Tag: lucknow

  • ಅದ್ಧೂರಿ ನಿಶ್ಚಿತಾರ್ಥ – ರಿಂಕುಗೆ ರಿಂಗು ಹಾಕಿದ ಸಂಸದೆ ಪ್ರಿಯಾ ಸರೋಜ್

    ಅದ್ಧೂರಿ ನಿಶ್ಚಿತಾರ್ಥ – ರಿಂಕುಗೆ ರಿಂಗು ಹಾಕಿದ ಸಂಸದೆ ಪ್ರಿಯಾ ಸರೋಜ್

    ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್‌ (Rinku Singh) ಅವರಿಂದು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜಾ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಿನ್ನ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳು, ಮದುವೆ ಎಂಬ ಪವಿತ್ರ ಬಂಧನದಲ್ಲಿ ಒಂದಾಗುತ್ತಿರುವುದು ವಿಶೇಷ.

    ಲಕ್ನೋದಲ್ಲಿ (Lucknow) ನಡೆದ ಅದ್ಧೂರಿ ಸಮಾರಂಭದಲ್ಲಿ ರಿಂಕು ಸಿಂಗ್, ಮಚ್ಲಿಶಹರ್ ಕ್ಷೇತ್ರ ಪ್ರತಿನಿಧಿಸುವ ಕಿರಿಯ ಸಂಸದರಲ್ಲಿ ಒಬ್ಬರಾದ ಪ್ರಿಯಾ ಸರೋಜ್‌ ಅವರೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ಫೋಟೋಗಳು ಹರಿದಾಡುತ್ತಿವೆ. ಅದ್ಧೂರಿ ಸಮಾರಂಭದಲ್ಲಿ ಕುಟುಂಬಸ್ಥರು ಮಾತ್ರವಲ್ಲದೇ ಖ್ಯಾತ ಕ್ರಿಕೆಟ್‌ ತಾರೆಯರು, ಕೆಕೆಆರ್‌ ಫ್ರಾಂಚೈಸಿಯ ಸಹ ಆಟಗಾರರು ಹಾಗೂ ಹಿರಿಯ ರಾಜಕೀಯ ನಾಯಕರೂ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್‌ ಕೊಹ್ಲಿಗೆ ಕನ್ನಡದ ಬಾವುಟ ನೀಡಿದ ಡಿಕೆಶಿ – ಧ್ವಜ ಹಾರಿಸಿ ಸಂಭ್ರಮಿಸಿದ ವಿರಾಟ್‌

    ಇತ್ತೀಚೆಗಷ್ಟೇ ಪ್ರಿಯಾ ಅವರ ತಂದೆ ಇಬ್ಬರ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ್ದರು. ಸಮಾಜವಾದಿ ಪಕ್ಷದ ಹಾಲಿ ಶಾಸಕರೂ ಆಗಿರುವ ತುಫಾನಿ, ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಇಬ್ಬರೂ ತಮ್ಮ ಮದುವೆಗಾಗಿ ಅನುಮತಿ ಕೋರಿದ್ದಾರೆ ಎಂದು ತಿಳಿಸಿದ್ದರು. ಆ ಬಳಿಕ ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲೂ ಚರ್ಚೆಗಳು ನಡೆದಿತ್ತು. ಇದೀಗ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವದಂತಿಗಳಿಗೆ ತೆರೆ ಎಳೆದಿದ್ದಾರೆ.

    ಪ್ರಿಯಾ ಸರೋಜ್ ಯಾರು?
    ಉತ್ತರ ಪ್ರದೇಶದ ವಾರಣಾಸಿಯ ಕಾರ್ಖಿಯಾನ್ ಗ್ರಾಮದ ಪ್ರಿಯಾ ಸರೋಜ್, 2024ರಲ್ಲಿ ಮಚ್ಲಿಶಹರ್‌ನ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಬಿಜೆಪಿಯ ಅನುಭವಿ ಬಿಪಿ ಸರೋಜ್ ಅವರನ್ನು 35,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದ ಪ್ರಿಯಾ, ದೇಶದ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಈಗ ಆರ್‌ಸಿಬಿಯ ಯಶಸ್ವಿ ನಾಯಕ 

    ಪ್ರಿಯಾ ರಾಜಕೀಯ ಕುಟುಂಬದ ಹಿನ್ನಲೆ ಹೊಂದಿದ್ದರೂ, ತಮ್ಮ ಕಾನೂನು ವೃತ್ತಿ ಮುಂದುವರಿಸಿದ್ದರು. ನವದೆಹಲಿಯ ವಾಯುಪಡೆಯ ಸುವರ್ಣ ಮಹೋತ್ಸವ ಸಂಸ್ಥೆಯಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿದ ಪ್ರಿಯಾ ಸರೋಜ್‌, ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿಯನ್ನು ಪಡೆದುಕೊಂಡಿದ್ದಾರೆ. ಕಾನೂನು ಪದವಿಯ ನಂತರ, ಸರೋಜ್ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಆರಂಭದಲ್ಲಿ ರಾಜಕೀಯವು ಅವರ ವೃತ್ತಿಜೀವನದ ಯೋಜನೆಗಳ ಭಾಗವಾಗಿರಲಿಲ್ಲ. ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಮೂರು ಬಾರಿ ಸಂಸದರಾಗಿದ್ದು, ಪ್ರಸ್ತುತ ಉತ್ತರ ಪ್ರದೇಶದ ಕೆರಕತ್‌ನಿಂದ ಶಾಸಕರಾಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಿಯಾ ಸರೋಜ್ ರಾಜಕೀಯ ಪ್ರವೇಶದ ಮೂಲಕ ತಮ್ಮ ತಂದೆಯ ರಾಜಕೀಯ ಪರಂಪರೆಯನ್ನ ಮುಂದುವರಿಸಿದ್ದಾರೆ. ‌

