Tag: madhukar shetty

  • ಕರುನಾಡ ಸಿಂಗಂ ಸಾವಿನ ಬಗ್ಗೆ ಸಚಿವ ಡಿಕೆಶಿಗೆ ಸಂಶಯ..!

    ಕರುನಾಡ ಸಿಂಗಂ ಸಾವಿನ ಬಗ್ಗೆ ಸಚಿವ ಡಿಕೆಶಿಗೆ ಸಂಶಯ..!

    ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದು, ಇದೀಗ ಇವರ ಅಕಾಲಿಕ ಮರಣಕ್ಕೆ ಸಚಿವ ಡಿಕೆ ಶಿವಕುಮಾರ್ ಸಂಶಯ ವ್ಯಕ್ತಪಡಿಸಿದ್ದಾರೆ.

    ಮಧುಕರ್ ಶೆಟ್ಟಿ ನನಗೆ ಹತ್ತಿರದಿಂದ ಪರಿಚಯ. ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಅವರ ನಿಧನ ಸುದ್ದಿ ಕೇಳಿ ಆಶ್ಚರ್ಯವಾಯ್ತು. ಅವರ ನಿಧನ ಸ್ವಾಭಾವಿಕವಾನಾ ಅಂತ ತನಿಖೆ ಮಾಡಬೇಕಾಗಿದೆ. ಅವರೊಬ್ಬ ಗೌರವಾನ್ವಿತ ಅಧಿಕಾರಿಯಾಗಿದ್ರು. ಅವರ ತಂದೆಯೂ ನನಗೆ ಪರಿಚಯವಿದ್ದರು. ಪೊಲೀಸ್ ಇಲಾಖೆಗೆ ಅವರೊಂದು ದೊಡ್ಡ ಆಸ್ತಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬಕ್ಕೆ ಧೈರ್ಯ ಕೊಡಲಿ ಅಂತ ಡಿಕೆಶಿ ಸಂತಾಪ ಸೂಚಿಸಿದ್ದಾರೆ.

    ರಾಜ್ಯದ ಒಬ್ಬ ಅಧಿಕಾರಿ ಹೊರ ರಾಜ್ಯದಲ್ಲಿ ನಿಧನ ಹೊಂದಿದ್ರೆ ಆ ಬಗ್ಗೆ ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಡಿಕಶಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ

    ಸಕಲ ಸರ್ಕಾರಿ ಗೌರವಗಳೊಂದಿಗೆ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ ನಡೆಸಬೇಕು ಅಂತ ಡಿಜಿ ನೀಲಮಣಿ ರಾಜು ಅವರಿಗೆ ಗೃಹ ಸಚಿವ ಎಂಬಿ ಪಾಟೀಲ್ ಅವರು ದೂರವಾಣಿ ಕರೆ ಮಾಡಿ ಸೂಚನೆ ಕೊಟ್ಟಿದ್ದಾರೆ. ಬಳಿಕ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಧುಕರ್ ಶೆಟ್ಟಿಯವರು ಈ ರಾಜ್ಯದ ಒಬ್ಬ ನಿಷ್ಠಾವಂತ, ಪ್ರಾಣಿಕ ಹಾಗೂ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದರು. ಅವರ ನಿಧನ ದುಃಖ ತಂದಿದೆ. ಪೊಲೀಸ್ ಇಲಾಖೆಗೆ ದೊಡ್ಡ ನಷ್ಟವಾಗಿದೆ ಅಂದ್ರು.

    ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಧುಕರ್ ಶೆಟ್ಟಿ ಪಾರ್ಥಿವ ಶರೀರವನ್ನು ಪೊಲೀಸ್ ಇಲಾಖೆ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ತರಲಿದೆ. ಬಳಿಕ ಯಲಹಂಕದ ಪೊಲೀಸ್ ತರಬೇತಿ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ರಾತ್ರಿ 8.30 ರ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆನಂತರ ವಿಮಾನದ ಮೂಲಕ ಮಧುಕರ್ ಶೆಟ್ಟಿ ಅವರ ಹುಟ್ಟೂರಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ ಎಂದು ತಿಳಿಸಿದ್ರು.

    ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ 8.15ಕ್ಕೆ ಹೈದ್ರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಾಯುಕ್ತ ಚರಿತ್ರೆಯಲ್ಲಿ ಒಬ್ಬ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ: ಸಂತೋಷ್ ಹೆಗ್ಡೆ

    ಲೋಕಾಯುಕ್ತ ಚರಿತ್ರೆಯಲ್ಲಿ ಒಬ್ಬ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ: ಸಂತೋಷ್ ಹೆಗ್ಡೆ

    ಬೆಂಗಳೂರು: ರಿಯಲ್ ಸಿಂಗಂ ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಅವರು ಶುಕ್ರವಾರ ನಿಧನರಾಗಿದ್ದು, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಧುಕರ್ ಶೆಟ್ಟಿ ಅವರು ನಮ್ಮನ್ನೆಲ್ಲ ಅಗಲಿರೋದು ತುಂಬಾ ಬೇಸರವಾಗುತ್ತಿದೆ. ಲೋಕಾಯುಕ್ತ ಚರಿತ್ರೆಯಲ್ಲೇ ಮಧುಕರ್ ಅವರು ಒಬ್ಬ ಉತ್ತಮ ಪೊಲೀಸ್ ಅಧಿಕಾರಿ. ಲೋಕಾಯುಕ್ತದಲ್ಲಿ ಇರುವಾಗ ನಮ್ಮೊಂದಿಗೆ ಇದ್ದು ಸಹಕರಿಸಿದ್ದರು. ಅವರೊಬ್ಬರು ನಿಷ್ಠಾವಂತ, ದಕ್ಷ ಅಧಿಕಾರಿ. ಯಾವ ರಾಜಕಾರಣಿಗೂ ಅಥವಾ ಯಾವುದೇ ವ್ಯಕ್ತಿಗಳಿಗೂ ಅವರು ಹೆದರದೇ ಕೆಲಸ ಮಾಡ್ತಾ ಇದ್ರು. ದೇವರು ಅವರ ಕುಟುಂಬಕ್ಕೆ ಅವರ ಸಾವನ್ನ ಸಹಿಸಿಕೊಳ್ಳುವ ಶಕ್ತಿ ಕೊಡಲಿ. ಮಧುಕರ್ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.

    ನಾನು ಲೋಕಾಯುಕ್ತಕ್ಕೆ ಬಂದ ನಂತರ ಮಧುಕರ್ ಶೆಟ್ಟಿ ಅವರು ರಾಜ್ಯಪಾಲರಿಗೆ ಡಿಸಿ ಆಗಿದ್ದರು. ಆಗ ನಾನು ಅವರನ್ನು ನೀವು ಲೋಕಾಯುಕ್ತಕ್ಕೆ ಬತ್ರ್ತಿರಾ ಅಂತ ಕೇಳಿದ್ದೆ. ನಂತರ ಅವರು ಲೋಕಾಯುಕ್ತಕ್ಕೆ ಎಸ್‍ಪಿ ಆಗಿ ಬಂದರು. ಬಹಳ ಉತ್ತಮವಾಗಿ ಕೆಲಸ ಮಾಡಿದ ದಕ್ಷ ಅಧಿಕಾರಿ. ಗಣಿ ವಿಚಾರದಲ್ಲಿ ಮಾತ್ರ ಅಲ್ಲ ಬೆಂಗಳೂರು ಏರ್ ಪೋರ್ಟ್ ಬಳಿಯ ಜಮೀನು ಕಬಳಿಕೆ ಮಾಡಿಕೊಂಡ ಹಿರಿಯಾ ರಾಜಕಾರಣಿಯನ್ನು ವಿಚಾರಣೆ ಮಾಡಿ ಅವರನ್ನು ಹಾಗೂ ಅವರ ಪುತ್ರಿಯನ್ನು ಜೈಲಿಗೆ ಕಳುಹಿಸಿದ್ದರು. ಯಾರಿಗೂ ಹೆದರುವ ವ್ಯಕ್ತಿಯಲ್ಲ, ರಾತ್ರಿ ಹಗಲು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಮಧುಕರ್ ಅವರನ್ನು ನೆನೆದರು.

