Tag: lucknow

  • ವಿದ್ಯಾರ್ಥಿನಿಯನ್ನೇ ಪ್ರೀತಿಸಿ ಮದ್ವೆಯಾದ ಶಿಕ್ಷಕ -ಪತ್ನಿಯನ್ನ ಕೊಂದು ಆತ್ಮಹತ್ಯೆಗೆ ಶರಣು

    ವಿದ್ಯಾರ್ಥಿನಿಯನ್ನೇ ಪ್ರೀತಿಸಿ ಮದ್ವೆಯಾದ ಶಿಕ್ಷಕ -ಪತ್ನಿಯನ್ನ ಕೊಂದು ಆತ್ಮಹತ್ಯೆಗೆ ಶರಣು

    ಲಕ್ನೋ: ಪ್ರೀತಿಸಿ ವಿದ್ಯಾರ್ಥಿನಿಯನ್ನು ಎರಡನೇ ಮದುವೆಯಾಗಿದ್ದ ಕೋಚಿಂಗ್ ಕ್ಲಾಸ್‍ನ ಶಿಕ್ಷಕನೊಬ್ಬ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಕಾನ್ಪುರದ ಕಲ್ಯಾಣ್ ನಗರದಲ್ಲಿ ಈ ಘಟನೆ ನಡೆದಿದ್ದು, ನಮ್ರತಾ ಖಾನ್(22) ಕೊಲೆಯಾದಾಕೆ. ಶಹವಾನ್(42) ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಹವಾನ್ ಆತ್ಮಹತ್ಯೆಗೂ ಮುನ್ನ ಪತ್ನಿ ಹತ್ಯೆಗೆ ಕಾರಣವೇನು ಎಂಬುದನ್ನು ತನ್ನ ಡೈರಿಯಲ್ಲಿ ಬರೆದಿದ್ದಾನೆ.

    ಘಟನೆ ವಿವರ:
    ಶಹವಾನ್ ಬಿಟೆಕ್ ಮುಗಿಸಿ ಕಾನ್ಪುರದಲ್ಲಿ ಕೋಚಿಂಗ್ ಸೆಂಟರ್ ನಡೆಸುತ್ತಿದ್ದನು. ಇಲ್ಲಿಗೆ ಕೋಚಿಂಗ್‍ಗೆ ಬರುತ್ತಿದ್ದ ನಮ್ರತಾ ಖಾನ್ ವಿದ್ಯಾರ್ಥಿನಿ ಮೇಲೆ ಪ್ರೀತಿ ಹುಟ್ಟಿದ್ದು, ಕ್ರಮೇಣ ಪರಸ್ಪರ ಇಬ್ಬರ ಪ್ರೀತಿಸುತ್ತಿದ್ದರು. ನಂತರ ಇಬ್ಬರೂ ಕೆಲವು ದಿನಗಳ ಕಾಲ ಒಟ್ಟಿಗೆ ಇದ್ದು, ಬಳಿಕ ಮದುವೆಯಾಗಿದ್ದಾರೆ. ಮದುವೆಯಾದ ಆರಂಭದಲ್ಲಿ ಇಬ್ಬರು ತುಂಬಾ ಚೆನ್ನಾಗಿದ್ದರು. ಆದರೆ ದಿನ ಕಳೆದಂತೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ಶಹಮಾನ್‍ಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ ಎಂದು ತಿಳಿದು ಬಂದಿದೆ.

    ನನ್ನ ಜೀವನಕ್ಕೆ 2016ರಲ್ಲಿ ನಮ್ರತಾ ಬಂದಳು. ಆಕೆಯನ್ನು ನಾನು ಮದುವೆಯಾದೆ. ನನಗೆ ಈಗಾಗಲೇ ಮದುವೆಯಾಗಿ, ಮಕ್ಕಳಿರುವ ಬಗ್ಗೆ ತಿಳಿಸಿದ್ದೆನು. ಆದರೂ ಆಕೆ ಒಪ್ಪಿ ನನ್ನ ಮದುವೆಯಾಗಿದ್ದಳು. ನಾನು ಮೊದಲನೇ ಹೆಂಡತಿಗೆ ವಿಚ್ಛೇದನ ನೀಡಿದ್ದೆನು. ವಿವಾಹದ ಬಳಿಕ ನಮ್ರತಾ ನನಗೆ ತುಂಬಾ ಹಿಂಸೆ ಕೊಡುತ್ತಿದ್ದಳು. ನಾನು ಏನೇ ಹೇಳಿದರೂ ಕೇಳುತ್ತಿರಲಿಲ್ಲ. ಮಲಗಿದ್ದಾಗ ಕೆಟ್ಟದಾಗಿ ಬೈಯುತ್ತಿದ್ದಳು. ನನ್ನ ಮಗ ನಮ್ಮ ಜೊತೆಯೇ ವಾಸವಿದ್ದನು. ಆತನಿಗೆ ಪ್ರತಿದಿನ ಹೊಡೆಯುತ್ತಿದ್ದಳು. ನನ್ನಿಂದ ಆತನನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಳು. ಇದರಿಂದ ನೊಂದಿದ್ದ ನನಗೆ ಜೀವನ ಸಾಕಾಗಿದೆ ಎಂದು ಶಹವಾನ್ ಡೈರಿಯಲ್ಲಿ ಬರೆದಿದ್ದಾನೆ.

    ಪತ್ನಿಯ ನಡತೆಯಿಂದ ಬೇಸತ್ತಿದ್ದ ಶಹವಾನ್ ಕೊಲೆ ಮಾಡಲು ನಿರ್ಧರಿಸಿದ್ದು, ಅದರಂತೆಯೇ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಪೊಲೀಸ್ ಠಾಣೆಗೆ ಫೋನ್ ಮಾಡಿ ನಾನು ನನ್ನ ಪತ್ನಿಯನ್ನು ಕೊಲೆ ಮಾಡಿದ್ದೇನೆ. ಆಕೆಯ ಶವ ರೂಮ್‍ನಂಬರ್ 612 ರಲ್ಲಿದೆ ಎಂದು ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಶಹವಾನ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದನು.

    ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕೊಲೆ ಮಾಡಿ ತಾನೂ ವಿಷ ಕುಡಿದು ಆತ್ಮಹತ್ಮೆ ಮಾಡಿಕೊಂಡಿದ್ದಾನೆ. ಆತ ಬರೆದಿರುವ ಡೈರಿಯಲ್ಲಿ ತನ್ನ ಸಾವಿನ ನಂತರ ಆಸ್ತಿಯನ್ನು ಮೊದಲ ಪತ್ನಿ ಹಾಗೂ ಮಕ್ಕಳಿಗೆ ನೀಡುವಂತೆ ತಿಳಿಸಿದ್ದಾನೆ. ಸದ್ಯಕ್ಕೆ ಆ ಡೈರಿಯನ್ನು ಕೈಬರಹ ತಜ್ಞರಿಗೆ ಪರಿಶೀಲನೆ ಮಾಡಲು ನೀಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಪ್ರಕರಣದ ಬಗ್ಗೆ ವಿವರಿಸಿದ್ದಾರೆ.

  • ವರ ನೀರಿನ ಗ್ಲಾಸ್ ಎತ್ತಲಿಲ್ಲ ಎಂದು ಮದ್ವೆ ಮುರಿದ ವಧು!

    ವರ ನೀರಿನ ಗ್ಲಾಸ್ ಎತ್ತಲಿಲ್ಲ ಎಂದು ಮದ್ವೆ ಮುರಿದ ವಧು!

    ಲಕ್ನೌ: ವರ ನೀರಿನ ಗ್ಲಾಸ್ ಎತ್ತಲಿಲ್ಲ ಎಂದು ವಧು ಮದುವೆ ಮುರಿದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಲಕ್ಕೀಂಪುರದ ಲೇರಿಯಲ್ಲಿ ನಡೆದಿದೆ.

    ವಧುವಿನ ತಂದೆ ತನ್ನ ಮಗಳ ಮದುವೆಯನ್ನು ಮಿತೌಲಿ ಗ್ರಾಮದ ಯುವಕನೊಂದಿಗೆ ನಿಶ್ಚಯ ಮಾಡಿದ್ದರು. ಗುರುವಾರ ಈ ಜೋಡಿಯ ನಿಶ್ಚಿತಾರ್ಥ ಕೂಡ ನಡೆದಿತ್ತು. ಮದುವೆ ದಿನ ವರನ ಕುಟುಂಬದವರು ಮೆರವಣಿಗೆ ಮೂಲಕ ಮದುವೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು.

    ಈ ವೇಳೆ ಪೂಜೆಯ ಸಂದರ್ಭದಲ್ಲಿ ಪುರೋಹಿತರು ಗ್ಲಾಸ್ ಎತ್ತಿಕೊಂಡು ನೀರನ್ನು ಸಿಂಪಡಿಸಲು ಹೇಳಿದ್ದಾರೆ. ಆದರೆ ವರನಿಗೆ ಗ್ಲಾಸ್ ಎತ್ತಲು ಸಾಧ್ಯವಾಗಲಿಲ್ಲ. ವರನ ಈ ವರ್ತನೆ ಕಂಡು ಅಲ್ಲಿದ್ದ ಮಹಿಳೆಯರಿಗೆ ಅನುಮಾನ ಬಂದಿದೆ. ಬಳಿಕ ವರನನ್ನು ಮನೆಯ ಒಳಗೆ ಕರೆಸಿಕೊಂಡರು.

    ಮನೆಯ ಒಳಗೆ ಹೋಗಿದ್ದ ತಕ್ಷಣ ವಧುವಿನ ಕಡೆಯವರು ಮತ್ತೆ ನೀರಿನ ಗ್ಲಾಸ್ ಎತ್ತಲು ವರನಿಗೆ ಹೇಳಿದ್ದಾರೆ. ವರ ನೀರಿನ ಗ್ಲಾಸ್ ಎತ್ತಲು ಪ್ರಯತ್ನಿಸಿದಾಗ ಆತನ ಕೈ ನಡುಗಿದೆ. ಅಲ್ಲದೆ ಆತನಿಗೆ ಗ್ಲಾಸ್ ಎತ್ತಲು ಸಾಧ್ಯವಾಗಲಿಲ್ಲ. ಇದನ್ನು ನೋಡಿದ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು.

    ವಧು ಈ ಮದುವೆಯನ್ನು ನಿರಾಕರಿಸುತ್ತಿದ್ದಂತೆ ವರನ ಕುಟುಂಬದವರು ಜಗಳ ಶುರು ಮಾಡಿದ್ದಾರೆ. ಇದರಿಂದ ಭಯಗೊಂಡ ವಧುವಿನ ತಂದೆ ಉತ್ತರಪ್ರದೇಶದ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ್ದಾರೆ.

    ಮಾತುಕತೆಯ ಬಳಿಕ ಪೊಲೀಸರು ವಧುವನ್ನು ಠಾಣೆಗೆ ಕರೆಸಿ ಮಾತನಾಡಿದ್ದರು. ಈ ವೇಳೆ ವಧು ಮದುವೆ ಆಗುವುದಕ್ಕೆ ನಿರಾಕರಿಸಿದಳು. ಈ ವೇಳೆ ಪೊಲೀಸರು ಸಂಧಾನ ಮಾಡಲು ಯತ್ನಿಸಿದರು. ಆದರೆ ಎರಡೂ ಕುಟುಂಬದವರು ರಾಜಿಗೆ ಒಪ್ಪಲಿಲ್ಲ. ಮದುವೆಗೆ ಕೊಟ್ಟ ತಮ್ಮ ತಮ್ಮ ವಸ್ತುಗಳನ್ನು ಇಬ್ಬರೂ ಪರಸ್ಪರ ಹಿಂದಿರುಗಿಸಿಕೊಂಡರು.

    ವರನ ಒಂದು ಕೈ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಅಲ್ಲದೆ ಆತನಿಗೆ ತೂಕದ ವಸ್ತು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂಬುದಾಗಿ ವರದಿಯಾಗಿದೆ.

  • ಮನೆಗೆ ಸಿಸಿಟಿವಿ ಫಿಕ್ಸ್ ಮಾಡಿ ತನ್ನ ರಹಸ್ಯ ಬಯಲು ಮಾಡ್ಕೊಂಡ ತಾತ!

    ಮನೆಗೆ ಸಿಸಿಟಿವಿ ಫಿಕ್ಸ್ ಮಾಡಿ ತನ್ನ ರಹಸ್ಯ ಬಯಲು ಮಾಡ್ಕೊಂಡ ತಾತ!

    ಲಕ್ನೋ: ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪದ ಮೇಲೆ ನಿವೃತ್ತ ಎಲ್‍ಐಸಿ ಅಧಿಕಾರಿಯನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

    ತಾನೇ ಸೆಕ್ಯೂರಿಟಿಗೆಂದು ಅಳವಡಿಸಿದ್ದ ಸಿಸಿಟಿವಿಯಲ್ಲಿ ಆತನ ಕೃತ್ಯ ಬಯಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು 62 ವರ್ಷದ ಆರೋಪಿ ವಿಮಲ್ ಚಂದ್ ಎಂದು ಗುರುತಿಸಲಾಗಿದೆ.

    ಏನಿದು ಪ್ರಕರಣ?
    62ರ ತಾತಾ ಮೂಲತಃ ಉತ್ತರ ಪ್ರದೇಶ ಉನ್ನವೌ ಜಿಲ್ಲೆಯವನಾಗಿದ್ದು, ಈತ ಎಲ್‍ಐಸಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದನು. ಐದು ವರ್ಷಗಳ ಹಿಂದೆ ವಿಮಲ್ ಚಂದ್ ನಿವೃತ್ತಿ ಹೊಂದಿದ್ದನು. ಆರೋಪಿಯ ಪತ್ನಿ 2015 ರಲ್ಲಿ ಮೃತಪಟ್ಟಿದ್ದರು. ನಂತರ ಮನೆಯಲ್ಲಿ ಒಬ್ಬನೇ ವಾಸವಾಗಿದ್ದನು. ಹೀಗಾಗಿ ಸೆಕ್ಯೂರಿಟಿಗಾಗಿ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮನೆಗೆ ಸಿಸಿಟಿವಿ ಹಾಕಿಸಿದ್ದನು.

    ಆರೋಪಿಯ ಮನೆಗೆ ಆಶು ಕಶ್ಯಪ್ ಎಂಬಾತ ಸಿಸಿಟಿವಿ ಅಳವಡಿಸಿದ್ದನು. ಕಾಸರು ಬುಕ್ಷಾರ್ ನಲ್ಲಿ ವಾಸಿಸುತ್ತಿದ್ದನು. ಕಶ್ಯಪ್‍ಗೆ ತಾನು ಹಾಕಿದ್ದ ಕ್ಯಾಮೆರಾ ಇಂಟರ್ ನೆಟ್ ಪಾಸ್‍ವರ್ಡ್ ತಿಳಿದಿತ್ತು. ನಂತರ ಆತ ಅದನ್ನು ತನ್ನ ಮೊಬೈಲ್‍ಗೆ ಕನೆಕ್ಟ್ ಮಾಡಿಕೊಂಡು ಚಂದ್ ಮನೆಯಲ್ಲಿ ನಡೆಯುತ್ತಿದ್ದುದ್ದನ್ನು ನೋಡುತ್ತಿದ್ದನು ಎಂದು ಎಸ್‍ಪಿ ಅಖಿಲೇಶ್ ನಾರಾಯಣ್ ತಿಳಿಸಿದ್ದಾರೆ.

    ರಹಸ್ಯ ಬಯಲು:
    ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರನ್ನು ಮನೆಗೆ ಕರೆಯುತ್ತಿದ್ದು, ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಕಶ್ಯಪ್ ಅದನ್ನು ಪೊಲೀಸರಿಗೆ ಹೇಳದೆ ಚಂದ್‍ಗೆ ಬ್ಲಾಕ್‍ಮೇಲ್ ಮಾಡಲು ಶುರುಮಾಡಿದ್ದಾನೆ. 25 ಲಕ್ಷ ರೂಪಾಯಿ ನೀಡದೇ ಹೋದರೆ ಯುವತಿಯರಿಗೆ ನೀಡಿದ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆವೊಡ್ಡಿದ್ದಾನೆ.

    ಇತ್ತ ಚಂದ್ ಕೂಡ ಹಣ ಕೊಡುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಅನೇಕ ದಿನಗಳಾದರೂ ಕಶ್ಯಪ್‍ಗೆ ಹಣ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಕಶ್ಯಪ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣವೇ ಇಬ್ಬರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಶುರುಮಾಡಿದ್ದಾರೆ.