    ರಿಂಕು ಬಗ್ಗೆ ಹೇಳೋದಾದ್ರೆ…
    ಪ್ರಿಯಾ ಸರೋಜ್‌ ಅವರ ಭಾವಿ ಪತಿಯಾಗಲಿರುವ ರಿಂಕು ಸಿಂಗ್, ಉತ್ತರ ಪ್ರದೇಶದ ಅಲಿಗಢದವರು. ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್‌)ನ ಪ್ರಮುಖ ಆಟಗಾರನಾಗಿ ಹಾಗೂ ಟೀಂ ಇಂಡಿಯಾದ ಟಿ20 ತಂಡದಲ್ಲೂ ರಿಂಕು ಸಿಂಗ್‌ ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ. 2023ರಲ್ಲಿ ಐಪಿಎಲ್ ಪಂದ್ಯದ ಕೊನೆಯ ಓವರ್‌ನಲ್ಲಿ, ಸತತ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಿಂಕು ಸಿಂಗ್ ಜನಪ್ರಿಯತೆ ಪಡೆದುಕೊಂಡಿದ್ದರು. ಇದನ್ನೂ ಓದಿ: IPL Champions | ಚುಟುಕು ಕದನದಲ್ಲಿ ಈವರೆಗೆ ಚಾಂಪಿಯನ್ಸ್‌ ಪಟ್ಟ ಗೆದ್ದವರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ…

    ಇನ್ನೂ ಟೀ ಇಂಡಿಯಾ ಪರ 30 ಟಿ20ಐ ಪಂದ್ಯಗಳು ಮತ್ತು 22 ಇನ್ನಿಂಗ್ಸ್‌ಗಳಲ್ಲಿ ರಿಂಕು 507 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳಿವೆ. ಅವರು ಇನ್ನೂ ತಮ್ಮ ಚೊಚ್ಚಲ ಟಿ20ಐ ಶತಕವನ್ನು ಬಾರಿಸಿಲ್ಲ. 27 ವರ್ಷದ ಅವರು 2023 ರಲ್ಲಿ ಐರ್ಲೆಂಡ್ ವಿರುದ್ಧ ಟಿ20ಐಗೆ ಪಾದಾರ್ಪಣೆ ಮಾಡಿದರು. ರಿಂಕು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಲಿಸ್ಟ್-ಎ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 52 ಇನ್ನಿಂಗ್ಸ್‌ಗಳಲ್ಲಿ 1,899 ರನ್ ಗಳಿಸಿದ್ದಾರೆ.

  • ಟಾಪ್‌-2ಗೆ ಫೈಟ್‌ | ಮಳೆಯಿಂದ ರದ್ದಾದ್ರೆ ಕ್ವಾಲಿಫೈಯರ್-1 ಆರ್‌ಸಿಬಿ ಎಂಟ್ರಿ!

    ಟಾಪ್‌-2ಗೆ ಫೈಟ್‌ | ಮಳೆಯಿಂದ ರದ್ದಾದ್ರೆ ಕ್ವಾಲಿಫೈಯರ್-1 ಆರ್‌ಸಿಬಿ ಎಂಟ್ರಿ!

    ಲಕ್ನೋ: ಇಂದು ಲಕ್ನೋ (Lucknow Super Giants) ವಿರುದ್ಧದ ಪಂದ್ಯ ಗೆದ್ದರೆ ಆರ್‌ಸಿಬಿ (RCB) ಕ್ವಾಲಿಫೈಯರ್-1ಕ್ಕೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಮಳೆಯಿಂದ ರದ್ದಾದರೆ ಆರ್‌ಸಿಬಿ ರನ್‌ ರೇಟ್‌ ಆಧಾರದದಲ್ಲಿ ಅಗ್ರ-2 ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದೆ.

    ಹೌದು. ಈಗಾಗಲೇ ಪ್ಲೇ ಆಫ್‌ಗೆ 4 ತಂಡಗಳು ಪ್ರವೇಶ ಪಡೆದರೂ ಅಗ್ರ-2 ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿ ಇನ್ನೂ ಕಡಿಮೆಯಾಗಿಲ್ಲ. 14 ಪಂದ್ಯಗಳಿಂದ 19 ಅಂಕ ಪಡೆದಿರುವ ಪಂಜಾಬ್‌ (Punjab Kings) ಈಗಾಗಲೇ ಕ್ವಾಲಿಫೈಯರ್‌-1ಗೆ ಅರ್ಹತೆ ಪಡೆದಿದೆ.

    ಕ್ವಾಲಿಫೈಯರ್‌ ಅರ್ಹತೆ ಪಡೆಯುವ ಎರಡನೇ ತಂಡಕ್ಕೆ ಆರ್‌ಸಿಬಿ ಮತ್ತು ಗುಜರಾತ್‌ ಮಧ್ಯೆ ಪ್ರಬಲ ಸ್ಪರ್ಧೆ ನಡೆಯುತ್ತಿದೆ. ಗುಜರಾತ್‌ (Gujarat Giants) ಸತತ 2 ಪಂದ್ಯಗಳನ್ನು ಸೋತರೆ ಆರ್‌ಸಿಬಿ ಹೈದರಾಬಾದ್‌ ವಿರುದ್ಧ ಸೋತಿದೆ. ಇದನ್ನೂ ಓದಿ: ಟೆಸ್ಟ್‌ ನಿವೃತ್ತಿ ಬಳಿಕ ಟೆಂಪಲ್‌ ರನ್‌; ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ವಿರುಷ್ಕಾ ದಂಪತಿ ಭೇಟಿ

    ಅಂಕಪಟ್ಟಿಯಲ್ಲಿ ಗುಜರಾತ್‌ 18 ಅಂಕ ಪಡೆದರೆ ಆರ್‌ಸಿಬಿ 17 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್‌ನ ಸತತ 2 ಪಂದ್ಯಗಳನ್ನು ಸೋತ ಕಾರಣ ಆರ್‌ಸಿಬಿಗೆ ಅಗ್ರ-2 ಸ್ಥಾನಕ್ಕೇರುವ ಸುವರ್ಣಾವಕಾಶ ಒದಗಿಬಂದಿದೆ. ಒಂದು ವೇಳೆ ಲಕ್ನೋ ವಿರುದ್ಧ ಆರ್‌ಸಿಬಿ ಸೋತರೆ ಮುಂಬೈ ವಿರುದ್ಧ ಎಲಿಮಿನೇಟರ್‌ ಪಂದ್ಯವನ್ನು ಆಡಬೇಕಾಗುತ್ತದೆ.

