Tag: luxury cruise

  • ಸೆಲ್ಫಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಸಿಎಂ ಪತ್ನಿ

    ಸೆಲ್ಫಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಸಿಎಂ ಪತ್ನಿ

    ಮುಂಬೈ: ಸೆಲ್ಫಿ ಕ್ರೇಜ್ ಎಂತಹವರನ್ನೂ ಬಿಟ್ಟಿಲ್ಲ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಅವರ ಪತ್ನಿ ಅಮೃತಾ ಫಡ್ನಾವಿಸ್ ಅವರು ಸೆಲ್ಫಿಗಾಗಿ ಹಡಗಿನ ತುದಿಯಲ್ಲೇ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

    ಅಮೃತಾ ಫಡ್ನಾವಿಸ್ ಸೆಲ್ಫಿ ತೆಗೆದುಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈ ಮತ್ತು ಗೋವಾ ಮಧ್ಯೆ ಪ್ರಯಾಣಿಸುವ ಭಾರತದ ದೇಶಿ ವಿಹಾರ ನೌಕೆ ಆಂಗ್ರಿಯಾಗೆ ಶನಿವಾರ ಚಾಲನೆ ಸಿಕ್ಕಿದೆ. ಈ ಕಾರ್ಯಕ್ರಮಕ್ಕೆ ಅಮೃತಾ ಫಡ್ನಾವಿಸ್ ತೆರಳಿದ್ದು, ಅವರು ಇದೇ ಹಡಗಿನ ತುದಿಯಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಸಿಎಂ ಪತ್ನಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಅವರ ಹಿಂದೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕೂಡ ಇರುವುದನ್ನು ಕಾಣಬಹುದಾಗಿದೆ.


    ಹಡಗಿನ ತುದಿಗೆ ಹೋಗುವುದು ಹೆಚ್ಚು ಅಪಾಯಕಾರಿ. ಆದರೂ ಹಡಗಿನ ಬ್ಯಾರಿಕೇಡ್, ಸುರಕ್ಷತೆಯ ಮಟ್ಟವನ್ನು ದಾಟಿ ಮುಂದೆ ಹೋಗಿದ್ದಾರೆ. ಹಡಗು ತೇಲಾಡುತ್ತಿರುವ ವೇಳೆ ಆಯತಪ್ಪಿ ಬೀಳುವ ಸಾಧ್ಯತೆ ಇದೆ ಎಂದು ಸುರಕ್ಷತಾ ಅಧಿಕಾರಿಗಳು ಎಚ್ಚರಿಕೆಯನ್ನ ನೀಡಿದ್ದಾರೆ. ಆದರೆ ಅವರ ಮಾತುಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಹಡಗಿನ ತುದಿಯಲ್ಲೇ ಕುಳಿತು ಸೆಲ್ಫಿ ತೆಗೆದುಕೊಂಡಿದ್ದಾರೆ.

    ಈ ಆಂಗ್ರಿಯಾ ನೌಕೆ ದೇಶದ ಮೊದಲ ದೇಶಿಯ ಹಡಗಾಗಿದೆ. ಈ ನೌಕೆ ಐಷಾರಾಮಿಯಾಗಿದ್ದು, ಇದರಲ್ಲಿ 104 ರೂಂಗಳಿವೆ. ಇದರಲ್ಲಿ ಒಮ್ಮೆ ಸುಮಾರು 400 ಪ್ರಯಾಣಿಕರು ಪ್ರಯಾಣಿಸಬಹುದು. ಈ ಐಷಾರಾಮಿ ಹಡಗಿನಲ್ಲಿ 2 ರೆಸ್ಟೋರೆಂಟ್, 6 ಬಾರ್ ಮತ್ತು ಒಂದು ಸ್ಮಿಮ್ಮಿಂಗ್ ಪೂಲ್ ಇದೆ. ಜೊತೆಗೆ ದುವಾ ಕೊಠಡಿ ಹಾಗೂ ಸ್ಪಾ ಕೂಡ ಇದೆ. ಮುಂಬೈನಿಂದ ಗೋವಾಕ್ಕೆ 14 ಗಂಟೆಗಳಲ್ಲಿ ಹಡಗಿನ ಮೂಲಕ ಹೋಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv