Tag: M.B Patil

  • ಬಿಎಸ್‍ವೈ ಕಾಂಗ್ರೆಸ್‍ಗೆ ಬಂದ್ರೆ ಸಿಎಂ ಆಗಲು ಸಹಾಯ ಮಾಡ್ತೀನಿ: ಎಂಬಿಪಿ

    ಬಿಎಸ್‍ವೈ ಕಾಂಗ್ರೆಸ್‍ಗೆ ಬಂದ್ರೆ ಸಿಎಂ ಆಗಲು ಸಹಾಯ ಮಾಡ್ತೀನಿ: ಎಂಬಿಪಿ

    ವಿಜಯಪುರ: ಬಿಎಸ್ ಯಡಿಯೂರಪ್ಪ ಕಾಂಗ್ರೆಸ್‍ಗೆ ಬಂದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ ಎಂದು ಗೃಹ ಸಚಿವ ಎಂಬಿ ಪಾಟೀಲ್ ಹೇಳುವ ಮೂಲಕ ಸಿಟಿ ರವಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಸುರೇಶ್ ಅಂಗಡಿಯವರಿಗೆ ರಾಜ್ಯ ದರ್ಜೆಯ ಸ್ಥಾನಮಾನ ನೀಡಿ ಲಿಂಗಾಯತರಿಗೆ ಅವಮಾನ ಮಾಡಲಾಗಿದೆ ಎಂದು ಎಂಬಿಪಿ ಹೇಳಿದ್ದರು. ಇದಕ್ಕೆ ಲಿಂಗಾಯತ ಸಮಾಜದ ಪ್ರಭಾವಿ ನಾಯಕ ಯಡಿಯೂರಪ್ಪ ಸಿಎಂ ಆಗಲು ಎಂಬಿ ಪಾಟೀಲ್ ಕಾಂಗ್ರೆಸ್ಸಿಗೆ ಬೆಂಬಲ ನೀಡಲಿ ಎಂದು ಬಿಜೆಪಿ ನಾಯಕ ಸಿಟಿ ರವಿ ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಎಂಬಿಪಿ ಬಿಎಸ್‍ವೈರನ್ನು ಕಾಂಗ್ರೆಸ್ಸಿಗೆ ಆಹ್ವಾನಿಸುವ ಮೂಲಕ ಸಿ.ಟಿ ರವಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಾಯಕ ರಾಮಲಿಂಗಾರೆಡ್ಡಿ ಪರ ಬ್ಯಾಟಿಂಗ್ ನಡೆಸಿದ ಗೃಹ ಸಚಿವರು, ರಾಮಲಿಂಗಾರೆಡ್ಡಿ ನಮ್ಮ ಪಕ್ಷದ ಅತ್ಯುನ್ನತ ನಾಯಕರು. ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರು ಪಕ್ಷಕ್ಕೆ ದೊಡ್ಡ ಸ್ವತ್ತು. ಪಕ್ಷ ಅವರ ಭಾವನೆಗಳಿಗೆ ಗೌರವಿಸಬೇಕಾಗುತ್ತೆ ಎಂದರು.

    ಗುರುವಾರ ಬೆಂಗಳೂರಿಗೆ ಹೋದ ಮೇಲೆ ರಾಮಲಿಂಗಾರೆಡ್ಡಿಯವರನ್ನ ಭೇಟಿ ಮಾಡುತ್ತೇನೆ. ಅವರಿಗೆ ಪಕ್ಷದ ಮೇಲಿರುವ ನಿಷ್ಠೆ ನಮಗಿಲ್ಲ. ಅವರು ನಿಷ್ಠಾವಂತ, ಪ್ರಭಾವ ಹೊಂದಿರುವ ನಾಯಕರು. ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಅಲ್ಲದೆ ಮೂಲ ಹಾಗೂ ಹೊಸ ಕಾಂಗ್ರೆಸ್ಸಿಗರ ಬಗ್ಗೆ ಅವರು ಹೇಳಿದ್ದು ಸರಿ ಇದೆ ಎಂದು ರಾಮಲಿಂಗಾ ರೆಡ್ಡಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಅಲ್ಲದೇ ರಾಮಲಿಂಗಾ ರೆಡ್ಡಿಯವರನ್ನ ವೇಣುಗೋಪಾಲ್ ಅವರು ಕರೆದು ಚರ್ಚೆ ಮಾಡುತ್ತಾರೆ ಎಂದು ಸ್ಪಷ್ಟ ಪಡಿಸಿದರು.

    ಪೊಲೀಸ್ ಇಲಾಖೆಯಲ್ಲಿರುವ ವೇತನ ತಾರತಮ್ಯ ನಿವಾರಣೆಗಾಗಿ ಔರದ್ಕರ್ ಸಮಿತಿ ನೀಡಿರುವ ವರದಿ ಜಾರಿ ಸಂಬಂಧ ಜೂನ್ 10ರಂದು ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ಅಂದು ಒಳ್ಳೆಯ ತೀರ್ಮಾನ ಹೊರ ಬೀಳುವ ವಿಶ್ವಾಸವಿದೆ ಎಂದು ತಿಳಿಸಿದರು.

    ಅಂಗಡಿ ಬಗ್ಗೆ ಪಾಟೀಲ್ ಹೇಳಿದ್ದೇನು?
    ಮಾಧ್ಯಮಗಳ ಜೊತೆ ವಿಜಯಪುರದಲ್ಲಿ ಮಾತನಾಡಿದ್ದ ಪಾಟೀಲ್ ಅವರು, ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ್ ಜೋಶಿಗೆ ಮಾನದಂಡ ಬೇರೆ-ಬೇರೆಯಾಗಿದೆ. ಇಬ್ಬರು ನಾಲ್ಕು ಬಾರಿ ಗೆದ್ದು ಬಂದಿದ್ದು, ಅನುಭವ ಹೊಂದಿದ್ದಾರೆ. ಆದರೆ ಪ್ರಹ್ಲಾದ್ ಜೋಶಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದರೆ ಸುರೇಶ್ ಅಂಗಡಿಯವರು ರಾಜ್ಯ ಸಚಿವರು. ಇಬ್ಬರು ಒಂದೇ ಸಮಾನವಾಗಿದ್ದರೂ ವ್ಯತ್ಯಾಸ ಮಾಡಿದ್ದಾರೆ. ಈ ವಿಚಾರವನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.

    ಸುರೇಶ್ ಅಂಗಡಿಯವರಿಗೂ ಕ್ಯಾಬಿನೆಟ್ ದರ್ಜೆ ನೀಡಬೇಕಿತ್ತು. ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಇದು ಒಂದು ದೊಡ್ಡ ಅನ್ಯಾಯ. ಈ ಮೂಲಕ ಲಿಂಗಾಯತರಿಗೆ ಅಗೌರವ ತೋರಿಸಿದ್ದಾರೆ. ಪಾಪ ಸುರೇಶ್ ಅಂಗಡಿಯವರು ಕೇಂದ್ರದ ರಾಜ್ಯ ಸಚಿವರು. ಅದಕ್ಕಾಗಿ ಪ್ರಹ್ಲಾದ್ ಜೋಶಿ ಕಡೆಗೆ ಅಂಗಡಿ ನೋಡಬೇಕು. ಸ್ವಾಭಿಮಾನವಿದ್ದರೆ ಸುರೇಶ್ ಅಂಗಡಿ ಜಾಗದಲ್ಲಿ ನಾನು ಇದ್ದಿದ್ದರೆ ಸಚಿವ ಸ್ಥಾನ ತಿರಸ್ಕಾರ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು.

    ಸಿಟಿ ರವಿ ಹೇಳಿದ್ದು ಏನು?
    ಬಿಜೆಪಿ ಪಕ್ಷ ಲಿಂಗಾಯುತ ಸಮುದಾಯದ ನಾಯಕರರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ಧವಿದೆ. ಲಿಂಗಾಯುತ ಸಮುದಾಯದ ಮೇಲೆ ಕಾಳಜಿ ಇರುವ ನೀವು ಏಕೆ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಲಿಂಗಾಯುತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬಾರದು. ನಿಮ್ಮ ಕೈಯಲ್ಲಿ ಇಲ್ಲದ ಭವಿಷ್ಯ ಹೇಳುವುದನ್ನು ಬಿಟ್ಟು ವರ್ತಮಾನದ ಬಗ್ಗೆ ಮಾತನಾಡಿ. ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಲಿಂಗಾಯತ ಪರ ಕಾಳಜಿಯನ್ನು ಈಗ ತೋರಿಸಿ ಎಂದು ಬರೆದು ಕಾಲೆಳೆದಿದ್ದರು.

  • ಮೆಜೆಸ್ಟಿಕ್‍ನಲ್ಲಿ ಪತ್ತೆಯಾಗಿದ್ದು ಕೊಲ್ಕತ್ತಾದಲ್ಲಿ ತಯಾರಾದ ಗ್ರೆನೇಡ್

    ಮೆಜೆಸ್ಟಿಕ್‍ನಲ್ಲಿ ಪತ್ತೆಯಾಗಿದ್ದು ಕೊಲ್ಕತ್ತಾದಲ್ಲಿ ತಯಾರಾದ ಗ್ರೆನೇಡ್

    ಬೆಂಗಳೂರು: ಮೆಜೆಸ್ಟಿಕ್‍ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಗ್ರೆನೇಡ್ ಕೋಲ್ಕತ್ತಾದಲ್ಲಿ ತಯಾರಾಗಿದ್ದು, ಗ್ರೆನೇಡ್‍ನ ಮೇಲೆ ಯಾವುದೇ ಮಾರ್ಕ್ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಪಶ್ಚಿಮ ಬಂಗಾಳದ ಸ್ಥಳೀಯ ಫ್ಯಾಕ್ಟರಿಯಲ್ಲಿ ಈ ಗ್ರೆನೇಡ್ ತಯಾರು ಮಾಡಲಾಗಿದೆ ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ದೂರದ ಪಶ್ಚಿಮ ಬಂಗಾಳದಲ್ಲಿ ತಯಾರಾದ ಗ್ರೆನೇಡ್ ಅನ್ನು ಬೆಂಗಳೂರಿಗೆ ತಂದವರು ಯಾರು? ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಇಟ್ಟವರು ಯಾರು? ಎಂಬ ಬಗ್ಗೆ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ!

    ಗ್ರೆನೇಡ್‍ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ ಎನ್ನುವ ವಿಚಾರ ತಿಳಿದು ಬಂದಿದೆ. ಬೆದರಿಕೆ ಕರೆ ಹಾಗೂ ಗ್ರೆನೇಡ್ ಪತ್ತೆಯಾದ ಬಳಿಕ ಮೆಜೆಸ್ಟಿಕ್ ಸುತ್ತಮುತ್ತ ರೈಲ್ವೇ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದಾರೆ. ರೈಲ್ವೇ ಎಸ್‍ಪಿ ಗುಳೇದ್ ನೇತೃತ್ವದಲ್ಲಿ ರೈಲ್ವೇ ನಿಲ್ದಾಣಕ್ಕೆ ಭದ್ರತೆ ಒದಗಿಸಲಾಗುತ್ತಿದೆ. ಹಾಗೆಯೇ ಮೆಜೆಸ್ಟಿಕ್‍ನಲ್ಲಿರುವ ಹತ್ತು ಪ್ಲಾಟ್ ಫಾರ್ಮ್‍ಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ಮೆಜೆಸ್ಟಿಕ್‍ನಿಂದ ಹೊರಡುವ ಎಲ್ಲಾ ರೈಲುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾಗುತ್ತಿದಂತೆ ಸಮೀಪದಲ್ಲಿದ್ದ ಕೆಲವು ಸ್ಟಾಲ್‍ಗಳನ್ನು ಮುಚ್ಚಿಸಿದ್ದಾರೆ.

    ಪುಲ್ವಾಮ ದಾಳಿ ನಂತರ ಇಡೀ ರೈಲ್ವೇ ನಿಲ್ದಾಣ ತಪಾಸಣೆ ಮಾಡಲಾಗಿತ್ತು. ಈ ವೇಳೆ ನಿಲ್ದಾಣದ ಸಾಕಷ್ಟು ಕಡೆಗಳಲ್ಲಿ ಸಿಸಿಟಿವಿ ಕೆಲಸ ಮಾಡದಿರುವುದು ಪತ್ತೆಯಾಗಿತ್ತು. ಆಗ ಎಲ್ಲಾ ಕಡೆಯಲ್ಲಿ ಸಿಸಿಟಿವಿ ಅಳವಡಿಸುವಂತೆ ರೈಲ್ವೇ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಈಗ ಗ್ರೆನೇಡ್ ಸಿಕ್ಕಿರುವ ಜಾಗಕ್ಕೆ ಐದಾರು ಕಡೆಗಳಿಂದ ಒಳಬರಲು ದಾರಿ ಇದೆ. ಹೀಗಾಗಿಯೂ ಈ ಬಗ್ಗೆ ರೈಲ್ವೇ ಪೋಲೀಸರು ಯಾವುದೇ ಮುಂಜಾಗ್ರತೆ ಕ್ರಮ ವಹಿಸಿಲ್ಲ ಎನ್ನಲಾಗಿದೆ.

    ಈ ಬಗ್ಗೆ ಗೃಹ ಸಚಿವ ಎಂ.ಬಿ ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಾಥಮಿಕ ವರದಿ ಪ್ರಕಾರ ಅದು ಡಮ್ಮಿ ವಸ್ತು. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಾವು ಅಧಿಕಾರಿಗಳಿಂದ ಪಡೆಯುತ್ತೇವೆ. ಅದು ಯಾವ ವಸ್ತು, ಎಲ್ಲಿಂದ ಬಂತು ಅನ್ನೊ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

  • ಎಂಬಿಪಿಗೆ ಆಶೀರ್ವಾದ ಮಾಡಿದ್ದಕ್ಕೆ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಉಚ್ಛಾಟನೆ!

    ಎಂಬಿಪಿಗೆ ಆಶೀರ್ವಾದ ಮಾಡಿದ್ದಕ್ಕೆ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಉಚ್ಛಾಟನೆ!

    ಕಲಬುರಗಿ: ಗೃಹ ಸಚಿವ ಎಂಬಿ ಪಾಟೀಲ್‍ಗೆ ರುದ್ರಾಕ್ಷಿ ಕೀರಿಟ ನೀಡಿ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದ್ದಕ್ಕೆ ಕಲಬುರಗಿಯ ಸರಡಗಿ ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿಯವರನ್ನು ಶಿವಾಚಾರ್ಯ ಸಂಸ್ಥೆಯಿಂದ ಉಚ್ಛಾಟನೆ ಮಾಡಲಾಗಿದೆ.

    ಶ್ರೀ ರೇವಣಸಿದ್ದ ಸ್ವಾಮೀಜಿಗಳು ಕಲಬುರಗಿ ತಾಲೂಕಿನ ಸರಡಗಿ ಮಠದವರು. ಕಳೆದ ಕೆಲವು ದಿನಗಳ ಹಿಂದೆ ಸರಡಗಿ ಮಠಕ್ಕೆ ಎಂ.ಬಿ ಪಾಟೀಲ್ ಭೇಟಿ ನೀಡಿದ್ದರು. ಈ ವೇಳೆ ರೇವಣಸಿದ್ದ ಸ್ವಾಮೀಜಿಗಳು ಸಚಿವರಿಗೆ ಆಶೀರ್ವಾದ ಮಾಡಿದ್ದರು. ಆದರೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈ ಹಾಕಿದ ಎಂ.ಬಿ.ಪಾಟೀಲ್ ಅವರಿಗೆ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದಕ್ಕೆ ರೇವಣಸಿದ್ದ ಸ್ವಾಮೀಜಿಗಳನ್ನು ಉಚ್ಛಾಟನೆಗೊಳಿಸಿ ಎಂದು ವಿಮಲಮಠದ ವಿರಕ್ತ ಶಿವಾಚಾರ್ಯ ಸ್ವಾಮೀಜಿ ಆದೇಶ ನೀಡಿದ್ದಾರೆ.

    ಈ ಬಗ್ಗೆ ಶ್ರೀ ರೇವಣಸಿದ್ದ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಮದ್ಯ ಮುಕ್ತ ಗ್ರಾಮ ಮಾಡಲು ಅಭಿಯಾನ ಹಮ್ಮಿಕೊಂಡಿದ್ದೇವು. ಆ ಒಂದು ಅಭಿಯಾನಕ್ಕೆ ಗೃಹ ಸಚಿವರನ್ನ ಉದ್ಘಾಟನೆಗೆ ಕರೆಸಿದ್ದೇವು. ಈ ವೇಳೆ ಎಂ.ಬಿ ಪಾಟೀಲ್‍ರಿಗೆ ನೀವು ಸಿಎಂ ಆಗುತ್ತೀರಾ ಎಂದು ಆಶೀರ್ವಾದ ಮಾಡಿದ್ದು ನಿಜ. ಮಠಕ್ಕೆ ಬರೋ ಪ್ರತಿಯೊಬ್ಬರನ್ನ ಆಶಿರ್ವಾದ ಮಾಡೋದು ನಮ್ಮ ಕರ್ತವ್ಯ ಎಂದರು.

    ಆದರೆ ಇದೇ ವಿಚಾರದಿಂದ ನನ್ನ ಶಿವಾಚಾರ್ಯ ಸಂಸ್ಥೆಯಿಂದ ಉಚ್ಛಾಟಿಸಲಾಗಿದೆ. ನನ್ನ ಕರ್ತವ್ಯ ನಾನು ಪಾಲನೆ ಮಾಡಿದ್ದೀನಿ, ಉಚ್ಛಾಟನೆ ಮಾಡಿದರೆ ಮಾಡಲಿ ಎಂದು ವಿಮಲ ಮಠದ ವೀರಕ್ತ ಶಿವಾಚಾರ್ಯ ಸ್ವಾಮೀಜಿಗೆ ರೇವಣಸಿದ್ದ ಶಿವಚಾರ್ಯ ಸ್ವಾಮೀಜಿ ತಿರುಗೇಟು ನೀಡಿದರು.

  • ನಿವೇನ್ರೀ ಯಾವಾಗ್ಲೂ ಸಿದ್ದರಾಮಯ್ಯ, ಶೋಭಾ ಬಗ್ಗೆ ಕೇಳ್ತೀರಾ – ಮಾಧ್ಯಮಗಳ ವಿರುದ್ಧ ಎಂಬಿಪಿ ಗರಂ

    ನಿವೇನ್ರೀ ಯಾವಾಗ್ಲೂ ಸಿದ್ದರಾಮಯ್ಯ, ಶೋಭಾ ಬಗ್ಗೆ ಕೇಳ್ತೀರಾ – ಮಾಧ್ಯಮಗಳ ವಿರುದ್ಧ ಎಂಬಿಪಿ ಗರಂ

    ಕಲಬುರಗಿ: ನಿವೇನ್ರೀ ಯಾವಾಗಲೂ ಸಿದ್ದರಾಮಯ್ಯ ಬಗ್ಗೆ ಶೋಭಾ ಬಗ್ಗೆ ಕೇಳುತ್ತೀರಿ ಎಂದು ಪ್ರಶ್ನಿಸಿ ಮಾಧ್ಯಮಗಳ ವಿರುದ್ಧ ಗೃಹ ಸಚಿವ ಎಂಬಿ ಪಾಟೀಲ್ ಗರಂ ಆಗಿದ್ದಾರೆ.

    ಪ್ರಧಾನಿ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಸಾಕಷ್ಟು ಲೂಟಿಯಾಗಿದೆ. ತಮ್ಮ ಹತ್ತಿರದವರಿಗೆ ಮೋದಿ ಅನೂಕುಲ ಮಾಡಿಕೊಟ್ಟಿದ್ದಾರೆ. ಇದರಿಂದ ರೈತರಿಗೆ ಬೆಳೆ ಪರಿಹಾರ ಸೇರಿದಂತೆ ಅನೇಕ ಯೋಜನೆಗಳು ಮುಟ್ಟಿಲ್ಲ. ಮಾಧ್ಯಮಗಳು ರೈತರ ಪರವಾಗಿದ್ದೀವಿ ಅಂತಿರಲ್ವ? ರೈತರಿಗೆ ಸಾಕಷ್ಟು ಅನ್ಯಾಯವಾಗ್ತಿದೆ. ಇದನ್ನು ತೋರಿಸಿ ಎಂದು ಸಿಟ್ಟಿನಿಂದ ಹೇಳಿದರು.

    ಇಲ್ಲ ಸರ್ ಈ ಬಗ್ಗೆ ನಮ್ಮ ಟಿವಿಯಲ್ಲಿ ಸುದ್ದಿ ಪ್ರಸಾರ ಮಾಡಿದ್ದೀವಿ. ಆದರೆ ನೀವೇ ಅದರ ಹೋರಾಟ ಮಾಡಿಲ್ಲ ಎಂಬ ಪರ್ತಕರ್ತರ ಮರು ಪ್ರಶ್ನೆಗೆ, ಆಯ್ತು ಒಳ್ಳೆಯದು. ಬರದ ನೆರವಿಗೆ ಕೇಂದ್ರ ಬಂದಿಲ್ಲ, ಇದನ್ನು ಮೊದಲು ಹೈಲೆಟ್ ಮಾಡಿ. ಅದು ಬಿಟ್ಟು ಶೋಭಾ ಬಗ್ಗೆ, ರೇಣುಕಾಚಾರ್ಯ ಬಗ್ಗೆ ಕೇಳುತ್ತಿದ್ದಿರಲ್ಲ. ಬಿಡ್ರಿ ಇದೆಲ್ಲ. ನೀವು ಮಾಧ್ಯಮದವರು ಇನ್ನು ಬಹಳ ಎತ್ತರಕ್ಕೆ ಬೆಳೆಯಬೇಕು ರೀ ಎಂದು ಹೇಳಿ ಹೊರಟುಹೋದರು.

  • ಬಿಎಸ್‍ವೈ ನಂತ್ರ ಡೈನಾಮಿಕ್ ಲೀಡರ್ ನಾನೇ: ಯತ್ನಾಳ್

    ಬಿಎಸ್‍ವೈ ನಂತ್ರ ಡೈನಾಮಿಕ್ ಲೀಡರ್ ನಾನೇ: ಯತ್ನಾಳ್

    – ಎಂಬಿಪಿ ಬಿಜೆಪಿಗೆ ಬಂದ್ರೆ ಅವ್ರ ಪರ ನಾನು ನಿಲ್ತೀನಿ
    – ಸಿಎಂ ಆಗಲು ನನಗೆ ಅರ್ಹತೆ ಇದೆ

    ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷಕ್ಕೆ ಸ್ಥಾನಕ್ಕೆ ನಾನು ಟವೆಲ್ ಹಾಕಿದ್ದೇನೆ. ಹಾಗೇ ಉತ್ತರ ಕರ್ನಾಟಕದಿಂದ ಮುಖ್ಯಮಂತ್ರಿಯಾಗಲು ನನಗೂ ಅರ್ಹತೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕರು, ನನ್ನ ವಿರುದ್ಧ ಯಾವುದೇ ಹಗರಣ, ಪ್ರಕರಣ ದಾಖಲಾಗಿಲ್ಲ. ಹೀಗಾಗಿ ನಾನು ಕೂಡ ಸಿಎಂ ಅಭ್ಯರ್ಥಿಯಾಗಲು ಅರ್ಹನಾಗಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬದುಕಿರುವವರೆಗೂ ಅವರೇ ಮುಖ್ಯಮಂತ್ರಿ ಆಗುತ್ತಾರೆ. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಪಡೆದಿದೆ. ಯಡಿಯೂರಪ್ಪ ಅವರ ನಂತರ ನಾನೇ ಡೈನಾಮಿಕ್ ಲೀಡರ್ ಎಂದು ಹೇಳಿದರು.

    ಮಂತ್ರಿಗಿರಿ ನೀಡಲಿಲ್ಲ ಅಂತ ಗೃಹ ಸಚಿವ ಎಂ.ಬಿ.ಪಾಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಆಗ ಅವರನ್ನು ಬಿಜೆಪಿಗೆ ತರುವ ಪ್ರಯತ್ನ ಮಾಡಿದ್ದೇವು. ಬಿಜೆಪಿಗೆ ಬಂದರೆ ಸಚಿವರಿಗೆ ಉತ್ತಮ ಭವಿಷ್ಯವಿದೆ ಎಂದರು.

    ಎಂ.ಬಿ.ಪಾಟೀಲ್ ಅವರು ಬಿಜೆಪಿಗೆ ಬರಲಿ. ಸಚಿವರ ಪರವಾಗಿ ನಾನು ನಿಲ್ಲುತ್ತೇನೆ. ನನಗೆ ಮಂತ್ರಿ ಸ್ಥಾನ ಬೇಡ. ಎಂ.ಬಿ.ಪಾಟೀಲರಿಗೆ ಬೇಕಾಗಿರುವ ನೀರಾವರಿ ಖಾತೆ ಜೊತೆಗೆ ಬೇರೆ ಖಾತೆಗೂ ಲಾಬಿ ಮಾಡುತ್ತೇನೆ. ಆದರೆ ಉತ್ತರ ಕರ್ನಾಟಕದ ಸಿಎಂ ಅಭ್ಯರ್ಥಿ ನಾನೇ ಎಂದು ತಿಳಿಸಿದರು.

