Tag: lucknow

  • ಪತ್ನಿಯನ್ನೇ ಜೂಜಿಗಿಟ್ಟ ಪತಿ – ಗೆದ್ದ ಸ್ನೇಹಿತರಿಂದ ಗ್ಯಾಂಗ್‍ರೇಪ್

    ಪತ್ನಿಯನ್ನೇ ಜೂಜಿಗಿಟ್ಟ ಪತಿ – ಗೆದ್ದ ಸ್ನೇಹಿತರಿಂದ ಗ್ಯಾಂಗ್‍ರೇಪ್

    ಲಕ್ನೋ: ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನೇ ಜೂಜಿಗಿಟ್ಟಿದ್ದು, ಆತನ ಸ್ನೇಹಿತರೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ನಡೆದಿದೆ.

    ಈ ಘಟನೆ ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸಂತ್ರಸ್ತೆ ಪತಿ ಜೂಜಾಟಕ್ಕೆ ದಾಸನಾಗಿದ್ದನು. ಒಂದು ದಿನ ಸ್ನೇಹಿತರ ಜೊತೆ ಆರೋಪಿ ಪತಿ ಜೂಜಾಟವಾಡುತ್ತಿದ್ದನು. ಈ ಸಂದರ್ಭದಲ್ಲಿ ತನ್ನ ಹಣವನ್ನು ಕಳೆದುಕೊಂಡು ಕೊನೆಗೆ ತನ್ನ ಪತ್ನಿಯನ್ನೇ ಜೂಜಾಟಕ್ಕೆ ಇಟ್ಟಿದ್ದಾನೆ. ಜೂಜಾಟದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದಾನೆ. ನಂತರ ಗೆದ್ದ ಸ್ನೇಹಿತರೆಲ್ಲರೂ ಸೇರಿಕೊಂಡು ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

    ಸಂತ್ರಸ್ತೆ ತಕ್ಷಣ ಈ ಕುರಿತು ದೂರ ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಆದರೆ ಪೊಲೀಸರು ದೂರ ದಾಖಲಿಸಲು ನಿರಾಕರಿಸಿದ್ದಾರೆ. ನಂತರ ಸಂತ್ರಸ್ತೆ ಕೋರ್ಟ್ ಮೆಟ್ಟಿಲೇರಿದ್ದಾಳೆ. ದೂರು ದಾಖಲಿಸಿಕೊಳ್ಳದ ಪೊಲೀಸರು ವಿರುದ್ಧ ಕೋರ್ಟ್ ಕಿಡಿಕಾರಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದೆ.

    ಕೋರ್ಟ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪೊಲೀಸರಿಗೆ ಗ್ಯಾಂಗ್‍ರೇಪ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುವಂತೆ ಆದೇಶ ನೀಡಿದೆ. ಅಷ್ಟೇ ಅಲ್ಲದೇ ಎಫ್‍ಐಆರ್ ದಾಖಲಿಸಿ ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದೆ.

  • ಹೆಲ್ಮೆಟ್ ಧರಿಸದ್ದಕ್ಕೆ ದಂಡ – ಠಾಣೆಯ ವಿದ್ಯುತ್ ಕಡಿತಗೊಳಿಸಿ ಸೇಡು ತೀರಿಸಿಕೊಂಡ

    ಹೆಲ್ಮೆಟ್ ಧರಿಸದ್ದಕ್ಕೆ ದಂಡ – ಠಾಣೆಯ ವಿದ್ಯುತ್ ಕಡಿತಗೊಳಿಸಿ ಸೇಡು ತೀರಿಸಿಕೊಂಡ

    ಲಕ್ನೋ: ಹೆಲ್ಮೆಟ್ ಧರಿಸಿಲ್ಲ ಎಂದು ಪೊಲೀಸ್ ಅಧಿಕಾರಿ ದಂಡ ವಿಧಿಸಿದ್ದಕ್ಕೆ ಉತ್ತರಪ್ರದೇಶದ ಫಿರೋಜಾಬಾದ್‍ನ ವಿದ್ಯುತ್ ಇಲಾಖೆಯ ಸಿಬ್ಬಂದಿ ಒಬ್ಬರು ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

    ವಿದ್ಯುತ್ ಇಲಾಖೆಯ ಸಿಬ್ಬಂದಿಯಾದ ಶ್ರೀನಿವಾಸ್ ಮಂಗಳವಾರ ಸಂಜೆ ಹೆಲ್ಮೆಟ್ ಧರಿಸದೇ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ಆತನನ್ನು ತಡೆದು 500 ರೂ. ದಂಡ ಹಾಕಿದ್ದಾರೆ. ದಂಡ ಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಪೊಲೀಸರು 6 ಲಕ್ಷ ರೂ.ವರೆಗೂ ಬಿಲ್ ಕಟ್ಟಲಿಲ್ಲ ಎಂದು ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ್, ಈ ಪೊಲೀಸ್ ಠಾಣೆ 6 ಲಕ್ಷ ರೂ.ವರೆಗೂ ಬಿಲ್ ಪಾವತಿ ಮಾಡಿಲ್ಲ. ಆದರೆ ಪೊಲೀಸರು ಟ್ರಾಫಿಕ್ ನಿಯಮ ಕಲಿಸಿಕೊಡಲು ಪ್ರಯತ್ನಿಸುತ್ತಾರೆ. ಅವರು ಸಹ ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು. ಮಂಗಳವಾರ ನಾನು ಸ್ಥಳೀಯ ಏರಿಯಾದಲ್ಲಿ ಕೆಲಸವಿದ್ದ ಕಾರಣ ಹೆಲ್ಮೆಟ್ ಧರಿಸಿರಲಿಲ್ಲ. ನಾನು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ನನ್ನ ಮಾತು ಕೇಳಲಿಲ್ಲ. ಹಾಗಾಗಿ ನಾನು ಈ ರೀತಿ ಮಾಡುವ ಮೂಲಕ ಪೊಲೀಸರಿಗೆ ಬುದ್ದಿ ಕಲಿಸಿದ್ದೇನೆ ಎಂದು ಹೇಳಿ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.

    ಬಿಲ್ ಬಗ್ಗೆ ಪೊಲೀಸ್ ಠಾಣೆಗೆ ಹಲವು ಬಾರಿ ನೆನಪಿಸಿದ್ದೆವು. ಅಲ್ಲದೆ ವಿದ್ಯುತ್ ಬಾಕಿ ಹಣವನ್ನು ಪಾವತಿಸಿ ಎಂದು ಹಲವು ಬಾರಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲದೆ ಹಲವು ತಿಂಗಳಿನಿಂದ ವಿದ್ಯುತ್ ಇಲಾಖೆಯ ಸಿಬ್ಬಂದಿಗೆ ಸಂಬಳ ಕೂಡ ಸಿಗುತ್ತಿಲ್ಲ ಎಂದು ದಕ್ಷಿಣಾಂಚಲ್ ವಿದ್ಯುತ್ ವಿತ್ರಾನ್ ನಿಗಮ ಲಿಮಿಟೆಡ್(ಡಿವಿವಿಎನ್‍ಎಲ್) ಉಪವಿಭಾಗೀಯ ಅಧಿಕಾರಿ ಹೇಳಿದ್ದಾರೆ.

    ಲೈನ್‍ಪಾರ್ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ಶ್ರೀನಿವಾಸ್ ಅವರನ್ನು ಪ್ರಶ್ನಿಸಿದ್ದರು. ಪೊಲೀಸರ ಪ್ರಶ್ನೆಗೆ ಶ್ರೀನಿವಾಸ್ ಮಾತ್ರವಲ್ಲದೆ ವಿದ್ಯುತ್ ಇಲಾಖೆಯ ಇತರ ಅಧಿಕಾರಿಗಳು ಕೂಡ ಕೋಪಗೊಂಡಿದ್ದಾರೆ. ಅಲ್ಲದೆ ಶ್ರೀನಿವಾಸ್ ಮೇಲಾಧಿಕಾರಿಯನ್ನು ಸಂಪರ್ಕಿಸದೇ ವಿದ್ಯುತ್ ಕಡಿತಗೊಳಿಸಿದ್ದಾರೆ ಎಂದು ಉಪವಿಭಾಗೀಯ ಅಧಿಕಾರಿ ತಿಳಿಸಿದ್ದಾರೆ.

  • ಕಣ್ಣಾಮುಚ್ಚಾಲೆ ಆಟ – ಐಸ್‍ಕ್ರೀಂ ಟ್ರಾಲಿಯಲ್ಲಿ ಅಡಗಿದ್ದ ಬಾಲಕ ಹೆಣವಾಗಿ ಪತ್ತೆ

    ಕಣ್ಣಾಮುಚ್ಚಾಲೆ ಆಟ – ಐಸ್‍ಕ್ರೀಂ ಟ್ರಾಲಿಯಲ್ಲಿ ಅಡಗಿದ್ದ ಬಾಲಕ ಹೆಣವಾಗಿ ಪತ್ತೆ

    ಲಕ್ನೋ: ಸ್ನೇಹಿತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ 5 ವರ್ಷದ ಬಾಲಕನೋರ್ವ ಐಸ್‍ಕ್ರೀಮ್ ಟ್ರಾಲಿಯಲ್ಲಿ ಅಡಗಿ ಕುಳಿತು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಕಾಳಿನಗರ ಪಟ್ಟಣದಲ್ಲಿ ನಡೆದಿದೆ.

    ಅಥರ್ವ್ ಗುಪ್ತ(5) ಸಾವನ್ನಪಿರುವ ಬಾಲಕ. ಸೋಮವಾರದಂದು ಮನೆಯ ಬಳಿ ಸ್ನೇಹಿತರೊಂದಿಗೆ ಬಾಲಕ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಟವಾಡುತ್ತಾ ಐಸ್‍ಕ್ರೀಮ್ ಟ್ರಾಲಿಯಲ್ಲಿ ಬಾಲಕ ಅಡಗಿದ್ದ. ಈ ವೇಳೆ ಟ್ರಾಲಿಯ ಬಾಗಿಲು ಲಾಕ್ ಆಗಿ ಒಳಗಡೆ ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ್ದಾನೆ.

    ಬಹಳ ಸಮಯವಾದರೂ ಮನೆಗೆ ಬಾಲಕ ಮರಳದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆಗ ಅನುಮಾನದಿಂದ ಮನೆಯ ಮುಂದೆ ನಿಲ್ಲಿಸಿದ್ದ ಐಸ್‍ಕ್ರೀಮ್ ಟ್ರಾಲಿ ತೆಗೆದು ನೋಡಿದಾಗ ಬಾಲಕನ ಶವ ಪತ್ತೆಯಾಗಿದೆ.

    ಭಾನುವಾರ ಬಾಲಕನಿಗೆ ಕೊಂಚ ಪೆಟ್ಟಾಗಿತ್ತು ಆದ್ದರಿಂದ ಆವನನ್ನು ಪೋಷಕರು ಸೋಮವಾರ ಶಾಲೆಗೆ ಕಳುಹಿಸಿರಲಿಲ್ಲ. ಹೀಗಾಗಿ ಮನೆ ಹತ್ತಿರವಿದ್ದ ಮಕ್ಕಳ ಜೊತೆ ತಮ್ಮ ಮಗ ಆಟವಾಡಲು ಹೋಗಿದ್ದನು ಎಂದು ಬಾಲಕನ ತಂದೆ ತಿಳಿಸಿದ್ದಾರೆ.

    ಆಟವಾಡಲು ಹೋಗಿದ್ದವನು ಹೆಣವಾಗಿ ವಾಪಸ್ ಸಿಕ್ಕಿದ್ದಾನೆ. ಈ ಬಗ್ಗೆ ಪೋಷಕರು ಯಾವುದೇ ದೂರು ದಾಖಲಿಸಿಲ್ಲ. ಅಲ್ಲದೆ ಬಾಲಕ ವೈದ್ಯಕೀಯ ಪರೀಕ್ಷೆಯನ್ನೂ ಕೂಡ ಮಾಡಿಸಲಿಲ್ಲ.

  • ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ

    ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ

    ಲಕ್ನೋ: ಕುಡಿದ ನಶೆಯಲ್ಲಿದ್ದ ವ್ಯಕ್ತಿಯೋರ್ವ ಹಾವು ಕಚ್ಚಿದ್ದಕ್ಕೆ ಅದನ್ನು ಹಿಡಿದು ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಎತಾಹ್ ಜಿಲ್ಲೆಯ ಗ್ರಾಮವೊಂದರ ನಿವಾಸಿ ರಾಜ್ ಕುಮಾರ್ ಹಾವಿಗೆ ತಿರುಗಿ ಕಚ್ಚಿರುವ ವ್ಯಕ್ತಿಯಾಗಿದ್ದಾನೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಮನೆಗೆ ರಾಜ್ ಕುಡಿದು ಬಂದಿದ್ದನು. ಈ ವೇಳೆ ಮನೆಗೆ ನುಗ್ಗಿದ್ದ ಹಾವೊಂದು ಆತನಿಗೆ ಕಚ್ಚಿದೆ. ಆಗ ಕುಡಿದ ನಶೆಯಲ್ಲಿ ರಾಜ್ ಕೋಪಗೊಂಡು ಹಾವನ್ನು ಹಿಡಿದು ತಿರುಗಿ ಅದಕ್ಕೇ ಕಚ್ಚಿ, ತುಂಡು ತುಂಡಾಗಿಸಿದ್ದಾನೆ.

    ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ರಾಜ್ ತಂದೆ ಬಾಬು ರಾಮ್ ಪ್ರತಿಕ್ರಿಯಿಸಿ, ಈ ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಕುಡಿದಿದ್ದನು. ನಮ್ಮ ಮನೆಗೆ ನುಗ್ಗಿದ್ದ ಹಾವು ಆತನಿಗೆ ಕಚ್ಚಿತ್ತು. ಆಗ ರಾಜ್ ಹಾವನ್ನು ಹಿಡಿದು ಕಚ್ಚಿ ತುಂಡರಿಸಿದನು. ಸದ್ಯ ಆತನ ಪರಿಸ್ಥಿತಿ ಗಂಭೀರವಾಗಿದೆ. ಆತನ ಚಿಕಿತ್ಸೆ ಖರ್ಚನ್ನು ಕಟ್ಟುವಷ್ಟು ಶಕ್ತಿ ನಮಗಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಈ ಬಗ್ಗೆ ರಾಜ್ ಕುಮಾರ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತನಾಡಿ, ರೋಗಿಯೊಬ್ಬ ನಮ್ಮ ಬಳಿ ಬಂದು ನಾನು ಹಾವನ್ನು ಕಚ್ಚಿದ್ದೇನೆ ಎಂದನು. ಆಗ ನಾವು ಹಾವು ಆತನಿಗೆ ಕಚ್ಚಿತ್ತು ಎಂದು ತಪ್ಪಾಗಿ ತಿಳಿದುಕೊಂಡಿದ್ದೆವು. ನಂತರ ನಿಜ ಸಂಗತಿ ತಿಳಿಯಿತು. ಆತನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಆತನನ್ನು ಬೇರೆ ಆಸ್ಪತ್ರೆಗೆ ರವಾನಿಸಿ ಎಂದು ಕುಟುಂಬಸ್ಥರಿಗೆ ಸೂಚಿಸಿದ್ದೆವು ಎಂದರು.

    ಘಟನೆ ನಡೆದ ಬಳಿಕ ರಾಜ್ ಕುಮಾರ್ ಕುಟುಂಬಸ್ಥರು ಸೇರಿ ಸಾವನ್ನಪ್ಪಿದ್ದ ಹಾವಿನ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ವರದಿಯಾಗಿದೆ.

  • ಯಾತ್ರಾರ್ಥಿಯ ಪಾದ ಮಸಾಜ್ ಮಾಡಿದ ಎಸ್‍ಪಿ- ವಿಡಿಯೋ ವೈರಲ್

    ಯಾತ್ರಾರ್ಥಿಯ ಪಾದ ಮಸಾಜ್ ಮಾಡಿದ ಎಸ್‍ಪಿ- ವಿಡಿಯೋ ವೈರಲ್

    ಲಕ್ನೋ: ಪೊಲೀಸ್ ಅಧಿಕಾರಿಯೊಬ್ಬರು ಹರಿದ್ವಾರಕ್ಕೆ ಹೊರಟಿದ್ದ ಯಾತ್ರಾರ್ಥಿಯ ಪಾದವನ್ನು ಮಸಾಜ್ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಉತ್ತರಪ್ರದೇಶದ ಶಾಮ್ಲಿಯ ಎಸ್‍ಪಿ ಅಜಯ್ ಕುಮಾರ್ ಪಾಂಡೆ ಯಾತ್ರಾರ್ಥಿಯ ಪಾದಕ್ಕೆ ಮಸಾಜ್ ಮಾಡಿದ್ದಾರೆ. ಹರಿದ್ವಾರಕ್ಕೆ ಉತ್ತರಪ್ರದೇಶದ ಮೂಲಕ ಹೋಗುವ ಯಾತ್ರಾರ್ಥಿಗಳಿಗೆ ಡಯಾಗ್ನಾಸ್ಟಿಕ್ ಕ್ಯಾಂಪ್ ಏರ್ಪಡಿಸುವುದಾಗಿ ಉತ್ತರಪ್ರದೇಶದ ಸೂಪರಿಂಟೆಂಡ್ ಆಫ್ ಪೊಲೀಸ್ ಘೋಷಿಸಿಲಾಗಿತ್ತು. ಅದರಂತೆ ಕ್ಯಾಂಪ್ ಆರಂಭವಾಗಿದೆ. ಈ ವೇಳೆ ಯಾತ್ರಾರ್ಥಿಯೊಬ್ಬನ ಕಾಲಿಗೆ ಯೂನಿಫಾರಂ ಧರಿಸಿಕೊಂಡೇ ಎಸ್‍ಪಿ ಅಜಯ್ ಕುಮಾರ್ ಪಾಂಡೆ ಅವರು ಮಸಾಜ್ ಮಾಡುತ್ತಿರುವ ವಿಡಿಯೋ ಸೆರೆ ಹಿಡಿಯಲಾಗಿತ್ತು. ಈ ವಿಡಿಯೋ ಸದ್ಯ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

    ಶಾಮ್ಲಿ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಯಿಂದಲೇ ಈ ವಿಡಿಯೋ ಪೋಸ್ಟ್ ಆಗಿದೆ. ಸುರಕ್ಷತೆಯ ಜೊತೆಗೆ ಸೇವೆಯನ್ನೂ ಮಾಡುತ್ತೇವೆ ಎಂದು ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ವಿಡಿಯೋ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿದೆ.

    ಯೂನಿಫಾರಂ ಧರಿಸಿಕೊಂಡು ಬೇರೆಯವರ ಕಾಲು ಒತ್ತುತ್ತಿರುವುದು ಸರಿಯಲ್ಲ ಎಂದು ಹಲವರು ಎಸ್‍ಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಪ್ರಚಾರಕ್ಕಾಗಿ ಹೀಗೆಲ್ಲ ಮಾಡಲಾಗುತ್ತಿದೆ, ಇದು ನಿಜವಾದ ಕಾಳಜಿಯಲ್ಲ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

    ವಿಡಿಯೋ ವೈರಲ್ ಆಗುತ್ತಿದಂತೆ ಸ್ವತಃ ಎಸ್‍ಪಿ ಅಜಯ್ ಕುಮಾರ್ ಪಾಂಡೆ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ಅಹಂಕಾರವಿಲ್ಲದೆ, ನಿಸ್ವಾರ್ಥದಿಂದ ಆ ಯುವ ಯಾತ್ರಾರ್ಥಿಯ ಪಾದವನ್ನು ಒತ್ತಿದ್ದೆ. ಆತ ಬಹಳ ಸುಸ್ತಾಗಿದ್ದ. ಆದ್ದರಿಂದ ಯುವಕನ ಕಾಲಿಗೆ ಮಸಾಜ್ ಮಾಡಿದೆ ಎಂದರು.

    ನಾವು ಸಾರ್ವಜನಿಕ ವಲಯದಲ್ಲಿ ಜನರೊಂದಿಗೆ ಬೆರೆತು ಕೆಲಸ ಮಾಡಬೇಕಾಗುತ್ತದೆ. 200-300 ಕಿ.ಮೀ. ದೂರ ಹಸಿವು ಮತ್ತು ಬಾಯಾರಿಕೆಯಿಂದ ಯಾತ್ರಾರ್ಥಿಗಳು ನಡೆಯಬೇಕೆಂದರೆ ಅದು ಸುಲಭದ ಕಾರ್ಯವಲ್ಲ. ಆದ್ದರಿಂದ ನಾವು ಅವರಿಗೆ ಅನುಕೂಲವಾಗಲೆಂದು ಮೆಡಿಕಲ್ ಕ್ಯಾಂಪ್ ಮಾಡಿದ್ದೆವು ಎಂದು ತಿಳಿಸಿದರು.

