Tag: Madhur Temple

  • ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

    ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

    ಮಂಗಳೂರು/ಕಾಸರಗೋಡು: ನಳಿನ್ ಕುಮಾರ್ ಕಟೀಲ್‌ಗೆ (Nalin Kumar Kateel) ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಮಧೂರು ದೇವಸ್ಥಾನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಪ್ರಾರ್ಥಿಸಿದ್ದಾರೆ.

    ಕೇರಳ (Kerala) ರಾಜ್ಯದ ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ (Madhur Temple) ಬ್ರಹ್ಮಕಲಶೋತ್ಸವದ ಹಿನ್ನೆಲೆ ಡಿಕೆ ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಡಿಕೆ ಶಿವಕುಮಾರ್ ಒಂದೇ ವೇದಿಕೆಯಲ್ಲಿ ಜೊತೆಯಾಗಿದ್ದರು. ಈ ವೇಳೆ ನಳಿನ್ ಕುಮಾರ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಮೈಸೂರು| ಗನ್‌ ಹಿಡಿದು ವೀಡಿಯೋ ಹಂಚಿಕೊಂಡ ಯುವಕ – ಸರ್ಕಾರಿ ವಾಹನದಲ್ಲಿ ಕುಳಿತು ಪೋಸ್‌

    ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಕೆಶಿ, ನನ್ನ ಮಿತ್ರ, ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಅವರು ಮಾಜಿ ಅಂದುಕೊಳ್ಳೋದು ಬೇಡ, ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಹೀರೋ ಝೀರೋ ಆಗುತ್ತಾನೆ, ಝೀರೋ ಹೀರೋ ಆಗುತ್ತಾನೆ. ನಾನು ಮತ್ತು ನೀವು ಒಂದೇ ವೇದಿಕೆಯಲ್ಲಿ ದೇವರನ್ನ ಪ್ರಾರ್ಥನೆ ಮಾಡಿದ್ದೇವೆ. ಭಗವಂತ ನಿಮ್ಮ ಎಲ್ಲಾ ವಿಘ್ನ ನಿವಾರಣೆ ಮಾಡಿ ಮತ್ತೆ ಈ ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ ಕೊಡಲಿ. ಮತ್ತೆ ನಿಮಗೆ ಅವಕಾಶ ಸಿಗಲಿ ಅಂತ ನಾನೂ ಕೂಡ ಪ್ರಾರ್ಥನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ

  • ಮಧೂರು ಮಹಾಗಣಪತಿಗೆ 33 ವರ್ಷಗಳ ಬಳಿಕ ಇಂದು ಮೂಡಪ್ಪ ಸೇವೆ

    ಮಧೂರು ಮಹಾಗಣಪತಿಗೆ 33 ವರ್ಷಗಳ ಬಳಿಕ ಇಂದು ಮೂಡಪ್ಪ ಸೇವೆ

    ಮಧೂರು (ಕಾಸರಗೋಡು): ಭಕ್ತರೆಲ್ಲರ ನಿರೀಕ್ಷೆಯ ಆ ಕ್ಷಣ ಬಂದೇ ಬಿಟ್ಟಿದೆ. ಕಾಸರಗೋಡು (Kasaragod) ಜಿಲ್ಲೆಯ ಪ್ರಸಿದ್ಧ ದೇವಾಲಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ (Madanantheshwara-Siddhivinayaka Temple) ಶತಮಾನದ ಮೊದಲ ಮೂಡಪ್ಪಸೇವೆ 33 ವರ್ಷಗಳ ಬಳಿಕ ಇಂದು ಜರಗಲಿದೆ.

    ಕಳೆದ 14 ವರ್ಷಗಳಿಂದ ನವೀಕರಣ ಜೀರ್ಣೋದ್ಧಾರ ಪ್ರಕ್ರಿಯೆ ಪೂರ್ತಿಗೊಂಡಿದ್ದು, ಪುನಃ ಪ್ರತಿಷ್ಟಾ ಬ್ರಹ್ಮಕಲಶ ಸಮಾಪ್ತಿಯಾಗಿದೆ. ಕುಂಬಳೆ ಸೀಮೆಯ ಅತೀ ದೊಡ್ಡ ಸಂಭ್ರಮವಾಗಿ ಮೂಡಪ್ಪ ಸೇವೆಗೆ ಮಧೂರು ದೇವಸ್ಥಾನ ಅಣಿಯಾಗಿದ್ದು, ಮಹಾ ಉತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾದಿಗಳು ಮಧೂರಿಗೆ ಬರುತ್ತಿದ್ದಾರೆ. ಇದನ್ನೂ ಓದಿ: ಕೊಲ್ಲೂರಲ್ಲಿ ಚಂಡಿಕಾ ಹೋಮದಿಂದ ಸಂಗ್ರಹವಾಯ್ತು 1.77 ಕೋಟಿ ರೂ

    ಮೂಡಪ್ಪ ಸೇವೆಗೆ ಮಧೂರು (Madhur) ಕ್ಷೇತ್ರ ಸಜ್ಜುಗೊಂಡಿದ್ದು, ಅಕ್ಕಿ ಮುಹೂರ್ತ ನಿನ್ನೆ ನೆರವೇರಿತು. ಬೆಳಿಗ್ಗೆ ದೀಪದ ಬಲಿ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ನೆರವೇರಿತು. ಪಾರಂಪರಿಕ ಒನಕೆ ಹಾಗೂ ಬೀಸುವ ಕಲ್ಲಿನ ಮೂಲಕ ಅಕ್ಕಿ ಹುಡಿಮಾಡುವ ಪ್ರಕ್ರಿಯೆ ನಡೆಯಿತು. ಗಣೇಶ ದೇವರ ನಡೆಯಲ್ಲಿ ಅರೆಯುವ ಕಲ್ಲು, ಒನಕೆ ಹಾಗೂ ಬೀಸುವ ಕಲ್ಲಿಗೆ ಪೂಜೆ ನಡೆಸಲಾಯಿತು.

    ಏನಿದು ಮೂಡಪ್ಪ ಸೇವೆ?: ಇಂದು ಬೆಳಗ್ಗೆ ಪೂಜೆ ನೆರವೇರಿಸಿ ಅಪ್ಪ ತಯಾರಿಯೂ ಆರಂಭವಾಗಿದೆ. ಮಹಾಗಣಪತಿಯನ್ನು ಅಪ್ಪದಿಂದ ಮುಚ್ಚುವ ಅತೀ ವಿಶಿಷ್ಟ, ಪ್ರಧಾನ ಸೇವೆಯನ್ನು ಮೂಡಪ್ಪ ಸೇವೆ ಎಂದು ಕರೆಯುತ್ತಾರೆ. ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಮಾಡಿಯೇ ಮಾಡ್ತೀವಿ, ಯಾರಿಗೂ ಅನ್ಯಾಯ ಮಾಡಲ್ಲ: ಸಿದ್ದರಾಮಯ್ಯ

    ದೇಗುಲದಲ್ಲಿರುವ ಗಣಪತಿ ವಿಗ್ರಹದ ಸುತ್ತ ಸುಮಾರು ಆರೂವರೆ ಅಡಿ ಎತ್ತರದಲ್ಲಿ ಕಬ್ಬಿನಿಂದ ಬೇಲಿ ತಯಾರಿಸಿ ಅದರೊಳಗೆ ಅಷ್ಟದ್ರವ್ಯಗಳ ಸಹಿತ 144 ಸೇರು ಅಕ್ಕಿಯಿಂದ ಅಪ್ಪ ಹಾಗೂ 11 ಸೇರು ಅಕ್ಕಿಯಿಂದ ತಯಾರಿಸಿದ ಪಚ್ಚಪ್ಪ ತಯಾರಿಸಿ ಶ್ರೀ ಮಹಾಗಣಪತಿಯ ಕತ್ತಿನ ಭಾಗದವರೆಗೆ ತುಂಬುತ್ತಾರೆ. ಇದೇ ಸಂದರ್ಭ ಶ್ರೀ ಮದನಂತೇಶ್ವರ ದೇವರಿಗೆ ಮೂರು ಮುಡಿ ಅಕ್ಕಿಯಿಂದ ತಯಾರಿಸಿದ ಅಪ್ಪ ಹಾಗೂ ಒಂದು ಮುಡಿ ಅಕ್ಕಿಯ ನೈವೇದ್ಯ ಸಮರ್ಪಿಸಲಾಗುವುದು.

    ಇಂದು ಬೆಳಿಗ್ಗೆ ಶ್ರೀ ದೇವರ ದೀಪದ ಬಲಿ, ದರ್ಶನಬಲಿ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ ನಡೆಯಿತು. ಇದನ್ನೂ ಓದಿ: ಹಸುವಿಗೆ ಲಕ್ಷಾಂತರ ರೂ. ಖರ್ಚು ಮಾಡಿ ಸೀಮಂತ – ಹಳ್ಳಿಕಾರ್‌ ತಳಿ ಉಳಿಸಲು ಉದ್ಯಮಿಯಿಂದ ವಿಶೇಷ ಜಾಗೃತಿ!

    ನಂತರ ಮೂಡಪ್ಪ ತಯಾರಿಯ ಅರಿಕೊಟ್ಟಿಗೆಯ ಮುಹೂರ್ತ ನಡೆಯಿತು. ಉಳಿಯತ್ತಾಯ ವಿಷ್ಣು ಆಸ್ರ ಬೆಳಗ್ಗಿನ ಜಾವ ಗಣಪತಿ ದೇವರಿಗೆ ಕಲಶಾಭಿಷೇಕ ನಡೆಸಿ, ಅರಿಕೊಟ್ಟಿಗೆ ಪ್ರವೇಶಿಸಿ ದ್ವಿಜರಿಗೆ ಮುಹೂರ್ತ ದಾನ ದಕ್ಷಿಣೆ ಕೊಟ್ಟು, ಸರ್ವಾಪ್ಪಣೆ ಪಡೆದು ಅಪ್ಪ ತಯಾರಿಗೆ ನಾಂದಿ ಹಾಡಿದರು.

    ಸಂಜೆ 5ಕ್ಕೆ ಮಧೂರಿನಲ್ಲಿ ಉತ್ಸವ ಬಲಿ ನಡೆದು ಬಳಿಕ ದೇವರ ಮೂಲಸ್ಥಾನಕ್ಕೆ ಸವಾರಿ ಹೊರಡಲಿದೆ. ರಾತ್ರಿ ಮೂಲಸ್ಥಾನದ ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯಲಿದೆ. ಬಳಿಕ ದೇವರು ಕ್ಷೇತ್ರಕ್ಕೆ ನಿರ್ಗಮಿಸುವ ಯಾತ್ರೆ, ನಂತರ ದೇವಳದಲ್ಲಿ ಶ್ರೀ ಭೂತಬಲಿ ನಡೆದು ಮಹಾ ಮೂಡಪ್ಪಾಧಿವಾಸ ಹೋಮ ಜರಗಲಿದೆ. ಇದನ್ನೂ ಓದಿ: ಕಾಪು ಮಾರಿಗುಡಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ

    ನಾಳೆ ಏನೇನು ನಡೆಯಲಿದೆ?: ಏಪ್ರಿಲ್‌ 6ರಂದು ನಾಳೆ ಬೆಳಿಗ್ಗೆ 6.20ಕ್ಕೆ ಕವಾಟೋದ್ಘಾಟನೆ, ಅಪೂಪ ಪರ್ವತದ ಮಧ್ಯದಿಂದ ಮೂಡಿ ಬರುವ ಬೊಡ್ಡಜ್ಜ ಶ್ರೀ ಮಧೂರು ಸಿದ್ಧಿವಿನಾಯಕ ದೇವರ ದಿವ್ಯದರ್ಶನ, ವಿಶೇಷಾಭಿಷೇಕ, ಪ್ರಸನ್ನಪೂಜೆ, ಅಪೂಪಪ್ರಸಾದ ವಿತರಣೆ ಬಳಿಕ 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ, ಮಹಾಪೂಜೆ, ಸಂಜೆ 6ಕ್ಕೆ ಜಳಕದ ಬಲಿ, ಕಟ್ಟೆಪೂಜೆ, ಶ್ರೀ ದೇವರ ಕೆರೆಯಲ್ಲಿ ಅವಭೃತ ಸ್ನಾನ, ದರ್ಶನ ಬಲಿ, ರಾಜಾಂಗಣ ಪ್ರಸಾದ ಬಳಿಕ ಧ್ವಜಾವರೋಹಣ ನಡೆಯಲಿರುವುದು.

    ಅಪ್ಪ ತಯಾರಿ ಜವಾಬ್ದಾರಿ: ಈ ಬಾರಿ ಮಧೂರಿನ ದೇವನರ್ತಕ ಧನಂಜಯರಿಗೆ ಮೂಡಪ್ಪ ಅಪ್ಪ ಸೇವಾ ನಿರ್ಮಾಣ ಜವಾಬ್ದಾರಿ ವಹಿಸಲಾಗಿದೆ. ಇವರು ಮಧೂರಿನ ಪಡು ಕಕ್ಕೆಪ್ಪಾಡಿ ಮನೆಯವರು. ಈ ಹಿಂದೆ 1962ರಲ್ಲಿ ಮಧೂರಿನಲ್ಲಿ ನಡೆದ ಮೂಡಪ್ಪ ಸೇವೆ ಮತ್ತು 1992ರ ಮೂಡಪ್ಪ ಸೇವೆಯಲ್ಲಿ ಆ ಕಾಲದಲ್ಲಿ ಪ್ರಸಿದ್ಧ ದೇವನರ್ತಕರಾಗಿದ್ದ ಪಡುಕಕ್ಕೆಪ್ಪಾಡಿ ರಾಮಕೃಷ್ಣ ಭಟ್ರ ಪುತ್ರ.

    ಏಪ್ರಿಲ್‌ 6 ಭಾನುವಾರವಾಗಿರುವ ಹಿನ್ನೆಲೆಯಲ್ಲಿ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆಯಿದೆ. ಇಂದು ಕೂಡಾ ದೇವಳದಲ್ಲಿ ಭಾರೀ ಜನಸಂದಣಿಯಿದ್ದು, ಉಳಿಯತ್ತಡ್ಕದಲ್ಲೇ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಏರಿಕೆಯಾಗುತ್ತಿದ್ದ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