Tag: M.Sanjeev

  • ಮಗನ ಕೊನೆ ಶೋ ನೋಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಸುದೀಪ್‌ ತಂದೆ

    ಮಗನ ಕೊನೆ ಶೋ ನೋಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಸುದೀಪ್‌ ತಂದೆ

    – ದೊಡ್ಮನೆ ವೇದಿಕೆಯಲ್ಲಿ ತಾಯಿ ನೆನೆದು ಕಿಚ್ಚ ಭಾವುಕ

    ‘ಬಿಗ್‌ ಬಾಸ್‌ ಸೀಸನ್‌ 11′ ಕಿಚ್ಚ ಸುದೀಪ್‌ ಅವರ ಕೊನೆ ಶೋ. ಈ ಸೀಸನ್‌ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಮಗನ ಕೊನೆ ಶೋ ನೋಡಲು ಸುದೀಪ್‌ ಅವರ ತಂದೆ ಬಿಗ್‌ ಬಾಸ್‌ ಮನೆಗೆ ಬಂದಿದ್ದು ವಿಶೇಷವಾಗಿತ್ತು.

    ಸುದೀಪ್‌ ಅವರಿಗೆ ಇದು ಕೊನೆಯ ಸೀಸನ್‌ ಆಗಿದ್ದರಿಂದ ಬಿಗ್‌ ಬಾಸ್‌, ಕಿಚ್ಚನ ಬಗ್ಗೆ ಗೌರವಪೂರ್ವಕ ನುಡಿಯನ್ನಾಡಿದರು. ಅಭಿಮಾನಿಗಳ ಅಭಿಮಾನದ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಬಿಗ್‌ ಬಾಸ್‌ ಅಭಿನಂದನೆ ಸಲ್ಲಿಸಿದರು.

    ಈ ಸೀಸನ್‌ ನಮ್ಮೆಲ್ಲರಿಗೂ ಮರೆಯಲಾಗದ ನೆನಪಿನ ಕಳಸ. ಇಲ್ಲಿ ಕಲಿತ ಪಾಠಗಳು ವಿಶೇಷ. ಸುದೀಪ್‌ ಈ ಸೀಸನ್‌ನ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿರುವ ನಿಮಗೆ ಬಿಗ್‌ಬಾಸ್‌ ತಂಡದ ವತಿಯಿಂದ ಒಂದು ಚಿಕ್ಕ ನೆನಪಿನ ಕಾಣಿಕೆಯನ್ನು ಬಿಗ್‌ ಬಾಸ್‌ ನೀಡಿತು.

    ಬಿಗ್‌ ಬಾಸ್‌ ಫಿನಾಲೆ ಮಧ್ಯದಲ್ಲಿ ಎಂಟ್ರಿಯಾದ ಯೋಗರಾಜ್‌ ಭಟ್‌ ಅವರು ಸುದೀಪ್‌ ಅವರ ವ್ಯಕ್ತಿ ಚಿತ್ರಣ, ತಾಯಿ ವಾತ್ಸಲ್ಯ, ತಂದೆ ಪ್ರೀತಿಯ ಬಗ್ಗೆ ತಿಳಿಸಿಕೊಟ್ಟರು. ಒಟ್ಟಾರೆ ಸುದೀಪ್‌ ಅವರಿಗೆ ಇದೊಂದು ಭಾವುಕ ಕ್ಷಣವಾಗಿತ್ತು.

    ಪುತ್ರನ ಕೊನೆ ಸೀಸನ್‌ ನೋಡಲು ಸುದೀಪ್‌ ಅವರ ತಂದೆ ಎಂ.ಸಂಜೀವ್‌ ಅವರು ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದರು. ಪ್ರೇಕ್ಷಕರ ವೇದಿಕೆಯಲ್ಲಿ ಕುಳಿತಿದ್ದರು. ಅವರನ್ನು ಯೋಗರಾಜ್‌ ಭಟ್‌ ಅವರು ಪರಿಚಯಿಸಿದರು. ‘ನಿಮ್ಮ ತಂದೆ ನಮಗೆ ತುಂಬಾ ಆಪ್ತರು’ ಎಂದು ಸುದೀಪ್‌ ಮುಂದೆ ಹೇಳಿದರು. ‘ನೀವು ಬಂದಿದ್ದು ಫಿನಾಲೆ ಗ್ರ್ಯಾಂಡ್‌ಗೆ ಗ್ರ್ಯಾಂಡ್‌ ಆಯ್ತು’ ಎಂದು ಸುದೀಪ್‌ ತಂದೆಗೆ ಯೋಗರಾಜ್‌ ಭಟ್‌ ಧನ್ಯವಾದ ತಿಳಿಸಿದರು.

    ಬಿಗ್‌ ಬಾಸ್‌ ನಿರೂಪಕರಾಗಿ ಸತತ 11 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಸುದೀಪ್‌ ಅವರು ಕೊನೆ ಸೀಸನ್‌ನಲ್ಲಿ ಐದು ನಿಮಿಷ ಪ್ರೇಕ್ಷಕರಾದರು. ಇತ್ತೀಚೆಗೆ ವಿಧಿವಶರಾದ ಸುದೀಪ್‌ ಅವರ ತಾಯಿಯನ್ನು ವೇದಿಕೆಯಲ್ಲಿ ಸ್ಮರಿಸಲಾಯಿತು. ‘ಅಮ್ಮ.. ಅಮ್ಮ..’ ಹಾಡನ್ನು ಪ್ಲೇ ಮಾಡಲಾಯಿತು. ಅಗಲಿದ ತಾಯಿ ನೆನೆದು ಸುದೀಪ್‌ ಹನಿಗಣ್ಣಾದರು. ಫಿನಾಲೆ ಸಂಭ್ರಮದಲ್ಲಿದ್ದ ಬಿಗ್‌ ಬಾಸ್‌ ಮನೆ ಅರೆ ಕ್ಷಣ ಭಾವುಕವಾಯಿತು. ಕೊನೆಗೆ ಸುದೀಪ್‌ ಅವರಿಗೆ ಫ್ಯಾಮಿಲಿ ಇರುವ ಫೋಟೊ ಫ್ರೇಮ್‌ ಗಿಫ್ಟ್‌ ನೀಡಲಾಯಿತು. ವಿಶೇಷ ಕೊಡುಗೆ ನೀಡಿದ ಬಿಗ್‌ ಬಾಸ್‌ ತಂಡಕ್ಕೆ ಕಿಚ್ಚ ಕೃತಜ್ಞತೆ ಸಲ್ಲಿಸಿದರು.

  • ಮಾಜಿ ಪ್ರಧಾನಿಯಿಂದ ಆಸ್ಪತ್ರೆಯಲ್ಲಿಯೇ ಸ್ನೇಹಿತನ ಜೀವನ ಕಥನ ಬಿಡುಗಡೆ

    ಮಾಜಿ ಪ್ರಧಾನಿಯಿಂದ ಆಸ್ಪತ್ರೆಯಲ್ಲಿಯೇ ಸ್ನೇಹಿತನ ಜೀವನ ಕಥನ ಬಿಡುಗಡೆ

    ಮಂಗಳೂರು: ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆತ್ಮೀಯ ಅವಿಭಜಿತ ಜನತಾದಳ ಮುಖಂಡರಾಗಿದ್ದ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕದ್ರಿ ಎಂ.ಸಂಜೀವ ಅವರ ಜೀವನ ಕಥನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ರಾತ್ರಿ ಯುನಿಟಿ ಆಸ್ಪತ್ರೆಯ ವಾರ್ಡಿನಲ್ಲಿ ಬಿಡುಗಡೆ ಮಾಡಿದರು.

    ಮಂಗಳೂರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಪ್ರಧಾನಿ ಎಚ್.ಡಿದೇವೇಗೌಡ್ರು, ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ರಾಜಕೀಯ ಸ್ನೇಹಿತ ಎಂ.ಸಂಜೀವ ಅವರ ಯೋಗ ಕ್ಷೇಮ ವಿಚಾರಿಸಲು ತೆರಳಿದರು. ಇದೇ ಸಂದರ್ಭದಲ್ಲಿ ಎಂ.ಸಂಜೀವ ಅವರ `ಸಂಜೀವನ- ಜನನಾಯಕ ಎಂ.ಸಂಜೀವ ಅವರ ಜೀವನ ಕಥನ’ ಎಂಬ ಕೃತಿಯನ್ನು ಬಿಡುಗಡೆ ಮಾಡಿದರು.