    ಅಜಯ್ ಕುಮಾರ್ ಅವರ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ವಾರ್ಷಿಕ ಹರಿದ್ವಾರ ಯಾತ್ರೆಗೆ ಬರುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲೆಂದು ಜುಲೈ 30ರವರೆಗೆ ದೆಹಲಿ- ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಅಲ್ಲದೆ ಪಶ್ಚಿಮ ಉತ್ತರ ಪ್ರದೇಶದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

    ಶಿವನ ಭಕ್ತಾಧಿಗಳು ವಾರ್ಷಿಕ ಯಾತ್ರೆಯನ್ನು ಕೈಗೊಳ್ಳುವುದನ್ನ ಕನ್ವಾರ್ ಯಾತ್ರೆ ಎನ್ನುತ್ತಾರೆ. ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳಿಗೆ ಕನ್ವಾರಿಯಸ್ ಎನ್ನುತ್ತಾರೆ. ಈ ಯಾತ್ರಾರ್ಥಿಗಳು ಹರಿದ್ವಾರ, ಉತ್ತರಖಂಡ್ ಗೋಮುಖ ಮತ್ತು ಗಂಗೋತ್ರಿ, ಬಿಹಾರದ ಸುಲ್ತಾನ್‍ಗಂಜ್‍ಗೆ ಭೇಟಿ ನೀಡಿ ಪವಿತ್ರ ಗಂಗಾ ನದಿಯ ಜಲವನ್ನು ತರುತ್ತಾರೆ.

  • ಸಿಂಗಾಪುರನಿಂದ ನೋಯ್ಡಾದವರೆಗೆ ಮಹಿಳೆಯನ್ನು ಫಾಲೋ ಮಾಡಿದ ಯುವಕ

    ಸಿಂಗಾಪುರನಿಂದ ನೋಯ್ಡಾದವರೆಗೆ ಮಹಿಳೆಯನ್ನು ಫಾಲೋ ಮಾಡಿದ ಯುವಕ

    – ಪ್ರಶ್ನಿಸಿದ್ದಕ್ಕೆ ಆಕೆಯ ಪತಿಯ ಆತ್ಮ ನನ್ನೊಳಗೆ ಇದೆ ಎಂದ

    ಲಕ್ನೋ: ಯುವಕನೊಬ್ಬ ಸಿಂಗಾಪುರದಿಂದ ನೋಯ್ಡಾವರೆಗೂ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಯುವಕ ಆಕೆಯ ಪತಿಯ ಆತ್ಮ ನನ್ನೊಳಗೆ ಇದೆ ಎಂದು ವಿಚಿತ್ರ ಹೇಳಿಕೆ ನೀಡಿದ್ದಾನೆ.

    ಯುವಕ ಹಿಂಬಾಲಿಸುತ್ತಿದ್ದರಿಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಪೊಲೀಸರು ಯುವಕನನ್ನು ಕರೆಸಿ ಪ್ರಶ್ನಿಸಿದ್ದಾಗ ಆಕೆಯ ಪತಿಯ ಆತ್ಮ ನನ್ನೊಳಗೆ ಇದೆ ಎಂದು ಹೇಳಿದ್ದಾನೆ. ಮಹಿಳೆ ತನ್ನ ಪತಿಯ ಜೊತೆ ಸಿಂಗಾಪುರದಲ್ಲಿ ಇರುತ್ತಿದ್ದರು. ಕಳೆದ 11 ವರ್ಷಗಳ ಹಿಂದೆ ಆಕೆಯ ಪತಿ ಹೆಲಿಕಾಪ್ಟರ್ ಕ್ರ್ಯಾಶ್ ಆಗುವ ಮೂಲಕ ಮೃತಪಟ್ಟಿದ್ದರು.

    ನಡೆದಿದ್ದೇನು?
    2009ರಲ್ಲಿ ಸಿಂಗಾಪುರದಲ್ಲಿ ಆರ್ಕುಟ್(ಫೇಸ್‍ಬುಕ್ ರೀತಿಯಲ್ಲೇ ಗೂಗಲ್ ಕಂಪನಿಯ ಸಾಮಾಜಿಕ ಜಾಲತಾಣ. 2014ರಲ್ಲಿ ಗೂಗಲ್ ಈ ಸೇವೆಯನ್ನು ಸ್ಥಗಿತಗೊಳಿಸಿದೆ) ಚಾಟ್ ಮೂಲಕ ಯುವಕ ಹಾಗೂ ಮಹಿಳೆಯ ಸ್ನೇಹವಾಗಿತ್ತು. ಬಳಿಕ ಇಬ್ಬರು ಒಬ್ಬರನೊಬ್ಬರು ಭೇಟಿ ಮಾಡಲು ಶುರು ಮಾಡಿದ್ದರು. ಕೆಲವು ವರ್ಷಗಳ ಹಿಂದೆ ಇಬ್ಬರು ಮಾತನಾಡುವುದನ್ನು ನಿಲ್ಲಿಸಿದ್ದರು. ಬಳಿಕ ಮಹಿಳೆ ಸಿಂಗಾಪುರ ಬಿಟ್ಟು ನೋಯ್ಡಾಗೆ ಬಂದಿದ್ದರು. ಇದಾದ ಬಳಿಕ ಯುವಕ ಮಹಿಳೆಗೆ ಸಂಪರ್ಕಿಸಲು ಪ್ರಯತ್ನಿಸಿದ್ದಾನೆ.

    ಯುವಕ ಮೂಲತಃ ಮೀರತ್ ನವನಾಗಿದ್ದು, ಸಿಂಗಾಪುರದಲ್ಲಿ ವಾಸಿಸುತ್ತಿದ್ದನು. ಯುವಕ ಹಾಗೂ ಮಹಿಳೆ ತುಂಬಾನೇ ಆತ್ಮೀಯರಾಗಿದ್ದರು. ಎರಡು ವರ್ಷಗಳ ನಂತರ ಮಹಿಳೆ ಸಿಂಗಾಪುರ ಬಿಟ್ಟು ನೋಯ್ಡಾಗೆ ಶಿಫ್ಟ್ ಆಗಿದ್ದರು. ಇದಾದ ಬಳಿಕ ಯುವಕ ಮಹಿಳೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಆತ ನೋಯ್ಡಾಗೆ ಬಂದಿದ್ದಾನೆ. ನೋಯ್ಡಾಗೆ ಬಂದು ಯುವಕ ಆಕೆಯ ಪತಿಯ ಆತ್ಮ ನನ್ನೊಳಗೆ ಇದೆ. ಹಾಗಾಗಿ ನಾವಿಬ್ಬರು ಸಿಂಗಾಪುರದಲ್ಲಿ ಭೇಟಿ ಮಾಡುತ್ತಿದ್ದೇವು ಎಂದು ಹೇಳಿದ್ದಾನೆ.

  • ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತೀ ಎತ್ತರದ ರಾಮನ ಪ್ರತಿಮೆ

    ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತೀ ಎತ್ತರದ ರಾಮನ ಪ್ರತಿಮೆ

    ಲಕ್ನೋ: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಜಗತ್ತಿನ ಅತೀ ಎತ್ತರದ 251 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಿಸಲು ಸರ್ಕಾರ ಮುಂದಾಗಿದೆ.

    ಪ್ರತಿಮೆಯನ್ನು 100 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಅಲ್ಲಿನ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಂಬಂಧ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಸಂಪೂರ್ಣ ಅಭಿವೃದ್ಧಿಗೆ ಅಗತ್ಯವಾದ ಯೋಜನೆಯನ್ನು ಸರ್ಕಾರ ರೂಪಿಸಲಿದೆ ಎಂದಿದ್ದಾರೆ.

    ಲಕ್ನೋದಲ್ಲಿ ಸೋಮವಾರ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಗುಜರಾತ್‍ನಲ್ಲಿನ ಸರ್ದಾರ್ ವಲ್ಲಭಾಬಾಯಿ ಪಟೇಲ್ ಪುತ್ಥಳಿಯು(ಏಕತಾ ಪ್ರತಿಮೆ) 183 ಮೀ ಎತ್ತರವಾಗಿದ್ದು, ಇದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿದೆ. ಹೀಗಾಗಿ ಏಕತಾ ಪ್ರತಿಮೆಯನ್ನು ನಿರ್ಮಿಸಿದ ಹಾಗೆಯೇ ಉತ್ತರ ಪ್ರದೇಶದಲ್ಲಿ ಶ್ರೀರಾಮನ ಅತೀ ಎತ್ತರದ ಪ್ರತಿಮೆ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ.

    ಪ್ರತಿಮೆ ನಿರ್ಮಾಣಕ್ಕೆ ತಾಂತ್ರಿಕ ಸಹಾಯವನ್ನು ಗುಜರಾತ್ ಸರ್ಕಾರದಿಂದ ಪಡೆಯಲಾಗುತ್ತದೆ. ಪ್ರತಿಮೆ ವೀಕ್ಷಿಸಿಲು ಬರುವ ಪ್ರವಾಸಿಗರಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಪಾರ್ಕಿಂಗ್, ವಾಚನಾಲಯ, ಆಹಾರ ವ್ಯವಸ್ಥೆ, ಮ್ಯೂಸಿಯಂ ಸೇರಿದಂತೆ ಇನ್ನಿತರ ಎಲ್ಲ ಅಗತ್ಯ ಸೌಕರ್ಯವನ್ನು ಪೂರೈಸಲು ಸರ್ಕಾರ ಯೋಜನೆ ರೂಪಿಸುತ್ತದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಕಾನ್ಪುರ ಐಐಟಿ ಹಾಗೂ ನಾಗ್ಪುರದ ರಾಷ್ಟ್ರೀಯ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ನಿಂದ ಈ ಬಗ್ಗ ಕಾರ್ಯಸಾಧ್ಯತಾ ವರದಿ ಹಾಗೂ ಜಮೀನು ಸರ್ವೇ ಇತ್ಯಾದಿಗಳನ್ನು ನಡೆಸಲಿದೆ. ಹಾಗೆಯೇ ಈ ಯೋಜನೆಗಾಗಿಯೇ ಸ್ಟೇಟ್ ಮ್ಯಾನ್ಯುಫ್ಯಾಕ್ಟರಿಂಗ್ ಕಾರ್ಪೊರೇಷನ್ ಎಂಬ ಪ್ರತ್ಯೇಕ ವಿಭಾಗ ಸ್ಥಾಪಿಸಲಾಗುತ್ತದೆ. ಪ್ರತಿಮೆ ನಿರ್ಮಾಣ ಕಾರ್ಯ ಹಾಗೂ ಈ ಸಂಬಂಧ ಎಲ್ಲಾ ವಿಚಾರವನ್ನು ಈ ವಿಭಾಗವೇ ನೋಡಿಕೊಳ್ಳಲಿದೆ.

    ನ್ಯೂಯಾರ್ಕ್ ಲಿಬರ್ಟಿ ಪ್ರತಿಮೆ 93 ಮೀ ಎತ್ತರವಿದೆ, ಮುಂಬೈನ ಶಿವಾಜಿ ಮಹಾರಾಜ್ ಪ್ರತಿಮೆ 212 ಮೀ, ಗುಜರಾತ್‍ನ ಸರ್ದಾರ್ ವಲ್ಲಭಾಬಾಯಿ ಪಟೇಲ್ ಪ್ರತಿಮೆ 183 ಮೀ, ಮುಂಬೈನ ಡಾ. ಅಂಬೇಡ್ಕರ್ ಪ್ರತಿಮೆ 137.2 ಮೀ, ಚೀನಾದ ಗೌತಮ ಬುದ್ಧ ಪ್ರತಿಮೆ 208 ಮೀ ಎತ್ತರವಿದೆ. ಆದರೆ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣವಾದರೆ ಅದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

  • ಕೊಠಡಿಯಲ್ಲಿ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದ ಹೋಟೆಲ್ ಮಾಲೀಕ

    ಕೊಠಡಿಯಲ್ಲಿ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದ ಹೋಟೆಲ್ ಮಾಲೀಕ

    ಲಕ್ನೋ: ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್‍ಯೂ) ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದಿದ್ದಕ್ಕೆ ಹೋಟೆಲ್ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ಶ್ವೇತಾ ಸಿಂಗ್ (22) ಕೊಲೆಯಾದ ವಿದ್ಯಾರ್ಥಿನಿ. ಶ್ವೇತಾ ಸಿಂಗ್ ಬಿಎಚ್‍ಯೂ ವಿದ್ಯಾರ್ಥಿನಿಯಾಗಿದ್ದು, ವಾರಣಾಸಿಯ ಅಶೋಕ ಹೋಟೆಲ್ ಮಾಲೀಕ, ಆರೋಪಿ ಅಮಿತ್ ಆಕೆಯ ಸ್ನೇಹಿತ ಎಂದು ಪೊಲೀಸರು ಹೇಳಿದ್ದಾರೆ.

    ಶ್ವೇತಾ ಸಿಂಗ್ ಆರೋಪಿ ಅಮಿತ್‍ನನ್ನು ಭೇಟಿ ಮಾಡಲು ಆಗಾಗ ಹೋಟೆಲ್‍ಗೆ ಹೋಗುತ್ತಿದ್ದಳು. ಇಂದು ಬೆಳಗ್ಗೆ ಶ್ವೇತಾ ತನ್ನ ಗೆಳೆಯ ಅಮಿತ್‍ನನ್ನು ಭೇಟಿ ಮಾಡಲು ಹೋಟೆಲ್‍ಗೆ ಬಂದಿದ್ದಳು. ಈ ವೇಳೆ ಹೋಟೆಲಿನ ರೂಮಿನಲ್ಲಿ ಗುಂಡಿನ ಸದ್ದು ಕೇಳಿತ್ತು. ಆಗ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಶ್ವೇತಾ ಮೃತದೇಹ ಬೆಡ್ ಮೇಲೆ ಬಿದ್ದಿತ್ತು.

    ಮೃತ ಶ್ವೇತಾಳ ತಂದೆ ಉತ್ತರಪ್ರದೇಶದಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ದಶಾಶ್ವಮೇಧ ಘಾಟ್‍ನಲ್ಲಿ ಸ್ನಾನಕ್ಕೆ ಎಂದು ತೆರಳಿದ್ದಾಗ ಅಲ್ಲಿ ಮುಳುಗಿ ಮೃತಪಟ್ಟಿದ್ದರು. ಅಲ್ಲದೆ ಶ್ವೇತಾ ತಾಯಿ ಕೂಡ ಮೃತಪಟ್ಟಿದ್ದಾರೆ. ಶ್ವೇತಾ ತನ್ನ ತಾತ ರಾಮ್ ಇಕ್ಬಾಲ್ ಸಿಂಗ್ ಜೊತೆ ವಾಸಿಸುತ್ತಿದ್ದಳು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ಮಾಲೀಕ ಅಮಿತ್‍ನನ್ನು ಬಂಧಿಸಿದ್ದಾರೆ. ಬಳಿಕ ಶ್ವೇತಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡ ಕ್ಯಾಮೆರಾವನ್ನು ಪರಿಶೀಲಿಸಿದೆ.

  • 73ನೇ ಹುಟ್ಟುಹಬ್ಬದಂದು 17 ಕೈದಿಗಳ ಜಾಮೀನು ಹಣ ಪಾವತಿಸಿದ ಉದ್ಯಮಿ

    73ನೇ ಹುಟ್ಟುಹಬ್ಬದಂದು 17 ಕೈದಿಗಳ ಜಾಮೀನು ಹಣ ಪಾವತಿಸಿದ ಉದ್ಯಮಿ

    ಲಕ್ನೋ: ಉದ್ಯಮಿಯೊಬ್ಬರು ತಮ್ಮ 73ನೇ ಹುಟ್ಟುಹಬ್ಬಕ್ಕೆ 17 ಕೈದಿಗಳ ಜಾಮೀನು ಹಣ ಪಾವತಿಸಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಮೋತಿಲಾಲ್ ಯಾದವ್ ಜಾಮೀನಿಗೆ ಹಣ ಪಾವತಿಸಿದ ಉದ್ಯಮಿ. ಮೋತಿಲಾಲ್ ಅವರು ಜಿಲ್ಲಾ ಜೈಲು ಅಧಿಕಾರಿಗಳಿಗೆ 32 ಸಾವಿರ ರೂ. ಪಾವತಿಸಿ ಸಣ್ಣ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಹಾಗೂ ಜಾಮೀನು ಪಡೆಯಲು ಸಾಧ್ಯವಾಗದವರಿಗೆ ಬಿಡುಗಡೆ ಮಾಡಲು ಕೇಳಿಕೊಂಡಿದ್ದಾರೆ.

