Tag: M.C.Sudhakar

  • ಪ್ರತಿ ಬಾರಿ ಕಪ್ ನಮ್ದೆ ಅಂತಿದ್ವಿ, ಈ ಸಲ ಆದ್ರೂ ಕಪ್ ನಮ್ಮದಾಗಲಿ: ಎಂ.ಸಿ ಸುಧಾಕರ್

    ಪ್ರತಿ ಬಾರಿ ಕಪ್ ನಮ್ದೆ ಅಂತಿದ್ವಿ, ಈ ಸಲ ಆದ್ರೂ ಕಪ್ ನಮ್ಮದಾಗಲಿ: ಎಂ.ಸಿ ಸುಧಾಕರ್

    ಚಿಕ್ಕಬಳ್ಳಾಪುರ: ಪ್ರತಿ ಬಾರಿ ಕಪ್ ನಮ್ದೆ ಅಂತಿದ್ವಿ, ಈ ಸಲ ಆದ್ರೂ ಕಪ್ ನಮ್ಮದಾಗಲಿ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ (M.C Sudhakar) ಹೇಳಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ (Chikkaballapur) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ (RCB) ಗೆಲುವಾಗಲಿ ಎಂದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ಫೈನಲ್‌ನಲ್ಲಿ ಸೆಣೆಸಲಿರುವ ಆರ್‌ಸಿಬಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ!

    ದೇಶದಲ್ಲಿ ಎಲ್ಲೆಡೆ ಆರ್‌ಸಿಬಿಗೆ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ. ಈ ಸಲ ಕಪ್ ನಮ್ಮದಾಗುವ ವಿಶ್ವಾಸ ಇದೆ. ಪ್ರತಿ ಭಾರಿಯೂ ಕಪ್ ನಮ್ಮದೆ ಅಂತ ಹೇಳ್ತಿದ್ದೇವು. ಈ ಬಾರಿಯಾದ್ರೂ ಕಪ್ ನಮ್ಮದಾಗಲಿ, ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್‌ ಅಯ್ಯರ್‌ ಅರ್ಹರು – ರಾಜಮೌಳಿ

  • ಉನ್ನತ ಶಿಕ್ಷಣ ಸಮಗ್ರ ಮಾಹಿತಿಗಾಗಿ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ

    ಉನ್ನತ ಶಿಕ್ಷಣ ಸಮಗ್ರ ಮಾಹಿತಿಗಾಗಿ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ

    ಬೆಂಗಳೂರು: ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಮಾಹಿತಿ ನೀಡುವ ದೃಷ್ಟಿಯಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಹೊರತಂದಿರುವ ಕರ್ನಾಟಕ ಉನ್ನತ ಶಿಕ್ಷಣ (Unnatha Shikshana) ತ್ರೈಮಾಸಿಕ ಪತ್ರಿಕೆ ಕಾರ್ಯನಿರ್ವಹಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (Dr.M C Sudhakar) ಹೇಳಿದರು.

    ಕರ್ನಾಟಕ ಉನ್ನತ ಶಿಕ್ಷಣ ತ್ರೈಮಾಸಿಕ ಪತ್ರಿಕೆಯನ್ನು ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಬಿಡುಗಡೆಗೊಳಿಸಿ ಶುಭ ಕೋರಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ದೈತ್ಯ ಬ್ಯಾಟರ್‌ ಕ್ಲಾಸೆನ್‌ ಗುಡ್‌ಬೈ

    ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಂ.ಸಿ ಸುಧಾಕರ್ ಅವರು, ಮುಂಬರುವ ದಿನಗಳಲ್ಲಿ ಈ ಪತ್ರಿಕೆ ಮೂಲಕ ಉನ್ನತ ಶಿಕ್ಷಣ ಇಲಾಖೆಯ ಆದೇಶಗಳು, ಸೂಚನೆಗಳು, ನಿಯಮಾವಳಿಗಳನ್ನು ಕಾಲಕಾಲಕ್ಕೆ ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ, ತಂತ್ರಜ್ಞಾನ ಬಳಕೆ ಸೇರಿದಂತೆ ಶಿಕ್ಷಣ ವ್ಯವಸ್ಥೆಯಲ್ಲಿನ ಜಾಗತಿಕ ನಡೆಯನ್ನು ಈ ಪತ್ರಿಕೆಯಲ್ಲಿ ದಾಖಲಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಮಾಹಿತಿ ನೀಡಲಾಗುವುದು. ಖ್ಯಾತ ಶಿಕ್ಷಣ ತಜ್ಞರು, ಸಂಶೋಧಕರು ಪತ್ರಿಕೆಗೆ ಬರೆಯಲಿದ್ದಾರೆ ಎಂದರು. ಇದನ್ನೂ ಓದಿ: 150 ವರ್ಷದ ಬಳಿಕ ಬೆಂಗಳೂರಿನಲ್ಲಿ ಬೃಹತ್ ಜೈವಿಕ ಉದ್ಯಾನವನ ನಿರ್ಮಾಣ: ಈಶ್ವರ್ ಖಂಡ್ರೆ

    ಎಡಿಬಿ ಬ್ಯಾಂಕ್ ಸಾಲ:
    ನಮ್ಮ ತಾಂತ್ರಿಕ ಶಿಕ್ಷಣವನ್ನು ಬಲಗೊಳಿಸಲು ಏಷ್ಯಾ ಡೆವಲಪ್ಮೆಂಟ್ ಬ್ಯಾಂಕ್‌ನಿಂದ 2,600 ಕೋಟಿ ರೂ. ಸಾಲ ಪಡೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ನಿರ್ವಹಣೆಯ ಇಲಾಖೆ ಕೂಡ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ ಎಡಿಬಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

    ಈಗಾಗಲೇ ಎಡಿಬಿ ಬ್ಯಾಂಕ್ ಅಧಿಕಾರಿಗಳು, ನಮ್ಮ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸದ್ಯದಲ್ಲೇ ಸಾಲ ಬಿಡುಗಡೆ ಮಾಡಲಿದ್ದಾರೆ. ಈ ಹಣದಿಂದ ನಮ್ಮ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ಉತ್ತಮವಾಗಿ ಸುಧಾರಣೆ ಮಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು. ಇದನ್ನೂ ಓದಿ: ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌

    ನೂತನ ಶಿಕ್ಷಣ ನೀತಿ ವರದಿ:
    ರಾಜ್ಯ ನೂತನ ಶಿಕ್ಷಣ ನೀತಿ ಆಯೋಗವು ತನ್ನ ಕಾರ್ಯವನ್ನು ಮುಗಿಸಿದ್ದು, ಜೂನ್ ಎರಡನೇ ವಾರದಲ್ಲಿ ವರದಿ ಸಲ್ಲಿಸಲಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಭೇಟಿ ದಿನಾಂಕವನ್ನು ಕೋರಲಾಗಿದೆ. 2025 ಮೇ 31ರ ವರೆಗೆ ಸುಖದೇವ್ ತೋರಟ್ ಅವರ ರಾಜ್ಯ ನೂತನ ಶಿಕ್ಷಣ ನೀತಿ ಆಯೋಗಕ್ಕೆ ಅವಕಾಶ ನೀಡಲಾಗಿತ್ತು ಎಂದು ತಿಳಿಸಿದರು.