    ಸುಮಾರು 750 ಕ್ಕೂ ಹೆಚ್ಚು ಭ್ರಷ್ಟರನ್ನು ವಿಚಾರಣೆ ಮಾಡಿ ಕೋರ್ಟ್ ಮೆಟ್ಟಿಲು ಏರಿಸಿದ ಅಧಿಕಾರಿಗಳಲ್ಲಿ ಮಧುಕರ್ ಅವರು ಒಬ್ಬರು. ಆಡಳಿತದಲ್ಲಿ ಇರುವ ನಾಯಕರು ತಮಗೆ ಬೇಕಾದ ಅಧಿಕಾರಿಗಳನ್ನು ಮಾತ್ರ ವಿಚಾರಣೆ ಹಾಗೂ ಇತರೇ ಹುದ್ದೆಯಲ್ಲಿ ಇಡುತ್ತಿದ್ದರು. ಮಧುಕರ್ ಅವರನ್ನು ಹಲವಾರು ಬಾರಿ ವರ್ಗಾವಣೆ ಮಾಡಿ ಅವರನ್ನು ವಿಚಾರಣೆ ವಿಭಾಗದಿಂದ ದೂರವಿಟ್ಟಿದ್ದರು. ಆದ್ರೆ ಇದ್ಯಾವುದಕ್ಕೂ ಮಧುಕರ್ ಅಂಜದೆ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಒಬ್ಬ ವ್ಯಕ್ತಿಯಿಂದ ಭ್ರಷ್ಟರ ವಿರುದ್ಧ ಹೋರಾಡಲು ಆಗೋಲ್ಲ. ನಮ್ಮ ಜೊತೆ ಸರ್ಕಾರಿ ಅಧಿಕಾರಿಗಳು ಇರುತ್ತಾರೆ. ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಸಿಗುವಂತೆ ಮಾಡಿರುವ ಉತ್ತಮ ಅಧಿಕಾರಿ ಮುಧುಕರ್ ಅವರು ಅಂತ ನಾನು ತಿಳಿದಿದ್ದೇನೆ ಅಂದ್ರು.

    ಮಧುಕರ್ ಶೆಟ್ಟಿ ಅವರಂತಹ ದಕ್ಷ ಅಧಿಕಾರಿಗಳು ನನ್ನ ಅವಧಿಯಲ್ಲಿ ಸಿಕ್ಕಿದ್ದು ನನ್ನ ಭಾಗ್ಯ. ಅವರು ಲೋಕಾಯುಕ್ತದಲ್ಲಿ ಇದ್ದಿದ್ದು ಕೇವಲ 2 ವರ್ಷ ಮಾತ್ರ. ಆದ್ರೆ ಈ ಇಲಾಖೆಯಲ್ಲಿ ಅವರ ಕೊಡುಗೆ ಅಪಾರ ಎಂದು ಮಧುಕರ್ ಅವರ ಸಾಧನೆಯನ್ನು ನೆನೆದುಕೊಂಡು ಅವರ ಅಗಲಿಕೆಗೆ ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ

    ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ

    ಬೆಂಗಳೂರು: ಕರ್ನಾಟಕದ ರಿಯಲ್ ಸಿಂಗಂ, ಭ್ರಷ್ಟ ರಾಜಕಾರಣಿಗಳನ್ನೇ ಜೈಲಿಗಟ್ಟಿ ಅಬ್ಬರಿಸಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದು ಕೊಟ್ಟಿದ್ದ ಯುವ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ.

    ಮಧುಕರ್ ಶೆಟ್ಟಿಯವರನ್ನು ನೋಡದವರು ಕೂಡ ಅವರು ಮಾಡಿದ ಕೆಲಸಗಳನ್ನು ಕೇಳಿ ಗೌರವ ನೀಡುತ್ತಾ ಇದ್ದರು. ಅವರ ಹೆಸರಿನ ಮಹತ್ವವೇ ಹಾಗಿತ್ತು. ಆದ್ರೆ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ 8.15ಕ್ಕೆ ಹೈದ್ರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಮಧುಕರ್ `ದಕ್ಷತೆ’ಯ ಹಾದಿ:
    1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಇವರು 2003 ರಿಂದ 2004ರವರೆಗೆ ಚಾಮರಾಜನಗರ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. 2011ರಲ್ಲಿ ವಿದ್ಯಾಭ್ಯಾಸದ ರಜೆ ತೆಗೆದುಕೊಂಡ ಬಳಿಕ ತರಬೇತಿ ಮತ್ತು ನೇಮಕಾತಿ ವಿಭಾಗದ ಡಿಐಜಿ ಆಗಿ ಬಡ್ತಿ ಪಡೆದ್ರು. ಹೈದರಾಬಾದ್‍ನ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು ದೆಹಲಿಯ ಜೆಎನ್‍ಯುನಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಹಾಗೂ ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.

    ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದಾಗ ಮನೆ ಮಾತಾಗಿದ್ದರು. ಲೋಕಾಯುಕ್ತ ಎಸ್ಪಿಯಾಗಿ ನಿಯೋಜನೆಗೊಂಡ ಎರಡೇ ತಿಂಗಳಿಗೆ ಎರಡು ಜಿಲ್ಲೆಯ ಎಸ್ಪಿಗಳನ್ನು ಟ್ರಾಪ್ ಮಾಡಿ ಲಂಚ ಪಡೆಯುವಾಗ ಜೈಲಿಗೆ ಅಟ್ಟಿದ್ರು. ಆದ್ರೆ ಲೋಕಾಯುಕ್ತದಲ್ಲಿ ಆದ ಕೆಲವು ಬೆಳವಣಿಗೆಗಳಿಂದ ಬೇಸತ್ತ ಮಧುಕರ್ ಶೆಟ್ಟಿ, ಅಮೆರಿಕಕ್ಕೆ ತೆರಳಿ ನಾಲ್ಕು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಕರ್ನಾಟಕಕ್ಕೆ ವಾಪಸ್ಸು ಬಂದಿದ್ದರು.

    ಡಿಐಜಿಯಾದ ಮಧುಕರ್ ಶೆಟ್ಟಿಗೆ ಸರ್ಕಾರ ಸರಿಯಾದ ಸ್ಥಾನ ಮಾನ ನೀಡಿರಲಿಲ್ಲ. ಇದರಿಂದ ಬೇಸತ್ತು ಮತ್ತೆ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸಕ್ಕೆ ತೆರಳಿದ್ದರು. ಕರ್ನಾಟಕದಿಂದ ಕೇಂದ್ರ ಸೇವೆಗೆ ಮರಳಿದ್ದ ಅವರನ್ನ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು.

    ಚಾಮರಾಜನಗರ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದಾಗ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಬಿಸಿ ಮುಟ್ಟಿಸುತ್ತಿದ್ದರು.  ಒಟ್ಟಿನಲ್ಲಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದುಕೊಟ್ಟ ನೇರ ನಡೆ ನುಡಿಯ ನಿಷ್ಠುರ ಅಧಿಕಾರಿಯಾಗಿದ್ದ ಮಧುಕರ್, ಲೋಕಾಯುಕ್ತದಲ್ಲೂ ಭ್ರಷ್ಟಾಚಾರ ಇದೆ ಎಂದು ಹೇಳಿ ಬಿರುಗಾಳಿ ಎಬ್ಬಿಸಿದ್ದ ಸಿಂಗಂ ಆಗಿದ್ದರು. ಇಷ್ಟು ಮಾತ್ರವಲ್ಲದೇ ವೀರಪ್ಪನ್ ಸೆರೆಗಾಗಿ ರಚನೆಗೊಂಡಿದ್ದ ವಿಶೇಷ ಕಾರ್ಯಪಡೆಯಲ್ಲಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರದ್ದಾಗಿದೆ.

