Tag: Lucknow Super Giants

  • ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

    ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

    ಮುಂಬೈ: ರಾಹುಲ್ ಭರ್ಜರಿ ಶತಕದಾಟ ಮತ್ತು ಬೌಲರ್‌ಗಳ ಶ್ರೇಷ್ಠ ನಿರ್ವಹಣೆಯಿಂದ ಮುಂಬೈ ತಂಡವನ್ನು ಕಟ್ಟಿಹಾಕಿದ ಲಕ್ನೋ 36 ರನ್‍ಗಳ ಭರ್ಜರಿ ಜಯ ಗಳಿಸಿತು.

    ಲಕ್ನೋ ಬೌಲರ್‌ಗಳ ಸಂಘಟಿತ ಪ್ರದರ್ಶನದ ಮುಂದೆ ಮುಂಬೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್‍ ಗಳಿಸಲಷ್ಟೇ ಶಕ್ತವಾಗಿ ಸತತ 8ನೇ ಸೋಲುಂಡಿತು.

    ಗೆಲ್ಲಲು 169 ರನ್ ಗುರಿ ಬೆನ್ನಟ್ಟಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಇಶಾನ್ ಕಿಶನ್ 8 ರನ್ (20 ಎಸೆತ) ವಿಕೆಟ್ ನೀಡಿ ಹೊರ ನಡೆದರು. ನಂತರ ಬಂದ ಡೆವಾಲ್ಡ್ ಬ್ರೆವಿಸ್ 3 ರನ್‍ಗೆ ಸುಸ್ತಾದರು. ಇತ್ತ ರೋಹಿತ್ ಶರ್ಮಾ 39 ರನ್ (31 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ಸಿಡಿಯುವ ಸೂಚನೆ ನೀಡಿ ಔಟ್ ಆದರು. ನಂತರ ತಿಲಕ್ ವರ್ಮಾ 38 ರನ್ (27 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಗೆಲುವಿಗಾಗಿ ಹೋರಾಟ ನಡೆಸಿ ವಿಕೆಟ್ ಕೈಚೆಲ್ಲಿಕೊಂಡರು ಇದರೊಂದಿಗೆ ಮುಂಬೈ ಸೋಲು ಖಾತ್ರಿಯಾಯಿತು.

    ರಾಹುಲ್ ರಣಾರ್ಭಟ
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭಿಕ ಆಟಗಾರ ಡಿ ಕಾಕ್‍ರನ್ನು 10 ರನ್ (9 ಎಸೆತ, 1 ಸಿಕ್ಸ್) ಬೇಗನೆ ಕಳೆದುಕೊಂಡಿತು. ಆದರೆ ಇತ್ತ ಕೆ.ಎಲ್ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್‍ಗೆ ಮುಂದಾದರು.

    ರಾಹುಲ್‍ಗೆ ಉತ್ತಮ ಸಾಥ್ ನೀಡಿದ ಮನೀಶ್ ಪಾಂಡೆ 2ನೇ ವಿಕೆಟ್‍ಗೆ 58 ರನ್ (47 ಎಸೆತ) ಜೊತೆಯಾಟವಾಡಿ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ದಾಳಿಗಿಳಿದ ಪೋಲಾರ್ಡ್, 22 ರನ್ (22 ಎಸೆತ, 1 ಸಿಕ್ಸ್) ಸಿಡಿಸಿದ್ದ ಮನೀಶ್ ಪಾಂಡೆ ವಿಕೆಟ್ ಪಡೆಯಲು ಯಶಸ್ವಿಯಾದರು.

    ಆ ಬಳಿಕ ಏಕಾಏಕಿ ಕುಸಿತಕಂಡ ಲಕ್ನೋಗೆ ರಾಹುಲ್ ಏಕಾಂಗಿ ಹೋರಾಟದ ಮೂಲಕ ಬಲ ತುಂಬಿದರು. ಮುಂಬೈ ಬೌಲರ್‌ಗಳಿಗೆ ಸೆಡ್ಡು ಹೊಡೆದ ರಾಹುಲ್ 15ನೇ ಆವೃತ್ತಿ ಐಪಿಎಲ್‍ನ 2ನೇ ಶತಕ ಸಿಡಿಸಿ ಮೆರೆದಾಡಿದರು. ಆರಂಭದಿಂದ ಕೊನೆಯ ಎಸೆತದವರೆಗೆ ಬ್ಯಾಟ್‍ಬೀಸಿದ ರಾಹುಲ್ ಅಜೇಯ 103 ರನ್ (62 ಎಸೆತ, 12 ಬೌಂಡರಿ, 4 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಅಂತಿಮವಾಗಿ ಲಕ್ನೋ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಪೇರಿಸಿತು.

  • ಶತಕ ಸಿಡಿಸಿ ರಾರಾಜಿಸಿದ ರಾಹುಲ್ – ಮುಂಬೈಗೆ ಸತತ 6ನೇ ಸೋಲು

    ಶತಕ ಸಿಡಿಸಿ ರಾರಾಜಿಸಿದ ರಾಹುಲ್ – ಮುಂಬೈಗೆ ಸತತ 6ನೇ ಸೋಲು

    ಮುಂಬೈ: ಮುಂಬೈ ವಿರುದ್ಧ ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿದ ಫಲವಾಗಿ ಲಕ್ನೋ 18 ರನ್‌ಗಳಿಂದ ಗೆದ್ದರೆ, 15ನೇ ಆವೃತ್ತಿ ಐಪಿಎಲ್‍ನಲ್ಲಿ ಹೀನಾಯ ಪ್ರದರ್ಶನ ನೀಡಿದ ಮುಂಬೈ ತಂಡ ಸತತ 6ನೇ ಸೋಲುಕಂಡು ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದೆ.

    ಮುಂಬೈ ಗೆಲುವಿಗೆ ಕೀರನ್ ಪೋಲಾರ್ಡ್ ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದರೂ ಜಯ ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 181 ರನ್ ಸಿಡಿಸಿ 18  ರನ್‌ಗಳಿಂದ ಸೋಲೊಪ್ಪಿಕೊಂಡಿತು.