    ಉದ್ಯೋಗ ಖಾತ್ರಿ ಶಿಕ್ಷಣ:
    ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿ ಶಿಕ್ಷಣವನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕಲಿಕೆಯ ಸಮಯದಲ್ಲೇ ಕೈಗಾರಿಕಾ ಪೂರಕ ಹಾಗೂ ಉದ್ಯೋಗ ದೊರಕುವಂತಹ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಿಲುವು ಮತ್ತು ಉದ್ದೇಶಗಳ ಮಾಹಿತಿ ನೀಡಲು ಪತ್ರಿಕೆ ಸಹಕಾರಿಯಾಗಲಿದೆ ಎಂದರು. ಇದನ್ನೂ ಓದಿ: ಪಂಜಾಬ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 113 ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    ಈ ಸಂದರ್ಭದಲ್ಲಿ ಇಲಾಖೆ ಕಾರ್ಯದರ್ಶಿ ಕೆ.ಜಿ .ಜಗದೀಶ್, ಕೆಇಎ ಕಾರ್ಯಕಾರಿ ನಿರ್ವಾಹಕರಾದ ಹೆಚ್ ಪ್ರಸನ್ನ, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರಾದ ಎಸ್. ಆರ್ ನಿರಂಜನ್, ಕಾರ್ಯಕಾರಿ ನಿರ್ವಾಹಕ ಕೆ.ಜಿ ಚಂದ್ರಶೇಖರ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತಾ? – ಎಂ.ಸಿ ಸುಧಾಕರ್ ವಿರುದ್ಧ ರೇವಣ್ಣ ಗರಂ

    ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತಾ? – ಎಂ.ಸಿ ಸುಧಾಕರ್ ವಿರುದ್ಧ ರೇವಣ್ಣ ಗರಂ

    ಹಾಸನ: ಬಡವರು ಕೂಲಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. 470 ಕಾಲೇಜುಗಳ ಶುಲ್ಕದ ದುಡ್ಡನ್ನು ಬೆಂಗಳೂರಿಗೆ ತರಿಸಿಕೊಂಡು ಗಿರಾಕಿಗಳು ಟೆಂಡರ್ ಕರಿತಾರೆ. ಇದೆಲ್ಲಾ ಮಾಡೋದ್ರಿಂದ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತಾ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ಕಿಡಿಕಾರಿದ್ದಾರೆ.

    ಹೊಳೆನರಸೀಪುರ (Holenarasipur) ಪಟ್ಟಣದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಈ ವೇಳೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಶುಲ್ಕದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಎಷ್ಟು ದಿನ ನೀವು ಬಡವರ ಮಕ್ಕಳನ್ನು ಗೋಳಾಡಿಸುತ್ತೀರಿ? ಏನ್ರೀ ಆಗಿರೋದು ನಿಮಗೆ, ಕಾಲೇಜಿನ ಮಕ್ಕಳ ಶುಲ್ಕದ ದುಡ್ಡನ್ನು ಹೊಡೆಯಬೇಕಾ? ನಿಮ್ಮ ಕುಟುಂಬವೂ ನಾಶ ಆಗುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ವಿದ್ಯಾರ್ಥಿಗಳಿಗೆ (Students) ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಅದರೆ, ಮಕ್ಕಳು ಕಟ್ಟುವ ಶುಲ್ಕದ ದುಡ್ಡನ್ನು ಈ ಗಿರಾಕಿಗಳು ಬಿಡುತ್ತಿಲ್ಲ. ಉನ್ನತ ಶಿಕ್ಷಣ ಸಚಿವರಿಗೆ ನಾನು ಹೇಳೋದು ಇಷ್ಟೇ, ಬಡವರ ಬಗ್ಗೆ ಕರುಣೆ ಇಡಿ ಎಂದು ವೇದಿಕೆ ಮೇಲೆಯೇ ಅಸಮಾಧಾನ ಹೊರಹಾಕಿದ್ದಾರೆ.

  • ಜನಿವಾರ ಕತ್ತರಿಸಿ ಪರೀಕ್ಷೆ ಬರೆಸಿದ ಪ್ರಕರಣ; ಬ್ರಾಹ್ಮಣ ಸಮುದಾಯದ ಆಕ್ರೋಶದಲ್ಲಿ ತಪ್ಪಿಲ್ಲ: ಎಂ.ಸಿ ಸುಧಾಕರ್

    ಜನಿವಾರ ಕತ್ತರಿಸಿ ಪರೀಕ್ಷೆ ಬರೆಸಿದ ಪ್ರಕರಣ; ಬ್ರಾಹ್ಮಣ ಸಮುದಾಯದ ಆಕ್ರೋಶದಲ್ಲಿ ತಪ್ಪಿಲ್ಲ: ಎಂ.ಸಿ ಸುಧಾಕರ್

    – ಅಮಾನವೀಯವಾಗಿ ನಡೆದುಕೊಂಡವರ ವಿರುದ್ಧ ಕ್ರಮದ ಎಚ್ಚರಿಕೆ

    ಬೆಂಗಳೂರು: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಅವಕಾಶ ಕೊಡದೇ ಇರುವುದಕ್ಕೆ ಬ್ರಾಹ್ಮಣ ಸಮುದಾಯ (Brahmin community) ಆಕ್ರೋಶ ಮಾಡುವುದರಲ್ಲಿ ತಪ್ಪಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ (M C Sudhakar) ಹೇಳಿದ್ದಾರೆ.

