ತುಮಕೂರು: ಬಿಜೆಪಿಯಲ್ಲಿ ಖಾತೆ ಕ್ಯಾತೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸಚಿವ ಮಾಧುಸ್ವಾಮಿ ಸಾಮರ್ಥ್ಯಕ್ಕೆ ತಕ್ಕಂತೆ ಖಾತೆ ದೊರೆತಿಲ್ಲ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅಸಮಾಧಾನ ಹೊರಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧುಸ್ವಾಮಿ ಅವರ ಸಾಮರ್ಥ್ಯಕ್ಕೆ ಲೋಕೋಪಯೋಗಿ, ಇಂಧನ ಖಾತೆ ಕೊಡಬೇಕಿತ್ತು. ಆದರೆ ಕಾನೂನು ಮತ್ತು ಸಣ್ಣ ನೀರಾವರಿ ಖಾತೆ ಮಾತ್ರ ಕೊಟ್ಟಿರೋದು ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಉಂಟು ಮಾಡಿದೆ ಎಂದು ಹೇಳಿದರು.
ಖಾತೆ ಕುರಿತು ಮಾಧುಸ್ವಾಮಿಯವರಿಗೂ ಅಸಮಾಧಾನ ಇದೆ. ಆದರೆ ಅವರು ಎಲ್ಲೂ ಹೇಳಿಕೊಳ್ಳುತ್ತಿಲ್ಲ. ನಾವು ಅವರ ಅಭಿಮಾನಿಯಾಗಿ ವರಿಷ್ಠರ ಬಳಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ತಮ್ಮ ಬಿಜೆಪಿ ಸರ್ಕಾರ ಇನ್ನೂ ನಾಲ್ಕು ವರ್ಷ ಮೂರು ತಿಂಗಳು ಅಧಿಕಾರದಲ್ಲಿ ಇರಲಿದೆ. ಯಾಕೆಂದರೆ ಒಂದು ದೇಶ ಒಂದು ಚುನಾವಣೆ ಜಾರಿಯಾಗುವುದರಿಂದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ಹೆಚ್ಚಿಗೆ ಅಧಿಕಾರ ನಡೆಸಲು ಅವಕಾಶ ದೊರಕಲಿದೆ ಎಂದು ಮಸಾಲೆ ಜಯರಾಮ್ ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು: ಕೇವಲ ಕಾನೂನು ಖಾತೆ ಮಾತ್ರ ಕೊಟ್ಟರೆ ನನ್ನ ಮನಸ್ಸಿಗೆ ತುಂಬಾ ನೋವಾಗುತಿತ್ತು ಎಂದು ಹೇಳುವ ಮೂಲಕ ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಪ್ರಭಾವಿ ಖಾತೆಯ ತಮ್ಮ ನಿರೀಕ್ಷೆಯನ್ನು ಹೊರಹಾಕಿದ್ದಾರೆ.
ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬರೀ ಕಾನೂನು ಖಾತೆ ಮಾತ್ರ ಕೊಟ್ಟರೆ ನನ್ನ ಮನಸ್ಸಿಗೆ ನೋವಾಗುತಿತ್ತು. ಅದರ ಜೊತೆಗೆ ಸಣ್ಣ ನೀರಾವರಿನೂ ಕೊಟ್ಟಿದ್ದರಿಂದ ಸ್ವಲ್ಪ ಸಮಾಧಾನವಾಗಿದೆ ಎಂದು ಹೇಳಿದ್ದಾರೆ.
ಸಣ್ಣ ನೀರಾವರಿ ಕೊಟ್ಟಿದ್ದರಿಂದ ಕೆರೆಕಟ್ಟೆಗಳಿಗೆ ನೀರು ಹರಿಸುವ ಕೆಲಸ ಮಾಡಬಹುದು. ಆ ಕೆಲಸವನ್ನು ನಾನು ನಿಮಗೆ ಮಾಡಿಕೊಡುತ್ತೇನೆ. ಅಲ್ಲಿಗ ಮಗ, ಇಲ್ಲಿಗೆ ಅಳಿಯ ನಾನು. ಹಾಗಾಗಿ ನನಗೇನೂ ವ್ಯತ್ಯಾಸವಿಲ್ಲ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೆ. ಶಾಸಕನಾಗಿ 30 ವರ್ಷ ಆಯಿತು. ಆದರೂ ನನಗೆ ಸಚಿವನಾಗಬೇಕು ಅನ್ನಿಸಿರಲಿಲ್ಲ. ಜನ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರಲ್ವ ಸಾಕು ಅಂತ ಊರಲ್ಲಿ ಆರಾಮಾಗಿದ್ದೆ. ನಿನ್ನೆನೂ ನಾಯಕರೊಬ್ಬರು ಎಲ್ಲಿದ್ದೀಯಾ ಎಂದು ಕೇಳಿದ್ರೆ. ಆಗ ನಾನು ಊರಲ್ಲಿ ಅಂದೆ. ಮಂತ್ರಿ ಆಗಿದ್ದಿ ಮಾರಾಯ ಎಂದು ಅವರು ಹೇಳಿದ್ರು. ಆಗ ನಾನು ಏನು ಮಾಡೋದು ನನ್ನ ಕ್ಷೇತ್ರ ಬಿಡೋಕಾಗುತ್ತೆ ಎಂದು ಉತ್ತರಿಸಿದೆ ಎಂದರು.
ಜೊತೆಗೆ ಈ ಮಂತ್ರಿಗಿರಿ ಅನ್ನೋದು ನಾಟಕದಲ್ಲಿನ ರಾಜನ ಪಾತ್ರ ಇದ್ದಹಾಗೆ. ನಾಟಕದಲ್ಲಿ ಮಹಾಪ್ರಭು ಎನ್ನುತ್ತಾರೆ. ಪಾತ್ರ ಮುಗಿದ ಬಳಿಕ ಯಾರೂ ಪಾತ್ರದ ವ್ಯಕ್ತಿಗೆ ಬೆಲೆ ಕೊಟ್ಟು ಪ್ರಭು ಅನ್ನೋದಿಲ್ಲ. ನಾಟಕದ ರಾಜನಪಾತ್ರಕ್ಕೆ ಹೆಚ್ಚಿಗೆ ಬೆಲೆ ಕೊಡಬೇಡಿ. ಅವು ಯಾವಾಗ ಬರುತ್ತೊ ಯಾವಾಗಾ ಹೋಗುತ್ತೋ ಗೊತ್ತಿಲ್ಲ. ಹೀಗಾಗಿ ನಮ್ಮತನವನ್ನ ನಾವು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬಿಜೆಪಿಯ ‘ಟಾಕ್ ಸ್ಟಾರ್’ ನೂತನ ಸಚಿವ, ತುಮಕೂರಿನ ಚಿಕ್ಕನಾಯಕನಹಳ್ಳಿಯ ಶಾಸಕ ಮಾಧುಸ್ವಾಮಿ ಈಗ ಫುಲ್ ಖುಷಿಯಾಗಿದ್ದಾರೆ. ಸಚಿವ ಸ್ಥಾನ ಸಿಕ್ಕಿದ್ದಕ್ಕಲ್ಲ. ಬದಲಾಗಿ ಇವರಿಗೆ ವಿಧಾನಸೌಧದಲ್ಲಿ ಸಿಕ್ಕಿದ ವಿಶೇಷ ಕೊಠಡಿಯಿಂದ ಸಂತೋಷದಲ್ಲಿದ್ದಾರೆ.
ವಿಧಾನಸೌಧದಲ್ಲಿರುವ ರೂಂ ನಂಬರ್ 316 ಮೇಲೆ ಎಲ್ಲರ ಕಣ್ಣು ಇತ್ತು. ಈ ರೂಂಗಾಗಿ ಹಲವು ಮಂದಿ ಬಿಜೆಪಿ ನಾಯಕರು ಮುಗಿಬಿದ್ದಿದ್ದರು. ಆದರೆ ಈ ಅದೃಷ್ಟದ ರೂಂ ಮಾಧುಸ್ವಾಮಿ ಅವರಿಗೆ ಸಿಕ್ಕಿದೆ.
ಅಷ್ಟಕ್ಕೂ ಈ ರೂಂ ಸ್ಪೆಷಲ್ ಅಂದ್ರೆ, ಇದು ಹೆಚ್ ಡಿ ರೇವಣ್ಣನವರು ಇದ್ದ ರೂಂ. ಪಕ್ಕಾ ವಾಸ್ತುಪ್ರಕಾರವೇ ಈ ರೂಂ ವಿನ್ಯಾಸ ಬದಲಾಗಿದ್ದು ರೇವಣ್ಣ ವಾಸ್ತುವನ್ನು ಮಾಧುಸ್ವಾಮಿ ಫಾಲೋ ಮಾಡಿದ್ದಾರೆ. ಈ ರೂಂ ಸಿಕ್ಕಿದ್ದಕ್ಕೆ ಫುಲ್ ಖುಷಿಯಾಗಿರುವ ಮಾಧುಸ್ವಾಮಿ ಪೂಜೆ ಮಾಡಿ ಕಚೇರಿ ಪ್ರವೇಶಿಸಿದರು.
ವಿಶೇಷ ಅಂದರೆ ರೇವಣ್ಣ ಯಾವ ದಿಕ್ಕಿಗೆ ಕುರ್ಚಿ ಟೇಬಲ್ ಹಾಕಿದ್ದಾರೋ ಅದನ್ನು ಬದಲಾಯಿಸದೇ ರೇವಣ್ಣ ವಾಸ್ತು ಸ್ಟೈಲ್‍ನ್ನು ಮಾಧುಸ್ವಾಮಿ ಫುಲ್ ಫಾಲೋ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ನಾನು ವಾಸ್ತು ಮೇಲೆ ನಂಬಿಕೆಯಿಲ್ಲ. ಆದರೆ ಆದರೆ ರೇವಣ್ಣನವರು ಈ ಕಚೇರಿಯಲ್ಲಿ ಕುಳಿತಿದ್ದಾರೆ. ರೇವಣ್ಣನವರ ಮೇಲೆ ನನಗೆ ಭಾರೀ ವಿಶ್ವಾಸವಿದೆ ಎಂದು ಚಟಾಕಿ ಹಾರಿಸಿದರು.
ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿದ ನಂತರ ದೇವೇಗೌಡರು ಬಿಜೆಪಿ ಪರ ಸಾಫ್ಟ್ ಕಾರ್ನರ್ ಆಗಿದ್ದಾರಾ ಎನ್ನುವ ಪ್ರಶ್ನೆಗೆ, ಈ ವಿಚಾರ ನನಗೆ ಗೊತ್ತಿಲ್ಲ. ಅವರು ಸಾಫ್ಟ್ ಕಾರ್ನರ್ ಆಗುವುದಿಲ್ಲ. ಕುಮಾರಸ್ವಾಮಿ ಅವರೇ ನಾನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಹೀಗಿರುವಾಗ ಅವರು ಸಾಫ್ಟ್ ಕಾರ್ನರ್ ಆಗಿದ್ದಾರೆ ಎಂದು ನಾನು ತಿಳಿಯುವುದಿಲ್ಲ ಎಂದು ಉತ್ತರಿಸಿದರು.
ಈ ಹಿಂದೆ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ವಿಧಾನಸಭೆಯನ್ನು ಈಗಲೇ ವಿಸರ್ಜಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಕೇಳಲ್ಪಟ್ಟೆ. ಆದರೆ ಇಂದು ಅಂತಿಮವಾಗಲಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯನವರು ಪರಸ್ಪರ ವಾಗ್ದಾಳಿ ನಡೆಸಿದ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ, ಈ ವಿಚಾರದ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ. ನೀವೇ ಸುದ್ದಿ ಮಾಡುವವರು. ನಿಮಗೆ ಗೊತ್ತಿದ್ದರೆ ಹೇಳಿ ಎಂದು ಯಾವುದೇ ಪ್ರತಿಕ್ರಿಯೆ ನೀಡದೇ ಮಾತು ಮುಂದುವರಿಸಿದರು.