    200 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ 6 ರನ್ (7 ಎಸೆತ, 1 ಬೌಂಡರಿ) ಬಾರಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಇಶಾನ್ ಕಿಶನ್ 13 ರನ್ (17 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಬಳಿಕ ಡೆವಾಲ್ಡ್ ಬ್ರೆವಿಸ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾಗಿ 31 ರನ್ (13 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಬಂದ ಸೂರ್ಯ ಕುಮಾರ್ ಯಾದವ್ 37 ರನ್ (27 ಎಸೆತ, 3 ಬೌಂಡರಿ) ಮತ್ತು ತಿಲಕ್ ವರ್ಮಾ 26 ರನ್ (2 ಬೌಂಡರಿ) ಸಿಡಿಸಿ ತಂಡಕ್ಕೆ ಅಲ್ಪಮಟ್ಟಿನ ಕೊಡುಗೆ ನೀಡಿದರು.

    ಈ ಮೊದಲು ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಎದುರಾಳಿ ಲಕ್ನೋ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಲಕ್ನೋ ತಂಡ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಂತೆ ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‍ನಲ್ಲಿ ಆರ್ಭಟಿಸಿದರು. ಆರಂಭದಿಂದಲೇ ಮುಂಬೈ ಬೌಲರ್‌ಗಳಿಗೆ ಬೆವರಿಳಿಸಿದ ಈ ಜೋಡಿ ಮೊದಲ ವಿಕೆಟ್‍ಗೆ 52 ರನ್ (33 ಎಸೆತ) ಸಿಡಿಸಿ ಉತ್ತಮ ಆರಂಭ ನೀಡಿತು. ಈ ವೇಳೆ ದಾಳಿಗಿಳಿದ ಫ್ಯಾಬಿಯನ್ ಅಲೆನ್, ಡಿ ಕಾಕ್ 24 ರನ್ (13 ಎಸೆತ, 4 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ಮುಂಬೈಗೆ ಕಾಡಿದ ಕನ್ನಡಿಗ ಜೋಡಿ
    ಡಿ ಕಾಕ್ ಔಟ್ ಆದ ಬಳಿಕ ಜೊತೆಯಾದ ಮನೀಶ್ ಪಾಂಡೆ ಮತ್ತು ಕೆ.ಎಲ್ ರಾಹುಲ್ ತಮ್ಮ ಆಟಕ್ಕೆ ವೇಗ ನೀಡಿದರು. ಇಬ್ಬರೂ ಮುಂಬೈ ಬೌಲರ್‌ಗಳ ಬೆಂಕಿ ಚೆಂಡಿಗೆ ಬೌಂಡರಿ, ಸಿಕ್ಸರ್‌ಗಳನ್ನು ಸರಾಗವಾಗಿ ಸಿಡಿಸಿದ ಈ ಜೋಡಿ 2ನೇ ವಿಕೆಟ್‍ಗೆ 72 ರನ್ (47 ಎಸೆತ) ಜೊತೆಯಾಟವಾಡಿತು. ಈ ವೇಳೆ ಮನೀಶ್ ಪಾಂಡೆ 38 ರನ್ (29 ಎಸೆತ, 6 ಬೌಂಡರಿ) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡರು.

    ರಾಹುಲ್ ಶತಕದ ವೈಭವ
    ಇತ್ತ ರಾಹುಲ್ ಮಾತ್ರ ಮುಂಬೈ ಬೌಲರ್‌ಗಳನ್ನು ಕೊನೆಯ ಎಸೆತದವರೆಗೆ ಕಾಡಿದರು. ಜೊತೆಗೆ ಐಪಿಎಲ್ ಇತಿಹಾಸದಲ್ಲಿ ತಮ್ಮ ಮೂರನೇ ಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ ರಾಹುಲ್ ಅಜೇಯ 103 ರನ್ (60 ಎಸೆತ, 9 ಬೌಂಡರಿ, 5 ಸಿಕ್ಸ್) ಚಚ್ಚಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಲಕ್ನೋ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಸಿಡಿಸಿತು.

    ರನ್ ಏರಿದ್ದು ಹೇಗೆ
    50 ರನ್ 32 ಎಸೆತ
    100 ರನ್ 69 ಎಸೆತ
    150 ರನ್ 90 ಎಸೆತ
    199 ರನ್ 120 ಎಸೆತ

  • ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬೆನ್ನೇರಿದ ಬ್ಯಾನ್ ಭೀತಿ

    ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬೆನ್ನೇರಿದ ಬ್ಯಾನ್ ಭೀತಿ

    ಮುಂಬೈ: 15ನೇ ಐಪಿಎಲ್ ಆವೃತ್ತಿಗೆ ಹೊಸ ತಂಡಗಳಾಗಿ ಸೇರ್ಪಡೆಗೊಂಡರೂ ಅಬ್ಬರ ಆಟದಿಂದ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮಿಂಚುತ್ತಿವೆ. ಆದರೆ 5 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಸತತ 5 ಪಂದ್ಯಗಳಲ್ಲಿ ಸೋತು, ಟೀಕೆಗಳಿಗೆ ಗುರಿಯಾಗಿದೆ.

    ರೋಹಿತ್ ಶರ್ಮಾ ನಾಯಕತ್ವವಿದ್ದರೆ ಗೆಲುವು ಬಹುತೇಕ ಖಚಿತ ಎನ್ನುತ್ತಿದ್ದವರು, ಸರಣಿ ಸೋಲಿನಿಂದಾಗಿ ಟೀಕೆ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ರೋಹಿತ್ ಶರ್ಮಾಗೆ ಬ್ಯಾನ್ ಭೀತಿ ಶುರುವಾಗಿದೆ. ಇದನ್ನೂ ಓದಿ: 7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ

    ROHITH SHARMA (1)

    ಹೌದು. ರೋಹಿತ್ ಶರ್ಮಾ ಸರಣಿ ಪಂದ್ಯಗಳಲ್ಲಿ ತಮ್ಮ ನಾಯಕತ್ವ ವಿಫಲವಾಗುತ್ತಿರುವ ತಲೆ ಬಿಸಿಯ ನಡುವೆಯೇ ಪಂದ್ಯದಿಂದ ನಿಷೇಧವಾಗುವ ಭಯದಲ್ಲಿದ್ದಾರೆ. ಈ ನಿಷೇಧದಿಂದ ತಪ್ಪಿಸಿಕೊಳ್ಳಲು ಮುಂದಿನ ಪಂದ್ಯಗಳಲ್ಲಿ ಎಚ್ಚರಿಕೆಯ ಆಟವನ್ನು ಆಡಲೇಬೇಕಿರುವ ರೋಹಿತ್ ಶರ್ಮಾ ನಿಷೇಧದಿಂದ ತಪ್ಪಿಸಿಕೊಳ್ಳುತ್ತಾರಾ ಎನ್ನುವುದು ಕಾದುನೋಡಬೇಕಿದೆ.