    ಈ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ (Shivamogga) ಮತ್ತು ಬೀದರ್‌ನಲ್ಲಿ (Bidar) ಈ ರೀತಿ ಘಟನೆ ಆಗಿದೆ ಎಂದು ಬೆಳಗ್ಗೆ ನಮ್ಮ ಸ್ನೇಹಿತರು ಹೇಳಿದರು. ಇದರಲ್ಲಿ ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ಇರುತ್ತದೆ. ಕೆಇಎಯಿಂದ ಜನಿವಾರ ತೆಗೆಸಿ ಬರೆಸುವಂತಹ ನಿಯಮ ಇಲ್ಲ ಎಂದರು. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಕೊಡದ ಸಿಬ್ಬಂದಿ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ

    ಶಿವಮೊಗ್ಗ ಎಡಿಸಿ ಜನಿವಾರ ತೆಗೆಸಿ ಪರೀಕ್ಷೆ ಬರೆಸಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಸತ್ಯಾಸತ್ಯತೆ ತಿಳಿಯುತ್ತೇನೆ. ಈ ರೀತಿ ಸೂಚನೆ ಕೊಡಲು ನಾವು ಅವಿವೇಕಿಗಳಲ್ಲ. ಆ ರೀತಿ ಜನಿವಾರ ತೆಗೆಸಿದ್ದರೆ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇನೆ. ಇದರ ವರದಿಯನ್ನು ನಾನು ತರಿಸಿಕೊಳ್ಳುತ್ತೇನೆ. ಇದನ್ನು ನಾವು ಒಪ್ಪುವುದಿಲ್ಲ. ಈ ರೀತಿ ಮಾಡಿರುವುದು ಸರಿ ಎಂದು ಹೇಳುವಂತಹ ಕೀಳುಮಟ್ಟದಲ್ಲಿ ನಾವು ಇಲ್ಲ. ತೊಂದರೆಗೆ ಒಳಗಾಗಿರುವ ವಿದ್ಯಾರ್ಥಿಗಳು ಇಂತಹ ಸೆಂಟರ್, ಇಂತಹ ಅಧಿಕಾರಿ ಎಂದು ಹೇಳಲಿ ಎಂದು ಹೇಳಿದರು. ಇದನ್ನೂ ಓದಿ: ಜನಿವಾರದಲ್ಲಿ ಬ್ಲೂಟೂತ್ ಹಾಕ್ಕೊಂಡು ಎಕ್ಸಾಂ ಬರೆಯೋಕೆ ಆಗುತ್ತಾ? – ಚಕ್ರವರ್ತಿ ಸೂಲಿಬೆಲೆ

    ಈ ವಿಚಾರವಾಗಿ ಬ್ರಾಹ್ಮಣ ಸಮುದಾಯ ಆಕ್ರೋಶ ಮಾಡುವುದರಲ್ಲಿ ತಪ್ಪಿಲ್ಲ. ಯಾವುದೇ ಧರ್ಮದ ನಂಬಿಕೆಗೆ ಧಕ್ಕೆ ಬರುವ ರೀತಿ ನಡೆದುಕೊಳ್ಳಬಾರದು. ಈ ರೀತಿ ಆಗಿಲ್ಲ ಎಂದು ಶಿವಮೊಗ್ಗ ಎಡಿಸಿ ಹೇಳುತ್ತಿದ್ದಾರೆ. ನಾನು ತನಿಖೆ ಮಾಡಿಸುತ್ತೇನೆ. ನಿನ್ನೆ ಅಥವಾ ಮೊನ್ನೆ ಇಂತಹ ಘಟನೆ ಆಗಿದೆಯಾ ಎಂದು ಗೊತ್ತಿಲ್ಲ. ಅಮಾನವೀಯವಾಗಿ ನಡೆದುಕೊಂಡಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. ಅಧಿಕಾರಿಗಳು ಆಗಿಲ್ಲ ಎನ್ನುತ್ತಿದ್ದಾರೆ. ವಿದ್ಯಾರ್ಥಿಗಳು ಆಗಿದೆ ಅಂತಾ ಇದ್ದಾರೆ. ಇಂತಹ ಸೆಂಟರ್‌ನಲ್ಲಿ ನಡೆದಿದೆ ಎಂದು ಗೊತ್ತಾದರೆ ಖಂಡಿತಾ ತನಿಖೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

    ಏನಿದು ಘಟನೆ?
    ಸಿಇಟಿ ಪರೀಕ್ಷೆಗಾಗಿ (CET Exam) ಕಾಲೇಜಿನ ಒಳಭಾಗಕ್ಕೆ ತೆರಳುವ ಸಮಯದಲ್ಲಿ ಸಿಇಟಿ ಸಿಬ್ಬಂದಿ ಬ್ರಾಹ್ಮಣ ವಿದ್ಯಾರ್ಥಿಗಳು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಕಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ತೆಗೆಸಿ ಹಾಕಿರುವುದು ಮಕ್ಕಳ ಪೋಷಕರಿಂದ ತಿಳಿದು ಬಂದಿದೆ. ಈ ಕೇಂದ್ರದಲ್ಲಿ ಈ ರೀತಿ ಗಾಯತ್ರಿ ಮಂತ್ರ ದೀಕ್ಷೆ ಪಡೆದು ಅಕ್ಕ ಸಾಕ್ಷರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಿಚ್ಚಿಸಿದ ಅವಮಾನಕಾರಿ ಘಟನೆ ಅಧಿಕಾರಿಗಳು ಮಾಡಿದ್ದು ಖಂಡನೀಯ ಎಂದು ಬ್ರಾಹ್ಮಣ ಸಮುದಾಯ ತೀವ್ರ ಆಕ್ರೋಶ ಹೊರಹಾಕಿದೆ.

    ವರ್ಷಪೂರ್ತಿ ಕಷ್ಟ ಪಟ್ಟು ಅಧ್ಯಯನ ಮಾಡಿ ಒಳ್ಳೆ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಛಿಸುವ ಅಧಿಕಾರಿಗಳ ಕೃತ್ಯ ಬ್ರಾಹ್ಮಣ ಮತ್ತು ಹಿಂದೂ ವಿರೋಧಿಯಾಗಿದೆ. ಅಖಿಲ ಕನರ್ನಾಟಕ ಬ್ರಾಹ್ಮಣ ಮಹಾ ಸಭಾ ಮತ್ತು ಶಿವಮೊಗ್ಗ ಜಿಲ್ಲೆಯ ವಿಶ್ವ ಸಂಘಟನೆಗೆ ಒಕ್ಕೂಟವು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ.

    ಜಿಲ್ಲಾಧಿಕಾರಿಗಳು ತಕ್ಷಣ ತನಿಖೆ ನಡೆಸಿ ಹಿಂದೂ ಪರಂಪರೆಯ ಸಂಸ್ಕಾರವಾದ ಗಾಯತ್ರಿ ಮಂತ್ರ ದೀಕ್ಷೆಯ ಪ್ರಾಮುಖ್ಯತೆ. ಘನತೆ ಗೌರವ ಗೊತ್ತಿಲ್ಲದ ಧರ್ಮ ವಿರೋದಿ ಕೃತ್ಯ ಎಸಗಿರುವ ಹೀನ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ವಿನಂತಿಸಿದೆ.

  • ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ರಿಪೋರ್ಟ್ ಕೇಳಿದೆ: ಡಾ. ಎಂ.ಸಿ.ಸುಧಾಕರ್

    ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ರಿಪೋರ್ಟ್ ಕೇಳಿದೆ: ಡಾ. ಎಂ.ಸಿ.ಸುಧಾಕರ್

    ಬೆಂಗಳೂರು: ಹೈಕಮಾಂಡ್ ಎಲ್ಲಾ ಸಚಿವರ ಕಾರ್ಯವೈಖರಿ ಬಗ್ಗೆ ರಿಪೋರ್ಟ್ ಕೇಳಿದ್ದಾರೆ. ರಿಪೋರ್ಟ್ ಕೇಳಿರೋದ್ರಲ್ಲಿ ತಪ್ಪೇನು ಇಲ್ಲ ಎಂದು ಸಚಿವ ಡಾ. ಸುಧಾಕರ್ (M.C.Sudhakar) ತಿಳಿಸಿದರು.

    ಹೈಕಮಾಂಡ್‌ನಿಂದ ಸಚಿವರ ರಿಪೋರ್ಟ್ ಕೇಳಿರುವ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ಎಲ್ಲಾ ಸಚಿವರ ವರದಿ ಕೇಳಿದೆ. ವರದಿ ಕೇಳಿರೋದು ತಪ್ಪಲ್ಲ. ನಾನು ಕೂಡಾ ನನ್ನ ಇಲಾಖೆ ವರದಿ ಕೊಟ್ಟಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ವಿಜಯೇಂದ್ರ ಕೆಳಗಿಳಿಸಲು ಆಗಲ್ಲ, ಒಂದು ಸಾರಿ ಅಧ್ಯಕ್ಷರಾದ್ರೆ ಎಲ್ರೂ ಒಪ್ಪಿಕೊಳ್ಳಲೇಬೇಕು: ಯತ್ನಾಳ್‌ಗೆ ಶ್ರೀರಾಮುಲು ಟಾಂಗ್

    ಹೈಕಮಾಂಡ್ ಸಚಿವ ಸ್ಥಾನ ಕೊಟ್ಟಿರೋದು ಓಡಾಡಿಕೊಂಡು ಇರೋದಕ್ಕೆ ಅಲ್ಲ. ಪಕ್ಷ ‌ಕೊಟ್ಟಿರೋ ಭರವಸೆ ಈಡೇರಿಸೋದು, ಇಲಾಖೆಯಲ್ಲಿ ಕೊಟ್ಟಿರೋ ಜವಾಬ್ದಾರಿ, ಅಭಿವೃದ್ಧಿ ಕೆಲಸ ಮಾಡಬೇಕು. ಸಚಿವರು ಕಾರಿನಲ್ಲಿ ಓಡಾಡಿಕೊಂಡು ಕೂತಿದ್ರೆ ಆಗೊಲ್ಲ. ಪಕ್ಷದ ಹೆಸರು, ವರ್ಚಸ್ಸು ವೃದ್ಧಿ ಮಾಡೋ ಜವಾಬ್ದಾರಿ ಶಾಸಕರು ಮತ್ತು ಮಂತ್ರಿಗಳ ಮೇಲೆ ಇದೆ. ಮಂತ್ರಿಗಳಾಗಿ ನಮಗೆ ಕೊಟ್ಟಿರೋ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿದ್ದಾರಾ ಅಂತ ತಿಳಿಯಲು ವರದಿ ಕೇಳಿದ್ದಾರೆ ಎಂದರು.

    ವರದಿ ಪಡೆಯೋ ಅಧಿಕಾರ ಹೈಕಮಾಂಡ್‌ಗೆ ಇದೆ. ವರದಿ ಕೊಟ್ಟ ಮೇಲೆ ಹೈಕಮಾಂಡ್ ನಾಯಕರು ನೋಡ್ತಾರೆ. ಯಾರು ಕೆಲಸ ಮಾಡ್ತಾರೆ, ಇವರಿಗೆ ಎಚ್ಚರಿಕೆ ಕೊಡಬೇಕಾ? ಇನ್ನು ಏನಾದ್ರು ಸೂಚನೆ ಕೊಡಬೇಕಾ? ಉತ್ತಮ ಕೆಲಸ ಮಾಡಿದ್ರೆ ಪ್ರೋತ್ಸಾಹ ಕೊಡಬೇಕಾ ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಇ.ಡಿಗೆ ತನಿಖೆ ಮಾಡಲು ಅಧಿಕಾರವೇ ಇಲ್ಲ: ಮುಡಾ ಕೇಸ್‌ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ

  • ರಾಜ್ಯಪಾಲರದ್ದು ಸಂವಿಧಾನ ವಿರೋಧಿ ನಡವಳಿಕೆ, ವಾಪಸ್‌ ಕರೆಸಿಕೊಳ್ಳುವಂತೆ ಹೋರಾಟ ಮಾಡ್ತೀವಿ: ಸಚಿವ ಸುಧಾಕರ್‌

    ರಾಜ್ಯಪಾಲರದ್ದು ಸಂವಿಧಾನ ವಿರೋಧಿ ನಡವಳಿಕೆ, ವಾಪಸ್‌ ಕರೆಸಿಕೊಳ್ಳುವಂತೆ ಹೋರಾಟ ಮಾಡ್ತೀವಿ: ಸಚಿವ ಸುಧಾಕರ್‌

    ಬೆಂಗಳೂರು: ಸಂವಿಧಾನ ವಿರೋಧಿ ನಡವಳಿಕೆ ರಾಜ್ಯಪಾಲರದ್ದು. ವಾಪಸ್ ಕರೆಸಿಕೊಳ್ಳಬೇಕು ಎಂಬ ಹೋರಾಟ ಮಾಡ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ (M.C.Sudhakar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಈಗಾಗಲೇ ರಾಜ್ಯಪಾಲರ ನಡೆ ಬಗ್ಗೆ ಕಾಂಗ್ರೆಸ್, ಇಂಡಿಯಾ ಒಕ್ಕೂಟ ವಿರೋಧ ಮಾಡಿದೆ. ಒಂದೆಡೆ ನಾಲ್ಕು ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಲೋಕಾಯುಕ್ತ ಪ್ರಾಸಿಕ್ಯೂಷನ್ ಅನುಮತಿ ಕೇಳಿದೆ. ಅದರ ಬಗ್ಗೆ ಯಾವುದೇ ತೀರ್ಮಾನ ಮಾಡದೆ ತರಾತುರಿಯಲ್ಲಿ ದುರುದ್ದೇಶದಿಂದ ಸಿಎಂ ಮೇಲೆ‌ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಅನುಮತಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ನಿಯಮಾವಳಿಗಳ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರತಿಭಟನೆ ಆಗಿವೆ. ಶನಿವಾರ ಸಚಿವರು, ಶಾಸಕರು, ಸಂಸದರ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರ ಷಡ್ಯಂತ್ರದ ವಿರುದ್ಧ ನನಗೆ ಜಯ ಸಿಕ್ಕಿದೆ: ಡಿಕೆಶಿ

    ವಿಶೇಷ ಅಧಿವೇಶನ ಕರೆಯುವಂತಹ ಪರಿಸ್ಥಿತಿ ತಲುಪಿಲ್ಲ. ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಹೋರಾಡಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡ್ತೇವೆ. ಸಂವಿಧಾನ ವಿರೋಧಿ ನಡವಳಿಕೆ ರಾಜ್ಯಪಾಲರು ನಡೆದುಕೊಂಡರೆ ವಾಪಸ್ ಕರೆಸಿಕೊಳ್ಳಬೇಕು ಎಂಬ ಹೋರಾಟ ಮಾಡ್ತೇವೆ. ಆದರೆ ಪಕ್ಷ ಇನ್ನೂ ಆ ರೀತಿಯ ಸೂಚನೆ ಕೊಟ್ಟಿಲ್ಲ. ಪಕ್ಷದ ಉನ್ನತಮಟ್ಟದ ವರಿಷ್ಠರು ಏನು ಸೂಚನೆ ಕೊಡ್ತಾರೋ ಅದನ್ನ ಪಾಲನೆ ಮಾಡುತ್ತೇವೆ ಎಂದಿದ್ದಾರೆ.

    ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ಹಂಚಿಕೆ ವಿಚಾರ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ, ಜನಾರ್ದನ ರೆಡ್ಡಿ ಅವರದ್ದು ಆಯಿತು. ದುರುದ್ದೇಶದಿಂದ ಇದ್ದವರು ಇವತ್ತು ಖರ್ಗೆ ಸಾಹೇಬರ ಮೇಲೂ ಹೇಳ್ತಾರೆ, ನಾಳೆ ಎಲ್ಲರ ಮೇಲೂ ಹೇಳ್ತಾರೆ. ಕೇವಲ ಆರೋಪ ಮಾಡಿದ ತಕ್ಷಣ ಅದು ಸತ್ಯ ಎಂದು ಭಾವಿಸಲು ಹೇಗೆ ಸಾಧ್ಯ? ತಮ್ಮ ಹುಳುಕು ‌ಮುಚ್ಚಿಕೊಳ್ಳಲು ಯಾವುದೋ ಅಶ್ಲೀಲ ವೀಡಿಯೋ ಅಂತೆ, ಮತ್ತೊಂದು ಬಗೆದಷ್ಟು ಹೊರಗೆ ಬರ್ತಾ ಇದ್ದಾವೆ ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಮುಡಾ ಹಗರಣ ಮುಚ್ಚಾಕಲು ಕಾಂಗ್ರೆಸ್ ಷಡ್ಯಂತ್ರ: ನಿಖಿಲ್

    ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಕೆಐಎಡಿಬಿ ಜಾಗವನ್ನು ಚಾಣಕ್ಯ ವಿವಿ ಕೊಟ್ಟರು. ಅರ್ಧ ಬೆಲೆ ಕೊಡಲು ಯಾವ ಕಾನೂನಿನಲ್ಲಿ ಅವಕಾಶವಿದೆ. ಬಿಜೆಪಿ‌ ಕಾಲದಲ್ಲಿ ನೂರಾರು ಎಕರೆ ಯಾರಿಗೆ ಕೊಟ್ಟಿದ್ದಾರೆ ಎಂದು ಚರ್ಚೆ ಮಾಡಬೇಕು. ಸರ್ಕಾರ ಅಸ್ಥಿರಗೊಳಿಸಲು ಈ ರೀತಿ ಮಾಡುತ್ತಿದ್ದಾರೆ. ಸಿಎಂ ಅಭಿವೃದ್ಧಿ ಕೆಲಸ ಮಾಡುತ್ತಿದ್ದರೆ, ಅವರು (ಬಿಜೆಪಿ) ನಮ್ಮದು ಎಲ್ಲಾ ತೆಗಿಯಿರಿ ಎಂದು ಪ್ರೇರೇಪಿಸುತ್ತಿದ್ದಾರೆ. ಅಶ್ಲೀಲ ವೀಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಅದು, ಮಾಧ್ಯಮಗಳಲ್ಲಿ ನೋಡಿರುವುದು. ಯಾರು ಭಾಗಿಯಾಗಿದ್ದಾರೆ, ಯಾರ ಜೊತೆಗೆ ಇದ್ದರು, ಯಾರು ಸೂತ್ರಧಾರಿಗಳು ಎಂಬ ಮಾಹಿತಿ ನಿಮಗೆ ಹೆಚ್ಚಿದೆ. ಮಾಹಿತಿ ಇಲ್ಲದನ್ನ ಹೇಳುವುದು ಸೂಕ್ತವಲ್ಲ ಎಂದಿದ್ದಾರೆ.

  • ಅತಿಥಿ ಉಪನ್ಯಾಸಕರಿಗೆ 5 ಸಾವಿರ ವೇತನ ಹೆಚ್ಚಳ: ಸಚಿವ ಸುಧಾಕರ್‌

    ಅತಿಥಿ ಉಪನ್ಯಾಸಕರಿಗೆ 5 ಸಾವಿರ ವೇತನ ಹೆಚ್ಚಳ: ಸಚಿವ ಸುಧಾಕರ್‌

    – ಆರೋಗ್ಯ ವಿಮಾ ಯೋಜನೆ ಜಾರಿಗೆ ಕ್ರಮ

    ಬೆಂಗಳೂರು: ಕಳೆದ ಒಂದು ತಿಂಗಳಿಂದಲೂ ಮುಷ್ಕರ ನಡೆಸುತ್ತಿರುವ ರಾಜ್ಯ ಅತಿಥಿ ಉಪನ್ಯಾಸಕರಿಗೆ (Guest Lecturers) 5 ಸಾವಿರ ವೇತನ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಹೊಸ ವರ್ಷದ ಗಿಫ್ಟ್ ಕೊಟ್ಟಿದೆ.

    ಶುಕ್ರವಾರ ವಿಕಾಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ (M.C.Sudhakar) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ಉಪನ್ಯಾಸಕರ ವೇತನ 5 ಸಾವಿರ ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಒಪ್ಪಿಗೆ ನೀಡಿದ್ದಾರೆ. ಹೆಚ್ಚು ಹೆಚ್ಚು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ: ಯತ್ನಾಳ್‌ಗೆ ಜೋಶಿ ಕಿವಿಮಾತು

    ಅತಿಥಿ ಉಪನ್ಯಾಸಕರ ಬೇಡಿಕೆಯಲ್ಲಿ ಸೇವೆ ಕಾಯಂ ಬಹುಮುಖ್ಯ ಬೇಡಿಕೆಯಾಗಿದೆ. ಆ ಬಗ್ಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸುತ್ತಿದ್ದಾರೆ. ಇದರ ನಡುವೆ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ತಿಂಗಳಿಗೆ ಒಂದು ರಜೆ ನೀಡಲಾಗುವುದು. ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. 60 ವರ್ಷ ಪೂರೈಸಿದಂತಹ ಅತಿಥಿ ಉಪನ್ಯಾಸಕರಿಗೆ ಕೆಲಸ ಬಿಡುವಾಗ 5 ಲಕ್ಷ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

    ಆರೋಗ್ಯ ವಿಮಾ ಯೋಜನೆ ಕೂಡ ಜಾರಿಗೊಳಿಸಲಾಗುತ್ತಿದೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದಂತಹ ಅತಿಥಿ ಉಪನ್ಯಾಸಕರನ್ನು ಪರಿಗಣಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ಕ್ರಿಯಾ ಯೋಜನೆ ರೂಪಿಸಿ – ಸಿಎಂ ಸೂಚನೆ

    ಸೇವೆ ಕಾಯಂ, ನಿವೃತ್ತಿ ವೇತನದ ವ್ಯವಸ್ಥೆ, ಉದ್ಯೋಗ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಪಬ್ಲಿಕ್ ಟಿವಿ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ಚಾಲನೆ

    ಪಬ್ಲಿಕ್ ಟಿವಿ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ಚಾಲನೆ

    – ಉನ್ನತ ಶಿಕ್ಷಣ ಸಚಿವ ಸುಧಾಕರ್‌ರಿಂದ ಶೈಕ್ಷಣಿಕ ಮೇಳ ಉದ್ಘಾಟನೆ

    ಬೆಂಗಳೂರು: ಪಬ್ಲಿಕ್ ಟಿವಿ (Public TV) ಪ್ರಸ್ತುತಪಡಿಸಿರುವ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳವಾದ ವಿದ್ಯಾಪೀಠ (Vidhyapeeta Education Expo) 6ನೇ ಆವೃತ್ತಿಗೆ ಇಂದು (ಶನಿವಾರ) ಅದ್ಧೂರಿ ಚಾಲನೆ ದೊರೆಯಿತು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ (M.C.Sudhakar) ಅವರು ಟೇಪ್ ಕಟ್ ಮಾಡುವ ಮೂಲಕ ಶೈಕ್ಷಣಿಕ ಮೇಳೆಕ್ಕೆ ಚಾಲನೆ ನೀಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಸುಧಾಕರ್ ಅವರಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ (HR Ranganath) ಅವರು ಸೇರಿದಂತೆ ಇತರೆ ಗಣ್ಯರು ಸಾಥ್ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಹೆಚ್.ಆರ್. ರಂಗನಾಥ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ

    ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್ ಅವರು, ನಾನು ಸಚಿವನಾಗಿ ಉದ್ಘಾಟಿಸಿದ ಮೊದಲ ಕಾರ್ಯಕ್ರಮ ಇದು. ಇದು ನನ್ನ ಸೌಭಾಗ್ಯ ಎಂದು ಸಂತೋಷ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಹೊಸ ಆಯಾಮಗಳನ್ನ ಪ್ರಾರಂಭ ಮಾಡಲಾಗಿದೆ. ಒಂದೇ ಸೂರಿನಡಿಯಲ್ಲಿ ಇಷ್ಟು ದೊಡ್ಡ ಶೈಕ್ಷಣಿಕ ಸಂಸ್ಥೆಗಳನ್ನು ಒಗ್ಗೂಡಿಸೋದು ಸುಲಭವಲ್ಲ. ಯಾರು ಕೂಡಾ ಇಂತಹ ದೊಡ್ಡ ಕಾರ್ಯಕ್ರಮ ಆಯೋಜಿಸಲು ಸಾಧ್ಯವಿಲ್ಲ. ಅದು ಪಬ್ಲಿಕ್ ಟಿವಿ, ಹೆಚ್.ಆರ್. ರಂಗನಾಥ್ ಅವರಿಂದ ಮಾತ್ರ ಸಾಧ್ಯ ಎಂದು ಬಣ್ಣಿಸಿದರು. ಇದನ್ನೂ ಓದಿ: ಇಂದು, ನಾಳೆ 2 ದಿನ ಪಬ್ಲಿಕ್‌ ಟಿವಿ ‘ವಿದ್ಯಾಪೀಠʼ – ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

    ಹಿರಿಯರ ಮಾರ್ಗದರ್ಶನ, ಗುರುಗಳ ಸಲಹೆ-ಸೂಚನೆ ಮೇಲೆ ಜೀವನದ ಕಷ್ಟ ಸುಖಗಳ ಬಗ್ಗೆ ಸಲಹೆ ಪಡೆದು ಜೀವನ ಮಾಡ್ತೀವಿ. ನಮ್ಮ ಮುಂದೆ ಅನೇಕ ಆಯ್ಕೆಗಳು ಇವೆ. ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣದಲ್ಲಿ ನಮಗೆ ಅವಕಾಶಗಳು ಸಾಕಷ್ಟಿವೆ. ಪದವಿ ಪಡೆದರೂ ಕೆಲಸ ಸಿಕ್ತಿಲ್ಲ. ನಮ್ಮ ರಾಜ್ಯದಲ್ಲಿ, ದೇಶದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಇವೆ. ಆದರೆ ಎಲ್ಲರಿಗೂ ಅಲ್ಲಿ ಉದ್ಯೋಗ ಸಿಗೋದಿಲ್ಲ. ನಾವು ನಿರೀಕ್ಷೆ ಮಾಡಿದಷ್ಟು ಉದ್ಯೋಗ ಸೃಷ್ಟಿ ಆಗಿಲ್ಲ. ಹೀಗಾಗಿ ಹೊಸ ಹೊಸ ಕೋರ್ಸ್ಗಳು ನಮ್ಮ ಮುಂದೆ ಇವೆ. ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಉನ್ನತ ಶಿಕ್ಷಣ ಇಲಾಖೆ ಹೊಸದು ನನಗೆ. ಮಾಹಿತಿ ಸಂಗ್ರಹ ಮಾಡುತ್ತಿದ್ದೇನೆ. ಈಗಾಗಲೇ ಅನೇಕ ವಿದ್ಯಾರ್ಥಿಗಳು ಸಮಸ್ಯೆಗಳನ್ನ ಹೇಳಿದ್ದಾರೆ. ಅನೇಕ ಖಾಸಗಿ, ಅಟಾನಮಸ್ ವಿವಿಗಳಲ್ಲಿ ಸಮಸ್ಯೆಗಳು ಇವೆ. ಸಮಸ್ಯೆಗಳನ್ನ ಹೇಗೆ ಪರಿಹಾರ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

    ಎನ್‌ಇಪಿ ರದ್ದು ವಿಚಾರವಾಗಿ ಮಾತನಾಡಿ, ಎನ್‌ಇಪಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೊದಲು ಎನ್‌ಇಪಿ ಬಗ್ಗೆ ಪೂರ್ಣ ಮಾಹಿತಿ ಪಡೆಯುತ್ತೇನೆ. ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ತಗೋತೀವಿ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದೇ ಇರೊ ರೀತಿ ಕ್ರಮದ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.

    ಕಾರ್ಯಕ್ರಮದಲ್ಲಿ ರೇವಾ ಯುನಿವರ್ಸಿಟಿ ಕುಲಪತಿಗಳಾದ ಶ್ಯಾಮರಾಜು, ಗಾರ್ಡನ್ ಸಿಟಿ ಯುನಿವರ್ಸಿಟಿ ಕುಲಪತಿಗಳಾದ ಡಾ. ವಿ.ಜಿ ಜೋಸೆಫ್, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟೂಷನ್ಸ್ ಅಧ್ಯಕ್ಷರಾದ ಡಿ.ಕೆ.ಮೋಹನ್, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟಿಟೂಷನ್ಸ್ ಅಧ್ಯಕ್ಷರಾದ ರಾಜೀವ್ ಗೌಡ ಭಾಗವಹಿಸಿದ್ದರು.

    ಎಡಿ6 ಸಹಯೋಗದಲ್ಲಿ ಪಬ್ಲಿಕ್ ಟಿವಿಯು ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಘೋಷವಾಕ್ಯದೊಂದಿಗೆ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ‘ವಿದ್ಯಾಪೀಠ’ವನ್ನು ಆಯೋಜಿಸಿದೆ. ಬೆಂಗಳೂರು ಅರಮನೆ ಮೈದಾನದ ಗೇಟ್ ನಂಬರ್ 4ರ ಗಾಯತ್ರಿ ವಿಹಾರದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿದ್ಯಾಪೀಠ ಶೈಕ್ಷಣಿಕ ಮೇಳ ನಡೆಯಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ. ಶೈಕ್ಷಣಿಕ ಮೇಳದಲ್ಲಿ ರಾಜ್ಯದ ನಾನಾ ಭಾಗಗಳ 100ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಂಡಿವೆ.

  • ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಬಿಗ್ ಶಾಕ್!

    ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಬಿಗ್ ಶಾಕ್!

    ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಫರ್ಧೆ ಮಾಡಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಬಿಗ್ ಶಾಕ್ ಕೊಟ್ಟಿದೆ. ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಫರ್ಧಿಸಲು ಇಚ್ಚಿಸಿರುವ ಅಭ್ಯರ್ಥಿಗಳು, ನಾಮಪತ್ರ ಸಲ್ಲಿಸುವವರೆಗೂ ಯಾವುದೇ ಸಭೆ-ಸಮಾರಂಭ ನಡೆಸಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಡಾ ಎಂ ಸಿ ಸುಧಾಕರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದು, ಚುನಾವಣಾ ಪ್ರಚಾರ ನಡೆಸಲು ಅನುಮತಿ ಕೋರಿದ್ದಾರೆ. ಆದರೆ ಇದಕ್ಕೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮುಖ್ಯ ಚುನಾವಣಾಧಿಕಾರಿ, ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸುವವರೆಗೂ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಲು ಅವಕಾಶವಿಲ್ಲ ಅಂತ ಹಿಂಬರಹ ನೀಡಿದ್ದಾರೆ. ಹೀಗಾಗಿ ಸಹಜವಾಗಿ ಆಯೋಗದ ಇಬ್ಬಗೆಯ ನೀತಿ ವಿರುದ್ಧ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಆದರೆ ಪಕ್ಷದ ಆಭ್ಯರ್ಥಿಗಳು ತಮ್ಮ ಪಕ್ಷದ ಹೆಸರಲ್ಲಿ ಸಭೆ ಸಮಾರಂಭ ನಡೆಸಿ, ಪ್ರಚಾರ ನಡೆಸಬಹುದಾಗಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳಿಗೊಂದು ನೀತಿ, ಪಕ್ಷೇತರ ಸ್ವತಂತ್ರ ಅಭ್ಯರ್ಥಿಗಳಿಗೊಂದು ನೀತಿ ಎಂಬಂತೆ, ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಇಟ್ಟಂತಿದೆ ಚುನಾವಣಾ ಆಯೋಗದ ನೀತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಏನು ಹೇಳುತ್ತೆ ಆಯೋಗ?
    ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾರೊಬ್ಬರು ವ್ಯಕ್ತಿ ಪರವಾಗಿ ಚುನಾವಣಾ ಪ್ರಚಾರ ಸಂಬಂಧದ ಸಭೆ-ಸಮಾವೇಶ ನಡೆಸುವಂತಿಲ್ಲ. ನಾಮಪತ್ರ ಸಲ್ಲಿಕೆಯಾಗುವವರೆಗೂ ಅಭ್ಯರ್ಥಿಗಳ ಹೆಸರು ಅಂತಿಮ ಕೂಡ ಆಗುವುದಿಲ್ಲ ಎನ್ನುವುದು ಆಯೋಗದ ಸಮರ್ಥನೆ. ಹೀಗಾಗಿ ಯಾರೊಬ್ಬರು ತನಗೆ ಮತ ನೀಡಿ ಎಂದು ಮನವಿ ಮಾಡಿಕೊಳ್ಳುವಂತಿಲ್ಲ. ಆದರೆ, ಪಕ್ಷಗಳ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿ, ಪಕ್ಷದ ಪರ ಮಾತ್ರವೇ ಪ್ರಚಾರ ನಡೆಸಬೇಕು. ನಾಮಪತ್ರ ಸಲ್ಲಿಕೆಯಾದ ಬಳಿಕ ಅಭ್ಯರ್ಥಿಗಳು ತಮ್ಮ ಪರವಾಗಿ ಸಭೆ ಸಮಾವೇಶಗಳನ್ನ ನಡೆಸಬಹುದಾಗಿದೆ ಎನ್ನುತ್ತಿದೆ ಚುನಾವಣಾ ಆಯೋಗ.

    ಪಕ್ಷೇತರ ಅಭ್ಯರ್ಥಿಗಳ ವಾದ ಏನು?
    ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಬಹುತೇಕರಿಗೆ ಈಗಾಗಲೇ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿದೆ. ಹೀಗಾಗಿ ಪಕ್ಷಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಸಭೆ ಸಮಾರಂಭ, ಸಮಾವೇಶಗಳನ್ನ ಮಾಡುವ ಮೂಲಕ ಪರೋಕ್ಷವಾಗಿ ಮತ ಯಾಚಿಸುತ್ತಿದ್ದಾರೆ. ಕೆಲವೊಮ್ಮೆ ಇಂತಹವರನ್ನೇ ಗೆಲ್ಲಿಸಿ, ಎಂದು ಬಹಿರಂಗವಾಗಿಯೇ ಹೇಳಿರುವ ನಿದರ್ಶನಗಳು ಕೂಡ ಇವೆ. ಇದೆಲ್ಲ ಚುನಾವಣಾ ಆಯೋಗಕ್ಕೆ ಕಾಣುತ್ತಿಲ್ಲವೇ? ಪಕ್ಷೇತರರಾದ ನಾವು ಚುನಾವಣೆಗೆ ಸ್ಫರ್ಧಿಸಲು ತೀರ್ಮಾನಿಸಿದ್ದರೂ, ನಮ್ಮ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲು ಕಾರಣವೇನು? ಪಕ್ಷಗಳಿಗೊಂದು, ಪಕ್ಷೇತರರಿಗೊಂದು ನ್ಯಾಯ ಮಾಡುತ್ತಿರುವುದು ಸರಿಯಲ್ಲ. ಪಾರ್ಟಿ ಫಂಡ್ ಹೆಸರಿನಲ್ಲಿ ಕೃಷ್ಣನ ಲೆಕ್ಕ ತೋರಿಸಿ, ಪಕ್ಷದಡಿ ಸ್ಫರ್ಧಿಸಲು ಮುಂದಾಗಿರುವ ಸ್ವಯಂ ಘೋಷಿತ ಅಭ್ಯರ್ಥಿಗಳು ಸುಲಭವಾಗಿ ಆಯೋಗದ ಮುಷ್ಟಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನದ ಮಾತುಗಳು ಪಕ್ಷೇತರರಿಂದ ಕೇಳಿಬರುತ್ತಿವೆ.

    23 ದಿನಗಳಲ್ಲಿ ಪ್ರಚಾರ ಸಾಧ್ಯವೇ?
    ನಾಮಪತ್ರ ಸಲ್ಲಿಕೆಗೆ ಏ.17ರಿಂದ 24ರವರೆಗೂ ಅವಕಾಶ ನೀಡಿದ್ದು. ಬಹಿರಂಗ ಪ್ರಚಾರ ಮೇ.10 ಕಡೆದಿನ. ಹೀಗಾಗಿ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ನಾಮಪತ್ರ ಸಲ್ಲಿಸಿದರೂ, ಬಹಿರಂಗ ಪ್ರಚಾರಕ್ಕೆ ಕೇವಲ 23 ದಿನಗಳು ಮಾತ್ರವೇ ಉಳಿದುಕೊಳ್ಳಲಿದೆ. ಹೀಗಾಗಿ ಇಷ್ಟು ಕಡಿಮೆ ದಿನಗಳ ಅಂತರದಲ್ಲಿ ಪಕ್ಷೇತರರ ಪ್ರಚಾರ ಸಾಧ್ಯವೇ ಇಲ್ಲ. ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ 28 ಲಕ್ಷದೊಳಗೆ ಖರ್ಚು ಮಾಡಬೇಕಿದೆ. ಇದಕ್ಕೂ ಮೊದಲೇ ಪಕ್ಷದಿಂದ ನಿಲ್ಲುವವರು ಪಕ್ಷದ ಹೆಸರಿನಲ್ಲಿ ಮಾಡಿರುವ ಖರ್ಚಿಗೆ ಲೆಕ್ಕ ಕೇಳುವಂತಿಲ್ಲ ಎಂಬ ಪ್ರಶ್ನೆಗಳು ಪಕ್ಷೇತರರಲ್ಲಿ ಕಾಡುತ್ತಿವೆ. ಇದೆಲ್ಲದರ ನಡುವೆ ಪಕ್ಷದಿಂದ ಸ್ಫರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನೀತಿಗಳು ಅನುಕೂಲಕರವಾಗಿದ್ದು, ಪಕ್ಷೇತರರಾಗಿ ಅನಾನುಕೂಲಕರವಾಗಿವೆ ಅಂತ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ ಪಕ್ಷೇತರರು.