  • ಮನಸ್ಸು ಮಾಡಿದರೆ ಗೃಹಸಚಿವರನ್ನು ಬಿಜೆಪಿಗೆ ತರಬಹುದು: ಯತ್ನಾಳ್

    ಮನಸ್ಸು ಮಾಡಿದರೆ ಗೃಹಸಚಿವರನ್ನು ಬಿಜೆಪಿಗೆ ತರಬಹುದು: ಯತ್ನಾಳ್

    – ಸೋಮನಗೌಡ ಪಾಟೀಲ್ ಬಿಜೆಪಿ ಬಿಡಲ್ಲ

    ವಿಜಯಪುರ: ಮನಸ್ಸು ಮಾಡಿದರೆ ಗೃಹ ಸಚಿವ ಎಂ.ಬಿ. ಪಾಟೀಲ್ ಅವರನ್ನು ಬಿಜೆಪಿಗೆ ತರಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕರು, ಎಂ.ಬಿ.ಪಾಟೀಲ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮಾಡಿದ್ದಿವೋ ಬಿಟ್ಟಿದ್ದಿವೋ ಅದು ನಮಗೆ ಗೊತ್ತು. ಅದನ್ನು ಮಾಧ್ಯಮದ ಮುಂದೆ ಯಾಕೆ ಹೇಳಬೇಕು. ಅದು ನಮ್ಮ ವೈಯಕ್ತಿಕ ವಿಚಾರ ಎಂದು ನಗೆ ಬೀರಿದರು.

    ಇತ್ತೀಚೆಗೆ ಬಿಡುಗಡೆಯಾದ ಆಡಿಯೋದಲ್ಲಿ ಸೋಮನಗೌಡ ಪಾಟೀಲ್ ಅವರು ಮಾತನಾಡಿಲ್ಲ. ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ್ ಒಳ್ಳೆಯ ಮನೆತನದಿಂದ ಬಂದವರು. ಅವರು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಲ್ಲ. ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಸಹಜವಾಗಿಯೇ ಮಾತನಾಡಿದ್ದಾರೆ. ಅದರಲ್ಲೇನು ಗಂಭೀರವಾದ ವಿಷಯವಿಲ್ಲ. ಕಾರ್ಯಕರ್ತರ ಜೊತೆಗೆ ಸಾಮಾನ್ಯವಾಗಿ ಹೀಗೆ ಮಾತನಾಡುತ್ತೇವೆ ಎನ್ನುವ ಮೂಲಕ ತಮ್ಮ ಹಾಗೂ ಜೆಡಿಎಸ್ ಶಾಸಕರ ಪರ ಬ್ಯಾಟ್ ಬೀಸಿದರು.

    ನನ್ನ ಹಾಗೂ ಗೃಹಸಚಿವ ಎಂ.ಬಿ.ಪಾಟೀಲ್ ನಡುವಿನ ಸಂಬಂಧ ಚೆನ್ನಾಗಿದೆ. ಅದರ ಅರ್ಥ ಅವರು ಬಿಜೆಪಿ ಬರುತ್ತಾರೆ ಅಥವಾ ನಾನು ಕಾಂಗ್ರೆಸ್ ಸೇರುತ್ತೇನೆ ಅಂತ ಅಲ್ಲ. ಅಭಿವೃದ್ಧಿ ವಿಷಯದಲ್ಲಿ ನಮ್ಮ ಅವರ ಸಂಬಂಧ ಚೆನ್ನಾಗಿದೆ ಅಷ್ಟೇ ಎಂದು ಹೇಳಿದರು.

  • ಆಪರೇಷನ್ ಕಮಲಕ್ಕೆ ರಿವರ್ಸ್ ಆಪರೇಷನ್ – ಜೆಡಿಎಸ್ ಶಾಸಕರ ಆಡಿಯೋ ವೈರಲ್

    ಆಪರೇಷನ್ ಕಮಲಕ್ಕೆ ರಿವರ್ಸ್ ಆಪರೇಷನ್ – ಜೆಡಿಎಸ್ ಶಾಸಕರ ಆಡಿಯೋ ವೈರಲ್

    ವಿಜಯಪುರ: ಮೈತ್ರಿ ಸರ್ಕಾರ ಬೀಳಿಸಲು ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಪ್ರತಿ ಕಾಂಗ್ರೆಸ್ ಪ್ರತ್ಯುತ್ತರ ನೀಡಲು ರಿವರ್ಸ್ ಆಪರೇಷನ್ ನಡೆಸಿದೆಯಂತೆ.

    ಈ ಸಂಬಂಧ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಶಾಸಕರು ಶಿವಾಜಿ ಎಂಬವರ ಜೊತೆಗೆ ಮಾತನಾಡಿದ್ದು, ದೇವರಹಿಪ್ಪರಗಿಯ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಲಾಗಿದೆ.

    ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಶಾಸಕ ಸೋಮನಗೌಡ ಪಾಟೀಲ್ ನಡುವೆ ಒಳ್ಳೆಯ ಸಂಬಂಧವಿದೆ. ಒಂದು ವೇಳೆ ಎಂ.ಬಿ.ಪಾಟೀಲ್ ಅವರು, ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಬರುವಂತೆ ಸೋಮನಗೌಡ ಅವರಿಗೆ ತಿಳಿಸಿದರೆ, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗುವ ಶಾಸಕರ ಪಟ್ಟಿಯಲ್ಲಿ ಸೋಮನಗೌಡ ಪಾಟೀಲ್ ಅವರ ಹೆಸರು ಮೊದಲಿಗೆ ಇದೆ ಎಂದು ದೇವಾನಂದ ಚವ್ಹಾಣ ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರು, ವೈರಲ್ ಆಗಿರುವ ಆಡಿಯೋ ನನ್ನದೆ. ಆದರೆ ಅದರಲ್ಲಿ ಕೆಲವೊಂದು ವಿಚಾರವನ್ನು ಎಡಿಟ್ ಮಾಡಲಾಗಿದೆ. ನಾನು ಮಾತನಾಡದೇ ಇರುವ ಕೆಲವು ವಿಚಾರಗಳನ್ನು ಸೇರಿಸಿದ್ದಾರೆ. ಎಂ.ಬಿ.ಪಾಟೀಲ್ ಹಾಗೂ ಸೋಮನಗೌಡ ಪಾಟೀಲ್ ಅವರ ಆತ್ಮೀಯತೆ ಬಗ್ಗೆ ಮಾತನಾಡಿದ್ದೇನೆ. ಪಕ್ಷ ಬಿಡುವ ಕುರಿತು ಏನನ್ನೂ ಹೇಳಿಲ್ಲ ಎಂದರು.

    ಶಾಸಕ ಸೋಮನಗೌಡ ಪಾಟೀಲ್ ಅವರ ಬಗ್ಗೆ ಸಣ್ಣತಣ ತೋರುವುದು ಸರಿಯಲ್ಲ. ದುರುದ್ದೇಶಪೂರ್ವಕವಾಗಿ ಹೀಗೆ ಆಡಿಯೋ ವೈರಲ್ ಮಾತನಾಡಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ದೇವಾನಂದ ಚವ್ಹಾಣ ಪ್ರತಿಕ್ರಿಯಿಸಿದ್ದಾರೆ.

  • ಮತ್ತೆ ಡಿಕೆಶಿ ವಿರುದ್ಧ ಪರೋಕ್ಷ ಸಿಟ್ಟು ಹೊರಹಾಕಿದ ಎಂಬಿಪಿ

    ಮತ್ತೆ ಡಿಕೆಶಿ ವಿರುದ್ಧ ಪರೋಕ್ಷ ಸಿಟ್ಟು ಹೊರಹಾಕಿದ ಎಂಬಿಪಿ

    ವಿಜಯಪುರ: ಗೃಹ ಖಾತೆ ಒಂದು ಪ್ರತಿಷ್ಠೆಯ ಖಾತೆ. ಮುಖ್ಯಮಂತ್ರಿ ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಖಾತೆ. ಆದರೆ ನನ್ನ ಹೃದಯದಲ್ಲಿರುವುದು ನೀರು. ಖಾತೆ ಹಂಚಿಕೆ ವಿಚಾರದಲ್ಲಿ ನನಗೂ ಮೋಸವಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಖಾತೆ ಹಂಚಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಖಾತೆ ಹಂಚಿಕೆಯಲ್ಲಿ ನನಗೆ ಮೋಸವಾಯ್ತು (more…)

  • ಹೆಚ್‍ಡಿಡಿ ಕುಟುಂಬವನ್ನು ಸೋಲಿಸೋಕೆ ಸಿದ್ದರಾಮಯ್ಯ ಪ್ಲಾನ್: ಶ್ರೀರಾಮುಲು

    ಹೆಚ್‍ಡಿಡಿ ಕುಟುಂಬವನ್ನು ಸೋಲಿಸೋಕೆ ಸಿದ್ದರಾಮಯ್ಯ ಪ್ಲಾನ್: ಶ್ರೀರಾಮುಲು

    -ಡಿಕೆಶಿ ಮತ್ತು ಎಂಬಿಪಿ ನಾಟಕ ಮಾಡುತ್ತಿದ್ದಾರೆ

    ದಾವಣಗೆರೆ: ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಗೆಲ್ಲೋದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇಷ್ಟ ಇಲ್ಲಾ, ಅವರನ್ನು ಸೋಲೀಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಈ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಜಗಳೂರುನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಪರವಾಗಿ ಶ್ರೀರಾಮುಲು ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ದೇವೇಗೌಡರವರು ಹಾವು ಮುಂಗುಸಿಯಂತೆ ಇದ್ದವರು. ಈಗ ಒಂದಾಗಿದ್ದಾರೆ. ಹಳೇ ದ್ವೇಷ ತೀರಿಸಿಕೊಳ್ಳಲು ಸಿದ್ದರಾಮಯ್ಯರಿಗೆ ಇದೊಂದು ಅವಕಾಶ ಸಿಕ್ಕಂತಾಗಿದೆ. ಆದ್ದರಿಂದ ಈಗ ಚುನಾವಣೆಯಲ್ಲಿ ಇಡೀ ಕುಟುಂಬವನ್ನ ಸೋಲಿಸೋಕೆ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಿದರು.

    ಅಲ್ಲದೇ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಎಂ.ಬಿ.ಪಾಟೀಲ್ ನಾಟಕ ಮಾಡುತ್ತಿದ್ದಾರೆ. ಅತ್ತ ಧರ್ಮದ ವಿಚಾರಲ್ಲಿ ಡಿ.ಕೆ.ಶಿವಕುಮಾರ್ ಒಂದು ರೀತಿ ಹೇಳಿಕೆ ಕೊಡ್ತಾನೆ. ಇತ್ತ ಪಾಟೀಲ್ ಇನ್ನೊಂದು ತರ ಹೇಳಿಕೆ ಕೊಡ್ತಾನೆ ಎಂದು ಇಬ್ಬರ ವಿರುದ್ಧವೂ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಬಳಿಕ ತಮ್ಮ ಪಕ್ಷದ ಬಗ್ಗೆ ಮಾತನಾಡುತ್ತ, ಮಾಜಿ ಸಿಎಂ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ಮುಂದುವರೆಯೋ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

  • ಎಂ.ಬಿ.ಪಾಟೀಲ್ ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು: ಶಾಸಕ ನಡಹಳ್ಳಿ

    ಎಂ.ಬಿ.ಪಾಟೀಲ್ ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು: ಶಾಸಕ ನಡಹಳ್ಳಿ

    ವಿಜಯಪುರ: ನನ್ನನ್ನು ಅರೆಹುಚ್ಚ ಎನ್ನುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ್ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕೂಡಲೇ ಅವರು ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ತಿರುಗೇಟು ನೀಡಿದ್ದಾರೆ.

    ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮಾತನಾಡಿದ ಶಾಸಕರು, ಎಂ.ಬಿ.ಪಾಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ಹೀಗಾಗಿ ರಾಜ್ಯದ ಗೃಹಮಂತ್ರಿ ಹುದ್ದೆ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಚಿಕಿತ್ಸೆ ಪಡೆಯುವವರೆಗೂ ಅವರು ಗೃಹಸಚಿವರಾಗಿ ಕಾರ್ಯನಿರ್ವಹಿಸಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ಡಿಕೆಶಿ ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಎಂ.ಬಿ.ಪಾಟೀಲ್

    ನನ್ನ ಯೋಗ್ಯತೆ ಏನು ಅಂತ ಜಿಲ್ಲೆಯ ಜನತೆಗೆ ಗೊತ್ತಿದೆ. ಎಂ.ಬಿ.ಪಾಟೀಲ್ ಹೇಳಿಕೆಯೇ ಅವರ ಯೋಗ್ಯತೆ ಏನು ಎನ್ನುವುದನ್ನು ತೋರಿಸಿಕೊಡುತ್ತದೆ. ನಾನು 3 ಬಾರಿ ಸ್ವಸಾಮರ್ಥ್ಯದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನೀವು ಅಪ್ಪ ನೆಟ್ಟ ರಾಜಕೀಯ ಆಲದ ಮರದ ಆಶ್ರಯದಲ್ಲಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೀರಿ. ಸ್ವಂತ ಶಕ್ತಿಯ ಮೇಲೆ ನೀವು ಆಯ್ಕೆಯಾಗಿಲ್ಲ ಎಂದು ದೂರಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀವು ಗೆದ್ದಿರುವ ರೀತಿಯೇ ಸಂಶಯಾಸ್ಪದ. ಇದಕ್ಕೆ ನಿಮ್ಮ ಎದುರು ಬಬಲೇಶ್ವರ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರೇ ಸಾಕ್ಷಿ. ನಿಮ್ಮ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಸಿಕ್ಕಿದ್ದು ಉದಾಹರಣೆ. ನಿಮ್ಮ ಯೋಗ್ಯತೆ ಏನು ಅನ್ನೋದು, ವಿಜಯಪುರ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದರು.

    ವಿಜಯಪುರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ನಿಮ್ಮ ಹಿಂಬಾಲಕರು ಗಲಾಟೆ ನಡೆಸಿದರು. ಗಲಾಟೆ ಮಾಡಿದವರು ನನ್ನ ಹಿಂಬಾಲಕರು ಅಲ್ಲ ಅಂತ ಹೇಳಲಿಕ್ಕೆ ಆಗಲ್ಲ ಎಂದು ನೀವು ಹೇಳಿಕೆ ನೀಡಿದ್ದೀರಿ. ಹೀಗಾಗಿ ಅವರು ನಿಮ್ಮ ಹಿಂಬಾಲಕರು ಎನ್ನುವುದನ್ನು ಒಪ್ಪಿಕೊಂಡಿದ್ದೀರಿ. ರಾಜ್ಯದ ಗೃಹಸಚಿವರಾಗಿ ಹಿಂಬಾಲಕರನ್ನು ಛೂ ಬಿಟ್ಟು ವಿಪಕ್ಷದ ಶಾಸಕರೊಬ್ಬರ ವಿರುದ್ಧ ಗಲಾಟೆ ನಡೆವುದು ಸರಿಯೇ ಎಂದು ಶಾಸಕರು, ಎಂ.ಬಿ.ಪಾಟೀಲ್ ಅವರಿಗೆ ಪ್ರಶ್ನಿಸಿದ್ದಾರೆ.