    ರದ್ದಾದ್ದರೂ ಟಾಪ್‌-2
    ಆರ್‌ಸಿಬಿ ಉತ್ತಮ ರನ್‌ರೇಟ್‌ನಿಂದ ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಬಹುದು. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೂ, ಆರ್‌ಸಿಬಿಗೆ ನೆಟ್ ರನ್‌ರೇಟ್ ಆಧಾರದಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲಿದೆ.

    ಗುಜರಾತ್‌ 18 ಅಂಕದ ಜೊತೆಗೆ 0.254 ನೆಟ್ ರನ್‌ರೇಟ್ ಇದೆ. ಆರ್‌ಸಿಬಿ ಈಗ 17 ಅಂಕದ ಜೊತೆಗೆ 0.255 ರನ್‌ ರೇಟ್‌ ಹೊಂದಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ 1 ಅಂಕ ಲಭಿಸಿದಾಗ ಆರ್‌ಸಿಬಿ ಅಂಕ 18 ಆಗುತ್ತದೆ. ಗುಜರಾತ್‌ಗೆ ಹೋಲಿಸಿದಾಗ 0.001 ರನ್‌ರೇಟ್‌ ಹೆಚ್ಚಿದೆ. ಅಂಕಗಳು ಸಮನಾದರೆ ನೆಟ್ ರನ್‌ರೇಟ್‌ನಲ್ಲಿ ಆರ್‌ಸಿಬಿ ಅಗ್ರ -2 ಸ್ಥಾನ ಪಡೆಯಲಿದೆ.

  • ಮೇ 11ರಂದು ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ – ಪಾಕ್‌ಗೆ ಶುರುವಾಯ್ತು ನಡುಕ

    ಮೇ 11ರಂದು ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ – ಪಾಕ್‌ಗೆ ಶುರುವಾಯ್ತು ನಡುಕ

    ನವದೆಹಲಿ: ಭಾರತದ ʻಆಪರೇಷನ್‌ ಸಿಂಧೂರʼಕ್ಕೆ (Operation Sindoor) ತತ್ತರಿಸಿರುವ ಪಾಕ್‌ ಪ್ರತಿದಾಳಿಗೆ ಹೊಂಚು ಹಾಕಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದೇಶದ ಕಾರ್ಯತಂತ್ರ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತ ಬಹುದೊಡ್ಡ ಹೆಜ್ಜೆಯನ್ನಿಟ್ಟಿದೆ. ಶಕ್ತಿಶಾಲಿ ಅಸ್ತ್ರವಾದ ಬ್ರಹ್ಮೋಸ್‌ ಕ್ಷಿಪಣಿ ಉತ್ಪಾದನಾ ಘಟಕ (BrahMos Missile Manufacturing Unit) ಲಕ್ನೋದಲ್ಲಿ ತಲೆಎತ್ತಿದ್ದು, ಮೇ 11ರಂದು ಉದ್ಘಾಟಿಲಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

    ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ʻಬ್ರಹ್ಮೋಸ್ʼ ವಿಶ್ವದ ಅತ್ಯಂತ ವೇಗದ ಮತ್ತು ವಿನಾಶಕಾರಿ ಕ್ಷಿಪಣಿಗಳಲ್ಲಿ ಒಂದಾಗಿದೆ ಎಂಬುದೇ ವಿಶೇಷ. ಹಾಗಾಗಿ ಕ್ಷಿಪಣಿ ಉತ್ಪಾದನಾ ಘಟಕವು ಉತ್ತರ ಪ್ರದೇಶದ ರಕ್ಷಣಾ ವಲಯಕ್ಕೆ ಮಾತ್ರವಲ್ಲದೇ, ಇಡೀ ಭಾರತದ ರಕ್ಷಣಾ ವಲಯಕ್ಕೆ ಬಲ ತುಂಬಲಿದೆ. ಇದನ್ನೂ ಓದಿ: ಬಾಲಾಕೋಟ್‌, ಬ್ರಹ್ಮೋಸ್‌ ಬಳಿಕ ʻಆಪರೇಷನ್‌ ಸಿಂಧೂರʼ – ಪಾಕ್‌ ನಂಬಿದ್ದ ʻಮೇಡ್‌ ಇನ್‌ ಚೈನಾʼ ರೆಡಾರ್‌ ಫೇಲ್‌

    ಇದು ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ ಸರ್ಕಾರಿ ಸಂಸ್ಥೆ NPO ಮಶಿನೋಸ್ಟ್ರೋನಿನ್ಯಾ ನಡುವಿನ ಜಂಟಿ ಉದ್ಯಮವಾಗಿದೆ. ಇದರಲ್ಲಿ ಭಾರತದ ಪಾಲು ಶೇ.50.5 ಮತ್ತು ರಷ್ಯಾದ ಪಾಲು ಶೇ.49.5 ರಷ್ಟಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: JEM ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಕುಟುಂಬದ 10 ಜನ ಸೇರಿ 14 ಮಂದಿ ಹತ್ಯೆ

    ಈ ಕುರಿತು ಮಾಹಿತಿ ನೀಡಿರುವ UPEIDAನ ಹೆಚ್ಚುವರಿ ಸಿಇಓ ಹರಿ ಪ್ರತಾಪ್ ಶಾಹಿ (Shrihari Pratap Shahi), ಈ ಘಟಕವನ್ನು ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಯುಪಿ ರಾಜ್ಯ ಸರ್ಕಾರವು ಲಕ್ನೋದಲ್ಲಿ 80 ಹೆಕ್ಟೇರ್‌ ಭೂಮಿಯನ್ನು ಉಚಿತವಾಗಿ ನೀಡಿದೆ. ಸುಮಾರು ಮೂರು ವರ್ಷಗಳ ದಾಖಲೆ ಸಮಯದ ಬಳಿಕ ಘಟಕ ನಿರ್ಮಾಣ ಪೂರ್ಣಗೊಂಡಿದ್ದು, ರಾಜ್ಯದ ಮೊದಲ ಹೈಟೆಕ್ ರಕ್ಷಣಾ ಉತ್ಪಾದನಾ ಕೇಂದ್ರ ಇದಾಗಲಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: Operation Sindoor – ಪಾಕ್‌ ಉಗ್ರರ 9 ನೆಲೆಗಳ ಮೇಲೆ ಏರ್‌ಸ್ಟ್ರೈಕ್‌

