Tag: madikeri

  • ಕಿಡ್ನಿ ರೋಗಿಗಳ ನೆರವಿಗಾಗಿ ʻಬಿರಿಯಾನಿ ಚಾಲೆಂಜ್ʼ – ಕೊಡಗಿನ ಯುವಕರ ತಂಡದಿಂದ ವಿಭಿನ್ನ ಆಲೋಚನೆ!

    ಕಿಡ್ನಿ ರೋಗಿಗಳ ನೆರವಿಗಾಗಿ ʻಬಿರಿಯಾನಿ ಚಾಲೆಂಜ್ʼ – ಕೊಡಗಿನ ಯುವಕರ ತಂಡದಿಂದ ವಿಭಿನ್ನ ಆಲೋಚನೆ!

    ಮಡಿಕೇರಿ: ಆ ಊರಿನಲ್ಲಿ ಬಡ ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ (Kidney Patients) ಖಾಸಗಿ ಸಂಸ್ಥೆಯೊಂದು ಉಚಿತವಾಗಿ ಡಯಾಲಿಸಿಸ್ ಮಾಡುವ ಮೂಲಕ ಆಶ್ರಯವಾಗಿತ್ತು. ಆದರೆ ದಿನ ಕಳೆದಂತೆ ಆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಉಚಿತವಾಗಿ ಡಯಲಿಸಿಸ್ ಮಾಡುವುದೇ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಯುವಕರ ತಂಡ ವಿಭಿನ್ನ ಚಿಂತನೆಯೊಂದಿಗೆ ನೆರವಾಗಿದೆ. ʻಬಿರಿಯಾನಿ ಚಾಲೆಂಜ್ʼ (Biryani Challenge) ಎನ್ನುವ ವಿಭಿನ್ನ ಚಿಂತನೆಯೊಂದಿಗೆ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಆ ಸಂಸ್ಥೆಗೆ ನೀಡಿದೆ. ಏನ್ನಿದು ಬಿರಿಯಾನಿ ಚಾಲೆಂಜ್ ಅಂತೀರಾ ಮುಂದೆ ಓದಿ…

    ಮನುಷ್ಯರು ಒಳ್ಳೆಯವರಾದ್ರೆ ಸಾಲದು ಒಳ್ಳೆಯ ಕೆಲಸಗಳನ್ನ ಮಾಡಬೇಕು ಆಗ ಮಾತ್ರ ನಾವು ಸಮಾಜ ಸೇವಕರು ಎನಿಸಿಕೊಳ್ಳಲು ಸಾಧ್ಯ. ಯೆಸ್ ಅಂಥಹದ್ದೊಂದು ಕೆಲಸವನ್ನ ಕೊಡಗಿನ ಯುವಕರ ಗುಂಪು ಮಾಡ್ತಿದೆ. ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಸೇವೆ ನೀಡಲು ಯುವಕರ ತಂಡವೊಂದು ನಿರ್ಧರಿಸಿದೆ. ಇದರಿಂದ ಬಡ ರೋಗಿಗಳ ಪಾಲಿನ ಆಶಾಕಿರಣ ಎನಿಸಿದ್ದಾರೆ. ತಾಲ್ಲೂಕಿನಲ್ಲಿ ʻದಯಾ ರಿಯಾಬ್ಲಿಟೇಷನ್ ಟ್ರಸ್ಟ್ ತಣಲ್ʼ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಲಾದ ಡಯಾಲಿಸಿಸ್ ಕೇಂದ್ರವು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿತ್ತು. ದಾನಿಗಳ ಸಹಕಾರದೊಂದಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೇವೆಯನ್ನ ನೀಡುತ್ತಿರುವ ಈ ಸಂಸ್ಥೆ ಈಗ ಸಾಲದ ಸುಳಿಯಲ್ಲಿ ಸಿಲುಕಿದೆ. ಕಳೆದ 6 ವರ್ಷಗಳಲ್ಲಿ ಸುಮಾರು 34 ರೋಗಿಗಳಿಗೆ 8,208 ಡಯಾಲಿಸಿಸ್ ಸೇವೆಯನ್ನ ನೀಡಿದ್ದು, 7 ಮಂದಿ ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆಯನ್ನು ನೀಡುತ್ತಿದೆ.

    ಡಯಾಲಿಸಿಸ್ ಘಟಕ ಆರ್ಥಿಕ ಸಂಕಷ್ಟದಿಂದ ಪಾರುಮಾಡುವ ನಿಟ್ಟಿನಲ್ಲಿ ಬಿರಿಯಾನಿ ಚಾಲೆಂಜ್ ಎಂಬ ವಿನೂತನ ಕಾರ್ಯಕ್ರಮವನ್ನು ಯುವಕರ ತಂಡ ಪರಿಚಯಿಸಿತ್ತು. ದಾನಿಗಳಿಂದ ಬಿರಿಯಾನಿ ತಯಾರಿಕೆಗೆ ಬೇಕಾದ ಅಕ್ಕಿ, ಮಾಂಸ, ಸಂಬಾರ ಪದಾರ್ಥಗಳನ್ನು ಸಂಗ್ರಹಿಸಿ ಬಿರಿಯಾನಿ ತಯಾರಿಸಿ ನಂತರ ಇದನ್ನು ಸಂಘ ಸಂಸ್ಥೆಗಳು, ಕಚೇರಿಗಳು, ಮನೆಗಳಿಗೆ ಮಾರಾಟ ಮಾಡಿ, ಬಂದ ಹಣವನ್ನು ಸಂಸ್ಥೆಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಶಾದಿ ಮಾಹಲ್‌ನಲ್ಲಿ ಬಿರಿಯಾನಿ ತಯಾರಿಸಿ 200ಕ್ಕೂ ಅಧಿಕ ಯುವಕರು ಮಧ್ಯಾಹ್ನ ಸಮಯದಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಬಿರಿಯಾನಿಗಳನ್ನು ಮಾರಾಟ ಮಾಡಿದ್ದಾರೆ. ಸುಮಾರು 12 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ಡಯಾಲಿಸಿಸ್ ಸೆಂಟರ್‌ನ ವ್ಯವಸ್ಥಾಪಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

    ಒಟ್ನಲ್ಲಿ ಬಡ ಕಿಡ್ನಿ ರೋಗಿಗಳಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿರುವ ಡಯಾಲಿಸಿಸ್ ಕೇಂದ್ರ ನಿರ್ವಹಣೆಗೆ 1.75 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳವರೆಗೆ ವೆಚ್ಚವಾಗುತ್ತಿದೆ. ಅಲ್ಲದೆ ಸಂಸ್ಥೆ ಪ್ರಸ್ತುತ 5 ಲಕ್ಷ ರೂ. ಸಾಲ ಹೊಂದಿದೆ. ಬಿರಿಯಾನಿ ಚಾಲೆಂಜ್ ಮೂಲಕ ಈ ಸಾಲ ಪಾವತಿಸುವುದರೊಂದಿಗೆ ನೆರವು ಒದಗಿಸುವ ಪ್ರಯತ್ನವನ್ನು ಯುವಕರ ತಂಡ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

  • ಒನ್‌ಸೈಡ್‌ ಲವ್‌ – ಪ್ರೀತಿಸಿದ ಹುಡ್ಗಿಯ ಲಗ್ನ ಪತ್ರಿಕೆ ನೋಡಿ ಯುವಕ ಆತ್ಮಹತ್ಯೆ!

    ಒನ್‌ಸೈಡ್‌ ಲವ್‌ – ಪ್ರೀತಿಸಿದ ಹುಡ್ಗಿಯ ಲಗ್ನ ಪತ್ರಿಕೆ ನೋಡಿ ಯುವಕ ಆತ್ಮಹತ್ಯೆ!

    ಮಡಿಕೇರಿ: ಪ್ರೀತಿಸಿದ ಯುವತಿಯ (Lover) ಮದುವೆ ಲಗ್ನಪತ್ರಿಕೆ ನೋಡಿ ಮನನೊಂದ ಯುವಕ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ (Virajpet) ತಾಲೂಕಿನ ಬಿಟ್ಟಂಗಾಲ ಪೆಗ್ಗರಿಕಾಡ್ ಗ್ರಾಮದಲ್ಲಿ ನಡೆದಿದೆ.

    ಬಿಟ್ಟಂಗಾಲ ಗ್ರಾಪಂ ವ್ಯಾಪ್ತಿಯ ಪೆಗ್ಗರಿಕಾಡ್ ಪೈಸಾರಿ ನಿವಾಸಿ ಹಾಗೂ ಜಿಪಂ ಮಾಜಿ ಸದಸ್ಯ ದಿವಂಗತ ಹೆಚ್.ಎಂ ಕಾಳಯ್ಯ ಅವರ ಪುತ್ರ ಹೆಚ್.ಕೆ. ಸುಮಂತ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಇದನ್ನೂ ಓದಿ: ಕೈದಿಗೆ 20,000ಕ್ಕೆ ಮೊಬೈಲ್ ಮಾರಲು ಯತ್ನ – ಪರಪ್ಪನ ಅಗ್ರಹಾರ ಜೈಲು ವೀಕ್ಷಕ ಬಂಧನ

    ಒನ್‌ಸೈಡ್‌ ಲವ್‌ಗೆ ಬಲಿಯಾದ ಯುವಕ!
    ದಿವಂಗತ ಕಾಳಯ್ಯ ದಂಪತಿಗಳಿಗೆ ಇಬ್ಬರು ಹೆಣ್ಣು ಹಾಗೂ ಓರ್ವ ಗಂಡುಮಗ. ಹೆಣ್ಣು ಮಕ್ಕಳಿಗೆ ಮದುವೆಯಾಗಿ ಸುಖಿ ಸಂಸಾರದೊಂದಿಗೆ ಜೀವನ ಸಾಗಿಸುತಿದ್ದಾರೆ. ಮೃತ ಸುಮಂತ್‌ಗೆ ಕೆಲ ವರ್ಷಗಳ ಹಿಂದೆ ಯುವತಿಯೊಬ್ಬಳ ಪರಿಚಯವಾಗಿದೆ. ಆದ್ರೆ ಸುಮಂತ್‌ ಆಕೆಯನ್ನ ಒನ್‌ಸೈಡ್‌ ಲವ್‌ ಮಾಡ್ತಿದ್ದ. ಈ ಬಗ್ಗೆ ಯುವತಿ ಫೋರ್ಸ್‌ ಮಾಡ್ತಿದ್ದಾನೆ ಅಂತ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು. ಆ ನಂತರ ಯುವಕ ಪ್ರೇಮ ವೈಫಲ್ಯದಿಂದ ಬೇರ್ಪಟ್ಟು ಹೊಸ ಜೀವನ ಶುರು ಮಾಡಿದ್ದ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. 6 ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಗೆ ಬಂದಿದ್ದ. ನಂತರ ಇಲ್ಲಿಯೇ ಖಾಸಗಿ ವಾಹನ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದನಂತೆ. ಇದನ್ನೂ ಓದಿ: ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ತುಂಡುಗಳ ಕಳ್ಳಸಾಗಣೆ – 18 ಮೂಟೆಗಳಲ್ಲಿ 750 ಕೆಜಿ ಶ್ರೀಗಂಧ ವಶಕ್ಕೆ

    ಹೀಗಿರುವಾಗ ಮೃತ ಸುಮಂತ್‌ಗೆ ತನ್ನ ಪ್ರೇಯಸಿ ಮದುವೆ ನಿಗದಿಯಾದ ದಿನಾಂಕ ಗೊತ್ತಾಗಿದೆ. ಇದರಿಂದ ಮನನೊಂದ ಯುವಕ ಅ.18ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಸಂಜೆ ವೇಳೆಗೆ ಮನೆಗೆ ಬಂದ ತಾಯಿ ಇದನ್ನ ನೋಡಿ ಮಕ್ಕಳಿಗೆ ತಿಳಿಸಿದ್ದಾರೆ. ತಕ್ಷಣವೇ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ರವಾನಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಸ್ವಗೃಹದಲ್ಲಿ ಸುಮಂತ್‌ ಮೃತಪಟ್ಟಿದ್ದಾನೆ. ಮೃತನ ಅಕ್ಕ ಪೂರ್ಣಿಮಾ ಅವರು ನೀಡಿರುವ ದೂರಿನ ಅನ್ವಯ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಬಿಎನ್‌ಎಸ್ 194 ರಂತೆ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸುವಂತೆ ಫ್ಯಾಷನ್ ಡಿಸೈನರ್‌ಗೆ ಕಿರುಕುಳ – ಇವಿಪಿ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ಎಫ್‍ಐಆರ್

