆ ತನ್ನದೆ ಆದ ಪೌರಾಣಿಕ ಹಿನ್ನೆಲೆಯೂ ಇದೆ. ಹೀಗಾಗಿ ಮೈಸೂರು ದಸರಾ ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಇತ್ತ ಮಂಜಿನ ನಗರಿ ಮಡಿಕೇರಿಯ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ. ಈ ನಡುವೆ ಇದೇ ಮೊದಲ ಬಾರಿಗೆ ಮಡಿಕೇರಿ ದಸರಾ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಯದುವೀರ್ ಒಡೆಯರ್ ವಿಶೇಷ ಪೂಜೆ ನೆರವೇರಿಸಿರುವುದರಿಂದ ದಸರಾ ಸಮಿತಿಯ ಸದಸ್ಯರುಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಂಗ್ಲೆಗುಡ್ಡದಲ್ಲಿ ಸಿಕ್ಕ ಐದು ತಲೆ ಬುರುಡೆ, ಮೂಳೆಗಳು ಪುರುಷರದ್ದು – ಇಂದು ಎರಡನೇ ದಿನದ ಶೋಧ ಕಾರ್ಯ

  • ಮಡಿಕೇರಿ ರಸ್ತೆಗಳು ಗುಂಡಿಮಯ – ದಸರಾ ಹತ್ತಿರ ಬಂದ್ರೂ ಸಿಗದ ದುರಸ್ತಿ ಭಾಗ್ಯ!

    ಮಡಿಕೇರಿ ರಸ್ತೆಗಳು ಗುಂಡಿಮಯ – ದಸರಾ ಹತ್ತಿರ ಬಂದ್ರೂ ಸಿಗದ ದುರಸ್ತಿ ಭಾಗ್ಯ!

    ಮಡಿಕೇರಿ: ಮಂಜಿನ ನಗರಿ ಮಡಿಕೇರಿಯ ಐತಿಹಾಸಿಕ ದಸರಾ (Madikeri Dasara) ಉತ್ಸವಕ್ಕೆ ದಿನಗಣನೆ ಅರಂಭವಾಗಿದೆ. ದಸರಾ ಸಮಿತಿಗಳು ಮಂಟಪ ತಯಾರಿ ಕೆಲಸದಲ್ಲಿ ತೊಡಗಿವೆ. ಆದ್ರೆ ಮಂಟಪಗಳು ಸಾಗುವ ರಸ್ತೆಗಳು ಮಾತ್ರ ಸಂಪೂರ್ಣವಾಗಿ ಗುಂಡಿಮಯವಾಗಿದೆ. ದೇಶ-ವಿದೇಶಗಳಿಂದ ಅಗಮಿಸುವ ಲಕ್ಷಾಂತರ ಪ್ರವಾಸಿಗರು ಈ ಬಾರಿ ಮಡಿಕೇರಿ ನಗರಸಭೆಗೆ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹೌದು. ಮಡಿಕೇರಿ ನಗರದಲ್ಲಿ ಎಲ್ಲಿ ನೋಡಿದ್ರೂ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದೆ (Road Potholes). ನಗರದ ಬಡಾವಣೆಯ ರಸ್ತೆಗಳ ಸ್ಥಿತಿಯಂತೂ ಹೇಳ ತೀರದ್ದಾಗಿದೆ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ವಾಹನ ಸವಾರರು ದಿನ ನಿತ್ಯ ಸರ್ಕಸ್ ಮಾಡುತ್ತಾ ಸವಾರಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಐತಿಹಾಸಿಕ ದಸರಾಕ್ಕೆ ದಿನಗಣನೆ ಅರಂಭವಾಗಿದ್ರೂ ಮಳೆಯ ನೇಪ ಹೇಳಿಕೊಂಡು ದಿನ ಕಳೆಯುತ್ತಿರುವ ಮಡಿಕೇರಿ ನಗರಸಭೆ ವಿರುದ್ಧ ನಗರದ ನಿವಾಸಿಗಳು ಅಕ್ರೋಶ ವ್ಯಕಪಡಿಸುತ್ತಿದ್ದಾರೆ.

    ಎಲ್ಲಿಲ್ಲಿ ರಸ್ತೆಗಳು ಗುಂಡಿಮಯ
    ಮಡಿಕೇರಿ ನಗರ ವ್ಯಾಪ್ತಿಗೆ ಒಳಪಡುವ ಅಬ್ಬಿಪಾಲ್ಸ್ ಗೆ ತೆರಳುವ ಮಾರ್ಗ, ಭಗವತಿ ನಗರ ರಸ್ತೆ, ಗೌಳಿಬಿದಿಯ ರಸ್ತೆ ಸೇರಿದಂತೆ ಕೆಲ ಪ್ರಮುಖ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟು, ಬೃಹತ್ ಹೊಂಡಗಳೇ ನಿರ್ಮಾಣವಾಗಿದೆ. ಇಲ್ಲಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಬಿದ್ದು ಕೈಕಾಲು ಮುರಿದುಕೊಳ್ಳುವಂತಿದೆ. ದ್ವಿಚಕ್ರ ಸೇರಿದಂತೆ ಆಟೋ, ಕಾರು ಇನ್ನಿತರ ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೇ ದಸರಾ ಹಬ್ಬ ಸಮಿಸುತ್ತಿದ್ರು ನಗರಸಭೆ ಆಡಳಿತ ಮಂಡಳಿಯ ಸದಸ್ಯರು ರಸ್ತೆ ಕಾಮಗಾರಿಗಳ ಚಿಂತೆಗೂ ಮುಂದಾಗಿಲ್ಲ.

    ಮಡಿಕೇರಿ ದಸರಾ ಪ್ರಮುಖ ಆಕರ್ಶಣೆಯ ದಶಮಂಟಪಗಳು ರಾಜ ಮಾರ್ಗದಲ್ಲಿ ಬರುವ ರಸ್ತೆಗಳನ್ನು ಇದು ವರೆಗೂ ಸರಿಪಡಿಸುವ ಗೋಜಿಗೂ ಹೋಗಿಲ್ಲ. ಈ ಬಗ್ಗೆ ನಿಮ್ಮ ʻಪಬ್ಲಿಕ್ ಟಿವಿʼ ನಗರಸಭೆಯ ಕಮಿಷನರ್ ರಮೇಶ್ ಅವರನ್ನು ಕೇಳಿದ್ರೆ, ʻದಸರಾ 22 ರಿಂದ ಅರಂಭಗೊಳ್ಳುತ್ತಿದೆ. ಈಗಾಗಲೇ ದಸರಾ ಸಿದ್ಧತೆ ಕಾರ್ಯಗಳ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು NDRF ಹಣದಿಂದ 38.ಲಕ್ಷದ 36 ಸಾವಿರ ಹಣ ಬಿಡುಗಡೆ ಮಾಡಿದ್ದಾರೆ. ಟೆಂಡರ್ ಕೂಡ ಕರೆಯಲಾಗಿದೆ. ಮಳೆ ಕೊಂಚ ಬೀಡುವು ನೀಡಿದ್ರೆ ತುರ್ತಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗುತ್ತೇವೆ. ಅಲ್ಲದೇ ಅಲಂಕಾರ ಮಾಡಲು ಲೈಟಿಂಗ್ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತದೆ. ದಸರಾ ಆರಂಭಕ್ಕೂ ಮುನ್ನವೇ ಕಾಮಗಾರಿ ಮಾಡಲಾಗುತ್ತದೆ ಭರವಸೆ ನೀಡಿದ್ದಾರೆ.

  • ಮಡಿಕೇರಿ ದಸರಾ ವೇಳೆ ಯುವತಿಯರನ್ನ ಕೆಣಕ್ಕಿದ್ರೆ ಹುಷಾರ್‌; ಮದುವೆ ಮಂಟಪಕ್ಕೆ ಕರೆತಂದು ಕೇಸ್‌ ದಾಖಲು

    ಮಡಿಕೇರಿ ದಸರಾ ವೇಳೆ ಯುವತಿಯರನ್ನ ಕೆಣಕ್ಕಿದ್ರೆ ಹುಷಾರ್‌; ಮದುವೆ ಮಂಟಪಕ್ಕೆ ಕರೆತಂದು ಕೇಸ್‌ ದಾಖಲು

    ಮಡಿಕೇರಿ: ಮೈಸೂರು ದಸರಾ ಬಿಟ್ಟರೆ ರಾಜ್ಯದಲ್ಲಿ ಪ್ರಸಿದ್ಧಿ ಪಡೆದ ದಸರಾ ಅಂದ್ರೆ ಅದು ಮಂಜಿನ ನಗರಿ ದಸರಾ. ಮಡಿಕೇರಿಯ ದಸರಾ (Madikeri Dasara) ಉತ್ಸವಕ್ಕೆ ಎಲ್ಲಾ ಕಡೆಯಿಂದಲೂ ಜನರು ಆಗಮಿಸ್ತಾರೆ. ಇದೀಗ ದಸರಾಕ್ಕೆ ಆಗಮಿಸುವ ಮಹಿಳೆಯರು, ಯುವತಿಯರನ್ನು ಕೆಣಕಿದ್ರೆ ಅಂತಹವರನ್ನು ಮದುವೆ ಮಂಟಪಕ್ಕೆ ಕರೆತಂದು ಪ್ರಕರಣ ದಾಖಲಿಸುವುದಾಗಿ ಕೊಡಗು ಪೊಲೀಸರು (Kodagu Police) ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಮಡಿಕೇರಿ ದಸರಾವನ್ನು ನೋಡಲು ಆಗಮಿಸುವ ಹೆಣ್ಣುಮಕ್ಕಳ ಮೇಲೆ ಕೆಲ ಕಿಡಿಗೇಡಿಗಳು ದೈಹಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಬಂದಿತ್ತು. ಈ ಹಿನ್ನಲೆ ಈ ವರ್ಷದ ದಸರಾ ಸಂದರ್ಭದಲ್ಲಿ ಮಹಿಳಾ ಪೊಲೀಸರ ಜಂಬೋ ತಂಡಗಳನ್ನು ರಚನೆ ಮಾಡುತ್ತೇವೆ. ದಸರಾ ಉತ್ಸವದ ಶೋಭಾಯಾತ್ರೆಯ ಸಂದರ್ಭ ಜನಸಂದಣಿ ಹೆಚ್ಚಾಗಿರುವ ಕಡೆ ಕಿಡಿಗೇಡಿಗಳ ಬಗ್ಗೆ ನಿಗಾ ಇಡಲು ಒಬ್ಬರು ಎಸ್‌ಐ ನೇತೃತ್ವದ 15 ಸಿಬ್ಬಂದಿ ಒಳಗೊಂಡ ಜಂಬೋ ತಂಡಗಳನ್ನು ರಚಿಸಲಾಗುತ್ತಿದೆ. ಮಹಿಳೆಯರಿಗೆ ಕಿರುಕುಳ ನೀಡುವುದು ಖಾತ್ರಿಯಾದರೆ ಅಂತಹವರನ್ನು ನೇರವಾಗಿ ಮದುವೆ ಮಂಟಪಕ್ಕೆ ಕರೆತಂದು ಪ್ರಕರಣ ದಾಖಲು ಮಾಡುತ್ತೇವೆ ಎಂದು ಕೊಡಗು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ -‌ NIAಗೆ ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಳ್ಳೋಕೆ ಅವಕಾಶ ಇದೆ: ಡಿವಿಎಸ್‌

    ಒಟ್ಟಿನಲ್ಲಿ ಐತಿಹಾಸಿಕ ಮಡಿಕೇರಿ ದಸರಾ ಆಚರಣೆ ದಿನಗಣನೆ ಆರಂಭವಾಗಿದ್ದು, ಕೆಲ ನಿಯಮಗಳ ಸಡಿಲಿಕೆ ಮಾಡಬೇಕು ಎಂದು ಮಡಿಕೇರಿ ದಸರಾ ಸಮಿತಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಇತ್ತ ಪೊಲೀಸರು, ದಸರಾ ಸಂದರ್ಭದಲ್ಲಿ ಮಹಿಳೆಯರು ಹಾಗೂ ಯುವತಿಯರಿಗೆ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.‌

  • ಮಡಿಕೇರಿ ದಸರಾಕ್ಕೆ ಅದ್ದೂರಿ ತೆರೆ – ಮಂಜಿನ‌ ನಗರಿಯಲ್ಲಿ ಧರೆಗಿಳಿದ ದೇವಲೋಕ!

