Tag: lucky draw

  • ಲಕ್ಕಿ ಡ್ರಾ ಹೆಸರಿನಲ್ಲಿ ಭಾರೀ ಮೋಸ!

    ಲಕ್ಕಿ ಡ್ರಾ ಹೆಸರಿನಲ್ಲಿ ಭಾರೀ ಮೋಸ!

    ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿರುವ ಶ್ರೀಸಾಯಿ ಎಂಟರ್ ಪ್ರೈಸಸ್ ಎಂಬ ಸಂಸ್ಥೆ ಲಕ್ಕಿ ಡ್ರಾ ಹೆಸರಿನಲ್ಲಿ ಗ್ರಾಹಕರಿಗೆ ಭಾರೀ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಲಕ್ಕಿ ಡ್ರಾ ಮಾಡೋದಾಗಿ ಶ್ರೀಸಾಯಿ ಎಂಟರ್ಪ್ರೈಸಸ್ ಮಾಲೀಕ ಪ್ರತಿಯೊಬ್ಬರಿಂದ 750 ರೂಪಾಯಿ ವಸೂಲಿ ಮಾಡಿದ್ದನು. ಆದರೆ ಇಂದು ಲಕ್ಕಿ ಡ್ರಾ ಮಾಡದೆ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿ ಮಾಲೀಕ ಪರಾರಿಯಾಗಿದ್ದಾನೆ. ಇದರಿಂದಾಗಿ ಗ್ರಾಹಕರು ಕುರ್ಚಿ, ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶವನ್ನು ಹೊರಹಾಕಿದ್ದಾರೆ. ಇದರಿಂದಾಗಿ ಜನರನ್ನ ಚದುರಿಸಲು ಸಿಪಿಐ ದ್ಯಾಮನ್ನವರ್ ತಂಡ ಲಘು ಲಾಠಿ ಪ್ರಹಾರ ನಡೆಸಿದೆ.

    ಸದ್ಯಕ್ಕೆ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ. ಸಿದಂಗಿ ಪೊಲೀಸರು ಡ್ರಾ ಸಮಿತಿ ಸದಸ್ಯರನ್ನ ಬಂಧಿಸಿದ್ದು, ಸ್ಥಳಕ್ಕೆ ಡಿಎಸ್ಪಿ ರವೀಂದ್ರ ಶಿರೂರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಾಟರಿ ಟಿಕೆಟ್ ಮಾರಿ ವಂಚಿಸುತ್ತಿದ್ದ ನಾಲ್ವರಿಗೆ ಹಿಗ್ಗಾಮುಗ್ಗಾ ಥಳಿತ

    ಲಾಟರಿ ಟಿಕೆಟ್ ಮಾರಿ ವಂಚಿಸುತ್ತಿದ್ದ ನಾಲ್ವರಿಗೆ ಹಿಗ್ಗಾಮುಗ್ಗಾ ಥಳಿತ

    ಚಿಕ್ಕೋಡಿ: ಲಾಟರಿ ಟಿಕೆಟ್ ಮಾರಿ ವಂಚನೆ ಮಾಡುತ್ತಿದ್ದ ನಾಲ್ವರನ್ನು ದೇವಸ್ಥಾನದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ನಡೆದಿದೆ.

    ಆದರ್ಶ ಫೌಂಡೇಶನ್ ಗ್ರೂಪ್ ಹೆಸರಿನಲ್ಲಿ ಕಳೆದ ಎರಡು ತಿಂಗಳಿನಿಂದ ಲಾಟರಿ ಟಿಕೆಟ್ ಮಾರಾಟ ಮಾಡಲಾಗಿತ್ತು. ಆದರೆ ಇಂದು ಟಿಕೆಟ್ ಡ್ರಾ ಮಾಡುವ ವೇಳೆ ಗ್ರಾಮದ ಯಾರಿಗೂ ಬಹುಮಾನ ದೊರೆತಿಲ್ಲ ಅಂತಾ ನಾಲ್ವರನ್ನು ಹಿಡಿದು ಗ್ರಾಮಸ್ಥರು ಥಳಿಸಿದ್ದಾರೆ.

    ಏನಿದು ಲಾಟರಿ ಆಟ:
    ಆದರ್ಶ ಫೌಂಡೇಶನ್ ಗ್ರೂಪ್ ಹೆಸರಿನಲ್ಲಿ ಕಳೆದ ಎರಡು ತಿಂಗಳಿಂದ ಲಾಟರಿ ಟಿಕೆಟ್ ಮಾರುತ್ತಿದ್ದರು. ತಾವು ಪ್ರಚಾರಕ್ಕಾಗಿ ತಂದಿದ್ದ ಪಾಂಪ್ಲೆಟ್‍ನಲ್ಲಿ ದುಬಾರಿ ಬೆಲೆಯ ಬೈಕ್, ಗೃಹೋಪಯೋಗಿ ವಸ್ತುಗಳನ್ನು ಟಿಕೆಟ್ ವಿಜೇತರಿಗೆ ನೀಡಲಾಗುತ್ತದೆ ಎನ್ನಲಾಗಿತ್ತು. ಹೀಗಾಗಿ ಪ್ರತಿ ಟಿಕೆಟ್‍ಗೆ 200 ರೂ. ಶುಲ್ಕ ನಿಗದಿ ಮಾಡಿದ್ದರು. ಕೆರೂರು ಗ್ರಾಮಸ್ಥರು ಸುಮಾರು 6 ರಿಂದ 7 ಸಾವಿರ ಟಿಕೆಟ್ ಖರೀದಿ ಮಾಡಿದ್ದರು.

    ಬುಧವಾರ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಗ್ರಾಮದ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಆದರೆ ಯಾರೋಬ್ಬರಿಗೂ ಬಹುಮಾನ ಸಿಗಲಿಲ್ಲ. ಹೀಗಾಗಿ ಲಾಟರಿ ಟಿಕೆಟ್ ಮಾರಾಟಗಾರರ ಜೊತೆಗೆ ಗ್ರಾಮಸ್ಥರು ಮಾತಿಗಿಳಿದಿದ್ದು, ಬಳಿಕ ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಲಘು ಲಾಠಿ ಪ್ರಹಾರ ನಡೆಸಿದರು.

    ಗ್ರಾಮಸ್ಥರಿಂದ ಸಾಮೂಹಿಕ ಹಲ್ಲೆಗೆ ಒಳಗಾದ ಲಾಟರಿ ವ್ಯಾಪಾರಿಗಳು ಗಾಯಗೊಂಡಿದ್ದು, ಅವರನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅವರ ಮೂಲಗಳ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಲಾಟರಿ ವ್ಯಾಪಾರಿಗಳು ಸುತ್ತಮುತ್ತಲಿನ ಗ್ರಾಮದಲ್ಲಿಯೂ ಲಾಟರಿ ಮಾರಾಟ ಮಾಡಿದ್ದಾರೆ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

  • ಮಕ್ಕಳ ಪ್ರವೇಶಾತಿಗೆ ಪೋಷಕರನ್ನ ಸೆಳೆಯಲು ಲಕ್ಕಿ ಡ್ರಾ ಆಯೋಜಿಸಿದ ಶಾಲೆ!

    ಮಕ್ಕಳ ಪ್ರವೇಶಾತಿಗೆ ಪೋಷಕರನ್ನ ಸೆಳೆಯಲು ಲಕ್ಕಿ ಡ್ರಾ ಆಯೋಜಿಸಿದ ಶಾಲೆ!

    ಹೈದರಾಬಾದ್: ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಅಥವಾ ವಿವಿಧ ಮಳಿಗೆಗಳಲ್ಲಿ ಲಕ್ಕಿ ಡ್ರಾ ಆಯೋಜನೆ ಮಾಡೋದನ್ನ ನೋಡಿರ್ತೀರ. ಆದ್ರೆ ತೆಲಂಗಾಣದ ಹಾಯತ್ ನಗರದಲ್ಲಿ ಶಾಲೆಯೊಂದು ಪೋಷಕರನ್ನ ಸೆಳೆಯಲು ಲಕ್ಕಿ ಡ್ರಾ ಆಯೋಜಿಸಿ ಸುದ್ದಿಯಾಗಿದೆ.

    ಇಲ್ಲಿನ ಪದ್ಮಾವತಿ ಕಾಲೋನಿಯಲ್ಲಿರುವ ಸರೀತಾ ವಿದ್ಯಾ ನಿಕೇತನ್ ಶಾಲೆಯು ಲಕಿ ಡ್ರಾ ನಡೆಸುತ್ತಿದೆ. ಮೊದಲ ಪ್ರವೇಶ- ಲಕ್ಕಿ ಡ್ರಾ- ಸೀಸನ್ 1 ಎಂದು ಬೋರ್ಡ್ ಹಾಕಲಾಗಿದೆ. ಮಾರ್ಚ್ 27 ರೊಳಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಶುಲ್ಕ ಪಾವತಿಸಿ ನವೀಕರಿಸಿಕೊಂಡರೆ ಲಕ್ಕಿ ಡ್ರಾ ವನ್ನು ಗೆಲ್ಲುವ ಅವಕಾಶ ಸಿಗುತ್ತದೆ ಎಂದು ಶಾಲೆಯ ನೋಟಿಸ್‍ನಲ್ಲಿ ಹಾಕಿದ್ದಾರೆ.

    ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿಕೊಳ್ಳುವವರಿಗೆ ಟೋಕನ್‍ಗಳನ್ನು ನೀಡಲಾಗುತ್ತಿದೆ. ಮತ್ತು ಡ್ರಾ ಮಾರ್ಚ್ 23ರಂದು ನಡೆಯಲಿದೆ. ಪ್ರವೇಶ ಮತ್ತು ಶಾಲಾ ಶುಲ್ಕಗಳು ಲಕ್ಷಾಂತರ ರೂಪಾಯಿ ಇರುವಾಗ ಶಾಲೆಯವರು ಸಾವಿರ ರೂ ಬೆಲೆಯ ಉಡುಗೊರೆಗಳನ್ನ ಬಹುಮಾನವಾಗಿ ಇಟ್ಟು ಪೋಷಕರನ್ನ ಸೆಳೆಯುತ್ತಿದ್ದಾರೆ.

    ಎಲ್‍ಕೆಜಿ ಯಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್, ರಿಮೋಟ್ ಕಂಟ್ರೋಲ್ ಕಾರ್, ಬಾರ್ಬೀ ಡಾಲ್, ಟೆಡ್ಡಿ ಬೇರ್ ಮತ್ತು ಪುಸ್ತಕವನ್ನ ಲಕ್ಕಿ ಡ್ರಾ ಬಹುಮಾನವಾಗಿ ನೀಡಲಾಗುತ್ತಿದೆ. ಹಾಗೇ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್, ಫುಟ್ಬಾಲ್, ಪುಸ್ತಕ, ಕ್ರಿಕೆಟ್ ಕಿಟ್, ಚೆಸ್ ಬೋರ್ಡ್‍ಗಳನ್ನು ಲಕ್ಕಿ ಡ್ರಾದಲ್ಲಿ ಗೆದ್ದವರಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ.

    ಶಾಲೆಯ ನೋಟಿಸ್ ಬಗ್ಗೆ ಮಾತನಾಡಿದ ಪೋಷಕರು, ಲಕ್ಕಿ ಡ್ರಾ ಬಗ್ಗೆ ಇತ್ತೀಚೆಗೆ ನೋಟಿಸ್ ಹಾಕಿದ್ದಾರೆ. ಮಾರ್ಚ್ 23 ರವರೆಗೂ ಇದು ಇಲ್ಲಿರುತ್ತದೆ. ಯಾವುದೇ ಪೋಷಕರು ಇದಕ್ಕೆ ಈವರೆಗೆ ಆಕ್ಷೇಪ ವ್ಯಕ್ತಪಡಿಸಿಲ್ಲವೆಂದು ಹೇಳಿದರು.

    ಆದ್ರೆ ಕೆಲವರು ಈ ಕ್ರಮವನ್ನು ಅನೈತಿಕವೆಂದು ಖಂಡಿಸಿದ್ದಾರೆ. ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಈ ಬಗ್ಗೆ ಮಾತನಾಡಿದ್ದು, “ಇದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದೆ. ಬಹುಮಾನ ಮತ್ತು ಯೋಜನೆಗಳನ್ನು ಬಳಸಿಕೊಂಡು ಪೋಷಕರು ಮತ್ತು ಮಕ್ಕಳನ್ನು ಆಕರ್ಷಿಸುವಂತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳೇ ಹೊರತು ವ್ಯವಹಾರವಲ್ಲ. ಈ ಬಗ್ಗೆ ಜಿಲ್ಲಾ ಶಿಕ್ಷಣ ಕಚೇರಿಯ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.