  • ರಾಜ್ಯದಲ್ಲಿ ಉದ್ಯಮ ವಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ಸರ್ಕಾರದ ಗಮನಕ್ಕೆ ತರಲು ಮುಂದಾದ FKCCI

    ರಾಜ್ಯದಲ್ಲಿ ಉದ್ಯಮ ವಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ಸರ್ಕಾರದ ಗಮನಕ್ಕೆ ತರಲು ಮುಂದಾದ FKCCI

    – ಸೂಕ್ಷ್ಮ-ಸಣ್ಣ ಕೈಗಾರಿಕಾ ವಲಯಕ್ಕೆ ಪ್ರತ್ಯೇಕ ನೀತಿ ರೂಪಿಸುವಂತೆ ಮನವಿ ಸಲ್ಲಿಸಲು ನಿರ್ಧಾರ
    – 10 ಲಕ್ಷ ಉದ್ಯಮಿಗಳನ್ನು ರೂಪಿಸುವ ಗುರಿ

    ಮಡಿಕೇರಿ: ಉದ್ಯಮ ವಲಯವನ್ನು (Industry sector) ಕಾಡುತ್ತಿರುವ ಸಮಸ್ಯೆಗಳನ್ನ ರಾಜ್ಯ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ಮೂಲಸೌಕರ್ಯಗಳ ಕೊರತೆಯೂ ಸೇರಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (FKCCI)ಯ ಅಧ್ಯಕ್ಷೆ ಉಮಾ ರೆಡ್ಡಿ ತಿಳಿಸಿದರು.

    ತಮ್ಮ ‘ವಿಷನ್ ಸ್ಟೇಟ್‌ಮೆಂಟ್ 2025–26’ನ್ನು ಇಲ್ಲಿನ ಕ್ಲಬ್ ಮಹೀಂದ್ರ ಹೋಟೆಲ್‌ನಲ್ಲಿ ಶನಿವಾರ ಬಿಡುಗಡೆ ಮಾಡಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಎಫ್‌ಕೆಸಿಸಿಐ ಸಂಸ್ಥೆಯು ಉದ್ಯಮಿಗಳು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ. ಇತ್ತೀಚೆಗೆ ರಸ್ತೆಗುಂಡಿ ಸಮಸ್ಯೆಗಳನ್ನ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಅವರು ಉನ್ನತಮಟ್ಟದ ಸಭೆ ನಡೆಸಿದರು. ಹೀಗೆ, ಅನೇಕ ಸಮಸ್ಯೆಗಳನ್ನ ಗಮನಕ್ಕೆ ತರಲಾಗುತ್ತಿದೆ ಎಂದರು.

    ನಾನು ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡ ವಲಯಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿನ ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

    10 ಲಕ್ಷ ಉದ್ಯಮಿಗಳನ್ನ ರೂಪಿಸುವ ಗುರಿ
    ರಾಜ್ಯದಲ್ಲಿ 10 ಲಕ್ಷ ಉದ್ಯಮಿಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಕೊಡಲು ವಿದ್ಯಾರ್ಥಿಗಳಿಂದ ‘ಬಿಸಿನೆಸ್‌ ಪ್ಲ್ಯಾನ್‌’ ಅನ್ನು ಆಹ್ವಾನಿಸಿ, ಅದರಲ್ಲಿ ಉತ್ತಮ ಯೋಜನೆಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನೂ ಮುಂಬರುವ ದಿನಗಳಲ್ಲಿ ಜಾರಿಗೆ ತರಲಾಗುವುದು. ಇದರಿಂದ ಉದ್ಯಮ ವಲಯಕ್ಕೆ ಯುವ ಸಮುದಾಯ ಸೆಳೆಯುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

    ನ.19ರಂದು ಮಹಿಳಾ ಉದ್ಯಮಿಗಳ ದಿನಾಚರಣೆ
    ನ.19ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸರ್‌ಎಂವಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನಾಚರಣೆ ಏರ್ಪಡಿಸಲಾಗಿದೆ. ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ, ಸಂವಾದಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

    ರಾಜ್ಯದಲ್ಲಿರುವ ಉದ್ಯಮಿಗಳ ಪೈಕಿ ಶೇ.90ರಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ವಲಯದವರೇ ಇದ್ದಾರೆ. ಇವರಿಗಾಗಿಯೇ ಪ್ರತ್ಯೇಕ ನೀತಿಯನ್ನು ರೂಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಮ್ ಪ್ರಸಾದ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಗಿರೀಶ್ ಗಣಪತಿ ಭಾಗವಹಿಸಿದ್ದರು.

  • ಹಾರಂಗಿ ಸೇತುವೆ ನಿರ್ಮಾಣದಿಂದ ದಶಕಗಳ ಸಮಸ್ಯೆಗೆ ಪರಿಹಾರ; 36.50 ಕೋಟಿ ವೆಚ್ಚದಲ್ಲಿ ಕಮಾನು ಬ್ರಿಡ್ಜ್ ನಿರ್ಮಾಣ

    ಹಾರಂಗಿ ಸೇತುವೆ ನಿರ್ಮಾಣದಿಂದ ದಶಕಗಳ ಸಮಸ್ಯೆಗೆ ಪರಿಹಾರ; 36.50 ಕೋಟಿ ವೆಚ್ಚದಲ್ಲಿ ಕಮಾನು ಬ್ರಿಡ್ಜ್ ನಿರ್ಮಾಣ