    ಪುಸ್ತಕ ಬಿಡಗಡೆಗೊಳಿಸಿದ ಬಳಿಕ ಮಾತನಾಡಿದ ಮಾಜಿ ಪ್ರಧಾನಿ, ತನಗಾಗಿ ಜೀವನ ನಡೆಸದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಇತರರಿಗಾಗಿ ಕೆಲಸ ಮಾಡಿದವರಿದ್ದರೆ ಅದು ಸಂಜೀವರು. ಸಂಜೀವರಿಗೆ ಸ್ಥಾನಮಾನಗಳು ಸಿಗಲಿ ಸಿಗದೇ ಇರಲಿ, ಅವರು ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕಾಯಕ ಜೀವಿಯಾಗಿದ್ದರು. ಬಡವರು, ಕಾರ್ಮಿಕರು, ಹಿಂದುಳಿದ ವರ್ಗದ ಪರವಾಗ ನಿರಂತರ ಹೋರಾಟ ಮಾಡುತ್ತಲೇ ತಮ್ಮ ಆಯುಷ್ಯದ ಬಹುಪಾಲು ಸವೆಸಿದವರು ಸಂಜೀವ ಅಂತ ಹೇಳಿದರು.

    ಅಷ್ಟೆ ಅಲ್ಲದೆ ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಿಂದ ಸಾಮಾಜಿಕ ಜೀವನ ಪ್ರವೇಶಿಸಿದ ಸಂಜೀವರು ತುರ್ತು ಪರಿಸ್ಥಿತಿಯಲ್ಲಿ ಸಕ್ರಿಯರಾಗಿದ್ದು ಅವರನ್ನು ಹಲವು ಬಾರಿ ಬಂಧಿಸಲಾಗಿತ್ತು. ಅನಂತರ, ಭೂಸುಧಾರಣೆ ಕಾಲದಲ್ಲಿ ಬಡವರಿಗೆ ಭೂಮಿ ದೊರಕಿಸಲು, ಬಾಡಿಗಾರರ ವಿರುದ್ಧ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಕೆಲಸ ಮಾಡಿದ್ದರು. ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆತ್ಮೀಯರಾಗಿದ್ದ ಎಂ.ಸಂಜೀವ ಅವರು ತುರ್ತು ಪರಿಸ್ಥಿತಿ ಕಾಲದಿಂದಲೂ ಜನಪರ ಹೋರಾಟದಲ್ಲಿ ಭಾಗಿಯಾಗಿದ್ದರು. ಯಾವುದೇ ರೀತಿಯ ರಾಜಕೀಯ ಅಧಿಕಾರ ದೊರೆಯದಿದ್ದರೂ ಎಂ.ಸಂಜೀವ ಅವರು ಜನಪರವಾದ ಕಾರ್ಯದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದವರು ಎಂದು ಹೇಳಿದರು.

    ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಸ್ನೇಹಿತ ಎಂ.ಸಂಜೀವ ಅವರಿಗಿಂತ ಕೇವಲ ಹತ್ತು ದಿವಸ ಹಿರಿಯರಾಗಿದ್ದಾರೆ. ಸಂಸ್ಥಾ ಕಾಂಗ್ರೆಸ್, ಜನತಾ ಪಕ್ಷ, ಜನತಾದಳ ಮುಖಂಡರಾಗಿದ್ದ ಎಂ.ಸಂಜೀವ ಅವರು ತಮ್ಮ ಜೀವನವನ್ನು ಪರರಿರಾಗಿ ತ್ಯಾಗ ಮಾಡಿದ ಸಮಾಜ ಸೇವಕ ಮತ್ತು ಬ್ರಹ್ಮಚಾರಿ ಆಗಿದ್ದರು. ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಜನತಾದಳ ಟಿಕೇಟಿನಿಂದ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋಲನುಭವಿಸಿದ್ದರು. ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಹಲವಾರು ವಸತಿ ಬಡಾವಣೆ ಅಭಿವೃದ್ಧಿ ಮಾಡಿದ್ದಲ್ಲದೆ ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದ್ದರು.

    ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾಜಿ ಸಚಿವರಾದ ಅಮರನಾಥ ಶೆಟ್ಟಿ ದಂಪತಿಗಳು, ಯೆನೆಪೋಯ ಮೊಹಮ್ಮದ್ ಕುಂಞ, ಯುನಿಟಿ ಆಸ್ಪತ್ರೆಯ ಹಬೀಬ್ ರೆಹಮಾನ್, ಹಬೀಬ್ ಮೊಹಮ್ಮದ್ ಆಜ್ಮಾಲ್, ಪ್ರಜ್ವಲ್ ರೇವಣ್ಣ, ಜಾತ್ಯತೀತ ಜನತಾದಳ ಮುಖಂಡರಾದ ಮಹಮ್ಮದ್ ಕುಂಞ, ಎಂ.ಬಿ.ಸದಾಶಿವ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಎಂ.ಸಂಜೀವ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews