Tag: madhukar reddy

  • ಕೊನೆಗೂ ನ್ಯಾಯ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗ್ತಿದೆ: ಜ್ಯೋತಿ ಉದಯ್

    ಕೊನೆಗೂ ನ್ಯಾಯ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗ್ತಿದೆ: ಜ್ಯೋತಿ ಉದಯ್

    ಬೆಂಗಳೂರು: ಕೊನೆಗೂ ನ್ಯಾಯ ಸಿಕ್ಕಿದೆ. ಹೀಗಾಗಿ ನನಗೆ ತುಂಬಾ ಖುಷಿಯಾಗ್ತಿದೆ ಎಂದು ಜ್ಯೋತಿ ಉದಯ್ ತಿಳಿಸಿದ್ದಾರೆ.

    2013ರಲ್ಲಿ ಎಟಿಎಂನಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣದ ಅಪರಾಧಿ ಮಧುಕರ್ ರೆಡ್ಡಿಗೆ ನ್ಯಾಯಾಲಯ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟಕ್ಕೂ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜ್ಯೋತಿ, ತುಂಬಾ ಸೀರಿಯಸ್ ಆದ ಶಿಕ್ಷೆ ಅವರಿಗೆ ನೀಡಬೇಕು. ಆದರೆ ಅದರ ತೀರ್ಮಾನವನ್ನು ನ್ಯಾಯಾಲಯವೇ ಮಾಡಬೇಕು ಹೊರತು ನಾವಲ್ಲ. ಮುಂದಿನ ದಿನಗಳಲ್ಲಿ ಅವರು ಬೇರೆ ಯಾರ ಮೇಲೂ ಇಂತಹ ಕೃತ್ಯ ಎಸಗಬಾರದು ಎಂದು ಹೇಳಿದರು.

    ಕೃತ್ಯ ಎಸಗಿ ಮಧುಕರ್ ರೆಡ್ಡಿ ಕೆಲ ವರ್ಷ ತಲೆಮರೆಸಿಕೊಂಡಿದ್ದನು. ಈ ವೇಳೆ ನಮಗೆ ತುಂಬಾ ಬೇಜಾರಾಗಿತ್ತು. ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಗಳನ್ನು ನಡೆಸಿದರೂ ಆರೋಪಿ ಸಿಕ್ಕಿರಲಿಲ್ಲ. ಆದರೆ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮೂಲಕ ಅವರು ನನಗೆ ಸಹಾಯ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಎಟಿಎಂನಲ್ಲಿ ಮಚ್ಚಿನಿಂದ ಹಲ್ಲೆ-ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ

    ಏಕಾಏಕಿ ಎಟಿಎಂಗೆ ನುಗ್ಗಿದ ಮಧುಕರ ರೆಡ್ಡಿ ಮೊದಲು ಎಷ್ಟಿದೆ ಅಂತ ಕೇಳಿದ್ರು. ಆಗ ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ 2-3 ಸಲ ಎಷ್ಟಿದೆ ಎಷ್ಟಿದೆ ಅಂತ ಕೇಳಿದ್ರು. ಕೊನೆಗೆ ನನ್ನಲ್ಲಿ ಏನೂ ಇಲ್ಲ. ಮಗಳ ಫೀಸ್ ಇಟ್ಟಿದ್ದೇನೆ ಅಷ್ಟೇ ಅಂತ ಹೇಳಿದೆ. ಆ ಬಳಿಕ ನನಗೇನಾಯ್ತು ಗೊತ್ತಿಲ್ಲ. ಯಾಕಂದ್ರೆ ಅವರು ನನ್ನ ಮೂಲೆಗೆ ತಳ್ಳಿದ್ರು. ಈ ವೇಳೆ ನಾನು ಪ್ರಜ್ಞೆ ತಪ್ಪಿದ್ದೇನೆ ಎಂದು ಜ್ಯೋತಿ ವಿವರಿಸಿದರು.

    ನಾನು ಬ್ಯಾಂಕಿನಲ್ಲಿ ಕೆಲಸ ಮಾಡುವುದರಿಂದ ಮೊದಲು ಯಾರೋ ಕ್ಯಾಶ್ ಲೋಡಿಂಗ್ ನವರು ಬಂದಿರಬಹುದು ಅಂದುಕೊಂಡೆ. ಅಲ್ಲದೆ ಏನು ಬೇಕು ಅಂತ ಕೇಳಿದೆ. ಅಷ್ಟರಲ್ಲಾಗಲೇ ಎಟಿಎಂ ಶಟರ್ ಎಳೆದರು. ಆವಾಗ ಈ ವ್ಯಕ್ತಿ ದುರುದ್ದೇಶದಿಂದ ಬಂದಿದ್ದಾನೆ ಅಂತ ಗೊತ್ತಾಯ್ತು. ಅಪರಾಧ ಕೃತ್ಯ ಎಸಗಲು ಬಂದಿರುವುದಾಗಿ ನನಗೆ ಮನವರಿಕೆ ಆಯ್ತು. ಆಮೇಲೆ ನನಗೆ ಭಯ ಶುರುವಾಯ್ತು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಅಂದು ಸಹಾಯ ಮಾಡಿದ್ದ ಕಾರ್ಪೋರೇಶನ್ ಬ್ಯಾಂಕ್ ಸಿಬ್ಬಂದಿ, ಎಎನ್ ಸುರೇಶ್, ವಿಠಲ್ ರಾವ್. ರವಿ ಬಾಬು ಇವರೆಲ್ಲರೂ ನನಗೆ ಫುಲ್ ಸಪೋರ್ಟ್ ಮಾಡಿದ್ದರು. ನನ್ನ ಕುಟುಂಬ, ಪತಿ ಉದಯ್ ಕುಮಾರ್ ಹಾಗೂ ಬಿಜಿಎಸ್ ಆಸ್ಪತ್ರೆಯ ಸಿಬ್ಬಂದಿ ತಂಡ ಹಾಗೂ ವೈದ್ಯರಾದ ವೆಂಕಟರಮನ್, ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಕ್ಕೆ ಧನ್ಯವಾದ ತಿಳಿಸಲು ಇಷ್ಟಪಡುವುದಾಗಿ ಈ ವೇಳೆ ತಿಳಿಸಿದರು.

  • ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ಪ್ರಕರಣ- ಆರೋಪಿ ಕೋರ್ಟ್ ಗೆ ಹಾಜರ್

    ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ಪ್ರಕರಣ- ಆರೋಪಿ ಕೋರ್ಟ್ ಗೆ ಹಾಜರ್

    – ನನಗೆ ಇವತ್ತೇ ಶಿಕ್ಷೆ ಕೊಟ್ಟುಬಿಡಿ – ಎಟಿಎಂ ಹಲ್ಲೆಕೋರ ಮನವಿ
    – ನನ್ನ ಪರ ವಾದ ಮಂಡಿಸಲು ಯಾವ ವಕೀಲರು ಬೇಡಾ ಎಂದ ಆರೋಪಿ

    ಬೆಂಗಳೂರು: ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿ ಮಧುಕರ್ ರೆಡ್ಡಿಯನ್ನು ಎಸ್.ಜೆ.ಪಾರ್ಕ್ ಪೊಲೀಸರು ಇಂದು ಕೋರ್ಟ್ ಗೆ ಹಾಜರಿಪಡಿಸಿದ್ದಾರೆ.

    ಆಂಧ್ರ ಪ್ರದೇಶ ಮೂಲದ ಮಧುಕರ್ ರೆಡ್ಡಿ ವಿರುದ್ಧ ದೋಷಾರೋಪಣೆ ಹೊರೆಸಲು ಇಂದು ಸಿಸಿಎಚ್ 65 ಕೋರ್ಟ್ ಗೆ ಕರೆತರಲಾಗಿತ್ತು. ಈ ಮೂಲಕ ಚಾರ್ಚ್ ಶೀಟ್ ಸಲ್ಲಿಸಿದ ನಂತರ ಮೊದಲ ಬಾರಿಗೆ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಪ್ರಕರಣದ ಕುರಿತು ನ್ಯಾಯಾಧೀಶರಾದ ರಾಜೇಶ್ವರ ವಿಚಾರಣೆ ನಡೆಸಿದರು.

    ನಾನು ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿರುವುದು ಸತ್ಯ. ತಪ್ಪು ಒಪ್ಪಿಕೊಳ್ಳುತ್ತೇನೆ. ನನ್ನ ಪರ ವಾದ ಮಂಡಿಸಲು ಯಾವ ವಕೀಲರೂ ಬೇಡ ಹಾಗೂ ವಿಚಾರಣೆಯೂ ಬೇಡ. ಮದನಪಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದೇನೆ. ಈಗ ಇಲ್ಲಿ ಕೂಡ ಶಿಕ್ಷೆ ಅನುಭವಿಸುತ್ತೇನೆ. ನನಗೆ ಹೆಂಡತಿ ಮಕ್ಕಳು ಇದ್ದಾರೆ ಬಿಡುಗಡೆಯಾಗಬೇಕು. ಇವತ್ತೆ ಶಿಕ್ಷೆ ನೀಡಿ ಎಂದು ಮಧುಕರ್ ರೆಡ್ಡಿ ನ್ಯಾಯಾಧೀಶರಿಗೆ ಬೇಡಿಕೊಂಡಿದ್ದಾನೆ.

    ಮಧುಕರ್ ರೆಡ್ಡಿ ಮನವಿಗೆ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು, ನಿಮ್ಮ ಮೇಲಿರುವ ಆರೋಪಕ್ಕೆ ಜೀವಾವಧಿ ಶಿಕ್ಷೆ ಇದೆ. ತಪ್ಪೊಪ್ಪಿಗೆ ಹೇಳಿಕೆ ನೀಡಿದರೂ ಶಿಕ್ಷೆ ಕಡಿಮೆ ಆಗುತ್ತೆ ಅನ್ನೋದು ಗೊತ್ತಿಲ್ಲ. ನಿಮಗೆ ವಕೀಲರನ್ನು ನೇಮಕ ಮಾಡಲಾಗಿದೆ. ಅವರ ಜೊತೆಗೆ ಚರ್ಚಿಸಿ ತಿಳಿಸಿ ಎಂದು ಸೂಚನೆ ನೀಡಿದರು.

    ಏನಿದು ಪ್ರಕರಣ?:
    ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬವರು 2013, ನವೆಂಬರ್ 19ರಂದು ಹಣ ಪಡೆಯುತ್ತಿದ್ದರು. ಈ ವೇಳೆ ಜ್ಯೋತಿ ಉದಯ್ ಅವರ ಮೇಲೆ ಆಂಧ್ರ ಪ್ರದೇಶ ಮೂಲದ ಮಧುಕರ್ ರೆಡ್ಡಿ ಮಾರಣಾಂತಿಕ ಹಲ್ಲೆ ಮಾಡಿ, ಹಣ ಕಿತ್ತುಕೊಂಡು ಪರಾರಿಯಾಗಿದ್ದ. ಎಟಿಎಂ ಕೇಂದ್ರದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯ ಕೃತ್ಯ ಸೆರೆಯಾಗಿತ್ತು. ಕರ್ನಾಟಕ ಅಷ್ಟೇ ಅಲ್ಲದೆ ಆಂಧ್ರ ಪ್ರದೇಶದಲ್ಲಿ ನಾಲ್ಕು ಪ್ರಕರಣ ಹಾಗೂ ಕೇರಳದಲ್ಲಿ ಎರಡು ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.

    ಎಲ್ಲೆಲ್ಲಿ ಅಪರಾಧಗಳು:
    ಆಂಧ್ರ ಪ್ರದೇಶ:
    > 2005 ರ ಆನಂದ ರೆಡ್ಡಿ ಕೊಲೆ ಪ್ರಕರಣ ( ನೀರಿನ ವಿಚಾರಕ್ಕೆ ಬಾಂಬ್ ಇಟ್ಟು ಕೊಲೆ ಮಾಡಿದ್ದ)
    > 2011ರಲ್ಲಿ ಕಡಪ ಜೈಲಿನಿಂದ ಎಸ್ಕೇಪ್ ಆಗಿದ್ದ ಪ್ರಕರಣ
    > 2013, ನ. 10 ಧರ್ಮಾವರಂ ಕೊಲೆ ಪ್ರಕರಣ ( ಪ್ರಮೀಳಮ್ಮ)
    > ಹೈದ್ರಾಬಾದ್ ಮತ್ತು ಗುಂಟೂರಿನಲ್ಲಿ ಕೊಲೆ ಯತ್ನ ಪ್ರಕರಣಗಳು

    ಕರ್ನಾಟಕ:
    > 2013, ನ.19 ರಂದು ಎಟಿಎಂನಲ್ಲಿ ಜ್ಯೋತಿ ಉದಯ್ ಕೊಲೆ ಯತ್ನ ಪ್ರಕರಣ

    ಕೇರಳ:
    > ಎರ್ನಾಕುಲಂನಲ್ಲಿ ನಡೆದ ಎರಡು ಸರ ಅಪಹರಣ ಪ್ರಕರಣ
    > ಎಟಿಎಂನಲ್ಲಿ ನಡೆದ ಕೊಲೆ ಯತ್ನ ಪ್ರಕರಣ

    https://youtu.be/RXXpBObVE1Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಊಟದ ದುಡ್ಡಿಗಾಗಿ ಎಟಿಎಂನಲ್ಲಿ ಮಚ್ಚು ಬೀಸಿದ್ನಂತೆ ಮಧುಕರ್!

    ಬೆಂಗಳೂರು: ನಗರದ ಎಟಿಎಂನಲ್ಲಿ ಜ್ಯೋತಿ ಎಂಬವರ ಮೇಲೆ ಹಲ್ಲೆ ಮಾಡಿದ್ದ ಸೈಕೋ ಮಧುಕರ್ ರೆಡ್ಡಿ ಪೊಲೀಸರ ಮುಂದೆ ಒಂದೊಂದೇ ಮಾಹಿತಿ ಬಾಯ್ಬಿಡ್ತಿದ್ದಾನೆ. ಈತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಕಾರಣ ಊಟಕ್ಕಾಗಿ ಅಂತೆ. ಹೌದು, ಪೊಲೀಸರ ಮುಂದೆ ಅವನೇ ಹೇಳಿರೋ ಪ್ರಕಾರ ಹಣವಿಲ್ಲದೆ ಎರಡು ದಿನದಿಂದ ಊಟ ಮಾಡಿರಲಿಲ್ಲವಂತೆ.

    ಮೂರು ವರ್ಷಗಳ ಹಿಂದೆ ಆಂಧ್ರದಲ್ಲಿ ಕೊಲೆ ಮಾಡಿ, ಬೆಂಗಳೂರಿಗೆ ಓಡಿ ಬಂದೆ. ಇದ್ದ ಬದ್ದ ದುಡ್ಡು ಮುಗಿದ ಮೇಲೆ ಎರಡು ದಿನ ಊಟ ಇಲ್ಲದೇ ಹಾಗೆ ಇದ್ದೆ. ಕೊನೆಗೆ ಊಟಕ್ಕೆ ದುಡ್ಡು ಪಡೆಯೋ ಉದ್ದೇಶದಿಂದ ಹಲವಾರು ಎಟಿಎಂಗಳ ಮುಂದೆ ವಾಚ್ ಮಾಡಿದ್ದೆ. ಆದ್ರೆ ಜನ ದಟ್ಟಣೆಯ ಕಾರಣಕ್ಕೆ ಭಯ ಆಗಿತ್ತು. ಕೊನೆಗೆ ಕಾರ್ಪೊರೇಷನ್ ಎಟಿಎಂಗೆ ಮಹಿಳೆಯೊಬ್ಬರು ಹೋಗಿದ್ದನ್ನು ನೋಡಿ ಅಂದು ಬೆಳಗ್ಗೆ ಯಾರೂ ಇಲ್ಲದಿದ್ದಾಗ ಎಟಿಎಂಗೆ ನುಗ್ಗಿದೆ. ಎಟಿಎಂ ಕಾರ್ಡ್ ಕಸಿದುಕೊಂಡು ಪಿನ್ ನಂಬರ್ ಕೇಳಿದೆ. ಆದ್ರೆ ಅವರು ಹೇಳಲಿಲ್ಲ. ಹಾಗಾಗಿ ಮಹಿಳೆ ಮೇಲೆ ಹಲ್ಲೆ ಮಾಡಿದೆ ಅಂತ ಪೊಲೀಸರ ಮುಂದೆ ಹೇಳಿದ್ದಾನೆ.

    ಆಂಧ್ರದಲ್ಲಿ ಕೊಲೆ ಮಾಡಿ ಬಂದಿದ್ದ ಮಧುಕರ್, ದುಡ್ಡು ಮುಗಿದ ಮೇಲೆ ಕಬ್ಬನ್‍ಪಾರ್ಕ್‍ನಲ್ಲಿ ಎರಡು ದಿನ ಕಾಲ ಕಳೆದಿದ್ದ. ಅದೆಲ್ಲಿಂದಲೋ ಒಂದು ಮಚ್ಚನ್ನು ಕದ್ದಿದ್ದ. ಇದೇ ಮಚ್ಚನ್ನು ಎಟಿಎಂನಲ್ಲಿ ಬಳಸಿದೆ ಅಂತ ಹೇಳಿದ್ದಾನೆ. ಸದ್ಯ ಬೆಂಗಳೂರಿನ ಕ್ರೈಂ ಬ್ರಾಂಚ್ ಪೊಲೀಸರು ಮದನಪಲ್ಲಿಯಲ್ಲಿ ಬೀಡು ಬಿಟ್ಟು ಮತ್ತಷ್ಟು ಮಾಹಿತಿ ಕಲೆ ಹಾಕ್ತಿದ್ದಾರೆ.