Tag: M Rudresh

  • ಬೆಂಗ್ಳೂರು ಗ್ರಾಮಾಂತರ ಸೇರಿ ಗ್ರೇಟರ್ ಬೆಂಗ್ಳೂರು ಮಾಡ್ಬೇಕು ಎಂಬೋದು ಸಚಿವರ ತಲೆಯಲ್ಲಿದೆ: ಎಂ ರುದ್ರೇಶ್

    ಬೆಂಗ್ಳೂರು ಗ್ರಾಮಾಂತರ ಸೇರಿ ಗ್ರೇಟರ್ ಬೆಂಗ್ಳೂರು ಮಾಡ್ಬೇಕು ಎಂಬೋದು ಸಚಿವರ ತಲೆಯಲ್ಲಿದೆ: ಎಂ ರುದ್ರೇಶ್

    ರಾಮನಗರ: ಜಿಲ್ಲೆಗೆ ನವ ಬೆಂಗಳೂರು ಮರುನಾಮಕರಣ ವಿಚಾರವಾಗಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಾರಂಭಿಕ ಹಂತದಲ್ಲಿ ಚರ್ಚೆಗಳು ನಡೆದಿದ್ದು, ರಾಮನಗರ ಜಿಲ್ಲೆಯ ಐದು ತಾಲೂಕುಗಳು ಹಾಗೂ ಬೆಂಗಳೂರು ಗ್ರಾಮಾಂತರ ಸೇರಿ ಗ್ರೇಟರ್ ಬೆಂಗಳೂರು ಮಾಡಬೇಕು ಎಂಬುದು ಸಚಿವರ ತಲೆಯಲ್ಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ ರುದ್ರೇಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯಾಗಿ ಘೋಷಣೆಯಾಗಿ 13 ವರ್ಷಗಳೇ ಕಳೆದಿವೆ. ಆದರೆ ಅಭಿವೃದ್ದಿ ಮಾತ್ರ ಶೂನ್ಯವಾಗಿದ್ದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿಕೆ ಶಿವಕುಮಾರ್ ಜನರಿಗೆ ಕಿವಿಯ ಮೇಲೆ ಹೂ ಇಡುವಂತಹ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ – ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಘೋಷಣೆಗೆ ಪ್ರಮುಖ ಪಾತ್ರ ವಹಿಸಿದ್ದು ಸಿಎಂ ಯಡಿಯೂರಪ್ಪ ಎಂದು ತಿಳಿಸಿದರು.

    ನವ ಬೆಂಗಳೂರು ವಿಚಾರವಾಗಿ ಜನರಲ್ಲಿ ಗೊಂದಲ ಮೂಡಿಸುವ ಅವಶ್ಯಕತೆ ಇಲ್ಲ. ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದು, ನಂತರ ರಾಮನಗರ ಜಿಲ್ಲೆಯಾಗಿದೆ. ರಾಮನಗರ ಕೂಗಳತೆ ದೂರದಲ್ಲಿರುವ ಜಿಲ್ಲೆಯಾಗಿದ್ದು 5 ಟೌನ್ ಶಿಫ್ ಗಳು ಬರ್ತಿವೆ. ರಾಮನಗರ ಹೆಸರನ್ನು ಬದಲಾವಣೆ ಮಾಡಿ ನವ ಬೆಂಗಳೂರು ಮಾಡುವ ಯೋಚನೆ ಇಲ್ಲ ಅಂತ ಹೇಳಿದರು.

