Tag: M Veerappa Moily

  • ತಂದೆ ಪರ ಮತಯಾಚನೆಗೆ ಮುಂದಾದ ರಶ್ಮಿ ಮೊಯ್ಲಿಗೆ ಬೆವರಿಳಿಸಿದ ಮತದಾರರು!

    ತಂದೆ ಪರ ಮತಯಾಚನೆಗೆ ಮುಂದಾದ ರಶ್ಮಿ ಮೊಯ್ಲಿಗೆ ಬೆವರಿಳಿಸಿದ ಮತದಾರರು!

    ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪಮೊಯ್ಲಿ ಪರ ಪುತ್ರಿ ರಶ್ಮಿ ಮೊಯ್ಲಿ ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದಲ್ಲಿ ಮತಯಾಚನೆ ಮಾಡಿದ್ದಾರೆ.

    ತಂದೆ ಪರ ವೀರಪ್ಪಮೊಯ್ಲಿ ಮತ ಹಾಕುವಂತೆ ಮನವಿ ಮಾಡಿದ ರಶ್ಮಿ ಮೊಯ್ಲಿ ಅವರಿಗೆ ಮತದಾರರು ಪ್ರಶ್ನೆ ಮಾಡಿದ್ದಾರೆ. ವೀರಪ್ಪಮೊಯ್ಲಿ ಅವರಿಗೆ ಮತ ಏಕೆ ಹಾಕಬೇಕು. ನಿಮ್ಮ ತಂದೆಯವರು ನೀರು ಕೊಡುತ್ತೇನೆ ಎಂದು ಹೇಳಿ ಹೇಳಿ ಎರಡು ಸಲ ಗೆಲುವು ಪಡೆದಿದ್ದಾರೆ. ಈಗ ನೀರು ಎಲ್ಲಿ ತಾಯಿ ಎಂದು ಪ್ರಶ್ನೆ ಮಾಡಿದ್ದಾರೆ.

    ಇಡಗೂರು ಗ್ರಾಮದಲ್ಲಿ ಮತಯಾಚನೆಗೆ ಮುಂದಾದ ರಶ್ಮಿ ಮೊಯ್ಲಿಗೆ ಮತದಾರರು ನಾವು ನೀರು ನೀರು ಅಂತಿದ್ದೀವಿ ಇಲ್ಲಿ. 5 ವರ್ಷದಿಂದ ನೀರು ಅಲ್ಲೇ ಇದೆ. ಮುಂದಕ್ಕೆ ಬರಲೇ ಇಲ್ಲ. ನಾನು ಧರ್ಮಸ್ಥಳದ ಕಡೆಗೆ ಹೋದಾಗಲೆಲ್ಲಾ ನೋಡುತ್ತೇನೆ. ನೀರು ಅಲ್ಲೇ ಇದೆ. ಸಿದ್ದರಾಮಯ್ಯ ಸಿಎಂ ಅಗಿದ್ದಾಗಲೇ ಮನಸ್ಸು ಮಾಡಿದರೆ ಇಷ್ಟೊತ್ತಿಗೆ ನೀರು ಕೊಡಬಹುದಿತ್ತು. ಆದರೆ ಈಗ ಏನು ಮಾಡೋಕೆ ಅಗುತ್ತೆ ಎಂದು ಮತದಾರರು ಪ್ರಶ್ನೆ ಮಾಡಿದ್ದಾರೆ.

    ಮತದಾರರ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಜಾರಿದ ರಶ್ಮಿ ಮೊಯ್ಲಿ ಅವರು ಏನು ಮಾತನಾಡದೆ ನಿರುತ್ತರಾಗಿದ್ದರು. ಈ ಹಂತದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಮನವೊಲಿಸುವ ಕಸರತ್ತು ನಡೆಸಿದ್ದರು.

