ವಿಜಯಪುರ: ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಅಷ್ಟೇ. ಸರ್ಕಾರ ಹಾಗೂ ಇಲಾಖೆ ವಿಷಯದಲ್ಲಿ ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟ್ ಗೆಲ್ಲುವುದರ ಕಡೆ ಗಮನಹರಿಸಿದ್ದೇವೆ. ಚುನಾವಣೆ ಮುಗಿದ ಬಳಿಕ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಸುದ್ದಿಗೋಷ್ಠಿ ಮಾಡಿ ಹೆಚಿನ ಮಾಹಿತಿ ಬಹಿರಂಗ ಮಾಡುತ್ತೇನೆ ಎಂದರು. ಇದನ್ನು ಓದಿ: ಲಿಂಗಾಯತ ವಿಚಾರದಲ್ಲಿ ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿಕೆಶಿ ಯಾರು: ಎಂ.ಬಿ.ಪಾಟೀಲ್ ಪ್ರಶ್ನೆ
ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಮೇಲೆ ನನ್ನ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದರೆ ವಿಷಾದಿಸುತ್ತೇನೆ. ಎಲುಬು ಇಲ್ಲದ ನಾಲಿಗೆ ಎಂದು ಬಾಯಿಗೆ ಬಂದಿದ್ದನ್ನು ಶಾಸಕರು ಮಾತನಾಡಬಾರದು. ಚಿಲ್ಲರೆ ಮಾತುಗಳನ್ನು ಆಡಬಾರದು. ಹಾಗೇ ಮಾತನಾಡಿದರೆ ಜನರು ನಮ್ಮ ಹಿಡಿತದಲ್ಲಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಿಚಾರವಾಗಿ ಮಾತನಾಡಿದ್ದ ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗೃಹ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಏನು ಅಧಿಕಾರವಿದೆ? ಕ್ಷಮೆ ಕೇಳಲು ಅವರು ಯಾರು? ಅವರಿಗೂ ಲಿಂಗಾಯತ ಧರ್ಮಕ್ಕೂ ಏನು ಸಂಬಂಧ? ಅವರೇನು ಕೆಪಿಸಿಸಿ ಅಧ್ಯಕ್ಷರೇ? ಡಿ.ಕೆ.ಶಿವಕುಮಾರ್ ಮೊದಲು ತಮ್ಮ ಸಮುದಾಯದಲ್ಲಿರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಿ ಎಂದು ಗುಡುಗಿದರು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ನಾನು ಚುನಾವಣೆಯಲ್ಲಿ ಬಳಸಿಕೊಂಡಿಲ್ಲ. 2018ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಹೇಳಿರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರು ಯಾಕೆ ಈ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದಾರೆ? ಈ ವಿಚಾರವಾಗಿ ಈಗ ಮಾತನಾಡಿ ಪಕ್ಷಕ್ಕೆ ಮುಜುಗುರ ಉಂಟು ಮಾಡುವುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಸುದ್ದಿಗೋಷ್ಠಿ ಕರೆದು ಸರಿಯಾದ ಉತ್ತರ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ವಿರುದ್ಧ ಪಕ್ಷದ ನಾಯಕರಿಗೆ, ಹೈಕಮಾಂಡಿಗೆ ದೂರು