  • ಬೆದರಿಸಲು ಪೆಟ್ರೋಲ್ ಸುರಿದುಕೊಂಡ ಪ್ರೇಮಿ – ಕಡ್ಡಿ ಗೀರಿ ಅಪ್ರಾಪ್ತೆ ಪರಾರಿ

    ಬೆದರಿಸಲು ಪೆಟ್ರೋಲ್ ಸುರಿದುಕೊಂಡ ಪ್ರೇಮಿ – ಕಡ್ಡಿ ಗೀರಿ ಅಪ್ರಾಪ್ತೆ ಪರಾರಿ

    ಲಕ್ನೋ: ತನ್ನನ್ನು ಮದುವೆಯಾಗುವಂತೆ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ವೇಳೆ ಅಪ್ರಾಪ್ತೆಯೊಬ್ಬಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆಯಿಂದ ಅರವಿಂದ್ ನಿಶಾದ್ (20) ದೇಹದ ಶೇ.60 ಭಾಗ ಬೆಂಕಿಯಿಂದ ಸುಟ್ಟು ಹೋಗಿದ್ದು, ಸದ್ಯಕ್ಕೆ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ. ಈ ಘಟನೆ ಏಪ್ರಿಲ್ 20ರಂದು ನಡೆದಿದ್ದು, ಶನಿವಾರ ನಿಶಾದ್ ತಾಯಿ ಹುಡುಗಿ ಮತ್ತು ಆಕೆಯ ತಾಯಿ ವಿರುದ್ಧ ಕೊಲೆ ಕೇಸನ್ನು ಹಾಸಂಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    ಖಾದ್ರಾ ಪ್ರದೇಶದ ನಿವಾಸಿಯಾಗಿದ್ದ ಅರವಿಂದ್ ನಿಶಾದ್ ತನ್ನ ನೆರೆಮನೆಯ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಆಕೆಗೆ 15 ವರ್ಷಗಳಾಗಿದ್ದು, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರ ಮದುವೆಗೆ ಹುಡುಗಿಯ ಕುಟುಂಬದವರು ಒಪ್ಪಿದ್ದರು. ಹುಡುಗಿ ಅಪ್ರಾಪ್ತೆಯಾಗಿದ್ದಾಳೆ ಹೀಗಾಗಿ ಆಕೆಗೆ 18 ವರ್ಷವಾದ ಕೂಡಲೇ ಮದುವೆ ಮಾಡುವುದಾಗಿ ಹೇಳಿದ್ದರು. ಆದರೆ ನಿಶಾದ್ ನಾನು ಕಾಯುವುದಿಲ್ಲ ಈಗಲೇ ಮದುವೆ ಮಾಡಿಕೊಡಬೇಕು ಎಂದು ಹಠ ಮಾಡಿದ್ದಾನೆ.

    ಕೊನೆಗೆ ಏಪ್ರಿಲ್ 20 ರಂದು ಈ ಬಗ್ಗೆ ಮಾತನಾಡಲು ಹುಡುಗಿ ಮತ್ತು ಆಕೆಯ ತಾಯಿ ನಿಶಾದ್ ಮನೆಗೆ ಬಂದಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ವಾದ ನಡೆದಿದೆ. ಆಗ ನಿಶಾದ್ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಈಗಲೇ ಮದುವೆ ಮಾಡಿಕೊಡಬೇಕು ಇಲ್ಲವಾದರಲ್ಲಿ ನಾನು ಬೆಂಕಿ ಹಚ್ಚಿಕೊಳ್ಳುತ್ತೇನೆ ಎಂದು ಬೆದರಿಸಲು ಮುಂದಾಗಿದ್ದಾನೆ.

    ಈ ವೇಳೆ ನಿಶಾದ್‍ನನ್ನು ತಡೆಯದೆ ಹುಡುಗಿ ಬೆಂಕಿ ಕಡ್ಡಿ ಗೀರಿ ಆತನ ಮೈಮೇಲೆ ಎಸೆದಿದ್ದಾಳೆ. ಬಳಿಕ ಅಲ್ಲಿಂದ ತಾಯಿ ಮತ್ತು ಹುಡುಗಿ ಓಡಿ ಹೋಗಿದ್ದಾರೆ. ತಕ್ಷಣ ನಿಶಾದ್ ತಾಯಿ ಮತ್ತು ನೆರೆಹೊರೆಯುವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಧೀರಜ್ ಶುಕ್ಲಾ ತಿಳಿಸಿದ್ದಾರೆ.

    ವೈದ್ಯರು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದೇವೆ. ಎಲ್ಲ ಆಯಾಮಗಳನ್ನು ವಿಚಾರಣೆ ಮಾಡುತ್ತಿದ್ದೇವೆ ಎಂದು ಧೀರಜ್ ಶುಕ್ಲಾ ಹೇಳಿದ್ದಾರೆ.

    ಅರವಿಂದ ನಿಶಾದ್ ತಾಯಿ ಮಗನೇ ಪೆಟ್ರೋಲ್ ಸುರಿದುಕೊಂಡಿದ್ದಾನೆ ಎನ್ನುವ ವಿಚಾರವನ್ನು ತಳ್ಳಿ ಹಾಕಿದ್ದಾರೆ. ನನ್ನ ಮಗ ಮತ್ತು ಹುಡುಗಿ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ವೇಳೆ ಆಕೆಯ ತಾಯಿ 2 ಲಕ್ಷ ಮತ್ತು ಚಿನ್ನಾಭರಣವನ್ನು ದೋಚಿಕೊಂಡಿದ್ದಾರೆ. ಹುಡುಗಿಯ ಮನೆಯವರ ನಡತೆ ಸರಿ ಇಲ್ಲದ್ದಕ್ಕೆ ಮಗ ಹುಡುಗಿಯಿಂದ ಅಂತರ ಕಾಯ್ದುಕೊಂಡಿದ್ದ. ಈ ವಿಚಾರಕ್ಕೆ ಸಿಟ್ಟಾಗಿ ಮಗನನ್ನು ಅವರು ಕೊಲೆ ಮಾಡಲು ಮುಂದಾಗಿದ್ದಾರೆ. ಈ ಘಟನೆ ನಡೆದಾಗ ನನ್ನ ಪತಿ ಮನೆಯಲ್ಲಿ ಇರಲಿಲ್ಲ. ಹಾಗಾಗಿ ನಾನು ಇಷ್ಟು ದಿನ ದೂರು ದಾಖಲಿಸಿರಲಿಲ್ಲ ಎಂದು ನಿಶಾದ್ ತಾಯಿ ತಿಳಿಸಿದ್ದಾರೆ.

  • ಮೋದಿ ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುದನ್ನು ಮರೆತುಬಿಡಿ: ಪ್ರಧಾನಿ

    ಮೋದಿ ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುದನ್ನು ಮರೆತುಬಿಡಿ: ಪ್ರಧಾನಿ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಅವರು ವಾರಣಾಸಿಯಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ನಿಮ್ಮ ಅದ್ಭುತ ಸ್ವಾಗತಕ್ಕೆ ನಾನು ಕೃತಜ್ಞನಾಗಿದ್ದೇನೆ. ಗುರುವಾರ ನಡೆದ ರೋಡ್ ಶೋನಲ್ಲಿ ನಾನು ವಾರಣಾಸಿಯ ಪ್ರತಿ ನಿವಾಸಿಗಳನ್ನು ನನ್ನ ಕುಟುಂಬದವರಂತೆ ನೋಡಿದ್ದೇನೆ. ಕಳೆದ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ತಿರುಗುತ್ತಿದ್ದೇನೆ. ನಾನು, ಅಮಿತ್ ಶಾ ಹಾಗೂ ಯೋಗಿ ಅದಿತ್ಯಾನಾಥ್ ಈ ಪಕ್ಷದ ಕಾರ್ಯಕರ್ತರು ಎಂದರು.

    ನಾನು ಕಾರ್ಯಕರ್ತರನ್ನು ಭೇಟಿ ಮಾಡಲು ಎಂದಿಗೂ ನಿರಾಕರಿಸಿಲ್ಲ. ಅವರು ನನ್ನನ್ನು ಭೇಟಿ ಮಾಡಬೇಕು ಎಂದಾಗಲೆಲ್ಲಾ ನಾನು ಅವರನ್ನು ಭೇಟಿ ಮಾಡಿದ್ದೇನೆ. ನಾವು ಭಾರತದ ಚಿಕ್ಕ ಯೋಧರು. ದೇಶಕ್ಕಾಗಿ ಕೆಲಸ ಮಾಡಲು ನಾನು ಬಂದಿದ್ದೇನೆ. ಈ ಚುನಾವಣೆ ಮೋದಿ ಬಗ್ಗೆ ಅಲ್ಲ. ಈ ಚುನಾವಣೆ ಕಾರ್ಯಕರ್ತರದ್ದು. ಪ್ರತಿಯೊಂದು ಮತ ಇಲ್ಲಿ ಮುಖ್ಯವಾಗುತ್ತದೆ. ಮೋದಿ ಗೆಲ್ಲುತ್ತಾರೋ ಸೋಲುತ್ತಾರೋ ಎಂಬುದನ್ನು ಮರೆತುಬಿಡಿ. ಏಕೆಂದರೆ ಏನೇ ಆದರೂ ಗಂಗಾಮಾತೆ ಅದನ್ನು ನೋಡುತ್ತಿರುತ್ತಾಳೆ ಅಂದ್ರು.

    ಈ ರಾಷ್ಟ್ರೀಯ ಚುನಾವಣೆಯಲ್ಲಿ ಎರಡು ಅಂಶಗಳು ಇದೆ. ಮೊದಲು ವಾರಣಾಸಿಯಲ್ಲಿ ಗೆಲುವು ಸಾಧಿಸಬೇಕು. ನನಗೆ ಅನಿಸುತ್ತೆ ನಾವು ಈಗಾಗಲೇ ಇಲ್ಲಿ ಗೆದ್ದಿದ್ದೇವೆ. ಇದಕ್ಕೆ ರೋಡ್ ಶೋನಲ್ಲಿ ಇದ್ದ ಜನರೇ ಸಾಕ್ಷಿ. ಮತ್ತೊಂದು ಪ್ರಜಾಪ್ರಭುತ್ವದ ಗೆಲುವು ಆಗಬೇಕು. ಇಡೀ ಭಾರತ, ದೇಶಕ್ಕೆ ಮತ್ತೊಮ್ಮೆ ಮೋದಿ ಸರ್ಕಾರ ಬೇಕು ಎಂದು ಹೇಳುತ್ತಿದೆ. ಸರ್ಕಾರ ಆಯ್ಕೆ ಮಾಡಿಕೊಳ್ಳುವುದು ಈ ದೇಶದ ಪ್ರಜೆಯ ಕೈಯಲ್ಲಿದೆ. ಆದರೆ ಸರ್ಕಾರ ನಡೆಸುವುದು ನಮ್ಮ ಜವಾಬ್ದಾರಿ ಎಂದರು.

    ಯಾವುದೇ ಮತಗಟ್ಟೆಯಲ್ಲಿ ನನ್ನ ಕಾರ್ಯಕರ್ತರು ಸೋಲು ಕಂಡರೆ ನಾನು ನನ್ನ ಗೆಲುವನ್ನು ಎಂಜಾಯ್ ಮಾಡುವುದಿಲ್ಲ. ಈಗ ಒಂದು ಮಂತ್ರ ಇರಬೇಕಿತ್ತು. ‘ಮೇರಾ ಬೂತ್, ಸಬ್‍ಸೇ ಮಜ್ಬೂತ್ (ನನ್ನ ಮತ, ನನ್ನ ಶಕ್ತಿ). ಎಲ್ಲ ವೋಟಿಂಗ್ ದಾಖಲೆಗಳನ್ನು ಮುರಿಯಬೇಕು ಎಂದು ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

    ನೀವು ಮೋದಿ ಅವರ ಸೈನಿಕ ಆಗಿದ್ದರೆ, ಟಿವಿಯಲ್ಲಿ ಕುಳಿತು ಡಿಬೇಟ್ ಮಾಡುವವರ ಮಾತುಗಳನ್ನು ಕೇಳಬೇಡಿ. ಏಕೆಂದರೆ ರಾಜಕೀಯಗಿಂತ ಸ್ನೇಹ, ಪ್ರೀತಿ ಮುಖ್ಯ. ಆದರೆ ಇದು ಈಗ ಕಾಣೆಯಾಗುತ್ತಿದೆ. ಹಾಗಾಗಿ ನಾವು ಅದನ್ನು ಮತ್ತೆ ವಾಪಸ್ ತರಬೇಕು. ಮೋದಿ ಬಗ್ಗೆ ಯಾರೇ ಏನೇ ಮಾತನಾಡಿದರೂ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದರು.

    ಖರ್ಚು ಹೇಗೆ ಕಡಿಮೆ ಮಾಡುವುದು ಎಂಬುದನ್ನು ನಾನು ಹೇಳುತ್ತೇನೆ. ಪ್ರತಿಯೊಂದು ಪಕ್ಷದ ಕಾರ್ಯಕರ್ತರು 10 ಕುಟುಂಬದ ಜವಾಬ್ದಾರಿ ತೆಗೆದುಕೊಂಡು ಅವರ ಮನೆಗೆ ಭೇಟಿ ಮಾಡಬೇಕು. ಆಗ ಅವರ ಜೊತೆ ತಿಂಡಿ ತಿನ್ನಬಹುದು, ಟೀ ಕುಡಿಯಬಹುದು. ಇದರಲ್ಲಿ ಯಾವುದೇ ಖರ್ಚು ಆಗುವುದಿಲ್ಲ ಹೊರತು ಕೇವಲ ಮಾತುಗಳನ್ನು ಹಂಚಿಕೊಳ್ಳುತ್ತೇವೆ. ಎಲ್ಲರೂ ಕೆಟ್ಟದನ್ನು ನಿರ್ಲಕ್ಷಿಸಿ ಎಂದರು. ಇದೇ ವೇಳೆ ಮೊದಲ ಬಾರಿಗೆ ಮತ ಹಾಕುವವರು ನಮೋ ಆ್ಯಪ್ ಓದಿ ಎಂದು ತಿಳಿಸಿದರು.

    ಪಕ್ಷದ ಕಾರ್ಯಕರ್ತರು ತಮ್ಮ ಮನೆಯಿಂದ ಹೊರ ಹೋಗುವಾಗ ನಾನು ಬಿಜೆಪಿಗೆ ಸೇವೆ ಸಲ್ಲಿಸಲು ಹೊರ ಹೋಗುತ್ತಿದ್ದೇನೆ ಎಂದು ಹೇಳುತ್ತಾರೆ. ಅಲ್ಲದೆ ಒಂದು ವೇಳೆ ನಾನು ಜೀವಂತವಾಗಿ ಹಿಂತಿರುಗಲಿಲ್ಲ ಎಂದರೆ ನನ್ನ ತಮ್ಮನನ್ನು ನಾಳೆಯಿಂದ ಪಕ್ಷದ ಪರವಾಗಿ ಕೆಲಸ ಮಾಡಲು ಕಳುಹಿಸು ಎಂದು ಹೇಳುತ್ತಾರೆ. ಇದು ನಿಜವಾಗಿಯೂ ನಡೆದಿದೆ ಎಂದು ಮೋದಿ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

  • ಪತಿಯಿಂದ ಯುವತಿಯರಿಬ್ಬರ ಮೇಲೆ ಅತ್ಯಾಚಾರ – ವಿಡಿಯೋ ರೆಕಾರ್ಡ್ ಮಾಡಿದ ಪತ್ನಿ!

    ಪತಿಯಿಂದ ಯುವತಿಯರಿಬ್ಬರ ಮೇಲೆ ಅತ್ಯಾಚಾರ – ವಿಡಿಯೋ ರೆಕಾರ್ಡ್ ಮಾಡಿದ ಪತ್ನಿ!

    ಲಕ್ನೋ: ವ್ಯಕ್ತಿಯೊಬ್ಬ ಯುವತಿಯರಿಬ್ಬರನ್ನು ಅತ್ಯಾಚಾರ ಮಾಡಿದ್ದಾನೆ. ಆದರೆ ಆತನ ಪತ್ನಿ ಅವರನ್ನು ರಕ್ಷಿಸದೇ ಪತಿಯ ರೇಪ್ ವಿಡಿಯೋವನ್ನು ತಾನೇ ರೆಕಾರ್ಡ್ ಮಾಡಿರುವಂತಹ ಆಘಾತಕಾರಿ ಘಟನೆ ಉತ್ತರದ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

    ಒತ್ತೆಯಾಳಾಗಿಟ್ಟುಕೊಂಡಿದ್ದ ಆರೋಪಿ ಸಂಜೀವ್ ಲೊಹಾನ್ ನಮ್ಮಿಬ್ಬರ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತೆಯರು ಆರೋಪಿಸಿ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಮುಜಾಫರ್ ನಗರದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯರನ್ನು ಬ್ಲಾಕ್‌ಮೇಲ್ ಮಾಡುವ ಸಲುವಾಗಿ ಪತ್ನಿ ಇಂತಹ ನೀಚ ಕೆಲಸ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    22 ರಿಂದ 23 ವರ್ಷದ ಯುವತಿಯರಿಬ್ಬರನ್ನು ಆರೋಪಿ ಸಂಜೀವ್ ಲೋಹಾನ್ ಹೊಸ ಮಂಡಿ ಪ್ರದೇಶದಲ್ಲಿ ಒತ್ತೆಯಾಳಾಗಿಟ್ಟುಕೊಂಡಿದ್ದನು. ಬಳಿಕ ಇಬ್ಬರ ಮೇಲೂ ಅತ್ಯಾಚಾರ ಎಸಗಿದ್ದಾನೆ. ಪತಿ ಯುವತಿಯರ ಮೇಲೆ ಅತ್ಯಾಚಾರ ಮಾಡುವ ದೃಶ್ಯವನ್ನು ಪತ್ನಿ ರೀಟಾ ಲೊಹಾನ್ ರೆಕಾರ್ಡ್ ಮಾಡಿಕೊಂಡಿದ್ದು, ಬ್ಲಾಕ್‌ಮೇಲ್ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಷ್ಟೇ ಅಲ್ಲದೆ ವಿಡಿಯೋ ಮೂಲಕ ಬ್ಲಾಕ್‌ಮೇಲ್ ಮಾಡಿದ್ದ ನಂತರ ಇತರರು ಕೂಡ ಯುವತಿಯರ ಮೇಲೆ ಅತ್ಯಾಚಾರ ನಡೆಸಿರುವುದು ತಿಳಿದುಬಂದಿದೆ. ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿಸಿದ್ದೇವೆ. ಆದರೆ ಯಾವ ವಿಚಾರಕ್ಕೆ ಬ್ಲಾಕ್‌ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿಲ್ಲ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಪ್ರಿಯಕರನಿಂದ ಕಿರುಕುಳ – ಮದ್ವೆಯಾದ 8 ತಿಂಗಳಿಗೆ ಯುವತಿ ನೇಣಿಗೆ ಶರಣು

    ಪ್ರಿಯಕರನಿಂದ ಕಿರುಕುಳ – ಮದ್ವೆಯಾದ 8 ತಿಂಗಳಿಗೆ ಯುವತಿ ನೇಣಿಗೆ ಶರಣು

    ಲಕ್ನೋ: ಪ್ರಿಯಕರನ ಕಿರುಕುಳ ತಾಳಲಾಗದೇ ವಿವಾಹಿತ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಮುಜಫರ್ ನಗರ ಜಿಲ್ಲೆಯಲ್ಲಿ ನಡೆದಿದೆ.

    ನಗ್ಮಾ(20) ಆತ್ಮಹತ್ಯೆಗೆ ಶರಣಾದ ಯುವತಿ. ಈ ಘಟನೆ ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಾಜಿಪುರ ಪ್ರದೇಶದಲ್ಲಿ ಶನಿವಾರ ನಡೆದಿದೆ. ನಗ್ಮಾ ತನ್ನ ಪೋಷಕರ ಮನೆಯಲ್ಲಿ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    “ನನ್ನ ಮಗಳಿಗೆ ಶಾವೆಜ್ ಎಂಬಾತ ಪತಿಯಿಂದ ವಿಚ್ಛೇದನ ಪಡೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದನು. ಅಷ್ಟೇ ಅಲ್ಲದೇ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಕಿರುಕುಳ ನೀಡುತ್ತಿದ್ದನು” ಎಂದು ಮೃತ ನಗ್ಮಾ ತಂದೆ ಅನೀಸ್ ಅಹ್ಮದ್ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸತ್ಪಾಲ್ ಆಂಟಿಲ್ ತಿಳಿಸಿದ್ದಾರೆ.

    ಈ ಬಗ್ಗೆ ನಗ್ಮಾ ಪತಿ ಕಾಸೀಫ್ ಪ್ರತಿಕ್ರಿಯಿಸಿ, ನಗ್ಮಾ ಆರೋಪಿಯ ಮಾತನ್ನು ಒಪ್ಪಿಕೊಳ್ಳದೆ ನಿರಾಕರಿಸಿದ್ದಾಳೆ. ನಂತರ ಆತ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಿರುಕುಳ ನೀಡುತ್ತಿದ್ದನು. ಹೀಗಾಗಿ ನಗ್ಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಿದ್ದಾರೆ.

    ಸದ್ಯಕ್ಕೆ ಪೊಲೀಸರು ಆರೋಪಿ ಶಾವೆಜ್ ವಿರುದ್ಧ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಮೃತ ನಗ್ಮಾ ಮತ್ತು ಕಾಸಿಫ್ ಎಂಟು ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.

  • ಮಲಗಿದ್ದ ಪತ್ನಿ ಮಕ್ಕಳನ್ನ ಕೊಂದು ವಾಟ್ಸಪ್‍ಗೆ ವಿಡಿಯೋ ಅಪ್ಲೋಡ್

    ಮಲಗಿದ್ದ ಪತ್ನಿ ಮಕ್ಕಳನ್ನ ಕೊಂದು ವಾಟ್ಸಪ್‍ಗೆ ವಿಡಿಯೋ ಅಪ್ಲೋಡ್

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಮಕ್ಕಳು ಮಲಗಿದ್ದಾಗ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್‍ನಲ್ಲಿ ನಡೆದಿದೆ.

    ಈ ಘಟನೆ ಇಂದ್ರಪುರಂನ ಜ್ಞಾನಖಾಂಡ್‍ನಲ್ಲಿ ನಡೆದಿದ್ದು, ಆರೋಪಿ ಕೊಲೆಯ ನಂತರ ವಿಡಿಯೋ ಮಾಡಿ ಅದನ್ನು ಕುಟುಂಬದ ವಾಟ್ಸಪ್ ಗ್ರೂಪಿನಲ್ಲಿ ಪೋಸ್ಟ್ ಮಾಡಿದ್ದಾನೆ. ವಿಡಿಯೋದಲ್ಲಿ, ಆರೋಪಿ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಜೊತೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ.

    ಏನಿದು ಪ್ರಕರಣ?
    ಆರೋಪಿ ಒಬ್ಬ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಿದರಿಂದ ಖಿನ್ನತೆಗೆ ಒಳಗಾಗಿದ್ದನು ಎಂದು ಕುಟುಂಬದವರು ಹೇಳಿದ್ದಾರೆ.

    ಆರೋಪಿ ಪತ್ನಿ ಜೊತೆ ಪ್ರತಿದಿನವೂ ಜಗಳವಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆ ಮಾಡಿ ಆರೋಪಿ ಕುಟುಂಬದ ವಾಟ್ಸಪ್ ಗ್ರೂಪಿನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದನು. ನಂತರ ಕುಟುಂಬದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಆರೋಪಿ, ಪತ್ನಿ ಮತ್ತು ಮಕ್ಕಳು ನಿದ್ದೆ ಮಾಡುವಾಗ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಇನ್ನೂ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ಬಸ್, ಟ್ರಕ್ ಮುಖಾಮುಖಿ ಡಿಕ್ಕಿ- 7 ಸಾವು, 30 ಮಂದಿಗೆ ಗಾಯ

    ಬಸ್, ಟ್ರಕ್ ಮುಖಾಮುಖಿ ಡಿಕ್ಕಿ- 7 ಸಾವು, 30 ಮಂದಿಗೆ ಗಾಯ

    ಲಕ್ನೋ: ಬಸ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ 7 ಜನ ಸ್ಥಳದಲ್ಲೇ ಮೃತಪಟ್ಟು, 30 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮೈನ್‍ಪುರಿ ಜಿಲ್ಲೆಯಲ್ಲಿ ನಡೆದಿದೆ.

    ಅಪಘಾತದಲ್ಲಿ ಬಸ್ ಸಂಪೂರ್ಣ ನಜ್ಜುಗುಜ್ಜಾದ ಕಾರಣ ಮೃತರ ದೇಹಗಳನ್ನು ಹೊರ ತರಲು ಕಷ್ಟವಾಗಿತ್ತು. ಹೀಗಾಗಿ ಕ್ರೇನ್ ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆಯಲಾಯಿತು ಎಂದು ಪೊಲೀಸರು ಹೇಳಿದರು.

    ಆಗ್ರಾ- ಲಕ್ನೋ ಎಕ್ಸ್ ಪ್ರೆಸ್ ವೇಯಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ವಾರಾಣಾಸಿಯಿಂದ ನವದೆಹಲಿಗೆ ಹೋಗುತ್ತಿತ್ತು. ಈ ವೇಳೆ ಓವರ್ ಟೇಕ್ ಮಾಡಲು ಹೋದಾಗ ಎದುರುಗಡೆಯಿಂದ ಟ್ರಕ್ ಬಂದಿದೆ. ಈ ಸಂದರ್ಭದಲ್ಲಿ ಬಸ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿದೆ.

    ಈ ಅಪಘಾತದಲ್ಲಿ ಬಸ್ ಚಾಲಕ ಮೃತಪಟ್ಟಿದ್ದಾನೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಉತ್ತರ ಪ್ರದೇಶದ ಸಾಯಿಫೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಹಳಿ ತಪ್ಪಿದ ರೈಲು – ತಲೆಕೆಳಗಾದ 12 ಬೋಗಿಗಳು

    ಹಳಿ ತಪ್ಪಿದ ರೈಲು – ತಲೆಕೆಳಗಾದ 12 ಬೋಗಿಗಳು

    ಲಕ್ನೋ: ಉತ್ತರ ಪ್ರದೇಶದ ಕಾನ್ಪುರ ಸಮೀಪ ಹೌರಾ-ದೆಹಲಿ ಮಧ್ಯೆ ಸಂಚರಿಸುವ ಪೂರ್ವ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 15 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

    ಈ ರೈಲು ಪ್ರಯಗ್‍ನಿಂದ ದೆಹಲಿಗೆ ಹೋಗುತ್ತಿತ್ತು. ಆದರೆ ಕಾನ್ಪುರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ರೂಮಾ ಗ್ರಾಮದ ಬಳಿ ಮಧ್ಯರಾತ್ರಿ 1 ಗಂಟೆಗೆ ರೈಲು ದುರಂತ ಸಂಭವಿಸಿದೆ. ಎಕ್ಸ್ ಪ್ರೆಸ್ ರೈಲಿನ 12 ಬೋಗಿಗಳು ಹಳಿ ತಪ್ಪಿದ್ದು, ಮಗುಚಿ ತಲೆಕೆಳಗಾಗಿ ಬಿದ್ದಿದೆ. ಪರಿಣಾಮ 15 ಮಂದಿಗೆ ಗಾಯಗಳಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ 15 ಅಂಬುಲೆನ್ಸ್ ದೌಡಾಯಿಸಿ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೈಲು ದುರಂತದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ವೈದ್ಯಕೀಯ ಸೇವೆಯನ್ನು ಒದಗಿಸಲಾಗಿದೆ. ಸದ್ಯಕ್ಕೆ ಈ ಅವಘಡದಿಂದ ಯಾವುದೇ ಸಾವು ಸಂಭವಿಸಿಲ್ಲ. ಈ ಮಾರ್ಗದ ಮೂಲಕ ದೆಹಲಿಗೆ ಸಂಚರಿಸುವ ರೈಲುಗಳ ಸೇವೆ ವಿಳಂಬವಾಗಿವೆ. ಪೊಲೀಸರು ರಕ್ಷಣಾ ಕಾರ್ಯ ಮಾಡುತ್ತಿದ್ದು, ರಕ್ಷಣಾ ಪಡೆಯ 45 ಸದಸ್ಯರ ತಂಡ ಕೂಡ ಸ್ಥಳದಲ್ಲಿದ್ದಾರೆ ಎಂದು ಭಾರತೀಯ ರೈಲ್ವೆ ವಕ್ತಾರ ಸ್ಮಿತಾ ಶರ್ಮಾ ತಿಳಿಸಿದ್ದಾರೆ.

    ಕಾನ್ಪುರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ. ಕಾನ್ಪುರದಿಂದ ದೆಹಲಿಯ ಹೋಗುವ ಪ್ರಯಾಣಿಕರಿಗೆ ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಹ ಗಾಯಗೊಂಡಿರುವ ಪ್ರಯಾಣಿಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.