    – 110 ಮೀ. ಉದ್ದದ ಕಮಾನು ಸೇತುವೆಗೆ ನೀಲನಕ್ಷೆ ಸಿದ್ಧ

    ಮಡಿಕೇರಿ: ಪ್ರತಿ ಮಳೆಗಾಲ ಬಂದ್ರೆ ಸಾಕು ಕೊಡಗಿನ ಹಾರಂಗಿ ಜಲಾಶಯದಿಂದ (Harangi Dam) ನೀರು ಬಿಡುಗಡೆ ಮಾಡಿದ್ರೆ ಸಾಕು ಹತ್ತಾರು ಹಳ್ಳಿಗಳಿಗರ ಸಂಪರ್ಕ ಕಲ್ಪಿಸುವ ಕೇಳ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದ ಜನರು ಹತ್ತಾರು ಕಿಲೋ ಮೀಟರ್ ಸುತ್ತಿ ಬಳಸಿಕೊಂಡು ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಹಲವಾರು ವರ್ಷಗಳಿಂದ ಈ ಗ್ರಾಮದ ನೂರಾರು ಕುಟುಂಬಗಳು ಕೇಳ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಪ್ರತಿ ಸರ್ಕಾರ ಬಂದಾಗಲೂ ಮನವಿ ಮಾಡುತ್ತಿದ್ರು. ಇದೀಗಾ ಗ್ರಾಮಸ್ಥರ ಮನವಿಯನ್ನ ಆಲಿಸಿರುವ ಸರ್ಕಾರ ದಶಕಗಳ ಸಮಸ್ಯೆಗೆ ಪರಿಹಾರ ನೀಡಿದೆ.

    ಹೌದು. ಕೊಡಗಿನಲ್ಲಿ ಮಳೆಗಾಲ ಬಂದ್ರೆ ಸಾಕು ನಾನಾ ಅವಾಂತರಗಳು ಕೊಡಗು ಜಿಲ್ಲೆ ಸಾಕ್ಷಿಯಾಗುತ್ತದೆ. ಅದರಲ್ಲೂ ಕೊಡಗಿನ ಏಕೈಕ ಹಾರಂಗಿ ಜಲಾಶಯದಿಂದ ಹೆಚ್ಚುವರಿಯಾಗಿ ನೀರನ್ನು ಕಾವೇರಿ ನದಿಗೆ ಹರಿಸಿದ್ರೆ ಸಾಕು ಹಾರಂಗಿ ಹಾಗೂ ಸೋಮವಾರಪೇಟೆ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗುತ್ತದೆ. ಹೀಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಗ್ರಾಮೀಣ ಭಾಗದ ಜನರು ಊರಿನಿಂದ ಹೋರ ಬರಲು ಸಾಧ್ಯವಾಗದೇ ತಮ್ಮ ತಮ್ಮ ಊರುಗಳಲ್ಲೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಿಂದ ನೀರು ಬಿಟ್ಟರೆ ಅಣೆಕಟ್ಟು ಎದುರಿನ ಸೇತುವೆ ಮುಳುಗಡೆಗೊಂಡು ಹಲವು ಗ್ರಾಮಗಳು ಸಂಪರ್ಕ ಕಡಿದುಕೊಳ್ಳುತ್ತಿತ್ತು. ಹಾರಂಗಿ- ಸೋಮವಾರಪೇಟೆ ರಸ್ತೆ ಕಡಿತವಾಗುವ ಹಿನ್ನೆಲೆ ಈ ಭಾಗದ ಜನರ ಓಡಾಡಕ್ಕೆ ಅನಾನುಕೂಲವಾಗುತ್ತಿತ್ತು. ಇದೀಗ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ.

    ಇನ್ನೂ ಹಾರಂಗಿ, ಯಡವನಾಡು, ಹುದುಗೂರು ಮತ್ತಿತರ ಗ್ರಾಮಗಳು ಹಾರಂಗಿಯಿಂದ ನೀರು ಬಿಡುಗಡೆಯಾದರೆ ಸಂಪರ್ಕ ಕಡಿತಗೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದವು. ಜಲಾಶಯದಿಂದ 14 ಸಾವಿರ ಕ್ಯುಸೆಕ್ ಪ್ರಮಾಣದ ನೀರು ಹೊರಬಿಟ್ಟರೆ ಈ ಸೇತುವೆಯ ಮೇಲೆ ಹರಿಯುತ್ತದೆ. ಅಲ್ಲದೆ, ಸೇತುವೆಯ ಎರಡೂ ಕಡೆ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ ಸಂಚಾರ ಅಪಾಯಕಾರಿ. ಇತ್ತಿಚಿನ ಕೆಲ ವರ್ಷಗಳ ಹಿಂದೆ ನೀರು ಹರಿಯುವ ಸಂದರ್ಭ ಸೇತುವೆ ದಾಟಲು ಹೋದ ಹಸುಗಳು ಕೊಚ್ಚಿ ಹೋದ ಘಟನೆ ನಡೆದಿತ್ತು. ಹೀಗಾಗಿ ನೂತನ ಸೇತುವೆ ನಿರ್ಮಿಸಲು ನೀರಾವರಿ ನಿಗಮದಿಂದ ಯೋಜನೆ ಸಿದ್ಧವಾಗಿದೆ.

    ಒಟ್ನಲ್ಲಿ ಪ್ರತಿ ಮಳೆಗಾಲ ಬಂದರೆ ಸಾಕು ಹಾರಂಗಿ ಜಲಾಶಯದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ದಿಗ್ಬಂಧನಕ್ಕೆ ಒಳಗಾಗುತ್ತಿದ್ರು. ಇದೀಗಾ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿರುವುದರಿಂದ ಗ್ರಾಮೀಣ ಭಾಗದ ಜನರು ಅದಷ್ಟು ಬೇಗಾ ಕಾಮಗಾರಿ ನಡೆಸಿ ನಿರ್ಭಯವಾಗಿ ಓಡಾಟ ನಡೆಸಲು ಅವಕಾಶ ಮಾಡಿಕೋಡಬೇಕು ಎಂದು ಮನವಿ ಮಾಡಿದ್ದಾರೆ.

  • ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ‌ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?

    ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ‌ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?

    ಮಾತೆ ಕಾವೇರಿ ತಲಕಾವೇರಿಯಲ್ಲಿ (Talacauvery) ಹುಟ್ಟಿ ಲೋಕ ಕಲ್ಯಾಣಕ್ಕಾಗಿ ನದಿಯಾಗಿ ಹೇಗೆ ಹರಿದಳು ಎಂಬುದರ ಬಗ್ಗೆ ‌ಹಲವರಿಗೆ ಇಂದಿಗೂ ಕುತೂಹಲ ಇದೆ. ಕಾವೇರಿ ಜನ್ಮ ತಾಳಿದ ಹಿನ್ನೆಲೆ ನೋಡುವುದಾದ್ರೆ ಅದಕ್ಕೊಂದು ಪೌರಾಣಿಕ ಕಥೆ ಇದೆ. ಬನ್ನಿ ತಿಳಿಯೋಣ…

    ಪುರಾಣ ಹೇಳುವಂತೆ, ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ (Brahmagiri Hill) ಕವೇರನೆಂಬ ಮುನಿ ವಾಸವಾಗಿದ್ದಋಂತೆ. ಅವನಿಗೊಬ್ಬಳು ಪುತ್ರಿ ಬೇಕೆಂಬ ಅಭಿಲಾಷೆ ಉಂಟಾಗಿ ಬ್ರಹ್ಮನನ್ನ ಕುರಿತು ತಪಸ್ಸು ಮಾಡುತ್ತಿದ್ದರ ಮಾಡತೊಡಗಿದ. ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನ ದತ್ತು ಮಗಳಾಗಿ ನೀಡಿದರಂತೆ. ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆಯತೊಡಗಿದಳು. ಹೀಗೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಆಕೆ ಕಾವೇರಿಯಾದಳು.

    ಒಮ್ಮೆ ಕವೇರನ ಆಶ್ರಮಕ್ಕೆ ಬಂದ ಅಗಸ್ತ್ಯ ಮುನಿಗಳು ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ನನ್ನನ್ನು ನೀವು ಉಪೇಕ್ಷಿಸಿ ಎಲ್ಲೂ ಹೋಗಬಾರದು ಹಾಗೊಂದು ವೇಳೆ ನನ್ನನ್ನ ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿದುಹೋಗುವುದಾಗಿ ಹೇಳಿದ್ದಳು. ಕಾವೇರಿಯ (Maa Cauvery) ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು ಆಕೆಯನ್ನ ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ದಿದ್ದರು.

    ಒಂದು ದಿನ ಬೇಗ ಎದ್ದ ಅಗಸ್ತ್ಯ ಮುನಿಗಳು ನಿದ್ದೆಯಲ್ಲಿದ್ದ ಕಾವೇರಿಯನ್ನು ಹಾಗೇ ಬಿಟ್ಟು ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೋಗಿದ್ದರು. ಆದರೆ, ಎಚ್ಚರವಾದಾಗ ಸನಿಹದಲ್ಲಿ ಪತಿ ಇಲ್ಲದಿರುವುದನ್ನ ಕಂಡು ಕೋಪಗೊಂಡ ಕಾವೇರಿ, ಷರತ್ತು ಮೀರಿದ ಪತಿಯಿಂದ ದೂರವಾಗಿ ಅಲ್ಲೇ ಇದ್ದ ಕೊಳಕ್ಕೆ ಧುಮುಕಿ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರಿ, ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿದಳು ಎಂಬ ಪ್ರತೀತಿ ಇದೆ. ಹೀಗೆ ಲೋಕಕಲ್ಯಾಣಕ್ಕೆ ಹೊರಟ ಕಾವೇರಿ ಪ್ರತಿವರ್ಷ ತುಲಾ ಸಂಕ್ರಮಣದಂದು ಬ್ರಹ್ಮಕುಂಡಿಕೆಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುತ್ತಾ ಬಂದಿದ್ದಾಳಂತೆ.

    ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರ ಹರಿದು ಬಳಿಕ ರಾಜ್ಯದಲ್ಲಿ ಸುಮಾರು 381 ಕಿಮೀ ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿಮೀ ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತಾಳೆ. ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನಕೊಳವಿದ್ದು, ನೂತನವಾಗಿ ವಿವಾಹವಾದವರು ಈ ಸ್ನಾನಕೊಳದಲ್ಲಿ ಕೈಕೈ ಹಿಡಿದು ನೀರಿನಲ್ಲಿ ಮೂರು ಬಾರಿ ಮುಳುಗಿ ತಲೆಗೆ ಪವಿತ್ರ ಜಲ ಹಾಕಿಸಿಕೊಂಡ್ರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

    ಅಗಸ್ತ್ಯೇಶ್ವರ ದೇವಾಲಯದ ಎಡಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನೇರಲು ಸುಮಾರು 500 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಮೆಟ್ಟಿಲೇರಿದ್ರೆ ಬ್ರಹ್ಮಗಿರಿಯ ಬೆಟ್ಟದ ಮೇಲ್ಭಾಗವನ್ನ ತಲುಪಬಹುದು. ಇಲ್ಲಿಂದ ನಿಂತು ನೋಡಿದ್ರೆ ಕಂಡುಬರುವ ನಿಸರ್ಗದ ಸುಂದರ ದೃಶ್ಯ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಅಲ್ಲದೇ ಎದುರಿನ ಬಾಪುರೆ ಬೆಟ್ಟದಲ್ಲಿ ಕೆಟ್ಟು ನಿಂತ ಬೃಹತ್‌ಗಾಳಿ ಯಂತ್ರಗಳು ಸೋಜಿಗವನ್ನುಂಟು ಮಾಡುತ್ತವೆ. ಇನ್ನು ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಸಿಗುವ ವ್ಯೂ ಪಾಯಿಂಟ್, ಭೀಮನಕಲ್ಲು, ಸಲಾಂಕಟ್ಟೆ ಎಲ್ಲವೂ ಇತಿಹಾಸದ ಕಥೆ ಹೇಳುತ್ತವೆ.

    ತೀರ್ಥೋದ್ಭವದ ಸಂದರ್ಭ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ಕಾರ್ಯವೂ ನಡೆಯುತ್ತದೆ. ತುಲಾಸಂಕ್ರಮಣದ ಒಂದು ತಿಂಗಳ ಕಾಲ ಭಗಂಡೇಶ್ವರ ದೇವಾಲಯದ ಕೊಠಡಿಯೊಂದರಲ್ಲಿ ನಂದಾದೀಪ ಉರಿಸಲಾಗುತ್ತದೆ. ಭಕ್ತರು ತಾವು ತರುವ ತುಪ್ಪವನ್ನು ಈ ದೀಪಕ್ಕೆ ಹಾಕುತ್ತಾರೆ. ಹಾಗೆಯೇ ಅಕ್ಕಿಯನ್ನು ಕೂಡ ಇಲ್ಲಿನ ಅಕ್ಷಯ ಭಂಡಾರಕ್ಕೆ ಹಾಕಿ ತಮ್ಮ ಮನೆಯ ಕಣಜದಲ್ಲಿ ಸದಾ ಭತ್ತ ತುಂಬಿರುವಂತೆ ಬೇಡಿಕೊಳ್ಳುತ್ತಾರೆ. ಕಾವೇರಿ ತೀರ್ಥೋದ್ಭವದ ತುಲಾ ಸಂಕ್ರಮಣ ಜಾತ್ರೆಯಲ್ಲಿ ಎಲ್ಲರೂ ಭಾಗಿಯಾಗಿ ಸಂಭ್ರಮಿಸುತ್ತಾರೆ.

    ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದ ಪುಣ್ಯಕಾಲದಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸಿ ತುಂಬಿ ಹರಿಯುವ ಕಾವೇರಿ ಮಾತೆಗೆ ವಿಶೇಷ ಮಹತ್ವ ಇದೆ. ಇದು ಕಾವೇರಿ ತುಲಾ ಸಂಕ್ರಮಣ ಜಾತ್ರೆ ಎಂದೇ ಜನಪ್ರಿಯ. ಕೊಡಗಿನವರಷ್ಟೇ ಅಲ್ಲದೆ ನಾಡಿನ ಹಾಗೂ ದೇಶ-ವಿದೇಶಗಳ ಜನರೆಲ್ಲಾ ಇಲ್ಲಿ ಆಗಮಿಸಿ ಕಾವೇರಿ ತೀರ್ಥದಲ್ಲಿ ಮುಳುಗೆದ್ದು ಪುನೀತರಾಗುವ ತುಲಾ ಸಂಕ್ರಮಣ ಜಾತ್ರೆಯನ್ನು ನೋಡುವುದೇ ಆನಂದ.

    ಹಸಿರು ಕಾನನ, ಬೆಟ್ಟಗುಡ್ಡಗಳಿಂದ ಆವೃತಗೊಂಡು ಸದಾ ಮಂಜಿನ ಮುಸುಕಿನೊಂದಿಗೆ ಆಸ್ತಿಕ-ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನತ್ತ ಕೈಬೀಸಿ ಕರೆಯುವ ತಲಕಾವೇರಿಯ ಪ್ರಕೃತಿಯ ತಾಣದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವ ಮೂಲಕ ಭಕ್ತರನ್ನ ಪುನೀತಗೊಳಿಸುತ್ತಾಳೆ. ಮಡಿಕೇರಿಯಿಂದ 42 ಕಿ.ಮೀ. ದೂರದಲ್ಲಿರುವ ತಲಕಾವೇರಿ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿದೆ.

  • ತಲಕಾವೇರಿ | ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಟ್ಟ ಕಾವೇರಿ ಮಾತೆ!

    ತಲಕಾವೇರಿ | ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಟ್ಟ ಕಾವೇರಿ ಮಾತೆ!

    ಮಡಿಕೇರಿ: ಕೊಡಗಿನ (Kodagu) ಕುಲದೇವಿ, ನಾಡಿನ ಜೀವನದಿ ಮಾತೆ ಕಾವೇರಿ (Cauvery Theerthodbhava) ನಿಗಧಿಯಂತೆ ಮಕರ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದಳು.

    ಬೆಳಗ್ಗೆ 11:30 ಗಂಟೆಯಿಂದಲೇ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ನೆರವೇರಿಸಿದರು. ಮತ್ತೊಂದೆಡೆ ಕಾವೇರಿ ತೀರ್ಥೋದ್ಭವ (Theerthodbhava) ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಮಂಡಲದಿಂದ 8 ಕಿಮೀ ದೂರದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು (Devotees) ಕಾವೇರಿ ಮಾತೆಯನ್ನ ನೆನೆಯುತ್ತಾ ತಲಕಾವೇರಿ ತಲುಪಿದರು. ಕೊಡಗು ಅಷ್ಟೇ ಅಲ್ಲದೇ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು.

    ತೀರ್ಥೋದ್ಭವದ ಸಮಯ ಹತ್ತಿರವಾಗಿತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಭಕ್ತರೆಲ್ಲರೂ ʻಉಕ್ಕಿ ಬಾ ತಾಯೆʼ ಎಂದು ಕಾವೇರಿ ಮಾತೆಯನ್ನ ಜಪಿಸುತ್ತಿದ್ದರು. ನಿಗದಿತೆ ಮಕರ ಲಗ್ನದಲ್ಲಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು. ಬಳಿಕ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥ ಪ್ರೋಕ್ಷಣೆ ಮಾಡಿದರು. ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ಭಕ್ತಿಭಾವ ಮೆರೆದು ಪುನೀತರಾದರು.

    ಇದೇ ಸಂದರ್ಭದಲ್ಲಿ ಮಾತಾನಾಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಕಾವೇರಿ ಸಂಕ್ರಮಣ ಕೊಡಗಿನಲ್ಲಿ ಎಲ್ಲಕ್ಕಿಂತ ವಿಶೇಷ ಹಬ್ಬ ನಾಡಿನ‌ ಜನರಿಗೆ ಆರೋಗ್ಯ ಆಯಸು ಕರುಣಿಸಲೆಂದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಕಾವೇರಮ್ಮ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸಿದೆ. ಅರಸು ಸಮುದಾಯದಿಂದ ಸಾಂಸ್ಕೃತಿಕ ಉಡುಪು ಹಾಕಿಕೊಂಡು ತಲಕಾವೇರಿಗೆ ಅಗಮಿಸಿದೇನೆ ಎಂದರು.

    ಕಾವೇರಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ, ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡು ತೀರ್ಥ ಕುಂಡಿಕೆಯ ಬಳಿ ನಿಂತು ಪೂಜೆ ನೆರವೇರಿಸಿದರು.

  • ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ತೀರ್ಥರೂಪಿಣಿಯಾಗುವ ವಿಸ್ಮಯ ಕಾಣಲು ಜನ ಕಾತರ

    ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ತೀರ್ಥರೂಪಿಣಿಯಾಗುವ ವಿಸ್ಮಯ ಕಾಣಲು ಜನ ಕಾತರ

    – ಡಿಸಿಎಂ ಡಿಕೆ ಶಿವಕುಮಾರ್‌, ರಾಮಲಿಂಗಾರೆಡ್ಡಿ ಭಾಗಿ

    ಮಡಿಕೇರಿ: ಕರುನಾಡಿನ ಜೀವನದಿ ಕಾವೇರಿಯ (Kaveri) ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಹಸ್ರಾರು ಭಕ್ತರು ತೀರ್ಥಸ್ವರೂಪಿಣಿ ಕಾವೇರಿಮಾತೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

    ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಕಾತರರಾಗಿದ್ದಾರೆ. ಕೊಡಗಿನ ಜನರ ಕುಲದೇವತೆ ಕರ್ನಾಟಕದ ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ.ಇದನ್ನೂ ಓದಿ: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ಕಣ್ತುಂಬಿಕೊಳ್ಳಲಿರುವ ಡಿಕೆಶಿ, ರಾಮಲಿಂಗಾ ರೆಡ್ಡಿ

    ಶುಕ್ರವಾರ (ಅ.17) ಮಧ್ಯಾಹ್ನ 1:44ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ. ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬರಲಿದೆ. ಈ ವಿಸ್ಮಯ ನೋಡಲು ಜನರು ಕಾತರರಾಗಿ ಕಾಯುತ್ತಿದ್ದಾರೆ. ತೀರ್ಥೋದ್ಭವಕ್ಕೂ ಮೊದಲು ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಪೂಜೆಗಳು ಜರುಗಲಿವೆ. ಮಹಾಮಂಗಳಾರತಿ ನಂತರ ಭಕ್ತರಿಗೆ ಕ್ಷೇತ್ರಕ್ಕೆ ಪ್ರವೇಶ ಸಿಗಲಿದೆ. ಬೆಳಗ್ಗೆ 11:30ರಿಂದಲೇ ತೀರ್ಥೋದ್ಭವದ ತನಕ ಮಂತ್ರಪಠಣ ನಡೆಯಲಿದೆ.

    ಪವಿತ್ರ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ ತಲಕಾವೇರಿಗೆ ಆಗಮಿಸಲಿದ್ದಾರೆ. ಇನ್ನೂ ಕಾವೇರಿ ತೀರ್ಥೋದ್ಭವ ನೋಡಲು ಮಂಡ್ಯ, ಮೈಸೂರು, ಬೆಂಗಳೂರು, ಹಾಸನ ಜಿಲ್ಲೆ ಸೇರಿದಂತೆ ದೇಶದ ಹಲವೆಡೆಗಳಿಂದ ಭಕ್ತರು ಬರುತ್ತಾರೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನಮಾಡಿ ಅಲ್ಲಿ ಭಗಂಢೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಕಾವೇರಿ ಮಾತೆಯ ದರ್ಶನ ಪಡೆಯುತ್ತಾರೆ. ತೀರ್ಥೋದ್ಭವವಾಗುತ್ತಿದ್ದಂತೆ ತೀರ್ಥವನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಾರೆ.

    ಸದ್ಯ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ಇದನ್ನೂ ಓದಿ: ಮಡಿಕೇರಿ | ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

  • ಕೊಡಗು | ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಪಲ್ಟಿ

    ಕೊಡಗು | ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಪಲ್ಟಿ

    ಮಡಿಕೇರಿ: ಅಕ್ರಮವಾಗಿ ಗೋವುಗಳನ್ನು (Cows) ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ರಸ್ತೆಯಲ್ಲಿನ ಕಾಗಡಿಕಟ್ಟೆ ಬಳಿ ಇಂದು ಬೆಳಗ್ಗಿನ ಜಾವ 2:30 ಗಂಟೆ ಸುಮಾರಿಗೆ ನಡೆದಿದೆ.

    ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಸಂಖ್ಯೆ KA13-B 3078ರಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಅಪಘಾತದಲ್ಲಿ ಮೂರು ಗೋವುಗಳು ಗಾಯಗೊಂಡಿವೆ. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಆರೋಪಿಗಳನ್ನು ತಡರಾತ್ರಿಯೇ ಬೆರೆಡೆಗೆ ಸಾಗಿಸಲಾಗಿದೆ. ಆರೋಪಿಕಡೆಯವರು ಇನ್ನೋವಾ ಕಾರಿನಲ್ಲಿ ಬೇರೆಡೆಗೆ ಸಾಗಿಸಿದ್ದಾರೆ.

    ಅಪಘಾತದ (Accident) ಬಳಿಕ ಕೊಡಗಿನಲ್ಲಿ ಗೋವುಗಳ ಅಕ್ರಮ ಸಾಗಾಟ ಹಾಗೂ ಹಾಗೂ ಗೋಹತ್ಯೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.

    ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ
    ಘಟನೆ ಬಳಿಕ, ತಪ್ಪಿತಸ್ಥರ ವಿರುದ್ಧ ಪೊಲೀಸ್‌ ಇಲಾಖೆ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಕ್ರಮ ಕೈಗೊಳ್ಳಬೇಕು. ಇಲ್ಲಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಬೋಜೆಗೌಡ ಎಚ್ಚರಿಸಿದ್ದಾರೆ.

  • ರಸ್ತೆಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ – ಕುಟುಂಬಸ್ಥರನ್ನ ರಕ್ಷಿಸಿದ ʻಪಬ್ಲಿಕ್ ಟಿವಿʼ ತಂಡ

    ರಸ್ತೆಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ – ಕುಟುಂಬಸ್ಥರನ್ನ ರಕ್ಷಿಸಿದ ʻಪಬ್ಲಿಕ್ ಟಿವಿʼ ತಂಡ

    ಮಡಿಕೇರಿ: ರಸ್ತೆಗುಂಡಿ (Pothole) ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿಂದು ನಡೆದಿದೆ. ಇದೇ ಸಮಯಕ್ಕೆ ಅಲ್ಲಿಗೆ ಧಾವಿಸಿದ ನಿಮ್ಮ ʻಪಬ್ಲಿಕ್‌ ಟಿವಿʼ ತಂಡ (Public TV Team) ಕುಟುಂಬಸ್ಥರನ್ನ ರಕ್ಷಣೆ ಮಾಡಿದೆ.

    ಹೌದು. ಮಡಿಕೇರಿಯ (Madikeri) ತಲಕಾವೇರಿ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿರುವ ಹಿನ್ನೆಲೆ ʻಪಬ್ಲಿಕ್ ಟಿವಿʼ ತಂಡ ರಿಯಾಲಿಟಿ ಚೆಕ್ ಮಾಡಲು ತೆರಳಿತ್ತು. ಇದೇ ರಸ್ತೆ ಗುಂಡಿ ತಪ್ಪಿಸಲು ಹೋದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಈ ದೃಶ್ಯ ಕೂಡ ಪಬ್ಲಿಕ್‌ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ʻಪಬ್ಲಿಕ್‌ ಟಿವಿʼ ತಂಡ ಕಾರಿನಲ್ಲಿದ್ದ ಕುಟುಂಬಸ್ಥರ ರಕ್ಷಣೆ ಮಾಡಿದೆ. ಕಾರಿನಲ್ಲಿದ್ದ ಮಕ್ಕಳು, ಕಾರು ಚಾಲಕ ಹಾಗೂ ವೃದ್ಧೆಯೊಬ್ಬರನ್ನ ರಕ್ಷಣೆ ಮಾಡಿದೆ, ಬಳಿಕ ಅವರನ್ನ ಮಡಿಕೇರಿ ಆಸ್ಪತ್ರೆಗೆ ಸುರಕ್ಷಿತವಾಗಿ ರವಾನೆ ಮಾಡಿದೆ. ಇದನ್ನೂ ಓದಿ: ದಸರಾ ದಶಮಂಟಪಗಳ ಶೋಭಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ – 62 ಮಂದಿ ವಿರುದ್ಧ ಕೇಸ್‌

    ಉಡುಪಿಯಿಂದ ನೇರವಾಗಿ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿರುವ ದರ್ಗಾಕ್ಕೆ ತೆರಳುವ ವೇಳೆಯಲ್ಲಿ ಈ ಘಟನೆ ಸಂಭವಿಸಿರುವುದರಿಂದ ಕಾರಿನಲ್ಲಿ ಇದ್ದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಅಪಘಾತದಿಂದ ಕಾರಿನ‌ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜು ಆಗಿದೆ. ಇದನ್ನೂ ಓದಿ: ಕುಟುಂಬಸ್ಥರ ಶವಸಂಸ್ಕಾರ ಮುಗಿಸಿ ನಾಲೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ನೀರುಪಾಲು

    ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಪಬ್ಲಿಕ್ ಟಿವಿ ತಂಡ ಕುಟುಂಬಸ್ಥರು ರಕ್ಷಣೆ ಮಾಡಿದಕ್ಕೆ ಬೆಟ್ಟಗೇರಿ ಗ್ರಾಮಸ್ಥರು ‌ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಗಣತಿದಾರರ ಪರದಾಟ – ಮುಂದುವರಿದ ಸರ್ವರ್​ ಸಮಸ್ಯೆ, 4 ದಿನಗಳಲ್ಲಿ ಕೇವಲ 1,133 ಮಂದಿ ದತ್ತಾಂಶ ಸಂಗ್ರಹ

  • ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ – ವಿದ್ಯಾರ್ಥಿ ಸಜೀವ ದಹನ

    ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ – ವಿದ್ಯಾರ್ಥಿ ಸಜೀವ ದಹನ

    ಮಡಿಕೇರಿ: ಇಲ್ಲಿನ ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ (Fire) ಅವಘಡ ಸಂಭವಿಸಿ, ಓರ್ವ ವಿದ್ಯಾರ್ಥಿ ಸಜೀವ ದಹನವಾಗಿರುವ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ.

    ಚೆಟ್ಟಿಮಾನಿ ಗ್ರಾಮದ ನಿವಾಸಿ ಪುಷ್ಪಕ್(7) ಮೃತ ವಿದ್ಯಾರ್ಥಿ. ಪುಷ್ಪಕ್ ಮಡಿಕೇರಿ ತಾಲೂಕಿನ ಕಾಟಗೇರಿ ಖಾಸಗಿ ವಸತಿ ಶಾಲೆಯಲ್ಲಿ ಎರಡನೇ ವ್ಯಾಸಂಗ ಮಾಡುತ್ತಿದ್ದ. ಇಂದು ಬೆಳಗ್ಗೆ ಶಾಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾನೆ.

    ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳು ಮಲಗಿರುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕೊಠಡಿಯಲ್ಲಿ ಸುಮಾರು 35 ಕ್ಕೂ ಹೆಚ್ಚು ಮಕ್ಕಳು ಬೆಂಕಿ ಕಂಡು ಕೊಠಡಿಯಿಂದ ಓಡಿಹೋಗಿದ್ದಾರೆ. ಇನ್ನೂ ಕೆಲವರು ಭಯದಲ್ಲೇ ಹಾಗೂ ಭಾರೀ ಹೊಗೆಯ ವಾತಾವರಣದಿಂದ ಹೊರಗೆ ಹೋಗಲಾರದೇ ಕಿರುಚಾಟ ನಡೆಸಿದ್ದರು.

    ವಸತಿ ಸಿಬ್ಬಂದಿ ಕೆಲ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಆದರೆ ವಿದ್ಯಾರ್ಥಿ ಪುಷ್ಪಕ್ ಮಾತ್ರ ದಟ್ಟ ಹೊಗೆ ಅವರಿಸಿದ ಹಿನ್ನಲೆಯಲ್ಲಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಹೋಗಿದ್ದ ಎನ್ನಲಾಗಿದೆ. ಸಿಬ್ಬಂದಿ ಮಕ್ಕಳ ಎಣಿಕೆ ಮಾಡುವ ಸಂದರ್ಭದಲ್ಲಿ ಓರ್ವ ವಿದ್ಯಾರ್ಥಿ ಕಾಣೆಯಾಗಿದ್ದಾನೆ ಎಂದು ಕೊಠಡಿ ಒಳಗೆ ನುಗ್ಗಿ ಹುಡುಕಾಟ ನಡೆಸುವ ಸಂದರ್ಭದಲ್ಲಿ ಪುಷ್ಪಕ್ ಜೀವಂತ ದಹನವಾಗಿರುವುದು ಬೆಳಕಿಗೆ ಬಂದಿದೆ.

    ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಫೈರ್ ಬ್ರಿಗೇಡ್ ಅಧಿಕಾರಿ ನಾಗರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪೋಷಕರು ಸಹ ಸ್ಥಳಕ್ಕಾಗಮಿಸಿದ್ದಾರೆ.