Tag: M.P.Kumaraswamy

  • ದೊಡ್ಡಗೌಡರ ಆಶೀರ್ವಾದ ಪಡೆದ ಎಂಪಿ ಕುಮಾರಸ್ವಾಮಿ

    ದೊಡ್ಡಗೌಡರ ಆಶೀರ್ವಾದ ಪಡೆದ ಎಂಪಿ ಕುಮಾರಸ್ವಾಮಿ

    ಬೆಂಗಳೂರು: ಮೂಡಿಗೆರೆ (Mudigere) ಜೆಡಿಎಸ್ (JDS) ಅಭ್ಯರ್ಥಿ ಎಂ.ಪಿ ಕುಮಾರಸ್ವಾಮಿ (M.P Kumaraswamy) ಮಾಜಿ ಪ್ರಧಾನಿ ದೇವೇಗೌಡ (H.D Deve Gowda) ಅವರನ್ನು ಬುಧವಾರ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಬಿ ನಿಂಗಯ್ಯ ಅವರು ಸ್ವಯಂಪ್ರೇರಿತರಾಗಿ ನಾಮಪತ್ರ ಹಿಂಪಡೆದಿದ್ದಾರೆ. ಅವರೂ ಕೂಡ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಈ ಬಾರಿ ಮತದಾರರು ನನ್ನ ಪರವಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ (Election) ಗೆಲ್ಲುವ ಭರವಸೆ ಇದೆ ಎಂದಿದ್ದಾರೆ. ಇದನ್ನೂ ಓದಿ: ರಕ್ತದಲ್ಲಿ ಬರೆದು ಕೊಡ್ತೀನಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ – ಡಿಕೆಶಿ

    ಜೆಡಿಎಸ್‍ನಲ್ಲಿ ನಿಂತು ಗೆಲ್ತೀರಾ ಎಂಬ ಬಿಜೆಪಿ (BJP) ಮುಖಂಡ ಸಿ.ಟಿ ರವಿ (C.T Ravi) ಹೇಳಿಕೆ ವಿಚಾರವಾಗಿ, ಯಾರನ್ನು ಸೋಲಿಸಬೇಕು, ಯಾರನ್ನು ಗೆಲ್ಲಿಸಬೇಕು ಎಂದು ಜನ ತೀರ್ಮಾನಿಸಲಿದ್ದಾರೆ. ಚುನಾವಣೆಯ ನಂತರ ಎಲ್ಲವೂ ತಿಳಿಯಲಿದೆ ಎಂದು ಕುಟುಕಿದ್ದಾರೆ.

    ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಸಚಿವ ಸೋಮಣ್ಣ ಆಮಿಷ ಒಡ್ಡಿದ ವಿಚಾರವಾಗಿ, ಸೋಮಣ್ಣ ದೊಡ್ಡವರು. ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ ಅವರು ಈ ಬಗ್ಗೆ ಮಾತಾಡುತ್ತಾರೆ ಎಂದಿದ್ದಾರೆ.

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D Kumaraswamy) ಈಗಾಗಲೇ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ದೇವೇಗೌಡರು ಪ್ರಚಾರಕ್ಕೆ ಬರಲಿದ್ದಾರೆ. ಈ ಬಾರಿ ಮತದಾರರಲ್ಲಿ ಜೆಡಿಎಸ್ ಪರ ಒಲವಿದೆ ಎಂದಿದ್ದಾರೆ. ಇದನ್ನೂ ಓದಿ: ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿ ರುಚಿಗೆ ಫಿದಾ ಆದ ಪ್ರಿಯಾಂಕಾ ಗಾಂಧಿ

  • ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ

    ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ

    ಚಿಕ್ಕಮಗಳೂರು: ನಿನ್ನೆ ರಾತ್ರಿ ಬಟ್ಟೆ ಹರಿದ ಸ್ಥಿತಿಯಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ (M.P Kumaraswamy) ತಮ್ಮ ಮೇಲೆ ರಾಜಕೀಯ ಪ್ರೇರಿತ ದಾಳಿ ನಡೆದಿದೆ, ಕಳ್ಳ ಹುಚ್ಚು ನಾಯಿಯಂತೆ ನನ್ನನು ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದ್ರು ಎಂದು ಆರೋಪಿಸಿದ್ರು. ಆದ್ರೆ ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಪೊಲೀಸರು ಘಟನಾ ಸ್ಥಳದಿಂದ ಶಾಸಕರನ್ನು ಕರೆದೊಯ್ಯುವ ವೇಳೆ, ಅವರ ಮೈಮೇಲಿನ ಬಟ್ಟೆಗಳು ಹರಿದ ಸ್ಥಿತಿಯಲ್ಲಿ ಕಂಡುಬಂದಿರಲಿಲ್ಲ. ಈ ಬಗ್ಗೆ ಇಂದು ಸ್ಪಷ್ಟನೆ ನೀಡಿದ ಎಂ.ಪಿ ಕುಮಾರಸ್ವಾಮಿ, ಆಗ ವೈಟ್ ಬನಿಯನ್ ಇತ್ತು ಅದಕ್ಕೆ ಹರಿದಿದ್ದು ಸರಿಯಾಗಿ ಕ್ಯಾಮೆರಾದಲ್ಲಿ ದಾಖಲಾಗಿಲ್ಲ ಅಂದಿದ್ದಾರೆ. ಆದ್ರೆ, ಶರ್ಟ್ ಹರಿದಿರೋ ವೀಡಿಯೋದಲ್ಲಿಯೂ ಅವರು ಬನಿಯನ್ ಧರಿಸಿರೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದ್ರೂ, ಎಂಪಿ ಕುಮಾರಸ್ವಾಮಿ, ನನ್ನನ್ನು ಚಪ್ಪಲಿಯಿಂದ ಹೊಡೆದ್ರು. ಕಳ್ಳ ಹುಚ್ಚುನಾಯಿಯಂತೆ ನನ್ನನ್ನು ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದ್ರು. ಇದು ಆನೆ ದಾಳಿಯಲ್ಲ. ರಾಜಕೀಯ ದಾಳಿ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    ನನಗೆ ಚಪ್ಪಲಿಯಲ್ಲಿ ಹೊಡೆದರು, ಎಲ್ಲರ ಕೈನಲ್ಲೂ ದೊಣ್ಣೆ ಇತ್ತು ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿದರು ನಾನೇ ಓಡಿ ಬಂದು ಕಾರಲ್ಲಿ ಕೂತೆ, ಜೀಪಿನ ಮೇಲೆ ಕಲ್ಲು ಹೊಡೆದರು. ಇದು ಆನೆ ಪ್ರಕರಣ ಅಲ್ಲ, ರಾಜಕೀಯ ದಾಳಿ. ಬನಿಯನ್ ಇತ್ತು ಬಟ್ಟೆ ಹರಿದದ್ದು ಕಾಣಲಿಲ್ಲ. ಬನಿಯನ್ ತೆಗೆದರೆ ಹರಿದದ್ದು ಕಾಣುತ್ತೆ. ಬಟ್ಟೆ ನೂರು ತರ್ತೀನಿ, ಕಣ್ಣು, ಕೈ-ಕಾಲು ಹೋಗಿದ್ರೆ? ಬರೀ ನನಗೆ ಮಾತ್ರವಲ್ಲ, ಪೊಲೀಸರಿಗೂ ಹೊಡೆದಿದ್ದಾರೆ. ರಾಜಕೀಯವಾಗಿ ಚುನಾವಣೆಗೆ ನಿಲ್ಲಬಾರದು ಅಂತ ವ್ಯವಸ್ಥಿತ ಹಲ್ಲೆ. ಚುನಾವಣೆಗೆ ನಿಲ್ಲಲೇಬಾರದು ಎಂದು ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ವರಿಷ್ಠರಿಗೆ ದೂರು ಕೊಡೋದಾಗಿ ಹೇಳಿದ್ದಾರೆ. ಆದ್ರೆ ತಮ್ಮ ಮೇಲಿನ ದಾಳಿ ಬಗ್ಗೆ ಎಂ.ಪಿ ಕುಮಾರಸ್ವಾಮಿ ಪೊಲೀಸರಿಗೆ ದೂರು ಕೂಡ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಕಾಫಿನಾಡಿನ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಯುವಕನ ವಿರುದ್ಧ ಯುವತಿ ದೂರು

    Live Tv
    [brid partner=56869869 player=32851 video=960834 autoplay=true]

  • ಚೆಕ್ ಬೌನ್ಸ್ ಪ್ರಕರಣ – ಶಾಸಕ ಎಂ.ಪಿ ಕುಮಾರಸ್ವಾಮಿಗೆ ಜಾಮೀನು ರಹಿತ ವಾರೆಂಟ್

    ಚೆಕ್ ಬೌನ್ಸ್ ಪ್ರಕರಣ – ಶಾಸಕ ಎಂ.ಪಿ ಕುಮಾರಸ್ವಾಮಿಗೆ ಜಾಮೀನು ರಹಿತ ವಾರೆಂಟ್

    ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (M.P. Kumaraswamy) ವಿರುದ್ಧ ಜಾಮೀನು (Bail) ರಹಿತ ವಾರೆಂಟ್ (Warrant) ಜಾರಿ ಆಗಿದೆ.