    ಮುಂದುವರಿದು… ಈ ಘಟಕದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಜೊತೆಗೆ ಇತರ ರಕ್ಷಣಾ ಉತ್ಪನ್ನಗಳು ಹಾಗೂ ಏರೋಸ್ಪೇಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನೂ ತಯಾರಿಸಲಾಗುತ್ತದೆ. ಸುಮಾರು 500 ಮುಖ್ಯ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದು, ಸಾವಿರಾರು ಮಂದಿ ಸಹ ಸಿಬ್ಬಂದಿಗಳೂ ಸಹ ಇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ʼಆಪರೇಷನ್‌ ಸಿಂಧೂರ್‌ʼ ಟ್ರೇಡ್‌ ಮಾರ್ಕ್‌ಗಾಗಿ ರಿಲಯನ್ಸ್‌ ಸೇರಿ ಹಲವರಿಂದ ಅರ್ಜಿ 

    ಪಾಕ್‌ಗೆ ಏಕೆ ನಡುಕ?
    2022ರ ಮಾರ್ಚ್‌ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್‌ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸದೇ ಇದ್ದರೂ ಈ ಕ್ಷಿಪಣಿಯನ್ನು ತಡೆಯಲು ಪಾಕಿಸ್ತಾನದಿಂದ ಸಾಧ್ಯವಾಗಿರಲಿಲ್ಲ. ಇದೀಗ ಯುದ್ಧದ ಛಾಯೆ ಕವಿದಿರುವ ಹೊತ್ತಿನಲ್ಲೇ ಭಾರತ ಬ್ರಹ್ಮೋಸ್‌ ಕ್ಷಿಪಣಿ ಘಟಕ ಉದ್ಘಾಟಿಸುತ್ತಿರುವುದು ಪಾಕ್‌ಗೆ ನಡುಕ ಉಂಟಾಗುವಂತೆ ಮಾಡಿದೆ. ಇದನ್ನೂ ಓದಿ: 9 ಉಗ್ರ ಅಡಗು ತಾಣಗಳ ಮಟಾಶ್ – ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು?

  • ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಲಕ್ನೋ: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ (ISI) ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.

    ಬಂಧಿತನನ್ನ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ‌ಫಿರೋಜಾಬಾದ್‌ನ ಹಜರತ್‌ಪುರ ಮೂಲದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಗಗನಯಾನ ಬಾಹ್ಯಾಕಾಶ ಯೋಜನೆ ಮತ್ತು ಮಿಲಿಟರಿ ಲ್ಯಾಜಿಸ್ಟಿಜ್ಸ್‌, ಡ್ರೋನ್ ಪ್ರಯೋಗಗಳ ಮಾಹಿತಿ ಸೇರಿದಂತೆ ಗೌಪ್ತ ಮಾಹಿತಿಯನ್ನ ಪಾಕಿಸ್ತಾನದ ಐಎಸ್‌ಐ ಜೊತೆಗೆ ಹಂಚಿಕೊಂಡಿದ್ದಾನೆ ಎಂದು ಯುಪಿ ಎಟಿಎಸ್ (UP ATS) ಮುಖ್ಯಸ್ಥ ನೀಲಬ್ಜಾ ಚೌಧರಿ ತಿಳಿಸಿದ್ದಾರೆ.

    ರವೀಂದ್ರ ಕುಮಾರ್‌ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಆತ ʻನೇಹಾʼ (Neha) ಎಂಬ ಹ್ಯಾಂಡ್ಲರ್‌ ಮೂಲಕ ರಕ್ಷಣಾ ವಲಯದ ಸೂಕ್ಷ್ಮ ಮಾಹಿತಿಗಳನ್ನ ಹಂಚಿಕೊಂಡಿರುವುದು ತಿಳಿದುಬಂದಿದೆ. ಈ ಮಾಹಿತಿಯನ್ನ ಇತರ ಕಾನೂನು ಸಂಸ್ಥೆಗಳೊಂದಿಗೆ ಹಂಚಿಕೊಂಡಿರುವುದಾಗಿ ಚೌಧರಿ ವಿವರಿಸಿದ್ದಾರೆ.

    ʻನೇಹಾʼ ಹೆಸರಿನ ಹ್ಯಾಂಡ್ಲರ್‌ ಕಳೆದ ಒಂದು ವರ್ಷದ ಹಿಂದೆ ಫೇಸ್‌ ಮೂಲಕ ರವೀಂದ್ರನನ್ನ ಸಂಪರ್ಕಿಸಿದ್ದಳು. ಈಕೆಯೊಂದಿಗೆ ರಸಹ್ಯ ಡೇಟಾ ಹಂಚಿಕೊಳ್ಳುತ್ತಿದ್ದ ರವೀಂದ್ರ ತನ್ನ ಕೋಡನ್ನು ಮರೆ ಮಾಚಲು ʻಚಂದನ್‌ ಸ್ಟೋರ್‌ ಕೀಪರ್‌-2ʼ ಎಂದು ಸೇವ್‌ ಮಾಡಿಕೊಂಡಿದ್ದ. ಹಣದ ಆಮಿಷಕ್ಕೆ ಒಳಗಾಗಿ‌ ವಾಟ್ಸಪ್‌ ಮೂಲಕವೂ ಅನೇಕ ಗೌಪ್ಯ ಮಾಹಿತಿಗಳನ್ನ ಹಂಚಿಕೊಂಡಿದ್ದ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

    ಸಮಗ್ರ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ರವೀಂದ್ರನನ್ನ ಆಗ್ರಾದಲ್ಲಿ ಬಂಧಿಸಿದ್ದಾರೆ. ಇದೇ ವೇಳೆ ಆತನ ಸಹಚರನನ್ನೂ ಬಂಧಿಸಲಾಗಿದ್ದು, ವಾಟ್ಸಪ್ ಚಾಟ್‌, ವರ್ಗೀಕೃತ ದಾಖಲೆ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಕೊಂಡಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

  • ಯೋಗಿ ನಿವಾಸಕ್ಕೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿ ಶವ ರೈಲ್ವೇ ಹಳಿ ಮೇಲೆ ಪತ್ತೆ!

    ಯೋಗಿ ನಿವಾಸಕ್ಕೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿ ಶವ ರೈಲ್ವೇ ಹಳಿ ಮೇಲೆ ಪತ್ತೆ!

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ನಿವಾಸಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಯೊಬ್ಬರ ಶವ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಸಿಬ್ಬಂದಿಯನ್ನು ಘಾಜಿಯಾಬಾದ್‌ನ 47ನೇ ಬೆಟಾಲಿಯನ್, ಎಚ್-ದಲ್ ಪಿಎಸಿಗೆ ಸೇರಿದ ಅಂಕುರ್ ಕುಮಾರ್ (26) ಎಂದು ಗುರುತಿಸಲಾಗಿದೆ. ಅವರ ಮೃತದೇಹ ಭಾನುವಾರ ಮುಂಜಾನೆ 6:30ರ ಸುಮಾರಿಗೆ ಗುಲಾ ಫಾಟಕ್ ಬಳಿ ಪತ್ತೆಯಾಗಿದೆ. ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಮೊಬೈಲ್ ಫೋನ್ ಹತ್ತಿರದಲ್ಲಿ ಕಂಡುಬಂದಿದ್ದು, ಕರೆ ಮಾಡಿದಾಗ, ರಿಂಗ್‌ ಆಗಿದ್ದರಿಂದ ಶವದ ಗುರುತು ಪತ್ತೆಹಚ್ಚಲು ಸಹಕಾರಿ ಆಯಿತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಅಂಶಿಕಾ ವರ್ಮಾ ತಿಳಿಸಿದ್ದಾರೆ.

    ಮೃತ ಅಂಕುರ್‌ ಕುಮಾರ್ ಅವರು ಮುಜಾಫರ್‌ನಗರದ ಸಿಖೇಡಾ ಪೊಲೀಸ್ ಠಾಣೆ ಪ್ರದೇಶದ ಮನೋಹರ ಗ್ರಾಮದ ನಿವಾಸಿ ರಾಕೇಶ್ ಕುಮಾರ್ ಅವರ ಪುತ್ರ.‌ ಅವರನ್ನು ಲಕ್ನೋದಲ್ಲಿರುವ (Lucknow) ಮುಖ್ಯಮಂತ್ರಿ ನಿವಾಸದಲ್ಲಿ ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಅಂಕುರ್‌ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಕೌಟುಂಬಿಕ ಕಲಹ – ಹೊಸವರ್ಷಕ್ಕೂ ಮುನ್ನಾದಿನವೇ ತಾಯಿ, ನಾಲ್ವರು ಸಹೋದರಿಯರ ಹತ್ಯೆಗೈದ ಯುವಕ

    ಕೌಟುಂಬಿಕ ಕಲಹ – ಹೊಸವರ್ಷಕ್ಕೂ ಮುನ್ನಾದಿನವೇ ತಾಯಿ, ನಾಲ್ವರು ಸಹೋದರಿಯರ ಹತ್ಯೆಗೈದ ಯುವಕ

    ಲಕ್ನೋ: ಕೌಟುಂಬಿಕ ಕಲಹದ (Family Dispute) ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಹತ್ಯೆ ಮಾಡಿರುವ ಘಟನೆ ಯುಪಿ ರಾಜಧಾನಿ ಲಕ್ನೋದ ಹೋಟೆಲ್‌ನಲ್ಲಿ (Lucknow Hotel) ನಡೆದಿದೆ.

    ಆರೋಪಿಯನ್ನು ಅರ್ಷದ್ ಎಂದು ಗುರುತಿಸಲಾಗಿದ್ದು, ಕುಟುಂಬಸ್ಥರಿಗೆ ಡ್ರಿಂಕ್ಸ್‌ ಮತ್ತು ಆಹಾರದಲ್ಲಿ ಅಮಲಿನ ಪದಾರ್ಥ ನೀಡಿ ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ (Preliminary Investigation) ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ‌. ಇದನ್ನೂ ಓದಿ: 8 ಗಂಟೆ ಕೆಲಸ ಮಾಡ್ತಾ ಕುಳಿತರೆ ಹೆಂಡ್ತಿ ಓಡಿಹೋಗ್ತಾಳೆ – ಗೌತಮ್‌ ಅದಾನಿ ಹಾಸ್ಯ!

    ಆಗ್ರಾ ಮೂಲದ ಕುಟುಂಬವು ಡಿಸೆಂಬರ್ 30 ರಿಂದ ಲಕ್ನೋದ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಮೃತರನ್ನು ಆರೋಪಿ ಅರ್ಷದ್ ತಾಯಿ ಅಸ್ಮಾ ಮತ್ತು ಅವರ ಸಹೋದರಿಯರು ಕ್ರಮವಾಗಿ 9, 16, 18 ಮತ್ತು 19 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದೆ. ಅಮಲಿನ ಪದಾರ್ಥ ನೀಡಿದ ಬಳಿಕ ಕೆಲವರನ್ನು ಕತ್ತು ಹಿಸುಕಿ, ಇನ್ನೂ ಕೆಲವರನ್ನು ಬ್ಲೇಡ್ ಬಳಿಸಿ ಹತ್ಯೆ ಮಾಡಿದ್ದಾನೆ.

    ಘಟನೆಯ ನಂತರ ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ 24 ವರ್ಷದ ಅರ್ಷದ್‌ನನ್ನು ಹೋಟೆಲ್‌ನಲ್ಲಿ ಬಂಧಿಸಿದ್ದಾರೆ. ಫೋರೆನ್ಸಿಕ್ ತಂಡವು ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದ ನಂತರ ಅಪರಾಧದ ಸ್ಥಳವನ್ನು ಸೀಲ್ ಮಾಡಿದೆ. ಇದನ್ನೂ ಓದಿ: 2025 ನಿಮಗೆ ಯಶಸ್ಸು, ಕೊನೆಯಿಲ್ಲದ ಸಂತೋಷ ತರಲಿ: ಜನತೆಗೆ ಹೊಸ ವರ್ಷದ ಶುಭಕೋರಿದ ಪ್ರಧಾನಿ ಮೋದಿ

    ಪೊಲೀಸ್ ಮೂಲಗಳ ಪ್ರಕಾರ, ಘಟನೆಗೂ ಮುನ್ನ ಕುಟುಂಬ ಸದಸ್ಯರಿಗೆ ಅಮಲಿನ ಪದಾರ್ಥ ಇರುವ ಆಹಾರ ಬಡಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಅರ್ಷದ್‌ನ ತಂದೆ ಬಾದರ್‌ನನ್ನೂ ಶಂಕಿತ ಆರೋಪಿ ಎಂದು ಗುರುತಿಸಲಾಗಿದೆ. ಆದ್ರೆ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

    ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಕೊಲೆಗಾರನ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಬಹಿರಂಗಪಡಿಸಬಹುದು ಎಂದು ಲಕ್ನೋದ ಉನ್ನತ ಪೊಲೀಸ್ ಅಧಿಕಾರಿ ರವೀನಾ ತ್ಯಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಮತ ಖರೀದಿ ಯತ್ನವನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ – ಭಾಗವತ್‌ಗೆ ಕೇಜ್ರಿವಾಲ್ ಪ್ರಶ್ನೆ

    ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ವಕ್ತಾರ ಫಕ್ರುಲ್ ಹಸನ್ ಚಂದ್, ಕುಟುಂಬವು ಇನ್ನಿಲ್ಲದಿರುವುದು ದುಃಖಕರವಾಗಿದೆ. ನಿರುದ್ಯೋಗ, ಒತ್ತಡ, ಬಡತನಬವೂ ಹತ್ಯೆಯ ಹಿಂದಿನ ಒಂದು ಕಾರಣವಾಗಿರಬಹುದು. ನಮ್ಮ ಪಕ್ಷವು ಸಂತ್ರಸ್ತರ ಪರವಾಗಿ ನಿಂತಿದೆ ಮತ್ತು ಅವರ ಸಾವಿನ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

  • Uttar Pradesh | ಖಾಲಿಸ್ತಾನ್‌ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರು ಎನ್‌ಕೌಂಟರ್‌

    Uttar Pradesh | ಖಾಲಿಸ್ತಾನ್‌ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರು ಎನ್‌ಕೌಂಟರ್‌

    ಲಕ್ನೋ: ನಿಷೇಧಿತ ಸಂಘಟನೆ ಖಲಿಸ್ತಾನ್‌ ಕಮಾಂಡೋ ಫೋರ್ಸ್‌ನ (ಖಲಿಸ್ತಾನ್‌ ಜಿಂದಾಬಾದ್‌ ಫೋರ್ಸ್‌) ಮೂವರು ಭಯೋತ್ಪಾದಕರನ್ನು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್‌ (Encounter) ಮಾಡಿದ್ದಾರೆ. ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಎನ್‌ಕೌಂಟರ್‌‌ನಲ್ಲಿ ಹತರಾದ ಖಲಿಸ್ತಾನಿ ಭಯೋತ್ಪಾದಕರನ್ನು (Khalistani Terrorist) ಗುರ್ವಿಂದರ್ ಸಿಂಗ್ (25), ವೀರೇಂದ್ರ ಸಿಂಗ್ ಅಲಿಯಾಸ್ ರವಿ (23), ಮತ್ತು ಜಸ್ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ (18) ಎಂದು ಗುರುತಿಸಿದೆ. ಹತರು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಪೊಲೀಸ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

    ಎನ್‌ಕೌಂಟರ್ ನಂತರ ಪೊಲೀಸರು ಎರಡು ಎಕೆ -47 ರೈಫಲ್‌ಗಳು, ಎರಡು ಗ್ಲಾಕ್ ಪಿಸ್ತೂಲ್‌ಗಳು ಮತ್ತು ಹಲವು ಮ್ಯಾಕ್ಸಿನ್ ಜೀವಂತ ಗುಂಡುಗಳನ್ನು ಮೃತರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪಿಲಿಭಿತ್ ಜಿಲ್ಲೆಯ ಪುರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಮೂವರು ಆರೋಪಿಗಳ ಉಪಸ್ಥಿತಿಯ ಬಗ್ಗೆ ಪಂಜಾಬ್ ಪೊಲೀಸರ ತಂಡವು ಪಿಲಿಭಿತ್ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮೂವರು ವ್ಯಕ್ತಿಗಳು ಪುರನ್‌ಪುರದಲ್ಲಿ ಅನುಮಾನಾಸ್ಪದ ವಸ್ತುಗಳೊಂದಿಂಗೆ ಸಂಚರಿಸುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು.

    ಮಾಹಿತಿಯ ಆಧಾರದ ಮೇಲೆ, ಪೊಲೀಸರು ಕಾರ್ಯಚರಣೆಗೆ ತೆರಳಿದಾಗ ಮೂವರು ಶಂಕಿತರು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದರು. ಬಳಿಕ ಪೊಲೀಸರ ಪ್ರತಿ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟರು. ಪಂಜಾಬ್ ಪೊಲೀಸ್ ಮತ್ತು ಉತ್ತರ ಪ್ರದೇಶ ಪೊಲೀಸರ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿವೆ. ಪಂಜಾಬ್ ಪೊಲೀಸ್ ತಂಡವು ಅವರ ವಿದೇಶಿ ಸಂಪರ್ಕಗಳ ಬಗ್ಗೆಯೂ ತಿಳಿಸಿದೆ.

    ತನಿಖೆ ಇಡೀ ಘಟನೆಯ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಪಿಲಿಬಿಹಿತ್ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಶನಿವಾರ ಡಿಸೆಂಬರ್ 21 ರಂದು ಗುರುದಾಸ್‌ಪುರ ಜಿಲ್ಲೆಯ ಕಲಾನೌರ್ ಉಪವಿಭಾಗದಲ್ಲಿರುವ ಕೈಬಿಡಲಾದ ಪೊಲೀಸ್ ಪೋಸ್ಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ನಡೆದ ದಾಳಿಯಲ್ಲಿ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿರಲಿಲ್ಲ.

  • ಡಿ.10ರ ವರೆಗೆ ಸಂಭಾಲ್‌ಗೆ ಹೊರಗಿನವರ ಪ್ರವೇಶ ನಿಷೇಧ; ಎಸ್‌ಪಿ ಮುಖಂಡರಿಗೆ ಗೃಹ ಬಂಧನ

    ಡಿ.10ರ ವರೆಗೆ ಸಂಭಾಲ್‌ಗೆ ಹೊರಗಿನವರ ಪ್ರವೇಶ ನಿಷೇಧ; ಎಸ್‌ಪಿ ಮುಖಂಡರಿಗೆ ಗೃಹ ಬಂಧನ

    ಲಕ್ನೋ: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಭಾಲ್ (Sambhal) ಜಿಲ್ಲಾಡಳಿತ ಡಿಸೆಂಬರ್ 10ರ ವರೆಗೆ ಹೊರಗಿನವರ ಪ್ರವೇಶವನ್ನು ನಿಷೇಧಿಸಿ ಶನಿವಾರ ಆದೇಶ ಪ್ರಕಟಿಸಿದೆ. ‌

    ಡಿ.10ರ ವರೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಹೊರಗಿನವರು, ಯಾವುದೇ ಸಾಮಾಜಿಕ ಸಂಘಟನೆ ಅಥವಾ ಯಾವುದೇ ಸಾರ್ವಜನಿಕ ಪ್ರತಿನಿಧಿಗಳು ಜಿಲ್ಲೆಯ ಗಡಿ ಪ್ರವೇಶಿಸುವಂತಿಲ್ಲ ಎಂದು ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಪ್ರಕಟಿಸಿದ್ದಾರೆ.

    ಶಾಹಿ ಜಾಮಾ ಮಸೀದಿ (Shahi Jama Masjid) ಸಂಕೀರ್ಣದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಾಜವಾದಿ ಪಕ್ಷದ 15 ಸದಸ್ಯರ ನಿಯೋಗ ಸಂಭಾಲ್‌ಗೆ ಭೇಟಿ ನೀಡುಕ್ಕೂ ಮುನ್ನ ಈ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ. ಈ ಕುರಿತು ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಮಾತನಾಡುತ್ತಾ, ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರು ತಮಗೆ ಕರೆ ಮಾಡಿ ಸಂಭಾಲ್‌ಗೆ ಭೇಟಿ ನೀಡದಂತೆ ವಿನಂತಿಸಿದ್ದಾರೆ. ಡಿಎಂ ಸಂಭಾಲ್ ಕೂಡ ನನಗೆ ಕರೆ ಮಾಡಿ ಹೊರಗಿನವರ ಪ್ರವೇಶ ನಿಷೇಧವನ್ನು ಡಿಸೆಂಬರ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದರು. ಹಾಗಾಗಿ ನಾನು ಈಗ ಪಕ್ಷದ ಕಚೇರಿಗೆ ಭೇಟಿ ನೀಡಿ ನಮ್ಮ ಮುಂದಿನ ಕ್ರಮವನ್ನು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಹೇಳಿದರು.

    ಸಂಭಾಲ್‌ಗೆ ನಾವು ಭೇಟಿ ನೀಡಿದರೆ, ಹಲವಾರು ತಪ್ಪುಗಳು ಬಹಿರಂಗವಾಗುತ್ತವೆ. ಆದ್ದರಿಂದ ಯುಪಿ ಸರ್ಕಾರ ಸಂಭಾಲ್‌ನಲ್ಲಿ ತನ್ನ ತಪ್ಪುಗಳನ್ನು ಮರೆಮಾಚಲು ನಿರ್ಧರಿಸಿದೆ ಎಂದು ತಿಳಿಸಿದರು.

    ಶುಕ್ರವಾರ ರಾತ್ರಿಯಿಂದಲೇ ಪಾಂಡೆ ನಿವಾಸದ ಹೊರಗೆ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸೂಚನೆ ಮೇರೆಗೆ ಪಕ್ಷದ ನಿಯೋಗ ಶನಿವಾರ ಸಂಭಾಲ್‌ಗೆ ಹೋಗಲಿದೆ ಎಂದು ಎಸ್‌ಪಿ ರಾಜ್ಯಾಧ್ಯಕ್ಷ ಶ್ಯಾಮ್ ಲಾಲ್ ಪಾಲ್ ತಿಳಿಸಿದ್ದರು. ಎಸ್ಪಿ ನಿಯೋಗವು ಭೇಟಿ ನೀಡಿ, ಅಲ್ಲಿನ ಹಿಂಸಾಚಾರದ ಕುರಿತು ವರದಿ ಮಾಡಿ, ಪಕ್ಷದ ಮುಖ್ಯಸ್ಥರಿಗೆ ಸಲ್ಲಿಸಲಿದೆ ಎಂದು ಹೇಳಿದ್ದರು.

    ಒಂದು ದಿನದ ಹಿಂದೆಯಷ್ಟೇ ಉತ್ತರ ಪ್ರದೇಶದ ಸಂಬಾಲ್‌ನಲ್ಲಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ತೆರಳುವಂತೆ ಜಾಮಾ ಮಸೀದಿಯ (Jama Masjid) ಶಾಹಿ ಈದ್ಗಾ ಸಮಿತಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೇ ಈದ್ಗಾ ಸಮಿತಿಯು ಹೈಕೋರ್ಟ್‌ಗೆ ತೆರಳುವವರೆಗೆ ಮಸೀದಿ ಸರ್ವೆ (Sambhal Mosque Survey) ಪ್ರಕರಣವನ್ನು ಮುಂದುವರಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಶುಕ್ರವಾರ ಹೇಳಿತ್ತು.

  • ಟ್ರಕ್‌ಗೆ ಸ್ಕಾರ್‌ಪಿಯೊ ಡಿಕ್ಕಿ – ಭೀಕರ ಅಪಘಾತಕ್ಕೆ ಐವರು ವೈದ್ಯರ ದುರ್ಮರಣ

    ಟ್ರಕ್‌ಗೆ ಸ್ಕಾರ್‌ಪಿಯೊ ಡಿಕ್ಕಿ – ಭೀಕರ ಅಪಘಾತಕ್ಕೆ ಐವರು ವೈದ್ಯರ ದುರ್ಮರಣ

    ಲಕ್ನೋ: ಸ್ಕಾರ್‌ಪಿಯೊ ಎಸ್‌ಯುವಿ (Scorpio SUV) ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯರು ಸಾವನ್ನಪ್ಪಿರುವ ಘಟನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇನಲ್ಲಿ (Agra Lucknow Express Way) ನಡೆದಿದೆ.

    ಮೃತಪಟ್ಟವರು ಉತ್ತರ ಪ್ರದೇಶದ (Uttar Pradesh) ವೈದ್ಯಕೀಯ ವಿಜ್ಞಾನ ವಿವಿಯಲ್ಲಿ ಸ್ನಾತಕೋತರ ತರಬೇತಿ ಪಡೆದ ವೈದ್ಯರು. ದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.ಇದನ್ನೂ ಓದಿ: ಕೇಂದ್ರದಿಂದ ಅನುದಾನ ತಂದು ಸಂಪನ್ಮೂಲ ಹೆಚ್ಚಿಸಿಕೊಳ್ತೇವೆ – ಪರಮೇಶ್ವರ್‌

    ಮೃತರನ್ನು ಆಗ್ರಾ ಮೂಲದ ಡಾ. ಅನಿರುದ್ಧ್ ವರ್ಮಾ (29), ಭದೋಹಿಯ ಡಾ. ಸಂತೋಷ್ ಕುಮಾರ್ ಮೌರ್ಯ (46), ಕನೌಜ್‌ನ ಡಾ. ಅರುಣ್ ಕುಮಾರ್ (34) ಮತ್ತು ಬರೇಲಿಯ ಡಾ. ನಾರ್ದೇವ್ (35) ನಾಲ್ವರು ವೈದ್ಯರಾಗಿದ್ದು ಹಾಗೂ ಇನ್ನೋರ್ವನ್ನು ಲ್ಯಾಬ್ ಟೆಕ್ನಿಷಿಯನ್ ಡಾ. ಜೈವೀರ್ ಸಿಂಗ್ (38) ಎಂದು ಗುರುತಿಸಲಾಗಿದೆ.

    ಪೊಲೀಸರ ಮಾಹಿತಿ ಪ್ರಕಾರ, ಅತಿವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರಿಂದ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಕ್ಕದಲ್ಲಿದ್ದ ಟಕ್ರ‍್ಗೂ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.

    ಮೃತಪಟ್ಟವರನ್ನು ಹೊರತುಪಡಿಸಿ ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಚಿಕಿತ್ಞೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಜಾನ್ಸ್ ಟಿನ್ನಿಸ್‌ವುಡ್ 112ನೇ ವಯಸ್ಸಿನಲ್ಲಿ ನಿಧನ

  • ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಮಹಿಳೆಯ ಶವ ತುಂಬಿದ್ದ ಸೂಟ್‌ಕೇಸ್ ಪತ್ತೆ

    ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಮಹಿಳೆಯ ಶವ ತುಂಬಿದ್ದ ಸೂಟ್‌ಕೇಸ್ ಪತ್ತೆ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಹಾಪುರ್ ಜಿಲ್ಲೆಯ ದೆಹಲಿ-ಲಕ್ನೋ ಹೆದ್ದಾರಿಯಲ್ಲಿ (Delhi-Lucknow Highway) ಮಹಿಳೆಯೊಬ್ಬಳ ಮೃತದೇಹ ತುಂಬಿದ ಸೂಟ್‌ಕೇಸ್‌ ಪತ್ತೆಯಾಗಿದೆ. ಮೃತ ಮಹಿಳೆಯ ವಯಸ್ಸು ಸುಮಾರು 25 ರಿಂದ 30 ವರ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ.

    ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಜನ ಈ ಸೂಟ್‌ಕೇಸ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಸೂಟ್‌ಕೇಸ್‌ ಪರಿಶೀಲಿಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಮೃತದೇಹದ ಮೇಲೆ ಅಲ್ಲಲ್ಲಿ ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೂಟ್‌ಕೇಸ್‌ ಪತ್ತೆಯಾದ ಸ್ಥಳದಲ್ಲಿ ಪೊಲೀಸರು ಹಾಗೂ ಫೋರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಮೃತದೇಹದ ಜೊತೆಗೆ ಬಟ್ಟೆಗಳು ಸಹ ಅದರಲ್ಲಿದ್ದವು. ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

    ಮಹಿಳೆ ಶುಕ್ರವಾರ ಸಾವನ್ನಪ್ಪಿರುವ ಸಾಧ್ಯತೆ ಇದೆ. ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಗುರುತು ಪತ್ತೆಹಚ್ಚಲು ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಎಎಸ್ಪಿ ವಿನೀತ್ ಭಟ್ನಾಗರ್ ಹೇಳಿದ್ದಾರೆ.