    ಆದರೆ ನ್ಯೂ ಡೆಲ್ಲಿ, ನ್ಯೂ ಮುಂಬೈ, ನ್ಯೂ ಮಡ್ರಾಸ್ ರೀತಿ ರಾಮನಗರದ ಹೆಸರಿಗೆ ತೊಂದರೆಯಾಗದ ರೀತಿ ಕಾಳಜಿ ವಹಿಸಲಾಗಿದೆ. ಡಿಸಿಎಂ ಅಶ್ವಥ್ ನಾರಾಯಣ್ ರಿಂದ ಮಾರ್ಗಸೂಚಿ ಮಾಡಿ ಪ್ಲಾನ್ ಮಾಡಲಾಗಿದೆ. ಈಗಾಗಲೇ ಜಿಲ್ಲೆಯ ಮುಖಂಡರಿಂದಲೂ ಸಹ ಸಲಹೆ ಪಡೆಯಲಾಗುತ್ತಿದೆ. ಯಾವ ರೀತಿ ಮಾಡಬೇಕು ಎಂಬ ಚರ್ಚೆಯಾಗುತ್ತಿದೆ ಎಂದರು.

    ಅಂತರಾಷ್ಟ್ರೀಯವಾಗಿ ರಾಮನಗರ ಹೆಸರು ಮಾಡುವುದರ ಬಗ್ಗೆ ಚರ್ಚೆಯಾಗುತ್ತಿದ್ದು, ಸಿಎಂ ಹಾಗೂ ಡಿಸಿಎಂ ನಿರ್ಧಾರ ತೆಗೆದುಕೊಂಡಿದ್ದು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನವ ಬೆಂಗಳೂರು ಬಗ್ಗೆ ಚಿಂತನೆ ನಡೆದಿದ್ದು ಜಿಲ್ಲೆ ಅಭಿವೃದ್ಧಿಯ ದೃಷ್ಟಿಯಿಂದ ನವ ಬೆಂಗಳೂರು ಮಾಡಬೇಕೆಂಬ ಚರ್ಚೆ ಆಗುತ್ತಿದ್ದು, ಆಗುತ್ತೆ ಎಂದು ಅವರು ತಿಳಿಸಿದ್ರು.

  • ಸುಖವನ್ನ ಎಲ್ಲೋ ಆಚರಿಸಿ, ದುಃಖದಲ್ಲಿ ಜನರ ಮುಂದೆ ಕಣ್ಣೀರು ಹಾಕೋದಲ್ಲ: ಎಚ್‍ಡಿಕೆಗೆ ಬಿಜೆಪಿ ನಾಯಕ ಟಾಂಗ್

    ಸುಖವನ್ನ ಎಲ್ಲೋ ಆಚರಿಸಿ, ದುಃಖದಲ್ಲಿ ಜನರ ಮುಂದೆ ಕಣ್ಣೀರು ಹಾಕೋದಲ್ಲ: ಎಚ್‍ಡಿಕೆಗೆ ಬಿಜೆಪಿ ನಾಯಕ ಟಾಂಗ್

    ರಾಮನಗರ: ಸುಖವನ್ನ ಎಲ್ಲೋ ಆಚರಿಸಿ, ದುಃಖದಲ್ಲಿ ಜನರ ಮುಂದೆ ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವುದಲ್ಲ. ಗೋವಾದಲ್ಲೋ, ಮಾರಿಷಷ್‍ನಲ್ಲೋ ಕುಳಿತು ಟ್ವೀಟ್ ಮಾಡೋದಲ್ಲ. ಹುಟ್ಟುಹಬ್ಬವನ್ನ ಜನರ ಮಧ್ಯೆಯೇ ಆಚರಿಸಿಕೊಳ್ಳಿ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿಗೆ ಬಿಜೆಪಿಯ ರಾಮನಗರ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಟಾಂಗ್ ನೀಡಿದ್ದಾರೆ.

    ರಾಮನಗರ ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದೀರಿ. ಅಲ್ಲದೇ ಮುಖ್ಯಮಂತ್ರಿಯೂ ಕೂಡಾ ಆಗಿ ಅಧಿಕಾರವನ್ನ ಸ್ವೀಕರಿಸಿ ಆಡಳಿತ ನಡೆಸಿದ್ದೀರಿ. ಆದರೆ ಇದೀಗ ನೀವು ಗೋವಾದಲ್ಲೋ, ಮಾರಿಷಷ್‍ನಲ್ಲೋ ಕುಳಿತು ಜಿಲ್ಲೆಯ ಅಭಿವೃದ್ಧಿಯ ಯೋಜನೆಗಳ ಬಗ್ಗೆ ಟ್ವೀಟ್ ಮಾಡೋದಲ್ಲ. ನೀವು ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದಾದರೆ ಅದನ್ನ ಜನರ ಮಧ್ಯೆಯೇ ಆಚರಿಸಿಕೊಳ್ಳಿ. ಆ ಮೂಲಕ ಕಷ್ಟ-ಸುಖವನ್ನ ಜನನಾಯಕನಾಗಿ ಜನರ ಮಧ್ಯೆಯೇ ಕಳೆಯಿರಿ. ಅದನ್ನ ಬಿಟ್ಟು ಗೋವಾದಲ್ಲಿ ಕುಳಿತು ಟ್ವೀಟ್ ಮಾಡುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡಿ ಘರ್ಷಣೆಗೆ ಅವಕಾಶ ಮಾಡಿಕೊಡಬೇಡಿ ಎಂದು ರುದ್ರೇಶ್ ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಮನಗರ ಅಲ್ಲದೇ ವಿವಿಧ ಜಿಲ್ಲೆಗಳಿಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀಡಿದ್ದ ಯೋಜನೆಗಳ ಅನುದಾನವನ್ನ ತಡೆ ಹಿಡಿದು ಜನರಿಗೆ ಅನ್ಯಾಯ ಮಾಡಬೇಡಿ ಎಂಬ ಟ್ವೀಟ್ ವಿಚಾರವಾಗಿ ರುದ್ರೇಶ್ ಪತ್ರಿಕಾಗೋಷ್ಠಿ ನಡೆಸಿದರು. ಜಿಲ್ಲೆಯಲ್ಲಿ ಕನಕಪುರಕ್ಕೆ ನೀಡಿದ್ದ ಮೆಡಿಕಲ್ ಕಾಲೇಜನ್ನ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದ್ದು ಬಿಟ್ಟರೆ ಯಾವುದೇ ಯೋಜನೆಗಳನ್ನು ಸ್ಥಳಾಂತರಿಸಿಲ್ಲ. ಅಲ್ಲದೇ ಬೇರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಅನುದಾನವನ್ನೂ ಸಹ ಬಿಜೆಪಿ ಸರ್ಕಾರ ತಡೆಹಿಡಿದಿಲ್ಲ ಎಂದು ತಿಳಿಸಿದರು.

    ಜಿಲ್ಲೆಯಿಂದ ತಾವು ಗೆದ್ದಿದ್ದೀರಿ, ನೀವು ಈ ಜಿಲ್ಲೆಯ ಋಣವನ್ನ ತೀರಿಸಬೇಕು. ಜಿಲ್ಲೆಯ ಜನರ ಜೊತೆ ಕಷ್ಟ-ಸುಖ ಎರಡಲ್ಲೂ ಭಾಗಿಯಾಗಬೇಕು. ಆದರೆ ಸುಖವನ್ನ ಎಲ್ಲೋ ಆಚರಿಸಿ, ದುಃಖದಲ್ಲಿ ಈ ಜಿಲ್ಲೆಯ ಜನರ ಮುಂದೆ ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವುದಲ್ಲ. ಕ್ಷೇತ್ರದಲ್ಲಿ ಶಾಸಕರಾಗಿ, ಸಿಎಂ ಆಗಿ ಅಧಿಕಾರ ನಡೆಸಿದ್ದೀರಿ ಅದರ ಋಣವನ್ನ ತೀರಿಸುವಂತಹ ಕೆಲಸವನ್ನ ನೀವು ಮಾಡಿ. ಅದನ್ನ ಬಿಟ್ಟು ನಿಮ್ಮ ಸಂತೋಷದ ಕ್ಷಣಗಳನ್ನು ಬೇರೆಡೆ ಕಳೆಯುವುದು, ದುಃಖದ ಕ್ಷಣಗಳನ್ನು ಕ್ಷೇತ್ರದ ಜನರ ಜೊತೆ ಕಳೆಯುವುದಲ್ಲ ಎಂದು ಹರಿಹಾಯ್ದರು.

    ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅನುದಾನ, ಯೋಜನೆಗಳು ಬಿಡುಗಡೆಯಾಗಿವೆ ಎಂಬುದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮರೆಯಬಾರದು. ಕಾಂಗ್ರೆಸ್ಸಿನೊಂದಿಗೆ ಮಾಡಿಕೊಂಡ ಮೈತ್ರಿ ವೇಳೆ ಕುಮಾರಸ್ವಾಮಿ ಅವರೇ ಸಿಎಂ ಆಗಿದ್ದರೂ ಪ್ರಮುಖ ಯೋಜನೆಗಳು ಜಾರಿಯಾಗಲೇ ಇಲ್ಲ, ಹೀಗಿದ್ದರು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುವುದು ತಪ್ಪು ಎಂದು ಕಿಡಿಕಾರಿದರು.

    ಕಣ್ವ ಜಲಾಶಯದ ಬಳಿ ಮಕ್ಕಳ ಪ್ರಪಂಚ ಸ್ಥಾಪನೆಗೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ 3 ಕೋಟಿ ರೂ. ಬಿಡುಗಡೆ ಮಾಡಿದೆ. ತಮಗಿರುವ ಮಾಹಿತಿ ಪ್ರಕಾರ ಮಂಜೂರಾಗಿರುವ 3 ಕೋಟಿ ರೂ. ಹಣ ಸಾಲುವುದಿಲ್ಲ ಎಂದು ಹೇಳಿದರು. ಅಲ್ಲದೇ ಸದ್ಯಕ್ಕೆ ಮಂಜೂರಾಗಿರುವ 3 ಕೋಟಿ ರೂ. ಹಣವನ್ನು ರಾಮನಗರದ ರಂಗರಾಯರದೊಡ್ಡಿ ಕೆರೆ ಅಭಿವೃದ್ಧಿಗೆ ಬಳಸಿಕೊಳ್ಳಲು ಸಹ ಸರ್ಕಾರ ಉದ್ದೇಶಿಸಿದೆ. ಇಲ್ಲಿ ಬಸವಣ್ಣ ಮತ್ತು ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿ ರಂಗರಾಯರ ದೊಡ್ಡಿ ಕೆರೆಯ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಲು ಸಹ ಉದ್ದೇಶಿಸಲಾಗಿದೆ. ಹೀಗಾಗಿ ಮಂಜೂರಾದ ಹಣವನ್ನು ರದ್ದು ಮಾಡುವುದಿಲ್ಲ ಎಂದರು.

    ಮೇಕೆದಾಟು ಯೋಜನೆಗೆ ಡಿಪಿಆರ್ ನ್ನು(ಸಮಗ್ರ ಯೋಜನಾ ವರದಿ) ಸಮ್ಮಿಶ್ರ ಸರ್ಕಾರ ಸಲ್ಲಿಸದೇ ಕೇಂದ್ರದ ವಿರುದ್ಧ ದೂಷಿಸುತ್ತಿತ್ತು. ಫಿಲಂ ಸಿಟಿಗೆ ಜಾಗವನ್ನು ಗುರುತಿಸದೇ ಯೋಜನೆ ನೀಡಿ ನಂತರ ಅವರೇ ಬೇರೆಡೆ ಸ್ಥಳಾಂತರಿಸಿದರು. ಶ್ರೀ ಬಾಲಗಂಗಾಧರ ಸ್ವಾಮೀಜಿಗಳ ಹುಟ್ಟೂರು ಬಾನಂದೂರು, ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ್ ಸ್ವಾಮೀಜಿಗಳ ಹುಟ್ಟೂರು ವೀರಾಪುರವನ್ನ ಅಭಿವೃದ್ಧಿ ಮಾಡುವ ದೃಷ್ಟಿಯಲ್ಲಿ ಕುಮಾರಸ್ವಾಮಿಯವರದ್ದು ಕೇವಲ ಬಾಯಿ ಮಾತಾಗಿತ್ತು. ಆದರೆ ಬಿಜೆಪಿ ಸರ್ಕಾರ ಈಗಾಗಲೇ ಶಿವಕುಮಾರಸ್ವಾಮೀಜಿಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದೆ. ಅದರ ಜೊತೆಗೆ ವೀರಾಪುರವನ್ನ ಪ್ರವಾಸಿತಾಣವನ್ನಾಗಿ ಮಾಡುವ ಬಗ್ಗೆ ಕ್ರಮ ಕೈಗೊಂಡಿದೆ. ಜೊತೆಗೆ ಬಾನಂದೂರು ಗ್ರಾಮವನ್ನು ಸಹ ಪ್ರವಾಸಿ ತಾಣವನ್ನಾಗಿ ಮಾಡಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ರುದ್ರೇಶ್ ಅವರು ತಿಳಿಸಿದರು.

  • ಜನ ಡಿಕೆ ಸುರೇಶ್‍ರನ್ನ ಸಂಸದ ಅನ್ನಲ್ಲಾ ಗೂಂಡಾ ಎಂಪಿ ಅಂತಾರೆ: ಎಂ.ರುದ್ರೇಶ್

    ಜನ ಡಿಕೆ ಸುರೇಶ್‍ರನ್ನ ಸಂಸದ ಅನ್ನಲ್ಲಾ ಗೂಂಡಾ ಎಂಪಿ ಅಂತಾರೆ: ಎಂ.ರುದ್ರೇಶ್

    ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರನ್ನ ರಾಮನಗರ ಜಿಲ್ಲೆಯ ಜನ ಲೋಕಸಭಾ ಸದಸ್ಯ ಅಂತ ಕರೆಯುವುದಿಲ್ಲ. ಬದಲಾಗಿ ಗೂಂಡಾ ಸಂಸದ, ಗೂಂಡಾ ಮಂತ್ರಿಯ ಸಹೋದರನೆಂದು ಕರೆಯುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ತಿರುಗೇಟು ನೀಡಿದ್ದಾರೆ.

    ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಗೂಂಡಾಗಳನ್ನಿಟ್ಟು ಶಾಸಕರನ್ನು ಕೂರಿಸಿದ್ದಾರೆ ಎಂದು ಇತ್ತೀಚೆಗೆ ದೆಹಲಿಯಲ್ಲಿ ಸಂಸದರು ಆರೋಪಿಸಿದ್ದಾರೆ. ಆದರೆ ಗೂಂಡಾಗಿರಿ ಬಿಜೆಪಿ ಸಂಸ್ಕøತಿಯಲ್ಲಿ ಇಲ್ಲ. ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದಲ್ಲಿ ಗೂಂಡಾಗಿರಿ ನಡೆಯುತ್ತಿದೆ ಎಂದು ದೂರಿದರು.

    ಇತ್ತೀಚೆಗೆ ನಡೆದ ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೈಜಾಕ್ ಮಾಡಿದ್ದು ಗೂಂಡಾಗಿರಿಯಲ್ಲವೇ? ನಮ್ಮ ಅಭ್ಯರ್ಥಿಯನ್ನು ಹಣ ನೀಡಿ ಖರೀದಿಸಿದ್ದಾರೆಯೇ? ಬಳ್ಳಾರಿಯಲ್ಲಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ರಾತ್ರೋರಾತ್ರಿ ಬೆಂಗಳೂರಿಗೆ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಸೇರಿ ಬಿಜೆಪಿ ಅಭ್ಯರ್ಥಿಗೆ ಹಣ ನೀಡಿದ್ದಾರೆ ಎಂದು ಆರೋಪಿಸಿದರು.

    ರಾಮನಗರ ಉಪಚುನಾವಣೆಯಲ್ಲಿ ಆಪರೇಷನ್ ಮಾಡಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್. ನೈತಿಕತೆ ಇರುವ ನೀವು ಹೈಜಾಕ್ ಮಾಡಿದ ಅಭ್ಯರ್ಥಿಗೆ ಎಷ್ಟು ಹಣ ಕೊಟ್ಟಿದ್ದಿರೀ? ರೌಡಿಸಂ ಮಾಡಿ ಹೇಗೆ ಹೆದರಿಸಿದ್ದೀರಿ ಎನ್ನುವುದನ್ನು ತಿಳಿಸಿ ಎಂದು ಗುಡುಗಿದರು.

    ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದಿಂದ ಬಂದ ಯೋಜನೆ, ಅನುದಾನಗಳಲ್ಲಿ ಅವ್ಯವಹಾರ ಮಾಡಿದ್ದಾರೆ. ಟ್ರಸ್ಟ್ ಮೂಲಕ ಮಾಡಿರುವ ಅವ್ಯವಹಾರ ಎಲ್ಲವನ್ನೂ ಸಹ ದಾಖಲೆಗಳ ಸಹಿತವಾಗಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಎಂ.ರುದ್ರೇಶ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಂದ್ರಶೇಖರ್ ಗೆ ಹಣ ನೀಡಿಲ್ಲವೆಂದು ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ- ಸಿಎಂಗೆ ರುದ್ರೇಶ್ ಸವಾಲ್

    ಚಂದ್ರಶೇಖರ್ ಗೆ ಹಣ ನೀಡಿಲ್ಲವೆಂದು ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ- ಸಿಎಂಗೆ ರುದ್ರೇಶ್ ಸವಾಲ್

    – ಡಿಕೆಶಿ ಮಧ್ಯರಾತ್ರಿ ಬಳ್ಳಾರಿಯಿಂದ ಬೆಂಗ್ಳೂರಿಗೆ ಬಂದಿದ್ದು ಏಕೆ?

    ರಾಮನಗರ: ಸಿಎಂ ಅವರು ದೈವ ಇಚ್ಛೆಯಿಂದ ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಗೆ ಹಣ ನೀಡಿ ಡೀಲ್ ಮಾಡಿಲ್ಲ ಎಂದು ಸಿಎಂ ಅವರು ತಾಯಿ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ ಎಂದು ರಾಮನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ ರುದ್ರೇಶ್ ಸವಾಲು ಎಸೆದಿದ್ದಾರೆ.

    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಅವರು ಏಕಾಏಕಿ ಕಾಂಗ್ರೆಸ್ ಸೇರಲು ಡೀಲ್ ನಡೆದಿದೆ ಅಂತ ಆರೋಪಿಸಿದ್ದಾರೆ. ಅಲ್ಲದೇ ಇದೇ ವೇಳೆ ಅಲ್ಲದೇ ಸಚಿವ ಡಿಕೆ ಶಿವಕುಮಾರ್ ಮಧ್ಯರಾತ್ರಿಯಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದು ಏಕೆ ಎಂದು ಪ್ರಶ್ನೆ ಮಾಡಿದರು.

    ಮೈತ್ರಿ ಸರ್ಕಾರ ಹಿಂಬಾಗಿಲಿನ ರಾಜಕೀಯ ಮಾಡಿ ಪಕ್ಷದ ಅಭ್ಯರ್ಥಿಯನ್ನು ಹೈಜಾಕ್ ಮಾಡಿ, ಚುನಾವಣೆಯಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ. ಶನಿವಾರ ನಡೆದ ಮತದಾನದ ಕೊನೆ ಕ್ಷಣದಲ್ಲಿ ಮತದಾನ ಏರಿಕೆಯಾಗಿದೆ. ಅವರ ಹಿಂಬಾಲಕರು ಬಲಾತ್ಕಾರವಾಗಿ ಮತದಾನ ಮಾಡಿಸಿದ್ದಾರೆ. ಇದು ಗೂಂಡಾಗಿರಿಯ ಚುನಾವಣೆ. ನ.6 ರಂದು ಲಭಿಸುವ ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.

    ಉಪಚುನಾವಣೆಯ ಬಳಿಕ ರಾಮನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ನಿರ್ಧರಿಸಿದ್ದಾರೆ ಎಂದು ಶನಿವಾರ ಹೇಳಲಾಗಿದ್ದು, ಆದ್ರೆ ಯಾವುದೇ ಕಾರಣಕ್ಕೂ ನಾನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಎಂ. ರುದ್ರೇಶ್ ಸ್ಪಷ್ಟಪಡಿಸಿದ್ದಾರೆ.

    ರಾಜ್ಯ ನಾಯಕರ ತಪ್ಪು ನಿರ್ಧಾರ:
    ಕ್ಷೇತ್ರ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ರಾಜ್ಯ ನಾಯಕರು ತಪ್ಪು ಮಾಡಿದರು. ನಾವು ಮಾಡಿದ್ದು ತಪ್ಪಲ್ಲ, ನಮ್ಮ ತಪ್ಪಿದ್ದರೆ ಮೊದಲಿಗೆ ಅವರಿಗೆ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಕ್ಷೇತ್ರದಲ್ಲಿ ಪ್ರಭಾವಿಗಳ ಚಕ್ರವ್ಯೂಹದಲ್ಲಿ ನಾವು ಬಂದಿಯಾಗದ್ದೆವು. ಚುನಾವಣೆ ವೇಳೆ ನಡೆದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿ ಚರ್ಚೆ ನಡೆಸಿ ಇನ್ನು 2 ದಿನದಲ್ಲಿ ಬೆಂಗಳೂರಿಗೆ ಆಗಮಿಸಲಿರುವ ಬಿಎಸ್ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

    ರುದ್ರೇಶ್ ಕಣ್ಣೀರು:
    ಕಾರ್ಯಕರ್ತರೊಂದಿನ ಸಭೆಯ ವೇಳೆ ಪಕ್ಷದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿ ರುದ್ರೇಶ್ ಭಾವುಕರಾದರು. ಈ ವೇಳೆ ನಿಮ್ಮ ಜೊತೆ ನಾವಿದ್ದೇವೆ ಕಣ್ಣೀರಿಡಬೇಡಿ ಎಂದ ಕಾರ್ಯಕರ್ತರು ಬೆಂಬಲ ನೀಡಿದರು. ಬಳಿಕ ಕಾರ್ಯಕರ್ತರ ಒತ್ತಾಯದ ಮೇರೆಗೆ ರಾಜೀನಾಮೆ ನಿಡುವ ಸುದ್ದಿಯನ್ನು ಅಲ್ಲಗೆಳೆದರು. ರಾಜ್ಯ ನಾಯಕರು ಜಿಲ್ಲೆಗೆ ಸಹಕಾರ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆಯುತ್ತೇವೆ. ಈ ಚುನಾವಣೆಯಲ್ಲಿ ನಡೆದ ದುಡುಕಿನ ನಿರ್ಧಾರ ಲೋಕಸಭೆಗೆ ಬೇಡ. ಚುನಾವಣೆ ವೇಳೆ ಕ್ಷೇತ್ರ ಎಲ್ಲಾ ಮುಖಂಡರ ಸಲಹೆ ಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಪಕ್ಷದ ನಾಯಕರಿಗೆ ಸಲಹೆ ನೀಡುವುದಾಗಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv