Tag: Lucky Gopal

  • ಶಿವಣ್ಣ ಚಿತ್ರಕ್ಕಾಗಿ ಒಂದಾದ ಫೇಮಸ್ ಟೆಕ್ನಿಷಿಯನ್ಸ್

    ಶಿವಣ್ಣ ಚಿತ್ರಕ್ಕಾಗಿ ಒಂದಾದ ಫೇಮಸ್ ಟೆಕ್ನಿಷಿಯನ್ಸ್

    ಕೆಲವೊಂದು ಸಿನಿಮಾಗಳು ಸೆಟ್ಟೇರುವುದಕ್ಕೂ ಮುನ್ನವೇ ಭರ್ಜರಿ ಸೌಂಡು ಮಾಡುತ್ತವೆ. ಮೇಕಿಂಗ್‌, ಬಜೆಟ್‌, ಬೃಹತ್‌ ತಾರಾಗಣ, ನೂರಾರು ದಿನಗಳ ಚಿತ್ರೀಕರಣ, ಸ್ಟಾರ್‌ ಮಟ್ಟದ ತಾಂತ್ರಿಕ ಬಳಗ… ಹೀಗೆ ನಾನಾ ಕಾರಣಗಳಿಂದಾಗಿ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಈಗ ‘ ಐವಿ ರಿಟರ್ನ್ಸ್’ (IV Returns) ಸಿನಿಮಾ ಹೆಸರಾಂತ ತಾಂತ್ರಿಕ ಬಳಗದ ಕಾರಣದಿಂದ ಸುದ್ದಿಯಲ್ಲಿದೆ.

    ದೊಡ್ಮನೆ ಕುಡಿ ಲಕ್ಕಿ ಗೋಪಾಲ್ (Lucky Gopal) ಚೊಚ್ಚಲ ಪ್ರಯತ್ನದ ಐವಿ ರಿಟರ್ನ್ಸ್ ಸಿನಿಮಾದಲ್ಲಿ ಹೆಸರಾಂತ ಟೆಕ್ನಿಷಿಯನ್‌ ಕೆಲಸ ಮಾಡಲಿದ್ದಾರೆ.  ಹೀಗಾಗಿ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ತಮಿಳಿನ ಹೆಸರಾಂತ ಸಂಗೀತ ನಿರ್ದೇಶಕ ಅಮ್ರಿಷ್ ಈ ಸಿನಿಮಾದ ಹಾಡುಗಳನ್ನು ಕಂಪೋಸ್‌ ಮಾಡಿದ್ದು, ರುಸ್ತುಂ, ಘೋಸ್ಟ್ ಚಿತ್ರದ ಖ್ಯಾತಿಯ ಮಹೇನ್ ಸಿಂಹ ಸಿನಿಮಾಟೋಗ್ರಫಿಯಲ್ಲಿ ಐವಿ ರಿಟರ್ನ್ಸ್ ಸಿನಿಮಾ ಮೂಡಿ ಬರಲಿದೆ.

    ಸೂರಿ ಅವರ ಚಿತ್ರಗಳಿಗೆ ಕತ್ತರಿ ಪ್ರಯೋಗ ಮಾಡಿರುವ ದೀಪು ಎಸ್ ಕುಮಾರ್ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ವಿದ್ಯಾಧರಣ್ ಕಥೆ, ಮಾಸ್ತಿ ಪಂಚಿಂಗ್ ಮಾತು, ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ರಂಗು ತುಂಬಲಿದೆ. ವೇಣುಗೋಪಾಲ್ ಅಸೋಸಿಯೇಟ್ ಡೈರೆಕ್ಟರ್ ಆಗಿ, ರೇಣುಕಾ ಪ್ರಸಾದ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ, ಮೈಸೂರು ರಮೇಶ್ ಪ್ರೊಡಕ್ಷನ್ ಮ್ಯಾನೇಜರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

    1989 ರಲ್ಲಿ ಬಿಡುಗಡೆ ಆಗಿದ್ದ  ‘ಇನ್ಸ್‌ಪೆಕ್ಟರ್‌ ವಿಕ್ರಂ’ ಸಿನಿಮಾ ಶಿವರಾಜ್‌ಕುಮಾರ್‌ (Shivaraj Kumar) ಕರಿಯರ್‌ನಲ್ಲಿ ಅತ್ಯಂತ ವಿಶೇಷವಾಗಿತ್ತು. ಅವರು ತರಲೆ ಪೊಲೀಸ್‌ ಆಗಿ ನಟಿಸಿದ್ದ ಈ ಸಿನಿಮಾ ಆ ಕಾಲಕ್ಕೆ ಸೂಪರ್‌ ಡ್ಯೂಪರ್‌ ಹಿಟ್‌ ಆಗಿತ್ತು. ಈಗ ಅವರು ಮತ್ತೆ ಅಂತಹದ್ದೇ ಕಥೆಯೊಂದಿಗೆ ‘ಐವಿ ರಿಟರ್ನ್ಸ್’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 34 ವರ್ಷಗಳ ಹಿಂದೆ ದಿನೇಶ್‌ ಬಾಬು ‘ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ‘ಐವಿ ರಿಟರ್ನ್ಸ್’ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಸೋದರ ಸಂಬಂಧಿ ಲಕ್ಕಿ ಗೋಪಾಲ್‌ ನಿರ್ದೇಶನದ ಕ್ಯಾಪ್‌ ತೊಟ್ಟಿದ್ದಾರೆ.

     

    ಈ ಚಿತ್ರದಲ್ಲಿ ಶಿವಣ್ಣ ಖಾಕಿ ಖದರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಮೈಲಾರಿ ಎಂ ಹಣ ಹಾಕುತ್ತಿದ್ದಾರೆ. ಪ್ರೀ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಶೀಘ್ರದಲ್ಲೇ ಇನ್ಸ್ ಪೆಕ್ಟರ್ ವಿಕ್ರಂ ರಿಪೋರ್ಟಿಂಗ್ ಶುರು ಮಾಡಲಿದ್ದಾರೆ. ಅಂದರೆ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

  • ಶಿವಣ್ಣನಿಗೆ ನಾಯಕಿಯಾದ ತೆಲುಗಿನ ಚೆಲುವೆ!

    ಶಿವಣ್ಣನಿಗೆ ನಾಯಕಿಯಾದ ತೆಲುಗಿನ ಚೆಲುವೆ!

    ಏಕಾಏಕಿ ಯಾವ್ಯಾವ ಚಿತ್ರಗಳಲ್ಲಿ ನಟಿಸ್ತಿದ್ದೀರಿ ಎಂಬ ಪ್ರಶ್ನೆ ಎದುರಾದರೆ ಖುದ್ದು ಶಿವರಾಜ್ ಕುಮಾರ್ ಅವರೇ ತಡಕಾಡ ಬೇಕಾದೀತೇನೋ… ಯಾಕೆಂದರೆ ಸದ್ಯ ಅವರು ಒಪ್ಪಿಕೊಂಡಿರೋ ಚಿತ್ರಗಳ ಪಟ್ಟಿಯೇ ಅಷ್ಟು ದೊಡ್ಡದಿದೆ. ಹೀಗೆ ಶಿವಣ್ಣ ಒಪ್ಪಿಕೊಂಡಿರೋ ಸಾಲು ಸಾಲು ಚಿತ್ರಗಳಲ್ಲಿ ಎಸ್‍ಆರ್ ಕೆ ಕೂಡಾ ಒಂದು. ಈ ಚಿತ್ರಕ್ಕೆ ಕೊಂಚ ತಡವಾಗಿಯಾದರೂ ಅದ್ಧೂರಿಯಾಗಿಯೇ ಚಾಲನೆ ಸಿಕ್ಕಿದೆ. ಈ ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯ ಆಯ್ಕೆಯೂ ನಡೆದಿದೆ.

    ಲಕ್ಕಿ ಗೋಪಾಲ್ ನಿರ್ದೇಶಕನಾಗ್ತಿರೋ ಈ ಚಿತ್ರಕ್ಕೀಗ ವೇಗದಿಂದ ಕೆಲಸ ಕಾರ್ಯ ಆರಂಭವಾಗಿದೆ. ಶಿವಣ್ಣನ ಕಡೆಯಿಂದ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಲೇ ಅಲರ್ಟ್ ಆಗಿರೋ ಚಿತ್ರ ತಂಡ ನಾಯಕಿಯನ್ನೂ ಆಯ್ಕೆ ಮಾಡಿದೆ. ಈಗಾಗಲೇ ತೆಲುಗಿನಲ್ಲಿ ಬೇಡಿಕೆಯ ನಟಿಯಾಗಿರೋ ಇಶಾ ರಬ್ಬಾ ಎಸ್‍ಆರ್‍ಕೆಯಲ್ಲಿ ಶಿವಣ್ಣನಿಗೆ ಜೋಡಿಯಾಗಿ ನಟಿಸೋಕೆ ಆಯ್ಕೆಯಾಗಿದ್ದಾರೆ.

    ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಡ್ಯಾನ್ಸ್ ಮಾಸ್ಟರ್ ಆಗಿ ನಟಿಸುತ್ತಿದ್ದಾರೆ. ಇದರಲ್ಲಿ ಇಶಾ ಉಪನ್ಯಾಸಕಿಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಈಗಾಗಲೇ ಒಂದಷ್ಟು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರೋ ಲಕ್ಕಿ ಕೃಷ್ಣಗೆ ಮೊದಲ ಚಿತ್ರದಲ್ಲಿಯೇ ಲಕ್ಕು ಖುಲಾಯಿಸಿದೆ. ಯಾಕೆಂದರೆ ಅವರಿಗೆ ಮೊದಲ ಪ್ರಯತ್ನದಲ್ಲಿಯೇ ಶಿವಣ್ಣನ ಚಿತ್ರವನ್ನು ನಿರ್ದೇಶನ ಮಾಡೋ ಅವಕಾಶ ಒಲಿದು ಬಂದಿದೆ.