    ಮಡಿಕೇರಿ ದಸರಾಕ್ಕೆ ಅದ್ದೂರಿ ತೆರೆ – ಮಂಜಿನ‌ ನಗರಿಯಲ್ಲಿ ಧರೆಗಿಳಿದ ದೇವಲೋಕ!

    ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾಕ್ಕೆ  (Madikeri Dasara) ತೆರೆಬಿದ್ದಿದೆ. ರಾತ್ರಿ ಇಡೀ ನಡೆದ ಮೈನವಿರೇಳಿಸುವ ದಶಮಂಟಪಗಳ ಶೋಭಾಯಾತ್ರೆಯನ್ನು ಸಾವಿರಾರು ಜನ ಕಣ್ತುಂಬಿಕೊಂಡರು.

    ದ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಸ್ತಬ್ಧಚಿತ್ರ ಪ್ರದರ್ಶನ ಜನರನ್ನ ದೇವಲೋಕಕ್ಕೆ ಕರೆದೊಯ್ದಿತ್ತು. ದುಷ್ಟ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪ ಪ್ರದರ್ಶನ ದೇವಾನು ದೇವತೆಗಳ ಪವಾಡವನ್ನು ಭಕ್ತರ ಮುಂದಿಟ್ಟಿತ್ತು.

    ಎದೆ ನಡುಗಿಸೋ ಶಬ್ದ, ಅದಕ್ಕೆ ತಕ್ಕಂತೆ ಬೆಳಕು, ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸುವ ದೇವರ ಮೂರ್ತಿಗಳು ನೆರೆದಿದ್ದ ಜನರನ್ನ ಒಮ್ಮೆ ದೇವಲೋಕಕ್ಕೆ ಕರೆದುಕೊಂಡು ಹೋಗಿತ್ತು. ಒಂದೊಂದು ಮಂಟಪಗಳಲ್ಲೂ ಒಂದೊಂದು ಕತೆಯನ್ನು ವಿಭಿನ್ನ ರೀತಿಯಲ್ಲಿ ಜನರ ಮುಂದಿಟ್ಟು ಕಲಾವಿದರು ಮೆಚ್ಚುಗೆ ಗಳಿಸಿದರು.

    ಹಗಲು ಮೈಸೂರು ದಸರಾದ ವೈಭವನೋಡು ರಾತ್ರಿ ಮಂಜಿನ ನಗರಿ ಮಡಿಕೇರಿ ದಸರಾದ ಸೊಬಗು ನೋಡು ಎಂಬ ಮಾತಿನಂತೆ ಮಡಿಕೇರಿ ದಸರಾ ರಂಗೇರಿತ್ತು. ರಾತ್ರಿ 11ಗಂಟೆಗೆ ಆರಂಭವಾದ ದಶಮಂಟಪಗಳ ಉತ್ಸವ ಬೆಳಿಗ್ಗೆ 5 ಗಂಟೆವರೆಗೂ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬಿದ್ದರು. ನಗರದ ರಸ್ತೆಗಳಲ್ಲಿ ಜನಪ್ರವಾಹವೇ ಹರಿಯುತ್ತಿತ್ತು.

    ಲೋಕ ಕಲ್ಯಾಣಕ್ಕಾಗಿ ಅವತಾರವೆತ್ತಿದ ವಿಷ್ಣುವಿನ ಮತ್ಸ್ಯಾವತಾರ, ಸಿಂಧೂರ ಗಣಪತಿ, ಕೊಲ್ಲೂರೂ ಮೂಕಾಂಬಿಕೆ ಮಹಿಮೆ, ಕಾಳಿಂಗ ಮರ್ಧನ, ರಾವಣನ ಸಂಹಾರ. ಕೃಷ್ಣ‌ನ ಬಾಲಲೀಲೆ – ಕಂಸವಧೆ ಸೇರಿದಂತೆ ಹಲವು ಪೌರಾಣಿಕ ಕಥಾವಸ್ತುಗಳನ್ನು ನಿರೂಪಿಸಿ ನೀಡಿದ ಪ್ರದರ್ಶನಗಳನ್ನು ಜನ ಕಣ್ತುಂಬಿಕೊಂಡರು.

  • ಸ್ವಾತಂತ್ರ್ಯದ ಬಳಿಕ ಮಡಿಕೇರಿ ದಸರಾ ಸಾಗಿ ಬಂದ ಹಾದಿ

    ಸ್ವಾತಂತ್ರ್ಯದ ಬಳಿಕ ಮಡಿಕೇರಿ ದಸರಾ ಸಾಗಿ ಬಂದ ಹಾದಿ

    ಮೈಸೂರು ದಸರಾಗೆ (Mysuru Dasara) ತೆರೆ ಬೀಳುತ್ತಿದ್ದಂತೆ ಇತ್ತ ಮಡಿಕೇರಿ ದಸರಾ (Madikeri Dasara) ಆರಂಭವಾಗುತ್ತದೆ. ಮೈಸೂರು ದಸರಾ ಸಂಜೆ ಮುಕ್ತಾಯಗೊಂಡರೆ ಮಡಿಕೇರಿ ದಸರಾ ಮೆರವಣಿಗೆ ಆರಂಭವಾಗುವುದೇ ರಾತ್ರಿ. ಮೈಸೂರು ದಸರಾದಂತೆ ಮಡಿಕೇರಿ ದಸರಾ ಕೂಡ ಜನರ ಕಣ್ಮನ ಸೆಳೆಯುತ್ತದೆ. ದಶಮಂಟಪಗಳ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಜನರು ದೂರದ ಊರುಗಳಿಂದ ಆಗಮಿಸುತ್ತಾರೆ. ಸ್ವಾತಂತ್ರ್ಯ ದೊರೆತ ಬಳಿಕ ಮಡಿಕೇರಿ ದಸರಾ ಸಾಗಿ ಬಂದ ಹಾದಿ ಹೇಗಿತ್ತು ಎಂಬ ಬಗ್ಗೆ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ರಾಜರ ಕಾಲದಲ್ಲಿ ನವರಾತ್ರಿ ಉತ್ಸವ ಮಡಿಕೇರಿ ನಗರದ ಅರಮನೆಯ ಆವರಣದಲ್ಲಿ ನಡೆಯುತ್ತಿತ್ತು .ನಂತರ 1947ರ ಸ್ವಾತಂತ್ರ್ಯಾನಂತರ ಮಡಿಕೇರಿ ದಸರಾವು ಯಾವುದೇ ಅಡೆ ತಡೆಯಿಲ್ಲದೆ ನಡೆದುಕೊಂಡು ಬಂತು. ಜನಮನ ಸೆಳೆದಿರುವ ಮಡಿಕೇರಿಯ ದಸರಾ ಉತ್ಸವದ ರೂವಾರಿ ರಾಜಸ್ಥಾನದ ಮೂಲದ ಭೀಮ್ ಸಿಂಗ್. 1950 ರ ವರ್ಷಗಳಲ್ಲಿ ನವರಾತ್ರಿಯ ಕೊನೆಯ ದಿನ ವಿಜಯದಶಮಿಯಂದು ಭೀಮ್ ಸಿಂಗ್‌ ಅವರು ತಮ್ಮ ತಲೆಯ ಮೇಲೆ ದೇವರ ಮೂರ್ತಿಯನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ ದೇವರಿಗೆ ಪೂಜೆಯನ್ನು ಮಾಡಿಸಿಕೊಳ್ಳುತಿದ್ದರು. ನಂತರ ದೇವರ ಮೂರ್ತಿ ಪಲ್ಲಕ್ಕಿಯ ಮೇಲೆ ಹೋಗುವಂತಾಯಿತು. 

    1958ರಲ್ಲಿ ಪ್ರಥಮ ಬಾರಿಗೆ ಮೈಸೂರಿನಿಂದ ಶಿಲ್ಪಕಲಾವಿದರಿಂದ ಮಾಡಿಸಿ ತರಿಸಿದ ಚಾಮುಂಡೇಶ್ವರಿ ಮೂರ್ತಿಯನ್ನು ಟ್ರಾಕ್ಟರ್ ಮೇಲೆ ಇರಿಸಿ ಹೂವಿನಿಂದ ಅಲಂಕಾರ ಮಾಡಿದ ಮಂಟಪ ಮೆರವಣಿಗೆ ವಾದ್ಯಗಳೊಂದಿಗೆ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆದು ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರದ ದಿನಗಳಲ್ಲಿ ಮಡಿಕೇರಿಯಲ್ಲಿರುವ ದೇವಾಲಯಗಳ ಪೈಕಿ, ಪೇಟೆ ಶ್ರೀರಾಮ ಮಂದಿರ, ದೇಚೂರು ಶ್ರೀ ರಾಮ ಮಂದಿರ, ಬಾಲಕ ಶ್ರೀ ರಾಮ ಮಂದಿರ ಮತ್ತು ಭೀಮ್ ಸಿಂಗ್ ರವರ ರಘುರಾಮ ಮಂದಿರಗಳ ನಾಲ್ಕು ಮಂಟಪಗಳು ಅಂದಿನ ಮಡಿಕೇರಿಯ ದಸರಾದ ಆಕರ್ಷಕ ಮಂಟಪಗಳಾಗಿದ್ದವು. 

    ದಸರಾ ಮಂಟಪಗಳಲ್ಲಿ ಐತಿಹಾಸಿಕವಾಗಿ ಶಿವಾಜಿ ಖಡ್ಗವನ್ನು ದೇವಿ ಅಂಬಾ ಭಾವಾನಿಯಿಂದ ಪಡೆಯುವ ಮೂರ್ತಿ, ಭಾರತ ಮಾತೆಯ ಪದತಲದಲ್ಲಿ ಮಹಾತ್ಮ ಗಾಂಧಿ ಚರಕದಲ್ಲಿ ನೂಲು ತೆಗೆಯುತ್ತಿರುವ ಮೂರ್ತಿ, ಪೌರಾಣಿಕವಾಗಿ ಶ್ರೀ ರಾಮ ಪಟ್ಟಾಭಿಷೇಕ, ಗಣಪತಿಯಿಂದ ಚೌತಿ ಚಂದ್ರನ ಗರ್ವ ಭಂಗ, ಮತ್ತ್ವ ಅವತಾರ, ಗಜೇಂದ್ರ ಮೋಕ್ಷ, ಮಹಿಷಾಸುರ ಮರ್ಧಿನಿ, ನರಸಿಂಹ ಅವತಾರ ಇತ್ಯಾದಿ ಹಲವಾರು ಪುರಾಣ ಕಥೆಗಳನ್ನು ಅಳವಡಿಸಿಕೊಂಡು ದಸರಾ ಆಚರಿಸಲಾಗುತಿತ್ತು. 

    1967ರಲ್ಲಿ ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿಯೂ ಮಡಿಕೇರಿ ದಸರಾ ಮುಂದುವರೆದುಕೊಂಡು ಬಂತು. 1970 ರ ದಶಕಗಳಲ್ಲಿ ಇನ್ನೂ ಹಲವು ದೇವಾಲಯದ ಮಂಟಪಗಳು ಸೇರ್ಪಡೆಯಾಗಿ ಹತ್ತು ಮಂಟಪಗಳೊಂದಿಗೆ ದಸರಾ ಉತ್ಸವ ಹೆಚ್ಚು ಹೆಚ್ಚು ಆಕರ್ಷಣೀಯವಾಯಿತು. ಮಡಿಕೇರಿಯ ದಸರಾ ನಡೆಯುತ್ತಿರುವುದು ಜನರು ಭಕ್ತಿ ಪ್ರೀತಿಯಿಂದ ನೀಡುತ್ತಿರುವ ವಂತಿಗೆಯ ಹಣದಿಂದ. ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಮಾನ್ಯ ಆರ್. ಗುಂಡೂರಾವ್ ರವರು ಮಡಿಕೇರಿ ದಸರ ಉತ್ಸವಕ್ಕೆ 1980 ರಲ್ಲಿ ಕರ್ನಾಟಕ ಸರ್ಕಾರದಿಂದ ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡುವಂತೆ ವ್ಯವಸ್ಥೆ ಮಾಡಿದರು. ನಂತರ ಪ್ರತಿವರ್ಷ ಸಹಾಯಧನವನ್ನು ಹೆಚ್ಚಿಸುತ್ತಾ ಬಂದು ಇಂದಿನ ವರ್ಷಗಳಲ್ಲಿ ಒಂದು ಕೋಟಿ ರೂ. ನೀಡಲಾಗುತ್ತಿದೆ. ಪ್ರತಿಯೊಂದು ಮಂಟಪಗಳಿಗೆ 2,50,000 ರೂ. ಸಹಾಯಧನ ನೀಡಲಾಗುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಂದು ಮಂಟಪಕ್ಕೆ ಸುಮಾರು 4 ರಿಂದ 24 ಲಕ್ಷದವರೆಗೆ ಖರ್ಚು ತಗಲುತ್ತದೆ.

    ತಾಂತ್ರಿಕವಾಗಿ ಚಲನವಲನಗಳನ್ನು ನೀಡಿ ಧ್ವನಿ ಬೆಳಕಿನ ವ್ಯವಸ್ಥೆಯೊಂದಿಗೆ, ಕೃತಕ ಮೋಡಗಳು, ಮಿಂಚು, ಧೂಮ ಸೃಷ್ಟಿಗಳು ಒಂದಕಿಂತ ಒಂದು ಮೀರಿಸುವಂತಿರುತ್ತದೆ. ವಿದ್ಯುತ್ ದೀಪಾಲಂಕಾರದ ಬೃಹತ್ ಸೆಟ್ಟಿಂಗ್ಸ್‌ಗಳು ಬೆಂಗಳೂರು, ಮಂಗಳೂರು, ತಮಿಳುನಾಡಿನ ದಿಂಡಿಗಲ್, ಚೆನ್ನೈನ ಸಿನೆಮಾ ಸ್ಟುಡಿಯೋಗಳಿಂದ ಬರುತ್ತದೆ. ಒಂದು ಮಂಟಪ ನಿರ್ಮಾಣ ಮಾಡಲು 2 -3 ತಿಂಗಳಿನಿಂದ ಪೂರ್ವ ತಯಾರಿ ನಡೆಯುತ್ತದೆ. ವಿವಿಧ ವಿನ್ಯಾಸದ ಮಂಟಪಗಳಲ್ಲಿ ವಿವಿಧ ಭಂಗಿಗಳಲ್ಲಿ ವಿವಿಧ ಕಥಾ ಪ್ರಸಂಗಗಳ ದೇವತಾ ಮೂರ್ತಿಗಳು 8 ರಿಂದ 15 ಅಡಿಗಳವರೆಗೆ ಇರುತ್ತದೆ. ಮಂಟಪಗಳ ಮುಂದೆ ಮೈಸೂರು ಪ್ಯಾಲೆಸ್ ಬ್ಯಾಂಡ್, ಕೇರಳದ ತ್ರಿಶೂರಿನಿಂದ ಬೆಂಕಿಯೊಂದಿಗೆ ಸರಸವಾಡುತ್ತ ನುಡಿಸುವ ಗರಡಿ ಬ್ಯಾಂಡ್‌ಗಳು ಉತ್ಸವದಲ್ಲಿ ಭಾಗಿಯಾಗಿರುವ ಸಾವಿರಾರು ಯುವಕರು ರಾತ್ರಿಯಿಂದ ಬೆಳಗಿನವರೆಗೆ ಮೆರವಣಿಗೆಯ ಜೊತೆಗೆ ಕುಣಿದು ಕುಪ್ಪಳಿಸಿ ಆನಂದಿಸುತ್ತಾರೆ.

    ಮಡಿಕೇರಿ ದಸರಾ ವೀಕ್ಷಿಸಲು ಬೇರೆ ಬೇರೆ ಊರುಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ವಿಶ್ವ ವಿಖ್ಯಾತ ಮೈಸೂರಿನ ದಸರಾ ಉತ್ಸವದ ಜಂಬೂ ಸವಾರಿಯ ಮೆರವಣಿಗೆಯನ್ನು ನೋಡಿದ ನಂತರ ಜನ ಪ್ರವಾಹದಂತೆ ಮೈಸೂರಿನಿಂದ 120 ಕಿ.ಮಿ. ದೂರದಲ್ಲಿರುವ ಮಡಿಕೇರಿ ದಸರಾ ವೀಕ್ಷಿಸಲು ಬರುತ್ತಾರೆ.  ಜಾತ್ರಾ ವಿಶೇಷವಾಗಿ ಹೆಚ್ಚಿನ ಸರ್ಕಾರಿ ಬಸ್‌ ವ್ಯವಸ್ಥೆ ಮಾಡಲಾಗುತ್ತದೆ.

    ಮಡಿಕೇರಿ ನಗರದ ಪೌರಾಣಿಕ ಕಥಾ ಸಾರಾಂಶವುಳ್ಳ ಮಂಟಪಗಳು:
    *ದೇಚೂರು ಶ್ರೀರಾಮ ಮಂದಿರ
    *ದಂಡಿನ ಮಾರಿಯಮ್ಮ ದೇವಾಲಯ
    *ಚೌಡೇಶ್ವರಿ ದೇವಾಲಯ
    *ಕಂಚಿ ಕಾಮಾಕ್ಷಿ ದೇವಾಲಯ
    *ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ  ದೇವಾಲಯ
    *ಕೋಟೆ ಮಾರಿಯಮ್ಮ ದೇವಾಲಯ
    *ಕೋಟೆ ಗಣಪತಿ ದೇವಾಲಯ
    *ಕೋದಂಡರಾಮ ಮಂದಿರ ದೇವಾಲಯ
    *ಕರವಾಲೆ ಭಗವತಿ ದೇವಾಸ್ಥಾನ

    ಮಂಟಪಗಳು ತಮ್ಮ ತಮ್ಮ ಕಲಾ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ ನಗರ ಬೀದಿಗಳಲ್ಲಿ ಸಾಗಿ ಎಲ್ಲಾ ಮನೆಗಳಿಂದ ಪೂಜೆಯನ್ನು ಸ್ವೀಕರಿಸಿ ಬೆಳಗಿನ ನಂತರ ರಾಜರ ಗದ್ದುಗೆಯ ಬಳಿ ಇರುವ ಬನ್ನಿ ಮಂಟಪದಲ್ಲಿ ನಾಲ್ಕು ಕರಗಗಳ ಸಮೇತ ಬನ್ನಿ ಕಡಿದು ಪೂಜೆ ಸಲ್ಲಿಸಿ ತಮ್ಮ ತಮ್ಮ ದೇವಾಲಯಗಳಿಗೆ ಹಿಂದಿರುಗುತ್ತದೆ. ಜಾತಿ, ಮತ, ಭೇದವಿಲ್ಲದೆ ದಸರಾ ಹಬ್ಬವು ಶಾಂತಿಪ್ರಿಯ ಮಡಿಕೇರಿಯಲ್ಲಿ ಶತಮಾನದಿಂದ ಸೌಹಾರ್ದತೆಯನ್ನು ಎತ್ತಿ ಹಿಡಿದು ವೈಭವಯುತವಾಗಿ ನಡೆದುಕೊಂಡು ಬರುತ್ತಿದೆ.