  • ಆಂಧ್ರಕ್ಕೆ ಬಂದಿರೋ ಕೃಷ್ಣಾ ನದಿಯ 10 ಟಿಎಂಸಿ ನೀರು ಕ್ಷೇತ್ರಕ್ಕೆ ತರುವೆ: ವೀರಪ್ಪಮೊಯ್ಲಿ

    ಆಂಧ್ರಕ್ಕೆ ಬಂದಿರೋ ಕೃಷ್ಣಾ ನದಿಯ 10 ಟಿಎಂಸಿ ನೀರು ಕ್ಷೇತ್ರಕ್ಕೆ ತರುವೆ: ವೀರಪ್ಪಮೊಯ್ಲಿ

    ಚಿಕ್ಕಬಳ್ಳಾಪುರ: ನೀರಿನ ಬವಣೆಯಿಂದ ಬಳಲಿ ಬೆಂಡಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ಈಗಾಗಲೇ ಹರಿದು ಬಂದಿರುವ ಕೃಷ್ಣಾ ನದಿಯ 10 ಟಿಎಂಸಿ ನೀರು ತರುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.

    ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಬಾಗೇಪಲ್ಲಿಯಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಕೃಷ್ಣಾ ನದಿಯ ನೀರು ಆಂಧ್ರದ ಅನಂತಪುರ ಜಿಲ್ಲೆಯವರೆಗೆ ಬಂದಿದೆ. ಅದನ್ನು ರಾಜ್ಯಗಳ ನಡುವೆ ಒಪ್ಪಂದ ಮಾಡಿಸಿ ಈ ಭಾಗಕ್ಕೆ 10 ಟಿಎಂಸಿ ನೀರು ತರುವ ಕಾರ್ಯ ಮಾಡುವುದಾಗಿ ತಿಳಿಸಿದರು.

    ಅಭಿವೃದ್ಧಿ ಕಾರ್ಯಕ್ಕೆ ಕಲ್ಲು ಹಾಕಿ ತಡೆ ಒಡ್ಡುವ ಬಿಜೆಪಿಯವರು ರಾಕ್ಷಸರು, ಸುಳ್ಳು ಭರವಸೆಗಳನ್ನು ನೀಡುವುದಕ್ಕೆ ಅವರಿಗೆ ನೊಬೆಲ್ ಪ್ರಶಸ್ತಿ ರಚಿಸಿ ಕೊಡಬೇಕು ಎಂದು ಟೀಕಿಸಿದರು. ನನಗೆ ಎಂದೂ ಜಾತಿ ಮುಖ್ಯವಾಗಿಲ್ಲ. ನಾನು ಸಿಎಂ ಆಗಿದ್ದಾಗ ಹಲವಾರು ಜಾತಿಗಳಿಗೆ ಮೀಸಲಾತಿ ನೀಡಿದ್ದು, ವಾಲ್ಮೀಕಿ ಜನಾಂಗವನ್ನು ಎಸ್‍ಟಿ ಗೆ ಸೇರಿಸಿದ್ದು ನಾನು. ಕುರುಬರಿಗೂ ಕೂಡ ಮೀಸಲಾತಿ ನೀಡಲಾಗಿದೆ ಎಂದ ತಿಳಿಸಿದರು.

    ನರೇಂದ್ರ ಮೋದಿ ಐದು ವರ್ಷಗಳಲ್ಲಿ ರೈತರಿಗೆ ಏನು ಮಾಡದೆ ಚುನಾವಣೆ ಹೊಸ್ತಿಲಲ್ಲಿ ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ಹಾಕುವುದಾಗಿ ಸುಳ್ಳು ಭರವಸೆ ನೀಡಿದರು. ಆದರೆ ಈವರೆಗೆ ಯಾವ ರೈತನ ಖಾತೆಗೂ ಮೊದಲ ಕಂತಿನ ಹಣ ತಲುಪಿಲ್ಲ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಘೋಷಿಸಿರುವ ತಿಂಗಳಿಗೆ 6 ಸಾವಿರದಂತೆ ವರ್ಷಕ್ಕೆ 72 ಸಾವಿರವನ್ನು ನೀಡಲು ಘೋಷಣೆ ಮಾಡಿದ್ದು, ಇಪ್ಪತ್ತೈದು ಕೋಟಿ ಬಡವರಿಗೆ ಈ ಯೋಜನೆ ತಲುಪಲಿದೆ ಎಂದು ವಿವರಿಸಿದರು.

    ಪ್ರಚಾರ ದಲ್ಲಿ ಗೌರಿಬಿದನೂರು ಶಾಸಕ ಹಾಗೂ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ ಕಾಂಗ್ರೆಸ್ ಪಕ್ಷ ಎಂದಿಗೂ ಬಡವರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಮಕ್ಕಳಿಗೆ ಶೂ ಭಾಗ್ಯ ಮುಂತಾದ ಹಲವಾರು ಭಾಗ್ಯಗಳನ್ನು ನೀಡಿ ಅಭಿವೃದ್ಧಿ ಮಾಡಿದೆ. ಈ ಕಾರ್ಯಗಳನ್ನು ಬಿಜೆಪಿ ಮಾಡಲು ಸಾಧ್ಯವಿಲ್ಲ ಎಂದರು.

  • ಕಿಸಾನ್ ಸಮ್ಮಾನ್ ಯೋಜನೆಯನ್ನ ಪುಟಗೋಸಿಗೆ ಹೋಲಿಸಿದ ಸಂಸದ ಮೊಯ್ಲಿ

    ಕಿಸಾನ್ ಸಮ್ಮಾನ್ ಯೋಜನೆಯನ್ನ ಪುಟಗೋಸಿಗೆ ಹೋಲಿಸಿದ ಸಂಸದ ಮೊಯ್ಲಿ

    ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರಿಗೆ ಪುಟಗೋಸಿ 6 ಸಾವಿರ ರೂ. ಕೊಡುತ್ತಾರಂತೆ ಎಂದು ಹೇಳುವ ಮೂಲಕ ಸಂಸದ ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಟೀಕೆ ಮಾಡಿದ್ದಾರೆ.

    ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ, ಯುಪಿಎ ಆಡಳಿತವಾಧಿಯಲ್ಲಿದ್ದ ನರೇಗಾ ಯೋಜನೆಯನ್ನ ಜಾರಿ ಮಾಡಿದ್ದೆವು. ಪ್ರತಿಯೊಬ್ಬ ಕೂಲಿಯಾಳುವಿಗೆ ಒಂದು ದಿನಕ್ಕೆ 212 ರೂ. ನೀಡುತ್ತಿದ್ದೇವು. ಒಂದು ಕುಟುಂಬದಲ್ಲಿ 5 ಮಂದಿ ಇದ್ದರೆ 1,500 ರೂ. ಹಣ ಸಿಗುತಿತ್ತು ಎಂದರು.

    ದೇಶದ ಪ್ರಧಾನಿ ಮೋದಿ ಮೊನ್ನೆ ಜಾರಿ ಮಾಡಿದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪುಟಗೋಸಿ 6 ಸಾವಿರ ರೂ. ಹಣ ಕೊಡುತ್ತಾರಂತೆ. ಅದು ಆರು ಕಂತಿನಲ್ಲಿ ಹಾಕುತ್ತಾರಂತೆ ಎಂದರು. ಅಲ್ಲದೇ ಮೋದಿ ದುರ್ಬಲ ಪ್ರಧಾನಿಯಾಗಿದ್ದು, ದೇಶದ ಬಗ್ಗೆ ಪಾಕಿಸ್ತಾನದವರಿಗೆ ಭಯ ಹೋಗಿ ಬಿಟ್ಟಿದೆ. ಸರ್ಜಿಕಲ್ ಸ್ಟ್ರೈಕ್ ನಲ್ಲಿ ಎಷ್ಟು ಉಗ್ರಗಾಮಿಗಳು ಸತ್ತಿದ್ದಾರೆಂದು ಲೆಕ್ಕ ಕೊಡಲಿಕ್ಕೆ ಆಗುತ್ತಿಲ್ಲ. ಆದರೆ ಸುಮ್ಮನೆ ಬಡಾಯಿ ಕೊಚ್ಚಿಕೊಳುತ್ತಾರೆ ಎಂದರು.

    ಕೃಷ್ಣ ನದಿ ನೀರು: ಇದೇ ವೇಳೆ ಆಂಧ್ರದ ಅನಂತಪುರಕ್ಕೆ ಬಂದಿರುವ ಕೃಷ್ಣ ನದಿ ನೀರನ್ನು ಬಯಲುಸೀಮೆಯ ಜಿಲ್ಲೆಗಳಿಗೆ ಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.