Tag: mad dog

  • 60ಕ್ಕೂ ಹೆಚ್ಚು ಮಂದಿ ಜೀವಕ್ಕೆ ಕಂಟಕ ತಂದಿಟ್ಟ ಹುಚ್ಚು ನಾಯಿ!

    60ಕ್ಕೂ ಹೆಚ್ಚು ಮಂದಿ ಜೀವಕ್ಕೆ ಕಂಟಕ ತಂದಿಟ್ಟ ಹುಚ್ಚು ನಾಯಿ!

    ಸೇಲಂ: ಹುಚ್ಚು ಹಿಡಿದಿದ್ದ ಬೀದಿ ನಾಯಿಯೊಂದು ಬರೋಬ್ಬರಿ 60ಕ್ಕೂ ಹೆಚ್ಚು ಮಂದಿ ಪಾದಚಾರಿಗಳ ಮೇಲೆ ದಾಳಿ ನಡೆಸಿ, ಅವರನ್ನು ಆಸ್ಪತ್ರೆಯತ್ತ ಮುಖಮಾಡುವಂತೆ ಮಾಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

    ಮೊದಲು ಕಿಚ್ಚಪಾಳ್ಯಂ ಪ್ರದೇಶದಲ್ಲಿ ಕಾಣಿಸಿಕೊಂಡ ಹುಚ್ಚು ನಾಯಿ ತನ್ನಷ್ಟಕ್ಕೆ ಬೀದಿ ಬೀದಿಗಳಲ್ಲಿ ಓಡಾಡುತ್ತಿತ್ತು. ಆದರೆ ಏಕಾಏಕಿ ಶುಕ್ರವಾರದಂದು ದಾರಿಹೋಕರಿಗೆ ಕಚ್ಚಿದೆ. ಬಳಿಕ ಸೇಲಂನ ಗಾಂಧಿ ಮಹಾನ್ ಪ್ರದೇಶ, ಕಲರಂಪಟ್ಟಿ, ಕುರಿಂಜಿನಗರ, ನಾರಾಯಣನ್ ನಗರ ಹಾಗೂ ಪಂಚಪಟ್ಟಿ ಪ್ರದೇಶಕ್ಕೆ ತೆರಳಿ ಸುಮಾರು 60ಕ್ಕೂ ಹೆಚ್ಚು ಮಂದಿ ಪಾದಚಾರಿಗಳಿಗೆ ಕಚ್ಚಿ ಹಲ್ಲೆ ಮಾಡಿದೆ.

    ಕಣ್ಣಿಗೆ ಕಂಡವರ ಮೇಲೆಲ್ಲಾ ಹುಚ್ಚು ನಾಯಿ ಎಗರಿ ಕಚ್ಚಿದಾಗ ರೊಚ್ಚಿಗೆದ್ದ ಸ್ಥಳೀಯರು, ತಕ್ಷಣ ನಾಯಿಯನ್ನು ಹೊಡೆದು ಕೊಂದಿದ್ದಾರೆ. ಮೊದಲು ಕಿಚ್ಚಪಾಳ್ಯಂ ಪ್ರದೇಶದಲ್ಲಿ ಓಡಾಡುತ್ತಿತ್ತು, ಆದರೆ ಏಕಾಏಕಿ ಈ ರೀತಿ ಕಚ್ಚಿ ನಾಗರೀಕರನ್ನು ಆಸ್ಪತ್ರೆ ಪಾಲು ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆ ಬಳಿಕ ನಾಯಿ ಕಡಿತಕ್ಕೆ ತುತ್ತಾದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, 2 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಬೀದಿಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ದೂರು ನೀಡಿದ್ದರೂ ಸೇಲಂ ನಗರಪಾಲಿಕೆ ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ನಗರಪಾಲಿಕೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಓರ್ವ ಪೊಲೀಸ್ ಸೇರಿದಂತೆ 17ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಹುಚ್ಚು ನಾಯಿ!

    ಓರ್ವ ಪೊಲೀಸ್ ಸೇರಿದಂತೆ 17ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಹುಚ್ಚು ನಾಯಿ!

    ಚಿಕ್ಕಮಗಳೂರು: ಓರ್ವ ಪೊಲೀಸ್ ಸೇರಿದಂತೆ 17ಕ್ಕೂ ಹೆಚ್ಚು ಜನರಿಗೆ ಹುಚ್ಚುನಾಯಿ ಕಚ್ಚಿದ ಘಟನೆ ನಗರದಲ್ಲಿ ನಡೆದಿದ್ದು, ದಾಳಿಗೊಳಗಾದವರು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಗರದ ಕೋಟೆ ರಸ್ತೆ, ತೊಗರಿ ಅಂಕಲ್ ಸರ್ಕಲ್, ಲಕ್ಷ್ಮೀಶ ನಗರ, ಶಂಕರಪುರ ಹಾಗೂ ಎಂ.ಜಿ.ರಸ್ತೆಯ ದಾರಿಯಲ್ಲಿ ಹೋಗುತ್ತಿದ್ದ ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಪರಿಣಾಮ ದತ್ತಪೀಠದ ಬಂದೋಬಸ್ತ್ ಗಾಗಿ ತೆರಳಿದ್ದ ಓರ್ವ ಪೊಲೀಸ್ ಸೇರಿದಂತೆ ಲಕ್ಷ್ಮಮ್ಮ, ರೂಪ, ನವೀನ್, ನಾಗರಾಜ್ ಎಂಬವರ ಮೇಲೆ ದಾಳಿ ಮಾಡಿದೆ.

    ನಾಯಿ ದಾಳಿಗೆ ಒಳಗಾದ ಪುಟ್ಟ ಮಕ್ಕಳು, ಮಹಿಳೆಯರು ಸೇರಿದಂತೆ 17ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಹುಚ್ಚು ನಾಯಿ ದಾಳಿಯಿಂದಾಗಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದು ವೇಳೆ ಬೇರೊಂದು ನಾಯಿ ಮೇಲೆ ಹುಚ್ಚು ನಾಯಿ ದಾಳಿ ಮಾಡಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ. ನಾವು ರಸ್ತೆಯಲ್ಲಿ ಸುರಕ್ಷಿತವಾಗಿ ನಡೆದಾಡುವುದೇ ಕಷ್ಟವಾಗುತ್ತದೆ. ಜಿಲ್ಲಾಡಳಿತ ಹಾಗೂ ನಗರಸಭೆ ಬೀದಿ ನಾಯಿಗಳ ಹಾವಳಿಗೆ ಅಂಕುಶ ಹಾಕಬೇಕೆಂದು ಹಾಗೂ ಹುಚ್ಚು ನಾಯಿಯನ್ನು ಹಿಡಿಯಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv