Tag: lucknow

  • ನೇಣು ಬಿಗಿದ ಸ್ಥಿತಿಯಲ್ಲಿ ಜೋಡಿಯ ಶವ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಜೋಡಿಯ ಶವ ಪತ್ತೆ

    ಲಕ್ನೋ: ಪ್ರೇಮಿಗಳಿಬ್ಬರ ಮೃತದೇಹ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಶಿವಮ್ ಯಾದವ್ ಮತ್ತು ಸೋನಿ ಎಂದು ಗುರುತಿಸಲಾಗಿದೆ. ಯಾದವ್ ಸಫ್ದರ್ಜಂಗ್ ನಿವಾಸಿಯಾಗಿದ್ದು, ಸೋನಿಯ ಗಾಜಿಪುರದ ಠಾಕೂರ್ಪುರ್ ಗ್ರಾಮದ ನಿವಾಸಿಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಇಬ್ಬರ ಮೃತದೇಹಗಳು ಅಯೋಧ್ಯೆ ಹೆದ್ದಾರಿಯ ಸಾರೈ ಕಾಯಸ್ಥಾನ್ ಗ್ರಾಮದ ಬಳಿ ಪತ್ತೆಯಾಗಿದೆ. ಮೃತದೇಹ ನೋಡಿದ ತಕ್ಷಣವೇ ಪೊಲೀಸರಿಗೆ ಸ್ಥಳೀಯರು ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಶುರುಮಾಡಿದ್ದಾರೆ. ಯಾದವ್ ಮತ್ತು ಸೋನಿ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದು, ಇವರ ಪ್ರೀತಿಗೆ ಕುಟುಂಬದವರು ಒಪ್ಪದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಹೀಗಾಗಿ ವರದಿ ಬರುವವರೆಗೂ ಕಾಯಬೇಕಿದೆ.

    ಮುಂಜಾನೆ ಸ್ಥಳೀಯರು ಮೃತದೇಹಗಳನ್ನು ಪತ್ತೆ ಮಾಡಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಒಂದು ಹೊಸ ಬೈಕ್ ಪತ್ತೆಯಾಗಿದೆ. ಆದರೆ ನಂಬರ್ ಪ್ಲೇಟ್ ಇಲ್ಲ, ಹೀಗಾಗಿ ಅದನ್ನು ಇತ್ತೀಚೆಗೆ ಖರೀದಿಸಿರಬಹುದು. ಆದರೆ ಇನ್ನೂ ಯಾವ ಮಾಹಿತಿವೂ ಖಚಿತವಾಗಿ ತಿಳಿದು ಬಂದಿಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತಿಯಿಂದ ತಲಾಖ್

    ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತಿಯಿಂದ ತಲಾಖ್

    ಲಕ್ನೋ: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಶುಕ್ರವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.

    ಜಾಫ್ರಿನ್ ಅಂಜುಮ್ ಅಯೋಧ್ಯೆಯ ಹೈದರ್ ಗಂಜ್ ತೆಹಸಿಲ್‍ನಲ್ಲಿ ಜನ ಬಜಾರ್ ನಿವಾಸಿ. ಜಾಫ್ರಿನ್ ಆಗಸ್ಟ್ 18ರಂದು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗು ಜನಿಸಿದ ಕಾರಣ ಜಾಫ್ರಿನ್ ಪತಿ ಆಸ್ತಿಕರ್ ಅಹ್ಮದ್ ತಕ್ಷಣ ತ್ರಿವಳಿ ತಲಾಖ್ ನೀಡಿದ್ದಾನೆ.

    ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ನನ್ನ ತಂದೆಗೆ ಸಾಧ್ಯವಾಗದ ಕಾರಣ ನನ್ನ ಪತಿ ಕಿರುಕುಳ ನೀಡುತ್ತಿದ್ದಾರೆ. ಮದುವೆ ಆದ ಮೊದಲ ತಿಂಗಳಿನಲ್ಲಿ ನನ್ನ ಪತಿ ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

                                                                                  ಸಾಂದರ್ಭಿಕ ಚಿತ್ರ

    ಅಲ್ಲದೆ ಆಗಸ್ಟ್ 18ರಂದು ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ತಕ್ಷಣ ಅವರು ನನಗೆ ತ್ರಿವಳಿ ತಲಾಖ್ ನೀಡಿದ್ದಾರೆ. ನನಗೆ ನ್ಯಾಯ ಬೇಕು ಎಂದು ಜಾಫ್ರಿನ್ ಮಾಧ್ಯಮವೊಂದಕ್ಕೆ ಹೇಳಿದ್ದಾಳೆ.

    ನವೆಂಬರ್ 2018ರಲ್ಲಿ ಜಾಫ್ರಿನ್ ಅಂಜುಮ್ ನಕತ್ವಾರಾ ಗ್ರಾಮದ ಆಸ್ತಿಕರ್ ಅಹ್ಮದ್‍ನನ್ನು ಮದುವೆಯಾಗಿದ್ದರು. ಸದ್ಯ ಜಾಫ್ರಿನ್ ತಲಾಖ್ ನೀಡಿದ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಅಯೋಧ್ಯೆ ಎಸ್‍ಪಿ ಶೈಲೇಂದ್ರ ಕುಮಾರ್ ಸಿಂಗ್ ಅವರು, ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಆರೋಪಿ ಆಸ್ತಿಕರ ಅಹ್ಮದ್ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಚುಯಿಂಗ್ ಗಮ್ ನಿರಾಕರಿಸಿದ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ ಪತಿ

    ಚುಯಿಂಗ್ ಗಮ್ ನಿರಾಕರಿಸಿದ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ ಪತಿ

    ಲಕ್ನೋ: ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ಜಾರಿಗೊಳಿಸಿದೆ. ಆದರೆ ತ್ರಿವಳಿ ತಲಾಖ್ ನೀಡುವುದು ಮಾತ್ರ ತಪ್ಪುತ್ತಿಲ್ಲ. ಚುಯಿಂಗ್ ಗಮ್ ತಿನ್ನಲು ಪತ್ನಿ ನಿರಾಕರಿಸಿದಕ್ಕೆ ನ್ಯಾಯಾಲಯದ ಆವರಣದಲ್ಲೇ, ವಕೀಲರ ಸಮ್ಮುಖದಲ್ಲಿ ಪತಿ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಅಮ್ರಾಯ್ ಗ್ರಾಮದ ಸೈಯದ್ ರಶೀದ್ ತನ್ನ ಪತ್ನಿ ಸಿಮ್ಮಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ವರದಕ್ಷಿಣೆ ಕಿರುಕುಳ ನೀಡಿರುವುದಾಗಿ ಪತ್ನಿ ಸಿಮ್ಮಿ ಪತಿ ವಿರುದ್ಧ ದೂರು ನೀಡಿದ್ದಳು. ಈ ಹಿನ್ನೆಲೆ ಲಕ್ನೋದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಪತಿ ಹಾಗೂ ಪತ್ನಿ ಬಂದಿದ್ದರು. ಈ ವೇಳೆ ಪತ್ನಿ ವಕೀಲರ ಜೊತೆ ಮಾತನಾಡುತ್ತಿದ್ದಾಗ ಸ್ಥಳಕ್ಕೆ ಬಂದ ಪತಿ ಆಕೆಗೆ ಚುಯಿಂಗ್ ಗಮ್ ನೀಡಿದ್ದಾನೆ. ಆದರೆ ಅದನ್ನು ಪತ್ನಿ ನಿರಾಕರಿಸಿದ್ದಳು. ಇಷ್ಟಕ್ಕೆ ಕೋಪಗೊಂಡ ಪತಿ ವಕೀಲರ ಮುಂದೆಯೇ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟು ನ್ಯಾಯಾಲಯದಿಂದ ಹೊರಹೋಗಿದ್ದಾನೆ.

    ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ವಿವಿಧ ವಿಭಾಗಗಳ ಅಡಿಯಲ್ಲಿ ಈಗಾಗಲೇ ರಶೀದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

    ಈ ಹಿಂದೆ ಕೂಡ ಕ್ಷುಲ್ಲಕ ಕಾರಣಕ್ಕೆ ತ್ರಿವಳಿ ತಲಾಖ್ ಕೊಟ್ಟ ಪ್ರಕರಣಗಳು ನಡೆದಿದ್ದವು. ಕೆಲವು ಪ್ರಕರಣಗಳಲ್ಲಿ ಪತಿ ಕರೆ ಅಥವಾ ಮೆಸೇಜ್ ಮಾಡಿ ಪತ್ನಿಗೆ ತಲಾಖ್ ಕೊಟ್ಟಿದ್ದಾರೆ. ಸರ್ಕಾರ ಈ ತ್ರಿವಳಿ ತಲಾಖ್ ಪದ್ಧತಿ ಮೇಲೆ ನಿರ್ಬಂಧ ಹೇರಿದ್ದರು, ಈಗಲೂ ಈ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಈ ಬಗ್ಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿದೆ.

  • ಲಾಡ್ಜಿನಲ್ಲಿ ಪ್ರೇಯಸಿ ಜೊತೆ ಚೆಲ್ಲಾಟವಾಡ್ತಿದ್ದ ಪತಿಗೆ ಗೂಸಾ ಕೊಟ್ಟ ಪತ್ನಿ

    ಲಾಡ್ಜಿನಲ್ಲಿ ಪ್ರೇಯಸಿ ಜೊತೆ ಚೆಲ್ಲಾಟವಾಡ್ತಿದ್ದ ಪತಿಗೆ ಗೂಸಾ ಕೊಟ್ಟ ಪತ್ನಿ

    ಲಕ್ನೋ: ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಪ್ರೇಯಸಿ ಜೊತೆ ಮಜಾ ಮಾಡುತ್ತಿದ್ದ ಪತಿಯನ್ನು ರೆಡ್ ಹ್ಯಾಡ್ ಹಿಡಿದ ಪತ್ನಿ ಸಖತ್ ಗೂಸಾ ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಬಿಲಾಸ್ಪುರದಲ್ಲಿ ನಡೆದಿದೆ.

    ಮದುವೆಯಾಗಿದ್ದರು ಪ್ರೇಯಸಿ ಜೊತೆ ಲಾಡ್ಜ್ ಮಾಡಿಕೊಂದು ಮಜಾ ಪಡೆಯುತ್ತಿದ್ದ ಪತಿಯ ರಂಗಿನಾಟಕ್ಕೆ ಪತ್ನಿ ಬ್ರೇಕ್ ಹಾಕಿದ್ದಾಳೆ. ಜಶ್ಪುರದ ಪೊಲೀಸ್ ಸಿಬ್ಬಂದಿ ಮಗನಾದ ಪ್ರೀತಮ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದನು. ಆದರೆ ಮದುವೆಗೆ ಮುಂಚೆ ಪ್ರೀತಮ್ ಜಶ್ಪುರದ ಯುವತಿಯನ್ನೇ ಪ್ರೀತಿಸುತ್ತಿದ್ದನು. ಈ ವಿಷಯ ಪತ್ನಿಗೆ ತಿಳಿದಿತ್ತು. ಆದ್ದರಿಂದ ಪತಿ ಮೇಲೆ ಪತ್ನಿ ಕಣ್ಣಿಟ್ಟಿದ್ದಳು.

    ಇದೇ ಬೆನ್ನೆಲ್ಲೆ ಪತಿ ಪತ್ನಿಗೆ ಸುಳ್ಳು ಹೇಳಿ ಬಿಲಾಸ್ಪುರಕ್ಕೆ ಪ್ರೇಯಸಿ ಜೊತೆ ಹೋಗಿದ್ದನು. ಅಲ್ಲಿ ಆರಾಮಾಗಿ ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಮಜಾ ಮಾಡುವ ಪ್ಲಾನ್ ಮಾಡಿದ್ದನು. ಆದ್ರೆ ಈ ಪ್ಲಾನ್‍ಗೆ ಪತ್ನಿ ಎಳ್ಳು ನೀರು ಬಿಟ್ಟಿದ್ದಾಳೆ. ಪತಿ ವಿಷಯ ತಿಳಿದು ಪತ್ನಿ, ತನ್ನ ಕುಟುಂಬಸ್ಥರ ಜೊತೆ ಲಾಡ್ಜಿಗೆ ಬಂದು ಪತಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ.

    ಮೋಸ ಮಾಡಿ ಬೇರೊಬ್ಬಳ ಜೊತೆ ಹೋಗಿದ್ದ ಪತಿ ವಿರುದ್ಧ ಪೊಲೀಸರಿಗೆ ಪತ್ನಿ ದೂರು ನೀಡಿದ್ದು, ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

  • ಬೆಡ್ ಇಲ್ಲದೆ ನೆಲದ ಮೇಲೆ ಮಗುವಿಗೆ ಜನ್ಮ – ನೋಡುತ್ತಾ ನಿಂತ ಜನ

    ಬೆಡ್ ಇಲ್ಲದೆ ನೆಲದ ಮೇಲೆ ಮಗುವಿಗೆ ಜನ್ಮ – ನೋಡುತ್ತಾ ನಿಂತ ಜನ

    ಲಕ್ನೋ: ಬೆಡ್ ಇಲ್ಲದೆ ಮಹಿಳೆ ಆಸ್ಪತ್ರೆಯ ಕಾರಿಡಾರ್ ನಲ್ಲೇ ಮಗುವಿಗೆ ಜನ್ಮ ನೋಡಿದ್ದು, ಈ ವೇಳೆ ಜನರು ನೋಡುತ್ತಾ ನಿಂತ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.

    ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಫರುಕಾಬಾದ್‍ನ ಲೋಯಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅಲ್ಲಿ ಹಾಸಿಗೆ ಇಲ್ಲದ ಕಾರಣ ಮಹಿಳೆ ಆಸ್ಪತ್ರೆಯ ನೆಲದ ಮೇಲೆ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾಗ ಹಾರಿಕೆಯ ಉತ್ತರವನ್ನು ಕೊಟ್ಟಿದ್ದಾರೆ.

    ರೂನೇ ಗ್ರಾಮದ ನಿವಾಸಿ ಅಂಜೋ ಅವರು ಭಾನುವಾರ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಆಗ ಅವರನ್ನು ಲೋಯಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ವೇಳೆ ಎಮರ್ಜೆನ್ಸಿ ವಾರ್ಡಿನಲ್ಲಿದ್ದ ಸಿಬ್ಬಂದಿ ಬೆಡ್ ಇಲ್ಲ. ಆಸ್ಪತ್ರೆಯ ಕಾರಿಡಾರ್ ನಲ್ಲಿ ತಿರುಗಾಡಲು ಹೇಳಿದ್ದಾರೆ. ಅಂಜೋ ಕಾರಿಡಾರ್ ನಲ್ಲಿ ತಿರುಗುತ್ತಿದ್ದಾಗ ಹೆರಿಗೆ ನೋವು ಜಾಸ್ತಿಯಾಗಿ ನೆಲದ ಮೇಲೆ ಬಿದ್ದರು. ಬಳಿಕ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದರು.

    ಆಸ್ಪತ್ರೆ ಸಿಬ್ಬಂದಿ ಹಾಸಿಗೆ ನೀಡಿಲ್ಲ. ಹೀಗಾಗಿ ನನ್ನ ಪತ್ನಿ ನೆಲದ ಮೇಲೆ ಜನ್ಮ ನೀಡಿದ್ದಾಳೆ ಎಂದು ಅಂಜೋ ಅವರ ಪತಿ ಸುಜೀತ್ ಆರೋಪಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಮೋನಿಕಾ ರಾಣಿ ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಅಲ್ಲದೆ ಮೋನಿಕಾ ಅವರು ಸಿಎಂಒ ಹಾಗೂ ಎಸಿಎಂಒ ತಂಡವನ್ನು ರಚಿಸಿ ಮೂರು ದಿನಗಳಲ್ಲಿ ವರದಿ ನೀಡಬೇಕು ಎಂದು ಆದೇಶಿಸಿದ್ದಾರೆ.

  • ತಾಂತ್ರಿಕನ ಮಾತು ಕೇಳಿ ಪತಿಗೆ ಬರೀ ಲಾಡು ನೀಡ್ತಿದ್ದ ಪತ್ನಿ

    ತಾಂತ್ರಿಕನ ಮಾತು ಕೇಳಿ ಪತಿಗೆ ಬರೀ ಲಾಡು ನೀಡ್ತಿದ್ದ ಪತ್ನಿ

    -ಮನನೊಂದು ನ್ಯಾಯಕ್ಕಾಗಿ ಮೊರೆಹೋದ ಪತಿ

    ಲಕ್ನೋ: ಮೂಢನಂಬಿಕೆಗೆ ಕಟ್ಟುಬಿದ್ದು, ತಾಂತ್ರಿಕನ ಮಾತು ಕೇಳಿ ಪತ್ನಿಯೊಬ್ಬಳು ತನ್ನ ಪತಿಗೆ ತಿನ್ನಲು ಮೂರು ಹೊತ್ತು ಬರೀ ಲಾಡು ನೀಡುತ್ತಿದ್ದಳು. ಇದರಿಂದ ಬೇಸತ್ತ ಪತಿ ನ್ಯಾಯಕೊಡಿಸಿ ಎಂದು ಮೊರೆಯಿಟ್ಟ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಮೀರತ್‍ನ ಕುಟುಂಬ ಸಮಾಲೋಚನಾ ಕೇಂದ್ರದಲ್ಲಿ ಇಂತಹದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ದೌರಾಲಾ ನಿವಾಸಿಯೊಬ್ಬ ತನ್ನ ಪತ್ನಿ ವಿರುದ್ಧ ವಿಚಿತ್ರ ಆರೋಪ ಮಾಡಿದ್ದಾನೆ. ತಾಂತ್ರಿಕನ ಸಲಹೆ ಮೇರೆಗೆ ತನ್ನ ಪತ್ನಿ, ತನಗೆ ತಿನ್ನಲು ಕೇವಲ ಲಾಡು ನೀಡುತ್ತಾಳೆ. ಇದರಿಂದ ಬಹಳ ತೊಂದರೆ ಆಗುತ್ತಿದೆ ಎಂದು ಪತಿ ನ್ಯಾಯಾಕ್ಕಾಗಿ ಕುಟುಂಬ ಸಮಾಲೋಚನಾ ಕೇಂದ್ರದ ಮೊರೆ ಹೋಗಿದ್ದಾನೆ. ಇದನ್ನೂ ಓದಿ:ಚಿನ್ನದ ಆಭರಣ ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ದೂರು

    ಕೆಲ ದಿನಗಳ ಹಿಂದೆ ಪತಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಪತ್ನಿ, ತಾಂತ್ರಿಕನ ಮೊರೆ ಹೋಗಿದ್ದಳು. ಆಗ ತಾಂತ್ರಿಕ ಪತಿಗೆ ಲಾಡು ಮಾತ್ರ ಆಹಾರ ರೂಪದಲ್ಲಿ ನೀಡಬೇಕು. ಬೆಳಗ್ಗೆಯಿಂದ ಸಂಜೆಯವರೆಗೂ ಕೇವಲ ಲಾಡು ಮಾತ್ರ ಕೊಡು, ಆಗ ನಿನ್ನ ಪತಿಯ ಆರೋಗ್ಯ ಸರಿಹೋಗುತ್ತೆ ಎಂದು ಸಲಹೆ ನೀಡಿದ್ದನು. ಇದನ್ನು ನಂಬಿದ ಪತ್ನಿ ಪತಿಗೆ ಕೇವಲ ಲಾಡು ಮಾತ್ರ ನೀಡುತ್ತಿದ್ದಳು. ಬೇರೆ ಆಹಾರವನ್ನು ಪತಿ ಕೇಳಿದರೆ ಕೊಡುತ್ತಿರಲಿಲ್ಲ. ಪತ್ನಿಯ ಮೂಢನಂಬಿಕೆ ಪತಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಪತ್ನಿಯ ವರ್ತನೆಗೆ ಬೇಸತ್ತ ಪತಿ ನ್ಯಾಯಕೊಡಿಸಿ, ಇದರಿಂದ ಪಾರುಮಾಡಿ ಎಂದು ಕುಟುಂಬ ಸಮಾಲೋಚನಾ ಕೇಂದ್ರಕ್ಕೆ ದೂರು ನೀಡಿದ್ದಾನೆ.

    ಸಮಾಲೋಚನಾ ಕೇಂದ್ರದಲ್ಲಿ ಪತಿಯ ದೂರು ಆಲಿಸಿದ ಕೌನ್ಸಿಲರ್ ದಂಗಾಗಿದ್ದಾರೆ. ಈ ರೀತಿ ಘಟನೆಯನ್ನು ನಾವು ನೋಡಿಲ್ಲ ಎಂದು ಅಚ್ಚರಿಪಟ್ಟಿದ್ದಾರೆ. ಸದ್ಯ ಈ ಬಗ್ಗೆ ಅಧಿಕಾರಿಗಳು ದಂಪತಿಯ ಕೌನ್ಸಿಲಿಂಗ್ ನಡೆಸುತ್ತಿದ್ದು, ಅವರನ್ನು ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

  • ಸೋದರಿಯ ಪತಿಯನ್ನ ಲವ್ ಮಾಡಿ ಗಂಡನ್ನೇ ಕೊಂದ್ಳು

    ಸೋದರಿಯ ಪತಿಯನ್ನ ಲವ್ ಮಾಡಿ ಗಂಡನ್ನೇ ಕೊಂದ್ಳು

    ಲಕ್ನೋ: ಮಹಿಳೆಯೊಬ್ಬಳು ತನ್ನ ಸಹೋದರಿಯ ಪತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಇದಕ್ಕೆ ಪತಿ ಅಡ್ಡಿಯಾಗುತ್ತಾನೆಂದು ಆತನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ನೌರಂಗಾಬಾದ್‍ನಲ್ಲಿ ನಡೆದಿದೆ.

    ರಂಜೀತ್ ಚೌಹಾಣ್(30) ಕೊಲೆಯಾದ ಪತಿ. ಆರೋಪಿ ಪತ್ನಿ ಕುಂಕುಮ್ ಚೌಹಾಣ್ ತನ್ನ ಸಹೋದರ, ತಂದೆ ಮತ್ತು ಪ್ರಿಯಕರ ಧೀರಜ್ ಚೌಹಾಣ್ (ತಂಗಿಯ ಪತಿ) ಸಹಾಯದಿಂದ ಕೊಲೆ ಮಾಡಿದ್ದಾಳೆ ಎಂದು ರಂಜೀತ್ ಪೋಷಕರು ಆರೋಪಿಸಿದ್ದಾರೆ.

    ಆರೋಪಿ ರಂಜೀತ್ ಚೌಹಾಣ್ ತನ್ನ ಸ್ವಂತ ತಂಗಿಯ ಪತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ಪತಿ ಅಡ್ಡಿಯಾಗುತ್ತಾನೆಂದು ಆರೋಪಿ, ಪತಿ ದಿನ ಕುಡಿದು ಬಂದು ನನ್ನ ಹಲ್ಲೆ ಮಾಡುತ್ತಾನೆಂದು ಸುಳ್ಳು ಹೇಳಿ ತನ್ನ ತವರು ಮನೆಯಲ್ಲಿ ವಾಸವಾಗಿದ್ದಳು. ಶನಿವಾರ ರಂಜೀತ್ ಮನೆಯಿಂದ ಹೊರಗಡೆ ಹೋದಾಗ ನಾಲ್ವರು ಸೇರಿಕೊಂಡು ತಲೆಗೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

    ಇತ್ತ ತುಂಬಾ ಸಮಯವಾದರೂ ರಂಜೀತ್ ಮನೆಗೆ ಬಂದಿಲ್ಲ ಎಂದು ಆತನ ಸಹೋದರ ಹುಡುಕಿಕೊಂಡು ಹೋಗಿದ್ದಾರೆ. ಆಗ ರಂಜೀತ್ ಮೃತದೇಹ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಪೊಲೀಸರು ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

  • 2ನೇ ಮದ್ವೆಗೆ ಒಪ್ಪದ ಕುಟುಂಬಸ್ಥರು- ಆತ್ಮಹತ್ಯೆ ಮಾಡಿಕೊಂಡ 75ರ ವೃದ್ಧ

    2ನೇ ಮದ್ವೆಗೆ ಒಪ್ಪದ ಕುಟುಂಬಸ್ಥರು- ಆತ್ಮಹತ್ಯೆ ಮಾಡಿಕೊಂಡ 75ರ ವೃದ್ಧ

    ಲಕ್ನೋ: 75 ವರ್ಷದ ವೃದ್ಧರೊಬ್ಬರು ಎರಡನೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಆ ಮದುವೆಗೆ ಅವರ ಕುಟುಂಬಸ್ಥರು ನಿರಾಕರಿಸಿದ್ದಕ್ಕೆ ಮನನೊಂದು ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ವೃದ್ಧ ಅರ್ಷದ್(75) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅರ್ಷದ್ ಅವರ ಪತ್ನಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅರ್ಷದ್ ಅವರಿಗೆ ಒಟ್ಟು 8 ಮಂದಿ ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ಆದರೆ ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ಅರ್ಷದ್‍ರಿಗೆ ಎರಡನೇ ಮದುವೆಯಾಗುವ ಆಸೆ ಬಂದಿತ್ತು. ಈ ವಯಸ್ಸಿನಲ್ಲಿ ಮದುವೆ ಏಕೆ ಎಂದು ಕುಟುಂಬಸ್ಥರು ಪ್ರಶ್ನೆ ಮಾಡಿ, ಮದುವೆಗೆ ವಿರೋಧಿಸಿದ್ದರು.

    ಜೊತೆಗೆ ನಿಧಾನವಾಗಿ ತಂದೆಗೆ ಮಕ್ಕಳು ತಿಳಿ ಹೇಳುವ ಪ್ರಯತ್ನವೂ ಮಾಡಿದ್ದರು. ಆದರೆ ಗುರುವಾರ ಈ ಗಲಾಟೆ ಜೋರಾಗಿ ತಂದೆ ಮಕ್ಕಳ ನಡುವೆ ಜಗಳ ಕೂಡ ನಡೆದಿತ್ತು. ಇದರಿಂದ ಕೋಪಗೊಂಡು ವೃದ್ಧ ಅಂದು ರಾತ್ರಿಯೇ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದಾರೆ.

    ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾಗಿದೆ.

  • ಬ್ಯಾಗ್‍ಗಾಗಿ ಪ್ರಾಣ ಕಳ್ಕೊಂಡ ತಾಯಿ-ಮಗಳು

    ಬ್ಯಾಗ್‍ಗಾಗಿ ಪ್ರಾಣ ಕಳ್ಕೊಂಡ ತಾಯಿ-ಮಗಳು

    ಲಕ್ನೋ: ದರೋಡೆಯನ್ನು ವಿರೋಧಿಸಿದ್ದಕ್ಕೆ ತಾಯಿ ಮತ್ತು ಮಗಳನ್ನು ರೈಲಿನಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಾಥುರಾದಲ್ಲಿ ನಡೆದಿದೆ.

    ದೆಹಲಿಯ ಶಹದಾರಾ ನಿವಾಸಿ ಮೀನಾ (55) ಮತ್ತು ಮಗಳು ಮನೀಶಾ (21) ಮೃತರು. ಇವರು ದೆಹಲಿಯಿಂದ ಕೋಟಾಗೆ ಪ್ರಯಾಣಿಸುತ್ತಿದ್ದರು. ಮೀನಾ ಮತ್ತು ಮನೀಶಾ ಜೊತೆ ಮಗ ಆಕಾಶ್ (23) ಕೂಡ ನಿಜಾಮುದ್ದೀನ್-ತಿರುವನಂತಪುರಂ ಸೆಂಟ್ರಲ್ ಎಸ್‍ಎಫ್ ಎಕ್ಸ್ ಪ್ರೆಸ್ (22634) ನಲ್ಲಿ ಪ್ರಯಾಣಿಸುತ್ತಿದ್ದರು. ಈ ಘಟನೆ ಅಜೈ ರೈಲ್ವೆ ನಿಲ್ದಾಣದ ಬಳಿ ನಡೆದಿದೆ ಎಂದು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ತಿಳಿಸಿದೆ.

    ಮನೀಶಾ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಾಗಿ ಕೋಚಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ ಪ್ರವೇಶ ಪಡೆಯಬೇಕೆಂದು ಕೋಟಾಗೆ ತೆರಳುತ್ತಿದ್ದಳು. ಮುಂಜಾನೆ ಮೀನಾ ದರೋಡೆಕೋರರು ತನ್ನ ಬ್ಯಾಗನ್ನು ತೆಗೆದುಕೊಂಡು ಹೋಗುವುದನ್ನು ನೋಡಿದ್ದಾರೆ. ಅದನ್ನು ಮಗಳಿಗೆ ತಿಳಿಸಿದ್ದು, ಇಬ್ಬರು ದರೋಡೆಕೋರರಿಂದ ಬ್ಯಾಗನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ದರೋಡೆಕೋರಲ್ಲಿ ಓರ್ವ ತಾಯಿ-ಮಗಳನ್ನು ರೈಲಿನಿಂದ ತಳ್ಳಿದ್ದಾನೆ ಎಂದು ಆರ್‌ಪಿಎಫ್ ತಿಳಿಸಿದೆ.

    ಬ್ಯಾಗ್‍ನಲ್ಲಿ ಮೊಬೈಲ್ ಫೋನ್, ಹಣ, ಕೋಚಿಂಗ್ ಮತ್ತು ಹಾಸ್ಟೆಲ್ ಶುಲ್ಕ ಜೊತೆಗೆ ಇತರ ಬೆಲೆಬಾಳುವ ವಸ್ತುಗಳು ಇದ್ದವು. ಆಕಾಶ್ ಎಚ್ಚರಕೊಂಡು ರೈಲನ್ನು ನಿಲ್ಲಿಸಲು ಚೈನ್ ಎಳೆದಿದ್ದಾನೆ. ಅದು ವೃಂದಾಬನ್ ರಸ್ತೆ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದೆ. ತಕ್ಷಣ ಈ ಬಗ್ಗೆ ಆರ್‌ಪಿಎಫ್‌ಗೆ ವಿಷಯ ತಿಳಿಸಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಅಂಬುಲೆನ್ಸ್ ಹೋಗಿದೆ. ಆದರೆ ಅಷ್ಟರಲ್ಲಿಯೇ ತಾಯಿ-ಮಗಳು ಮೃತಪಟ್ಟಿದ್ದರು ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿಗಳ ವಿರುದ್ಧ ದರೋಡೆ ಮತ್ತು ಹತ್ಯೆ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲು ಶೋಧಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

  • 8 ವರ್ಷಗಳಿಂದ ವಂಚನೆ- ನಕಲಿ ಐಪಿಎಸ್, ಐಎಎಸ್ ಅಧಿಕಾರಿಗಳು ಕೊನೆಗೂ ಅಂದರ್

    8 ವರ್ಷಗಳಿಂದ ವಂಚನೆ- ನಕಲಿ ಐಪಿಎಸ್, ಐಎಎಸ್ ಅಧಿಕಾರಿಗಳು ಕೊನೆಗೂ ಅಂದರ್

    ಲಕ್ನೋ: 8 ವರ್ಷಗಳಿಂದ ಐಪಿಎಸ್, ಐಎಎಸ್ ಅಧಿಕಾರಿಗಳೆಂದು ಜನರನ್ನು ವಂಚಿಸುತ್ತ ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಉತ್ತರಪ್ರದೇಶದ ನೋಯ್ಡಾ ಪೊಲೀಸರು ಸೆರೆಹಿಡಿದಿದ್ದಾರೆ.

    ಆರೋಪಿಗಳನ್ನು ಗೌರವ್ ಮಿಶ್ರಾ ಹಾಗೂ ಆಶುತೋಶ್ ರಾತಿ ಎಂದು ಗುರುತಿಸಲಾಗಿದೆ. ಕಳೆದ 8 ವರ್ಷಗಳಿಂದ ಈ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಾಗಿ ಬೆದರಿಸಿ, ಅವರ ಬಳಿ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಐಪಿಎಸ್, ಐಎಎಸ್ ಹೆಸರು ಬಳಸಿಕೊಂಡು ಹಣಕ್ಕಾಗಿ ಜನರನ್ನೂ ಕೂಡ ವಂಚಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

    ಈ ನಕಲಿ ಅಧಿಕಾರಿಗಳ ಬಳಿ ಪೊಲೀಸರ ಖಾಕಿ ಸಮವಸ್ತ್ರ, ನಕಲಿ ಐಡಿ ಕಾರ್ಡ್ ಹಾಗೂ ಐಪಿಎಸ್, ಐಎಎಸ್ ಬ್ಯಾಡ್ಜ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ಮೇಲೆ ಪ್ರಕರಣ ಕೂಡ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ನೀಡಿದ ದೂರಿನಿಂದಾಗಿ ಆರೋಪಿಗಳ ನಿಜ ಬಣ್ಣ ಬೆಳಕಿಗೆ ಬಂದಿದೆ.

    ಈ ಹಿಂದೆ ಕೂಡ ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿತ್ತು. ಘಾಜಿಯಾಬಾದಿನ ನಿವಾಸಿ ಆಶೀಷ್ ಚೌಧರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆಶೀಷ್ ದೆಹಲಿ ಪೊಲೀಸ್ ಪರೀಕ್ಷೆಯನ್ನು ಅನುತ್ತೀರ್ಣನಾಗಿದ್ದನು. ಆದರೆ ಈ ಬಗ್ಗೆ ತನ್ನ ಕುಟುಂಬಕ್ಕೆ ಹಾಗೂ ತಾನು ಮದುವೆಯಾಗಬೇಕಿದ್ದ ಹುಡುಗಿಗೆ ತಿಳಿಸಲು ಹೆದರಿ ಪೊಲೀಸ್ ಆಗಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದನು. ಅಲ್ಲದೆ ನಕಲಿ ಪೊಲೀಸ್ ಆಗಿ ಜನರಿಂದ ಹಣ ಪಡೆದು ಹತ್ತಿರದ ಪೊಲೀಸ್ ಠಾಣೆಯ ಹೆಸರು ಹೇಳಿ ವಂಚಿಸುತ್ತಿದ್ದನು. ಈ ಖತರ್ನಾಕ್ ವಂಚಕನನ್ನು ಇದೇ ಜುಲೈನಲ್ಲಿ ಬಂಧಿಸಲಾಗಿತ್ತು.

    ಹಾಗೆಯೇ ಜೂನ್‍ನಲ್ಲಿ ಐಪಿಎಸ್ ಅಧಿಕಾರಿಯೆಂದು ತಿರುಗಾಡುತ್ತಿದ್ದ ಆರೋಪಿ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದರು. ನೋಯ್ಡಾದ ಆದಿತ್ಯ ದೀಕ್ಷಿತ್ ಹಾಗೂ ಆತನ ಸ್ನೇಹಿತ ಅಖಿಲೇಶ್ ಯಾದವ್‍ನನ್ನು ಪೊಲೀಸರು ಸೆರೆಹಿಡಿದಿದ್ದರು.

    ಗೃಹ ಸಚಿವಾಲಯದ ಸೈಬರ್ ಕ್ರೈಂ ಅಧಿಕಾರಿಯೆಂದು ಇಬ್ಬರು ಆರೋಪಿಗಳು ಹೋಟೆಲ್‍ವೊಂದರಲ್ಲಿ ತಂಗಿದ್ದರು. ಅಲ್ಲದೆ ಹೋಟೆಲ್‍ಗೆ ಒಂದು ರೂ. ಕೂಡ ಹಣ ತುಂಬದೆ ಮಜಾ ಮಾಡಿದ್ದರು. ಆದರೆ ಈ ವೇಳೆ ಹೋಟೆಲ್ ಸಿಬ್ಬಂದಿಗೆ ಅನುಮಾನ ಮೂಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಆರೋಪಿಗಳ ಸತ್ಯಾಂಶ ಹೊರಬಿದ್ದಿತ್ತು. ಬಳಿಕ ಇಬ್ಬರನ್ನೂ ಬಂಧಿಸಿ, ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು.