Tag: lucknow

  • ಬೆಂಕಿ ಹೊತ್ತಿಕೊಂಡ ಬೈಕ್ – 4 ಕಿ.ಮೀ ಚೇಸ್ ಮಾಡಿ ಪೊಲೀಸರಿಂದ ರಕ್ಷಣೆ

    ಬೆಂಕಿ ಹೊತ್ತಿಕೊಂಡ ಬೈಕ್ – 4 ಕಿ.ಮೀ ಚೇಸ್ ಮಾಡಿ ಪೊಲೀಸರಿಂದ ರಕ್ಷಣೆ

    ಲಕ್ನೋ: ಉತ್ತರ ಪ್ರದೇಶದ ಪೊಲೀಸರು ಬೆಂಕಿ ಹೊತ್ತಿಕೊಂಡಿದ್ದ ಬೈಕನ್ನು ಹಿಂಬಾಲಿಸಿಕೊಂಡು ಹೋಗಿ ಒಂದು ದೊಡ್ಡ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಘಟನೆ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಇಟವಾದಲ್ಲಿ ಸೋಮವಾರ ನಡೆದಿದೆ. ಹೆದ್ದಾರಿಯಲ್ಲಿ ಬೈಕಿನಲ್ಲಿ ಓರ್ವ ಮಹಿಳೆ ಹಾಗೂ ಪುರುಷ ಹೊಗುತ್ತಿದ್ದರು. ಜೊತೆ ಒಂದು ಮಗು ಕೂಡ ಇತ್ತು. ವ್ಯಕ್ತಿ ಬೈಕನ್ನು ವೇಗವಾಗಿ ಓಡಿಸುತ್ತಿದ್ದನು.

    ಬೈಕಿನ ಸೈಡಿನಲ್ಲಿ ಹಾಕಿದ್ದ ಬ್ಯಾಗಿಗೆ ಬೆಂಕಿ ಹೊತ್ತಿಕೊಂಡಿದೆ. ಅದನ್ನು ಗಮನಿಸದೇ ಹೋಗುತ್ತಿದ್ದರು. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಪೊಲೀಸ್ ವ್ಯಾನನ್ನು ದಾಟಿ ಮುಂದೆ ಹೋಗಿದೆ. ವ್ಯಾನಿನಲ್ಲಿದ್ದ ಪೊಲೀಸರು ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ್ದಾರೆ. ತಕ್ಷಣ ಆ ಬೈಕನ್ನು ಹಿಂಬಾಲಿಸಿದ್ದಾರೆ.

    ಬೈಕ್ ವೇಗವಾಗಿ ಹೋಗುತ್ತಿದ್ದರಿಂದ ಪೊಲೀಸರು ಸುಮಾರು 4 ಕಿ.ಮೀ ವರೆಗೂ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಕೊನೆಗೂ ಪೊಲೀಸ್ ವ್ಯಾನ್ ಬೈಕ್ ಮುಂದೆ ಹೋಗಿ ಅಡ್ಡ ನಿಲ್ಲುವ ಮೂಲಕ ಅವರನ್ನು ತಡೆದಿದ್ದಾರೆ. ತಕ್ಷಣ ಬೈಕಿನಿಂದ ಎಲ್ಲರನ್ನು ಇಳಿಸಿ ಪೊಲೀಸರು ಬೆಂಕಿ ನಂದಿಸಲು ಸಹಾಯ ಮಾಡಿದ್ದಾರೆ. ಈ ಮೂಲಕ ಪೊಲೀಸರು ಒಂದು ದೊಡ್ಡ ಅನಾಹುತ ತಪ್ಪಿಸಿದ್ದು, ಮೂವರ ಪ್ರಾಣವನ್ನು ಉಳಿಸಿದ್ದಾರೆ.

    ಸದ್ಯ ಈ ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ. ಪೊಲೀಸರು ಬೈಕ್ ಹಿಂಬಾಲಿಸಿರುವ ವಿಡಿಯೋವನ್ನು ಟ್ವೀಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೂವರೆಗೂ 14 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದ್ದು, 18 ಸಾವಿರಕ್ಕೂ ಹೆಚ್ಚಿನ ಜನರು ಲೈಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರ ಕಾರ್ಯವನ್ನು ಮೆಚ್ಚಿ ಸಾವಿರಾರು ಮಂದಿ ಕಮೆಂಟ್ ಮಾಡುವ ಮೂಲಕ ಅಭಿನಂದಿಸುತ್ತಿದ್ದಾರೆ.

  • ತಾಯಿ ಮುಂದೆಯೇ ಮಗಳ ಮೇಲೆ ಗ್ಯಾಂಗ್‍ರೇಪ್

    ತಾಯಿ ಮುಂದೆಯೇ ಮಗಳ ಮೇಲೆ ಗ್ಯಾಂಗ್‍ರೇಪ್

    ಲಕ್ನೋ: ತಾಯಿ ಮುಂದೆಯೇ 22 ವರ್ಷದ ಯುವತಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಕಕ್ರೌಲಿ ಪ್ರದೇಶದಲ್ಲಿ ನಡೆದಿದೆ.

    ಆರೋಪಿಗಳಲ್ಲಿ ಒಬ್ಬನನ್ನು ದಿಲ್ಶಾದ್ ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಆದರೆ ಆತ ತಲೆಮರೆಸಿಕೊಂಡಿದ್ದಾನೆ. ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜಿತೇಂದರ್ ಕುಮಾರ್ ತಿಳಿಸಿದ್ದಾರೆ.

    ಕಕ್ರೋಲಿ ಪ್ರದೇಶದಲ್ಲಿ ಸಂತ್ರಸ್ತೆ ತಾಯಿ ಜೊತೆ ಔಷಧಿಗಳನ್ನು ಖರೀದಿಸಲು ಹೋಗಿದ್ದಾರೆ. ಈ ವೇಳೆ ಆರೋಪಿಗಳಿಬ್ಬರು ಸಂತ್ರಸ್ತೆಯನ್ನು ಬಲವಂತವಾಗಿ ಸಮೀಪದ ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿದ್ದು, ತಾಯಿಯ ಮುಂದೆಯೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಸಂತ್ರಸ್ತೆಯ ತಂದೆ ಸಲ್ಲಿಸಿದ ದೂರಿನ ಆಧಾರದ ಮೇರೆಗೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲಿಯೇ ಇಬ್ಬರನ್ನು ಬಂಧಿಸಲಾಗುವುದು ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಲಕ್ನೋ: ನಟಿ ಹಾಗೂ ರಾಮ್‍ಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರು ಖಾಕಿ ಬಣ್ಣದ ಒಳ ಉಡುಪು ಧರಿಸುತ್ತಾರೆ ಎಂದು ಸಮಾಜವಾದಿ ಪಕ್ಷದ(ಎಸ್‍ಪಿ) ನಾಯಕ ಅಜಮ್ ಖಾನ್ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.

    ಭಾನುವಾರದಂದು ರಾಮ್‍ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಅಜಮ್ ಖಾನ್ ಅವರು, ಅವರನ್ನು(ಜಯಪ್ರದಾ) ರಾಮ್‍ಪುರಕ್ಕೆ ಕರೆತಂದಿದ್ದು ನಾನು. ಆಗ ನಾನು ಅವರನ್ನು ಯಾರಿಗೂ ಮುಟ್ಟಲು ಬಿಟ್ಟಿರಲಿಲ್ಲ. ಅದಕ್ಕೆ ನೀವೇ ಸಾಕ್ಷಿ. ನಿಮಗೆ ಅವರ ನಿಜವಾದ ಮುಖ ಗೊತ್ತಾಗಲು 17 ವರ್ಷ ಬೇಕಾಯ್ತು. ಆದ್ರೆ ನನಗೆ ಕೇವಲ 17 ದಿನಗಳಲ್ಲಿ ಅವರು ಖಾಕಿ ಬಣ್ಣದ ಒಳ ಉಡುಪು ಹಾಕುತ್ತಾರೆ ಅನ್ನೋದು ಗೊತ್ತಾಯ್ತು ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಹಾಗೂ ಇನ್ನಿತರ ನಾಯಕರ ಮುಂದೆಯೇ ಬಿಜೆಪಿ ನಾಯಕಿಯ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ.

    ಅಜಮ್ ಖಾನ್ ಅವರು ಸದ್ಯ ಲೋಕಸಭಾ ಚುನಾವಣೆಗೆ ರಾಮ್‍ಪುರದಿಂದ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕಿ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡಿರುವುದಕ್ಕೆ ಅಜಮ್ ಖಾನ್ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.

    ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಅಜಮ್ ಖಾನ್ ಅವರು, ನಾನು ಬಿಜೆಪಿ ಅಭ್ಯರ್ಥಿ ವಿರುದ್ಧ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಒಂದು ವೇಳೆ ನಾನು ಮಾತನಾಡಿರುವುದು ತಪ್ಪು ಎಂದು ಸಾಬೀತಾದರೆ, ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ತಿಳಿಸಿದರು.

    ಜನರ ನಿಜ ಮುಖವನ್ನು ತಿಳಿಯಲು ವರ್ಷಗಟ್ಟಲೇ ಸಮಯ ಬೇಕು ಅನ್ನುವ ಅರ್ಥದಲ್ಲಿ ನಾನು ಮಾತನಾಡಿದ್ದು, ಹಿಂದೊಮ್ಮೆ ಒಬ್ಬ ವ್ಯಕ್ತಿ 150 ಬಂದೂಕನ್ನು ತಂದು ನನ್ನನ್ನು ಕಂಡರೆ ಸಾಯಿಸುತ್ತಾನೆ ಅಂತ ಹೇಳಿದ್ದನು. ಆದ್ರೆ ಬಳಿಕ ಆ ವ್ಯಕ್ತಿ ಆರ್ ಎಸ್‍ಎಸ್ ಪ್ಯಾಂಟ್ ಹಾಕಿದ್ದ. ಅದಕ್ಕೆ ಆ ರೀತಿ ಹೇಳಿದ್ದ ಅನ್ನೊದು ಗೊತ್ತಾಯ್ತು ಎಂದು ಒಂದು ಕಥೆಯನ್ನು ಹೇಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ನಾನು 9 ಬಾರಿ ರಾಮ್‍ಪುರ ಕ್ಷೇತ್ರದಿಂದ ಎಂಎಲ್‍ಎ ಆಗಿದ್ದೇನೆ. ಮಂತ್ರಿ ಕೂಡ ಆಗಿದ್ದೇನೆ. ಏನು ಹೇಳಬೇಕು ಅನ್ನೋದು ನನಗೆ ಗೊತ್ತಿದೆ. ನಾನು ಯಾರ ಹೆಸರನ್ನು ಹೇಳಿಲ್ಲ. ಹೆಸರು ಹೇಳಿ ಯಾರಿಗೂ ಅವಮಾನ ಮಾಡಿಲ್ಲ. ಒಂದು ವೇಳೆ ನನ್ನ ಹೇಳಿಕೆ ತಪ್ಪೆಂದು ಸಾಬೀತಾದರೆ ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದರು.

    ನನಗೆ ಬೇಸರವಾಗಿದೆ. ಮಾಧ್ಯಮಗಳು ನನ್ನನ್ನು ಇಷ್ಟಪಡಲ್ಲ. ಹಾಗೆಯೇ ನಾನು ಕೂಡ ಮಾಧ್ಯಮಗಳನ್ನು ಇಷ್ಟಪಡಲ್ಲ. ಯಾಕೆಂದರೆ ಮಾಧ್ಯಮಗಳಿಂದ ದೇಶಕ್ಕೆ ಹಾನಿಯಾಗುತ್ತದೆ ಎಂದು ಹೇಳಿ ಪತ್ರಕರ್ತರ ವಿರುದ್ಧವೂ ಕಿಡಿಕಾರಿದರು.

  • ಅಗ್ನಿ ಅವಘಡದಿಂದ 30 ಜನರ ಪ್ರಾಣ ಉಳಿಸಿ ಮೃತಪಟ್ಟ ಸಾಕುನಾಯಿ

    ಅಗ್ನಿ ಅವಘಡದಿಂದ 30 ಜನರ ಪ್ರಾಣ ಉಳಿಸಿ ಮೃತಪಟ್ಟ ಸಾಕುನಾಯಿ

    ಲಕ್ನೌ: ಸಾಕುನಾಯಿ ಅಗ್ನಿ ಅವಘಡದಿಂದ 30 ಜನರ ಪ್ರಾಣ ಉಳಿಸಿ ಮೃತಪಟ್ಟ ಘಟನೆಯೊಂದು ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಬಾಂದಾದಲ್ಲಿ ನಡೆದಿದೆ.

    ಬಾಂದಾ ಜಿಲ್ಲೆಯ ಲಖನ್ ಕಾಲೋನಿಯ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೇಸ್‍ಮೆಂಟ್ ಹಾಗೂ ಮೊದಲನೇ ಮಹಡಿಯಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಶೋರೂಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದೇ ಕಟ್ಟಡದ ಮೂರನೇ ಹಾಗೂ ನಾಲ್ಕನೇ ಮಹಡಿಯಲ್ಲಿ ಕುಟುಂಬಗಳು ವಾಸಿಸುತ್ತಿತ್ತು.

    ಸಾಕುನಾಯಿ ಕೂಡ ಅದೇ ಕಟ್ಟಡದಲ್ಲಿ ವಾಸವಾಗಿತ್ತು. ಅಗ್ನಿ ಅವಘಡ ಸಂಭವಿಸಿದನ್ನು ನೋಡಿದ ನಾಯಿ ಜೋರಾಗಿ ಬೊಗಳಲು ಶುರು ಮಾಡಿತ್ತು. ಆಗ ಆ ಬಿಲ್ಡಿಂಗ್‍ನಲ್ಲಿದ್ದ ಜನರು ಸುರಕ್ಷಿತವಾಗಿ ಅಲ್ಲಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

    ನಾಯಿ ಮೃತಪಡುವ ಕೊನೆ ಕ್ಷಣದವರೆಗೂ ಎಲ್ಲರ ಪ್ರಾಣ ಉಳಿಸಿತ್ತು. ಆದರೆ ನಾಯಿ ಸ್ವತಃ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಗ್ನಿ ಅವಘಡ ಆದಾಗ ನಾಯಿಯನ್ನು ಕಟ್ಟಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿದ್ದು, ಪರಿಣಾಮ ಅದು ಮೃತಪಟ್ಟಿದೆ.

    ನಾಯಿ ಜೋರಾಗಿ ಬೊಗಳಿ ನಮ್ಮನ್ನು ಎಚ್ಚರಗೊಳಿಸಿತು. ನಾಯಿ ಜೋರಾಗಿ ಬೊಗಳಿ ಎಲ್ಲರ ಪ್ರಾಣ ಉಳಿಸಿಕೊಳ್ಳಲು ಸಹಾಯ ಮಾಡಿತ್ತು. ಈ ಕಟ್ಟಡದಲ್ಲಿದ್ದ ಜನರು ಸುರಕ್ಷಿತವಾಗಿ ಹೊರ ಬಂದರು. ಆದರೆ ಸಿಲಿಂಡರ್ ಬ್ಲಾಸ್ಟ್ ಆಗಿ ನಾಯಿ ಮೃತಪಟ್ಟಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

    ಈ ಕಟ್ಟಡದ ಬೇಸ್‍ಮೆಂಟ್‍ನಲ್ಲಿ ಶಾರ್ಟ್ ಸರ್ಕ್ಯೂಟ್‍ ಆದ ಕಾರಣ ಅಗ್ನಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ವಿನಯ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಕಟ್ಟಡದಲ್ಲಿದ್ದ ಸಿಲಿಂಡರ್‍ಗಳು ಬ್ಲಾಸ್ಟ್ ಆದ ಪರಿಣಾಮ ಹತ್ತಿರದಲ್ಲಿದ್ದ ನಾಲ್ಕು ಕಟ್ಟಡಗಳು ಧ್ವಂಸವಾಗಿದೆ.

  • ಮಹಿಳಾ ಪೇದೆ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ

    ಮಹಿಳಾ ಪೇದೆ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ

    ಲಕ್ನೋ: ಉತ್ತರ ಪ್ರದೇಶದ ಮಹಿಳಾ ಪೇದೆಯೊಬ್ಬರು ಅಜ್ಜಿಗೆ ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಆ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೇದೆಯ ಕೆಲಸಕ್ಕೆ ಸಾರ್ವಜನಿಕರು ಅಪಾರ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

    ಮಾನ್ವಿ ವಯಸ್ಸಾದ ಅಜ್ಜಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಮಹಿಳಾ ಪೇದೆ. ಮಾನ್ವಿ ಅವರು ಅಜ್ಜಿಯೊಬ್ಬರು ಯಾವುದೋ ಕೆಲಸಕ್ಕೆ ಸಂಬಂಧಿಸಿದಂತೆ ಬ್ಯಾಂಕಿಗೆ ಬಂದಿದ್ದು, ಕಷ್ಟ ಪಡುತ್ತಿದ್ದರು. ಆದರೆ ಅಲ್ಲಿದ್ದ ಯಾರೂ ಅವರಿಗೆ ಸಹಾಯ ಮಾಡಲಿಲ್ಲ. ಕೊನೆಗೆ ಇದನ್ನು ಗಮನಿಸಿದ ಪೊಲೀಸ್ ಪೇದೆ ಮಾನ್ವಿ ಅವರು ಸಹಾಯ ಮಾಡಿದ್ದಾರೆ.

    ಮಾನ್ವಿ ಅವರು ಬ್ಯಾಂಕ್ ಹೊರಗೆ ಕಾಯುತ್ತಿದ್ದ ವೃದ್ಧೆಯ ಬಳಿ ಹೋಗಿ ಅವರ ಕೆಲಸ ಪೂರ್ಣಗೊಳ್ಳಲು ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಜ್ಜಿ ಊಟ ಮಾಡದಿರುವ ಬಗ್ಗೆ ತಿಳಿದುಕೊಂಡಿದ್ದು, ಅವರನ್ನು ಕರೆದುಕೊಂಡು ಹೋಗಿ ಊಟ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

    ತಮ್ಮ ಕರ್ತವ್ಯದ ಜೊತೆಗೆ ಇಂತಹ ಒಳ್ಳೆಯ ಕಾರ್ಯ ಮಾಡಿದರೆ ಜನಸಾಮಾನ್ಯರಿಗೆ ಪೊಲೀಸರ ಮೇಲೆ ಹೆಚ್ಚು ವಿಶ್ವಾಸ ಹುಟ್ಟುತ್ತದೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಓ.ಪಿ ಸಿಂಹ ಅವರು ಶ್ಲಾಘನೆ ಪತ್ರವನ್ನು ನೀಡಿರುವ ಮೂಲಕ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ಮಾನ್ವಿ ತಮ್ಮ ಸ್ವಂತ ಕೆಲಸಕ್ಕಾಗಿ ಬ್ಯಾಂಕಿಗೆ ಹೋಗಿದ್ದರು. ಅಲ್ಲಿ ಅವರು ವೃದ್ಧೆಯನ್ನು ಭೇಟಿ ಮಾಡಿದ್ದು, ಅವರ ಕೆಲಸ ಮತ್ತು ಹಸಿವನ್ನು ನೀಗಿಸಿದ್ದಾರೆ ಎಂದು ಡಿಜಿಪಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ಪೊಲೀಸ್ ತನ್ನ ಖಾತೆಯಲ್ಲಿ ಟ್ವೀಟ್ ಮಾಡಿ ತಿಳಿಸಿದೆ. ಇದರಿಂದ ನೆಟ್ಟಿಗರಿಂದ ಮಾನ್ವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

  • ದಿನಕ್ಕೆ 18 ಗಂಟೆ ಓದು – 21ನೇ ವಯಸ್ಸಿನಲ್ಲಿ ಆಟೋ ಚಾಲಕನ ಪುತ್ರ ಐಎಎಸ್ ಅಧಿಕಾರಿ

    ದಿನಕ್ಕೆ 18 ಗಂಟೆ ಓದು – 21ನೇ ವಯಸ್ಸಿನಲ್ಲಿ ಆಟೋ ಚಾಲಕನ ಪುತ್ರ ಐಎಎಸ್ ಅಧಿಕಾರಿ

    ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯ ಬಡ ರಿಕ್ಷಾ ಚಾಲಕರೊಬ್ಬರ ಮಗನೊಬ್ಬ ದಿನಕ್ಕೆ 18 ಗಂಟೆಗಳ ಓದಿ ಚಿಕ್ಕವಯಸ್ಸಿನಲ್ಲಿಯೇ ಐಎಎಸ್ ಅಧಿಕಾರಿಯಾಗಿ ವಿಶೇಷ ಸಾಧನೆ ನಿರ್ಮಿಸಿದ್ದಾರೆ.

    ಗೋವಿಂದ್ ಜೈಸ್ವಾಲ್ ತಮ್ಮ 21 ವಯಸ್ಸಿಗೆ ತುಂಬಾ ಪರಿಶ್ರಮದಿಂದ ಓದಿ ತಂದೆ-ತಾಯಿ ಆಶೀರ್ವಾದಿಂದ ತಮ್ಮ ಕನಸನ್ನು ಬೇಗ ತಲುಪಿದ್ದಾರೆ. ಪೋಷಕರಿಗೆ ಗೋವಿಂದ್ ಸೇರಿ ಮೂವರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳಲ್ಲಿ ಕಿರಿಯವನಾದ ಗೋವಿಂದ್ ಕಡುಬಡತನದಲ್ಲಿಯೂ ದಿನಕ್ಕೆ 18 ಗಂಟೆಗಳ ಸಮಯ ಓದಿ ಈಗ ಉನ್ನತ ಹುದ್ದೆಗೆ ಆಯ್ಕೆ ಆಗಿದ್ದಾರೆ.

    ಗೋವಿಂದ್ ಅವರ ಕುಟುಂಬ 12×8 ಅಳತೆಯ ರೂಮಿನಲ್ಲಿ ವಾಸವಾಗಿತ್ತು. ಉಸ್ಮಾನಪುರ ಸರ್ಕಾರಿ ಶಾಲೆಯಲ್ಲಿ ಓದಿದ ಬಳಿಕ ವಾರಣಾಸಿಯ ಸರ್ಕಾರಿ ಕಾಲೇಜಿನಲ್ಲಿ ಗಣಿತದಲ್ಲಿ ಪದವಿ ಪಡೆದಿದ್ದರು. ನಂತರ ಓದಿನಲ್ಲಿ ಆಸಕ್ತಿ ಹೊಂದಿದ್ದ ಗೋವಿಂದ್ ಯುಪಿಎಸ್‍ಸಿ ಪರೀಕ್ಷೆಯಲ್ಲಿ 48ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.

    ಗೋವಿಂದ್ ಅವರ ತಂದೆ ಒಬ್ಬ ಆಟೋರಿಕ್ಷಾ ಚಾಲಕನಾಗಿದ್ದು, ಕುಟುಂಬ ನಿರ್ವಹಣೆ ಮಾತ್ರ ನೋಡಿಕೊಳ್ಳುತ್ತಿದ್ದರು. ಐಎಎಸ್ ಪರೀಕ್ಷೆಗೆ ಅಧ್ಯಯನ ಮಾಡುವಾಗ ದಿನಕ್ಕೊಂದು ಸಮಸ್ಯೆಯನ್ನು ಎದುರಿಸುತ್ತಿದ್ದರು. ಗೋವಿಂದ್ ಅಧ್ಯಯನ ಮಾಡುವಾಗ ಹಲವು ಸಲ ವಿದ್ಯುತ್ ಕೈ ಕೊಡುತಿತ್ತು. ಒಮ್ಮೆ ಹೋದರೆ ಒಂದೊಂದು ದಿನ ಮತ್ತೆ ಕರೆಂಟ್ ಬರುತ್ತಿರಲಿಲ್ಲ. ಅಷ್ಟೇ ಅಲ್ಲದೇ ಪವರ್ ಹೋದರೆ ನೆರೆಮನೆಯಲ್ಲಿ ಜನರೇಟರ್ ಆನ್ ಆಗುತ್ತಿತ್ತು. ಇದರಿಂದ ಅಧಿಕ ಶಬ್ಧ ಬರುತ್ತಿತ್ತು. ಹೀಗಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಧೃತಿಗೆಡದ ಗೋವಿಂದ ಕೊನೆಗೆ ಮನೆಯ ಕಿಟಕಿಗಳನ್ನು ಮುಚ್ಚಿ ಕಿವಿಗೆ ಹತ್ತಿ ಹಾಕಿಕೊಂಡು ಓದುತ್ತಿದ್ದರು.

    ಗೋವಿಂದ್ ಪದವಿ ಮುಗಿಸಿ ಬಳಿಕ ಸಿವಿಲ್ ಸರ್ವಿಸ್ ಪರೀಕ್ಷೆಯ ಸಿದ್ಧತೆಗಾಗಿ ವಾರಣಾಸಿಯಿಂದ ದೆಹಲಿಗೆ ಬಂದಿದ್ದರು. ಕೆಲವು ದಿನಗಳ ನಂತರ ಮೆಟ್ರೋ ಜೀವನ ಶೈಲಿನಿಂದ ಗೋವಿಂದ್ ಗೆ ಆರ್ಥಿಕ ಸಮಸ್ಯೆ ಎದುರಾಯಿತು. ಆಗ ಅವರ ತಂದೆ ನಾರಾಯಣ ಜೈಸ್ವಾಲ್ ಅವರು ಊರಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿ ಅದರಲ್ಲಿ ಬಂದಂತಹ ಕೇವಲ 4 ಸಾವಿರ ರೂ. ನೀಡಿ ಮಗನ ಓದಿಗೆ ಸಹಾಯ ಮಾಡಿದ್ದರು.

    ಗೋವಿಂದ್ ದಿನಕ್ಕೆ ಬರೋಬ್ಬರಿ 18 ರಿಂದ 20 ಗಂಟೆಯ ಸಮಯ ಓದುತ್ತಿದ್ದರು. ನಂತರ 2006ರಲ್ಲಿ ಮೊದಲ ಬಾರಿಗೆ ಯುಪಿಎಸ್‍ಸಿ ಪರೀಕ್ಷೆ ಬರೆದರು. ಪರೀಕ್ಷೆ ಬರೆದ ನಂತರ ಗೋವಿಂದ್ ಅವರು ಫಲಿತಾಂಶ ಬರುವತನಕ ಸರಿಯಾಗಿ ನಿದ್ದೆಯೇ ಮಾಡದೆ ಕಾಯುತ್ತಿದ್ದರು. ಕೊನೆಗೂ 48ನೇ ರ್‍ಯಾಂಕ್ ಪಡೆದು ಪಾಸಾಗಿದ್ದರು. ಫಲಿತಾಂಶ ಬಂದಾಗ ಗೋವಿಂದ್ ಅವರೇ ವಿಸ್ಮಿತರಾಗಿದ್ದರು. ನಂತರ ಸಂತೋಷ ಪಟ್ಟು ಮನೆಯ ಸದಸ್ಯರಿಗೆ ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದರು.

  • ಕೆಲವೇ ದಿನಗಳಲ್ಲಿ ಮದ್ವೆ – ದೇವಸ್ಥಾನದಿಂದ ಬರ್ತಿದ್ದಂತೆ ಪ್ರೇಮಿಗಳ ಮೇಲೆ ಫೈರಿಂಗ್

    ಕೆಲವೇ ದಿನಗಳಲ್ಲಿ ಮದ್ವೆ – ದೇವಸ್ಥಾನದಿಂದ ಬರ್ತಿದ್ದಂತೆ ಪ್ರೇಮಿಗಳ ಮೇಲೆ ಫೈರಿಂಗ್

    ಲಕ್ನೋ: ಇನ್ನೂ ಕೆಲವು ದಿನಗಳಲ್ಲಿ ಮದುವೆಯಾಗಲಿದ್ದ ಜೋಡಿಯನ್ನು ದೇವಸ್ಥಾನದಿಂದ ಹೊರ ಬರುತ್ತಿದ್ದಾಗ ಅಪರಿಚಿತನೊಬ್ಬ ಇಬ್ಬರ ಮೇಲೂ ಗುಂಡಿನ ದಾಳಿ ಮಾಡಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಅನ್ನು ಹಾಗೂ ಪ್ರೀತಿ ಮೃತ ದುರ್ದೈವಿಗಳು. ಅನ್ನು ಉತ್ತರಾಖಂಡ್ ಮೂಲದವರು ಎಂದು ತಿಳಿದು ಬಂದಿದ್ದು, ಇವರು ಗಾಜಿಯಾಬಾದ್‍ನ ವಿಜಯನಗರದಲ್ಲಿ ಗ್ಲಾಸ್ ವ್ಯಾಪಾರ ಮಾಡುತ್ತಿದ್ದರು. ಇಬ್ಬರು ಸೋಮವಾರ ಮುಂಜಾನೆ ಸ್ಕೂಟಿಯಲ್ಲಿ ದೇವಾಲಯಕ್ಕೆ ಬಂದಿದ್ದರು. ಆದರೆ ಇಬ್ಬರು ದೇವಸ್ಥಾನದಿಂದ ಹೊರಡುವಾಗ ಏಕಾಏಕಿ ದುಷ್ಕರ್ಮಿಯೊಬ್ಬ ಶೂಟ್ ಮಾಡಿದ್ದಾನೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಅನ್ನು ಮತ್ತು ಪ್ರೀತಿ ಪರಸ್ಪರ ಪ್ರೀತಿ ಮಾಡುತ್ತಿದ್ದು, ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದರು. ಇವರ ಪ್ರೀತಿಯ ಬಗ್ಗೆ ಎರಡು ಕುಟುಂಬದವರಿಗೂ ತಿಳಿದಿದೆ. ಬಳಿಕ ಇವರ ಪ್ರೀತಿಗೆ ಮನೆಯವರು ಒಪ್ಪಿ ಇನ್ನು ಕೆಲವು ದಿನಗಳಲ್ಲಿ ಮದುವೆಯನ್ನು ಫಿಕ್ಸ್ ಮಾಡಿದ್ದರು. ಆದರೆ ಸೋಮವಾರ ಇಬ್ಬರು ಪಾರ್ಕಿಗೆ ಹೋಗಿದ್ದು, ಅಲ್ಲಿಂದ ದೇವಸ್ಥಾನಕ್ಕೆ ಸ್ಕೂಟಿಯಲ್ಲಿ ಹೋಗಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರ ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿ ಏಳು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಇತ್ತ ಅನ್ನು ಮತ್ತು ಪ್ರೀತಿ ಇಬ್ಬರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

    ಅಕ್ರಮ ಸಂಬಂಧ:
    ಮೃತ ಅನ್ನು ಈಗಾಗಲೇ ಅನೇಕ ಮಹಿಳೆಯರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು ಎಂದು ತಿಳಿದು ಬಂದಿದೆ. ಅವರಲ್ಲಿಯೇ ಒಬ್ಬರು ಕೊಲೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕೊಲೆ ಸಂಬಂಧ ಪೊಲೀಸರು ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದು, ಅವರಲ್ಲಿ ಮಹಿಳೆಯ ಪತಿಯೊಬ್ಬ ಶೂಟ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತ ಅನ್ನು 70 ಗ್ರಾಂ ಚಿನ್ನವನ್ನು ಕಡಿಮೆ ಹಣಕ್ಕೆ ಗಿರಿವಿ ಇಟ್ಟಿದ್ದನು. ಈ ವೇಳೆ ನಾನು ಕೆಲವು ದಿನಗಳಲ್ಲಿ ಬಿಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದನು. ಆದರೆ ಚಿನ್ನ ಅಡವಿಟ್ಟ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಗಿರಿವಿ ಅಂಗಡಿ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ನಮಗೆ ಸುಮಾರು ಮುಂಜಾನೆ 8.30ರ ಸಮಯಕ್ಕೆ ದೇವಾಲಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂತು. ತಕ್ಷಣ ನಾವು ಸ್ಥಳಕ್ಕೆ ಧಾವಿಸಿದೆವು. ಇಬ್ಬರು ಹೊರಡುವಾಗ ಅಪರಿಚಿತನೊಬ್ಬ ಬಂದು ಮನಬಂದಂತೆ ಶೂಟ್ ಮಾಡಿ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಶ್ಲೋಕಾ ಕುಮಾರ್ ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳನ್ನು ತನಿಖೆ ಮುಂದುವರಿಸಿದ್ದಾರೆ. ಕೊಲೆ ನಡೆದ ಸಮಯದಲ್ಲಿ ದೇವಸ್ಥಾನದ ಸಿಸಿಟಿವಿ ತಾಂತ್ರಿಕ ದೋಷದಿಂದ ಕೆಟ್ಟು ಹೋಗಿತ್ತು. ಹೀಗಾಗಿ ಆರೋಪಿಯನ್ನು ಪತ್ತೆ ಮಾಡುವುದು ಕಷ್ಟವಾಗಿದೆ.

  • ಸಪ್ನಾ ಚೌಧರಿಯನ್ನ ರಾಹುಲ್ ಗಾಂಧಿ ಮದ್ವೆ ಆಗ್ಲಿ – ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

    ಸಪ್ನಾ ಚೌಧರಿಯನ್ನ ರಾಹುಲ್ ಗಾಂಧಿ ಮದ್ವೆ ಆಗ್ಲಿ – ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

    ಲಕ್ನೋ: ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮತ್ತೆ ನಾಲಗೆ ಹರಿಬಿಟ್ಟಿದ್ದು, ಸೋನಿಯಾ ಗಾಂಧಿ ಮದ್ವೆಗೂ ಮುನ್ನ ಡ್ಯಾನ್ಸರ್ ಆಗಿದ್ರು. ಈಗ ರಾಹುಲ್ ಗಾಂಧಿಯೂ ಡ್ಯಾನ್ಸರ್ ಸಪ್ನಾ ಚೌಧರಿಯನ್ನ ಮದ್ವೆ ಆಗಲಿ ಎಂದಿದ್ದಾರೆ.

    ಬಿಗ್‍ಬಾಸ್ ಫೇಮ್‍ನ ಸಿಂಗರ್ ಸಪ್ನಾ ಚೌಧರಿ ಕಾಂಗ್ರೆಸ್ ಸೇರಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಸುರೇಂದ್ರ ಸಿಂಗ್ ಮಾತನಾಡಿ, ಅತ್ತೆ ಸೊಸೆ ಇಬ್ಬರು ಒಂದೇ ಕ್ಯಾಟಗರಿ ಸೇರಿದವರಾಗುತ್ತಾರೆ. ರಾಹುಲ್ ಮದುವೆ ಆಗಲಿ ಎಂದರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಸಪ್ನಾ ಸೌಧರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಥುರಾ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಈ ಸುದ್ದಿ ಪ್ರಚಾರವಾಗುತ್ತದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಪ್ನಾ ಚೌಧರಿ, ತಾವು ಕಾಂಗ್ರೆಸ್ ಸದಸ್ಯತ್ವ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ಪ್ರಿಯಂಕಾ ಗಾಂಧಿ ಅವರೊಂದಿಗೆ ಇರುವ ಫೋಟೋ ತುಂಬಾ ಹಳೆಯದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಹಿಂದೆಯೂ ಕೂಡ ತಮ್ಮ ವಿವಾದತ್ಮಾಕ ಹೇಳಿಕೆಯಿಂದಲೇ ಸುದ್ದಿಯಾಗಿದ್ದ ಶಾಸಕ ಸುರೇಂದ್ರ ಸಿಂಗ್, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಪೋಷಕರೇ ಕಾರಣ. ಮಕ್ಕಳನ್ನು ಕಟ್ಟುನಿಟ್ಟಾಗಿ ಬೆಳೆಸಬೇಕು. ಮುಕ್ತವಾಗಿ ಸಂಚರಿಸಲು, ಸ್ಮಾರ್ಟ್ ಫೋನ್ ಬಳಕೆ ಮಾಡಲು ಬಿಡಬಾರದು ಎಂದಿದ್ದರು.

  • ವೇದಿಕೆ ಕುಸಿದು ಬಿಜೆಪಿ ನಾಯಕರಿಗೆ ಗಾಯ: ವಿಡಿಯೋ ವೈರಲ್

    ವೇದಿಕೆ ಕುಸಿದು ಬಿಜೆಪಿ ನಾಯಕರಿಗೆ ಗಾಯ: ವಿಡಿಯೋ ವೈರಲ್

    ಲಕ್ನೋ: ಬಿಜೆಪಿ ಆಯೋಜಿಸಿದ್ದ ‘ಹೋಳಿ ಮಿಲನ್” ಕಾರ್ಯಕ್ರಮದ ವೇಳೆ ವೇದಿಕೆ ಕುಸಿದು ಬಿದ್ದ ಘಟನೆ ಶುಕ್ರವಾರ ಉತ್ತರ ಪ್ರದೇಶದ ಸಂಭಾಲ್‍ನಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಬಿಜೆಪಿಯ ಕಿಸಾನ್ ಮೋರ್ಚಾದ ನಾಯಕ ಅವಿದೇಶ್ ಯಾದವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ವೇದಿಕೆ ಕುಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಕಾರ್ಯಕ್ರಮ ನಡೆಯುವಾಗ ಹಲವು ಜನ ವೇದಿಕೆ ಮೇಲೆ ಹತ್ತಿದ್ದಾರೆ. ಪರಿಣಾಮ ಭಾರ ಹೆಚ್ಚಾಗಿ ವೇದಿಕೆ ಕುಸಿದು ಬಿದ್ದಿದೆ. ಈ ಘಟನೆಯಿಂದ ಹಲವರಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆಯನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

  • ಮೈತ್ರಿ ನಿಭಾಯಿಸೋದನ್ನು ಬಿಜೆಪಿ ನೋಡಿ ಕಾಂಗ್ರೆಸ್ ಕಲಿಯಬೇಕಿದೆ: ಅಖಿಲೇಶ್ ಯಾದವ್

    ಮೈತ್ರಿ ನಿಭಾಯಿಸೋದನ್ನು ಬಿಜೆಪಿ ನೋಡಿ ಕಾಂಗ್ರೆಸ್ ಕಲಿಯಬೇಕಿದೆ: ಅಖಿಲೇಶ್ ಯಾದವ್

    ಲಕ್ನೋ: ಮೈತ್ರಿಯನ್ನು ಹೇಗೆ ನಿಭಾಯಿಸಬೇಕು ಅಂತ ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ಸಮ್ಮಿಶ್ರ ಸರ್ಕಾರವನ್ನು ಹೇಗೆ ಮುನ್ನಡೆಸಬೇಕು ಅನ್ನೋದನ್ನ ಬಿಜೆಪಿ ನೋಡಿ ಕಾಂಗ್ರೆಸ್ ಕಲಿತುಕೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಮುಖಂಡರಿಗೆ ಯಾವ ಪಕ್ಷದ ಮುಖಂಡರನ್ನು ಯಾವಾಗ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಅಂತ ಗೊತ್ತಿದೆ. ಮೈತ್ರಿ ಸರ್ಕಾರ ಇದ್ದಲ್ಲಿ ಏರಿಳಿತಗಳು ಸಾಮಾನ್ಯ. ಇವೆಲ್ಲದರ ನಡುವೆಯೂ ಬಿಜೆಪಿ ನೇತೃತ್ವ ವಹಿಸಿದವರು ಅದನ್ನೆಲ್ಲ ಸಂಬಾಳಿಸಿಕೊಂಡು, ಸರ್ಕಾರ ನಡೆಸುತ್ತಾರೆ. ಮೈತ್ರಿ ಮಾಡಿಕೊಂಡ ಮೇಲೆ ತನ್ನ ಕೆಲವು ಸೀಟುಗಳನ್ನು ಬಿಟ್ಟು ಕೊಟ್ಟಾದರೂ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ನೀತಿಯನ್ನು ಬಿಜೆಪಿ ಪಾಲಿಸುತ್ತೆ. ಮಿತ್ರಪಕ್ಷಗಳ ಎಲ್ಲಾ ಒತ್ತಡಗಳನ್ನೂ ಸಹಿಸಿಕೊಂಡು ಮೈತ್ರಿ ಉಳಿಸಿಕೊಳ್ಳುವಲ್ಲಿ ಬಿಜೆಪಿ ಪಕ್ಷ ಯಶಸ್ವಿಯಾಗಿದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಅಖಿಲೇಶ್ ಹೇಳಿದ್ದಾರೆ.

    ಬಿಜೆಪಿ ಮೈತ್ರಿಯನ್ನು ಹೇಗೆ ಉಳಿಸಿಕೊಳ್ಳುತ್ತದೆ ಅನ್ನೋದಕ್ಕೆ ಬಿಹಾರ ಅತ್ಯುತ್ತಮ ಉದಾಹರಣೆ. 2014ರಲ್ಲಿ ಅಲ್ಲಿ 40 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 22ರಲ್ಲಿ, ಜೆಡಿಯು ಕೇವಲ ಎರಡರಲ್ಲಿ ಗೆದ್ದಿತ್ತು. ಆದರೂ ಈ ಸಲ ಜೆಡಿಯು ಜತೆ ಸಮಾನ ಕ್ಷೇತ್ರಗಳಲ್ಲಿ (50:50) ಸ್ಪರ್ಧಿಸುವ ಒಪ್ಪಂದ ಮಾಡಿಕೊಂಡು ಮೈತ್ರಿ ಮಾಡಲು ನಿರ್ಧರಿಸಿತ್ತು. ಕಾಂಗ್ರೆಸ್‍ನವರು ಬಿಜೆಪಿಯಿಂದ ಮೈತ್ರಿ ಹೇಗೆ ಉಳಿಸಿಕೊಳ್ಳಬೇಕು, ನಿಭಾಯಿಸಬೇಕು ಅಂತ ಕಲಿಯಬೇಕು ಎಂದಿದ್ದಾರೆ.

    ಕಾಂಗ್ರೆಸ್ ದೊಡ್ಡ ಪಕ್ಷ. ಅವರು ಇತರೇ ಪಕ್ಷಗಳಿಗೆ ನೆರವಾಗಬೇಕು. ಉದಾಹರಣೆಗೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೆರವು ನೀಡಬೇಕು. ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಈ ಇಬ್ಬರಿಗೂ ನಾಯಕರಿಗೆ ಇದೆ ಎಂದು ಅಖಿಲೇಶ್ ಯಾದವ್ ತಿಳಿದ್ದಾರೆ.

    ಮಾಯಾವತಿ, ಅಖಿಲೇಶ್ ಯಾದವ್, ಅಜಿತ್ ಸಿಂಗ್ ಮಹಾಘಟಬಂಧನ್ ದಿಂದ ದೂರ ಉಳಿದುಕೊಂಡಿದ್ದಾರೆ. ಸದೆಹಲಿಗೆ ಗೇಟ್‍ವೇ ಎಂದು ಪರಿಗಣಿಸಲಾಗುವ ಉತ್ತರ ಪ್ರದೇಶದ ಎಲ್ಲಾ 80 ಸ್ಥಾನಗಳನ್ನು ಸ್ಪರ್ಧಿಸಲು ಕಾಂಗ್ರೆಸ್ ತನ್ನ ಶಕ್ತಿಯನ್ನು ಕೇಂದ್ರೀಕರಿಸಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಪ್ರಾಬಲ್ಯ ಗಳಿಸಲು ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ನಿಕಟ ಸಹಾಯಕ ಜ್ಯೋತಿರಾದಿತ್ಯ ಸಿಂಧಿಯಾ ನಿಯೋಜಿಸಿ, ಜನರ ಗಮನ ಸೆಳೆಯುವಂತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ನಿರ್ದೇಶಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv