Tag: Madanpur

  • ಅಟ್ಟಿಸಿಕೊಂಡು ಬಂದವರಿಂದ ತಪ್ಪಿಸಿಕೊಳ್ಳಲು ಗುಂಡು ಹಾರಿಸಿದ ಪೊಲೀಸ್: ವಿಡಿಯೋ

    ಅಟ್ಟಿಸಿಕೊಂಡು ಬಂದವರಿಂದ ತಪ್ಪಿಸಿಕೊಳ್ಳಲು ಗುಂಡು ಹಾರಿಸಿದ ಪೊಲೀಸ್: ವಿಡಿಯೋ

    ನವದೆಹಲಿ: ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಯನ್ನು ಸ್ಥಳೀಯರು ಥಳಿಸಿ, ಅಟ್ಟಿಸಿಕೊಂಡು ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.

    ಕಾಲಿಂದಿ ಕುಂಜ್ ಪ್ರದೇಶದ ಜೆಜೆ ಕಾಲೋನಿಯಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಸಾರ್ವಜನಿಕರಿಂದ ಪೊಲೀಸ್ ಪೇದೆ ರಾಮ್‍ಕಿಶನ್ ತಪ್ಪಿಸಿಕೊಂಡಿದ್ದಾರೆ. ರಾಮ್‍ಕಿಶನ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಅಶೋಕ್ ಹಾಗೂ ಗುಡ್ಡಿ ಎಂದು ಗುರುತಿಸಲಾಗಿದೆ.

    ಪೇದೆ ರಾಮ್‍ಕಿಶನ್ ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಜೆಜೆ ಕಾಲೋನಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು, ಇಲ್ಲಿ ಯಾಕೆ ನಿಂತಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಪೇದೆಯ ಬಳಿಗೆ ಬಂದ ಅಶೋಕ್ ಹಾಗೂ ಗುಡ್ಡಿ ವಾಗ್ವಾದ ಆರಂಭಿಸಿದರು. ಈ ವೇಳೆ ಕಾಲೋನಿಯ ಅನೇಕರು ಸೇರಿ ರಾಮ್‍ಕಿಶನ್ ಅವರನ್ನು ಸುತ್ತುವರಿದು ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಬೈಕ್ ಅನ್ನು ಹಾನಿಗೊಳಿಸಿದ್ದಾರೆ.

    ಪರಿಸ್ಥಿತಿ ಕೈ ಮೀರುತ್ತಿದ್ದಂತೆ ರಾಮ್‍ಕಿಶನ್ ಅವರು ಬೈಕ್ ಅನ್ನು ಅಲ್ಲಿಯೇ ಬಿಟ್ಟು ಸ್ಥಳೀಯರಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಮಹಿಳೆ ಸೇರಿದಂತೆ ಕೆಲವರು ಅವರ ಬೆನ್ನು ಹತ್ತಿದರು. ಅವರಿಂದ ತಪ್ಪಿಸಿಕೊಳ್ಳಲು ರಾಮ್‍ಕಿಶನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿದ್ದು, ಮತ್ತೊರ್ವನಿಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.