    ಜಿಲ್ಲಾ ಜೈಲಿನ ಅಧೀಕ್ಷಕ ಶಶಿಕಾಂತ್ ಮಿಶ್ರಾ ಅವರು ಯಾದವ್ ಅವರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಕೈದಿಗಳ ಕುಟುಂಬ ಹಾಗೂ ಸ್ನೇಹಿತರು 8.5 ಲಕ್ಷ ರೂ. ಜಮೆ ಮಾಡಿದ ನಂತರ ಕಳೆದ ಎರಡು ವರ್ಷದಲ್ಲಿ ಸುಮಾರು 232 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

    ಸ್ಥಳೀಯ ಉದ್ಯಮಿ ಮೋತಿಲಾಲ್ ಅವರು ಇಂದು ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಜಾಮೀನು ಪಡೆಯಲು ಸಾಧ್ಯವಾಗದ ಕೈದಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಶಶಿಕಾಂತ್ ಮಿಶ್ರಾ ತಿಳಿಸಿದರು.

    ಅಗಸ್ಟ್ 17, 2016ರಂದು ಬಂಧಿಸಿದ ಅಪರಾಧಿ ಜೈಲಿನಲ್ಲಿ ಇದ್ದರು. ಅಪರಾಧಿಯ ಜೈಲು ಶಿಕ್ಷೆಯ ಅವಧಿ ಕಳೆದ ವರ್ಷವೇ ಪೂರ್ಣಗೊಂಡಿದ್ದರೂ ದಂಡದ ಮೊತ್ತವಾದ 1,089 ರೂ. ಪಾವತಿಸಲು ಹಣ ಇರಲಿಲ್ಲ. ಹೀಗಾಗಿ ಅಪರಾಧಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿಯೇ ಇರಬೇಕಾಯಿತು ಎಂದು ಶಶಿಕಾಂತ್ ಮಿಶ್ರಾ ಹೇಳಿದರು.

    ನನ್ನ ಮಗ ವಕೀಲನಾಗಿದ್ದು, ಜನರ ಸಹಾಯದಿಂದ ಕೈದಿಗಳನ್ನು ಬಿಡುಗಡೆ ಮಾಡಬಹುದು ಎಂಬ ವಿಷಯ ತಿಳಿಯಿತು. ಹೀಗಾಗಿ ನಾನು ನನ್ನ ಕೊಡುಗೆಯನ್ನು ನೀಡಿದ್ದೇನೆ. ಮುಂದೆ ಅವರು ಈ ಅಪರಾಧಗಳನ್ನು ಮುಂದುವರಿಸಲ್ಲ ಎನ್ನುವ ಭಾವನೆ ಹೊಂದಿದ್ದೇನೆ ಎಂದು ಮೋತಿಲಾಲ್ ಯಾದವ್ ತಿಳಿಸಿದರು.

  • ಅಪರಿಚಿತ ವಾಹನ ಡಿಕ್ಕಿ – ಮದ್ವೆಯಿಂದ ವಾಪಸ್ ಬರ್ತಿದ್ದ 9 ಮಂದಿ ಸಾವು

    ಅಪರಿಚಿತ ವಾಹನ ಡಿಕ್ಕಿ – ಮದ್ವೆಯಿಂದ ವಾಪಸ್ ಬರ್ತಿದ್ದ 9 ಮಂದಿ ಸಾವು

    ಲಕ್ನೋ: ಪಿಕಪ್ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಹಫೀಜ್‍ಪುರ್ ನಲ್ಲಿ ನಡೆದಿದೆ.

    ಪಿಕಪ್ ವಾಹನದಲ್ಲಿದ್ದ ಪ್ರಯಾಣಿಕರು ಮದುವೆಗೆ ಹೋಗಿದ್ದು, ವಿವಾಹ ಕಾರ್ಯಕ್ರಮವನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದರು. ಈ ವೇಳೆ ಉತ್ತರ ಪ್ರದೇಶದ ಹಫೀಜ್‍ಪುರ್ ಬಳಿ ವೇಗವಾಗಿ ಬಂದಂತಹ ವಾಹವೊಂದು ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದಲ್ಲಿದ್ದ 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಗಾಯಗೊಂಡವರನ್ನು ರಕ್ಷಣೆ ಮಾಡಿದ್ದಾರೆ. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರನ್ನು ಮೀರತ್‍ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಎಎಸ್‍ಪಿ ಸರ್ವೇಶ್ ಕುಮಾರ್ ಹೇಳಿದ್ದಾರೆ.

    ಸದ್ಯಕ್ಕೆ ಈ ಕುರಿತು ಪೊಲೀಸರು ತನಿಖೆ ಶುರುಮಾಡಿದ್ದು, ಅಪರಿಚಿತ ವಾಹನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.