ನೀಡುತ್ತೇನೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಈ ಬಗ್ಗೆ ಮಾಹಿತಿ ನೀಡುತ್ತೇನೆ. ಸಚಿವರು ಈ ಹಿಂದೆಯೂ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಪ್ರತ್ಯೇಕ ಲಿಂಗಾಯದ ಧರ್ಮದ ವಿಚಾರವಾಗಿ ಕ್ಷಮೆ ಕೇಳಿದ್ದರು. ಇದನ್ನು ಬಳ್ಳಾರಿಯಲ್ಲಿ ಪುನರುಚ್ಛರಿಸಿದ್ದಾರೆ. ಹೀಗೆ ಹೇಳಿಕೆ ನೀಡುವುದ ಹಿಂದೆ ಹಿಡನ್ ಅಜೆಂಡಾ ಇದೆ. ಅಷ್ಟೇ ಅಲ್ಲದೆ ಮೂರು ಬಲವಾದ ಕಾರಣಗಳಿವೆ. ಅದನ್ನು ಚುನಾವಣೆ ಬಳಿಕ ಬಹಿರಂಗ ಪಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಹೇಳಿದ್ದೇನು?:
ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ಸೋಮವಾರ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿಯವರು ಒಂದು ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರೋ ಏನೋ ಹೇಳಿದರೂ ಅಂತ ನನ್ನ ಸೇರಿದಂತೆ ನಮ್ಮ ಪಕ್ಷದ ಕೆಲವರು ವೀರಶೈವರ ವಿಚಾರಕ್ಕೆ ಕೈ ಹಾಕಿದ್ವಿ. ಈ ಮೂಲಕ ಪ್ರತ್ಯೇಕ ಧರ್ಮ ಮಾಡಲು ತೀರ್ಮಾನ ಮಾಡಿದ್ವಿ. ಅದಕ್ಕೆ ಜನ ನಮ್ಮ ಕಪಾಳಕ್ಕೆ ಹೊಡೆದರು. ಹೀಗಾಗಿ ನಿಮಗೂ ಹಾಗೂ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕ್ಷಮೆಯಾಚಿಸಿದ್ದರು.
ಇನ್ನೆಂದೂ ಕಾಂಗ್ರೆಸ್ ಜಾತಿ, ಧರ್ಮದ ವಿಚಾರದಲ್ಲಿ ಕೈಹಾಕುವುದಿಲ್ಲ. ನಿಮ್ಮ ಕ್ಷಮೆ ಇರಲಿ. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದೇನೆ. ಹೀಗಾಗಿ ಈ ಹಿಂದೆ ಆಗಿರುವುದನ್ನು ಮರೆತು ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದರು.
ವಿಜಯಪುರ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಒಬ್ಬ ಮಾಧ್ಯಮ ಎಂಟರ್‌ಟೈನ್‌ಮೆಂಟ್. ಅವರ ಮಾತಿಗೆ ಹೆಚ್ಚಿನ ಕಿಮ್ಮತ್ತು ಇಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಅವರ ಮಾತಿಗೆ ಬೆಲೆ ಇಲ್ಲ. ಅವರು ಮಾಧ್ಯಮ ಎಂಟರ್‌ಟೈನ್‌ಮೆಂಟ್. ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು.
ನಾನು ನೀರಾವರಿ ಸಚಿವನಿದ್ದಾಗ ಮಾಡಿರುವ ಕೆಲಸ ಇಡೀ ಜಗತ್ತಿಗೆ ಗೊತ್ತಿದೆ. ನನ್ನ ಕೆಲಸ ಸೂರ್ಯ ಹಾಗೂ ಚಂದ್ರ ನೋಡಿದ್ದಾರೆ. ನಾನು ನನ್ನ ಲೆವಲ್ ಜನರ ಜೊತೆಗೆ ಮಾತನಾಡುತ್ತೇನೆ. ನನ್ನ ಲೆವಲ್ ಕೆಳಗೆ ಇರುವವರ ಬಗ್ಗೆ ಮಾತನಾಡಲ್ಲ. ನಾನು ಪ್ರಧಾನಿ ಮೋದಿ, ಬಿಎಸ್‍ವೈಗೆ ಉತ್ತರ ನೀಡುತ್ತೇನೆ ಎಂದು ಶಾಸಕ ಎ.ಎಸ್ ನಡಹಳ್ಳಿ ಅವರ ಕಾಲೆಳೆದರು.
ನನ್ನ ಹಾಗೂ ನನ್ನ ತಾಯಿ ತಂದೆ ಸರ್ಟಿಫಿಕೇಟ್‍ನಲ್ಲಿ ಹಿಂದೂ ಲಿಂಗಾಯತ ಅಂತ ಇದೆ. ಉಳಿದವರು ಟಿಸಿ, ಜನ್ಮ ಸರ್ಟಿಫಿಕೇಟ್ ತೆಗೆದು ಅದರಲ್ಲಿ ಏನಿದೆ ಎಂದು ನೋಡಿಕೊಂಡು ಮಾತನಾಡಿ ಎಂದು ನಡಹಳ್ಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಇನ್ನು ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಧರ್ಮವನ್ನು ಬಳಸಿಕೊಂಡಿಲ್ಲ. ಲಿಂಗಾಯತರನ್ನು ಕೂಡ ನಾನು ಬಳಸಿಕೊಂಡಿಲ್ಲ. ಲಿಂಗಾಯತ ಧರ್ಮದ ಹೋರಾಟ ಯಾವುದೇ ಪಕ್ಷಕ್ಕೆ ಸಂಬಂಧಪಟ್ಟಿಲ್ಲ. ಲಿಂಗಾಯತ ಚುನಾವಣೆ ವಿಚಾರವಲ್ಲ. ನ್ಯಾಯಾಲಯಕ್ಕೆ ಹೋಗಬೇಕೋ, ಬೇಡವೋ ಎನ್ನುವುದನ್ನು ಜಾಗತಿಕ ಲಿಂಗಾಯತ ಮಹಾಸಭಾದವರು ತೀರ್ಮಾನ ಮಾಡುತ್ತಾರೆ. ಚುನಾವಣೆಯಲ್ಲಿ ಲಿಂಗಾಯತ ಬಗ್ಗೆ ಮಾತನಾಡುವುದಿಲ್ಲ. ಹಿಂದೆಯೂ ಮಾತನಾಡಿಲ್ಲ, ಈಗಲೂ ಮಾತನಾಡಲ್ಲ ಎಂದರು.
ಅಲ್ಲದೆ ಲಿಂಗಾಯತ ಹೋರಾಟದಿಂದ ನಾನು ಡೌನ್ ಆಗಿಲ್ಲ. ಜನರು ನಮ್ಮ ಜೊತೆಗೆ ಇದ್ದಾಗ ಡೌನ್ ಆಗಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದದಲ್ಲಿ 28 ರಲ್ಲಿ 20 ಸೀಟ್ ಕಾಂಗ್ರೆಸ್ ಗೆಲ್ಲುವುದು ಪಕ್ಕಾ. ಅಲ್ಲದೆ ವಿಜಯಪುರ ಮೈತ್ರಿ ಅಭ್ಯರ್ಥಿ 1 ಲಕ್ಷ ಮತಗಳಿಂದ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ: ಎ.ಎಸ್ ಪಾಟೀಲ್ ನಡಹಳ್ಳಿ ಒಬ್ಬ ಪುಟಗೋಸಿ ಶಾಸಕ, ಮಂಗನಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಹುಚ್ಚುನಾಯಿಗೂ ಜನ ಮರ್ಯಾದೆ ಕೊಡುತ್ತಾರೆ. ಆದ್ರೆ ನಡಹಳ್ಳಿಗೆ ಕೊಡಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ್ ಬಬಲೇಶ್ವರ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಶಾಸಕ ನಡಹಳ್ಳಿ ವಿರುದ್ಧ ಕಿಡಿಕಾರಿದರು. ಈ ಹಿಂದೆ ನಡಹಳ್ಳಿ ಅವರು ಕಳ್ಳ ಎತ್ತು, ಠಕ್ಕ ಎತ್ತು, ವಸೂಲಿ ಎತ್ತು ಎಂದು ಗೃಹ ಸಚಿವ ಎಂ ಬಿ ಪಾಟೀಲ್, ಆರೋಗ್ಯ ಸಚಿವ ಶೀವಾನಂದ ಪಾಟೀಲ್ ಹಾಗೂ ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ವಿರುದ್ಧ ವ್ಯಂಗ್ಯವಾಡಿದ್ದರು. ಈ ವಿಚಾರಕ್ಕೆ ಆಕ್ರೋಶಗೊಂಡಿರುವ ಕಾಂಗ್ರೆಸ್ ಮುಖಂಡರು ನಡಹಳ್ಳಿ ವಿರುದ್ಧ ವಾಕ್ಸಮರ ಮೊಳಗಿಸಿದ್ದಾರೆ. ಮನೆ ಆವರಣಕ್ಕೆ ಹುಚ್ಚು ನಾಯಿ ಬಂದರೆ ಅದಕ್ಕೂ ಜನರು ಮರ್ಯಾದೆ ಕೊಟ್ಟು ಹಚಾ.. ಹಚಾ.. ಎಂದು ಹೊರಗೆ ಓಡಿಸುತ್ತಾರೆ. ಆದ್ರೆ ದೇವರಹಿಪ್ಪರಗಿ ಜನ ನಡಹಳ್ಳಿಯನ್ನ ಹುಚ್ಚು ನಾಯಿಗಿಂತ ಕಡೆಯಾಗಿ ನಡೆಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಎಂ.ಬಿ ಪಾಟೀಲ್ ಕುರಿತು ಮಾತನಾಡುವ ನೈತಿಕತೆ ಶಾಸಕ ನಡಹಳ್ಳಿಗೆ ಇಲ್ಲ. ಹೆಂಡ ಕುಡಿದ ಮಂಗನಂತೆ ನಡಹಳ್ಳಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ ಎಂದು ಟಾಂಗ್ ನೀಡಿದರು.
ಬೆಳಗಾವಿ (ಚಿಕ್ಕೋಡಿ): ನನಗೆ ಕಾಮನ್ ಸೆನ್ಸ್ ಇಲ್ಲ. ಅವರು ಕಲಿಸಿದರೆ ನಾನು ಕಲಿಯುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ಗೃಹ ಸಚಿವ ಎಂ.ಬಿ.ಪಾಟೀಲ್ ಬುದ್ಧಿವಂತರು. ಅವರಿಗೆ ಕಾಮನ್ ಸೆನ್ಸ್ ಇದೆ. ಸಚಿವರು ಟೀಚರ್ ಆಗಿ ಬಂದು ನನಗೆ ಪಾಠ ಮಾಡಿದರೆ ಕಲಿತುಕೊಳ್ಳಲು ಪ್ರಯತ್ನಿಸುತ್ತೇನೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಕಲಿಸಿದರೆ ಕಲಿಯೋಣ ತೊಂದರೆ ಏನು ಇಲ್ಲ ಎಂದು ವ್ಯಂಗ್ಯವಾಡಿದರು.
ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿಯ ಯಾವ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ ಎಂದು ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಲ್ಲ. ಇದು ಹೈಕಮಾಂಡ್‍ಗೆ ಬಿಟ್ಟ ನಿರ್ಧಾರವಾಗಿದೆ. ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಅಂತಿಮ ತೀರ್ಮಾನ ದೆಹಲಿಯಲ್ಲೇ ಆಗುತ್ತದೆ ಎಂದು ಹೇಳಿದರು.
ಚಿಕ್ಕೋಡಿ ತಾಲೂಕಿನ ಚಂದೂರು ಗ್ರಾಮದ ಯೋಧ ಪ್ರವೀಣ ಹುತಾತ್ಮರಾಗಿದ್ದಾರೆ. ಯೋಧ ಪ್ರವೀಣ ಅವರ ಕುಟುಂಬಸ್ಥರಿಗೆ ಸ್ವಾಂತನ ಹೇಳಲು ಚಂದೂರಿಗೆ ಹೋಗುತ್ತಿರುವೆ. ಜೊತೆಗೆ ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಮೆರವಣಿಯನ್ನು ರದ್ದು ಮಾಡಲಾಗಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.
ವಿಜಯಪುರ: ಮಾಜಿ ಸಿಎಂ ಯಡ್ಡಿಯೂರಪ್ಪನವರ ಹುಣ್ಣಿಮೆ, ಅಮವಾಸ್ಯೆ, ದೀಪಾವಳಿ, ಸಂಕ್ರಾಂತಿ ಎಲ್ಲ ಮುಗಿದಿವೆ. ಈ ರೀತಿ ಅನೇಕ ಡೆಡ್ ಲೈನ್ ಮುಗಿದರೂ ಕಾಂಗ್ರೆಸ್ ಇರುತ್ತೆ ಎಂದು ಜಿಲ್ಲೆಯ ಕಳ್ಳಕವಟಿಗಿಯಲ್ಲಿ ಗೃಹ ಸಚಿವ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡ್ಡಿಯೂರಪ್ಪನವರ ಹುಣ್ಣಿಮೆ, ಅಮವಾಸ್ಯೆ, ದೀಪಾವಳಿ, ಸಂಕ್ರಾಂತಿ ಅಂತ ಎಲ್ಲಾ ಡೆಡ್‍ಲೈನ್ ಮುಗಿದಿದೆ. ಅವರು ಆಪರೇಷನ್ ಕಮಲ ಮಾಡೋದು ಬಿಡಲ್ಲ. ಪದೇ ಪದೇ ಅದೇ ಮಾತನ್ನ ಕೇಳಿ ನಿಮಗೂ ಬೇಸರ ಆಗಿದೆ. ಮುಂದೆ ಅಸೆಂಬ್ಲಿ ಚುನಾವಣೆ ಬರುತ್ತೆ, ನಂತರ ಲೋಕಸಭಾ ಚುನಾವಣೆ ಬರುತ್ತೆ. ಆಗಲು ಕಾಂಗ್ರೆಸ್ ಇರುತ್ತೆ ಆಪರೇಷನ್ ಕಮಲ ನಡೆಯಲ್ಲ ಎಂದು ಯಡ್ಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದ್ದಾರೆ.
ದೋಸ್ತಿ ಸರ್ಕಾರದಲ್ಲಿ ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿ, ಎಂಪಿ ಸ್ಥಾನದ 12 ಸೀಟುಗಳಿಗೆ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ಜೆಡಿಎಸ್ 2, ಕಾಂಗ್ರೆಸ್‍ನ 10 ಸೀಟುಗಳ ಬಗ್ಗೆ ಯಾವುದೇ ಗೊಂದಲವಿಲ್ಲ. ಉಳಿದ 16 ಸೀಟ್‍ಗಳ ಬಗ್ಗೆ ಗುರುವಾರ ಚರ್ಚೆ ಆಗಿದೆ. ದೆಹಲಿಯಲ್ಲಿ ಮಾರ್ಚ್ 11ಕ್ಕೆ ಮೀಟಿಂಗ್ ಇದೆ. ಅಲ್ಲಿಯೇ ಎಲ್ಲವೂ ತೀರ್ಮಾನ ಆಗುತ್ತದೆ. 2014 ಹಾಗೂ 2018 ರ ವಿಜಯಪುರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಂದಿತ್ತು. ವಿಜಯಪುರ ನಮಗೆ ಬೇಕು ಎಂದು ನಾನು, ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ್ ಹೈಕಮಾಂಡ್‍ಗೆ ಮನವಿ ಮಾಡಿದ್ದೇವೆ ಎಂದರು.
ಸುಮಲತಾ ಅವರ ಬಗ್ಗೆ ನಾನು ಮಾತನಾಡಲ್ಲ. ಬಹುತೇಕ ಮಂಡ್ಯ ಸೀಟ್ ಜೆಡಿಎಸ್ ಪಾಲಾಗಿದೆ. ಹಾಗಾಗಿ ಅದರ ಬಗ್ಗೆ ನಾನು ಹಸ್ತಕ್ಷೇಪ ಮಾಡಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲೋದರ ಬಗ್ಗೆ ನಾನು ಮಾತನಾಡಲ್ಲ ಎಂದು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.
ದಾವಣಗೆರೆ: ಚುನಾವಣೆಯಲ್ಲಿ ನಾವೇ ಸೋತು ಸುಣ್ಣ ಆಗಿದ್ದೀವಿ, ನೀನು ನಮ್ಮ ಅಪ್ಪನ ಬಗ್ಗೆ ಮಾತಾಡ್ತಿಯ ಅಂತ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವರಾಗಿದ್ದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಗೃಹ ಸಚಿವ ಎಂ.ಬಿ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಊಟಕ್ಕೆಂದು ಎಂ.ಬಿ ಪಾಟೀಲ್ ತೆರಳಿದ್ದರು. ಈ ವೇಳೆ ಚುನಾವಣೆಯಲ್ಲಿ ನಾವೇ ಸೋತು ಸುಣ್ಣ ಆಗಿದ್ದೀವಿ. ನೀನು ನಮ್ಮ ಅಪ್ಪನ ಬಗ್ಗೆ ಮಾತಾಡ್ತಿಯ ಎಂದು ಪ್ರಶ್ನಿಸಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಆಫೀಸ್ ಹೋಗಬೇಕು ಬಾ ಅಂತ ಎಂ.ಬಿ ಪಾಟೀಲ್ ಅವರು ಮಲ್ಲಿಕಾರ್ಜುನ್ ಅವರನ್ನು ಕರೆದಿದ್ದಾರೆ. ಇಷ್ಟಕ್ಕೆ ಅವರು ಅಲ್ಲಿ ನಮ್ಮದೇನು ಕೆಲಸ ಇಲ್ಲ. ನಾನು ಯಾಕೆ ಬರಲಿ? ನಾವು ಹಿದಕ್ಕೆ ಸರಿದಿದ್ದೇವೆ. ನಾವು ಚುನಾವಣೆಯಲ್ಲಿ ಸೋತು ಸುಣ್ಣ ಆಗಿದ್ದೀವಿ. ನೀನು ಮಂತ್ರಿಯಾಗಿದೀಯಾ ಅಂತ ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಲ್ಲಿಕಾರ್ಜುನ್ ಅವರ ಕೆಂಗಣ್ಣಿಗೆ ಗುರಿಯಾಗಿ ಎಂ.ಬಿ.ಪಾಟೀಲ್ ಅವರು ಸಪ್ಪೆಮೊರೆ ಹಾಕಿಕೊಂಡು ಸುಮ್ಮನಾದರು. ಈ ವೇಳೆ ಶಾಮನೂರು ಶಿವಶಂಕರಪ್ಪ ಮಧ್ಯ ಪ್ರವೇಶಿಸಿ ಮಲ್ಲಿಕಾರ್ಜುನ್ ಅವರನ್ನು ಸಮಾಧಾನ ಮಾಡಿದರು. ಬಳಿಕ ಶಾಮನೂರು ಅವರ ಜೊತೆ ಎಂ.ಬಿ.ಪಾಟೀಲ್ ಊಟಕ್ಕೆ ತೆರಳಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್, ಮಲ್ಲಿಕಾರ್ಜುನ್ ನಾನು ಸಹೋದರರು. ಪದೇ ಪದೇ ನಮ್ಮ ನಡುವೆ ಈ ರೀತಿ ಗಲಾಟೆ ನಡೆಯುತ್ತಲೇ ಇರುತ್ತವೆ. ದಾವಣಗೆರೆಗೆ ಎಸ್.ಎಸ್.ಮಲ್ಲಿಕಾರ್ಜುನ್ ನಿಲ್ಲದೇ ಇದ್ದರೆ ಹಿರಿಯರು ಶಾಮನೂರು ಶಿವಶಂಕರಪ್ಪನವರು ನಿಲ್ಲುತ್ತಾರೆ. ಅವರ ಪರವಾಗಿ ನಾನು ಚುನಾವಣಾ ಪ್ರಚಾರಕ್ಕೆ ಬರುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಏರ್ ಶೋ ವೇಳೆ ಕಾರು ಸುಟ್ಟು ಹೋಗಿರುವ ಮಾಲೀಕರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯ ಮಾಡೋದಾಗಿ ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಇನ್ಶ್ಯೂರೆನ್ಸ್ ಇಲ್ಲದವರಿಗೆ ಪರಿಹಾರ ನೀಡುವುದಕ್ಕೆ ಸಿಎಂ ಕುಮಾರಸ್ವಾಮಿ ಒಪ್ಪಿದ್ದಾರೆ ಎಂದು ಮಂಗಳವಾರ ವಿಧಾನಸೌಧದಲ್ಲಿ ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡಿರುವ ಕೆಲವರಿಗೆ ಪರಿಹಾರದ ಚೆಕ್ ವಿತರಿಸಿ ಮಾತಾಡಿದ್ದಾರೆ.
ಸುಬೋದಿಪ್ ಹಾಜ್ರಾ, ರಮಾಕಾಂತ್ ಹಾಗೂ ಗಿರಿಜಮ್ಮ ಎನ್ನುವರಿಗೆ ಇನ್ಶ್ಯೂರೆನ್ಸ್ ಚೆಕ್ ವಿತರಿಸಿದರು. ಬೆಂಗಳೂರಿನ ಯಲಹಂಕದಲ್ಲಿ ಏರ್ ಶೋ ನಡೆಯುವ ವೇಳೆ 277 ಕಾರುಗಳು ಸುಟ್ಟು ಹೋಗಿದ್ದವು.
251 ಕಾರುಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಇವುಗಳಲ್ಲಿ 60 ವಾಹನಗಳು ಗುರುತಿಸಲಾಗದ ಸ್ಥಿತಿಯಲ್ಲಿವೆ. 26 ಕಾರುಗಳು ಅರ್ಧ ಸುಟ್ಟು ಹೋಗಿವೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ವಿಜಯಪುರ: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಶಿವನ ದರ್ಶನ ಪಡೆಯಲು ಭಕ್ತರು ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಗೃಹ ಸಚಿವ ಎಂ.ಬಿ ಪಾಟೀಲ್ ನೇರವಾಗಿ ಶಿವ ದರ್ಶನ ಪಡೆದಿದ್ದಾರೆ. ನೇರವಾಗಿ ಶಿವನ ದರ್ಶನ ಪಡೆದ ಎಂ.ಬಿ ಪಾಟೀಲ್ ರನ್ನು ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದ್ದಾಳೆ.
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಎಂ.ಬಿ ಪಾಟೀಲ್ ಬಿಎಲ್ಡಿಇ ಆವರಣದಲ್ಲಿರುವ ಪುರಾಣ ಪ್ರಸಿದ್ಧ 770 ಲಿಂಗದ ಗುಡಿ ಶಿವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಅವರು ನೇರವಾಗಿ ಶಿವನ ದರ್ಶನ ಪಡೆದು ಹೋದರು. ಈ ವೇಳೆ ವಿದ್ಯಾರ್ಥಿನಿ ಸಚಿವರನ್ನು ಪ್ರಶ್ನಿಸಿದ್ದಾಳೆ.
ಒಂದು ಗಂಟೆಯಿಂದ ಸಾಲಿನಲ್ಲಿ ನಿಂತಿದ್ದೇವೆ. ನೀವು ಈಗ ಬಂದು ದರ್ಶನ ಪಡೆದಿದ್ದೀರಾ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ. ಅದಕ್ಕೆ ಎಂ.ಬಿ ಪಾಟೀಲ್ ತುರ್ತಾಗಿ ತೆರಳುವುದಿದೆ ಎಂದು ಬಾಲಕಿಗೆ ಸಮಜಾಯಿಸಿ ನೀಡಿದ್ದರು. ಅಲ್ಲದೇ ನನಗೂ ಸಾಮಾನ್ಯನಂತೆ ಜೀವಿಸುವ ಇಚ್ಛೆಯಿದೆ. ಹಾಗಾಗಿ ನಾನಗಿ ಝೀರೋ ಟ್ರಾಫಿಕ್ ಬೇಡ ಎಂದು ಸೂಚಿಸಿದ್ದೇನೆ ಎಂದು ನಯವಾಗಿ ಉತ್ತರಿಸಿದರು.
ಬಳಿಕ ದೇವಸ್ಥಾನದಿಂದ ತೆರಳುವ ವೇಳೆ ಎಂ.ಬಿ ಪಾಟೀಲ್ ವಿದ್ಯಾರ್ಥಿನಿಗೆ ಕ್ಷಮೆ ಕೇಳಿದಲ್ಲದೇ ನಿನ್ನ ಸಲಹೆಯನ್ನು ನಾನು ಸ್ವೀಕರಿಸುತ್ತೇನೆ ಎಂದು ವಿದ್ಯಾರ್ಥಿನಿಗೆ ಹೇಳಿದ್ದಾರೆ.
ಕಲಬುರಗಿ: ನಿರ್ಗಮನ ಪಥ ಸಂಚಲನದಲ್ಲಿ ಐದು ಜನ ತರಬೇತಿ ಪಿಎಸ್‍ಐ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ಕಲಬುರಗಿಯ ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ನಡೆದಿದೆ.
ನಾಗನಹಳ್ಳಿಯಲ್ಲಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮನ ನಡೆಯುತ್ತಿತ್ತು. ಈ ವೇಳೆ ಗೃಹ ಸಚಿವ ಎಂಬಿ ಪಾಟೀಲ್ ಭಾಷಣದ ಮಧ್ಯೆಯೇ ಒಬ್ಬರ ಹಿಂದೆ ಒಬ್ಬರು ಐವರು ತರಬೇತಿ ಪಿಎಸ್‍ಐ ಕುಸಿದು ಬಿದ್ದಿದ್ದಾರೆ.
ಸಚಿವರಿಗಾಗಿ ಸುಮಾರು ಬೆಳಗ್ಗೆ 7 ಗಂಟೆಯಿಂದ ಬಿಸಿಲಿನಲ್ಲಿ ತರಬೇತಿ ಪಿಎಸ್‍ಐಗಳು ಕಾದು ನಿಂತಿದ್ದರು. ಆದರೆ ಬೆಳಗ್ಗೆ 8 ಗಂಟೆಗೆ ಬರಬೇಕಾದ ಗೃಹ ಸಚಿವರು ಒಂದೂವರೆ ಗಂಟೆ ತಡವಾಗಿ ಸುಮಾರು 9.30ಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಲಿನಲ್ಲೇ ನಿಂತಿದ್ದರಿಂದ ಸುಸ್ತಾಗಿ ಬಿದ್ದಿದ್ದಾರೆ. ಸುಮಾರು 267 ಪಿಎಸ್‍ಐಗಳು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ನೀರು, ಆಹಾರವಿಲ್ಲದೇ ಕಾಯುತ್ತಿದ್ದರು.
ಇತ್ತ ತರಬೇತಿ ಪಿಎಸ್‍ಐಗಳು ಕುಸಿದು ಬೀಳುತ್ತಿದ್ದರೂ ಕೂಡ ಗೃಹ ಸಚಿವರು ಭಾಷಣವನ್ನು ಮುಂದುವರಿಸಿದ್ದರು. ಇದರಿಂದ ಅಲ್ಲಿದ್ದ ಜನರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಿಕ್ಷಣಾರ್ಥಿ ಅಸ್ವಸ್ಥಗೊಂಡರು ಭಾಷಣ ಮಾಡುವ ಮೂಲಕ ಸಚಿವ ಎಂ.ಬಿ. ಪಾಟೀಲ್ ಮಾನವಿಯತೆ ಮರೆತರಾ ಎಂಬ ಪ್ರಶ್ನೆ ಮೂಡಿದೆ.