ಬೆಂಗಳೂರು: ಸಿಎಂ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಮಾಧುಸ್ವಾಮಿ ಅವರು ಕಂದಾಯ ಖಾತೆ ಅಥವಾ ಗ್ರಾಮೀಣ ಅಭಿವೃದ್ಧಿ ಖಾತೆಯಲ್ಲಿ ಕೆಲಸ ಮಾಡಲು ನನಗೆ ಆಸೆ ಇದೆ. ನಾನು ಒತ್ತಾಯ ಮಾಡಲ್ಲ, ಯಾವ ಖಾತೆ ಕೊಟ್ಟರೂ ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾವ ಖಾತೆ ಕೊಟ್ಟರು ಉತ್ತಮ ಕೆಲಸ ಮಾಡುತ್ತೇನೆ. ನಾನು ಹಳ್ಳಿಯಿಂದ ಬಂದವನು, ಹೀಗಾಗಿ ರೈತರಿಗೆ ಸಂಬಂಧಪಟ್ಟ ಖಾತೆ ಕೊಟ್ಟರೆ ಅನುಭವವಿರುವುದರಿಂದ ಸ್ವಲ್ಪ ಚೆನ್ನಾಗಿ ಕೆಲಸ ಮಾಡುತ್ತೆನೆ. ರೈತರಿಗೆ ಸಂಬಂಧಪಟ್ಟ ಖಾತೆಯಲ್ಲಿ ಕೆಲಸ ಮಾಡುವ ಆಸೆ ಇದೆ. ಆದರೆ ಖಾತೆ ಹಂಚಿಕೆ ಮಾಡುವವರು ನಾಯಕರು, ಅವರಿಗೆ ಏನು ಆಸೆ ಇದೆಯೋ ಗೊತ್ತಿಲ್ಲ. ಅವರ ನಿರೀಕ್ಷೆಯನ್ನು ಪೂರ್ತಿಗೊಳಿಸುವುದು ಕೂಡ ನಮ್ಮ ಕರ್ತವ್ಯ ಎಂದರು.
ನಮ್ಮ ಬದುಕಿಗೆ ಹತ್ತಿರವಾದ ಖಾತೆ ಕೊಟ್ಟರೆ ಕೆಲಸ ಮಾಡಲು ಖುಷಿಯಾಗುತ್ತದೆ. ಕಂದಾಯ ಇಲಾಖೆಯಲ್ಲಿ ಬಹಳಷ್ಟು ಕೆಲಸ ಮಾಡುವ ಆಸೆ ಇದೆ. ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಕೂಡ ದುಡಿಯುವ ಆಸೆ ಇದೆ. ಈ ಖಾತೆಗಳನ್ನು ಕೊಟ್ಟರೆ ಖುಷಿಯಿಂದ ನೋಡಿಕೊಳ್ಳುತ್ತೇನೆ. ಅದನ್ನು ಬಿಟ್ಟು ಕಾನೂನು ಖಾತೆಯನ್ನೇ ನೋಡಿಕೋ ಎಂದರೆ ಅದನ್ನೂ ಕೂಡ ಸಂತೋಷದಿಂದಲೇ ನಿಭಾಯಿಸುತ್ತೇನೆ ಎಂದು ತಮ್ಮ ಆಸೆಯನ್ನು ತಿಳಿಸಿದರು.
ನನಗೆ ಮತ್ತು ಯಡಿಯೂರಪ್ಪ ಅವರಿಗೆ ಬಹಳ ವರ್ಷದಿಂದ ಸ್ನೇಹ, ವಿಶ್ವಾಸ ಇದೆ. ಸಚಿವ ಸ್ಥಾನ ನೀಡಿರುವುದು ಅದಕ್ಕೆ ಸಂದ ಗೌರವ. ಕಳೆದ 20 ವರ್ಷದಿಂದ ನಾವಿಬ್ಬರು ಜೊತೆಯಾಗಿದ್ದೇವೆ. ಹೀಗಾಗಿ ನನ್ನ ಮೇಲೆ ಅವರಿಗೆ ಬಹಳ ವಿಶ್ವಾಸವಿದೆ. ಆದ್ದರಿಂದ ನನಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂಬುದು ನನ್ನ ಭಾವನೆ ಎಂದು ಸಿಎಂ ಹಾಗೂ ಸಚಿವ ಸಂಪುಟದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಪ್ತನಿಗೆ ಮಂತ್ರಿಸ್ಥಾನ ಕೊಟ್ಟ ಬಿಎಸ್‍ವೈ – ಮಾಧುಸ್ವಾಮಿಗೆ ಸಚಿವ ಸ್ಥಾನ ಸಿಗಲು ಕಾರಣ ಏನು?
ಖಾತೆ ವಿಸ್ತರಣೆ ಮಾಡೋದು, ಕೊಡುವುದು ನಾಯಕರ ಕೆಲಸ. ಅವರು ಯಾವ ಕೆಲಸ ಕೊಡುತ್ತಾರೋ ಅದನ್ನು ಸಮರ್ಪಕವಾಗಿ ಮಾಡುವುದು ನನ್ನ ಆಕಾಂಕ್ಷೆ ಎಂದರು. ಬಳಿಕ ಹೈಕಮಾಂಡ್ ವಿಚಾರವಾಗಿ ಮಾತನಾಡಿ, ಸಚಿವ ಸಂಪುಟದ ಪಟ್ಟಿ ಮಾಡುವ ಸಮಯದಲ್ಲಿ ಕೊಂಚ ಸಮಸ್ಯೆಯಾಗುತ್ತೆ. ಆದರೆ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿಲ್ಲ. ಎಲ್ಲಾ ರಾಷ್ಟ್ರೀಯ ಪಕ್ಷಗಳಲ್ಲೂ ಸ್ಪಲ್ಪ ಗೊಂದಲ ಇರುತ್ತದೆ. ಇಂದಿರಾ ಗಾಂಧಿ ಕಾಲದಿಂದಲೂ ಇದು ನಡೆಯುತ್ತಿದೆ. ಯಾರಿಗೆ ಸಚಿವ ಸ್ಥಾನ ಕೊಡಬೇಕು, ಹೇಗೆ ಪಕ್ಷವನ್ನು ಬೆಳೆಸಬೇಕು ಎನ್ನುವ ದೃಷ್ಟಿಯಿಂದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಹೀಗಾಗಿ ಸ್ಪಲ್ಪ ತಡವಾಗಿದೆ, ಆದರೆ ಹೈಕಮಾಂಡ್ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿಲ್ಲ, ಕಿರಿಕಿರಿ ಮಾಡುತ್ತಿಲ್ಲ ಎಂದು ಹೇಳಿದರು.
ಕಂದಾಯ ಖಾತೆ ಬಗ್ಗೆ ಮಾತನಾಡಿ, ಮಿಸ್‍ಮ್ಯಾಚ್‍ಗಳು, ತಿದ್ದುಪಡಿಗಳು, ಸಾಮಾಜಿಕ ಭದ್ರತೆಗೆ ಹಣಕಾಸು ಬಿಡುಗಡೆ ಬಾಕಿ, ಪಹಣಿ ಸಮಸ್ಯೆ, ಅಕ್ರಮ, ಬರದ ಹಾವಳಿ, ನೆರೆ ಈ ಎಲ್ಲಾ ಒಳಗೊಂಡ ಖಾತೆಯಿದ್ದರೆ ಕೈತುಂಬ ಕೆಲಸ ಮಾಡಬಹುದು. ಹಿಂದಿನ ಸಚಿವರು ಆ ಖಾತೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೆಲವೊಂದು ಅಪೀಲ್‍ಗಳು ಮುಗಿಸಲು 5ರಿಂದ 6 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ. ಹಲವು ಅಪೀಲ್‍ಗಳು ಇನ್ನೂ ಬಾಕಿ ಉಳಿದಿದೆ. ಇದನ್ನು ಬಗೆಹರಿಸಲು ಪೂರ್ಣ ಅವಧಿ ಕೆಲಸ ಸಿಕ್ಕರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ನಾನು ಸಿಎಂ ಅವರಿಗೆ ಇದೇ ಖಾತೆ ಕೊಡಿ, ಅದೇ ಖಾತೆ ಕೊಡಿ ಎಂದು ಒತ್ತಾಯ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಕೊನೆಯ ಕ್ಷಣದಲ್ಲಿ ಹಲವು ಟ್ವಿಸ್ಟ್ ಗಳನ್ನು ಪಡೆದುಕೊಂಡು ಕೊನೆಗೂ ಬಿಎಸ್ ಯಡಿಯೂರಪ್ಪನವರ ಕ್ಯಾಬಿನೆಟ್ ಇಂದು ರಚನೆಯಾಗುತ್ತಿದೆ. ಹಲವು ಸುತ್ತಿನ ಚರ್ಚೆಗಳು ನಡೆದು ಅಂತಿಮವಾಗಿ 17 ಮಂದಿ ಇಂದು ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮಾಧುಸ್ವಾಮಿಗೆ ಸಿಕ್ಕಿದ್ದು ಹೇಗೆ?
ತುಮಕೂರಿನ ಚಿಕ್ಕನಾಯಕನಹಳ್ಳಿಯ ಶಾಸಕರಾಗಿರುವ ಮಾಧುಸ್ವಾಮಿ ಹೆಚ್‍ಡಿಕೆ ಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ್ದಾಗ ಬಿ.ಎಸ್.ವೈ ಬೆನ್ನಿಗೆ ನಿಂತಿದ್ದರು. ಸದನದ ಹೊರಗಡೆ ಮತ್ತು ಸದನದ ಒಳಗಡೆ ಬಿಎಸ್‍ವೈ ಪಾಲಿನ ಆಪತ್ಭಾಂಧವ ಎಂದೇ ಗುರುತಿಸಿಕೊಂಡಿದ್ದಾರೆ.
ಯಾವುದೇ ವಿಚಾರಗಳನ್ನು ನೇರ ನೇರವಾಗಿ ಹೇಳು ಮಾಧುಸ್ವಾಮಿ ಕಾನೂನು, ಆಡಳಿತ, ಕೃಷಿ, ಸೇರಿದಂತೆ ಹಲವು ವಿಷಯಗಳಲ್ಲಿ ಪರಿಣಿತಿ ಪಡೆದುಕೊಂಡಿದ್ದಾರೆ. ಉತ್ತಮ ಸಂಸದೀಯ ಪಟು ಆಗಿರುವ ಮಾಧುಸ್ವಾಮಿ ವಿಧಾನಸಭೆಯಲ್ಲಿ ಉತ್ತಮ ಮಾತುಗಾರನಾಗಿ ಗುರುತಿಸಿಕೊಂಡಿದ್ದಾರೆ. ಬಂಡಾಯ ಶಾಸಕರು ರಾಜೀನಾಮೆ ನೀಡಿದ ಬಳಿಕ ವಿಧಾನಸಭೆಯಲ್ಲಿ ನಡೆದ ಹೈಡ್ರಾಮದ ವೇಳೆ ಬಿಜೆಪಿ ಪರವಾಗಿ ಮಾಧುಸ್ವಾಮಿ ಒಬ್ಬರೇ ಎದ್ದು ನಿಂತು ಪ್ರಬಲವಾಗಿ ವಾದ ಮಂಡಿಸುತ್ತಿದ್ದರು. ಹೀಗಾಗಿ ಮಾಧುಸ್ವಾಮಿ ಸಚಿವರಾಗಿ ತಮ್ಮ ಜೊತೆಗಿದ್ದರೆ ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಹೈಕಮಾಂಡ್‍ಗೆ ಬಿಎಸ್ ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟಿದ್ದರು. ಇದನ್ನೂ ಓದಿ: ದೇವೇಗೌಡರನ್ನು ಹೊರಗೆ ಹಾಕಿದ್ದ ಕುಮಾರಸ್ವಾಮಿ – ಸಿಎಂ ವಿರುದ್ಧ ಮಾಧುಸ್ವಾಮಿ ಆರೋಪ
ಜನತಾ ಪಕ್ಷ ಒಟ್ಟಿಗೆ ಇದ್ದಾಗ ಅದರಲ್ಲಿ ಮಾಧುಸ್ವಾಮಿ ಗುರುತಿಸಿಕೊಂಡಿದ್ದರು. ಆ ನಂತರ ರಾಮಕೃಷ್ಣ ಹೆಗ್ಗಡೆ ಜತೆ ಗುರುತಿಸಿಕೊಂಡರು. ಆ ನಂತರ ಯಡಿಯೂರಪ್ಪ ಬಿಜೆಪಿಗೆ ರಾಜೀನಾಮೆ ನೀಡಿ ಕೆಜೆಪಿ ಕಟ್ಟಿದಾಗ ಕೆಜೆಪಿಗೆ ಬಂದರು. ಬಳಿಕ ಯಡಿಯೂರಪ್ಪನವರು ಮುನಿಸು ಮರೆತು ಬಿಜೆಪಿಗೆ ಬಂದಾಗ ಅವರ ಜೊತೆ ಮರಳಿ ಕಮಲದ ಕಡೆ ಹೆಜ್ಜೆ ಹಾಕಿದ ನಾಯಕರ ಪೈಕಿ ಇವರು ಒಬ್ಬರು. ಈಗ ಮಂತ್ರಿ ಸ್ಥಾನ ಪಡೆಯುವ ಮೂಲಕ ಮುಂದಿನ ಲಿಂಗಾಯತ ನಾಯಕನಾಗಿ ಮಾಧುಸ್ವಾಮಿ ಹೊರಹೊಮ್ಮುವ ಸಾಧ್ಯತೆಯಿದೆ.
