Tag: Lunar Eclipes

  • ದೇವಸ್ಥಾನಗಳಲ್ಲಿ ಗ್ರಹಣದ ವಿಶೇಷ ಪೂಜೆ ಇಲ್ಲ

    ದೇವಸ್ಥಾನಗಳಲ್ಲಿ ಗ್ರಹಣದ ವಿಶೇಷ ಪೂಜೆ ಇಲ್ಲ

    ಮಂಡ್ಯ/ಚಾಮರಾಜನಗರ: ಇಂದು 2020ರ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಗ್ರಹಣದ ವೇಳೆ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗುವುದು ಸಹಜ. ಆದರೆ ಇಂದು ಜರುಗುವ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳಿಲ್ಲ.

    ಮಂಡ್ಯ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನ ಹಾಗೂ ರಂಗನಾಥಸ್ವಾಮಿ ದೇವಸ್ಥಾನಗಳಲ್ಲಿ ಗ್ರಹಣ ಪ್ರಯುಕ್ತ ಯಾವುದೇ ವಿಶೇಷ ಪೂಜೆಗಳು ಇಲ್ಲ. ಎಂದಿನಂತೆ ಪೂಜಾ ಕೈಂಕರ್ಯಗಳು ಮಾತ್ರ ಜರುಗಲಿವೆ.

    ವಿಶೇಷ ಎಂದರೆ ಇಂದು ಹುಣ್ಣಿಮೆ ಇರುವ ಕಾರಣ ಎಲ್ಲಾ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇದೆ. ಇನ್ನೂ ಪಂಚಾಂಗದಲ್ಲಿ ಈ ಗ್ರಹಣದ ನಿಮಿತಿ ವಿಶೇಷ ಪೂಜೆಗಳ ಉಲ್ಲೇಖ ಇಲ್ಲದ ಕಾರಣ ಯಾವುದೇ ವಿಶೇಷತೆಗಳು ಮಂಡ್ಯ ಜಿಲ್ಲೆಯ ದೇವಸ್ಥಾನಗಳಲ್ಲಿ ಇಲ್ಲ.

    ಇತ್ತ ಚಾಮರಾಜನಗರ ಜಿಲ್ಲೆಯ ಚಾಮರಾಜೇಶ್ವರ, ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ, ಶಿವನಸಮುದ್ರದ ಮಧ್ಯರಂಗ ದೇವಾಲಯ, ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇವಾಲಯ ಸೇರಿದಂತೆ ಯಾವುದೇ ದೇವಾಲಯಗಳಲ್ಲೂ ಕೂಡ ಗ್ರಹಣದ ವಿಶೇಷ ಪೂಜೆ ಇಲ್ಲ. ಇನ್ನೂ ಹುಣ್ಣಿಮೆ ಇರುವ ಹಿನ್ನೆಲೆಯಲ್ಲಿ ಎಂದಿನಂತೆ ಇಂದು ಸಹ ದೇವಾಲಯಗಳಲ್ಲಿ ವಿಶೇಷ ಪೂಜೆ ಇದೆ.

  • ಚಂದ್ರಗ್ರಹಣದ ನಂತ್ರ ರಿಲ್ಯಾಕ್ಸ್ ಮೂಡಿನಲ್ಲಿ ಅರ್ಚಕರು, ಜ್ಯೋತಿಷಿಗಳು

    ಚಂದ್ರಗ್ರಹಣದ ನಂತ್ರ ರಿಲ್ಯಾಕ್ಸ್ ಮೂಡಿನಲ್ಲಿ ಅರ್ಚಕರು, ಜ್ಯೋತಿಷಿಗಳು

    ಮೈಸೂರು: ಚಂದ್ರಗ್ರಹಣದ ನಂತರ ಅರ್ಚಕರು ಮತ್ತು ಜ್ಯೋತಿಷಿಗಳು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಪಂಚಾಂಗ ಹಾಗೂ ಕವಡೆ ಬಿಟ್ಟು ಕ್ರಿಕೆಟ್ ಆಟದಲ್ಲಿ ತೊಡಗಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ.

    ಮೈಸೂರಿನಲ್ಲಿ ಜ್ಯೋತಿಷಿಗಳು ಅರ್ಚಕರಿಗಾಗಿ ಮಾಯಕಾರ ಗುರುಕುಲವು ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಅನ್ನು ಮೈಸೂರಿನ ರೈಲ್ವೇ ಮೈದಾನದಲ್ಲಿ ಆಯೋಜಿಸಿದೆ. ಎರಡು ದಿನ ನಡೆಯಲಿರುವ ಈ ಟೂರ್ನಮೆಂಟ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 16 ತಂಡ ಭಾಗಿಯಾಗಿವೆ.

    ಮೈಸೂರು, ಬೆಂಗಳೂರು, ಹಾವೇರಿ, ಶಿವಮೊಗ್ಗ, ತುಮಕೂರು ಸೇರಿ ವಿವಿಧ ಜಿಲ್ಲೆಯ ಅರ್ಚಕರು ಹಾಗೂ ಜ್ಯೋತಿಷಿಗಳು ಭಾಗಿಯಾಗಿದ್ದಾರೆ. ಮೊದಲ ಬಹುಮಾನ 10 ಸಾವಿರ ನಗದು ಆಕರ್ಷಕ ಟ್ರೋಫಿ ದೊರಯಲಿದ್ದು, ಎರಡನೇ ಬಹುಮಾನ 5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ.

  • ಗ್ರಹಣದಿಂದಾಗಿ ದಾಖಲಾಗದ ಗರ್ಭಿಣಿಯರು- ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಬೆಡ್‍ಗಳೂ ಖಾಲಿಖಾಲಿ

    ಗ್ರಹಣದಿಂದಾಗಿ ದಾಖಲಾಗದ ಗರ್ಭಿಣಿಯರು- ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಬೆಡ್‍ಗಳೂ ಖಾಲಿಖಾಲಿ

    ಹಾಸನ: ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗದೇ ಇರುವುದರಿಂದ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಬೆಡ್ ಗಳೂ ಖಾಲಿಖಾಲಿ ಆಗಿದೆ.

    ಚಂದ್ರಗ್ರಹಣ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರೂ ಸಹ ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ. ಗ್ರಹಣ ತಗುಲುತ್ತೆ ಎನ್ನುವ ಮೂಢನಂಬಿಕೆಯಿಂದ ಆಸ್ಪತ್ರೆಯಲ್ಲಿದ್ದವರೆಲ್ಲರೂ ಅಲ್ಲಿಂದ ಡಿಸ್ಚಾರ್ಜ್ ಆಗಿ ಹೋಗಿದ್ದಾರೆ. ಹಾಸನ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಖಾಲಿಯಾಗಿದೆ.

    ಜಿಲ್ಲಾಸ್ಪತ್ರೆಯ ಪ್ರಸೂತಿ ವಿಭಾಗ ಪ್ರತಿನಿತ್ಯ ಗರ್ಭಿಣಿಯರಿಂದ ತುಂಬಿರುತ್ತಿತ್ತು. ವಿವಿಧ ತಾಲೂಕುಗಳಿಂದ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದರು. ನೂರಾರು ಬೆಡ್ ಗಳುಳ್ಳ ಜಿಲ್ಲಾಸ್ಪತ್ರೆಯ ಗರ್ಭಿಣಿಯರ ವಿಭಾಗ ಪ್ರತಿನಿತ್ಯ ಜನಜಂಗುಳಿಯಿಂದ ಕೂಡುತ್ತಿದ್ದು, ಗ್ರಹಣ ಹಿನ್ನೆಲೆ ಖಾಲಿ ಆಗಿದೆ.

    ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಜಯಪುರ ನಗರದ ಬಹುತೇಕ ಹೆರಿಗೆ ಆಸ್ಪತ್ರೆಗಳು ಖಾಲಿ-ಖಾಲಿಯಾಗಿದ್ದು, ವಿಜಯಪುರದ ಆಸ್ಪತ್ರೆಗಳಲ್ಲಿ ತುಂಬು ಗರ್ಭಿಣಿ ಸ್ತ್ರೀಯರಿಗೆ ಸಿಸೇರಿಯನ್ ಗಾಗಿ ದಿನಾಂಕ ನೀಡಿದ್ದರೂ, ಯಾರೊಬ್ಬರು ಆಸ್ಪತ್ರೆಯತ್ತ ತಲೆ ಹಾಕಿಲ್ಲ. ಸಿಸೇರಿಯನ್ ಗಾಗಿ ನಿಗದಿಪಡಿಸಿದ ಡೇಟ್‍ಗಳು ಗ್ರಹಣದ ಹಿನ್ನೆಲೆಯಲ್ಲಿ ರದ್ದಾಗಿದೆ. ಗರ್ಭಿಣಿಯರ ಮನೆಯವರು ಹೆರಿಗೆಗೆ ನಿರಾಕರಣೆ ಮಾಡಿದ್ದು, ಬಹುತೇಕ ಆಸ್ಪತ್ರೆಗಳು ಖಾಲಿ ಖಾಲಿಯಾಗಿತ್ತು. ಇನ್ನು ಕೆಲವರು ಶನಿವಾರಕ್ಕೆ ಸಿಸೇರಿಯನ್ ಮುಂದೂಡಿದ್ದಾರೆ.

    ಚಂದ್ರ ಗ್ರಹಣದಿಂದಾಗಿ ಮುಂದೆ ಹುಟ್ಟಲಿರುವ ಮಗುವಿಗೆ ಕಂಟಕವಾಗುತ್ತದೆ ಎಂದು ಭಾವಿಸಿ ಗರ್ಭಿಣಿಯರು ದೇವರ ನಾಮ ಸ್ಮರಣೆಯ ಮೊರೆ ಹೋಗಿದ್ದರು. ಸ್ತ್ರೋತ್ರ ಪುಸ್ತಕಗಳನ್ನು ಓದುತ್ತಾ ಕುಳಿತ ಗರ್ಭಿಣಿ ಸ್ತ್ರೀಯರು ದೇವರ ನಾಮಸ್ಮರಣೆಯಲ್ಲಿ ತಲ್ಲೀನರಾಗಿದ್ದರು.