    ಲಕ್ನೋ ವಿರುದ್ಧ ಗೆಲವು ಅನಿವಾರ್ಯ: ಸತತ 5 ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂದಿನ ಲಕ್ನೋ ಸೂಪರ್‌ಜೈಂಟ್ಸ್ ತಂಡ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ. ಅದಕ್ಕಾಗಿ ರೋಹಿತ್ ಶರ್ಮಾ ಹೊಸ ಆಲೋಚನಾ ಕ್ರಮ ಅನುಸರಿಸಲಿದ್ದಾರೆ. ಈ ಕುರಿತು ನೆನ್ನೆಯಷ್ಟೇ ಪ್ರತಿಕ್ರಿಯೆಯನ್ನೂ ನೀಡಿದ್ದರು.

    IPL

    ಬ್ಯಾನ್ ಭೀತಿಗೆ ಕಾರಣವೇನು?: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈವರೆಗೆ ನಡೆದ ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದು, ದಂಡ ತೆತ್ತಿದೆ. ಈ ಬಾರಿ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಇದೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣ ನಾಯಕ ರೋಹಿತ್ ಶರ್ಮಾಗೆ 12 ಲಕ್ಷ ರೂ. ದಂಡ ಕೂಡ ವಿಧಿಸಲಾಗಿತ್ತು. ಇನ್ನೂ ಕೊನೆಯದ್ದಾಗಿ ಆಡಿದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ನಿಧಾನಗತಿಯ ಬೌಲಿಂಗ್‌ನಿಂದ 24 ಲಕ್ಷ ದಂಡ ತೆತ್ತಿದ್ದಾರೆ ಹಾಗೂ ತಂಡದ ಉಳಿದ ಆಟಗಾರರಿಗೆ 6 ಲಕ್ಷ ದಂಡ ವಿಧಿಸಲಾಗಿದೆ ಈ ಎಲ್ಲ ಕಾರಣಗಳು ಅವರನ್ನು ಬ್ಯಾನ್ ಸಂಕಷ್ಟಕ್ಕೆ ತಂದಿಟ್ಟಿವೆ. ಇದನ್ನೂ ಓದಿ: ಅಯ್ಯರ್‌ಗೆ 12 ಲಕ್ಷ ದಂಡ – ಐಪಿಎಲ್‌ನಲ್ಲಿ ದಂಡ ಹಾಕೋದು ಯಾಕೆ?

    IPL 2022 RR VS LSG

    ಎಂಐಗೆ ಒಂದು ಪಂದ್ಯ ನಿಷೇಧ?: ಮುಂಬೈ ಇಂಡಿಯನ್ಸ್ ಈಗಾಗಲೇ 2 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದು, ಮುಂದಿನ ಪಂದ್ಯದಲ್ಲೂ ಇದೇ ರೀತಿ ನಿಧಾನಗತಿಯ ಬೌಲಿಂಗ್ ಮಾಡಿಸಿದರೆ ರೋಹಿತ್ ಶರ್ಮಾ ಐಪಿಎಲ್ ನಿಯಮದ ಪ್ರಕಾರ 30 ಲಕ್ಷ ರೂ. ದಂಡ ತೆರುವ ಜೊತೆಗೆ, ಮುಂದಿನ ಒಂದು ಪಂದ್ಯದಲ್ಲಿ ನಿಷೇಧಕ್ಕೆ ಒಳಗಾಗಲಿದ್ದಾರೆ ಎಂದು ಐಪಿಎಲ್ ಮಂಡಳಿ ಎಚ್ಚರಿಕೆ ನೀಡಿದೆ.

    ದಂಡ ವಿಧಿಸುವುದು ಏಕೆ?: ಐಪಿಎಲ್ ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ. ಐಪಿಎಲ್ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ: 3 ವಿಕೆಟ್‌ ಕಿತ್ತು ರೋಚಕ ತಿರುವು – ತಾಯಿಯ ಬಗ್ಗೆ ರಶೀದ್‌ ಖಾನ್‌ ಭಾವನಾತ್ಮಕ ಮಾತು

    IPL 2022 RCB VS MI

    ಏನಿದು ಸ್ಟ್ರೆಟಜಿಕ್‌ ಟೈಮ್‌ಔಟ್?: ಪ್ರತಿ ಪಂದ್ಯದಲ್ಲಿ 3 ನಿಮಿಷದ 4 ಸ್ಟ್ರೆಟಜಿಕ್‌ ಟೈಮ್ ಔಟ್ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ ಬೌಲಿಂಗ್ ತಂಡ 6-9 ಓವರ್ ಮಧ್ಯೆ, 2ನೇ ಸ್ಟ್ರೆಟಜಿಕ್‌ ಟೈಮ್ ಔಟ್ ಅನ್ನು ಬ್ಯಾಟಿಂಗ್ ತಂಡ 13-16 ಓವರ್ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.

    ದಂಡ ಯಾಕೆ?: ಐಪಿಎಲ್ ಅಂದ್ರೆ ಬಿಸಿನೆಸ್. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್ ಬಹಳ ಮುಖ್ಯ. ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್ ಮಾಡಿದರೆ ಅದು ಐಪಿಎಲ್ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ.

  • ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ

    ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ

    ಮುಂಬೈ: ಬೌಲಿಂಗ್‍ನಲ್ಲಿ ಚಹಲ್ ಮತ್ತು ಬ್ಯಾಟಿಂಗ್‍ನಲ್ಲಿ ಶಿಮ್ರಾನ್ ಹೆಟ್ಮೆಯರ್ ಭರ್ಜರಿ ಆಟದ ನೆರವಿನಿಂದ ಲಕ್ನೋ ವಿರುದ್ಧ ರಾಜಸ್ಥಾನ ತಂಡ 3 ರನ್‍ಗಳ ರೋಚಕ ಜಯ ದಾಖಲಿಸಿದೆ.

    ರಾಜಸ್ಥಾನ ಗೆದ್ದಿದ್ದು ಹೇಗೆ?
    ಕೊನೆಯ ಓವರ್‌ನಲ್ಲಿ ಲಕ್ನೋ ಗೆಲುವಿಗೆ 15 ರನ್ ಬೇಕಾಗಿತ್ತು. ಕುಲದೀಪ್ ಸೇನ್ ಎಸೆದ ಕೊನೆಯ ಓವರ್‌ನಲ್ಲಿ ಕೇವಲ 11 ರನ್ ಬಿಟ್ಟುಕೊಟ್ಟು ಸೂಪರ್ ಸ್ಪೆಲ್ ಮಾಡಿದರು. ಈ ಮೊದಲು ರಾಜಸ್ಥಾನ ಪರ ಚಹಲ್ 4 ವಿಕೆಟ್ ಕಿತ್ತು ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಹೆಟ್ಮೆಯರ್ ಅರ್ಧಶತಕ ಸಿಡಿಸಿ ಮಿಂಚಿದ ನೆರವಿನಿಂದ ರಾಜಸ್ಥಾನ ತಂಡ 3 ರನ್‍ಗಳ ರೋಚಕ ಗೆಲುವು ಕಂಡಿತು.

    166 ರನ್‍ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡ ನಾಯಕ ಕೆ.ಎಲ್ ರಾಹುಲ್ ಮತ್ತು ಕೆ. ಗೌತಮ್‍ರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಡಿ ಕಾಕ್ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಡಿ ಕಾಕ್ ಆಟ 39 ರನ್ (32 ಎಸೆತ, 2 ಬೌಂಡರಿ, 1 ಸಿಕ್ಸ್)ಗೆ ಅಂತ್ಯಗೊಂಡಿತು. ಲಕ್ನೋ ಪರ ದೀಪಕ್ ಹೂಡಾ 25 ರನ್ ಮತ್ತು ಕೃನಾಲ್ ಪಾಂಡ್ಯ 22 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ದುಷ್ಮಂತ ಚಮೀರ 13 ರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅಜೇಯ 38 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ಲಕ್ನೋ ಗೆಲುವಿಗೆ ಶ್ರಮಿಸಿದರು ಫಲ ನೀಡಲಿಲ್ಲ. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು.


    ಈ ಮೊದಲು ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಆದರೆ ರಾಜಸ್ಥಾನ ತಂಡ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು. ಜೋಸ್ ಬಟ್ಲರ್ 13 ರನ್ (11 ಎಸೆತ, 1 ಬೌಂಡರಿ, 1 ಸಿಕ್ಸ್) ಸಂಜು ಸ್ಯಾಮ್ಸನ್ 13 ರನ್ (12 ಎಸೆತ, 2 ಬೌಂಡರಿ) ಮತ್ತು  ಪಡಿಕ್ಕಲ್ 29 ರನ್ (4 ಬೌಂಡರಿ) ಸಿಡಿಸಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.

    ಆದರೆ ಇನ್ನೊಂದೆಡೆ ಶಿಮ್ರಾನ್ ಹೆಟ್ಮೆಯರ್ ಲಕ್ನೋ ಬೌಲರ್‌ಗಳ ಬೆವರಿಳಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಸ್ಫೋಟಕ ಆಟಕ್ಕೆ ಮುಂದಾದ ಹೆಟ್ಮೆಯರ್ ಅಜೇಯ 59 ರನ್ (36 ಎಸೆತ, 1 ಬೌಂಡರಿ, 6 ಸಿಕ್ಸ್) ಸಿಡಿಸಿ ರಾಜಸ್ಥಾನಕ್ಕೆ ಆಸರೆಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ಆರ್ ಅಶ್ವಿನ್ 28 ರನ್ (23 ಎಸೆತ, 2 ಸಿಕ್ಸ್) ಸಿಡಿಸಿ ನೆರವಾದರು. ಅಂತಿಮವಾಗಿ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಒಟ್ಟುಗೂಡಿಸಿತು.

    ಲಕ್ನೋ ಪರ ಜೇಸನ್ ಹೋಲ್ಡರ್ ಮತ್ತು ಕೆ.ಗೌತಮ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಅವೇಶ್ ಖಾನ್ ಒಂದು ವಿಕೆಟ್ ತನ್ನದಾಗಿಸಿಕೊಂಡರು.

  • ಡೆಲ್ಲಿಗೆ ಡಿಚ್ಚಿ ಹೊಡೆದ ಡಿಕಾಕ್ – ಲಕ್ನೋಗೆ 6 ವಿಕೆಟ್‌ಗಳ ಭರ್ಜರಿ ಜಯ

    ಡೆಲ್ಲಿಗೆ ಡಿಚ್ಚಿ ಹೊಡೆದ ಡಿಕಾಕ್ – ಲಕ್ನೋಗೆ 6 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಪರ ಕ್ವಿಂಟನ್ ಡಿ ಕಾಕ್ ಅಬ್ಬರದ ಆಟದ ನಡುವೆಯೂ ಗೆಲುವಿಗಾಗಿ ಪರದಾಡಿದ ಲಕ್ನೋ ಅಂತಿಮವಾಗಿ 2 ಎಸೆತ ಬಾಕಿ ಇರುವಂತೆ 6 ವಿಕೆಟ್ ಅಂತರದಿಂದ ಗೆದ್ದು ಬೀಗಿತು.

    159 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಲಕ್ನೋ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‍ಗೆ 73 ರನ್ (58 ಎಸೆತ)ಗಳ ಭರ್ಜರಿ ಆರಂಭ ನೀಡಿದರು. ರಾಹುಲ್ 24 ರನ್ (25 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಆದರೂ ಡಿ ಕಾಕ್ ಆರ್ಭಟ ಮಾತ್ರ ನಿಲ್ಲಿಸಲಿಲ್ಲ. ಆದರೆ ಡಿ ಕಾಕ್ ಅಬ್ಬರದ ಬ್ಯಾಟಿಂಗ್ 80 ರನ್ (52 ಎಸೆತ, 9 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಅಂತಿಮವಾಗಿ ಬದೋನಿ ಮತ್ತು ಕೃನಾಲ್ ಪಾಂಡ್ಯ 19.4 ಓವರ್‌ಗಳಲ್ಲಿ ಅಂತ್ಯಕ್ಕೆ 155 ರನ್ ಸಿಡಿಸಿ ಲಕ್ನೋಗೆ 6 ವಿಕೆಟ್‍ಗಳ ಜಯ ತಂದುಕೊಟ್ಟರು.

    ಸಾಧಾರಣ ಮೊತ್ತ ಬೆನ್ನಟ್ಟಿದ ಲಕ್ನೋ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‍ಗೆ 73 ರನ್ (58 ಎಸೆತ)ಗಳ ಭರ್ಜರಿ ಆರಂಭ ನೀಡಿದರು. ರಾಹುಲ್ 24 ರನ್ (25 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಆದರೂ ಡಿ ಕಾಕ್ ಆರ್ಭಟ ಮಾತ್ರ ನಿಲ್ಲಿಸಲಿಲ್ಲ.

    ಈ ಮೊದಲು ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಎದುರಾಳಿ ತಂಡ ಡೆಲ್ಲಿಯನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಡೆಲ್ಲಿ ಪರ ಪೃಥ್ವಿ ಶಾ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಅಲ್ಲದೆ ಮೊದಲ ವಿಕೆಟ್‍ಗೆ ಡೇವಿಡ್ ವಾರ್ನರ್ ಜೊತೆ 67 ರನ್ (45 ಎಸೆತ)ಗಳ ಜೊತೆಯಾಟವಾಡಿದರು. ಆದರೆ ಇದರಲ್ಲಿ ವಾರ್ನರ್ ಗಳಿಕೆ 4 ಮಾತ್ರ ಅಷ್ಟರಲ್ಲೇ ವಾರ್ನರ್ ಸುಸ್ತಾದರು. ಬಳಿಕ ಬಂದ ರೋವ್ಮನ್ ಪೋವೆಲ್ 3 ರನ್‍ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

    ನಂತರ ರಿಷಭ್ ಪಂತ್ ಮತ್ತು ಸರ್ಫರಾಜ್ ಖಾನ್ 4ನೇ ವಿಕೆಟ್‍ಗೆ ಜೊತೆಯಾಗಿ ನಿಧಾನಗತಿಯಲ್ಲಿ ರನ್ ಸೇರಿಸಿದರು. ಕೊನೆಯ ಎಸೆತದ ವರೆಗೂ ಬ್ಯಾಟಿಂಗ್ ಮುಂದುವರಿಸಿದ ಈ ಜೋಡಿ 4ನೇ ವಿಕೆಟ್‍ಗೆ ಮುರಿಯದ 75 ರನ್ (57 ಎಸೆತ)ಗಳ ಜೊತೆಯಾಟವಾಡಿತು. ಪಂತ್ ಅಜೇಯ 39 ರನ್ (36 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸರ್ಫರಾಜ್ ಖಾನ್ 36 ರನ್ (28 ಎಸೆತ, 3 ಬೌಂಡರಿ) ಸಿಡಿಸಿ ಮಿಂಚಿದರು. ಅಂತಿಮವಾಗಿ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 149 ರನ್ ಪೇರಿಸಿತು.

  • ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಆಯುಷ್ ಬದೋನಿ ಕಹಾನಿ

    ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಆಯುಷ್ ಬದೋನಿ ಕಹಾನಿ

    ಮುಂಬೈ: 15ನೇ ಐಪಿಎಲ್ ಪಂದ್ಯಾವಳಿ ಆರಂಭದಿಂದಲೇ ಭರ್ಜರಿ ರಸದೌತಣ ಉಣಬಡಿಸಿದೆ. ಅದರಲ್ಲೂ ಈ ಬಾರಿಯ ನೂತನ ಸ್ಟಾರ್ ಎಂಬಂತೆ ಲಕ್ನೋ ತಂಡದ ಆಯುಷ್ ಬದೋನಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.

    15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಬದೋನಿ ಹೆಸರು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಕೇಳಿರಲಿಲ್ಲ. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡ ಬಳಿಕ ಬದೋನಿ ತನ್ನ ಅಸಲಿ ಸಾಮರ್ಥ್ಯವನ್ನು ಅನಾವರಣಗೊಳಿಸಿದ್ದಾರೆ. ಡೆಬ್ಯು ಪಂದ್ಯದಲ್ಲೇ ತಾನೇನು, ತನ್ನ ತಾಕತ್ತೇನು ಅನ್ನೋದನ್ನ ಪ್ರೂವ್ ಮಾಡಿದ್ದ ಬದೋನಿ, ಎರಡನೇ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ವೈಭವ ಮುಂದುವರಿಸಿ ರಾತ್ರೋ ರಾತ್ರಿ ಕ್ರಿಕೆಟ್ ಪ್ರೇಮಿಗಳ ಹೃದಯಕ್ಕೆ ಲಗ್ಗೆಯಿಟ್ಟಿದ್ದಾರೆ. ಇದನ್ನೂ ಓದಿ: ಲೆವಿಸ್, ಬದೋನಿ ಸಿಕ್ಸರ್‌ಗಳ ಸುರಿಮಳೆ – ಲಕ್ನೋಗೆ ರೋಚಕ ಜಯ

    ಬದೋನಿ ಡೆಲ್ಲಿ ಮೂಲದ 22ರ ಹರೆಯದ ಆಟಗಾರ. ದೆಹಲಿ ರಾಜ್ಯ ರಣಜಿ ತಂಡದ ಪರ ಆಡುವ ವಿಶ್ವಾಸದಲ್ಲಿದ್ದ ಬದೋನಿಗೆ 15ನೇ ಆವೃತ್ತಿ ಐಪಿಎಲ್ ಹೊಸ ದಾರಿ ತೋರಿದೆ. ಕೇವಲ 20 ಲಕ್ಷ ರೂ.ಗೆ ಲಕ್ನೋ ತಂಡ ಸೇರಿಕೊಂಡ ಬದೋನಿಗೆ ಮೊದಲ ಪಂದ್ಯದಲ್ಲೇ ಲಕ್ನೋ ತಂಡ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿತು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಚಿಗುರು ಮೀಸೆಯ ಈ ಹುಡುಗ ಬ್ಯಾಟ್ ಇರುವುದೇ ಬೌಲರ್‌ಗಳನ್ನು ದಂಡಿಸಲು ಎಂಬಂತೆ ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡು ಮುಟ್ಟಿಸಬಲ್ಲ ಸಾಹಸಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಹೆಸರಿಟ್ಟಿದ್ದಕ್ಕೇ ಒಂದೊಂದು ಕಥೆ ಕಟ್ಟಿದ್ದರು ಅಪ್ಪ, ಅಮ್ಮ: ರಾಹುಲ್

    ಆಡಿದ ಮೊದಲ ಪಂದ್ಯದಲ್ಲೇ 55 ರನ್ (41 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದರೆ, ಎರಡನೇ ಪಂದ್ಯದಲ್ಲಿ ಒತ್ತಡದ ಸಮಯದಲ್ಲಿ ಎದೆಗುಂದದೇ ದಿಟ್ಟ ಇನ್ನಿಂಗ್ಸ್ ಕಟ್ಟಿದ ಡೆಲ್ಲಿ ಹುಡುಗ 19 ರನ್ (9 ಎಸೆತ, 2 ಸಿಕ್ಸ್) ಸಿಡಿಸಿ ಮಿಂಚಿದ್ದರು. ಈ ಮೂಲಕ 15ನೇ ಆವೃತ್ತಿ ಐಪಿಎಲ್‍ನಲ್ಲಿ ಉದಯಗೊಂಡ ನೂತನ ಸ್ಟಾರ್ ಎನಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗ ಟ್ಯಾಲೆಂಟ್ ಬಳಸಿಕೊಂಡು ಅಬ್ಬರಿಸುತ್ತಿರುವ ಡೆಲ್ಲಿ ಬಾಯ್ ಇಂತಹ ಮತ್ತಷ್ಟು ಇನ್ನಿಂಗ್ಸ್‌ಗಳಿಂದ ಅಭಿಮಾನಿಗಳನ್ನು ರಂಜಿಸಲಿ. ಈ ಬಾರಿ ಬದೋನಿ ಐಪಿಎಲ್‍ನಲ್ಲಿ ರನ್ ಹೊಳೆ ಹರಿಸಲಿ ಎಂಬುದು ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.

  • ಲೆವಿಸ್, ಬದೋನಿ ಸಿಕ್ಸರ್‌ಗಳ ಸುರಿಮಳೆ – ಲಕ್ನೋಗೆ ರೋಚಕ ಜಯ

    ಲೆವಿಸ್, ಬದೋನಿ ಸಿಕ್ಸರ್‌ಗಳ ಸುರಿಮಳೆ – ಲಕ್ನೋಗೆ ರೋಚಕ ಜಯ

    ಮುಂಬೈ: ಚೆನ್ನೈ ಮತ್ತು ಲಕ್ನೋ ನಡುವಿನ ರೋಚಕವಾದ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಗೈದ ಬ್ಯಾಟ್ಸ್‌ಮ್ಯಾನ್‌ಗಳ ನೆರವಿನಿಂದ ಸಿಎಸ್‍ಕೆ ವಿರುದ್ಧ ಲಕ್ನೋ 6 ವಿಕೆಟ್‍ಗಳ ರೋಚಕ ಜಯ ದಾಖಲಿಸಿದೆ.

    ಲಕ್ನೋ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 34 ರನ್ ಬೇಕಿತ್ತು. 19ನೇ ಓವರ್‌ನಲ್ಲಿ 25 ರನ್ ಹರಿದುಬಂತು. 20ನೇ ಓವರ್ ಮೊದಲ ಎಸೆತವನ್ನೆ ಸಿಕ್ಸರ್‌ಗಟ್ಟಿ ಆಯುಷ್ ಬದೋನಿ ಗೆಲುವಿನ ನಗೆ ತರಿಸಿದರು.

    211 ರನ್‍ಗಳ ಬೃಹತ್ ಮೊತ್ತ ಟಾರ್ಗೆಟ್ ಬೆನ್ನಟ್ಟಿದ ಲಕ್ನೋ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾಯಿತು. ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‍ಗೆ 99 ರನ್ (62 ಎಸೆತ) ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟಿತು. ರಾಹುಲ್ 40 ರನ್ (26 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು. ಡಿ ಕಾಕ್ ಮಾತ್ರ ಸಿಎಸ್‍ಕೆ ಬೌಲರ್‌ಗಳನ್ನು ದಂಡಿಸುತ್ತ ಅರ್ಧಶತಕ ಸಿಡಿಸಿ ಮಿಂಚಿದರು.

    ಡಿ ಕಾಕ್ 61 ರನ್ (45 ಎಸೆತ, 9 ಬೌಂಡರಿ) ಸಿಡಿಸಿ ಔಟ್ ಆದರು. ಕೊನೆಗೆ ಎವಿನ್ ಲೆವಿಸ್ ಅಜೇಯ 55 ರನ್ (23 ಎಸೆತ, 6 ಬೌಂಡರಿ, 3 ಸಿಕ್ಸ್) ಮತ್ತು ಆಯುಷ್ ಬದೋನಿ 19 ರನ್ (9 ಎಸೆತ, 2 ಸಿಕ್ಸ್) ಸಿಡಿಸಿ 19.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 211 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದರು.

    ಈ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲಿ ಋತುರಾಜ್ ಗಾಯಕ್ವಾಡ್ ವಿಕೆಟ್ ಬೇಗನೆ ಕಳೆದುಕೊಂಡಿತು. ಆ ಬಳಿಕ ಜೊತೆಯಾದ ರಾಬಿನ್ ಉತ್ತಪ್ಪ ಮತ್ತು ಮೋಯಿನ್ ಅಲಿ ಲಕ್ನೋ ಬೌಲರ್‌ಗಳನ್ನು ಚೆಂಡಾಡಿದರು. ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸಿದ ಈ ಜೋಡಿ 2ನೇ ವಿಕೆಟ್‍ಗೆ 56 ರನ್ (30 ಎಸೆತ) ಜೊತೆಯಾಟವಾಡಿತು. ಉತ್ತಪ್ಪ 50 ರನ್ (27 ಎಸೆತ 8 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರೆ, ಅಲಿ 35 ರನ್ (22 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ ಪೆವಿಯನ್ ಸೇರಿದರು.

    ಇವರಿಬ್ಬರು ಔಟ್ ಆದ ಬಳಿಕ ಜೊತೆಯಾದ ಶಿವಂ ದುಬೆ ಮತ್ತು ಅಂಬಾಟಿ ರಾಯುಡು ಸಿಎಸ್‍ಕೆ ರನ್ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಈ ಜೋಡಿ 4ನೇ ವಿಕೆಟ್‍ಗೆ 60 ರನ್ (37 ಎಸೆತ) ಜೊತೆಯಾಟವಾಡಿತು. ರಾಯುಡು 27 ರನ್ (20 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಇತ್ತ ದುಬೆ ಅಬ್ಬರ ಮುಂದುವರಿಯಿತು. ಆದರೆ ಇನ್ನೇನು ಅರ್ಧಶತಕ ಸಿಡಿಸಬೇಕೆನ್ನುವಷ್ಟರಲ್ಲಿ 49 ರನ್ (30 ಎಸೆತ, 5 ಬೌಂಡರಿ, 2 ಸಿಕ್ಸ್) ಬಾರಿಸಿ ಕ್ಯಾಚ್ ನೀಡಿ ಹೊರನಡೆದರು. ಇನ್ನಿಂಗ್ಸ್‌ನ ಕೊನೆಯಲ್ಲಿ ರವೀಂದ್ರ ಜಡೇಜಾ 17 ರನ್ (9 ಎಸೆತ, 3 ಬೌಂಡರಿ) ಸಿಡಿಸಿ ಔಟ್ ಆದರು. ಧೋನಿ ಇನ್ನಿಂಗ್ಸ್‌ನ ಕೊನೆಯ ಎಸೆತವನ್ನು ಬೌಂಡರಿ ಚಚ್ಚಿ ಅಜೇಯ 16 ರನ್ (6 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದರು.

    ಅಂತಿಮವಾಗಿ ಸಿಎಸ್‍ಕೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 210 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಲಕ್ನೋ ಪರ ಬೌಲಿಂಗ್‍ನಲ್ಲಿ ಅವೇಶ್ ಖಾನ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು.

    ರನ್ ಏರಿದ್ದು ಹೇಗೆ?
    50 ರನ್ 28 ಎಸೆತ
    100 ರನ್ 55 ಎಸೆತ
    150 ರನ್ 92 ಎಸೆತ
    200 ರನ್ 115 ಎಸೆತ
    210 ರನ್ 120 ಎಸೆತ

  • ಹಾಲಿ ಚಾಂಪಿಯನ್ಸ್‌ ಸಿಎಸ್‌ಕೆಗೆ ಇಂದು ಲಕ್ನೋ ಸವಾಲು!

    ಹಾಲಿ ಚಾಂಪಿಯನ್ಸ್‌ ಸಿಎಸ್‌ಕೆಗೆ ಇಂದು ಲಕ್ನೋ ಸವಾಲು!

    ನವದೆಹಲಿ: ಮೊದಲ ಪಂದ್ಯದಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲನ್ನು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ಧ ಸೋಲನುಭವಿಸಿದ ಲಕ್ನೋ ಸೂಪರ್‌ ಜೈಂಟ್ಸ್ ಇಂದು ಮುಖಾಮುಖಿಯಾಗಲಿವೆ.

    ಧೋನಿ ಅವರು ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ ರವಿಂದ್ರ ಜಡೇಜಾ ಅವರ ನಾಯತ್ವದ ಮೊದಲ ಪಂದ್ಯದಲ್ಲೇ ಚೆನ್ನೈ ಕೆಕೆಆರ್‌ಗೆ ಮಂಡಿಯೂರಿತು. ಇನ್ನೂ ಹೊಸತಂಡದ ಮೂಲಕ ಸೇರ್ಪಡೆಯಾಗಿದ್ದ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಪಂದ್ಯದಲ್ಲೇ ಕೈಚೆಲ್ಲಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯವೂ ಇದಕ್ಕೆ ಕಾರಣವಾಗಿತ್ತು. ಆದರಿಂದು ಲಕ್ನೋನಲ್ಲಿ ಕ್ವಿಂಟನ್ ಡಿಕಾಕ್, ಕೆ.ಎಲ್.ರಾಹುಲ್, ಮನಿಷ್‌ಪಾಂಡೆ ಸೇರಿದಂತೆ ಬಲಿಷ್ಠ ಆಟಗಾರರು ಬ್ಯಾಟಿಂಗ್ ಲಯಕ್ಕೆ ಮರಳುವ ಸಾಧ್ಯತೆಯಿದೆ. ಹಾಗೆಯೇ ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲಿ ಎಂ.ಎಸ್.ಧೋನಿ, ಅಂಬಟಿ ರಾಯುಡು, ಜಡೇಜಾ, ಋತುರಾಜ್ ಗಾಯಕ್ವಾಡ್‌ ಮೊದಲಾದವರು ಬ್ಯಾಟಿಂಗ್ ಫೈಟ್ ನೀಡಲಿದ್ದಾರೆ. ಮೊದಲ ಪಂದ್ಯದಲ್ಲಿ ಗೈರಾಗಿದ್ದ ಆಲ್‌ರೌಂಡರ್ ಮೊಯಿನ್ ಅಲಿ ಸಹ ಈ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿದ್ದು ತಂಡದ ಗೆಲುವಿಗೆ ಕಾರಣವಾಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಸಕಲ ಸಿದ್ಧತೆ – ಗ್ರೀನ್ ಗೇಮ್ಸ್‌ಗೆ ಸಜ್ಜಾದ ಬೆಂಗಳೂರು 

    IPL 2022

    ಚೆನ್ನೈ ಮತ್ತು ಲಕ್ನೋ ನಡುವಿನ ಮೊದಲ ಪಂದ್ಯ ಇದಾಗಿದೆ. ಸಿಎಸ್‌ಕೆ ತಂಡದ ನಾಯಕ ಜಡೇಜಾ 201 ಪಂದ್ಯದಲ್ಲಿ 2 ಅರ್ಧ ಶತಕ, 86 ಸಿಕ್ಸರ್‌, 176 ಬೌಂಡರಿ ಸೇರಿದಂತೆ 2,412 ರನ್‌ ಬಾರಿಸಿದ್ದಾರೆ. ಈ ಮೊದಲು ಕಿಂಗ್ಸ್ ಪಂಜಾಬ್ ನಾಯಕನಾಗಿದ್ದ ಕನ್ನಡಿಗ ಕೆ.ಎಲ್.ರಾಹುಲ್ 95 ಪಂದ್ಯಗಳಲ್ಲಿ 2 ಶತಕ, 27 ಅರ್ಧ ಶತಕ, 134 ಸಿಕ್ಸರ್‌, 282 ಬೌಂಡರಿಗಳು ಸೇರಿ 3,273 ರನ್‌ಗಳ ಮಳೆಗರೆದಿದ್ದಾರೆ. ಎರಡೂ ತಂಡದಲ್ಲೂ ಬಲಿಷ್ಠ ಆಟಗಾರರಿದ್ದು ಇಂದು ತೀವ್ರ ಪೈಪೋಟಿ ಎದುರಾಗಲಿದೆ. ಇದನ್ನೂ ಓದಿ: ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು 

  • ಲಕ್ನೋಗೆ ಲಾಕ್ ಹಾಕಿದ ಟೈಟಾನ್ಸ್ – ಗುಜರಾತ್‍ಗೆ 5 ವಿಕೆಟ್‍ಗಳ ಜಯ

    ಲಕ್ನೋಗೆ ಲಾಕ್ ಹಾಕಿದ ಟೈಟಾನ್ಸ್ – ಗುಜರಾತ್‍ಗೆ 5 ವಿಕೆಟ್‍ಗಳ ಜಯ

    ಮುಂಬೈ: ಕೊನೆಯ ಓವರ್ ವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದಲ್ಲಿ ಲಕ್ನೋ ವಿರುದ್ಧ ಮೇಲುಗೈ ಸಾಧಿಸಿದ ಗುಜರಾತ್ ತಂಡ ಗೆಲುವಿನ ನಗೆ ಬೀರಿತು.

    ಕೊನೆಯ 2 ಓವರ್‍ಗಳಲ್ಲಿ 20 ರನ್ ಬೇಕಾಗಿತ್ತು. ಬಳಿಕ 6 ಎಸೆತಗಳಿಗೆ 11 ರನ್ ಬೇಕಾಗಿತ್ತು. ಕೊನೆಯ ಓವರ್ ಎಸೆದ ಆವೇಶ್ ಖಾನ್‍ರ ಎರಡು ಎಸೆತಗಳನ್ನು ಕನ್ನಡಿಗ ಅಭಿನವ್ ಮನೋಹರ್ ಬೌಂಡರಿಗಟ್ಟಿದರು. ಬಳಿಕ ಒಂದು ಸಿಂಗಲ್ ರನ್ ಕಸಿದರು. ಬಳಿಕ 3 ಎಸೆತಗಳಲ್ಲಿ 2 ರನ್ ಬೇಕಾಗಿತ್ತು. ಈ ವೇಳೆ ರಾಹುಲ್ ತೆವಾಟಿಯಾ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಈ ಮೊದಲು ಲಕ್ನೋ ನೀಡಿದ 159 ರನ್‍ಗಳ ಗುರಿ ಬೆನ್ನಟ್ಟಿದ ಗುಜರಾತ್ ಕೂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ಶುಭಮನ್ ಗಿಲ್ ಡಕ್ ಔಟ್ ಆದರು. ನಂತರ ಬಂದ ವಿಜಯ್ ಶಂಕರ್ ಬ್ಯಾಟ್‍ನಿಂದ ಸಿಡಿದಿದ್ದು, ಕೇವಲ 4 ರನ್. ಆ ಬಳಿಕ ಒಂದಾದ ಮ್ಯಾಥ್ಯೂ ವೇಡ್ ಮತ್ತು ಹಾರ್ದಿಕ್ ಪಾಂಡ್ಯ ಕೆಲ ಹೊತ್ತು ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದರು.ಈ ಜೋಡಿ 3ನೇ ವಿಕೆಟ್‍ಗೆ 57 ರನ್ (48 ಎಸೆತ) ಜೊತೆಯಾಟವಾಡಿತು. ಪಾಂಡ್ಯ 33 ರನ್ (28 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ವೇಡ್ 30 ರನ್ (29 ಎಸೆತ, 4 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರಾಹುಲ್ ತೆವಾಟಿಯಾ ಅಜೇಯ 40 ರನ್ (24 ಎಸೆತ, 5 ಬೌಂಡರಿ, 2 ಸಿಕ್ಸ್) ಮತ್ತು ಭಿನವ್ ಮನೋಹರ್ 15 ರನ್ (7 ಎಸೆತ, 3 ಬೌಂಡರಿ) ಸಿಡಿಸಿ19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಸಿಡಿಸಿ 5 ವಿಕೆಟ್‍ಗಳ ಗೆಲುವು ದಾಖಲಿಸಿದೆ.

    ಬೃಹತ್ ಮೊತ್ತ ಪೇರಿಸುವ ವಿಶ್ವಾಸದೊಂದಿಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲೆ ಸಾಲು, ಸಾಲು ವಿಕೆಟ್ ಕಳೆದುಕೊಂಡು ಸಾಗಿತು. ನಾಯಕ ಕೆ.ಎಲ್ ರಾಹುಲ್ ಡಕ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಇವರ ಹಿಂದೆ ಕ್ವಿಂಟನ್ ಡಿ ಕಾಕ್ 7, ಎವಿನ್ ಲೆವಿಸ್ 10, ಮನೀಶ್ ಪಾಂಡೆ 6 ರನ್ ಸಿಡಿಸಿ ಪೆವಿಲಯನ್‍ಗೆ ಹೆಜ್ಜೆ ಹಾಕಿದರು. 4 ಓವರ್‌ಗಳಲ್ಲಿ ಲಕ್ನೋ ತಂಡದ ವೇಗಿಗಳು ಗುಜರಾತ್ ತಂಡದ ಅಗ್ರ ಕ್ರಮಾಂಕದ ಹೆಡೆಮುರಿ ಕಟ್ಟಿದರು.

    ಬಳಿಕ ದೀಪಕ್ ಹೂಡಾ ಮತ್ತು ಆಯುಷ್ ಬದೋನಿ ಗುಜರಾತ್ ತಂಡಕ್ಕೆ ಬ್ಯಾಟಿಂಗ್‍ನಲ್ಲಿ ಆಸರೆಯಾದರು. ಕೆಲ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಈ ಜೋಡಿ 5ನೇ ವಿಕೆಟ್‍ಗೆ 87 ರನ್ (68 ಎಸೆತ) ಜೊತೆಯಾಟವಾಡಿತು. ಅಲ್ಲದೆ ತಲಾ ಅರ್ಧಶತಕ ಹೊಡೆತು ಸಂಭ್ರಮಿಸಿದರು. ದೀಪಕ್ ಹೂಡಾ 55 ರನ್, 41 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ಆಯುಷ್ ಬದೋನಿ 54 ರನ್ (41 ಎಸೆತ, 4 ಬೌಂಡರಿ, 3 ಸಿಕ್ಸ್) ಬಾರಿಸಿ ಗಮನಸೆಳೆದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಕೃನಾಲ್ ಪಾಂಡ್ಯ ಅಜೇಯ 21 ರನ್ (13 ಎಸೆತ, 3 ಬೌಂಡರಿ) ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಕಲೆ ಹಾಕಿತು.

    ಗುಜರಾತ್ ಪರ ಶಮಿ 3 ವಿಕೆಟ್ ಕಿತ್ತು ಶೈನ್ ಆದರು. ವರುಣ್ ಆರೋನ್ 2 ವಿಕೆಟ್ ಮತ್ತು ರಶೀದ್ ಖಾನ್ 1 ವಿಕೆಟ್ ಹಂಚಿಕೊಂಡರು.