    ಚೆಕ್ ಬೌನ್ಸ್ ಪ್ರಕರಣದ (Check Bounce Case) ವಿಚಾರಣೆಗೆ ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದ ಕುಮಾರಸ್ವಾಮಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ 42ನೇ ಎಸಿಎಂಎಂ ಕೋರ್ಟ್ (ACMM Court) ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಇದನ್ನೂ ಓದಿ: CET ಬಿಕ್ಕಟ್ಟು ಶಮನ – ಸರ್ಕಾರದ ಸಮನ್ವಯ ಸೂತ್ರಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್

    ಈ ಬಗ್ಗೆ ಕೋರ್ಟ್‍ಗೆ ಪತ್ರಿಕಾ ವರದಿಯನ್ನು ದೂರುದಾರ ಹೂವಪ್ಪಗೌಡ ಸಲ್ಲಿಸಿದ್ದರು. ಹೀಗಾಗಿ ಹಾಜರಾತಿಯಿಂದ ವಿನಾಯಿತಿ ನೀಡಲು ಕೋರ್ಟ್ ನಕಾರ ಮಾಡಿದೆ. ಅಕ್ಟೋಬರ್ 10ರಂದು ಎಂ.ಪಿ. ಕುಮಾರಸ್ವಾಮಿ ಹಾಜರು ಪಡಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ದೆಹಲಿ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ನೇಮಕ

    Live Tv
    [brid partner=56869869 player=32851 video=960834 autoplay=true]

  • ಏಳು ದಶಕದ ಹಳ್ಳದ ಬದುಕಿಗೆ ಮುಕ್ತಿ – ಪಬ್ಲಿಕ್ ಟಿವಿಗೆ ಋಣಿ ಎಂದ ಮಲೆನಾಡಿಗರು

    ಏಳು ದಶಕದ ಹಳ್ಳದ ಬದುಕಿಗೆ ಮುಕ್ತಿ – ಪಬ್ಲಿಕ್ ಟಿವಿಗೆ ಋಣಿ ಎಂದ ಮಲೆನಾಡಿಗರು

    ಚಿಕ್ಕಮಗಳೂರು: ಸ್ವಾತಂತ್ರ್ಯ ಬಂದಾಗಿನಿಂದಲೂ ಓಡಾಡೋದಕ್ಕೆ ರಸ್ತೆ ಇಲ್ಲದೆ ಹಳ್ಳದಲ್ಲೇ ಓಡಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಐದಳ್ಳಿ ಗ್ರಾಮದಲ್ಲಿ ಪಬ್ಲಿಕ್ ಟಿವಿಯ ವರದಿಯಿಂದ ಸೇತುವೆ ನಿರ್ಮಾಣವಾಗುತ್ತಿದ್ದ ಹಿನ್ನೆಲೆ ಮಲೆನಾಡಿಗರು ವಾಹಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಸೇರಿದಂತೆ ದುರ್ಗಾ, ಬೆಟ್ಟದಹಳ್ಳಿ, ಗಡಬನಹಳ್ಳಿ, ನರೂಡಿ ಗ್ರಾಮಕ್ಕೆ ಸೂಕ್ತವಾದ ರಸ್ತೆ ಇರಲಿಲ್ಲ. ರಸ್ತೆ ಇದ್ದರೂ ಅರ್ಧ-ಒಂದು ಕಿ.ಮೀ. ದೂರದ ರಾಜ್ಯ ಹೆದ್ದಾರಿ ರಸ್ತೆಗೆ ಸುಮಾರು ಐದಾರು ಕಿ.ಮೀ. ಸುತ್ತಿಬಳಸಿ ಬರಬೇಕಿತ್ತು. ಹಾಗಾಗಿ, ಈ ಗ್ರಾಮಗಳ ಜನರು ಕಣತಿ ಸಮೀಪದ ಆನೆಬಿದ್ದ ಹಳ್ಳವನ್ನೇ ಆಶ್ರಯಿಸಿಕೊಂಡಿದ್ದರು. ಮಳೆಗಾಲದಲ್ಲಿ ಮಕ್ಕಳು ಶಾಲಾ-ಕಾಲೇಜಿಗೆ ಹೋಗಲು ಪರದಾಡುತ್ತಿದ್ದರು. ಮಳೆಗಾಲದಲ್ಲಿ ಮಕ್ಕಳು ತಿಂಗಳುಗಟ್ಟಲೇ ಶಾಲೆಗೆ ಹೋಗುತ್ತಿರಲಿಲ್ಲ. ಮಳೆಗಾದಲ್ಲಿ ಹಳ್ಳ ಕಡಿಮೆ ಇದ್ದರೆ ದೊಡ್ಡವರು ಬರುವವರೆಗೂ ಮಕ್ಕಳು ದಡದಲ್ಲಿ ನಿಂತು ಕಾಯುತ್ತಿದ್ದರು. ಇದನ್ನೂ ಓದಿ: ‘ತವಾ ಮಸಾಲಾ ಬೆಂಡೆಕಾಯಿ’ ಮಾಡುವ ಸೂಪರ್ ರೆಸಿಪಿ 

    ನೀರಿನ ಪ್ರಮಾಣ ಸ್ವಲ್ಪ ಕಡಿಮೆ ಇದ್ದರೆ ಮಕ್ಕಳೇ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಹಳ್ಳ ದಾಟುತ್ತಿದ್ದರು. ಕೆಲ ಯುವಕರು ನೀರಿನ ಅಬ್ಬರ ಹೆಚ್ಚಾಗಿದ್ದಾಗಲೂ ದಾಟಲು ಹೋಗಿ ಕೊಚ್ಚಿ ಹೋಗಿ ಮರದ ಟೊಂಗೆ, ಕಲ್ಲು ಹಿಡಿದು ಬದುಕಿದ್ದಾರೆ. ಕೆಲವರು ಈಜಿ ದಡ ಸೇರಿದ್ದಾರೆ. ಬೆಳಗ್ಗೆ-ಮಧ್ಯಾಹ್ನ-ರಾತ್ರಿ ಎನ್ನುವಂತಿಲ್ಲ. ಹಳ್ಳಿಯಲ್ಲಿ ಯಾರದ್ದಾದರೂ ಆರೋಗ್ಯ ಹದಗೆಟ್ಟರೆ ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಜೋಳಿಗೆ ಕಟ್ಟಿಕೊಂಡು ಹೊತ್ತುಕೊಂಡು ಬರಬೇಕಿತ್ತು. ಇಲ್ಲಿನ ಜನ ಕಳೆದ ಎರಡು, ಮೂರು ದಶಕಗಳಿಂದ ಆನೆಬಿದ್ದ ಹಳ್ಳಕ್ಕೆ ಒಂದು ಸೇತುವೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಹಾಗೂ ಜನನಾಯಕರು ಹಳ್ಳಿಗರಿಗೆ ಅಂಗೈಯಲ್ಲಿ ಆಕಾಶ ತೋರಿಸಿದ್ದೇ ಹೆಚ್ಚು. ಇದನ್ನೂ ಓದಿ: ದಿನಗೂಲಿ ಮಕ್ಕಳಿಗಾಗಿ ಬಿಬಿಎಂಪಿಯಿಂದ ರಾತ್ರಿ ಸ್ಕೂಲ್

    ಆಧುನಿಕ ಪ್ರಪಂಚದಲ್ಲೂ ಇಲ್ಲಿನ ಜನ ಅನಾಗರಿಕರಂತೆ ಬದುಕುತ್ತಿದ್ದರು. ಈ ಗ್ರಾಮಗಳ ಸಮಸ್ಯೆಗಳ ಬಗ್ಗೆ ಪಬ್ಲಿಕ್ ಟಿವಿ ಸವಿಸ್ತಾರವಾಗಿ ಸುದ್ದಿ ಮಾಡಿತ್ತು. ಪಬ್ಲಿಕ್ ಟಿವಿಯ ಸುದ್ದಿ ನೋಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಳ್ಳಿಗೆ ಭೇಟಿ ನೀಡಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಇದೀಗ ಸರ್ಕಾರದಿಂದ 90 ಲಕ್ಷ ಹಣ ಬಿಡುಗಡೆ ಮಾಡಿಸಿ ಕೆಲಸ ಕೂಡ ಆರಂಭವಾಗಿದೆ. ಈಗಾಗಲೇ ಸುಮಾರು ಐದಾರು ಅಡಿಯಷ್ಟು ಪಿಲ್ಲರ್ ನಿರ್ಮಾಣವಾಗಿದ್ದು ಒಂದೂವರೆ ಅಥವಾ ಎರಡು ತಿಂಗಳಲ್ಲಿ ಈ ಗ್ರಾಮಗಳಿಗೆ ಸೇತುವೆ ನಿರ್ಮಾಣವಾಗಲಿದೆ. ಕಳೆದ ಏಳೆಂಟು ದಶಕದ ಹಳ್ಳದ ಬದುಕಿಗೆ ಮುಕ್ತಿ ಸಿಗಲಿದೆ. ಹಾಗಾಗಿ, ಮಲೆನಾಡಿಗರು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಪಬ್ಲಿಕ್ ಟಿವಿಗೆ ನಾವು ಋಣಿ ಎಂದಿದ್ದಾರೆ.

  • ಬದುಕು ಕೊಡೋಕಾದ್ರೆ ಬನ್ನಿ, ಆಶ್ವಾಸನೆ ನೀಡೋಕಾದ್ರೆ ಬರಲೇಬೇಡಿ : ಸಚಿವ, ಶಾಸಕರಿಗೆ ಮಲೆನಾಡಿಗರ ಕ್ಲಾಸ್

    ಬದುಕು ಕೊಡೋಕಾದ್ರೆ ಬನ್ನಿ, ಆಶ್ವಾಸನೆ ನೀಡೋಕಾದ್ರೆ ಬರಲೇಬೇಡಿ : ಸಚಿವ, ಶಾಸಕರಿಗೆ ಮಲೆನಾಡಿಗರ ಕ್ಲಾಸ್

    ಚಿಕ್ಕಮಗಳೂರು: ಬದುಕು ಕಟ್ಟಿಕೊಡಲು ಬರುವುದಾದರೆ ಬನ್ನಿ. ಮತ್ತದೇ ಭರವಸೆ, ಆಶ್ವಾಸನೆ ನೀಡುವುದಾದರೆ ಬರಲೇಬೇಡಿ ಎಂದು ಸಚಿವ ಎಸ್.ಅಂಗಾರ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ.

    2019ರ ಮಳೆ ಮುಗಿದು ಈಗ ಮೂರನೇ ಮಳೆಗಾಲ ಬಂದಿದೆ. ಸರ್ಕಾರ ಹಾಗೂ ಅಧಿಕಾರಿಗಳು ಅಂದು ಕೊಟ್ಟ ಆಶ್ವಾಸನೆಗಳೇ ಇಂದಿಗೂ ಒಂದೂ ಈಡೇರಿಲ್ಲ. ಈಗ ಮತ್ತೆ ಏಕೆ ಬಂದಿದ್ದೀರಾ? ನಾವು ಸತ್ತಿದ್ದೀವಾ ಅಥವಾ ಬದುಕಿದ್ದೀವಾ ಎಂದು ನೋಡಲು ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಕುಂಭದ್ರೋಣ ಮಳೆಯ ಅಬ್ಬರಕ್ಕೆ ಮಲೆಮನೆ ಗ್ರಾಮಸ್ಥರ ಬದುಕು ಬೀದಿಗೆ ಬಂದಿತ್ತು. ಸುಮಾರು ಆರು ಮನೆಗಳು ಸಂಪೂರ್ಣ ನೆಲಸಮವಾಗಿದ್ದವು. ಸುಮಾರು 40 ಎಕರೆಗೂ ಅಧಿಕ ಭೂಮಿ ಕೊಚ್ಚಿ ಹೋಗಿತ್ತು. ಆರು ಕುಟುಂಬಗಳ ಮನೆ ಸಂಪೂರ್ಣ ನೆಲಸಮವಾಗಿ ಮನೆಯ ಒಂದು ಚಮಚ ಕೂಡ ಕೈಗೆ ಸಿಗದಂತೆ ಐದಾರು ಅಡಿ ಗುಡ್ಡದ ಮಣ್ಣು ಮನೆ ಸಾಮಾಗ್ರಿಗಳ ಮೇಲೆ ಬಿದ್ದಿತ್ತು. ಜನ ಆ ಗುಡುಗು-ಸಿಡಿಲು-ಮಳೆಯಿಂದ ಬದುಕು ಉಳಿಸಿಕೊಳ್ಳುವುದೇ ಸವಾಲಾಗಿತ್ತು. ಉಟ್ಟ ಬಟ್ಟೆಯಲ್ಲಿ ಓಡಿಬಂದು ಬದುಕು ಉಳಿಸಿಕೊಂಡಿದ್ದರು.

    ಅಂದಿನಿಂದ ಹೊಸ ಬದುಕಿಗಾಗಿ ಹೋರಾಡುತ್ತಲೇ ಇದ್ದಾರೆ. ಅಂದು ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಐದೇ ನಿಮಿಷಕ್ಕೆ ಪ್ರವಾಸ ಮುಗಿಸಿದ್ದರು. ಆ ಐದು ನಿಮಿಷದಲ್ಲೇ ನಿಮಗೆ ಹೊಸ ಬದುಕು ಕಟ್ಟಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಆರ್.ಅಶೋಕ್, ಮಾಧುಸ್ವಾಮಿಯೂ ಸ್ಥಳಕ್ಕೆ ಭೇಟಿ ನೀಡಿ ಹೊಸ ಬದುಕು ಕಟ್ಟಿಕೊಡುವ ಭರವಸೆ ನೀಡಿದ್ದರು. ಅಂದು ಸಿಎಂ, ಸಚಿವರು ಹೇಳಿದ ಒಂದೇ ಒಂದು ಭರವಸೆ ಕೂಡ ಈಡೇರಿಲ್ಲ. ಮನೆ ಕೊಡ್ತೀವಿ ಅಂದ ಸರ್ಕಾರ ಇಂದಿಗೂ ಕೊಟ್ಟಿಲ್ಲ. ಒಂದು ಲಕ್ಷ ಹಣ ಕೊಟ್ಟಿದೆ. ಮನೆ ಕಟ್ಟಿಕೊಳ್ಳಲು ಜಾಗ ತೋರಿಸಿಲ್ಲ. ಬಾಡಿಗೆ ಮನೆಯಲ್ಲಿ ಇರಿ ಎಂದ ಸರ್ಕಾರ ಮೂರು ವರ್ಷಕ್ಕೆ 25 ಸಾವಿರ ಹಣ ನೀಡಿ ಕೈತೊಳೆದುಕೊಂಡಿದೆ. ಕೊಚ್ಚಿ ಹೋದ ಜಮೀನು ಇಲ್ಲ. ಮನೆ ಇಲ್ಲ. ಹಣವೂ ಇಲ್ಲ. ಬದುಕೂ ಇಲ್ಲದಂತೆ ಮಲೆಮನೆ ಗ್ರಾಮಸ್ಥರು ಅತಂತ್ರರಾಗಿದ್ದಾರೆ.

    ಬದುಕಿಗಾಗಿ ಓಡಾಡದ ಕಚೇರಿ ಉಳಿದಿಲ್ಲ. ಮಾಡದ ಮನವಿಗಳಿಲ್ಲ. ಹಾಗಾಗಿ ಇಂದು ಸಚಿವರು ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರ ತಾಳ್ಮೆಯ ಸಹನೆಯ ಕಟ್ಟೆ ಒಡೆದಿತ್ತು. ಸಚಿವರು, ಅಧಿಕಾರಿಗಳನ್ನ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಸಚಿವರು ಆಗ ಬೇರೆ, ಈಗ ಬೇರೆ. ನಿಮ್ಮ ಸಮಸ್ಯೆಗೆ ಶೀಘ್ರವೇ ಪರಿಹಾರ ನೀಡುತ್ತೇವೆ ಎಂದಿರೋದು ಸ್ಥಳೀಯರಿಗೆ ಹೊಸ ಆಸೆ ಮೂಡಿದೆ. ಸರ್ಕಾರ, ಸಚಿವರು ಏನು ಮಾಡುತ್ತಾರೋ ಕಾದುನೋಡಬೇಕು.

  • ಬಿಎಸ್‍ವೈ ಬಿಟ್ಟರೆ ಬಿಜೆಪಿಯಲ್ಲಿ ಸ್ಟಾರ್ ಲೀಡರ್ ಯಾರಿದ್ದಾರೆ : ಎಂ.ಪಿ. ಕುಮಾರಸ್ವಾಮಿ

    ಬಿಎಸ್‍ವೈ ಬಿಟ್ಟರೆ ಬಿಜೆಪಿಯಲ್ಲಿ ಸ್ಟಾರ್ ಲೀಡರ್ ಯಾರಿದ್ದಾರೆ : ಎಂ.ಪಿ. ಕುಮಾರಸ್ವಾಮಿ

    ಚಿಕ್ಕಮಗಳೂರು: ಬಿಜೆಪಿ ಪಕ್ಷದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನ ಬಿಟ್ಟು ಬೇರೆ ಯಾರು ಸ್ಟಾರ್ ಲೀಡರ್ ಇದ್ದಾರೆ ತೋರಿಸಲಿ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಎಸ್‍ವೈ ಪರ ಬ್ಯಾಟ್ ಬೀಸಿದ್ದಾರೆ.

    ನಾಯಕತ್ವ ಬದಲಾವಣೆ ಕುರಿತಂತೆ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಅವರಿಂದ ಅಧಿಕಾರ ಹಾಗೂ ಬೋರ್ಡ್ ಪಡೆದವರು ಮಾತನಾಡಬೇಕು. ಯಾಕೆ ಮಾತನಾಡುತ್ತಿಲ್ಲ ಗೊತ್ತಿಲ್ಲ ಎಂದರು. ನಾಯಕತ್ವ ಬದಲಾವಣೆ ಚರ್ಚೆ ಈಗ ಅಪ್ರಸ್ತುತ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ನಮ್ಮ ವಿರೋಧವಿದೆ ಎಂದಿದ್ದಾರೆ.

    ನಾನು ಕೇಂದ್ರಕ್ಕೆ ನಿಯೋಗ ಹೋಗಲು ರೆಡಿ ಇದ್ದೇನೆ. ನಾಯಕತ್ವ ಬದಲಾವಣೆಗೆ ನಮ್ಮ ವಿರೋಧವಿದೆ. ಪಕ್ಷದ ವರಿಷ್ಠರಿಗೆ ಯಡಿಯೂರಪ್ಪನವರನ್ನೇ ಮುಂದುವರೆಸಲು ಮನವಿ ಮಾಡುತ್ತೇವೆ. ನಾಯಕತ್ವ ಬದಲಾವಣೆ ದೊಡ್ಡ ವಿಚಾರವಲ್ಲ. ಆದರೆ ತೋರಿಸಲು ಬೇರೆ ಸ್ಟಾರ್ ಲೀಡರ್ ಯಾರಿದ್ದಾರೆ ಹೇಳಿದರು.

    ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬರಲು ಯಡಿಯೂರಪ್ಪನವರೇ ಕಾರಣ. ಹಗಲಿರುಳು ಕಷ್ಟಪಡುತ್ತಿದ್ದಾರೆ ಈಗ ನಾಯಕತ್ವ ಬದಲಾವಣೆ ಬೇಕಾ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದಲ್ಲಿ ಎರಡನೇ ಬಾರಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರೇ ಕಾರಣ. ಅವರ ನಾಯಕತ್ವ ಬದಲಾವಣೆಗೆ ನಮ್ಮ ವಿರೋಧವಿದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಬಿಎಸ್‍ವೈ ನಿಜವಾದ ಮಾನಸ ಪುತ್ರ ನಾನೇ: ಎಂ.ಪಿ.ಕುಮಾರಸ್ವಾಮಿ

    ಬಿಎಸ್‍ವೈ ನಿಜವಾದ ಮಾನಸ ಪುತ್ರ ನಾನೇ: ಎಂ.ಪಿ.ಕುಮಾರಸ್ವಾಮಿ

    – ಸಚಿವ ಸ್ಥಾನದ ಆಕಾಂಕ್ಷೆ ಬಿಚ್ಚಿಟ್ಟ ಶಾಸಕರು

    ಚಿಕ್ಕಮಗಳೂರು: ನಿನ್ನೆ ನನ್ನ ಕೆಲ ಸ್ನೇಹಿತರು ತಾವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾನಸ ಪುತ್ರರು ಎಂದು ಹೇಳಿದ್ದಾರೆ. ಆದರೆ ಅವರೆಲ್ಲಾ ಬಸವಣ್ಣನ ಅನುಯಾಯಿಗಳು. ಸಿಎಂ ಯಡಿಯೂರಪ್ಪ ಅವರ ನಿಜವಾದ ಮಾನಸ ಪುತ್ರ ಅಂದ್ರೆ ಅದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಎಂದು ಸ್ವತಃ ಶಾಸಕರೇ ಹೇಳಿದ್ದಾರೆ.

    ಉಪಚುನಾವಣೆ ಫಲಿತಾಂಶದ ಬಳಿಕ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ನಾನೆಂದೂ ಸಿಎಂ ಯಡಿಯೂರಪ್ಪನವರ ಮಾತನ್ನು ಮೀರಿಲ್ಲ. ಅವರು ಹಾಕಿದ ಗೆರೆಯನ್ನು ದಾಟಿಲ್ಲ. ಅವರ ಮನಸಿನಲ್ಲಿ ನಾನಿದ್ದೇನೆ, ನನ್ನನ್ನ ಸಚಿವನನ್ನಾಗಿ ಮಾಡಿ ಅಂತ ಕೇಳಿಕೊಳ್ಳುತ್ತೇನೆ. ನನ್ನನ್ನು ಮಂತ್ರಿ ಮಾಡುವ ವಿಶ್ವಾಸವಿದೆ ಎಂದು ಶಾಸಕ ಕುಮಾರಸ್ವಾಮಿ ಅವರು ಸಚಿವ ಸ್ಥಾನದ ಆಕಾಂಕ್ಷೆ ಹೊರ ಹಾಕಿದ್ದಾರೆ.

    ಪ್ರಮಾಣ ವಚನಕ್ಕೆ ಹೋಗಿರಲಿಲ್ಲ:
    ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ರಚಿಸಿದಾಗ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೋಗಿರಲಿಲ್ಲ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಶಾಸಕರು, ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ನನಗಲ್ಲದಿದ್ದರೂ ನಮ್ಮ ಸಮುದಾಯದ ಬೇರೆ ಯಾರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು ಎಂದು ಅಸಮಾಧಾನ ಹೊರಹಾಕಿದರು.

    ಸಚಿವ ಸ್ಥಾನ ಕೈತಪ್ಪಿದ್ದರಿಂದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಇಲ್ಲ ಮಳೆಯಿಂದ ಕ್ಷೇತ್ರದ ಜನ ಸಂಕಷ್ಟಕ್ಕೀಡಾಗಿದ್ದರು. ಅವರ ಕಷ್ಟ-ಸುಖ ಕೇಳಲು ಕ್ಷೇತ್ರದಲ್ಲಿದ್ದೆ. ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ನನಗೆ ಮಂತ್ರಿಗಿರಿ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

  • ಸಹಾಯ ಕೇಳಿದ ಸಂತ್ರಸ್ತರ ಮೇಲೆ ಎಂ.ಪಿ ಕುಮಾರಸ್ವಾಮಿ ದರ್ಪ

    ಸಹಾಯ ಕೇಳಿದ ಸಂತ್ರಸ್ತರ ಮೇಲೆ ಎಂ.ಪಿ ಕುಮಾರಸ್ವಾಮಿ ದರ್ಪ

    ಚಿಕ್ಕಮಗಳೂರು: ಸಹಾಯ ಕೇಳಿದ ಸಂತ್ರಸ್ತರ ಮೇಲೆ ದರ್ಪ ಮೆರೆದಿರುವ ಆರೋಪವೊಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಕೇಳಿ ಬಂದಿದೆ.

    ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾ ಮಳೆ ಭಾರೀ ಅವಾಂತರವನ್ನು ಸೃಷ್ಟಿಸಿದೆ. ಈ ನಡುವೆ ಸಹಾಯ ಕೇಳಿದ ಪ್ರವಾಹ ಸಂತ್ರಸ್ತರ ಹರಿಹಾಯ್ದಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮುದುಗುಂಡಿ ಗ್ರಾಮ ಮಳೆಗೆ ಜಲಾವೃತಗೊಂಡಿದೆ. ಹೀಗಾಗಿ ಅಲ್ಲಿನ ಗ್ರಾಮಸ್ಥರು ತಮ್ಮ ಸಹಾಯಕ್ಕೆ ಬನ್ನಿ ಎಂದಿದ್ದಕ್ಕೆ ಶಾಸಕ ಗರಂ ಆಗಿದ್ದಾರೆ.

    ಮದುಗುಂಡಿಯ ಯುವಕನೊಬ್ಬ ಪ್ರವಾಹಕ್ಕೆ ಮನೆ ಕೊಚ್ಚಿ ಹೋಗಿದೆ, ಸಹಾಯ ಮಾಡಿ ಎಂದು ಶಾಸಕರಿಗೆ ಕರೆ ಮಾಡಿದ್ದನು. ಈ ವೇಳೆ ಸಿಟ್ಟಿಗೆದ್ದ ಶಾಸಕರು ಅವಾಚ್ಯ ಶಬ್ದಗಳಿಂದ ಯುವಕನಿಗೆ ನಿಂದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮದುಗುಂಡಿಯಲ್ಲಿ ಮಳೆಗೆ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿದ್ದು, ಜನರು ನಿರಾಶ್ರಿತರಾಗಿದ್ದಾರೆ. ಮರಸೂಣಿಗೆ ಹೊಳೆ ಅಬ್ಬರ ಹಾಗೂ ಗುಡ್ಡ ಕುಸಿತದಿಂದ ಜನರು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಜನರು ಕರೆ ಮಾಡಿ ಶಾಸಕರೇ ಸಹಾಯ ಮಾಡಿ ಅಂದಿದ್ದಕ್ಕೆ, ಡಿಸಿ, ಎಸ್ಪಿನೇ ಬರೋಕಾಗ್ತಿಲ್ಲ ನಾನೇನು ಮಾಡಲಿ ಎಂದು ನೆಪ ಹೇಳಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

  • ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!

    ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!

    ಚಿಕ್ಕಮಗಳೂರು: ಅಧಿಕಾರಿಗಳ ಮೇಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಗೂಂಡಾವರ್ತನೆ ತೋರಿಸಿದ್ದು, ಈ ಮೂಲಕ ಹುಲಿ ಉಗುರು ಮಾರಾಟಗಾರರ ಬೆಂಬಲಕ್ಕೆ ಬಿಜೆಪಿ ಶಾಸಕರು ನಿಂತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಅರಣ್ಯ ಅಧಿಕಾರಿಗಳು ಹುಲಿ ಉಗುರು ಮಾರುತ್ತಿದ್ದ ವೆಂಕಟೇಶ್, ರಂಜಿತ್ ಹಾಗೂ ಶಿವಕುಮಾರ್ ಅವರನ್ನು ಬಂಧಿಸಿದ್ದರು. ಇದರಿಂದ ಕೋಪಗೊಂಡು ತನ್ನ ಹಿಂಬಾಲಕರನ್ನ ಬಂಧಿಸಿದಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ಫುಲ್ ಗರಂ ಆಗಿ ಅರಣ್ಯಾಧಿಕಾರಿಗಳ ಜೊತೆ ಜಗಳ ಮಾಡಿ ಅವರಿಗೆ ಅವಾಜ್ ಹಾಕಿದ್ದಾರೆ.

    ರಂಪಾಟ ಮಾಡಿಬಿಡುತ್ತೇನೆ. ನನಗೆ ಏನು ಸಮಸ್ಯೆ ಆಗಲ್ಲ. ನನ್ನ ಫೋನ್ ರಿಸೀವ್ ಮಾಡದೇ ಇದ್ದರೆ ಆಫೀಸ್ ಬಾಗಿಲು ಹಾಕಿಸುತ್ತೇನೆ ಎಂದು ಮೂಡಿಗೆರೆ ಅರಣ್ಯ ಇಲಾಖೆ ಕಚೇರಿಯಲ್ಲಿ ಕುಮಾರಸ್ವಾಮಿ ರಂಪಾಟ ಮಾಡಿ ಕಿರುಚಾಟ ಮಾಡಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಎಂ.ಪಿ.ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv