Tag: M.K.Ganapati

  • ಡಿವೈಎಸ್ಪಿ ಗಣಪತಿ ಕೇಸಲ್ಲಿ ಸಿಬಿಐ ಎಫ್.ಐ.ಆರ್ – ಮತ್ತೆ ಸಂಕಷ್ಟದಲ್ಲಿ ಜಾರ್ಜ್

    ಡಿವೈಎಸ್ಪಿ ಗಣಪತಿ ಕೇಸಲ್ಲಿ ಸಿಬಿಐ ಎಫ್.ಐ.ಆರ್ – ಮತ್ತೆ ಸಂಕಷ್ಟದಲ್ಲಿ ಜಾರ್ಜ್

    ಬೆಂಗಳೂರು: ಡಿವೈಎಸ್ಪಿ ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‍ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ತನಿಖೆ ಆರಂಭಿಸಿರುವ ಸಿಬಿಐ ಇಂದು ಸಚಿವ ಜಾರ್ಜ್ ವಿರುದ್ಧ ಎಫ್.ಐ.ಆರ್ ದಾಖಲಿಸಿದೆ. ಆತ್ಮಹತ್ಯೆಗೂ ಮುನ್ನ ಡಿವೈಎಸ್ಪಿ ಗಣಪತಿ ನೀಡಿರುವ ಹೇಳಿಕೆಯನ್ನು ಆಧರಿಸಿ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಸಿಬಿಐ ಎಫ್.ಐ.ಆರ್ ದಾಖಲಿಸಿದೆ.

    ಸಿಬಿಐ ದಾಖಲಿಸಿರೋ ಎಫ್.ಐ.ಆರ್ ನಲ್ಲೇನಿದೆ.?
    ಕೆ.ಜೆ. ಜಾರ್ಜ್- ಎ1 ಆರೋಪಿ (ಬೆಂಗಳೂರು ನಗರಾಭಿವೃದ್ಧಿ ಸಚಿವ), ಪ್ರಣವ್ ಮೊಹಾಂತಿ- ಎ2 ಆರೋಪಿ (ಆಧಾರ್, ಉಪ ಮಹಾನಿರ್ದೇಶಕ, ಐಪಿಎಸ್ ಅಧಿಕಾರಿ), ಎ.ಎಂ. ಪ್ರಸಾದ್- ಎ-3 ಆರೋಪಿ (ಗುಪ್ತಚರ ಇಲಾಖೆ ಡಿಜಿ)

    ಕೆ.ಜೆ. ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಿಸುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಭೆ ನಡೆಸಿದ್ದರು. ಪೂರ್ವ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ, ಸಚಿವ ಜಾರ್ಜ್ ಸೇರಿದಂತೆ, ತಮ್ಮ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಸಚಿವ ಜಾರ್ಜ್ ರಾಜೀನಾಮೆ ನೀಡುವ ಸಾಧ್ಯತೆಗಳಿಲ್ಲ. ಮೂರು ತಿಂಗಳಲ್ಲಿ ತನಿಖಾ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚಿಸಿರುವುದರಿಂದ ಈ ವರದಿಯನ್ನು ಆಧರಿಸಿ ಜಾರ್ಜ್ ಮುಂದಿನ ಹೆಜ್ಜೆ ಇಡಲಿದ್ದಾರೆ ಎನ್ನಲಾಗಿದೆ. ಪ್ರಕರಣದ ಮುಂದಿನ ಹಂತದಲ್ಲಿ ಸಿಬಿಐನಿಂದ ವಿಚಾರಣೆಗಾಗಿ ಸಮನ್ಸ್ ಜಾರಿಯಾಗುವ ಸಾಧ್ಯತೆಯಿದೆ.

    ನಾಳೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ: ಎಫ್.ಐ.ಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ನಾಳೆ ಸಿಬಿಐ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಕೆ.ಜೆ.ಜಾರ್ಜ್ ಪರ ವಕೀಲರು ಸಿಟಿ ಸಿವಿಲ್ ಕೋರ್ಟ್ ನಲ್ಲಿರೋ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ನಿರೀಕ್ಷಣ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಶನಿವಾರ ಮತ್ತು ಭಾನುವಾರ ಕೋರ್ಟ್ ರಜೆ ಇರುವ ಕಾರಣ ಶುಕ್ರವಾರವೇ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡುವ ಸಾಧ್ಯತೆಯಿದೆ.

    ಎಫ್.ಐ.ಆರ್ ಬೆನ್ನಲ್ಲೆ ತನಿಖೆ ಚುರುಕುಗೊಳಿಸಿದ ಸಿಬಿಐ ತಂಡ ಕರ್ನಾಟಕ ಸಿಐಡಿ ಅಧಿಕಾರಿಗಳಿಂದ ಇನ್ನೂ ಮಾಹಿತಿ ಪಡೆಯುತ್ತಿದ್ದಾರೆ. ಘಟನೆ ನಡೆದ ವಿವರ, ಎಫ್.ಎಸ್.ಎಲ್ ವರದಿ ಎಲ್ಲದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ನಾಳೆಯೇ ಬೆಂಗಳೂರಿಗೆ ಬರಲು ಸಿದ್ಧತೆ ನಡೆಸಿರೋ ಸಿಬಿಐ ತಂಡ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಯೂ ಇದೆ.

    2016ರ ಜುಲೈ 7ರಂದು ಡಿವೈಎಸ್‍ಪಿ ಗಣಪತಿ ಮಡಿಕೇರಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು.

    ಸಿಬಿಐ ಎಫ್.ಐ.ಆರ್ ದಾಖಲಾದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗಣಪತಿ ಸೋದರಿ ಸಬಿತಾ, ನನ್ನ ಸೋದರನ ಸಾವಿಗೆ ಕಾರಣ ಯಾರು ಎನ್ನುವುದು ಗೊತ್ತಾಗಬೇಕು. ಈ ತನಿಖೆಯಿಂದ ನ್ಯಾಯ ಸಿಗುವ ಭರವಸೆಯಿದೆ ಎಂದರು.

    ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಇದು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ನಡೆ. ಸಿಬಿಐ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ನಾವು ಯಾವುದೇ ಕಾರಣಕ್ಕೂ ಜಾರ್ಜ್ ರಾಜೀನಾಮೆ ಕೊಡಲು ಬಿಡುವುದಿಲ್ಲ. ನಾವು ರಾಜಕೀಯವಾಗೇ ಉತ್ತರ ನೀಡುತ್ತೇವೆ. ಕೇಂದ್ರದಲ್ಲಿ ಯಾರ ವಿರುದ್ಧವೆಲ್ಲಾ ಎಫ್.ಐ.ಆರ್ ದಾಖಲಾಗಿಲ್ಲ ಹೇಳಿ ಎಂದು ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ ಹಿಟ್ಲರ್ ನ ತಮ್ಮನಂತೆ ವರ್ತಿಸುತ್ತಿದ್ದಾರೆ ಎಂದರು.

    ಇದೇ ವೇಳೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ಇದು ರಾಜಕೀಯ ಪ್ರೇರಿತ. ಸಿದ್ದರಾಮಯ್ಯರನ್ನು ದುರ್ಬಲಗೊಳಿಸಲು ಎಫ್.ಐ.ಆರ್ ಹಾಕುವ ಕ್ರಮಕೈಗೊಂಡಿದ್ದಾರೆ. ನಮ್ಮಲ್ಲಿ ಬೌಲರ್ ಗಳು, ಬ್ಯಾಟ್ಸ್ ಮನ್‍ಗಳು, ವಿಕೆಟ್ ಕೀಪರ್ ಗಳು ಇದ್ದಾರೆ ಎಂದರು.

  • ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್ ರೀ ಓಪನ್

    ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್ ರೀ ಓಪನ್

    – ಸಿಐಡಿಯಿಂದ ಎಫ್‍ಎಸ್‍ಎಲ್ ವರದಿ ಸಲ್ಲಿಕೆ

    ಮಡಿಕೇರಿ: ಓರ್ವ ಸಚಿವರು ಹಾಗು ಇಬ್ಬರು ಅಧಿಕಾರಿಗಳು ತಮಗೆ ಮಾನಸಿಕ ಕಿರುಕುಳವಾಗುತ್ತಿದೆ ಎಂದು ಆರೋಪಿಸಿ ಹೇಳಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಸ್ಪಿ ಎಂ.ಕೆ.ಗಣಪತಿ ಪ್ರಕರಣಕ್ಕೆ ಮತ್ತೆ ಮರುಜೀವ ಬಂದಿದೆ.

    ಸಿಐಡಿಯಿಂದ ಬಿ ರಿಪೋರ್ಟ್, ಹೈಕೋರ್ಟ್ ನಲ್ಲಿಯೂ ಖಾಸಗಿ ದೂರು ವಜಾ, ಮಡಿಕೇರಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಗಣಪತಿ ಪುತ್ರ ನೇಹಲ್ ಕೇಸ್ ಮುಂದುವರೆಸಲು ನಿರಾಸಕ್ತಿಯಿಂದ ಇನ್ನೇನು ಈ ಪ್ರಕರಣ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮಡಿಕೇರಿ ಜೆಎಂಎಫ್ ಸಿ ಕೋರ್ಟ್ ಕುಟುಂಬ ಸದಸ್ಯರನ್ನು ದೂರುದಾರರನ್ನಾಗಿ ಪರಿಗಣಿಸುವಂತೆ ಇಂದು ಅದೇಶ ನೀಡಿದೆ.

    ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅನ್ನಪೂರ್ಣಶ್ವರಿ ಕುಟುಂಬ ಸದಸ್ಯರನ್ನು ಈ ಪ್ರಕರಣದಲ್ಲಿ ದೂರುದಾರರನ್ನಾಗಿ ಪರಿಗಣಿಸುವಂತೆ ಇಂದು ಅದೇಶ ನೀಡಿದ್ದಾರೆ.

    ಮಾಚ್ಚಯ್ಯ (ಗಣಪತಿಯವರ ಸಹೋದರ)

    ಮೊದಲ ಜಯ: ಏಪ್ರಿಲ್ 10ರ ಒಳಗಡೆ ನಮಗೆ ಆಕ್ಷೇಪಣೆ ಸಲ್ಲಿಸಲು ಆದೇಶ ಸಿಕ್ಕಿದೆ. ವಿಶೇಷ ಏನೆಂದರೆ ಪ್ರಕರಣದ ಬಿ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಇಂದು ಸಿಐಡಿಯವರು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‍ಎಸ್‍ಎಲ್) ವರದಿಯನ್ನು ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಸುಮ್ಮನಿದ್ದ ಇವರು ಇಂದು ವರದಿ ಸಲ್ಲಿಸಿದ್ದನ್ನು ನೋಡುವಾಗ ನಮ್ಮ ಅನುಮಾನಗಳು ಮತ್ತಷ್ಟು ಹೆಚ್ಚಾಗಿದ್ದು, ತನಿಖೆ ಹೇಗೆ ನಡೆದಿದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಕರಣದಲ್ಲಿ ನಮಗೆ ಈಗ ಮೊದಲ ಜಯ ಸಿಕ್ಕಿದೆ ಎಂದು ಗಣಪತಿ ಸಹೋದರ ಮಾಚಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    2016 ಜುಲೈ 7 ರಂದು ಡಿವೈಎಸ್ಪಿ ಗಣಪತಿ ಮಡಿಕೇರಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಂದೆ ನನಗೆ ಏನಾದ್ರೂ ಆದರೆ ಅದಕ್ಕೆ ಸಚಿವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್ ಮತ್ತು ಪ್ರಣಬ್ ಮೊಹಂತಿ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಈ ಸಂದರ್ಶನ ನೀಡಿದ ಬಳಿಕ ಸಂಜೆ ಮಡಿಕೇರಿ ನಗರದ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ಈ ಪ್ರಕರಣದ ತನಿಖೆಯನ್ನು ನಡೆಸಿದ ಸಿಐಡಿ ಸಚಿವ ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬಿ ರಿಪೋರ್ಟ್ ಸಲ್ಲಿಸಿ ಕ್ಲೀನ್ ಚೀಟ್ ನೀಡಿತ್ತು.

    ಸಬೀತಾ (ಗಣಪತಿಯವರ ಸಹೋದರಿ)

    ಸುಪ್ರೀಂನಲ್ಲಿದೆ ಮತ್ತೊಂದು ಅರ್ಜಿ: ಸಿಐಡಿ ವರದಿಯಲ್ಲಿ ಸಚಿವ ಜಾರ್ಜ್ ಗೆ ಕ್ಲಿನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಆಗ್ರಹಿಸುವಂತೆಗಣಪತಿ ತಂದೆ ಕುಶಾಲಪ್ಪ ಈ ಹಿಂದೆ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾ.ಎಸ್.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಶಾಲಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದು, ನ್ಯಾ. ಆನಂದಕುನಾರ್ ಗೊಯೇಲ್ ಮತ್ತು ಉದಯ್ ಲಲಿತ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.

    ತಕರಾರು ಅರ್ಜಿ ಸಲ್ಲಿಸಿರಲಿಲ್ಲ: ಸಚಿವ ಜಾರ್ಜ್ ಅವರಿಗೆ ಸಿಐಡಿ ನೀಡಿರುವ ಬಿ ರಿಪೋರ್ಟ್ ಅನ್ನು ಗಣಪತಿ ಅವರ ಪುತ್ರ ನೇಹಾಲ್ ಒಪ್ಪಿಕೊಂಡಿದ್ದರು. ಸಿಐಡಿ ಸಲ್ಲಿಸಿದ ಬಿ ರಿಪೋರ್ಟ್ ಗೆ ಗಣಪತಿ ಪುತ್ರ ಯಾವುದೇ ತಕರಾರು ಅರ್ಜಿ ಸಲ್ಲಿಸಿರಲಿಲ್ಲ.

     

    https://www.youtube.com/watch?v=AGmp1M_0q2s

     

    https://www.youtube.com/watch?v=p2V1xEclj3g