ನವದೆಹಲಿ: ಖಗೋಳ ಕೌತುಕಕ್ಕೆ ನಭೋ ಮಂಡಲ ಸಾಕ್ಷಿ ಆಗಿದ್ದು, ಸುದೀರ್ಘ ಚಂದ್ರಗ್ರಹಣ (Lunar Eclipse) ಮುಕ್ತಾಯವಾಗಿದೆ.
ಆಗಸದಲ್ಲಿ ಹಾಲ್ಬೆಳದಿಂಗಳಂತೆ ಕಾಣುತ್ತಿದ್ದ ಚಂದಿರನಿಗೆ ಭಾನುವಾರ (ಸೆ.7) ರಾತ್ರಿ ಗ್ರಹಣ ಹಿಡಿದಿತ್ತು. ಬಾನಂಗಳದಲ್ಲಿ ಚಂದಿರ ಗ್ರಹಣದಿಂದ ಬಂಧಿ ಆಗಿದ್ದ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಅದೇ ರೀತಿ ಚಂದ್ರನ ಹೆಚ್ಚಿನ ಭಾಗ ಭೂಮಿಯ ನೆರಳು ಆವರಿಸಿದಾಗ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿದ. ಈ ಮೂಲಕ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಿದೆ.ಇದನ್ನೂ ಓದಿ: ಚಂದ್ರ ಗ್ರಹಣ ವೇಳೆ ದೇವರಿಗೆ ಜಲಾಭಿಷೇಕ – ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ
ರಾತ್ರಿ 9:57 ನಿಮಿಷಕ್ಕೆ ಸರಿಯಾಗಿ ಆರಂಭವಾದ ಚಂದ್ರಗ್ರಹಣ ಮೊದಲು ಸೈಪ್ರಸ್‌ನಲ್ಲಿ ಗೋಚರಿಸಿತು. ಇನ್ನೂ ಭಾರತದಲ್ಲಿ ಮೊದಲು ಲಡಾಖ್‌ನಲ್ಲಿ ಗೋಚರಿಸಿತು. ಟರ್ಕಿ, ಸೈಪ್ರಸ್, ಇಂಡೋನೇಷ್ಯಾದ ಜಕಾರ್ತಾ, ಆಸ್ಟ್ರೇಲಿಯಾದ ಸಿಡ್ನಿ, ಚೀನಾದ ಬೀಜಿಂಗ್, ದುಬೈನಲ್ಲಿ ಶ್ವೇತ ವರ್ಣದ ಚಂದಿರ ಕೆಂಬಣ್ಣದಲ್ಲಿ ಗೋಚರಿಸಿತು.
ಆಕಾಶದಲ್ಲಿ ಹುಣ್ಣಿಮೆ ಚಂದಿರನೊಡನೆ ನೆರಳು ಬೆಳಕಿನ ಆಟ ನಡೆದಿತ್ತು. ಬಾನಂಗಳ ಬೆಳಗುವ ಚಂದ್ರನನ್ನು ಭೂಮಿಯ ನೆರಳು ಆವರಿಸಿತ್ತು. ರಾತ್ರಿ 11 ಗಂಟೆ ಸುಮಾರಿಗೆ ಚಂದ್ರಗ್ರಹಣ ಉತ್ತುಂಗ ಸ್ಥಿತಿ ತಲುಪಿತ್ತು. ಆಗಸದಲ್ಲಿ ಚಂದ್ರ ರಕ್ತರೂಪಿಯಾಗಿ ಕಂಗೊಳಿಸಿದ. ಭಾರತ ಸೇರಿದಂತೆ ವಿಶ್ವದ ಹಲವೆಡೆ ಚಂದ್ರಗ್ರಹಣವನ್ನು ಜನರು ಕಣ್ತುಂಬಿಕೊಂಡರು.
ಇನ್ನೂ ಕರ್ನಾಟಕದಲ್ಲಿಯೂ ಹಲವೆಡೆ ರಕ್ತರೂಪಿ ಚಂದ್ರನ ಗೋಚರವಾಯಿತು. ಬೆಂಗಳೂರಿನ ಹಲವೆಡೆ ಮೋಡ ಕವಿದ ವಾತಾವರಣ ಇತ್ತು. ಹೀಗಾಗಿ ಚಂದ್ರಗ್ರಹಣ ಆರಂಭ ವೇಳೆ ಕೆಲಕಾಲ ಗ್ರಹಣ ಗೋಚರಿಸಲಿಲ್ಲ. ಸಮಯ ಕಳೆದಂತೆ ಮೋಡ ಸರಿದಾಗ ಚಂದ್ರಗ್ರಹಣ ಸ್ಪಷ್ಟವಾಗಿ ಗೋಚರಿಸಿತು.ಇದನ್ನೂ ಓದಿ: ನಭೋ ಮಂಡಲದಲ್ಲಿ ಖಗೋಳ ಕೌತುಕ – ಆಗಸದಲ್ಲಿ ರಕ್ತರೂಪಿ ಚಂದ್ರನ ದರ್ಶನ
ಬೆಂಗಳೂರು:
ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ವಯೋವೃದ್ಧರು. ಕುಟುಂಬ ಸಮೇತ ಆಗಮಿಸಿ ತಾರಾಲಯದಲ್ಲಿ ಕಣ್ತುಂಬಿಕೊಂಡರು. 4 ಟೆಲಿಸ್ಕೋಪ್, 1 ಎಲ್‌ಸಿಡಿ ವ್ಯವಸ್ಥೆ ಮಾಡಲಾಗಿತ್ತು. ಮತ್ತೊಂದ್ಕಡೆ ಕೋರಮಂಗಲದ ಭಾರತೀಯ ಖಗೋಳ ಭೌತ ವಿಜ್ಞಾನ ಸಂಸ್ಥೆಯಲ್ಲೂ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನರು ಗ್ರಹಣ ವೀಕ್ಷಣೆ ಮಾಡಿ ಖಗೋಳ ಕೌತುಕ ಕಣ್ತುಂಬಿಕೊಂಡರು.
ದಾವಣಗೆರೆ:
ಬೆಂಗಳೂರು ಜೊತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಚಂದ್ರಗ್ರಹಣವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಬಾನಂಗಳದ ವಿಸ್ಮಯವನ್ನು ಬರಿಗಣ್ಣಿನಲ್ಲಿ ಕಂಡು ಸಂತಸಗೊಂಡಿದ್ದಾರೆ. ದಾವಣಗೆರೆಯಲ್ಲಿ ಮನೆ ಮನೆ ವಿಜ್ಞಾನ ದಾಸೋಹ ಹಾಗೂ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯಿಂದ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ದಾವಣಗೆರೆಯ ಶ್ರೀರಾಘವೇಂದ್ರ ಮಠದಲ್ಲಿ ಗ್ರಹಣ ಕಾಲದಲ್ಲಿ ಗ್ರಹಣ ಶಾಂತಿ ಹೋಮ ನೆರವೇರಿಸಲಾಯ್ತು. ದಾವಣಗೆರೆ ನಗರದ ದೀಕ್ಷಿತ್ ರಸ್ತೆಯಲ್ಲಿನ ರಾಘವೇಂದ್ರ ಮಠದಲ್ಲಿ ರಾಯರ ಬೃಂದಾವನಕ್ಕೆ ನಿರಂತರ ಜಲಾಭಿಷೇಕ ಮಾಡಲಾಯ್ತು. ನೂರಾರು ಭಕ್ತರು ಪೂಜೆಯಲ್ಲಿ ಭಾಗಿ ಆಗಿದ್ದರು.
ಧಾರವಾಡ:
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಇರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಚಂದ್ರ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದ್ದ ಕಾರಣ ಚಂದ್ರಗ್ರಹಣ ಗೋಚರವಾಗಿಲ್ಲ. ಗ್ರಹಣ ವೀಕ್ಷಣೆಗೆ ಕಾಯ್ದಿದ್ದ ಜನರು ನಿರಾಸೆ ಉಂಟಾಯ್ತು.ಇದನ್ನೂ ಓದಿ: Video | ಸೂರ್ಯ-ಭೂಮಿ-ಚಂದ್ರ ಒಂದೇ ಸಾಲಿನಲ್ಲಿ ಬರಲು ಕಾರಣವೇನು?
ಚಿಕ್ಕಮಗಳೂರು:
ಇನ್ನು ಚಂದ್ರಗ್ರಹಣ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದೇವಾಲಯಗಳಿಗೆ ದಿಗ್ಬಂಧನ ಹಾಕಲಾಗಿತ್ತು. ಆದರೆ ಚಿಕ್ಕಮಗಳೂರಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನಿರಂತರ ಜಲಾಭಿಷೇಕ ಮಾಡಲಾಗಿತ್ತು. ಗ್ರಹಣದ ಆರಂಭದಿಂದ ಅಂತ್ಯದವರೆಗೂ ಅನ್ನಪೂಣೇಶ್ವರಿಗೆ ವಿಶೇಷ ಪೂಜೆ ಮತ್ತು ಜಲಾಭಿಷೇಕ ಮಾಡಲಾಯಿತು.
ಉತ್ತರ ಕನ್ನಡ:
ಗ್ರಹಣ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು. ಗ್ರಹಣ ಕಾಲದಲ್ಲಿ ಮಹಾಬಲೇಶ್ವರನ ಆತ್ಮಲಿಂಗ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. ಗ್ರಹಣ ಮೋಕ್ಷ ಕಾಲದವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು,.
ರಾಯಚೂರು:
ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ರಾಯಚೂರಿನ ದೇವದುರ್ಗ ತಾಲ್ಲೂಕಿನ ಕೋಣಚಪ್ಪಳಿ ಗ್ರಾಮದಲ್ಲಿ ಗ್ರಾಮಸ್ಥರು ಭಜನೆ ಮೊರೆ ಹೋಗಿದ್ದರು. ಆಂಜನೇಯ ದೇವಾಲಯದಲ್ಲಿ ಕೊಣಚಪ್ಪಳಿ ಗ್ರಾಮಸ್ಥರು ಲೋಕದ ಒಳಿತಿಗಾಗಿ ಭಜನೆ ಕೈಗೊಂಡರು.ಇದನ್ನೂ ಓದಿ: Blood Moon Photo Gallery | ವಿದೇಶಗಳಲ್ಲೂ ರಕ್ತಚಂದ್ರನ ಚಮತ್ಕಾರ – ನೀವೂ ಕಣ್ತುಂಬಿಕೊಳ್ಳಿ
ಬಾಗಲಕೋಟೆ:
ಬಾಗಲಕೋಟೆಯ ಬಾದಾಮಿಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮಹಾಕೂಟದಲ್ಲಿ ಚಂದ್ರಗ್ರಹಣ ಪ್ರಯುಕ್ತ ನೀರಿನಲ್ಲಿ ಧ್ಯಾನ ಮಾಡಲಾಯಿತು. ಪುಷ್ಕರಣಿಯಲ್ಲಿ ಸಾವಿರಾರು ಜನರು, ಸಾಧು ಸಂತರು ಧ್ಯಾನ ಮಾಡಿದರು.
ಇನ್ನುಳಿದಂತೆ ದೆಹಲಿ, ಮುಂಬೈ, ಕೋಲ್ಕತ್ತಾ, ಯುಪಿಯಲ್ಲೂ ಚಂದ್ರಗ್ರಹಣ ಗೋಚರಿಸಿತು. ಕೆಂಪು ವರ್ಣಕ್ಕೆ ತಿರುಗಿದ ಹುಣ್ಣಿಮೆ ಚಂದಿರನನ್ನು ಜನರು ಕಣ್ತುಂಬಿಕೊಂಡರು. ಒಟ್ಟಾರೆ ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣ ಮುಕ್ತಾಯವಾಗಿದೆ. ರಾತ್ರಿ 9:57ಕ್ಕೆ ಆರಂಭವಾದ ಗ್ರಹಣ ಮಧ್ಯರಾತ್ರಿ 1:26ಕ್ಕೆ ಅಂತ್ಯವಾಯಿತು. ಬರೋಬ್ಬರಿ ಮೂರೂವರೆ ಗಂಟೆಗಳ ಕಾಲ ಗ್ರಹಣ ಸಂಭವಿಸಿತು. ಗ್ರಹಣ ಮೋಕ್ಷ ಬಳಿಕ ದೇವಾಲಯಗಳಲ್ಲಿ ಶುದ್ಧಿ ಕಾರ್ಯ ನಡೆಸಲಾಗುತ್ತಿದೆ.ಇದನ್ನೂ ಓದಿ: Blood Moon Photo Gallery | ಬಾನಂಗಳದಲ್ಲಿ ಖಗೋಳ ಕೌತುಕ – ರಾಜ್ಯದಲ್ಲಿ ಎಲ್ಲೆಲ್ಲಿ ರಕ್ತಚಂದ್ರನ ದರ್ಶನ?
