ಜೆಸಿ ಮಾಧುಸ್ವಾಮಿ ಅವರ ಮೂಲ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜಯಚಾಮರಾಜೇಂದ್ರ ಪುರ (ಜೆಸಿ ಪುರ). ಶಾಸಕರಾಗಿದ್ದರೂ ಮಾಧುಸ್ವಾಮಿ ಈಗಲೂ ಇಲ್ಲೇ ನೆಲೆಸಿದ್ದಾರೆ. ಮಾಧುಸ್ವಾಮಿ ಅವರ ಪಾಲಿಗೆ ಯಾವುದೇ ಎಲೆಕ್ಷನ್ ಇಲ್ಲ ಅಂದರೆ ಅವರು ಪೂರ್ಣಾವಧಿ ರೈತರಾಗುತ್ತಾರೆ. ಇದನ್ನೂ ಓದಿ: ಕರೀರಿ ಆ ಮಾಧುಸ್ವಾಮಿನ- ಶಾಸಕರ ವಿರುದ್ಧ ಬಿಎಸ್‍ವೈ ಕೆಂಡಾಮಂಡಲ
ನವದೆಹಲಿ: ಯಡಿಯೂರಪ್ಪನವರು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬುದು ತುಂಬಾ ದಿನಗಳ ಬಯಕೆಯಾಗಿತ್ತು ಅದೀಗ ಈಡೇರಿದೆ. ರಾಜ್ಯಕ್ಕೆ ಏನೇನು ಒಳ್ಳೆಯ ಕೆಲಸಗಳಾಗಬೇಕೋ ಅದೆಲ್ಲವನ್ನು ಯಡಿಯೂರಪ್ಪನವರು ಮಾಡುತ್ತಾರೆ ಎಂದು ಮಾಧುಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅಸ್ತಿತ್ವದ ನಂತರ ತುಂಬಾ ಸಂಕಟವಾಗಿತ್ತು. ಯಡಿಯೂರಪ್ಪನವರಿಗೂ ಸಹ ತುಂಬಾ ದಿನಗಳಿಂದ ಒಂದು ರೀತಿಯ ಬೇಸರ ಕಾಡುತ್ತಿತ್ತು. ಇದೀಗ ಮರಳಿ ಅಧಿಕಾರಕ್ಕೇರುತ್ತಿರುವುದು ಹಾಗೂ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗುತ್ತಿರುವುದು ತುಂಬಾ ಸಂತಸ ತಂದಿದೆ. ರಾಜ್ಯಕ್ಕೆ ಏನೇನು ಒಳ್ಳೆಯ ಕೆಲಸ ಮಾಡಬೇಕೋ ಅದನ್ನು ಅವರು ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ವಿಧಾನಸಭೆ ಚುನಾವಣೆಯಲ್ಲಿ ಮತದಾರರು 105 ಜೊತೆಗೆ ಇನ್ನು 5-6 ಸ್ಥಾನ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕೆಲವೇ ಸ್ಥಾನ ಕಡಿಮೆ ಬಂದಿದ್ದರಿಂದ ದೊಡ್ಡ ಪಾರ್ಟಿಯಾಗಿದ್ದರೂ ಅಧಿಕಾರದಿಂದ ದೂರ ಉಳಿಯಬೇಕಾಯಿತು. ಹೀಗಾಗಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ನಂತರ ಅವರ ಕಚ್ಚಾಟ ಶುರುವಾಯಿತು. ಆಗಲೇ ಇವರು ತುಂಬಾ ದಿನ ಉಳಿಯುವುದಿಲ್ಲ ಎಂದು ನಾವು ಅಂದುಕೊಂಡಿದ್ದೆವು. ನಂತರ ನಡೆದ ಲೋಕಸಭಾ ಚುನಾವಣೆ ವೇಳೆ ಮತದಾರರು ಜಾಗೃತಿಯಿಂದ ಮತ ಹಾಕಿದರು ಎಂದು ತಿಳಿಸಿದರು.
ವಿಧಾನಸಭೆಯಲ್ಲಾದ ತಪ್ಪು ಲೋಕಸಭೆಯಲ್ಲಾಗಬಾರದು ಎಂದು ಉತ್ತಮ ತೀರ್ಪು ನೀಡಿದರು. ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸಿ ಕೊಟ್ಟರು. ಇದರಿಂದ ಜನರ ಅಭಿಪ್ರಾಯವೇನು ಎಂಬುದು ಸ್ಪಷ್ಟವಾಗುತ್ತದೆ. ಇಡೀ ರಾಜ್ಯದ ಜನತೆ ಇದೀಗ ನಮ್ಮ ಜೊತೆಗಿದ್ದಾರೆ. ಮೈತ್ರಿ ಸರ್ಕಾರದ ಶಾಸಕರಿಗೂ ಅಲ್ಲಿನ ದುರಾಡಳಿತ ನೋಡಿ ಬೇಸರವಾಯಿತು. ಶಾಸಕರು ನಿರೀಕ್ಷಿಸಿದ ಕೆಲಸ ಆಗುತ್ತಿಲ್ಲ. ಕೆಲವೇ ಜನರ ಕೆಲಸವಾಗುತ್ತದೆ. ಒಂದೇ ಕುಟುಂಬದ ಮಾತನ್ನು ಎಲ್ಲರೂ ಕೇಳುವ ಪರಿಸ್ಥಿತಿ ಇದೆ ಎಂದು ಅವರಲ್ಲೇ ಭಿನ್ನಾಭಿಪ್ರಾಯ ಮೂಡಿ ಹೊರ ನಡೆದರು. ಇದೇ ಸಂದರ್ಭವನ್ನು ನಾವು ಸದ್ಬಳಕೆ ಮಾಡಿಕೊಂಡಿದ್ದೇವೆ ಎಂದು ಹೇಳಿ ಸರ್ಕಾರ ರಚನೆಗೆ ಮುಂದಾಗಿದನ್ನು ಸಮರ್ಥಿಸಿಕೊಂಡರು.
ನಮ್ಮ ಪಕ್ಷದಲ್ಲಿ ಹೈ ಕಮಾಂಡ್ ಅವರೇ ಅಂತಿಮ ನಿರ್ಧಾರ ಮಾಡಬೇಕು. ಹೀಗಾಗಿ ನಾವು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆವು. ಈ ವೇಳೆ ಅವರು ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಅವರು ಸಂಸತ್‍ನಲ್ಲಿ ಕಾರ್ಯನಿರತರಾಗಿದ್ದರಿಂದ ರಾತ್ರಿ ವೇಳೆ ಸಭೆ ನಡೆಸಿ ಚರ್ಚಿಸಿ, ರಾತ್ರಿ 11ಕ್ಕೆ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಸರ್ಕಾರ ರಚನೆಗೆ ತಡವಾಗಿ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ನಮ್ಮದು 105 ಇದ್ದರೂ ಇಬ್ಬರು ಪಕ್ಷೇತರರು ಬೆಂಬಲ ನೀಡಿದ್ದಾರೆ. ಅಲ್ಲದೆ, ಬಿಎಸ್‍ಪಿಯ ಮಹೇಶ್ ಅವರನ್ನು ಉಚ್ಛಾಟನೆ ಮಾಡಿದ್ದಾರೆ. ಬಿಎಸ್‍ಪಿ ಹೈ ಕಮಾಂಡ್ ಮಹೇಶ್ ಅವರಿಗೆ ಮೈತ್ರಿ ಸರ್ಕಾರಕ್ಕೆ ಮತ ಹಾಕಿ ಎಂದರೂ ಸಹ ಹೋಗಿಲ್ಲದ್ದನ್ನು ಕಂಡರೆ ಅವರು ನಮ್ಮ ಪರವಾಗಿದ್ದಾರೆ ಎಂದರ್ಥ. ಹೀಗಾಗಿ ನಾವು 108 ಜನ ಆಗುತ್ತೇವೆ. ಬಹುಮತಕ್ಕೆ ಕೇವಲ 5 ಸ್ಥಾನ ಮಾತ್ರ ವ್ಯತ್ಯಾಸವಾಗಲಿದೆ ಎಂದು ಮಾಧುಸ್ವಾಮಿ ತಿಳಸಿದರು.
ಈ ಹಿಂದೆ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯಪಾಲರು ಸಂವಿಧಾನದಕ್ಕೆ ಬದ್ಧವಾಗಿ ಕ್ರಮ ಕೈಗೊಂಡರು. ಅಲ್ಲದೆ, ಮೈತ್ರಿ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಕೇವಲ 24 ಗಂಟೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದರು. ಹೀಗಾಗಿ ಗಲಿಬಿಲಿಯಾಯಿತು. ಅಲ್ಲದೆ, ಆಗ ಪಕ್ಷೇತರರು ಸಹ ಅವರೊಂದಿಗೆ ಹೋಗಿದ್ದರು. ಇಂದು ಆ ಪರಿಸ್ಥಿತಿ ಇಲ್ಲ ಅವರೊಂದಿಗೆ ಪಕ್ಷೇತರರು, ಬಿಎಸ್‍ಪಿ ಶಾಸಕರಿಲ್ಲ. ನಾವು ಒಟ್ಟು 108 ಜನ ಇದ್ದೇವೆ. ಅಲ್ಲದೆ, ಅತೃಪ್ತ ಶಾಸಕರೂ ಸಹ ಯಾವುದೇ ಕಾರಣಕ್ಕೂ ಮರಳಿ ಮೈತ್ರಿ ಪಕ್ಷಗಳನ್ನು ಸೇರುವುದಿಲ್ಲ. ಹೀಗಾಗಿ ಸರ್ಕಾರ ನಡೆಸುವ ಕುರಿತು ನಮಗೆ ವಿಶ್ವಾಸವಿದೆ ಎಂದರು.
ಬೆಂಗಳೂರು: ಪಕ್ಷಾಂತರ ಕಾಯ್ದೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡುತ್ತಿದ್ದ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕರ ವಿರುದ್ಧ ಸಚಿವ ಡಿ.ಕೆ ಶಿವಕುಮಾರ್ ಅವರು ಏಕಾಏಕಿ ಗರಂ ಆದರು. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೆ ಇನ್ನೇನು ಬೇಕು ನಿಮಗೆ ಎಂದು ಕಿಡಿಕಾರಿದರು.
ವಿಶ್ವಾಸಮತಯಾಚನೆಯ ಚರ್ಚೆಯಲ್ಲಿ ಸಿದ್ದರಾಮಯ್ಯನವರು ಮಾತನಾಡುತ್ತಾ, ಮೊದಲೆಲ್ಲ ಪಕ್ಷಾಂತರ ಕಾಯ್ದೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 1967 ರಲ್ಲಿ ಗಯಾಲಾಲ್ ಅವರು ಮೂರು ಸಲ ಪಕ್ಷಾಂತರ ಮಾಡಿದ್ದರು. ಆಗಿನಿಂದ ಇಡೀ ದೇಶ ಪಕ್ಷಾಂತರ ಕಾಯ್ದೆ ಬಗ್ಗೆ ಗಂಭೀರವಾಗಿ ಚರ್ಚೆ ಶುರು ಮಾಡಿತ್ತು ಎಂದರು.
ಈ ವೇಳೆ ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಮಾಧುಸ್ವಾಮಿ ಅಡ್ಡಿ ಪಡೆಸಿದರು. ಆಗ ಸಿಟ್ಟಿಗೆದ್ದ ಡಿಕೆಶಿ ಅವರು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೆ ಇನ್ನೇನು ಬೇಕು. ನಿಮ್ಮ ಸಲಹೆಗಳು ನಮಗೆ ಬೇಕಿಲ್ಲ. ನಮ್ಮ ಶಾಸಕರನ್ನು ಕರೆದುಕೊಂಡು ಹೋಗಿ ಬೀದಿ ಪಾಲು ಮಾಡಿದ್ದೀರಾ ಎಂದು ಹರಿಹಾಯ್ದರು.
ಅಲ್ಲದೆ ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಅವರು ಇದ್ದಾಗ ಏನೂ ಮಾಡಿದ್ದಾರೆ? ನಮ್ಮ ನಾಯಕರನ್ನು ನಿಮ್ಮ ಕಡೆ ಮಾಡಿಕೊಂಡಿದ್ದೀರಾ. ಆ ನಾಯಕರೆಲ್ಲಾ ಇಲ್ಲೇ ಇದ್ದಾರೆ ನೋಡಿ. ನಿಮ್ಮ ಮುಖಕ್ಕೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಭಾಷಣಕ್ಕೆ ಮಾಧುಸ್ವಾಮಿ ಅಡ್ಡಿ ಪಡಿಸಿ, ವಿಶ್ವಾಸ ಮತ ಮುಗಿದ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ಸ್ಪೀಕರ್ ಬಳಿ ಮನವಿ ಮಾಡಿದರು. ಈ ವೇಳೆ ನಿಮಗೂ ಮಾತನಾಡಲು ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದರು. ಇದೇ ವೇಳೆ ಬಿಜೆಪಿಯ ಕೆ.ಜಿ ಬೋಪಯ್ಯ ಅವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಅಧಿವೇಶನ ಒಂದು ಕ್ಷಣ ಗದ್ದಲದ ಗೂಡಾಯಿತು.
ತುಮಕೂರು: ವ್ಯಕ್ತಿಯೊಬ್ಬನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮಾಧುಸ್ವಾಮಿ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಶಾಸಕರು ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಚುನಾವಣಾ ಅಧಿಕಾರಿಗಳು ಸ್ವಯಂ ಪ್ರೇರಣೆಯಿಂದ ದೂರು ನೀಡಿದ್ದರು. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆಗಿದ್ದೇನು?:
ಚಿಕ್ಕನಾಯಕನಹಳ್ಳಿ ತಾಲೂಕಿನ ತಮ್ಮಡಿಹಳ್ಳಿ ಗೊಲ್ಲರ ಹಟ್ಟಿಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆದಿತ್ತು. ಈ ವೇಳೆ ಗೊಲ್ಲರ ಹಟ್ಟಿಯ ಚಂದ್ರು ಅಭಿವೃದ್ಧಿ ವಿಚಾರವಾಗಿ ಶಾಸಕ ಮಧುಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದರು. ಇದರಿಂದಾಗಿ ಕೋಪಗೊಂಡ ಶಾಸಕರು, ಚಂದ್ರು ಮೇಲೆ ಹಲ್ಲೆ ಮಾಡಿದ್ದರು. ಸ್ಥಳದಲ್ಲಿದ್ದ ಕೆಲವರು ಹಲ್ಲೆಯ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಈ ಸಂಬಂಧ ಶಾಸಕ ಮಧುಸ್ವಾಮಿ ವಿರುದ್ಧ ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಮಾಧುಸ್ವಾಮಿ ಗಂಭೀರ ಆರೋಪ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಕುಮಾರಸ್ವಾಮಿ ಮನೆಯಿಂದ ಹೊರಹಾಕಿದ್ದರು. ಬೆಂಗಳೂರಿನ ವಿದ್ಯಾರ್ಥಿ ಭವನದ ಬಳಿ ಪ್ರಚಾರ ಮಾಡುತ್ತಿದ್ದಾಗ ಕಲ್ಲಿನಿಂದ ಹೊಡೆಸಿದ್ದರು ಎಂದು ಮಾಧುಸ್ವಾಮಿ ಆರೋಪಿಸಿದ್ದಾರೆ.
ವಿಡಿಯೋದಲ್ಲೇನಿದೆ?
ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ ಕುಮಾರಸ್ವಾಮಿ ಕಲ್ಲಿನಲ್ಲಿ ಹೊಡೆಸಿದ್ದರು. ನಾನು ಎದೆಕೊಟ್ಟೆ. ತಬ್ಬಿಕೊಂಡು ದೇವೇಗೌಡರು ಅತ್ತಿದ್ದರು. ನನ್ನ ಮಕ್ಕಳಾದ್ರೂ ಬಂದು ಕಲ್ಲೇಟು ತಿನ್ನುತ್ತಿರಲಿಲ್ಲ. ನೀನು ತಿಂದೆ ಅಂದಿದ್ದರು. ದೇವೇಗೌಡರನ್ನು ಒದ್ದು ಆಚೆಗೆ ಹಾಕಿದ್ದರು. ಉಗ್ರಪ್ಪ, ದೇವೇಗೌಡರ ಬೆನ್ನುಜ್ಜುತ್ತಿದ್ದರು. ಕುಮಾರಸ್ವಾಮಿಯವರು ದೇವೇಗೌಡರನ್ನು ಮನೆಯಿಂದ ಹೊರಗೆ ಅಟ್ಟಿದ್ದರು ಎಂದು ಶಾಸಕರು ವಿಡಿಯೋದಲ್ಲಿ ಹೇಳಿದ್ದಾರೆ.
ಬೆಂಗಳೂರಿನ ಕುಮಾರಪಾರ್ಕಿನ ಸಣ್ಣ ಕ್ವಾಟರ್ಸ್ ನಲ್ಲಿ ವಾಸ ಮಾಡುತ್ತಿದ್ದರು. ದೇವೇಗೌಡರನ್ನು ಮನೆಯಲ್ಲಿ ಇಟ್ಟುಕೊಂಡಿರಲಿಲ್ಲ. ಈಗ ಬರಲಿ ಕುಮಾರಸ್ವಾಮಿ ನನ್ನ ಬಳಿ ಯಾಕಪ್ಪ ಅವತ್ತು ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಎಂದು ಕೇಳ್ತೀನಿ. ಟಿಫನ್ ಕ್ಯಾರಿಯರ್ ನಲ್ಲಿ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದವರು ನಾವೇ ಹೊರತು ಅವರ ಮಕ್ಕಳಲ್ಲ. ಬೆನ್ನು ತಿಕ್ಕಿದ್ದ ಉಗ್ರಪ್ಪ, ಮಾನಸಪುತ್ರ ಬಿ.ಎಲ್ ಶಂಕರ್ ಯಾಕೆ ಆಚೆ ಹೋದರು. ವೈ.ಕೆ ರಾಮಯ್ಯ ಯಾಕೆ ಕಾಂಗ್ರೆಸ್‍ಗೆ ಹೋದರು ಎಂದು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಪ್ರಶ್ನಿಸಿ ಟಾಂಗ್ ನೀಡಿದ್ದಾರೆ.
ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ ಮಾಧುಸ್ವಾಮಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು: ಇಂದು ಸದನದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎನ್ನಲಾದ ಆಡಿಯೋ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನ ಬಾಡಿಗೆ ಮನೆಯಲ್ಲಿದ್ದೇನೆ. ಅಷ್ಟು ದೊಡ್ಡ ಪ್ರಮಾಣದ ಹಣವನ್ನು ನಾನು ಎಲ್ಲಿ ಇಟ್ಟುಕೊಳ್ಳಲಿ ಎಂದು ಹೇಳುತ್ತಾ ಭಾವುಕರಾಗಿ ಕಣ್ಣೀರಿಟ್ಟರು.
ಸ್ಪೀಕರ್ ಮಾತಿನ ಮಧ್ಯೆ ಪ್ರವೇಶಿಸಿದ ಸಚಿವ ಕೃಷ್ಣೆಬೈರೇಗೌಡರು, ವಿಪಕ್ಷ ನಾಯಕರ ಮೇಲೆ ಆರೋಪ ಮಾಡಿದರು. ಈ ವೇಳೆ ಬಿಜೆಪಿ ಶಾಸಕ ಮಾಧುಸ್ವಾಮಿ, ಆಪರೇಷನ್ ಕಮಲ ಸದನದ ಒಳಗಡೆ ನಡೆದಿಲ್ಲ. ಹೀಗಾಗಿ ಆ ವಿಚಾರವನ್ನು ಇಲ್ಲಿ ಮಾತನಾಡೋದು ಸರಿಯಲ್ಲ ಎಂದು ಆಗ್ರಹಿಸಿದರು.
ಹೊರಗಡೆ ಮಾತನಾಡೋದನ್ನು ನೀವು ಇಷ್ಟು ಸೀರಿಯಸ್ ಆಗಿ ತೆಗೆದುಕೊಂಡು ಭಾವುಕರಾಗುವುದು ಬೇಡ. ಸದನದಲ್ಲಿ ಈ ರೀತಿಯಾಗಿ ನಡೆದಿದ್ದರೆ ಮೊದಲೇ ನಾವು ವಿರೋಧ ಮಾಡುತ್ತಿದ್ದೆವು. ಆ ವಿಚಾರ ಸದನದ ಹೊರಗಡೆ ನಡೆದಿದೆ. ನೀವು ಈ ರೀತಿ ಭಾವುಕರಾಗಿ ಮಾತನಾಡಿದ್ರೆ ನಾವು ಏನು ಮಾಡೋದು. ಮುಂದೆ ನೀವು ಏನು ಹೇಳಬಹುದು ಎಂಬ ಭಯ ಶುರುವಾಗಿದ್ದರಿಂದ ನಾನು ಮಾತನಾಡುತ್ತಿದ್ದೇನೆ ಎಂದರು.
ಕೃಷ್ಣಬೈರೇಗೌಡರು ಈ ರೀತಿ ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ. ಎಲ್ಲಿ ನಡೆದಿದೆ, ಯಾರು ಮಾತನಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಎಲ್ಲೋ ನಡೆದ ವಿಚಾರವನ್ನು ಇಷ್ಟೊಂದು ತೀಕ್ಷ್ಣವಾಗಿ ಮಾತಾಡೋದು ತಪ್ಪಾಗುತ್ತದೆ. ರಮೇಶ್ ಕುಮಾರ್ ಅವರ ಬಗ್ಗೆ ಯಾರು ಏನು ಮಾತನಾಡ್ತಾರೆ ಎಂಬ ಆಡಿಯೋಗಳು ನಮ್ಮ ಬಳಿ ಇವೆ. ನೀವು ಅವಕಾಶ ನೀಡಿದ್ರೆ, ಸದನದಲ್ಲಿ ಹಾಜರು ಮಾಡುತ್ತೇನೆ. ಈ ಆಡಿಯೋಗೆ ಸಂಬಂಧಿಸಿದಂತೆ ತನಿಖೆ ನಡೆಸಬಹುದು. ಒಂದು ವೇಳೆ ನಮ್ಮಿಂದ ತಪ್ಪಾಗಿದ್ರೆ, ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಸದನದಲ್ಲಿ ಮಾತನಾಡಿದ್ರೆ ಹಕ್ಕುಚ್ಯುತಿ ಮಾಡಬಹುದು ಎಂದು ಕೃಷ್ಣೇಬೈರೇಗೌಡರಿಗೆ ತಿರುಗೇಟು ನೀಡಿದರು.