    ಹಳ್ಳಿಗೆ ಹೆಸರು:
    ಉಡುಪಿ ಜಿಲ್ಲೆ ಮೂಲದವರಾದ ಮಧುಕರ್ ಶೆಟ್ಟಿ ಚಿಕ್ಕಮಗಳೂರಿನಿಂದ ವೃತ್ತಿ ಪ್ರಾರಂಭಿಸಿದ್ರು. ಇವರ ಕಾರ್ಯಕ್ಕೆ ಮೂಡಿಗೆರೆಯ ಆಲ್ದೂರಿನ ಜನ ಆ ಊರಿಗೆ ಇಟ್ಟ ಹೆಸರು ಡಿಸಿ ಹಾಗೂ ಎಸ್ಪಿದು. 2006ರಲ್ಲಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರೊಡನೆ ಸೇರಿ ಒತ್ತುವರಿಯಾಗಿದ್ದ ಜಮೀನನ್ನು ಬಿಡಿಸಿ ದಲಿತರಿಗೆ ಕೊಟ್ಟಿದ್ದರು. ಹಾಗಾಗಿ ಜನ ಡಿಸಿ ಹರ್ಷ ಗುಪ್ತಾ, ಎಸ್ಪಿ ಮಧುಕರ್ ಶೆಟ್ಟಿ ಹೆಸರನ್ನ ಸೇರಿಸಿ ಆ ಹಳ್ಳಿಗೆ ಗುಪ್ತಶೆಟ್ಟಿ ಹಳ್ಳಿ ಅಂತಾ ಹೆಸರಿಟ್ಟುಕೊಂಡಿದ್ದಾರೆ.

    ಪತ್ರಕರ್ತರಾಗಿದ್ದ ಉಡುಪಿ ಜಿಲ್ಲೆಯ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ ಮಧುಕರ್‍ಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಇವರು 1998ರ ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿಯಾಗಿದ್ದರು. ಭಾರತೀಯ ಕಂದಾಯ ಸೇವೆ ಅಧಿಕಾರಿಯಾಗೋ ಅವಕಾಶ ಸಿಕ್ಕರೂ ತಾನು ಪೊಲೀಸ್ ಅಧಿಕಾರಿಯೇ ಆಗಬೇಕೆಂದು ಹಠ ಹಿಡಿದು ಖಾಕಿ ಧರಿಸಿ ಆ ಸೇವೆಗಾಗಿಯೇ ತಮ್ಮ ಜೀವನವನ್ನ ಮುಡಿಪಾಗಿಟ್ಟಿದ್ದರು. ಸದ್ಯ ಮಧುಕರ್ ಶೆಟ್ಟಿಗೆ ಒಬ್ಬಳು ಪುತ್ರಿ ಮತ್ತು ಪತ್ನಿಯನ್ನ ಅಗಲಿದ್ದಾರೆ. ಮಧುಕರ್ ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು, ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ ಸಂತಾಪ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ

    ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ

    ಹೈದರಾಬಾದ್: ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಶುಕ್ರವಾರ ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಹೆಚ್1ಎನ್1 ಸೋಂಕು ತಗುಲಿ, ಶ್ವಾಸಕೋಶ ಹಾಗೂ ಜೀರ್ಣಾಂಗ ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸಿದ್ದ ಮಧುಕರ್ ಶೆಟ್ಟಿ ಅವರು ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಉಡುಪಿ ಮೂಲದ ಮಧುಕರ್ ಶೆಟ್ಟಿ ಅವರು, ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ. 1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ, ಚಿಕ್ಕಮಗಳೂರಿನ ಎಸ್‍ಪಿಯಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್ ಅಧಿಕಾರಿ ಎನಿಸಿಕೊಂಡಿದ್ದ ಅವರು ಭ್ರಷ್ಟಾಚಾರವನ್ನು ಹಾಗೂ ಭ್ರಷ್ಟರನ್ನು ಬೇಟೆಯಾಡಿದ್ದರು. ಬಳಿಕ ಹೈದರಾಬಾದ್ ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿ ಉಪನಿರ್ದೇಶಕರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

    ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

    ಬೆಂಗಳೂರು: ರಾಜ್ಯ ಐಪಿಎಸ್ ಅಧಿಕಾರಿಗಳ ಗುಳೆ ಪರ್ವ ಆರಂಭವಾಗಿದೆ. ರಾಜ್ಯ ಸೇವೆಗೆ ಗುಡ್ ಬೈ ಹೇಳಿ ಕೇಂದ್ರ ಸೇವೆಗೆ ತೆರಳಲು ನಾಲ್ವರು ಐಪಿಎಸ್ ಅಧಿಕಾರಿಗಳು ತಯಾರಾಗಿದ್ದಾರೆ.

    ಈ ಲಿಸ್ಟ್ ನಲ್ಲಿ ಮೊದಲಿಗೆ ಇರೋರು ಮಧುಕರ್ ಶೆಟ್ಟಿ. ರಾಜ್ಯದಲ್ಲಿ ಒಳ್ಳೆಯ ಪೋಸ್ಟಿಂಗ್ ನೀಡದ ಹಿನ್ನೆಲೆಯಲ್ಲಿ ಕೇಂದ್ರದ ಕದ ತಟ್ಟಿದ್ದಾರೆ. ಇದೀಗ ನ್ಯಾಷನಲ್ ಪೊಲೀಸ್ ಅಕಾಡೆಮಿ ಐಜಿಯಾಗಿ ಮಧುಕರ್ ಶೆಟ್ಟಿ ನಿಯೋಜನೆಗೊಂಡಿದ್ದಾರೆ.

    ಖಡಕ್ ಮಹಿಳಾ ಅಧಿಕಾರಿ ಸೋನಿಯಾ ನಾರಂಗ್ ಅವರು ಲೋಕಾಯುಕ್ತದಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದವರು. ಪಿಯುಸಿ ಪ್ರಶ್ನೆ ಪತ್ರಿಕೆ ಲೀಕಾಸುರರನ್ನ ಹೆಡೆಮುರಿ ಕಟ್ಟಿದವರು. ಸದ್ಯ ಸಿಐಡಿ ಯಲ್ಲಿ ಡಿಐಜಿ ಯಾಗಿ ಕರ್ತವ್ಯ ನಿರ್ವಹಿಸ್ತಿದ್ದು, ಏಪ್ರಿಲ್ 1ರಿಂದ ಕೇಂದ್ರ ಸೇವೆಗೆ ತೆರಳಲಿದ್ದಾರೆ. ಈ ಮೂಲಕ ಎನ್‍ಐಎ ಡಿಐಜಿಯಾಗಿ ಹೊಸ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಕಳೆದ ವರ್ಷವೇ ಕೇಂದ್ರ ಸೇವೆಗೆ ತೆರಳಬೇಕಿದ್ದ ನಾರಂಗ್ ಅವರನ್ನು ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರಲಿಲ್ಲ.

    ದಕ್ಷ ಪ್ರಾಮಾಣಿಕ ಅಧಿಕಾರಿ ಲಾಭೂರಾಮ್ ಅವರ ಹೆಸರು ಕೇಳಿದಾಕ್ಷಣ ಒಳ್ಳೆ ಆಫೀಸರ್ ಅಂತಾರೆ ಜನ. ಸದ್ಯ ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿರೋ ಲಾಭೂರಾಮ್ ಕೇಂದ್ರಕ್ಕೆ ತೆರಳಲಿದ್ದಾರೆ. ಇವರ ಜೊತೆಗೆ ಸಿಸಿಬಿ ಡಿಸಿಪಿ ಕೌಶಲೇಂದ್ರ ಕುಮಾರ್ ಸಹ ಕೇಂದ್ರ ನಿಯೋಜನೆಗೆ ತೆರಳಲಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಗೆ ಇಬ್ಬರೂ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

    ಈ ನಾಲ್ವರ ಟ್ರಾನ್ಸ್ ಫರ್ ಗೆ ಕೇಂದ್ರ ಗೃಹ ಇಲಾಖೆ ಸಮ್ಮತಿ ನೀಡಿದೆ. ಆದ್ರೆ ಇಂಥ ಒಳ್ಳೆ ಆಫೀಸರ್ ಗಳನ್ನು ಸರ್ಕಾರ ಉಳಿಸಿಕೊಳ್ಳೋಕೆ ಆಗ್ತಿಲ್ವಲ್ಲ ಅನ್ನೋದೇ ವಿಪರ್ಯಾಸ.